ಮಾಹಿತಿ ಇರುವಲ್ಲಿ ಹೋಗಲು

ಬೈಬಲ್‌ ವಚನಗಳ ವಿವರಣೆ

ಯೆಹೋಶುವ 1:9—“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು”

ಯೆಹೋಶುವ 1:9—“ಸ್ಥಿರಚಿತ್ತನಾಗಿರು, ಧೈರ್ಯದಿಂದಿರು”

 “ನಾನು ಈಗಾಗ್ಲೇ ಹೇಳಿದ ಹಾಗೆ ಧೈರ್ಯವಾಗಿರು, ದೃಢವಾಗಿರು, ಹೆದರಬೇಡ, ಕಳವಳಪಡಬೇಡ. ಯಾಕಂದ್ರೆ ನೀನೆಲ್ಲೇ ಹೋದ್ರೂ ನಿನ್ನ ದೇವರಾದ ಯೆಹೋವ ನಿನ್ನ ಜೊತೆ ಇರ್ತಾನೆ.”—ಯೆಹೋಶುವ 1:9, ಹೊಸ ಲೋಕ ಭಾಷಾಂತರ.

 “ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ; ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ.”—ಯೆಹೋಶುವ 1:9, ಸತ್ಯವೇದವು.

ಯೆಹೋಶುವ 1:9—ಅರ್ಥ

 ಈ ವಚನದಲ್ಲಿರೋ ಮಾತುಗಳನ್ನು ಯೆಹೋವ a ದೇವರು ತನಗೆ ನಂಬಿಗಸ್ತನಾಗಿದ್ದ ಯೆಹೋಶುವನಿಗೆ ಹೇಳಿದನು. ಕಷ್ಟಗಳಿದ್ರೂ ದೊಡ್ಡ ದೊಡ್ಡ ಅಡ್ಡಿತಡೆಗಳಿದ್ರೂ ‘ಧೈರ್ಯವಾಗಿ, ದೃಢವಾಗಿ’ ಇರಲು ಆಗುತ್ತೆ ಅಂತ ದೇವರು ಅವನಿಗೆ ಹೇಳಿದನು. ಮುಂದೆ ಏನಾಗುತ್ತೋ ಅಂತ ಯೆಹೋಶುವ ಭಯಪಡಬೇಕಾಗಿರಲಿಲ್ಲ. ಏಕೆಂದ್ರೆ ಯೆಹೋವನು ಅವನಿಗೆ ಏನೇನು ಮಾಡಬೇಕು ಅಂತ ಹೇಳಿದನು, ಶತ್ರುಗಳನ್ನು ಜಯಿಸಲಿಕ್ಕೆ ಸಹಾಯ ಮಾಡಿದನು. ಇದು ಯೆಹೋವನೇ ಅವನ ಜೊತೆ ಇರುವ ಹಾಗೆ ಇತ್ತು. ಯೆಹೋವನು ಹೇಳಿದ ಹಾಗೆ ಮಾಡಿದ್ರಿಂದ ಯೆಹೋಶುವನಿಗೆ ಎಲ್ಲದರಲ್ಲೂ ಜಯ ಸಿಕ್ತು.

