ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂತೋಷದ ಜೀವನಮಾರ್ಗ

ನಿರೀಕ್ಷೆ

ನಿರೀಕ್ಷೆ

‘ಇವರಿಗೆ ನಿರೀಕ್ಷೆಯಿರಲಿ ಎಂದು ನಿಮ್ಮ ವಿಷಯದಲ್ಲಿ ನನಗಿರುವ ಆಲೋಚನೆಗಳು ಅಹಿತದ ಯೋಚನೆಗಳಲ್ಲ, ಹಿತದ ಯೋಚನೆಗಳೇ.’​—ಯೆರೆಮೀಯ 29:11.

“ನಿರೀಕ್ಷೆಯು . . . ದೇವರೊಂದಿಗೆ ಒಳ್ಳೇ ಸಂಬಂಧವಿರಲು ತುಂಬ ಮುಖ್ಯ. ನಿಸ್ಸಹಾಯಕತೆ, ‘ಎಲ್ಲರೂ ದೂರಮಾಡಿದ್ದಾರೆ’ ಎಂಬ ಭಾವನೆ ಮತ್ತು ಭಯಕ್ಕೆ ಇದು ಅತ್ಯುತ್ತಮ ಮದ್ದು” ಎಂದು ಹೋಪ್‌ ಇನ್‌ ದಿ ಏಜ್‌ ಆಫ್‌ ಆ್ಯಂಗ್ಸೈಟಿ ಎಂಬ ಪುಸ್ತಕ ತಿಳಿಸುತ್ತದೆ.

ನಮಗೆ ನಿರೀಕ್ಷೆಯ ಅಗತ್ಯ ಎಷ್ಟಿದೆ ಎಂದು ಬೈಬಲ್‌ ತಿಳಿಸುತ್ತದೆ. ಅದೇ ಸಮಯದಲ್ಲಿ ಅದು ಸುಳ್ಳು ನಿರೀಕ್ಷೆಗಳ ಬಗ್ಗೆಯೂ ಎಚ್ಚರಿಸುತ್ತದೆ. “ಪ್ರಭುಗಳಲ್ಲಿ ಭರವಸವಿಡಬೇಡಿರಿ; ಮಾನವನನ್ನು ನೆಚ್ಚಬೇಡಿರಿ, ಅವನು ಸಹಾಯಮಾಡ ಶಕ್ತನಲ್ಲ” ಎಂದು ಕೀರ್ತನೆ 146:3 ರಲ್ಲಿ ಹೇಳಲಾಗಿದೆ. ಸಹಾಯಕ್ಕಾಗಿ ಮನುಷ್ಯ ಪ್ರಯತ್ನಗಳಲ್ಲಿ ಭರವಸೆ ಇಡುವುದರ ಬದಲಿಗೆ ಸೃಷ್ಟಿಕರ್ತನಲ್ಲಿ ಭರವಸೆ ಇಡುವುದು ವಿವೇಕಯುತ. ಯಾಕೆಂದರೆ, ಆತನಿಗೆ ತಾನು ಕೊಟ್ಟ ಮಾತನ್ನು ನೆರವೇರಿಸುವ ಶಕ್ತಿ-ಸಾಮರ್ಥ್ಯವಿದೆ. ಆತನು ಏನೆಂದು ಮಾತುಕೊಟ್ಟಿದ್ದಾನೆ? ನೋಡೋಣ:

ದುಷ್ಟತನ ಅಂತ್ಯವಾಗಿ ನೀತಿವಂತರಿಗೆ ಶಾಶ್ವತ ಶಾಂತಿ ಸಿಗಲಿದೆ: “ಇನ್ನು ಸ್ವಲ್ಪ ಸಮಯದಲ್ಲಿ ದುಷ್ಟನು ಇರನು; . . . ಆದರೆ ಸಾತ್ವಿಕರು ಭೂಮಿಯನ್ನು ಸ್ವಾಧೀನಮಾಡಿಕೊಂಡು ಬಹಳ ಸಮಾಧಾನದಲ್ಲಿ ಆನಂದಪಡುವರು” ಎನ್ನುತ್ತದೆ ಕೀರ್ತನೆ 37:10, 11 (ಪವಿತ್ರ ಗ್ರಂಥ ಭಾಷಾಂತರ). ಭೂಮಿಯಲ್ಲಿ ‘ನೀತಿವಂತರು ಶಾಶ್ವತವಾಗಿ ವಾಸಿಸುವರು’ ಎಂದು 29 ನೇ ವಚನ ತಿಳಿಸುತ್ತದೆ.

