ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾವಿನ ನೋವಿನಲ್ಲಿ ಇರುವವರಿಗೆ ಸಹಾಯ

ಪ್ರಿಯರ ಮರಣದಿಂದಾಗುವ ಪರಿಣಾಮ

ಪ್ರಿಯರ ಮರಣದಿಂದಾಗುವ ಪರಿಣಾಮ

ಸಾವಿನ ನೋವಿನಲ್ಲಿ ಅನೇಕ ಹಂತಗಳಿವೆ ಎಂದು ಕೆಲವು ತಜ್ಞರು ಹೇಳುತ್ತಾರೆ. ಆದರೂ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ನೋವನ್ನು ವ್ಯಕ್ತಪಡಿಸುತ್ತಾರೆ. ಈ ರೀತಿ ಭಿನ್ನ ಪ್ರತಿಕ್ರಿಯೆಗಳನ್ನು ನೋಡಿ ಕೆಲವರಿಗೆ ಹೆಚ್ಚು ದುಃಖವಿಲ್ಲ ಅಥವಾ ಅವರು ಭಾವನೆಗಳನ್ನು ಮುಚ್ಚಿಡುತ್ತಿದ್ದಾರೆ ಎಂದು ಹೇಳಲು ಆಗುತ್ತಾ? ಇಲ್ಲ. ನೋವನ್ನು ವ್ಯಕ್ತಪಡಿಸುವುದು ಅವರಿಗೆ ಉಪಶಮನ ನೀಡುತ್ತದೆ ಎಂಬುದು ನಿಜವಾದರೂ, ಅದನ್ನು ಮಾಡಲು ಒಂದೇ ಒಂದು “ಸರಿಯಾದ ರೀತಿ” ಅಂತ ಇಲ್ಲ. ಯಾಕೆಂದರೆ ಇದು ಒಬ್ಬ ವ್ಯಕ್ತಿಯ ಸಂಸ್ಕೃತಿ, ಸ್ವಭಾವ, ಜೀವನದಲ್ಲಿ ಅವನಿಗಾದ ಅನುಭವಗಳ ಮೇಲೆ ಮತ್ತು ಆಪ್ತರು ಹೇಗೆ ತೀರಿಹೋದರು ಎನ್ನುವುದರ ಮೇಲೆ ಹೊಂದಿಕೊಂಡಿದೆ.

ಏನೆಲ್ಲಾ ಆಗಬಹುದು?

ಆಪ್ತರನ್ನು ಕಳೆದುಕೊಂಡವರಿಗೆ ಆಮೇಲೆ ಏನೆಲ್ಲಾ ಆಗಬಹುದು ಎಂದು ಬಹುಶಃ ತಿಳಿದಿರುವುದಿಲ್ಲ. ಆದರೆ, ಕೆಲವೊಂದು ಸಮಸ್ಯೆಗಳು ಮತ್ತು ಭಾವನಾತ್ಮಕ ತೊಂದರೆಗಳು ಸಾಮಾನ್ಯವಾಗಿರುತ್ತವೆ. ಕೆಳಗಿನವುಗಳನ್ನು ಗಮನಿಸಿ:

ಭಾವನಾತ್ಮಕವಾಗಿ ಕುಂದಿಹೋಗುವುದು. ಆಪ್ತರನ್ನು ಕಳೆದುಕೊಂಡಾಗ ಅಳುತ್ತಾರೆ, ಅವರಿಗಾಗಿ ಹಂಬಲಿಸುತ್ತಾರೆ. ಆಗ ಅವರ ಮನಃಸ್ಥಿತಿಯಲ್ಲಿ ವೈಪರಿತ್ಯಗಳು ಆಗಬಹುದು. ನೆನಪುಗಳು ಮತ್ತು ಕನಸುಗಳಿಂದಾಗಿ ಭಾವನಾತ್ಮಕವಾಗಿ ನೋವನ್ನನುಭವಿಸಬಹುದು. ಸಾವಿನ ಸುದ್ದಿ ಕೇಳಿದ ತಕ್ಷಣ ಆಘಾತವಾಗಬಹುದು, ಅದನ್ನು ನಂಬಲು ಕಷ್ಟವಾಗಬಹುದು. ಅನಿರೀಕ್ಷಿತವಾಗಿ ತನ್ನ ಗಂಡ ಟಿಮೊರನ್ನು ಕಳೆದುಕೊಂಡಾಗ ಟೀನ ತಾನು ಪ್ರತಿಕ್ರಿಯಿಸಿದ ರೀತಿಯನ್ನು ಜ್ಞಾಪಿಸಿಕೊಳ್ಳುತ್ತಾ ಹೇಳುವುದು: “ಆ ಸುದ್ದಿ ಕೇಳಿದಾಗ ಸ್ತಬ್ಧಳಾದೆ. ನನಗೆ ಅಳಲಿಕ್ಕೂ ಆಗಲಿಲ್ಲ. ನಾನೆಷ್ಟು ನೋವನ್ನು ಅನುಭವಿಸಿದೆನೆಂದರೆ ಕೆಲವೊಮ್ಮೆ ಉಸಿರಾಡಲೂ ಕಷ್ಟವಾಗುತ್ತಿತ್ತು. ಈ ರೀತಿ ಆಗಿದೆ ಅಂತ ನಂಬಲಿಕ್ಕೇ ಆಗಲಿಲ್ಲ.”

ಆಗಾಗ ಚಿಂತೆ, ಕೋಪ, ಮತ್ತು ದೋಷಿಭಾವನೆ ಕಾಣಿಸಿಕೊಳ್ಳುವುದು ಸಾಮಾನ್ಯ. “ನಮ್ಮ ಮಗ ಎರಿಕ್‌ 24 ವರ್ಷಕ್ಕೇ ತೀರಿಕೊಂಡ. ಆಗಿನಿಂದ ನನಗೂ ನನ್ನ ಪತ್ನಿ ಯೊಲಾಂಡಗೂ ತುಂಬ ಕೋಪ ಬರುತ್ತಿತ್ತು. ಆದರೆ ಆಶ್ಚರ್ಯವೇನೆಂದರೆ, ನಾವಿಬ್ಬರೂ ಯಾವಾಗಲೂ ಅಂತಹ ವ್ಯಕ್ತಿಗಳಾಗಿರಲಿಲ್ಲ. ನಾವು ನಮ್ಮ ಮಗನನ್ನ ಇನ್ನೂ ಚೆನ್ನಾಗಿ ಬೆಳಸಬಹುದಿತ್ತೇನೋ ಎಂಬ ದೋಷಿಭಾವನೆಯೂ ಇತ್ತು” ಅನ್ನುತ್ತಾರೆ ಐವನ್‌. ದೀರ್ಘಕಾಲದ ಕಾಯಿಲೆಯಿಂದಾಗಿ ತನ್ನ ಪತ್ನಿಯನ್ನು ಕಳೆದುಕೊಂಡ ಅಲ್ಜೆಂಡ್ರೋರಿಗೂ ದೋಷಿಭಾವನೆ ಇತ್ತು. ಅವರು ಹೇಳಿದ್ದು: “ನಾನು ಇಷ್ಟೆಲ್ಲಾ ಕಷ್ಟವನ್ನು ಅನುಭವಿಸುವಂತೆ ದೇವರು ಅನುಮತಿಸಿದ್ದಾನೆಂದರೆ ನಾನು ಅಷ್ಟು ಕೆಟ್ಟವನಾಗಿರಬೇಕು ಅಂತ ನನಗೆ ಮೊದಲು ಅನಿಸುತ್ತಿತ್ತು. ನಂತರ ಇದೆಲ್ಲದ್ದಕ್ಕೆ ದೇವರನ್ನು ದೂರುತ್ತಿದ್ದೇನೆಂದು ಮನಸ್ಸು ಚುಚ್ಚುತ್ತಿತ್ತು.” ಈ ಹಿಂದಿನ ಲೇಖನದಲ್ಲಿ ನೋಡಿದ ಕೋಸ್ಟಾಸ್‌ ಹೇಳಿದ್ದು: “ನನ್ನನ್ನು ಬಿಟ್ಟು ಅಗಲಿದ್ದಕ್ಕೆ ಸೋಫಿಯ ಮೇಲೆ ತುಂಬ ಸಿಟ್ಟು ಇತ್ತು. ಆಮೇಲೆ ಆ ರೀತಿ ಯೋಚಿಸಿದ್ದು ತಪ್ಪು ಅಂತ ಮನಸ್ಸು ಚುಚ್ಚಿತು. ಯಾಕೆಂದರೆ, ಅದು ಅವಳ ತಪ್ಪಾಗಿರಲಿಲ್ಲ.”