 ಯೆಹೋಶುವ ಹೇಗೆ ‘ಧೈರ್ಯವಾಗಿ, ದೃಢವಾಗಿ’ ಇದ್ದ? ಆ ಸಮಯದಲ್ಲಿ ಯೆಹೋವ ದೇವರು ಕೊಟ್ಟಿದ್ದ ಪವಿತ್ರ ಬರಹಗಳಿಂದ ಅವನಿಗೆ ಧೈರ್ಯ ಮತ್ತು ಬಲ ಸಿಕ್ಕಿತು. ಆಗ ಇದ್ದ ಪವಿತ್ರ ಬರಹಗಳಲ್ಲಿ b ನಿಯಮ ಪುಸ್ತಕ ಕೂಡ ಒಂದು. ಇದನ್ನು ಯೆಹೋವನ ಸೇವಕ ಮೋಶೆ ಯೆಹೋಶುವನಿಗೆ ಕೊಟ್ಟ. (ಯೆಹೋಶುವ 1:7) ಇದನ್ನು ಹಗಲೂರಾತ್ರಿ ‘ಮೆಲು ದನಿಯಲ್ಲಿ ಓದಬೇಕೆಂದು’ ಅಂದ್ರೆ ‘ಧ್ಯಾನಿಸಬೇಕೆಂದು’ ಯೆಹೋವನು ಯೆಹೋಶುವನಿಗೆ ಹೇಳಿದನು. (ಯೆಹೋಶುವ 1:8) ಈ ತರ ಓದಿ ಧ್ಯಾನಿಸಿದ್ರಿಂದನೇ ಅವನು ದೇವರ ಇಷ್ಟವನ್ನು ಮಾಡಬೇಕು ಅಂತ ದೃಢತೀರ್ಮಾನ ಮಾಡಿದ. ಆಮೇಲೆ ‘ಅದ್ರಲ್ಲಿ ಇರೋದನ್ನೆಲ್ಲ ತಪ್ಪದೆ ಪಾಲಿಸಿದ’ ಅಂದ್ರೆ ದೇವರ ಗ್ರಂಥದಿಂದ ಅವನು ಕಲಿತ ವಿಷಯಗಳ ಪ್ರಕಾರ ನಡೆದ. ಹಾಗಾಗಿ ಅವನು ವಿವೇಕದಿಂದ ನಡೆದುಕೊಂಡ ಮತ್ತು ಒಳ್ಳೇ ತೀರ್ಮಾನಗಳನ್ನು ಮಾಡಿದ. ಅವನಿಗೆ ತುಂಬ ಸಮಸ್ಯೆಗಳು ಬಂತು ನಿಜ, ಆದ್ರೆ ಅವನಿಗೆ ಜೀವನದಲ್ಲಿ ನೆಮ್ಮದಿ, ತೃಪ್ತಿ ಇತ್ತು. ಏಕೆಂದ್ರೆ ಅವನು ಯೆಹೋವನನ್ನು ನಂಬಿಗಸ್ತಿಕೆಯಿಂದ ಆರಾಧಿಸಿದ.—ಯೆಹೋಶುವ 23:14; 24:15.

 ಯೆಹೋವನು ಯೆಹೋಶುವನಿಗೆ ಹೇಳಿದ ಮಾತಿನಿಂದ ಇವತ್ತು ನಮಗೂ ಪ್ರೋತ್ಸಾಹ ಸಿಗುತ್ತೆ. ಅಲ್ಲದೆ, ನಮಗೆ ಕಷ್ಟಸಮಸ್ಯೆಗಳು ಬಂದಾಗ ಯೆಹೋವನು ಎಷ್ಟು ಕಾಳಜಿ ವಹಿಸುತ್ತಾನೆ ಅಂತ ತೋರಿಸುತ್ತೆ. ಯೆಹೋಶುವನ ಹಾಗೆ ನಾವು ಕೂಡ ಏನೇ ಬಂದ್ರೂ ಜಯಿಸಬೇಕು ಅನ್ನೋದೇ ಆತನ ಆಸೆ. ನಾವು ಪ್ರತಿದಿನ ಬೈಬಲನ್ನು ಓದಿ, ಧ್ಯಾನಿಸಿ, ಅದರ ಪ್ರಕಾರ ನಡೆದರೆ ಯೆಹೋಶುವನ ತರ ಧೈರ್ಯವಾಗಿ, ದೃಢವಾಗಿ ಇರಲು ಆಗುತ್ತೆ.

