ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರ ಗುರಿ ಏನು?

ಹೆತ್ತವರ ಗುರಿ ಏನು?

ಬೈಬಲಿನ ದೃಷ್ಟಿಕೋನ

ಹೆತ್ತವರ ಗುರಿ ಏನು?

ನಿಮ್ಮ ತರುಣ ಮಗ ಅಥವಾ ಮಗಳು ಏನಾಗಬೇಕೆಂದು ಇಚ್ಛಿಸುತ್ತೀರಿ?

ಎ. ನಿಮ್ಮದೇ ಪಡಿಯಚ್ಚು.

ಬಿ. ನಿಮಗೆ ತದ್ವಿರುದ್ಧ ವ್ಯಕ್ತಿ ಆಗಬೇಕೆಂದಿರುವ ದಂಗೆಕೋರ.

ಸಿ. ವಿವೇಕಯುತ ನಿರ್ಣಯಗಳನ್ನು ಮಾಡುವ ಜವಾಬ್ದಾರಿಯುತ ವಯಸ್ಕ.

‘ಸಿ’ ಅನ್ನು ಆಯ್ಕೆಮಾಡುವ ಕೆಲವು ಹೆತ್ತವರು ವಾಸ್ತವದಲ್ಲಿ ‘ಎ’ ಅನ್ನು ಇಷ್ಟಪಡುತ್ತಾರೆಂಬಂತೆ ವರ್ತಿಸುತ್ತಾರೆ. ಇಂಥವರು ತಮ್ಮ ಮಗನ ಮೇಲೆ ತಮ್ಮ ಮೌಲ್ಯಗಳನ್ನು ಒತ್ತಾಯದಿಂದ ಹೇರುತ್ತಾರೆ. ಉದಾಹರಣೆಗೆ ಅವನು ಯಾವ ರೀತಿಯ ಜೀವನವೃತ್ತಿ ಆಯ್ಕೆಮಾಡಬೇಕೆಂದು ಅವರೇ ಹೇಳುತ್ತಾರೆ. ಪರಿಣಾಮ? ಅವನಿಗೆ ಒಂದಿಷ್ಟು ಸ್ವಾತಂತ್ರ್ಯ ಸಿಕ್ಕಿದ ಕೂಡಲೇ, ವಿರುದ್ಧ ದಿಕ್ಕಿನಲ್ಲಿ ಓಡಲಾರಂಭಿಸುತ್ತಾನೆ. ಹೀಗೆ ಹೆಚ್ಚಿನ ಹೆತ್ತವರು ಮಗನನ್ನು ‘ಎ’ಗನುಸಾರ ಬೆಳೆಸಲು ಪ್ರಯತ್ನಿಸಿದರೂ ಮಗನು ತರುಣನಾದಾಗ ‘ಬಿ’ ಅಂಶದಲ್ಲಿ ತಿಳಿಸಲಾದಂತೆ ಆಗಿಬಿಡುತ್ತಾನೆ.

ಅತಿಯಾದ ಹದ್ದುಬಸ್ತು ಏಕೆ ತರವಲ್ಲ?

ನಿಮ್ಮ ಮಗ ವಿವೇಕಯುತ ನಿರ್ಣಯಗಳನ್ನು ಮಾಡುವ ಜವಾಬ್ದಾರಿಯುತ ವಯಸ್ಕನಾಗಬೇಕೆಂಬುದು ನಿಮ್ಮ ಇಚ್ಛೆ. ಆ ಗುರಿಯನ್ನು ಹೇಗೆ ತಲಪುವಿರಿ? ಒಂದು ಮಾತಂತೂ ಖಂಡಿತ: ಮಕ್ಕಳನ್ನು ಅತಿಯಾದ ಹದ್ದುಬಸ್ತಿನಲ್ಲಿಡುವುದು ಒಳ್ಳೇದಲ್ಲ. ಯಾಕೆ ಎಂಬದಕ್ಕೆ ಎರಡು ಕಾರಣಗಳನ್ನು ನೋಡಿ.

