ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಆಧ್ಯಾತ್ಮಿಕ ಅಗತ್ಯವನ್ನು ಖಂಡಿತ ಪೂರೈಸಬಲ್ಲಿರಿ

ನಿಮ್ಮ ಆಧ್ಯಾತ್ಮಿಕ ಅಗತ್ಯವನ್ನು ಖಂಡಿತ ಪೂರೈಸಬಲ್ಲಿರಿ

ಬೈಬಲಿನ ದೃಷ್ಟಿಕೋನ

ನಿಮ್ಮ ಆಧ್ಯಾತ್ಮಿಕ ಅಗತ್ಯವನ್ನು ಖಂಡಿತ ಪೂರೈಸಬಲ್ಲಿರಿ

ಮನುಷ್ಯನಿಗೆ ಹೇಗೆ ಆಹಾರದ ಅಗತ್ಯವಿದೆಯೋ ಹಾಗೆಯೇ ದೇವರ ಮತ್ತು ಆತನ ಉದ್ದೇಶದ ಕುರಿತು ತಿಳಿಯುವ ಆಧ್ಯಾತ್ಮಿಕ ಅಗತ್ಯವೂ ಅವನಲ್ಲಿದೆ. ಜೀವಪೋಷಕ ಆಹಾರದಲ್ಲಿ ನೂರಾರು ಬಗೆಗಳಿವೆ. ಆದ್ದರಿಂದ ಆಯ್ಕೆಗಳು ಅನೇಕ. ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಲೂ ಅಷ್ಟೊಂದು ಆಯ್ಕೆಗಳಿವೆಯೋ? ನಮ್ಮ ಸುತ್ತಮುತ್ತಲಿರುವ ಎಣೆಯಿಲ್ಲದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚಾರವಿಚಾರಗಳು ಆ ಅಗತ್ಯವನ್ನು ಪೂರೈಸಬಲ್ಲವೆಂದು ಅನೇಕರು ಹೇಳುತ್ತಾರೆ.

‘ನೀವೇನು ನಂಬುತ್ತೀರೊ, ಯಾವ ರೀತಿಯ ಆರಾಧನೆ ಮಾಡುತ್ತೀರೊ ಅದು ಮುಖ್ಯವಲ್ಲ, ಒಟ್ಟಿನಲ್ಲಿ ಒಂದು ಧಾರ್ಮಿಕ ಕಾರ್ಯಮಾಡಿದರೆ ಸಾಕು’ ಎಂಬುದು ಅನೇಕರ ಅಂಬೋಣ. ನಿಮ್ಮ ಅನಿಸಿಕೆಯೇನು? ನಿಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸುವ ವಿಧ ಪ್ರಾಮುಖ್ಯವೋ? ಇದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ?

ನಿಜವಾದ ಆಧ್ಯಾತ್ಮಿಕತೆಯಲ್ಲಿ ಏನು ಸೇರಿದೆ?