ತಪ್ಪಾದ ಯೋಚನೆಗಳು. ಕೆಲವೊಮ್ಮೆ ನಮ್ಮ ಯೋಚನೆಗಳು ಎಷ್ಟು ಬದಲಾಗಬಹುದೆಂದರೆ ಅಸತ್ಯವಾದ ವಿಷಯಗಳನ್ನು ಯೋಚಿಸುತ್ತಿರಬಹುದು. ಉದಾಹರಣೆಗೆ ತಾವು ಮಾತಾಡುವುದನ್ನು ತೀರಿಕೊಂಡವರು ಕೇಳಿಸಿಕೊಳ್ಳುತ್ತಾರೆ, ಅವರು ತಮ್ಮೊಂದಿಗಿದ್ದಾರೆ ಮತ್ತು ತಮ್ಮನ್ನು ನೋಡುತ್ತಿದ್ದಾರೆ ಅಂತ ಆಪ್ತರನ್ನು ಕಳೆದುಕೊಂಡವರು ಯೋಚಿಸಬಹುದು. ಯಾವುದೇ ವಿಷಯಕ್ಕೆ ಪೂರ್ತಿ ಗಮನ ಕೊಡಲು ಅಥವಾ ನೆನಪಿನಲ್ಲಿಡಲು ಕಷ್ಟವಾಗಬಹುದು. ಟೀನ ಹೇಳುವುದು: “ಕೆಲವೊಮ್ಮೆ ನಾನು ಬೇರೆಯವರೊಟ್ಟಿಗೆ ಮಾತಾಡುತ್ತಿರುವಾಗ, ನನ್ನ ಮನಸ್ಸು ಅಲ್ಲಿರುತ್ತಿರಲಿಲ್ಲ. ಟಿಮೊ ತೀರಿಹೋದಾಗ ನಡೆದ ವಿಷಯಗಳೇ ನನ್ನ ಮನಸ್ಸಿನಲ್ಲಿ ಓಡಾಡುತ್ತಿದ್ದವು. ಯಾವುದಕ್ಕೂ ಗಮನ ಕೊಡಲು ಆಗುತ್ತಿರಲಿಲ್ಲ. ಇದರಿಂದ ತುಂಬ ಕಷ್ಟವಾಗುತ್ತಿತ್ತು.”