1. ಅತಿಯಾದ ಹದ್ದುಬಸ್ತು ಬೈಬಲಾಧಾರಿತವಲ್ಲ. ಯೆಹೋವ ದೇವರು ಮಾನವರನ್ನು ಸೃಷ್ಟಿಸಿದಾಗ ಇಚ್ಛಾಸ್ವಾತಂತ್ರ್ಯ ಕೊಟ್ಟನು. ಹಾಗಾಗಿ ಜೀವನದಲ್ಲಿ ಒಳ್ಳೇ ಇಲ್ಲವೇ ಕೆಟ್ಟ ಹಾದಿಯನ್ನು ಹಿಡಿಯುವ ಆಯ್ಕೆಯನ್ನು ಆತನು ಅವರಿಗೆ ಬಿಟ್ಟಿದ್ದಾನೆ. ಉದಾಹರಣೆಗೆ ಕಾಯಿನನ ಮನಸ್ಸಿನಲ್ಲಿ ತಮ್ಮನಾದ ಹೇಬೆಲನ ಬಗ್ಗೆ ಇದ್ದ ಕ್ರೋಧವನ್ನು ನೋಡಿ ಯೆಹೋವನು ಅವನಿಗೆ, “ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು” ಎಂದು ಹೇಳಿದನು.—ಆದಿಕಾಂಡ 4:7.

ಗಮನಿಸಿ, ಯೆಹೋವನು ಕಾಯಿನನಿಗೆ ಸ್ಪಷ್ಟ ಸಲಹೆಯನ್ನು ಕೊಟ್ಟರೂ ಅವನದನ್ನು ಪಾಲಿಸುವಂತೆ ಒತ್ತಾಯಿಸಲಿಲ್ಲ. ತನ್ನ ಕ್ರೋಧವನ್ನು ತನ್ನ ವಶಮಾಡಿಕೊಳ್ಳಬೇಕೊ ಇಲ್ಲವೊ ಎಂಬದನ್ನು ಕಾಯಿನನೇ ಆಯ್ಕೆಮಾಡಬೇಕಿತ್ತು. ಇದರಲ್ಲಿರುವ ಪಾಠ? ತನ್ನ ಸೃಷ್ಟಿಜೀವಿಗಳು ತನಗೆ ವಿಧೇಯರಾಗಲು ಯೆಹೋವನು ಅವರನ್ನು ಸಂಪೂರ್ಣ ನಿಯಂತ್ರಿಸುವುದಿಲ್ಲ. ಅಂದಮೇಲೆ ನೀವೂ ನಿಮ್ಮ ಯುವ ಮಕ್ಕಳನ್ನು ಅತಿಯಾಗಿ ನಿಯಂತ್ರಿಸಬಾರದು. *

2. ಅತಿಯಾದ ಹದ್ದುಬಸ್ತು ನಿಮಗೇ ತಿರುಗುಬಾಣ. ಊಹಿಸಿ: ಒಬ್ಬ ಸೇಲ್ಸ್‌ಮ್ಯಾನ್‌ ನೀವು ಅವನ ವಸ್ತುಗಳನ್ನು ಖರೀದಿಸಲು ತುಂಬ ಒತ್ತಾಯಿಸುತ್ತಿದ್ದಾನೆ. ಅವನು ಎಷ್ಟು ಹೆಚ್ಚು ಒತ್ತಾಯಿಸುತ್ತಾನೊ ಅಷ್ಟೇ ಹೆಚ್ಚು ದೃಢವಾಗಿ ನೀವದನ್ನು ತಳ್ಳಿಹಾಕುತ್ತೀರಿ. ನಿಮಗೆ ಆ ವಸ್ತು ಅಗತ್ಯವಿದ್ದರೂ ಅವನು ಒತ್ತಾಯಿಸುವುದು ನಿಮಗೆ ಇಷ್ಟವಾಗದ ಕಾರಣ ಅವನನ್ನು ಹೇಗೊ ಸಾಗಹಾಕುತ್ತೀರಿ.

