ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಖಪುಟ ಲೇಖನ | ಸಾವಿನ ನೋವಿಗೆ ಸಾಂತ್ವನದ ಮದ್ದು

ದುಃಖದಲ್ಲಿ ಇರುವವರಿಗೆ ಸಹಾಯ ಮಾಡಿ

ದುಃಖದಲ್ಲಿ ಇರುವವರಿಗೆ ಸಹಾಯ ಮಾಡಿ

ತಮ್ಮ ಆಪ್ತರನ್ನ ಕಳೆದುಕೊಂಡವರಿಗೆ ‘ಹೇಗಪ್ಪಾ ಸಮಾಧಾನ ಮಾಡೋದು’ ಅಂತ ನಿಮಗೆ ಯಾವಾಗಾದರೂ ಅನಿಸಿದೆಯಾ? ನಿಜ, ಏನು ಹೇಳಬೇಕು ಏನು ಮಾಡಬೇಕು ಅಂತ ಗೊತ್ತಾಗದೆ ಕೆಲವೊಮ್ಮೆ ನಾವು ಸುಮ್ಮನಿದ್ದುಬಿಡುತ್ತೇವೆ. ಆದರೆ ನಾವೇನು ಮಾಡಬಹುದೆಂಬ ಕೆಲವು ಪ್ರಾಯೋಗಿಕ ಸಲಹೆಗಳು ಇಲ್ಲಿವೆ.

ನೀವು ಮಾಡಬೇಕಾದ ಮೊದಲನೇ ವಿಷಯ ಆ ಸಮಯದಲ್ಲಿ ಅವರ ಜೊತೆಗಿರುವುದು. ಅದರೊಟ್ಟಿಗೆ “ಸಮಾಧಾನ ಮಾಡಿಕೊಳ್ಳಿ” ಅನ್ನೋ ಮಾತುಗಳನ್ನು ಹೇಳುವುದೂ ಮುಖ್ಯ. ಕೆಲವು ಸಂಸ್ಕೃತಿಗಳಲ್ಲಿ ಅಪ್ಪಿಕೊಂಡು, ತಲೆ ಸವರುವ ಮೂಲಕ ಸಮಾಧಾನ ಪಡಿಸುತ್ತಾರೆ. ನೀವು ಕೂಡ ಇದನ್ನು ಮಾಡಬಹುದು. ದುಃಖದಲ್ಲಿರುವವರು ಮಾತಾಡುವಾಗ ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವರಿಗೆ, ಅವರ ಕುಟುಂಬದವರಿಗೆ ಏನಾದರೂ ಸಹಾಯ ಮಾಡಿ. ಉದಾಹರಣೆಗೆ, ಮನೆಕೆಲಸ ಮಾಡಿಕೊಡಿ, ಊಟ ತಯಾರಿಸಿ ಕೊಡಿ, ಅವರ ಮಕ್ಕಳನ್ನು ನೋಡಿಕೊಳ್ಳಿ ಅಥವಾ ಅವರಿಗೆ ಇಷ್ಟ ಇದ್ದರೆ ಅಂತ್ಯಸಂಸ್ಕಾರಕ್ಕಾಗಿ ಏನಾದರೂ ಏರ್ಪಾಡುಗಳನ್ನು ಮಾಡಿ.

ತೀರಿಹೋದ ವ್ಯಕ್ತಿಯ ಬಗ್ಗೆ, ಅವರ ಒಳ್ಳೇ ಗುಣಗಳ ಅಥವಾ ಒಳ್ಳೇ ಅನುಭವಗಳ ಬಗ್ಗೆ ಮಾತಾಡುವುದು ಕೂಡ ಒಳ್ಳೇದು. ಹೀಗೆ ನೀವು ದುಃಖದಲ್ಲಿರುವವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಬಹುದು. ಉದಾಹರಣೆಗೆ, ಆರು ವರ್ಷಗಳ ಹಿಂದೆ ತನ್ನ ಗಂಡ ಇಯನ್‌ನ ಕಳೆದುಕೊಂಡ ಪಾಮ್‌ ಎಂಬಾಕೆ ಹೇಳುವುದು: “ನನ್ನ ಗಂಡ ಮಾಡಿದ ಅನೇಕ ಒಳ್ಳೇ ವಿಷಯಗಳ ಬಗ್ಗೆ ಬೇರೆಯವರು ಹೇಳುತ್ತಿದ್ದರು. ಎಷ್ಟೋ ವಿಷ್ಯಗಳು ನನಗೇ ಗೊತ್ತಿರಲಿಲ್ಲ. ಅದನ್ನ ಕೇಳೋವಾಗ ನನಗೆ ಸಂತೋಷ ಮತ್ತು ಸಮಾಧಾನ ಆಗುತ್ತಿತ್ತು.”

