ಮಾಹಿತಿ ಇರುವಲ್ಲಿ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು

ಕೋಪಕ್ಕೆ ಕಡಿವಾಣ ಹಾಕುವುದು ಹೇಗೆ?

ಕೋಪಕ್ಕೆ ಕಡಿವಾಣ ಹಾಕುವುದು ಹೇಗೆ?

 ನಿಮ್ಮ ಸಂಗಾತಿ ಕೋಪವನ್ನು ಕೆರಳಿಸುವ ಒಂದು ವಿಷಯವನ್ನು ಮಾಡಿದ್ದಾರೆ ಅಥವಾ ಹೇಳಿದ್ದಾರೆ ಎಂದು ನೆನೆಸಿ. ಆದರೂ ನೀವು ನಿಮ್ಮ ಕೋಪವನ್ನು ಹೊರತೋರಿಸದೇ ಸುಮ್ಮನಿದ್ದೀರ. ಇದನ್ನು ಗುರುತಿಸಿದ ನಿಮ್ಮ ಸಂಗಾತಿ ‘ಏನಾಯ್ತು’ ಎಂದು ಪದೇ ಪದೇ ಕೇಳುತ್ತಾನೇ ಇದ್ದಾರೆ. ಅದು ನಿಮ್ಮ ಸಿಟ್ಟನ್ನು ಇನ್ನೂ ಹೆಚ್ಚಿಸುತ್ತದೆ. ಕೋಪ ನೆತ್ತಿಗೇರುವ ಇಂಥ ಸನ್ನಿವೇಶಗಳಲ್ಲಿ ನಿಮ್ಮ ಕೋಪವನ್ನು ತಡೆಗಟ್ಟುವುದು ಹೇಗೆ?

 ನಿಮಗಿದು ತಿಳಿದಿರಲಿ

  •   ಕೋಪ ತೋರಿಸುವುದರಿಂದ ಆರೋಗ್ಯ ಹಾಳಾಗುತ್ತದೆ. ಕೋಪವನ್ನು ನಿಯಂತ್ರಿಸದಿದ್ದರೆ, ಅದರಿಂದ ಬಿ.ಪಿ. (ರಕ್ತದೊತ್ತಡ), ಖಿನ್ನತೆ, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು, ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ. ಅಷ್ಟೇ ಅಲ್ಲ, ನಿದ್ರಾಹೀನತೆ, ಅತಿಯಾದ ಚಿಂತೆ, ಚರ್ಮ ರೋಗ ಮತ್ತು ಪಾರ್ಶ್ವವಾಯುಗಳಂಥ ರೋಗಗಳಿಗೂ ನಡೆಸುತ್ತದೆ. ಹಾಗಾಗಿಯೇ ಬೈಬಲ್‌ “ರೋಷವನ್ನು ಬಿಡು. . . . ಕೆಡುಕಿಗೆ ಕಾರಣವಾದೀತು” ಎಂದು ಹೇಳುತ್ತದೆ.—ಕೀರ್ತನೆ 37:8.

  •   ಕೋಪವನ್ನು ಮನಸ್ಸಿನಲ್ಲಿ ಇಟ್ಟುಕೊಂಡರೂ ಹಾನಿ ಆಗುತ್ತದೆ. ಕೋಪವನ್ನು ನಿಮ್ಮ ಮನಸ್ಸಿನಲ್ಲೇ ಇಟ್ಟುಕೊಂಡರೆ, ಅದು ಒಂದು ಕಾಯಿಲೆ ಥರ ನಿಮ್ಮನ್ನು ಒಳಗಿನಿಂದಲೇ ತಿಂದುಹಾಕುತ್ತದೆ. ಉದಾಹರಣೆಗೆ, ಇದರಿಂದ ನಕಾರಾತ್ಮಕ ಭಾವನೆ ಅಥವಾ ಇನ್ನೊಬ್ಬರಲ್ಲಿ ಹುಳುಕು ಹುಡುಕುವ ಸ್ವಭಾವ ಬೆಳೆದುಬಿಡಬಹುದು. ಇಂಥ ಯೋಚನೆಗಳು ಬೇರೆಯವರೊಂದಿಗಿನ ನಿಮ್ಮ ಸಂಬಂಧವನ್ನು ಮತ್ತು ನಿಮ್ಮ ವೈವಾಹಿಕ ಜೀವನವನ್ನು ಹಾಳುಮಾಡಬಹುದು.

 ನೀವೇನು ಮಾಡಬಹುದು

  •   ನಿಮ್ಮ ಸಂಗಾತಿಯಲ್ಲಿರುವ ಒಳ್ಳೇ ಗುಣಗಳನ್ನು ಹುಡುಕಿ. ನಿಮ್ಮ ಸಂಗಾತಿಯಲ್ಲಿ ನಿಮಗೆ ಇಷ್ಟವಾಗುವ ಯಾವುದಾದರೂ ಮೂರು ಗುಣಗಳನ್ನು ಪಟ್ಟಿಮಾಡಿ. ಮುಂದೆ ಎಂದಾದರೂ ನಿಮ್ಮ ಸಂಗಾತಿ ನಿಮಗೆ ಕೋಪ ಬರುವಂತೆ ನಡೆದುಕೊಂಡಾಗ, ನೀವು ಪಟ್ಟಿಮಾಡಿರುವ ಆ ಗುಣಗಳನ್ನು ನೆನಪುಮಾಡಿಕೊಳ್ಳಿ. ಇದು ನಿಮಗೆ ಕೋಪವನ್ನು ತಡೆಹಿಡಿಯಲು ಸಹಾಯಮಾಡುತ್ತದೆ.