ನೀವು ನಿಮ್ಮ ತರುಣ ಮಗನ ಮೇಲೆ ನಿಮ್ಮ ಮೌಲ್ಯಗಳು, ನಂಬಿಕೆಗಳು, ಗುರಿಗಳನ್ನೆಲ್ಲ ಬಲವಂತದಿಂದ ಹೇರಲು ಪ್ರಯತ್ನಿಸಿದರೆ ಸಹ ಹಾಗೆಯೇ ಆಗುವುದು. ಅದೆಲ್ಲವನ್ನು ಅವನು ತನ್ನದಾಗಿ ಮಾಡಲು ಒಪ್ಪಲಿಕ್ಕಿಲ್ಲ. ಬದಲಾಗಿ ನಿಮ್ಮ ಮಟ್ಟಗಳ ಬಗ್ಗೆ ಹೇವರಿಕೆ ಬೆಳೆಸಿಕೊಳ್ಳುವನು. ಹೆತ್ತವರು ಮಕ್ಕಳನ್ನು ಅತಿಯಾದ ಹದ್ದುಬಸ್ತಿನಲ್ಲಿಡುವ ಪ್ರಯತ್ನಗಳು ಹೆಚ್ಚಾಗಿ ವಿಫಲವಾಗುತ್ತವೆ. ಆದ್ದರಿಂದ ನೀವೇನು ಮಾಡಬಹುದು?

ನಿಮ್ಮ ಮಗನ ಬದುಕನ್ನು ಪೂರ್ತಿ ನಿಯಂತ್ರಿಸಲು ಅಂದರೆ ಅವನು ಚಿಕ್ಕವನಿದ್ದಾಗ ನೀವು ಮಾಡುತ್ತಿದ್ದಂತೆ ಈಗಲೂ ನಿಮ್ಮ ಮೌಲ್ಯಗಳನ್ನು ಅವನ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸಬೇಡಿ. ಬದಲಾಗಿ, ಸರಿಯಾದದ್ದನ್ನು ಮಾಡುವುದು ಏಕೆ ವಿವೇಕಯುತ ಎಂಬದನ್ನು ಗ್ರಹಿಸಲು ಸಹಾಯಮಾಡಿ. ಉದಾಹರಣೆಗೆ ನೀವು ಯೆಹೋವನ ಆರಾಧಕರಾಗಿದ್ದಲ್ಲಿ, ದೇವರ ಮಟ್ಟಗಳಿಗನುಸಾರ ಜೀವಿಸುವುದರಿಂದ ಅವನಿಗೆ ಜೀವನದುದ್ದಕ್ಕೂ ಹೇಗೆ ಹೆಚ್ಚಿನ ಸಂತೃಪ್ತಿ ಸಿಗಲಿದೆಯೆಂದು ತೋರಿಸಿ.—ಯೆಶಾಯ 48:17, 18.

ಇದರ ಜೊತೆಗೆ ನಿಮ್ಮ ಮಾದರಿ ಅವನಿಗೆ ಮಾರ್ಗದರ್ಶಿಯಾಗಿರಲಿ. ನಿಮ್ಮ ಯುವ ಮಗನು ಎಂಥ ವ್ಯಕ್ತಿಯಾಗಬೇಕೆಂದು ಬಯಸುತ್ತೀರೊ ಸ್ವತಃ ನೀವೇ ಅಂಥ ವ್ಯಕ್ತಿ ಆಗಿರಿ. (1 ಕೊರಿಂಥ 11:1) ನಿಮ್ಮ ಜೀವನದಲ್ಲಿ ಪಾಲಿಸಲು ನೀವು ಆಯ್ಕೆಮಾಡಿರುವ ಮೌಲ್ಯಗಳು ಯಾವವೆಂದು ಸ್ಪಷ್ಟವಾಗಿ ತೋರಿಸಿಕೊಡಿ. (ಜ್ಞಾನೋಕ್ತಿ 4:11) ನಿಮ್ಮ ಯುವ ಮಗನು ದೇವರ ಮೇಲೆ ಹಾಗೂ ಆತನ ಮಟ್ಟಗಳಿಗಾಗಿ ಪ್ರೀತಿಯನ್ನು ಬೆಳೆಸಿಕೊಂಡರೆ ವಿವೇಕಯುತ ನಿರ್ಣಯಗಳನ್ನು ಮಾಡುವನು. ನೀವು ಎದುರಲ್ಲಿ ಇಲ್ಲದಿದ್ದರೂ ಅದನ್ನು ಮಾಡುವನು.—ಕೀರ್ತನೆ 119:97; ಫಿಲಿಪ್ಪಿ 2:12.

