ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕಷ್ಟಗಳು ದೇವರ ಶಿಕ್ಷೆಯೋ?

ನಿಮ್ಮ ಕಷ್ಟಗಳು ದೇವರ ಶಿಕ್ಷೆಯೋ?

ಬೈಬಲಿನ ದೃಷ್ಟಿಕೋನ

ನಿಮ್ಮ ಕಷ್ಟಗಳು ದೇವರ ಶಿಕ್ಷೆಯೋ?

ತನಗೆ ಕ್ಯಾನ್ಸರ್‌ ರೋಗವಿದೆಯೆಂದು ಆಗತಾನೇ ತಿಳಿದುಬಂದ 55 ವಯಸ್ಸಿನ ಮಹಿಳೆ “ಇದು ದೇವರು ನನಗೆ ಕೊಟ್ಟ ಶಿಕ್ಷೆ” ಎಂದು ಹೇಳಿದಳು. ವರ್ಷಗಳ ಹಿಂದೆ ತಾನು ಗೈದ ತಪ್ಪೊಂದನ್ನು ಆಕೆ ನೆನಸುತ್ತಾ ಅನ್ನುವುದು: “ನನ್ನ ಪಾಪಕ್ಕಾಗಿ ದೇವರು ಈ ಶಿಕ್ಷೆ ಕೊಟ್ಟಿರಬೇಕು.”

ಕಷ್ಟಸಂಕಟಗಳು ಎದುರಾಗುವಾಗ, ಹಿಂದೆ ಮಾಡಿದ್ದ ಯಾವುದೊ ತಪ್ಪಿಗಾಗಿ ದೇವರು ತಮ್ಮನ್ನು ಶಿಕ್ಷಿಸುತ್ತಿದ್ದಾನೆಂದು ಅನೇಕರು ನೆನಸುತ್ತಾರೆ. ಥಟ್ಟನೆ ಕಷ್ಟಗಳ ಸುರಿಮಳೆ ಎದುರಾಗುವಾಗ, “ನನಗೇ ಯಾಕಪ್ಪಾ ಈ ಕಷ್ಟ? ನಾನೇನು ಪಾಪ ಮಾಡಿದ್ದೆ?” ಎಂದು ಅವರು ವಿಲಾಪಿಸುತ್ತಾರೆ. ಹಾಗಾದರೆ ನಮ್ಮ ಕಷ್ಟಗಳು ದೇವರ ಕೋಪದ ಸೂಚನೆಯೆಂದು ನಾವೆಣಿಸಬೇಕೋ? ನಮ್ಮ ಮೇಲೆ ಬರುವ ಕಷ್ಟಸಂಕಟಗಳು ನಿಜವಾಗಿಯೂ ದೇವರ ಶಿಕ್ಷೆಯೋ?

ನಂಬಿಗಸ್ತ ಭಕ್ತರಿಗೂ ಕಷ್ಟಗಳು ಬಂದಿದ್ದವು

ಯೋಬನೆಂಬ ಮನುಷ್ಯನ ಕುರಿತು ಬೈಬಲ್‌ ಏನು ಹೇಳುತ್ತದೆಂದು ನೋಡಿರಿ. ಇದ್ದಕ್ಕಿದ್ದ ಹಾಗೆ ಅವನು ತನ್ನ ಸಂಪತ್ತನ್ನೆಲ್ಲಾ ಕಳೆದುಕೊಂಡನು. ಆ ಬಳಿಕ ಅವನ ಹತ್ತು ಮಕ್ಕಳೆಲ್ಲರೂ ಬಿರುಗಾಳಿಗೆ ಸಿಕ್ಕಿ ಸತ್ತರು. ಇದಾಗಿ ಸ್ವಲ್ಪದರಲ್ಲಿ, ಅವನಿಗೆ ಬಲಗುಂದಿಸುವ ಅಸಹ್ಯಕರ ರೋಗ ತಗಲಿತು. (ಯೋಬ 1:13-19; 2:7,8) ಇಂಥ ವಿಪತ್ತುಗಳಿಂದಾಗಿ “ದೇವರ ಕೈ ನನ್ನನ್ನು ಹೊಡೆಯಿತಲ್ಲಾ” ಎಂದು ಯೋಬನು ಗೋಳಿಟ್ಟನು. (ಯೋಬ 19:21) ಇಂದಿರುವ ಅನೇಕರಂತೆ ಯೋಬನಿಗೂ ದೇವರೇ ತನ್ನನ್ನು ಶಿಕ್ಷಿಸುತ್ತಿದ್ದಾನೆಂದು ಅನಿಸಿತ್ತು.