ಯುದ್ಧಗಳು ಕೊನೆಯಾಗಲಿವೆ: ಯೆಹೋವನು “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ; ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.”—ಕೀರ್ತನೆ 46:8, 9.

ಕಾಯಿಲೆ, ನೋವು, ಕಷ್ಟ ಮತ್ತು ಮರಣ ಇರುವುದಿಲ್ಲ: “ದೇವರು . . . ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.”—ಪ್ರಕಟನೆ 21:3, 4.

ಎಲ್ಲರಿಗೂ ಸಾಕಷ್ಟು ಆಹಾರ: “ಧಾನ್ಯದ ಸಮೃದ್ಧಿಯು ದೇಶದಲ್ಲಿ ಬೆಟ್ಟಗಳ ತುದಿಯವರೆಗೂ ಇರುವುದು.”—ಕೀರ್ತನೆ 72:16, ಪವಿತ್ರ ಗ್ರಂಥ ಭಾಷಾಂತರ.

ಭೂವ್ಯಾಪಕವಾಗಿ ನ್ಯಾಯವಾಗಿ ಆಳುವ ಒಂದೇ ಸರ್ಕಾರ—ಕ್ರಿಸ್ತನ ರಾಜ್ಯ: “ಸಕಲಜನಾಂಗಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ [ಯೇಸು ಕ್ರಿಸ್ತನಿಗೆ] ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು; ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.”—ದಾನಿಯೇಲ 7:14.

ದೇವರು ಕೊಟ್ಟ ಈ ಎಲ್ಲ ಮಾತು ನಿಜವಾಗುತ್ತದೆ ಎಂದು ನಾವು ಹೇಗೆ ನಂಬಬಹುದು? ಯೇಸು ಭೂಮಿಯಲ್ಲಿರುವಾಗ ತನಗೆ ರಾಜನಾಗುವ ಅರ್ಹತೆಗಳಿವೆ ಎಂದು ಎಲ್ಲರೆದುರು ತೋರಿಸಿಕೊಟ್ಟನು. ಅವನು ಕಾಯಿಲೆಬಿದ್ದವರನ್ನು ಗುಣಪಡಿಸಿದನು, ಬಡವರಿಗೆ ಊಟ ಕೊಟ್ಟನು ಮತ್ತು ಸತ್ತವರನ್ನು ಬದುಕಿಸಿದನು. ಅದಕ್ಕೂ ಮುಖ್ಯವಾಗಿದ್ದದ್ದು ಆತನ ಬೋಧನೆ. ಜನರು ಶಾಂತಿ-ಐಕ್ಯತೆಯಿಂದ ಒಟ್ಟಿಗೆ ಶಾಶ್ವತವಾಗಿ ಜೀವಿಸಲು ಸಹಾಯ ಮಾಡುವ ತತ್ವಗಳು ಅದರಲ್ಲಿದ್ದವು. ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆಯೂ ಆತನು ತಿಳಿಸಿದನು. ಇದರಲ್ಲಿ ಈ ಲೋಕದ ಕಡೇ ದಿವಸಗಳಲ್ಲಿ ಕಂಡುಬರುವ ಘಟನೆಗಳೂ ಸೇರಿವೆ.

ಶಾಂತಿಯ ಮುಂಚೆ ಅಶಾಂತಿಯ ಬಿರುಗಾಳಿ

ಕಡೇ ದಿವಸಗಳಲ್ಲಿ ಶಾಂತಿ ಭದ್ರತೆ ಅಲ್ಲ, ಅದಕ್ಕೆ ತದ್ವಿರುದ್ಧವಾದ ಪರಿಸ್ಥಿತಿ ಇರಲಿದೆಯೆಂದು ಯೇಸು ಮುಂತಿಳಿಸಿದನು. ಈ ಲೋಕದ ‘ವ್ಯವಸ್ಥೆಯ ಸಮಾಪ್ತಿಯನ್ನು’ ಗುರುತಿಸಲು ಆತನು ಒಂದು ಸೂಚನೆ ಕೊಟ್ಟನು. ಅಂದರೆ ಇಡೀ ಲೋಕದಲ್ಲಿ ಯುದ್ಧಗಳು, ಆಹಾರದ ಅಭಾವ, ಅಂಟುರೋಗಗಳು, ದೊಡ್ಡದೊಡ್ಡ ಭೂಕಂಪಗಳು ಮುಂತಾದವು ನಡೆಯುವವು ಎಂದನು. (ಮತ್ತಾಯ 24:3, 7; ಲೂಕ 21:10, 11; ಪ್ರಕಟನೆ 6:3-8) “ಅನ್ಯಾಯವು ಹೆಚ್ಚಾಗುವುದರಿಂದ ಬಹುಜನರ ಪ್ರೀತಿಯು ತಣ್ಣಗಾಗಿಹೋಗುವುದು” ಎಂದು ಸಹ ಯೇಸು ಹೇಳಿದ್ದನು.—ಮತ್ತಾಯ 24:12.

