ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಮಾಜಿಕ ಜಾಲತಾಣ ಬಳಕೆ ನೀವು ಕೇಳಿಕೊಳ್ಳಬೇಕಾದ ನಾಲ್ಕು ಪ್ರಶ್ನೆ

ಸಾಮಾಜಿಕ ಜಾಲತಾಣ ಬಳಕೆ ನೀವು ಕೇಳಿಕೊಳ್ಳಬೇಕಾದ ನಾಲ್ಕು ಪ್ರಶ್ನೆ

ಸಾಮಾಜಿಕ ಜಾಲತಾಣ ಬಳಕೆ ನೀವು ಕೇಳಿಕೊಳ್ಳಬೇಕಾದ ನಾಲ್ಕು ಪ್ರಶ್ನೆ

ಇಂಟರ್‌ನೆಟ್‌ನ ಯಾವುದೇ ಬಳಕೆಯಲ್ಲಿ ಅಪಾಯ ಇದ್ದೇ ಇದೆ. ಸಾಮಾಜಿಕ ಜಾಲತಾಣದ ವಿಷಯದಲ್ಲೂ ಈ ಮಾತು ಸತ್ಯ. * ಹಾಗಾಗಿ ಮುಂದಿನ ಪ್ರಶ್ನೆಗಳ ಬಗ್ಗೆ ಯೋಚಿಸಿ.

1 ಸಾಮಾಜಿಕ ಜಾಲತಾಣ ಬಳಕೆಯಿಂದ ನನ್ನ ಖಾಸಗಿ ವಿಷಯಗಳ ಗೋಪ್ಯತೆಗೆ ಏನಾಗುವುದು?

“ಮಾತಾಳಿಗೆ ಪಾಪ ತಪ್ಪದು; ಮೌನಿಯು ಮತಿವಂತ.”—ಜ್ಞಾನೋಕ್ತಿ 10:19.

ನಿಮಗಿದು ತಿಳಿದಿರಲಿ. ನೀವು ಜಾಗ್ರತೆ ವಹಿಸದಿದ್ದರೆ ನಿಮ್ಮ ಪ್ರೊಫೈಲ್‌ ಮಾಹಿತಿ, ಫೋಟೋಗಳು, ಮಿತ್ರರಿಗೆ ಕಳುಹಿಸಿದ ಕಿರು ಸಂದೇಶಗಳು (ಸ್ಟೇಟಸ್‌ ಅಪ್ಡೇಟ್ಸ್‌), ಅವರ ಸಂದೇಶಗಳಿಗೆ ಕೊಟ್ಟ ಉತ್ತರ (ಕಾಮೆಂಟ್ಸ್‌) ಗಳಿಂದಾಗಿ ನಿಮ್ಮ ಬಗ್ಗೆ ಅನಗತ್ಯ ಮಾಹಿತಿ ಬೇರೆಯವರ ಕೈಸೇರುವುದು. ಉದಾ: ನಿಮ್ಮ ವಾಸಸ್ಥಳ, ಯಾವ ಸಮಯದಲ್ಲಿ ಮನೆಯಲ್ಲಿ ಇರುತ್ತೀರಿ/ಇರುವುದಿಲ್ಲ, ಎಲ್ಲಿ ಕೆಲಸ ಮಾಡುತ್ತೀರಿ ಅಥವಾ ಯಾವ ಶಾಲೆ/ಕಾಲೇಜ್‌ಗೆ ಹೋಗುತ್ತೀರಿ ಎಂಬೆಲ್ಲ ವಿಷಯಗಳು ಬಹಿರಂಗವಾಗುವವು. ವಿಳಾಸದ ಜೊತೆ “ನಾವು ನಾಳೆ ರಜೆಯಲ್ಲಿ ಹೋಗುತ್ತಿದ್ದೇವೆ” ಎಂಬ ಚುಟುಕಾದ ಪೋಸ್ಟ್‌ ಹಾಕಿದರೆ ಸಾಕು. ಇದು ಕಳ್ಳರಿಗೆ ಆಮಂತ್ರಣ ಕೊಟ್ಟಂತೆ!