ಯಾರೊಂದಿಗೂ ಇರುವುದಕ್ಕೆ ಇಷ್ಟವಾಗುವುದಿಲ್ಲ. ದುಃಖದಲ್ಲಿರುವ ವ್ಯಕ್ತಿಗೆ ಜನರೊಂದಿಗೆ ಇರಲು ಕಿರಿಕಿರಿ ಎನಿಸಬಹುದು ಮತ್ತು ಇಷ್ಟವಾಗದಿರಬಹುದು. ಕೋಸ್ಟಾಸ್‌ ಹೇಳುವುದು: ದಂಪತಿಗಳ ಜೊತೆಯಲ್ಲಿದ್ದಾಗ ನಾನು ಅವರಲ್ಲೊಬ್ಬ ಅಂತ ಅನಿಸುತ್ತಿರಲಿಲ್ಲ. ಅವಿವಾಹಿತರೊಂದಿಗೆ ಇರುವಾಗಲೂ ನನಗೆ ಹಾಗೇ ಅನಿಸುತ್ತಿತ್ತು.” ಐವನ್‌ನ ಹೆಂಡತಿ ಯೊಲಾಂಡ ಜ್ಞಾಪಿಸಿಕೊಳ್ಳುವುದು: “ನಾವು ಅನುಭವಿಸಿದ ಕಷ್ಟಗಳಿಗೆ ಹೋಲಿಸುವಾಗ ತೀರ ಚಿಕ್ಕ-ಪುಟ್ಟ ಸಮಸ್ಯೆಗಳ ಕುರಿತು ಮಾತಾಡುವವರ ಜೊತೆಗಿರುವುದು ನನಗೆ ಕಷ್ಟ ಅಂತ ಅನಿಸುತ್ತಿತ್ತು. ಇನ್ನು ಕೆಲವರು ತಮ್ಮ ಮಕ್ಕಳ ಬಗ್ಗೆ ಒಳ್ಳೇ ವಿಷಯಗಳನ್ನು ಹೇಳುತ್ತಿದ್ದರು. ಅವರ ಬಗ್ಗೆ ನನಗೆ ಸಂತೋಷವಾಗುತ್ತಿತ್ತು. ಆದರೆ ಅದೇ ಸಮಯದಲ್ಲಿ, ಅವರಿಗೆ ಕಿವಿಗೊಡಲು ಕಷ್ಟವಾಗುತ್ತಿತ್ತು. ಹೇಗೋ ನಮ್ಮ ಜೀವನ ಸಾಗುತ್ತೆ, ಆದ್ರೆ ಜೀವಿಸುವ ಆಸೆ ಆಗಲಿ, ಇದನ್ನೆಲ್ಲ ಸಹಿಸಿಕೊಳ್ಳುವ ತಾಳ್ಮೆಯಾಗಲಿ ನಮಗಿಲ್ಲ ಅಂತ ಅನಿಸುತ್ತಿತ್ತು.”

ಆರೋಗ್ಯದ ಸಮಸ್ಯೆಗಳು. ದೇಹದ ತೂಕ, ಹಸಿವೆ, ಮತ್ತು ನಿದ್ದೆ ಮುಂತಾದವುಗಳಲ್ಲಿ ಏರುಪೇರಾಗುವುದು ಸಾಮಾನ್ಯ. ಏರನ್‌, ತನ್ನ ತಂದೆಯನ್ನು ಕಳೆದುಕೊಂಡ ನಂತರದ ಒಂದು ವರ್ಷ ಏನಾಯಿತೆಂದು ಹೇಳುತ್ತಾನೆ: “ನನಗೆ ನಿದ್ದೆಯ ಸಮಸ್ಯೆ ಇತ್ತು. ಪ್ರತಿ ರಾತ್ರಿ ನಾನು ನನ್ನ ತಂದೆಯ ಸಾವನ್ನು ನೆನಪಿಸಿಕೊಳ್ಳುತ್ತಾ ನಿದ್ದೆಯಿಂದ ಎದ್ದೇಳುತ್ತಿದ್ದೆ.”