     ಬೈಬಲ್‌ ತತ್ವ: “ನೀವು ಕೃತಜ್ಞತಾಭಾವದವರೆಂದು ತೋರಿಸಿರಿ.”—ಕೊಲೊಸ್ಸೆ 3:15.

  •   ಕ್ಷಮಿಸುವ ಮನೋಭಾವ ಬೆಳೆಸಿಕೊಳ್ಳಿ. ನಿಮ್ಮ ಸಂಗಾತಿಯ ಸ್ಥಾನದಲ್ಲಿ ನಿಂತು ಯೋಚಿಸಲು ಪ್ರಯತ್ನಿಸಿ. ಹೀಗೆ ಮಾಡಿದರೆ, ಬೈಬಲ್‌ ಹೇಳುವಂಥ ’ಅನುಕಂಪ ತೋರಿಸಲು‘ ಅಂದರೆ ಅವರ ಕಡೆಗೆ ಪರಾನುಭೂತಿ ತೋರಿಸಲು ನಿಮಗೆ ಸಹಾಯವಾಗುತ್ತದೆ. (1 ಪೇತ್ರ 3:8) ಇದಾದ ಮೇಲೆ, ‘ಕ್ಷಮಿಸಲಾರದಷ್ಟು ದೊಡ್ಡ ಕಾರಣಕ್ಕಾಗಿ ನಾನು ಕೋಪಮಾಡಿಕೊಂಡಿದ್ದೇನಾ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ.

     ಬೈಬಲ್‌ ತತ್ವ: “ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.”ಜ್ಞಾನೋಕ್ತಿ 19:11.

  •   ವಿವೇಚನೆ ಮತ್ತು ದಯೆಯಿಂದ ನಿಮ್ಮ ಭಾವನೆಗಳನ್ನು ಹೇಳಿ. ನಿಮ್ಮ ಸಂಗಾತಿಗೆ ‘ನೀವು ಹೀಗೆ ಮಾಡಿದ್ರಿ’ ಅಂತ ತಪ್ಪು ಹೊರಿಸುವ ಬದಲು ‘ನನಗೆ ಹೀಗೆ ಅನಿಸುತ್ತೆ‘ ಎಂದು ಹೇಳಿ. ಉದಾಹರಣೆಗೆ, “ನಾನೊಬ್ಬಳು ಮನೇಲಿ ಇದ್ದೀನಿ ಅಂತಾನೇ ನಿಮಗೆ ಗೊತ್ತಿಲ್ಲ, ನೀವು ಎಲ್ಲಿದ್ದೀರಾ ಅಂತ ಒಂದು ಫೋನ್‌ ಮಾಡೂ ಹೇಳಲ್ಲ” ಎಂದು ದೂರುವ ಬದಲು, ಹೀಗೆ ಹೇಳಿ: “ನೀವು ಮನೆಗೆ ಬೇಗ ಬಂದಿಲ್ಲಾಂದರೆ ನಂಗೆ ತುಂಬಾ ಹೆದರಿಕೆ ಆಗುತ್ತೆ. ನಿಮಗೆ ಏನಾದರೂ ಆಗಿದ್ಯೇನೋ ಅಂತ ಚಿಂತೆ ಆಗುತ್ತೆ.” ದಯೆಯಿಂದ, ಪ್ರೀತಿಯಿಂದ ನಿಮ್ಮ ಭಾವನೆಗಳನ್ನು ಹೇಳುವುದಾದರೆ, ನಿಮ್ಮ ಕೋಪವನ್ನು ನಿಯಂತ್ರಿಸಬಹುದು.

     ಬೈಬಲ್‌ ತತ್ವ: “ನಿಮ್ಮ ಮಾತು ಯಾವಾಗಲೂ ಸೌಜನ್ಯವುಳ್ಳದ್ದಾಗಿಯೂ ಉಪ್ಪಿನಿಂದ ಹದಗೊಳಿಸಲ್ಪಟ್ಟದ್ದಾಗಿಯೂ ಇರಲಿ.”—ಕೊಲೊಸ್ಸೆ 4:6.

  •   ಗೌರವದಿಂದ ಕಿವಿಗೊಡಿ. ನೀವು ನಿಮ್ಮ ಭಾವನೆಗಳನ್ನು ಹೇಳಿಕೊಂಡ ಮೇಲೆ, ನಿಮ್ಮ ಸಂಗಾತಿ ಹೇಳುವುದನ್ನೂ ತಾಳ್ಮೆಯಿಂದ ಕೇಳಿ. ಮಧ್ಯ ಬಾಯಿ ಹಾಕಬೇಡಿ. ಅವರು ತಮ್ಮ ಅನಿಸಿಕೆಗಳನ್ನು ಹೇಳಿ ಮುಗಿಸಿದ ಮೇಲೆ, ನಿಮಗದು ಸರಿಯಾಗಿ ಅರ್ಥವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಅವರು ಹೇಳಿದ್ದನ್ನೇ ಮತ್ತೊಮ್ಮೆ ಹೇಳಿ. ನೀವು ಕೇಳಿಸಿಕೊಳ್ಳಲು ಸಮಯ ನೀಡಿದರೆ ಸಾಕು, ಅದು ನಿಮ್ಮ ಕೋಪವನ್ನು ಕಡಿಮೆ ಮಾಡಲು ತುಂಬ ಸಹಾಯ ಮಾಡುತ್ತದೆ.

     ಬೈಬಲ್‌ ತತ್ವ: “ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.”—ಯಾಕೋಬ 1:19.