ಇಂದು ಪ್ರೀತಿ ತಣ್ಣಗಾಗಿದೆ ಎಂದು ಅನೇಕ ವಿಧಗಳಲ್ಲಿ ಗೊತ್ತಾಗುತ್ತಿದೆ. ಅದನ್ನೇ ಬೈಬಲಿನ ಇನ್ನೊಬ್ಬ ಲೇಖಕನು 2 ತಿಮೊಥೆಯ 3:1-5 ರಲ್ಲಿ ಬರೆದಿದ್ದಾನೆ. ಈ ವಚನಗಳಲ್ಲಿ ತಿಳಿಸಲಾಗಿರುವಂತೆ, “ಕಡೇ ದಿವಸಗಳಲ್ಲಿ” ಜನರು ಸಾಮಾನ್ಯವಾಗಿ ಬರೀ ತಮ್ಮ ಬಗ್ಗೆ, ಹಣದ ಬಗ್ಗೆ ಮತ್ತು ಸುಖಭೋಗಗಳ ಬಗ್ಗೆ ಯೋಚಿಸುತ್ತಾರೆ. ಅವರು ಅಹಂಕಾರಿಗಳು, ಭಯಂಕರರು ಆಗಿರುತ್ತಾರೆ. ಕುಟುಂಬದವರ ಮಧ್ಯೆ ಸಹಜವಾಗಿ ಇರಬೇಕಾದ ಪ್ರೀತಿ ಇರುವುದಿಲ್ಲ, ಮಕ್ಕಳು ತಂದೆತಾಯಿಗಳಿಗೆ ಅವಿಧೇಯರಾಗುತ್ತಾರೆ. ಧಾರ್ಮಿಕ ಕಪಟತೆ ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬಿಡುತ್ತದೆ.

ಬಿರುಗಾಳಿಯಂಥ ಈ ಪರಿಸ್ಥಿತಿಗಳು ಈ ಲೋಕ ಕಡೇ ದಿವಸಗಳಲ್ಲಿದೆ ಎಂದು ತೋರಿಸಿಕೊಡುತ್ತವೆ. ಜೊತೆಗೆ, ಶಾಂತಿಯನ್ನು ತರಲಿರುವ ಕ್ರಿಸ್ತನ ರಾಜ್ಯದ ಆಳ್ವಿಕೆ ಬೇಗನೆ ಆರಂಭವಾಗಲಿದೆ ಎಂದೂ ತೋರಿಸಿಕೊಡುತ್ತವೆ. ಕಡೇ ದಿವಸಗಳ ಬಗ್ಗೆ ಮುಂತಿಳಿಸಿದಾಗ ಯೇಸು ಈ ಆಶ್ವಾಸನೆಯ ಮಾತನ್ನು ಕೂಡ ಹೇಳಿದ್ದನು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.”—ಮತ್ತಾಯ 24:14.

ಈ ಸುವಾರ್ತೆಯು ತಪ್ಪುಮಾಡುವವರಿಗೆ ಎಚ್ಚರಿಕೆಯನ್ನು ಕೊಡುತ್ತದೆ. ಜೊತೆಗೆ, ನೀತಿವಂತರಿಗೆ ನಿರೀಕ್ಷೆಯನ್ನು ನೀಡುತ್ತದೆ. ದೇವರು ಕೊಡುತ್ತೇನೆಂದ ಆಶೀರ್ವಾದಗಳು ಬೇಗನೆ ಸಿಗಲಿವೆ ಎಂಬ ಆಶ್ವಾಸನೆಯನ್ನು ಅವರಿಗದು ನೀಡುತ್ತದೆ. ಈ ಆಶೀರ್ವಾದಗಳ ಬಗ್ಗೆ ನಿಮಗೆ ಹೆಚ್ಚನ್ನು ಕಲಿಯಲು ಇಷ್ಟ ಇದೆಯಾ? ಹಾಗಾದರೆ, ಈ ಪತ್ರಿಕೆಯ ಕೊನೆ ಪುಟವನ್ನು ನೋಡಿ.