ಆಧ್ಯಾತ್ಮಿಕತೆಯುಳ್ಳವರಾಗಿರುವ ಸಾಮರ್ಥ್ಯ ಮನುಷ್ಯರಲ್ಲಿ ಹೇಗೆ ಬಂತು ಎಂಬುದನ್ನು ಬೈಬಲಿನ ಆದಿಕಾಂಡ 1:27 ತಿಳಿಯಪಡಿಸುತ್ತದೆ. ಅದು ಹೇಳುವುದು: “ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಉಂಟುಮಾಡಿದನು; ದೇವಸ್ವರೂಪದಲ್ಲಿ ಅವನನ್ನು ಉಂಟುಮಾಡಿದನು; ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿದನು.” ಯೆಹೋವ ದೇವರು ನಮ್ಮ ಕಣ್ಣಿಗೆ ಕಾಣದಂಥ ದೇಹವುಳ್ಳವನು. ಆದ್ದರಿಂದ ಮನುಷ್ಯನು ದೇವಸ್ವರೂಪದಲ್ಲಿ ಉಂಟುಮಾಡಲ್ಪಟ್ಟದ್ದರ ಅರ್ಥ ಅವನು ದೇವರಂತೆ ಕಾಣುತ್ತಾನೆಂದಲ್ಲ ಬದಲಾಗಿ ದೇವರಲ್ಲಿರುವ ಗುಣಗಳು ಅವನಲ್ಲಿವೆ ಎಂದೇ. ಮೊದಲ ಮನುಷ್ಯನಾದ ಆದಾಮನಲ್ಲಿ ತನ್ನ ಸೃಷ್ಟಿಕರ್ತನಂತೆ ನಿಸ್ವಾರ್ಥ ಪ್ರೀತಿ, ದಯೆ, ಕನಿಕರ, ನ್ಯಾಯ, ಸ್ವನಿಯಂತ್ರಣ ಇತ್ಯಾದಿ ಸುಗುಣಗಳನ್ನು ಮಾನ್ಯಮಾಡಿ ಅವುಗಳನ್ನು ತೋರಿಸುವ ಸಾಮರ್ಥ್ಯವಿತ್ತು. ಅಷ್ಟುಮಾತ್ರವಲ್ಲ ದೇವರ ನಿಯಮಗಳಿಗೆ ಹೊಂದಿಕೆಯಲ್ಲಿ ತನ್ನ ಇಚ್ಛಾಸ್ವಾತಂತ್ರ್ಯವನ್ನು ಉಪಯೋಗಿಸಲು ಮಾರ್ಗದರ್ಶಿಯಾಗಿ ದೇವರು ಅವನಿಗೆ ಮನಸ್ಸಾಕ್ಷಿ ಎಂಬ ನೈತಿಕ ಪ್ರಜ್ಞೆಯನ್ನೂ ಕೊಟ್ಟನು. ಈ ಕಾರಣಗಳಿಂದ ಮನುಷ್ಯನು ಪ್ರಾಣಿಗಳಿಗಿಂತ ಶ್ರೇಷ್ಠನೂ ತನ್ನ ಸೃಷ್ಟಿಕರ್ತನ ಚಿತ್ತವನ್ನು ಮಾಡಲು ಅಪೂರ್ವ ರೀತಿಯಲ್ಲಿ ಸನ್ನದ್ಧನೂ ಆಗಿದ್ದನು.—ಆದಿಕಾಂಡ 1:28; ರೋಮನ್ನರಿಗೆ 2:14.

ನಮ್ಮ ಆಧ್ಯಾತ್ಮಿಕತೆಗೆ ಬೇಕಾಗಿರುವ ಒಂದು ಮುಖ್ಯ ಅಂಶವನ್ನು ಬೈಬಲ್‌ 1 ಕೊರಿಂಥ 2:12-15ರಲ್ಲಿ ಗುರುತಿಸುತ್ತದೆ. ದೇವರಿಂದ ಪವಿತ್ರಾತ್ಮವನ್ನು ಪಡೆದವನು ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಎಂದು ಅಲ್ಲಿ ತಿಳಿಸಲಾಗಿದೆ. ದೇವರ ಕಾರ್ಯಕಾರಿ ಶಕ್ತಿಯಾಗಿರುವ ಈ ಪವಿತ್ರಾತ್ಮವು ಆಧ್ಯಾತ್ಮಿಕ ವಿಷಯಗಳನ್ನು ತಿಳಿದುಕೊಳ್ಳಲು ನಮಗೆ ಅತ್ಯಗತ್ಯ. ಒಂದು ವಿಷಯವನ್ನು ಪರೀಕ್ಷಿಸಿ ದೇವರ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಲು ಪವಿತ್ರಾತ್ಮವು ಸಹಾಯಮಾಡುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಪವಿತ್ರಾತ್ಮವಿಲ್ಲದ ವ್ಯಕ್ತಿಯನ್ನು ಭೌತಿಕ ಮನುಷ್ಯನೆಂದು ಕರೆಯಲಾಗಿದೆ. ಅಂಥ ಮನುಷ್ಯನು ಆಧ್ಯಾತ್ಮಿಕ ವಿಷಯಗಳನ್ನು ಹುಚ್ಚುಮಾತಾಗಿ ಎಣಿಸುತ್ತಾನೆ. ಫಲಿತಾಂಶವಾಗಿ ಅವನು ಬರೀ ಮಾನವ ವಿವೇಕಕ್ಕೆ ತಕ್ಕಂತೆ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾನೆ.

ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರುವ ಕಾರಣ ಆಧ್ಯಾತ್ಮಿಕತೆಯುಳ್ಳವರಾಗಿರುವ ಸಾಮರ್ಥ್ಯ ನಮ್ಮಲ್ಲಿದ್ದರೂ ಅದನ್ನು ಆತ್ಮಪ್ರಜ್ಞೆಯಿಂದಲೋ ಮಾನವ ವಿವೇಕದಿಂದಲೋ ವೈಯಕ್ತಿಕ ಸಾಧನೆಯಿಂದಲೋ ಹೊಂದಸಾಧ್ಯವಿಲ್ಲ. ಅದಕ್ಕೆ ದೇವರ ಪವಿತ್ರಾತ್ಮದ ಸಹಾಯ ಬೇಕೇ ಬೇಕು. ಆ ಸಹಾಯ ಬೇಡವೆನ್ನುವವರು ತಮ್ಮ ಸ್ವಂತ ಇಚ್ಛೆಗಳನ್ನು ಪೂರೈಸುತ್ತಾರೆ ಮತ್ತು ಭಕ್ತಿಹೀನ ಕೆಲಸಗಳನ್ನು ಮಾಡುತ್ತಾರೆ. ಇಂಥವರನ್ನು ಆಧ್ಯಾತ್ಮಿಕತೆ ಇಲ್ಲದವರೆಂದು ವರ್ಣಿಸಲಾಗಿದೆ. ಅವರು ತಮ್ಮ ಶಾರೀರಿಕ ಅಭಿಲಾಷೆಗಳನ್ನೂ ಪ್ರವೃತ್ತಿಗಳನ್ನೂ ಪೂರೈಸುವುದರಲ್ಲೇ ಮುಳುಗಿರುತ್ತಾರೆ.—1 ಕೊರಿಂಥ 2:14; ಯೂದ 18, 19.

ಆಧ್ಯಾತ್ಮಿಕ ಅಗತ್ಯ ಪೂರೈಸುವುದು ಹೇಗೆ?

ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಿಕೊಳ್ಳಲು ಪ್ರಥಮವಾಗಿ ಇದನ್ನು ಒಪ್ಪಿಕೊಳ್ಳಬೇಕು: ಯೆಹೋವ ದೇವರು ಸೃಷ್ಟಿಕರ್ತ ಮತ್ತು ಆತನಿಂದಲೇ ನಾವು ಅಸ್ತಿತ್ವದಲ್ಲಿದ್ದೇವೆ. (ಪ್ರಕಟನೆ 4:11) ಹೀಗಿರುವುದರಿಂದ ಆತನ ಚಿತ್ತಮಾಡಿದರೆ ಮಾತ್ರ ನಮ್ಮ ಜೀವನಕ್ಕೊಂದು ಅರ್ಥವಿರುವುದು. (ಕೀರ್ತನೆ 115:1) ಆತನ ಚಿತ್ತವನ್ನು ಮಾಡುವುದು ನಮ್ಮ ಶಾರೀರಿಕ ಅಗತ್ಯವನ್ನು ಪೂರೈಸುವ ಆಹಾರದಷ್ಟೇ ಅತ್ಯಾವಶ್ಯಕವಾಗಿದೆ. ಆದುದರಿಂದಲೇ, ಆಧ್ಯಾತ್ಮಿಕ ವ್ಯಕ್ತಿಯೆಂದು ಪ್ರಸಿದ್ಧನಾಗಿದ್ದ ಯೇಸು ಹೀಗಂದನು: ‘ನನ್ನನ್ನು ಕಳುಹಿಸಿದಾತನ ಚಿತ್ತವನ್ನು ಮಾಡುವುದೇ ನನ್ನ ಆಹಾರವಾಗಿದೆ.’ (ಯೋಹಾನ 4:34) ದೇವರ ಚಿತ್ತಮಾಡುವುದು ಯೇಸುವಿಗೆ ಬಲ, ಚೈತನ್ಯ, ಸಂತೃಪ್ತಿ ಕೊಟ್ಟಿತು.

ದೇವಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿರುವುದರಿಂದ ನಮಗೆ ನಿಜವಾದ ಆಧ್ಯಾತ್ಮಿಕ ತೃಪ್ತಿಯು, ದೇವರ ವ್ಯಕ್ತಿತ್ವಕ್ಕೆ ಹೋಲುವಂಥ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದರಿಂದ ಸಿಗುವುದು. (ಕೊಲೊಸ್ಸೆ 3:10) ಈ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಾಗ ನಾವು ನಮ್ಮನ್ನೇ ಇತರರ ದೃಷ್ಟಿಯಲ್ಲಿ ಕೀಳಾಗಿಸುವಂಥ ಇಲ್ಲವೆ ಇತರರೊಂದಿಗಿನ ಸಂಬಂಧಕ್ಕೆ ಚ್ಯುತಿತರುವಂಥ ವಿಧದಲ್ಲಿ ವರ್ತಿಸುವುದಿಲ್ಲ. (ಎಫೆಸ 4:24-32) ಯೆಹೋವನ ಮಟ್ಟಗಳಿಗನುಸಾರ ನಡೆಯುವುದರಿಂದ ನಮ್ಮ ನಡವಳಿಕೆ ಉತ್ತಮಗೊಳ್ಳುತ್ತದೆ. ಹೀಗೆ ನಮಗೆ ಅಪರಾಧಿ ಪ್ರಜ್ಞೆ ಕಾಡದಿರುವುದರಿಂದ ನಿಜವಾದ ಮನಶ್ಶಾಂತಿಯೂ ಇರುತ್ತದೆ.—ರೋಮನ್ನರಿಗೆ 2:15.

ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸುವುದರ ಬಗ್ಗೆ ಇನ್ನೊಂದು ಮುಖ್ಯ ಅಂಶವನ್ನು ಪ್ರಕಟಿಸುತ್ತಾ ಯೇಸು ಅಂದದ್ದು: “ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು.” (ಮತ್ತಾಯ 4:4) ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸುವುದಕ್ಕೆ ನಿರಂತರ ಗಮನ ಕೊಡಬೇಕು. ಸಾಮಾನ್ಯವಾಗಿ ಎಲ್ಲ ಜನರಿಗೂ ಇರುವಂಥ ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಯೆಹೋವನು ಬೈಬಲಿನ ಮೂಲಕ ಉತ್ತರಗಳನ್ನು ಒದಗಿಸುತ್ತಾನೆ.—2 ತಿಮೊಥೆಯ 3:16, 17.

ನಿಜ ಸಂತೋಷದ ಮೂಲ

ಒಬ್ಬನು ಪೌಷ್ಟಿಕಾಂಶವಿಲ್ಲದ ಆದರೆ ರುಚಿಕರವಾಗಿರುವ ಹಾಳುಮೂಳು ತಿಂದೂ ಹಸಿವನ್ನು ತಣಿಸಿಕೊಳ್ಳಬಹುದು. ಹಾಗೆಯೇ ಧಾರ್ಮಿಕ ಚಟುವಟಿಕೆಗಳು ಅಥವಾ ತತ್ತ್ವಜ್ಞಾನಗಳಿಂದ ಆಧ್ಯಾತ್ಮಿಕ ಅಗತ್ಯವನ್ನು ನೀಗಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿರಬಹುದು. ಆದರೆ ಹಾಳುಮೂಳು ತಿನ್ನುವುದು ಹೇಗೆ ನ್ಯೂನ ಪೋಷಣೆ, ಕಾಯಿಲೆ ಅಥವಾ ಸಾವಿಗೂ ನಡೆಸಬಹುದೋ ಹಾಗೆಯೇ ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಸರಿಯಾದ ವಿಧದಲ್ಲಿ ಪೂರೈಸದಿರುವುದು ಕಟ್ಟಕಡೆಗೆ ನಮಗೇ ಹಾನಿಕರ.

ಆದ್ದರಿಂದ ಯೆಹೋವ ದೇವರೊಂದಿಗೆ ಉತ್ತಮ ಸಂಬಂಧ ಬೆಳೆಸಿಕೊಂಡರೆ, ಆತನ ಚಿತ್ತವನ್ನು ಮಾಡಿದರೆ, ಆತನ ಮಾರ್ಗದರ್ಶನ ಪಾಲಿಸಿದರೆ ನಾವು ಈ ಮಾತುಗಳು ಸತ್ಯವೆಂದು ಗ್ರಹಿಸುವೆವು: “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು.”—ಮತ್ತಾಯ 5:3. (g09-E 12)

ನೀವೇನು ಹೇಳುತ್ತೀರಿ?

◼ ಆಧ್ಯಾತ್ಮಿಕತೆಯುಳ್ಳವರಾಗಿರುವ ಸಾಮರ್ಥ್ಯ ನಮ್ಮಲ್ಲಿ ಹೇಗೆ ಬಂತು?—ಆದಿಕಾಂಡ 1:27.

◼ ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಸ್ವತಃ ನಾವೇ ಪೂರೈಸಿಕೊಳ್ಳಬಲ್ಲೆವೋ?—1 ಕೊರಿಂಥ 2:12-15.

◼ ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಪೂರೈಸಿಕೊಳ್ಳಲು ನಾವೇನು ಮಾಡಬೇಕು?—ಮತ್ತಾಯ 4:4; ಯೋಹಾನ 4:34; ಕೊಲೊಸ್ಸೆ 3:10.

[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಮ್ಮ ಆಧ್ಯಾತ್ಮಿಕ ಅಗತ್ಯವನ್ನು ಸರಿಯಾದ ವಿಧದಲ್ಲಿ ಪೂರೈಸದಿರುವುದು ಕಟ್ಟಕಡೆಗೆ ನಮಗೇ ಹಾನಿಕರ