ನಿಮ್ಮ ಇ-ಮೇಲ್‌ ವಿಳಾಸ, ಜನ್ಮ ದಿನಾಂಕ, ಫೋನ್‌ ನಂಬ್ರದಂಥ ವಿವರಗಳನ್ನು ಕೊಟ್ಟರೆ, ಇತರರು ನಿಮ್ಮನ್ನು ಪೀಡಿಸಲು, ಬೆದರಿಕೆಹಾಕಲು ಇಲ್ಲವೇ ನಿಮ್ಮ ವಿವರಗಳ ದುರ್ಬಳಕೆ ಮಾಡಲು ಸಾಧ್ಯವಾಗುವುದು. ಅನೇಕ ಜನರು ತಮ್ಮ ಕುರಿತ ಇಂಥ ಮಾಹಿತಿಯನ್ನು ಸಿಕ್ಕಸಿಕ್ಕವರಿಗೆ ಕೊಡದಿದ್ದರೂ ಸಾಮಾಜಿಕ ಜಾಲತಾಣ ಪೇಜ್‌ನಲ್ಲಿ ಇದೆಲ್ಲವನ್ನು ಹಾಕಿಬಿಡುತ್ತಾರೆ.

ಯಾವುದೇ ಮಾಹಿತಿಯನ್ನು ಒಮ್ಮೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದರೆ ಅದು ಸಾರ್ವಜನಿಕರ ಕಣ್ಣಿಗೆ ತೆರೆದಿಟ್ಟಂತೆ ಎಂಬ ಮಾತನ್ನು ಜನರು ಮರೆತುಬಿಡುತ್ತಾರೆ. ಅವರ ಹೇಳಿಕೆಗಳನ್ನು “ಮಿತ್ರರಿಗೆ ಮಾತ್ರ” ಎಂದವರು ನಿರ್ದಿಷ್ಟವಾಗಿ ಗುರುತಿಸಿದ್ದರೂ, ಮಿತ್ರರು ಆ ಮಾಹಿತಿಯನ್ನು ಏನು ಮಾಡುವರೆಂಬುದರ ಮೇಲೆ ಅವರಿಗೆ ನಿಯಂತ್ರಣವಿರುವುದಿಲ್ಲ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಯಾವುದೇ ಮಾಹಿತಿಯನ್ನು ‘ಸಾರ್ವಜನಿಕ ಮಾಹಿತಿ’ ಇಲ್ಲವೇ ಯಾರು ಬೇಕಾದರೂ ಸಲೀಸಾಗಿ ಬಹಿರಂಗಗೊಳಿಸಬಹುದಾದ ಮಾಹಿತಿ ಎಂದು ಪರಿಗಣಿಸುವುದೇ ಸೂಕ್ತ.

ನೀವು ಮಾಡಬೇಕಾದದ್ದು. ನೀವು ಬಳಸುವ ಸಾಮಾಜಿಕ ಜಾಲತಾಣದಲ್ಲಿರುವ ಪ್ರೈವಸಿ ಸೆಟ್ಟಿಂಗ್‌ಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಅವುಗಳನ್ನು ಬಳಸಿ. ನಿಮ್ಮ ಸ್ಟೇಟಸ್‌ ಅಪ್ಡೇಟ್ಸ್‌ ಹಾಗೂ ಫೋಟೋಗಳನ್ನು ಪರಿಚಿತ, ಭರವಸಾರ್ಹ ಜನರು ಮಾತ್ರ ನೋಡಸಾಧ್ಯವಾಗುವ ಹಾಗೆ ಪ್ರೈವಸಿ ಸೆಟ್ಟಿಂಗ್‌ ಬಳಸಿ ನಿರ್ಬಂಧಿಸಿ.