ಆದರೂ, ಯೋಬನು “ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ” ಎಂದು ಅವನ ಕಷ್ಟಗಳು ಆರಂಭಿಸುವ ಮೊದಲೇ ದೇವರು ಸ್ವತಃ ಹೇಳಿದ್ದನು. (ಯೋಬ 1:8) ಯೋಬನ ಮೇಲೆ ಬಂದ ಆಪತ್ತುಗಳು ದೇವರಿಂದ ಬಂದ ಶಿಕ್ಷೆಯಾಗಿರಲಿಲ್ಲ ಎಂದು ದೇವರ ಆ ಮೆಚ್ಚಿಗೆಯ ಮಾತುಗಳು ಸ್ಪಷ್ಟಪಡಿಸುತ್ತವೆ.

ವಾಸ್ತವದಲ್ಲಿ, ವೈಯಕ್ತಿಕ ಕಷ್ಟಗಳನ್ನು ಎದುರಿಸಿದ ಯಥಾರ್ಥಚಿತ್ತರ ಅನೇಕಾನೇಕ ವೃತ್ತಾಂತಗಳು ಬೈಬಲಿನಲ್ಲಿವೆ. ಯೋಸೇಫನು ದೇವರ ನಿಷ್ಠಾವಂತ ಸೇವಕನಾಗಿದ್ದರೂ ಅನೇಕ ವರ್ಷಗಳ ತನಕ ಅನ್ಯಾಯವಾಗಿ ಸೆರೆವಾಸವನ್ನು ಅನುಭವಿಸಿದನು. (ಆದಿಕಾಂಡ 39:10-20; 40:15) ನಂಬಿಗಸ್ತ ಕ್ರೈಸ್ತ ತಿಮೊಥೆಯನು “ಆಗಾಗ್ಗೆ ಉಂಟಾಗುವ ಅಸ್ವಸ್ಥತೆ”ಯಿಂದ ಬಳಲಿದನು. (1 ತಿಮೊಥೆಯ 5:23) ತಪ್ಪನ್ನೇ ಮಾಡದ ಯೇಸು ಕ್ರಿಸ್ತನು ಕೂಡ ಯಾತನೆಯ ಮರಣವನ್ನು ಹೊಂದುವ ಮೊದಲು ಕಠೋರ ಹಿಂಸೆಗೆ ಗುರಿಯಾದನು. (1 ಪೇತ್ರ 2:21-24) ಹಾಗಾಗಿ, ಆಪತ್ತುಗಳು ದೇವರ ಕೋಪದ ಸೂಚನೆ ಎಂದು ತೀರ್ಮಾನಿಸುವುದು ತಪ್ಪು. ದೇವರು ಸಂಕಟಗಳಿಗೆ ಕಾರಣನಲ್ಲವಾದರೆ ಬೇರೆ ಯಾರು ಕಾರಣನು?

ನಮ್ಮ ಸಮಸ್ಯೆಗಳಿಗೆ ಕಾರಣಗಳು

ಯೋಬನ ದುರಂತಗಳಿಗೆ ಪಿಶಾಚನಾದ ಸೈತಾನನು ಕಾರಣನಾಗಿದ್ದನೆಂದು ಬೈಬಲ್‌ ತೋರಿಸುತ್ತದೆ. (ಯೋಬ 1:7-12; 2:3-8) ಇದಲ್ಲದೆ, ಇಂದಿನ ನಮ್ಮ ಸಮಸ್ಯೆಗಳಿಗೆ ಸೈತಾನನೇ ಮುಖ್ಯ ಕಾರಣನೆಂದು ಸೂಚಿಸುತ್ತ ಅದು ಹೇಳುವುದು: “ಭೂಮಿಯೇ, ಸಮುದ್ರವೇ, ನಿಮ್ಮ ದುರ್ಗತಿಯನ್ನು ಏನು ಹೇಳಲಿ; ಸೈತಾನನು ತನಗಿರುವ ಕಾಲವು ಸ್ವಲ್ಪವೆಂದು ತಿಳಿದು ಮಹಾ ರೌದ್ರವುಳ್ಳವನಾಗಿ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.” (ಪ್ರಕಟನೆ 12:12) “ಇಹಲೋಕಾಧಿಪತಿ” ಆಗಿರುವ ಸೈತಾನನು ಅನೇಕರು ದುಷ್ಕೃತ್ಯಗಳಲ್ಲಿ ತೊಡಗುವಂತೆ ಪ್ರಭಾವಿಸಿದ್ದಾನೆ. ಇದರ ಫಲವಾಗಿ ಹೇಳತೀರದ ಕ್ಲೇಶವೂ ಹೃದ್ವೇದನೆಯೂ ಉಂಟಾಗಿವೆ.—ಯೋಹಾನ 12:31; ಕೀರ್ತನೆ 37: 12, 14. *