ಸಂಶೋಧಕರು ಹೇಳುವುದೇನೆಂದರೆ ಆರಂಭದಲ್ಲಿ ಎಲ್ಲರೂ ಸಹಾಯ ಮಾಡುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ ಎಲ್ಲರು ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿ ಹೋಗುತ್ತಾರೆ. ಆದರೆ ನಾವು ಹಾಗೆ ಮಾಡದೆ ಕ್ರಮವಾಗಿ ಭೇಟಿ ಮಾಡಬೇಕು. * ಇಂಥ ಭೇಟಿಗಳು ಅವರ ನೋವಿನ ಭಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.

ಕವೋರಿ ಎಂಬ ಜಪಾನಿನ ಯುವತಿಯ ಉದಾಹರಣೆಯನ್ನು ಗಮನಿಸಿ. ಆಕೆಗೆ ತಾಯಿಯನ್ನ ಕಳೆದುಕೊಂಡ ನೋವು ಇನ್ನೂ ಆರಿರಲಿಲ್ಲ. ಇದಾಗಿ 15 ತಿಂಗಳಲ್ಲೇ ಅಕ್ಕನನ್ನು ಕಳೆದುಕೊಂಡು ಕಂಗಾಲಾಗಿ ಹೋದಳು. ಅಂಥ ದುಃಖಕರ ಸಮಯದಲ್ಲಿ ಆಕೆಯ ಸ್ನೇಹಿತರು ಯಾವಾಗಲೂ ಆಕೆಯ ಜೊತೆಯಲ್ಲಿದ್ದು ಸಹಾಯ ಮಾಡಿದರು. ಅವರಲ್ಲಿ ಒಬ್ಬರು ರೆಟ್‌ಸುಕೊ. ಇವರು ಕವೋರಿಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವರಾಗಿದ್ದರೂ ಅವಳಿಗೆ ಆಪ್ತ ಸ್ನೇಹಿತೆಯಾಗಲು ಪ್ರಯತ್ನಿಸಿದರು. ಕವೋರಿ ಹೇಳುವುದು, “ಅವರು ನನ್ನನ್ನ ಅಮ್ಮನ ಥರ ನೋಡಿಕೊಳ್ಳುತ್ತಿದ್ದರು. ನಿಜ ಹೇಳಬೇಕೆಂದರೆ, ನನಗೆ ಅದು ಇಷ್ಟ ಆಗುತ್ತಿರಲಿಲ್ಲ. ಯಾಕೆಂದರೆ ನನ್ನ ಅಮ್ಮನ ಸ್ಥಾನವನ್ನ ಬೇರೆ ಯಾರೂ ತುಂಬೋದಕ್ಕೆ ಸಾಧ್ಯ ಇಲ್ಲ ಅನ್ನೋದು ನನ್ನ ಅನಿಸಿಕೆ ಆಗಿತ್ತು. ಆದರೆ ಅವರು ನನ್ನನ್ನ ಎಷ್ಟು ಚೆನ್ನಾಗಿ ನೋಡಿಕೊಂಡರೆಂದರೆ ನಾನೇ ಅವರಿಗೆ ಆಪ್ತಳಾದೆ. ಪ್ರತಿವಾರ ನಾವು ದೇವರ ವಿಷಯಗಳನ್ನು ಬೇರೆಯವರಿಗೆ ತಿಳಿಸಲು ಮತ್ತು ಸಭಾ ಕೂಟಗಳಿಗೆ ಜೊತೆಯಾಗಿ ಹೋಗುತ್ತಿದ್ದೆವು. ನನ್ನನ್ನ ಟೀ ಕುಡಿಯಲು ಅವರ ಮನೆಗೆ ಕರೆಯುತ್ತಿದ್ದರು, ಊಟ ಕೊಡುತ್ತಿದ್ದರು, ಪತ್ರಗಳನ್ನು, ಗ್ರೀಟಿಂಗ್‌ ಕಾರ್ಡ್‌ಗಳನ್ನು ಕೊಡುತ್ತಿದ್ದರು. ಇವೆಲ್ಲಾ ನನಗೆ ನೋವನ್ನು ಮರೆಯಲು ಸಹಾಯ ಮಾಡಿತು.”