ಹೀಗೆ ಮಾಡಿದರೂ, ನೀವು ಪೋಸ್ಟ್‌ ಮಾಡಿರುವ ಮಾಹಿತಿ ನೀವು ಉದ್ದೇಶಿಸಿರದ ಜನರ ಕೈಸೇರುವ ಸಾಧ್ಯತೆಯಿದೆ ಎಂದು ನೆನಪಿಡಿ. ಆದ್ದರಿಂದ ನಿಮ್ಮ ಪೇಜ್‌ ಅನ್ನು ಆಗಾಗ್ಗೆ ಪರಿಶೀಲಿಸುತ್ತಾ ಇರಿ. ದುಷ್ಕರ್ಮಿಗಳು ನಿಮ್ಮನ್ನು ಪತ್ತೆಹಚ್ಚಲು ಇಲ್ಲವೇ ನಿಮ್ಮ ಖಾಸಗಿ ವಿವರಗಳನ್ನು ದುರ್ಬಳಕೆಮಾಡಲು ಸಾಧ್ಯವಾಗುವಂಥ ರೀತಿಯ ಯಾವುದೇ ಮಾಹಿತಿಯನ್ನು ನೀವಲ್ಲಿ ಹಾಕಿದ್ದೀರಾ ಎಂದು ನೋಡಿ. ನಿಮ್ಮ ಅಥವಾ ಇನ್ನೊಬ್ಬ ವ್ಯಕ್ತಿಯ ಖಾಸಗಿ ವಿವರಗಳನ್ನೊಳಗೊಂಡ ಮಾಹಿತಿಯನ್ನು ನಿಮ್ಮ ಮಿತ್ರರಿಗೂ ಪೋಸ್ಟ್‌ ಮಾಡಬೇಡಿ. (ಜ್ಞಾನೋಕ್ತಿ 11:13) ಇನ್ನೊಬ್ಬರಿಗೆ ಯಾವುದೇ ಸೂಕ್ಷ್ಮ ವಿಷಯವನ್ನು ತಿಳಿಸಬೇಕೆಂದಿದ್ದರೆ ಬೇರೆ ಸಂವಹನ ಮಾಧ್ಯಮ ಬಳಸಿ. “ಫೋನ್‌ ಮೂಲಕ ಮಾತಾಡುವುದರಿಂದ ಹೆಚ್ಚು ಆತ್ಮೀಯವೆನಿಸುತ್ತದೆ, ವಿಷಯವೂ ಖಾಸಗಿ ಆಗಿ ಉಳಿಯುತ್ತದೆ” ಎನ್ನುತ್ತಾರೆ ಕ್ಯಾಮ್‌ರನ್‌ ಹೆಸರಿನ ಯುವ ಮಹಿಳೆ.

ಸಾರ ಇಷ್ಟೇ. ಕಿಮ್‌ ಎಂಬಾಕೆ ಈ ವಿಷಯವನ್ನು ಚೆನ್ನಾಗಿ ಸಾರಾಂಶಿಸುತ್ತಾಳೆ. “ನೀವು ಜಾಗ್ರತೆವಹಿಸಿದರೆ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಖಾಸಗಿ ವಿಷಯಗಳನ್ನು ತಕ್ಕಮಟ್ಟಿಗಾದರೂ ಗೋಪ್ಯವಾಗಿಡಬಹುದು. ಸಾಮಾಜಿಕ ಜಾಲತಾಣದಿಂದ ಸಮಸ್ಯೆ ತಲೆದೋರದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ” ಎನ್ನುತ್ತಾಳಾಕೆ.

2 ಸಾಮಾಜಿಕ ಜಾಲತಾಣ ಬಳಕೆಯಿಂದ ನನ್ನ ಸಮಯಕ್ಕೆ ಏನಾಗುವುದು?

‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.’—ಫಿಲಿಪ್ಪಿ 1:10.

ನಿಮಗಿದು ತಿಳಿದಿರಲಿ. ಸಾಮಾಜಿಕ ಜಾಲತಾಣ ಬಳಕೆಯು ಸಮಯವನ್ನು ಕಬಳಿಸಬಲ್ಲದು. ಮಾಡಬೇಕಾದ ಕೆಲಸಗಳನ್ನು ಮಾಡದಂತೆ ನಿಮ್ಮನ್ನು ತಡೆಯಬಲ್ಲದು. “ನಿಮಗೆ ಹೆಚ್ಚು ಕಾಂಟಾಕ್ಟ್‌ಗಳಿರುವಲ್ಲಿ, ಸಾಮಾಜಿಕ ಜಾಲತಾಣದಲ್ಲಿ ನೀವು ಕಳೆಯುವ ಸಮಯವೂ ಹೆಚ್ಚಾಗುತ್ತದೆ. ಅದರ ಚಟವೂ ಹೆಚ್ಚಾಗುತ್ತದೆ” ಎನ್ನುತ್ತಾರೆ ಕೇ. ಈ ಬಲೆಯಲ್ಲಿ ಸಿಕ್ಕಿಬಿದ್ದಿದ್ದವರಲ್ಲಿ ಕೆಲವರ ಮಾತು ಕೇಳಿ.