ಅಲ್ಜೆಂಡ್ರೋಗೂ ವಿಚಿತ್ರವಾದ ಆರೋಗ್ಯ ಸಮಸ್ಯೆ ಇತ್ತು. “ಎಷ್ಟೋ ಬಾರಿ ನಾನು ಡಾಕ್ಟರನ್ನು ಭೇಟಿಯಾದೆ, ಆದರೆ ಅವರು ನಾನು ಆರೋಗ್ಯವಾಗಿದ್ದೇನೆ ಎಂದು ಹೇಳುತ್ತಿದ್ದರು. ನನ್ನ ಮನಸ್ಸಿನ ನೋವೇ ನನ್ನ ಅನಾರೋಗ್ಯಕ್ಕೆ ಕಾರಣ ಇರಬಹುದೇನೋ ಅಂತ ನನಗನಿಸಿತು” ಎನ್ನುತ್ತಾನೆ ಅವನು. ಸಮಯಾನಂತರ ನಿಧಾನವಾಗಿ ಅವನು ಗುಣಮುಖನಾದನು. ಆದರೂ ಅಲ್ಜೆಂಡ್ರೋ ಡಾಕ್ಟರ ಬಳಿ ಹೋಗಿದ್ದು ವಿವೇಕಯುತವಾಗಿತ್ತು. ಯಾಕೆಂದರೆ ತುಂಬ ದುಃಖದಲ್ಲಿರುವಾಗ ನಮ್ಮ ಶರೀರದಲ್ಲಿ ರೋಗನಿರೋಧಕ ವ್ಯವಸ್ಥೆ ಕೆಲಸ ಮಾಡುವುದು ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ನಮಗಿರುವ ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು ಅಥವಾ ಕೆಲವೊಮ್ಮೆ ಹೊಸ ಕಾಯಿಲೆಯೂ ಬರಬಹುದು.

ಅತ್ಯಗತ್ಯದ ಕೆಲಸಗಳನ್ನು ಮಾಡಲು ಕಷ್ಟವಾಗಬಹುದು. ಐವನ್‌ ಜ್ಞಾಪಿಸಿಕೊಳ್ಳುವುದು: “ಎರಿಕ್‌ ತೀರಿಹೋದಾಗ ಅದನ್ನು ಬರೀ ನಮ್ಮ ಸಂಬಂಧಿಕರಿಗೆ ಮತ್ತು ಸ್ನೇಹಿತರಿಗೆ ಮಾತ್ರವಲ್ಲ, ಅವನ ಧಣಿಗಳಿಗೆ ಮತ್ತು ಮನೆಯ ಮಾಲಿಕರಿಗೆ, ಹೀಗೆ ಅನೇಕರಿಗೆ ತಿಳಿಸಬೇಕಿತ್ತು. ಕೆಲವು ಕಾನೂನು ಸಂಬಂಧಿತ ದಾಖಲೆ ಪತ್ರಗಳನ್ನು ಭರ್ತಿ ಮಾಡಬೇಕಿತ್ತು. ಅವನ ಎಲ್ಲಾ ವೈಯಕ್ತಿಕ ವಸ್ತುಗಳನ್ನು ಪರಿಶೀಲಿಸಬೇಕಿತ್ತು. ಇದೆಲ್ಲಾ ಮಾಡಲು ತುಂಬ ಗಮನ ಕೊಡಬೇಕಿತ್ತು. ಆದರೆ ನಾವು ಈಗಾಗಲೇ ಮಾನಸಿಕವಾಗಿ, ಶಾರೀರಿಕವಾಗಿ, ಮತ್ತು ಭಾವನಾತ್ಮಕವಾಗಿ ಬಳಲಿಹೋಗಿದ್ದೆವು.”

ತಮ್ಮ ಪ್ರೀತಿಯ ತೀರಿಹೋದ ವ್ಯಕ್ತಿ ಮಾಡುತ್ತಿದ್ದ ಕೆಲಸಗಳನ್ನು ಈಗ ತಾವು ಮಾಡಬೇಕಾದಾಗ ಕೆಲವರಿಗೆ ತುಂಬ ಕಷ್ಟವಾಗುತ್ತದೆ. ಟೀನಳ ಅನುಭವ ಕೂಡ ಅದೇ ಆಗಿತ್ತು. ಅವಳು ಹೇಳುವುದು: “ಟಿಮೊ ನಮ್ಮ ಮನೆಯ ಹಣ ವ್ಯವಹಾರ ಮತ್ತು ಬ್ಯಾಂಕಿನ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಆದರೆ ಇನ್ನು ಮುಂದೆ ಆ ಜವಾಬ್ದಾರಿಯನ್ನು ನಾನು ನೋಡಿಕೊಳ್ಳಬೇಕಾಯಿತು. ಇದರಿಂದ ನಾನು ಅನುಭವಿಸುತ್ತಿದ್ದ ಮಾನಸಿಕ ಒತ್ತಡ ಇನ್ನೂ ಹೆಚ್ಚಾಯಿತು. ಇದನ್ನೆಲ್ಲಾ ನನ್ನಿಂದ ಮಾಡಲಿಕ್ಕಾಗುತ್ತಾ ಅಂತ ಚಿಂತೆಯಾಯಿತು.”