ಪ್ರಾಯೋಗಿಕ ಕೌಶಲಗಳನ್ನು ಕಲಿಸಿರಿ

ಈ ಪತ್ರಿಕೆಯ 2ನೇ ಪುಟದಲ್ಲಿ ತಿಳಿಸಲಾದಂತೆ, ನಿಮ್ಮ ಬೆಳೆದ ಮಗನು ಮದುವೆಯಾಗಿಯೊ ಉದ್ಯೋಗಕ್ಕೆಂದೊ “ತಂದೆತಾಯಿಗಳನ್ನು ಬಿಟ್ಟು” ಪ್ರತ್ಯೇಕವಾಗುವ ದಿನ ಬಂದೇ ಬರುವುದು. ನಿಮಗಂತೂ ಆ ದಿನ ತುಂಬ ಬೇಗನೇ ಬಂದಂತೆ ಅನಿಸಬಹುದು. (ಆದಿಕಾಂಡ 2:24) ಆದ್ದರಿಂದ ನಿಮ್ಮ ಮಗ, ತನ್ನ ಕಾಲ ಮೇಲೆ ನಿಲ್ಲುವ ವಯಸ್ಕನಾಗಿ ಜೀವಿಸಲಿಕ್ಕಾಗಿ ಬೇಕಾದ ಕೌಶಲಗಳನ್ನು ಕಲಿಯುವಂತೆ ಹೆತ್ತವರಾದ ನೀವು ನೋಡಿಕೊಳ್ಳಬೇಕು. ಅವನು ಈಗಲೇ ಅಂದರೆ ನಿಮ್ಮೊಟ್ಟಿಗೆ ಇರುವಾಗಲೇ ಕಲಿತುಕೊಳ್ಳಲು ಸಹಾಯ ಮಾಡಬಹುದಾದ ಕೆಲವೊಂದು ಕೌಶಲಗಳು ಇಲ್ಲಿವೆ.

ಗೃಹಕೃತ್ಯ ಕೌಶಲಗಳು. ನಿಮ್ಮ ಮಗನಿಗೆ ಅಡುಗೆ ಮಾಡಲು ಬರುತ್ತದಾ? ತನ್ನ ಬಟ್ಟೆ ಒಗೆದು, ಇಸ್ತ್ರಿ ಮಾಡಬಲ್ಲನಾ? ತನ್ನ ರೂಮನ್ನು ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇಡಲು ಗೊತ್ತಿದೆಯಾ? ವಾಹನದ ಮೆಂಟೆನೆನ್ಸ್‌ ಮತ್ತು ಚಿಕ್ಕಪುಟ್ಟ ರಿಪೇರಿಗಳನ್ನು ಮಾಡುವುದು ಹೇಗೆಂದು ಗೊತ್ತಾ? ಇಂಥ ಕೌಶಲಗಳನ್ನು ಕಲಿಯುವುದರಿಂದ ಮುಂದೊಂದು ದಿನ ನಿಮ್ಮ ಮಗ ಇಲ್ಲವೆ ಮಗಳು ತಮ್ಮ ಸ್ವಂತ ಮನೆಯನ್ನು ಒಳ್ಳೇದಾಗಿ ನಿರ್ವಹಿಸಲು ಶಕ್ತರಾಗಿರುವರು. ಅಪೊಸ್ತಲ ಪೌಲನು ಹೇಳಿದ್ದು: “ಈ ಕೈಗಳೇ ಕೆಲಸಮಾಡಿ ನನ್ನ ಕೊರತೆಗಳನ್ನೂ . . . ನೀಗಿದ್ದನ್ನು ನೀವೇ ಬಲ್ಲಿರಿ.”—ಅಪೊಸ್ತಲರ ಕಾರ್ಯಗಳು 20:34, ಸತ್ಯವೇದ.

ಶಿಷ್ಟಾಚಾರಗಳು. (ಯಾಕೋಬ 3:17) ನಿಮ್ಮ ಮಗನು ಇತರರೊಂದಿಗೆ ಚೆನ್ನಾಗಿ ಹೊಂದಿಕೊಂಡು ಹೋಗುತ್ತಾನೊ? ಯಾವುದೇ ಸಮಸ್ಯೆಗಳನ್ನು ಸಮಾಧಾನದಿಂದ, ದಯೆಯಿಂದ ಇತ್ಯರ್ಥಮಾಡಬಲ್ಲನೊ? ಜನರನ್ನು ಗೌರವಿಸಲು, ಮನಸ್ತಾಪಗಳನ್ನು ಶಾಂತಿಯಿಂದ ಬಗೆಹರಿಸಲು ತರಬೇತಿ ಕೊಟ್ಟಿದ್ದೀರೊ? (ಎಫೆಸ 4:29, 31, 32) “ಎಲ್ಲ ರೀತಿಯ ಜನರನ್ನು ಗೌರವಿಸಿರಿ” ಎನ್ನುತ್ತದೆ ಬೈಬಲ್‌.—1 ಪೇತ್ರ 2:17.