“ಸಾಮಾಜಿಕ ಜಾಲತಾಣ ಬಳಕೆಯನ್ನು ನಿಲ್ಲಿಸುವುದು ತುಂಬ ಕಷ್ಟ. ನಿಮಗೆ ಇಷ್ಟವಿಲ್ಲದಿದ್ದರೂ ಅದನ್ನು ನಿಲ್ಲಿಸಲಾಗುವುದಿಲ್ಲ. ಅದೊಂದು ರೀತಿಯ ಗೀಳು ಆಗಿಬಿಡುತ್ತದೆ.”—ಎಲೀಸ್‌.

“ಗೇಮ್ಸ್‌, ಟೆಸ್ಟ್ಸ್‌, ಸಂಗೀತಗಾರರ ಹಾಗೂ ಅವರ ಅಭಿಮಾನಿಗಳ ಪೇಜುಗಳು ಇವೆಲ್ಲ ಇರುತ್ತದೆ. ಅದಲ್ಲದೆ ನಿಮ್ಮೆಲ್ಲ ಮಿತ್ರರ ಪ್ರೊಫೈಲ್‌ ಪೇಜ್‌ಗಳನ್ನೂ ಓದಲಿಕ್ಕಿರುತ್ತದೆ.”—ಬ್ಲೇನ್‌.

“ಅದೊಂದು ಸುಳಿ ಥರ. ನಿಮ್ಮನ್ನು ಒಳಕ್ಕೆಳೆಯುತ್ತದೆ. ನಿಮಗೆ ಗೊತ್ತೇ ಆಗುದಿಲ್ಲ. ‘ಮುಸರೆ ಪಾತ್ರೆಗಳನ್ನು ಇನ್ನೂ ತೊಳೆದಿಟ್ಟಿಲ್ವಾ?’ ಅಂತ ಅಮ್ಮ ಬಂದು ಕೇಳಿದಾಗಲೇ ಸಮಯ ಹಾರಿಹೋದದ್ದು ನಿಮಗೆ ಅರಿವಾಗುತ್ತದೆ.”—ಅನಾಲೀಸ್‌.

“ಶಾಲೆಯಿಂದ ಮನೆಗೆ ಬೇಗ ಬರಲು ತುದಿಗಾಲಲ್ಲಿ ನಿಲ್ಲುತ್ತಿದ್ದೆ. ಯಾಕೆ ಗೊತ್ತಾ? ನನ್ನ ಪೋಸ್ಟ್‌ಗಳಿಗೆ ಯಾರೆಲ್ಲ, ಏನೆಲ್ಲ ಜವಾಬು ಕೊಟ್ಟಿದ್ದಾರೆಂದು ನೋಡಲು, ಆಮೇಲೆ ಅವರಿಗೆಲ್ಲ ಉತ್ತರ ಕೊಡಲು, ಅವರು ಅಪ್‌ಲೋಡ್‌ ಮಾಡಿರುವ ಎಲ್ಲ ಹೊಸ ಫೋಟೋಗಳನ್ನು ನೋಡಲು. ನಾನು ಸಾಮಾಜಿಕ ಜಾಲತಾಣ ಬಳಸುತ್ತಿರುವಾಗ ಯಾರಾದ್ರೂ ಅಡ್ಡ ಬಂದ್ರೆ ಸ್ವಲ್ಪವೂ ಇಷ್ಟ ಆಗ್ತಿರ್ಲಿಲ್ಲ. ನನ್ನ ಮೂಡ್‌ ತುಂಬ ಕೆಟ್ಟದ್ದಾಗಿರುತ್ತಿತ್ತು. ನನಗೆ ಪರಿಚಯವಿರುವ ಕೆಲವ್ರು ಯಾವಾಗ ನೋಡಿದ್ರೂ ಸಾಮಾಜಿಕ ಜಾಲತಾಣದ ಹಿಂದೆಯೇ ಬಿದ್ದಿರ್ತಾರೆ. ಬೇರೆಯವ್ರ ಮನೆಗೆ ಅತಿಥಿಗಳಾಗಿ ಹೋದ್ರೂ ಸೈ, ರಾತ್ರಿ ಹೊತ್ತಿಲ್ಲದ ಹೊತ್ತಲ್ಲೂ ಸೈ ಅದರ ಹಿಂದೆಯೇ ಇರ್ತಾರೆ!”—ಮೇಗನ್‌.