ಆದರೂ, ನಮ್ಮ ಮೇಲೆ ಬರುವ ಪ್ರತಿಯೊಂದು ಸಂಕಟಕ್ಕೂ ಪಿಶಾಚನೇ ಕಾರಣನೆಂದು ದುಡುಕಿ ತಪ್ಪು ಹೊರಿಸಬಾರದು. ಬಾಧ್ಯತೆಯಾಗಿ ಬಂದಿರುವ ಪಾಪ ಮತ್ತು ಅಪರಿಪೂರ್ಣತೆಯಿಂದಾಗಿ ನಾವು ಅವಿವೇಕದ ನಿರ್ಣಯಗಳನ್ನು ಮಾಡುತ್ತೇವೆ. ಇದು ನಮ್ಮ ಮೇಲೆ ಸಂಕಟಗಳನ್ನು ತಂದೊಡ್ಡಬಲ್ಲದು. (ಕೀರ್ತನೆ 51:5; ರೋಮಾಪುರ 5:12) ದೃಷ್ಟಾಂತಕ್ಕಾಗಿ, ಸರಿಯಾಗಿ ತಿನ್ನದಿರುವ ಮತ್ತು ಸಾಕಷ್ಟು ವಿಶ್ರಾಂತಿಯನ್ನು ಪಡೆಯದಿರುವ ವ್ಯಕ್ತಿಯೊಬ್ಬನನ್ನು ತೆಗೆದುಕೊಳ್ಳಿ. ಇದು ಕ್ರಮೇಣ ಗುರುತರವಾದ ಆರೋಗ್ಯ ಸಮಸ್ಯೆಗಳಿಗೆ ನಡೆಸುವಲ್ಲಿ ಅವನು ಪಿಶಾಚನ ಮೇಲೆ ತಪ್ಪು ಹೊರಿಸಬೇಕೊ? ಬಾರದು, ಏಕೆಂದರೆ ಅವನು ತನ್ನ ಸ್ವಂತ ತಪ್ಪಿನ ಕಹಿ ಫಲವನ್ನು ಕೊಯ್ಯುತ್ತಿದ್ದಾನಷ್ಟೇ. (ಗಲಾತ್ಯ 6:7) ಇಂಥ ಸಂದರ್ಭದಲ್ಲಿ ವಿಷಯವು ಬೈಬಲಿನ ಜ್ಞಾನೋಕ್ತಿ ಹೇಳುವಂತೆಯೇ ಇದೆ: “ಮನುಷ್ಯನು ಮೂರ್ಖತನದಿಂದ ತನ್ನ ಗತಿಯನ್ನು ಕೆಡಿಸಿ”ಕೊಳ್ಳುತ್ತಾನೆ.—ಜ್ಞಾನೋಕ್ತಿ 19:3.

ಕೊನೆಯದಾಗಿ, “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ” ಎಂಬ ನಿಜತ್ವದ ಫಲಿತಾಂಶವಾಗಿ ಅನೇಕ ಸಂಕಷ್ಟಗಳು ಬರುತ್ತವೆ ಎಂಬುದನ್ನು ಸಹ ಮನಗಾಣಬೇಕು. (ಪ್ರಸಂಗಿ 9:11) ಒಬ್ಬ ವ್ಯಕ್ತಿಯು ಅನಿರೀಕ್ಷಿತವಾದ ಬಿರುಗಾಳಿ ಮಳೆಯಲ್ಲಿ ಸಿಕ್ಕಿಬಿದ್ದನೆಂದು ನೆನಸಿ. ಅವನು ಸ್ವಲ್ಪವೇ ಒದ್ದೆಯಾಗುತ್ತಾನೋ ಪೂರ್ತಿ ಒದ್ದೆಯಾಗುತ್ತಾನೋ ಎಂಬುದು ಮಳೆ ಆರಂಭಿಸುವ ಸಮಯದಲ್ಲಿ ಅವನು ಎಲ್ಲಿ ನಿಂತಿರುತ್ತಾನೆ ಎಂಬುದರ ಮೇಲೆ ಹೊಂದಿಕೊಂಡಿದೆ. ಅದೇ ರೀತಿ, ‘ಕಡೇ ದಿವಸಗಳಾದ ಈ ಕಠಿನಕಾಲಗಳಲ್ಲಿ’ ನಕಾರಾತ್ಮಕ ಪರಿಸ್ಥಿತಿಗಳು ಅನಿರೀಕ್ಷಿತ ಬಿರುಮಳೆಯಂತೆ ಥಟ್ಟನೆ ಎದುರಾಗಬಲ್ಲವು. (2 ತಿಮೊಥೆಯ 3:1-5) ನಾವು ವೈಯಕ್ತಿಕವಾಗಿ ಎಷ್ಟರ ಮಟ್ಟಿಗೆ ಬಾಧಿಸಲ್ಪಡುತ್ತೇವೆ ಎಂಬುದು ನಾವಿರುವ ಸಮಯ ಮತ್ತು ಪರಿಸ್ಥಿತಿಗಳ ಮೇಲೆ ಹೊಂದಿಕೊಂಡಿದೆ. ಅವುಗಳ ಮೇಲೆ ಯಾವ ನಿಯಂತ್ರಣವೂ ನಮಗಿಲ್ಲ. ಹಾಗಾದರೆ ನಮಗೆ ಕಷ್ಟಸಂಕಟಗಳು ತಪ್ಪಿದ್ದಲ್ಲ ಎಂದಿದರ ಅರ್ಥವೋ?