ಯೆಹೋಶುವ 1:9—ಸಂದರ್ಭ

 ಮೋಶೆ ಸತ್ತ ಮೇಲೆ ಇಸ್ರಾಯೇಲ್‌ ಜನಾಂಗವನ್ನು ನೋಡಿಕೊಳ್ಳಲು ಯೆಹೋವ ದೇವರು ಯೆಹೋಶುವನಿಗೆ ಹೇಳಿದನು. (ಯೆಹೋಶುವ 1:1, 2) ಆ ಸಮಯದಲ್ಲಿ ಇಸ್ರಾಯೇಲ್ಯರು ಕಾನಾನ್‌ ದೇಶಕ್ಕೆ ಅಂದ್ರೆ ದೇವರು ಮಾತು ಕೊಟ್ಟ ದೇಶಕ್ಕೆ ಹೋಗಲು ತಯಾರಾಗಿದ್ದರು. ಆದ್ರೆ ಇದು ಅಷ್ಟು ಸುಲಭ ಆಗಿರಲಿಲ್ಲ. ಶಕ್ತಿಶಾಲಿ ಶತ್ರುಗಳ ಜೊತೆ ಯುದ್ಧ ಮಾಡಬೇಕಿತ್ತು. ಉದಾಹರಣೆಗೆ ಯೆಹೋಶುವ ತುಂಬ ದುಷ್ಟರಾಗಿದ್ದ ಕಾನಾನ್ಯರ ವಿರುದ್ಧ ಯುದ್ಧ ಮಾಡಬೇಕಿತ್ತು. c (ಧರ್ಮೋಪದೇಶಕಾಂಡ 9:5; 20:17, 18) ಅಷ್ಟೇ ಅಲ್ಲ, ಇಸ್ರಾಯೇಲ್ಯರಿಗಿಂತ ಕಾನಾನ್ಯರೇ ಜಾಸ್ತಿ ಜನ ಇದ್ದರು, ಯುದ್ಧ ಅಸ್ತ್ರಗಳು ಕೂಡ ಅವರ ಹತ್ತಿರ ತುಂಬ ಇತ್ತು. (ಯೆಹೋಶುವ 9:1, 2; 17:18) ಆದ್ರೆ ಯೆಹೋವನು ಏನೇನು ಹೇಳಿದನೋ ಅದನ್ನೆಲ್ಲ ಯೆಹೋಶುವ ಧೈರ್ಯದಿಂದ ಪಾಲಿಸಿದ. ಅವನ ಜೊತೆ ಯೆಹೋವನು ಇದ್ದನು. ಹಾಗಾಗಿನೇ ಆರೇ ವರ್ಷಗಳಲ್ಲಿ ಇಸ್ರಾಯೇಲ್ಯರು ತುಂಬ ಜನ ಶತ್ರುಗಳನ್ನು ಸೋಲಿಸಿದರು.—ಯೆಹೋಶುವ 21:43, 44.

a ಹೀಬ್ರು ಭಾಷೆಯಲ್ಲಿ ದೇವರಿಗೆ ಬಳಸಿರುವ ನಾಲ್ಕು ಅಕ್ಷರಗಳನ್ನು (ಚತುರಕ್ಷರಿಯನ್ನು) ಕನ್ನಡದಲ್ಲಿ ಯೆಹೋವ ಎಂದು ಭಾಷಾಂತರ ಮಾಡಲಾಗಿದೆ. ಪವಿತ್ರ ಬೈಬಲಿನಲ್ಲಿ ಯೆಹೋಶುವ 1:9 ನೋಡಿದರೆ ದೇವರ ಹೆಸರಿಗೆ ಬದಲಾಗಿ “ಕರ್ತನು” ಅಂತಿದೆ. “ಯೆಹೋವ ಯಾರು?” ಲೇಖನ ನೋಡಿ.

b ಯೆಹೋಶುವನ ಹತ್ರ ಇದ್ದ ಪವಿತ್ರ ಬರಹಗಳು ಯಾವುವೆಂದ್ರೆ ಮೋಶೆ ಬರೆದ 5 ಪುಸ್ತಕಗಳು (ಆದಿಕಾಂಡ, ವಿಮೋಚನಕಾಂಡ, ಯಾಜಕಕಾಂಡ, ಅರಣ್ಯಕಾಂಡ ಮತ್ತು ಧರ್ಮೋಪದೇಶಕಾಂಡ), ಯೋಬ ಪುಸ್ತಕ ಮತ್ತು ಒಂದೆರಡು ಕೀರ್ತನೆಗಳು. ಈ ಪುಸ್ತಕಗಳು ಇವತ್ತಿಗೂ ಬೈಬಲಲ್ಲಿದೆ.

c ಯಾಕೆ ಆ ಯುದ್ಧ ಮಾಡಬೇಕಿತ್ತು ಅಂತ ತಿಳಿಯಲು “ದೇವರು ಕಾನಾನ್ಯರ ವಿರುದ್ಧ ಯಾಕೆ ಯುದ್ಧ ಮಾಡಿದನು?” ಲೇಖನ ನೋಡಿ. ಇದು 2010, ಜನವರಿ 1 ರ ಕಾವಲಿನಬುರುಜುನಲ್ಲಿದೆ. (ಇಂಗ್ಲಿಷ್‌)