ಮೇಲೆ ತಿಳಿಸಲಾದ ಮಾನಸಿಕ, ಭಾವನಾತ್ಮಕ, ಮತ್ತು ಶಾರೀರಿಕ ಸಮಸ್ಯೆಗಳ ಬಗ್ಗೆ ಓದುವಾಗ ಸಾವಿನ ನೋವಿನಿಂದ ಚೇತರಿಸಿಕೊಳ್ಳುವುದು ತುಂಬ ಕಷ್ಟ ಅಂತ ಅನಿಸಬಹುದು. ಪ್ರಿಯರನ್ನು ಕಳೆದುಕೊಳ್ಳುವ ನೋವು ಅತೀವವಾಗಿರುತ್ತದೆ ನಿಜ. ಆದರೆ ಅದನ್ನು ತಿಳಿದಿರುವುದು ಆಪ್ತರನ್ನು ಕಳಕೊಂಡವರಿಗೆ ನಿಭಾಯಿಸಿಕೊಂಡು ಹೋಗಲು ಸಹಾಯ ಮಾಡುವುದು. ಜ್ಞಾಪಕದಲ್ಲಿಡಬೇಕಾದ ಒಂದು ಅಂಶವೇನೆಂದರೆ ನೋವಿನಲ್ಲಿರುವ ಎಲ್ಲರಿಗೂಎಲ್ಲಾ ಪರಿಣಾಮಗಳು ಬರುತ್ತವೆ ಎಂದೇನಿಲ್ಲ. ಆದರೆ ನೋವಿನಿಂದಾಗಿ ಪ್ರಿಯರನ್ನು ಕಳೆದುಕೊಂಡವರ ಭಾವನೆಗಳಲ್ಲಿ ಏರುಪೇರಾಗುವುದು ಸಹಜ ಎಂದು ತಿಳಿದಿರುವುದರಿಂದ ಅವರಿಗೆ ಸ್ವಲ್ಪ ಮಟ್ಟಿಗೆ ಸಾಂತ್ವನ ಸಿಗಬಹುದು.

ನಾನು ಮುಂಚಿನಂತೆ ಸಂತೋಷವಾಗಿರುತ್ತೇನಾ?

ಮುಂದೆ ಏನಾಗಬಹುದು: ಆಳವಾದ ನೋವು ಶಾಶ್ವತವಾಗಿರುವುದಿಲ್ಲ, ಕ್ರಮೇಣ ಕಡಿಮೆಯಾಗುತ್ತದೆ. ಇದರ ಅರ್ಥ ತಮ್ಮ ಪ್ರಿಯರನ್ನು ಸಂಪೂರ್ಣವಾಗಿ ಮರೆಯುತ್ತಾರೆ ಅಥವಾ ಆ ನೋವೇ ಇರುವುದಿಲ್ಲ ಅಂತಲ್ಲ. ಆದರೆ ದಿನ ಕಳೆದಂತೆ ಅವರ ಮನಸ್ಸಿನಲ್ಲಿರುವ ನೋವಿನ ಭಾರ ಕಡಿಮೆಯಾಗುತ್ತದೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಅವರ ನೆನಪುಗಳು ಬರಬಹುದು. ಅದರಲ್ಲೂ ಮುಖ್ಯವಾಗಿ ಮದುವೆಯ ದಿನಗಳಂಥ ಕೆಲವು ಸನ್ನಿವೇಶಗಳಲ್ಲಿ ಅವರ ನೆನಪಾಗಬಹುದು. ಆದರೆ ಕಾಲಕ್ರಮೇಣ, ಹೆಚ್ಚಿನ ಜನರು ಭಾವನಾತ್ಮಕವಾಗಿ ಸಮತೆಯನ್ನು ಕಾಪಾಡಿಕೊಂಡು ಮುಂದೆ ಜೀವನ ಸಾಗಿಸುತ್ತಾರೆ, ಮುಂಚಿನಂತೆಯೇ ದಿನನಿತ್ಯದ ಕೆಲಸಗಳನ್ನು ಮಾಡಿಕೊಂಡು ಹೋಗುತ್ತಾರೆ. ಮುಖ್ಯವಾಗಿ ಆಪ್ತರನ್ನು ಕಳೆದುಕೊಂಡವರಿಗೆ ಅವರ ಕುಟುಂಬಸ್ತರು ಅಥವಾ ಸ್ನೇಹಿತರು ಸ್ವಲ್ಪ ಮಟ್ಟಿಗೆ ಸಹಾಯ ಮಾಡುವಾಗ ಇದು ಸಾಧ್ಯವಾಗುತ್ತದೆ.