ಕವೋರಿಯ ಅಮ್ಮ ತೀರಿ ಹೋಗಿ ಹನ್ನೆರಡು ವರ್ಷ ಆಗಿದೆ. ಈಗ ಕವೋರಿ ಮತ್ತು ಆಕೆಯ ಗಂಡ ತಿಂಗಳಿನಲ್ಲಿ 70 ತಾಸುಗಳನ್ನು ದೇವರ ಸೇವೆಯಲ್ಲಿ ಕಳೆಯುತ್ತಾರೆ. ಕವೋರಿ ಹೇಳುವುದು, “ಇಷ್ಟು ವರ್ಷಗಳಾದರೂ ರೆಟ್‌ಸುಕೊರ ಪ್ರೀತಿ ಮಾತ್ರ ಕಡಿಮೆ ಆಗಿಲ್ಲ. ನಾನು ಊರಿಗೆ ಹೋದಾಗೆಲ್ಲಾ ಅವರ ಮನೆಗೆ ಹೋಗ್ತೀನಿ. ಅವರೊಟ್ಟಿಗಿರುವುದು ನಿಜವಾಗಲೂ ನನಗೆ ತುಂಬಾ ಸಂತೋಷ.”

ಈ ರೀತಿ ಅನೇಕ ಕಾಲಗಳವರೆಗೆ ಬೇರೆಯವರಿಂದ ಸಾಂತ್ವನ, ಬೆಂಬಲ ಪಡೆದುಕೊಂಡಿರುವ ಇನ್ನೊಬ್ಬಾಕೆ ಸೈಪ್ರಸ್‌ನ ಪೋಲೆ. ಈಕೆ ಒಬ್ಬ ಯೆಹೋವನ ಸಾಕ್ಷಿ. ಪೋಲೆಯ ಗಂಡ ಸೊಜೊಸ್‌ ತುಂಬಾ ದಯಾಭರಿತ ವ್ಯಕ್ತಿಯಾಗಿದ್ದರು. ಇವರು ಕ್ರೈಸ್ತ ಸಭೆಯ ಮುಂದಾಳತ್ವ ವಹಿಸುತ್ತಿದ್ದರು. ಅಪ್ಪ ಅಮ್ಮನನ್ನು ಕಳೆದುಕೊಂಡಿರುವವರನ್ನು ಮತ್ತು ವಿಧವೆಯರನ್ನು ಊಟಕ್ಕೆ ತಮ್ಮ ಮನೆಗೆ ಕರೆಯುತ್ತಿದ್ದರು. (ಯಾಕೋಬ 1:27) ಆದರೆ ದುಃಖದ ವಿಷಯ ಏನೆಂದರೆ ಸೊಜೊಸ್‌ ತಮ್ಮ 53 ನೇ ವಯಸ್ಸಿನಲ್ಲಿ ಬ್ರೈನ್‌ ಟ್ಯೂಮರ್‌ನಿಂದ ತೀರಿಹೋದರು. ಪೋಲೆ ತನ್ನ ದುಃಖವನ್ನು ಹೀಗೆ ಹಂಚಿಕೊಳ್ಳುತ್ತಾರೆ, “ನನ್ನೊಟ್ಟಿಗೆ 33 ವರ್ಷ ಸಂಸಾರ ಮಾಡಿದ ನನ್ನ ಪ್ರೀತಿಯ ಗಂಡನನ್ನ ನಾನು ಕಳೆದುಕೊಂಡುಬಿಟ್ಟೆ.”