ಕಷ್ಟಸಂಕಟಗಳ ಶೀಘ್ರಾಂತ್ಯ!

ಯೆಹೋವ ದೇವರು ಸಕಲ ಆಪತ್ತುಗಳಿಗೆ ಶೀಘ್ರವೇ ಅಂತ್ಯವನ್ನು ತರುವನು ಎಂಬುದು ಸಂತೋಷಕರ. (ಯೆಶಾಯ 25:8; ಪ್ರಕಟನೆ 1:3; 21:3, 4) ಏತನ್ಮದ್ಯೆ, ಯೆಹೋವ ದೇವರು ತನ್ನ ‘ಉಪದೇಶ’ ಮತ್ತು ವಾಕ್ಯದ ‘ಆದರಣೆಯ’ ಮೂಲಕ ನಮ್ಮನ್ನು ನಿಜವಾಗಿ ಪರಿಪಾಲಿಸುತ್ತಿದ್ದಾನೆಂದು ತೋರಿಸುತ್ತಿದ್ದಾನೆ. ಹೀಗೆ ಹೊಸ್ತಿಲಲ್ಲೇ ಇರುವ ಆ ಅದ್ಭುತಕರ ಭವಿಷ್ಯತ್ತನ್ನು ಮುನ್ನೋಡುವಾಗ ನಾವು ಸಂಕಷ್ಟಗಳನ್ನು ಉತ್ತಮವಾಗಿ ನಿಭಾಯಿಸಬಲ್ಲೆವು. (ರೋಮಾಪುರ 15:4; 1 ಪೇತ್ರ 5:7) ಆ ಸಮಯದಲ್ಲಿ, ದೇವರ ದೃಷ್ಟಿಯಲ್ಲಿ ಪ್ರಾಮಾಣಿಕರಾದ ಜನರು ಕಷ್ಟಸಂಕಟಗಳೇ ಇಲ್ಲದಿರುವ ನೂತನ ಲೋಕದಲ್ಲಿ ಅನಂತ ಜೀವನವನ್ನು ಅನುಭವಿಸುವರು.—ಕೀರ್ತನೆ 37:29, 37. (g 1/09)

[ಪಾದಟಿಪ್ಪಣಿ]

^ ಫೆಬ್ರವರಿ 2007ರ ಅವೇಕ್‌! ಸಂಚಿಕೆಯಲ್ಲಿನ “ಬೈಬಲಿನ ದೃಷ್ಟಿಕೋನ: ಸೈತಾನನು ಯಾರು? ಅವನು ನೈಜ ವ್ಯಕ್ತಿಯೋ?” ಎಂಬ ಲೇಖನ ನೋಡಿ.

ನೀವೇನು ಹೇಳುತ್ತೀರಿ?

◼ ಪಾಪಿಗಳು ಮಾತ್ರವೇ ಕಷ್ಟಸಂಕಟವನ್ನು ಅನುಭವಿಸುತ್ತಾರೋ?—ಯೋಬ 1:8.

◼ ನಮ್ಮ ಸಮಸ್ಯೆಗಳಿಗೆಲ್ಲ ಪಿಶಾಚನೇ ಕಾರಣನೋ?—ಗಲಾತ್ಯ 6:7.

◼ ಕಷ್ಟಸಂಕಟಗಳು ಯಾವಾಗಲೂ ಇರುವವೋ?—ಪ್ರಕಟನೆ 21:3, 4.

[ಪುಟ 18ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.”—ಪ್ರಸಂಗಿ 9:11.