ಎಷ್ಟು ಸಮಯ ಬೇಕಾಗಬಹುದು? ಸುಧಾರಿಸಿಕೊಳ್ಳಲು ಕೆಲವರಿಗೆ, ಹೆಚ್ಚೆಂದರೆ ಕೆಲವು ತಿಂಗಳುಗಳಾಗುತ್ತವೆ. ಆದರೆ ಹೆಚ್ಚಿನವರಿಗೆ, ಒಂದೆರಡು ವರ್ಷಗಳಾಗುತ್ತವೆ. ಇನ್ನೂ ಕೆಲವರಿಗೆ ಅದಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ. * ಅಲ್ಜೆಂಡ್ರೋ ಜ್ಞಾಪಿಸಿಕೊಳ್ಳುವುದು, “ನನಗೆ ಈ ನೋವಿನಿಂದ ಸುಧಾರಿಸಿಕೊಳ್ಳಲು ಮೂರು ವರ್ಷವಾಯಿತು.”

ತಾಳ್ಮೆ ಬೆಳೆಸಿಕೊಳ್ಳಿ. ನಾಳೆ ಬಗ್ಗೆ ಚಿಂತಿಸಬೇಡಿ, ನಿಮ್ಮ ಪರಿಸ್ಥಿತಿಗನುಸಾರ ನಿಧಾನವಾಗಿ ಸುಧಾರಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಈ ನೋವು ಶಾಶ್ವತವಲ್ಲ ಎಂದು ನಿಮಗೆ ತಿಳಿದಿರಲಿ. ನಿಮ್ಮ ನೋವನ್ನು ಕಡಿಮೆಗೊಳಿಸಲು ಮತ್ತು ಹೆಚ್ಚು ಕಾಲ ನೋವಿನಿಂದ ಬಳಲದಂತೆ ಮಾಡಲು ಈಗ ನೀವೇನು ಮಾಡಬಹುದು?

ನೋವಿನಿಂದ ಖಿನ್ನರಾಗುವುದು ಸಾಮಾನ್ಯ

^ ಪ್ಯಾರ. 17 ಸ್ವಲ್ಪ ಮಂದಿಗೆ ಸಾವಿನ ನೋವು ತುಂಬಾ ಹೆಚ್ಚಿರುತ್ತದೆ ಮತ್ತು ತುಂಬ ವರ್ಷಗಳವರೆಗೆ ಅನುಭವಿಸುತ್ತಾರೆ. ಇದು ಗಂಭೀರ ಕಾಯಿಲೆಯ ಸ್ಥಿತಿಯಾಗಿದೆ. ಅಂಥವರಿಗೆ ಮಾನಸಿಕ ಆರೋಗ್ಯ ತಜ್ಞರ ನೆರವು ಬೇಕಾಗುತ್ತದೆ.