ನೋವಿನಲ್ಲಿರುವವರಿಗೆ ಪ್ರಾಯೋಗಿಕವಾಗಿ ಸಹಾಯ ಮಾಡಿ

ಗಂಡನ ಶವಸಂಸ್ಕಾರದ ನಂತರ ಆಕೆ ತನ್ನ 15 ವರ್ಷದ ಮಗ ಡ್ಯಾನಿಯೇಲ್‌ ಜೊತೆ ಕೆನಡಾಗೆ ಹೋದರು. ಅಲ್ಲಿನ ಯೆಹೋವನ ಸಾಕ್ಷಿಗಳ ಬಗ್ಗೆ ಪೋಲೆ ಹೇಳುವುದು, “ನಮ್ಮ ಬಗ್ಗೆ, ನಮ್ಮ ಹಿಂದಿನ ಘಟನೆಗಳ ಬಗ್ಗೆ ಅಲ್ಲಿನವರಿಗೆ ಏನೂ ಗೊತ್ತಿರಲಿಲ್ಲ. ಆದರೆ ಅವರು ನಮ್ಮನ್ನ ಪ್ರೀತಿಯಿಂದ ಮಾತಾಡಿಸುತ್ತಿದ್ದರು, ತುಂಬಾ ಸಹಾಯ ಮಾಡುತ್ತಿದ್ದರು. ಅವರು ಮಾಡಿದ ಸಹಾಯ ನಿಜವಾಗಿಯೂ ಸಮಯಕ್ಕೆ ಸರಿಯಾಗಿತ್ತು. ಅದರಲ್ಲೂ ತಂದೆಯನ್ನು ಕಳೆದುಕೊಂಡಿದ್ದ ನನ್ನ ಮಗನಿಗೆ ಇಂಥ ಕಾಳಜಿ ನಿಜವಾಗಲೂ ಬೇಕಿತ್ತು! ಸಭೆಯನ್ನು ನೋಡಿಕೊಳ್ಳುತ್ತಿದ್ದ ಮೇಲ್ವಿಚಾರಕರು ಅವನಿಗೆ ವೈಯಕ್ತಿಕ ಕಾಳಜಿ ತೋರಿಸುತ್ತಿದ್ದರು. ಅದರಲ್ಲೂ ಒಬ್ಬ ಸಹೋದರ, ಸ್ನೇಹಿತರ ಜೊತೆ ಸಮಯ ಕಳೆಯುವಾಗ, ಆಟ ಆಡುವಾಗ ಡ್ಯಾನಿಯೇಲ್‌ನನ್ನೂ ಕರೆದುಕೊಂಡು ಹೋಗುತ್ತಿದ್ದರು.” ಈ ಬೆಂಬಲ ಮತ್ತು ಸಹಾಯದಿಂದ ಅಮ್ಮ ಮತ್ತು ಮಗ ಈಗ ಸಂತೋಷವಾಗಿದ್ದಾರೆ.

ಹೀಗೆ, ನಾವು ಸಹಾಯ ಮಾಡಿ ಆಪ್ತರನ್ನು ಕಳೆದುಕೊಂಡವರಿಗೆ ಸಾಂತ್ವನ ನೀಡಬಹುದು. ಬೈಬಲ್‌ ಕೂಡ ಅಂಥವರಿಗೆ ಒಂದು ಉತ್ತಮ ಭವಿಷ್ಯತ್ತಿನ ಬಗ್ಗೆ ತಿಳಿಸುತ್ತಾ ಸಮಾಧಾನ ಕೊಡುತ್ತದೆ. (w16-E No. 3)

^ ಪ್ಯಾರ. 6 ಕೆಲವರು ತಮ್ಮ ಕ್ಯಾಲೆಂಡರಿನಲ್ಲಿ ಸತ್ತ ದಿನಾಂಕವನ್ನು ಗುರುತಿಸಿಟ್ಟುಕೊಂಡು ತೀರಿಕೊಂಡವರ ಕುಟುಂಬದವರಿಗೆ ಸಾಂತ್ವನ ನೀಡುತ್ತಾರೆ. ಏಕೆಂದರೆ ಆ ದಿನ, ಅದರ ಹಿಂದಿನ ಅಥವಾ ಮುಂದಿನ ದಿನಗಳಲ್ಲೇ ನಿಜವಾಗಿಯೂ ಅವರಿಗೆ ಸಾಂತ್ವನದ ಅವಶ್ಯಕತೆ ಇರುತ್ತದೆ.