ಹಣ ನಿರ್ವಹಣೆ. (ಲೂಕ 14:28) ನಿಮ್ಮ ಮಗನಿಗೆ ಒಂದು ಕಸಬನ್ನು ಕಲಿಯಲು, ಬಜೆಟಿನೊಳಗೆ ಖರ್ಚುಮಾಡಲು, ಸಾಲ ಮಾಡದಿರಲು ಕಲಿಸಿದ್ದೀರೊ? ತನಗೆ ಅಗತ್ಯವಾಗಿರುವ ವಸ್ತುಗಳನ್ನು ಖರೀದಿಸಲಿಕ್ಕಾಗಿ ಹಣ ಉಳಿತಾಯ ಮಾಡಲು, ಮನಸ್ಸಿಗೆ ಬಂದದ್ದನ್ನು ಕೂಡಲೇ ಖರೀದಿಸದಿರಲು, ಅಗತ್ಯವಿರುವ ವಸ್ತುಗಳಲ್ಲೇ ತೃಪ್ತನಾಗಿರಲು ತರಬೇತಿಗೊಳಿಸಿದ್ದೀರೊ? (ಜ್ಞಾನೋಕ್ತಿ 22:7) “ಅನ್ನವಸ್ತ್ರಗಳಿದ್ದರೆ ಸಾಕು, ನಾವು ಈ ವಿಷಯಗಳಲ್ಲಿ ತೃಪ್ತರಾಗಿರುವೆವು” ಎಂದು ಬರೆದನು ಪೌಲನು.—1 ತಿಮೊಥೆಯ 6:8.

ಉತ್ತಮ ಮೌಲ್ಯಗಳಿಗನುಸಾರ ಜೀವಿಸಲು ಕಲಿಯುವ ಮತ್ತು ಪ್ರಾಯೋಗಿಕ ಕೌಶಲಗಳನ್ನು ಕಲಿತಿರುವ ತರುಣರು ನಿಜವಾಗಿಯೂ ಪ್ರಾಪ್ತ ವಯಸ್ಸಿಗೆ ಸಜ್ಜಾಗಿರುತ್ತಾರೆ. ನಿಜಕ್ಕೂ ಇಂಥವರ ಹೆತ್ತವರು ತಮ್ಮ ಗುರಿಯನ್ನು ಸಾಧಿಸಿದ್ದಾರೆ!—ಜ್ಞಾನೋಕ್ತಿ 23:24. (g11-E 10)

[ಪಾದಟಿಪ್ಪಣಿ]

^ ಹೆಚ್ಚಿನ ಮಾಹಿತಿಗಾಗಿ ಏಪ್ರಿಲ್‌ 1, 2005ರ ಕಾವಲಿನಬುರುಜು ಪುಟ 13-19 ನೋಡಿ.

ಈ ಬಗ್ಗೆ ಯೋಚಿಸಿದ್ದೀರೋ?

● ಹೆತ್ತವರಾದ ನಿಮ್ಮ ಗುರಿಯೇನು?—ಇಬ್ರಿಯ 5:14.

● ನಿಮ್ಮ ಯುವ ಮಗನು ಪ್ರಾಪ್ತ ವಯಸ್ಕನಾದಾಗ ಸ್ವತಃ ಯಾವ ಒಂದು ಆಯ್ಕೆಯನ್ನು ಮಾಡಲೇಬೇಕು? —ಯೆಹೋಶುವ 24:15.

[ಪುಟ 25ರಲ್ಲಿರುವ ಚಿತ್ರಗಳು]

ನಿಮ್ಮ ತರುಣ ಮಕ್ಕಳು ಏನಾಗಬೇಕೆಂದು ಇಚ್ಛಿಸುತ್ತೀರಿ?

ನಿಮ್ಮದೇ ಪಡಿಯಚ್ಚೊ?

ದಂಗೆಕೋರರೊ?

ಜವಾಬ್ದಾರಿಯುತ ವಯಸ್ಕರೊ?