ನೀವು ಮಾಡಬೇಕಾದದ್ದು. ಸಮಯ ಎಂಬುದು ಪೋಲುಮಾಡಬಾರದ ಒಂದು ಅಮೂಲ್ಯ ವಿಷಯ. ಹಾಗಾಗಿ ಹಣಕ್ಕೆ ಮಾಡುವಂತೆ ಸಮಯಕ್ಕೂ ಒಂದು ಬಜೆಟ್‌ ಮಾಡಬಾರದೇಕೆ? ಮೊದಲಾಗಿ, ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಸಮಯ ಕಳೆಯುವುದು ಸೂಕ್ತವೆಂದು ನಿಗದಿಪಡಿಸಿ ಬರೆದಿಡಿ. ಆಮೇಲೆ ಪ್ರತಿದಿನ ನೀವೆಷ್ಟು ಸಮಯ ಕಳೆಯುತ್ತಿದ್ದೀರೆಂದು ದಾಖಲೆ ಇಡಿ. ನೀವು ನಿಗದಿಪಡಿಸಿದ್ದ ಸಮಯಕ್ಕೆ ಅಂಟಿಕೊಳ್ಳುತ್ತಿದ್ದೀರಾ ಎಂದು ಒಂದು ತಿಂಗಳ ನಂತರ ನೋಡಿ. ಅಗತ್ಯವಿದ್ದಲ್ಲಿ ಹೊಂದಾಣಿಕೆಗಳನ್ನು ಮಾಡಿ.

ನಿಮ್ಮ ತರುಣ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ವಿಪರೀತ ಸಮಯ ಕಳೆಯುತ್ತಿರುವಲ್ಲಿ ಅದರ ಹಿಂದೆ ಯಾವುದಾದರೂ ಕಾರಣಗಳಿವೆಯಾ ಎಂದು ಹೆತ್ತವರಾದ ನೀವು ವಿವೇಚಿಸಿ ತಿಳಿದುಕೊಳ್ಳಿ. ಉದಾಹರಣೆಗೆ, ಸೈಬರ್‌-ಸೇಫ್‌ ಕಿಡ್ಸ್‌, ಸೈಬರ್‌-ಸ್ಯಾವಿ ಟೀನ್ಸ್‌ ಎಂಬ ಪುಸ್ತಕದ ಲೇಖಕಿ ನ್ಯಾನ್ಸಿ ಈ. ವಿಲ್ಲಾರ್ಡ್‌ ಹೇಳಿದ್ದೇನೆಂದರೆ, ಯುವಜನರಿಗಿರುವ ಆತಂಕ, ಮಾನಸಿಕ ಒತ್ತಡ, ಕೀಳರಿಮೆಯೇ ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಗೆ ಕಾರಣವಾಗಿರಬಹುದು. “ಅನೇಕ ಹದಿಪ್ರಾಯದವರಿಗೆ ತಮ್ಮ ಸ್ನೇಹಿತರ ನಡುವೆ ತಮಗಿರುವ ಅಂತಸ್ತಿನ ಬಗ್ಗೆ ಅತಿಯಾದ ಆಸ್ಥೆ. ಮಿತ್ರರೊಂದಿಗೆ ಎಲೆಕ್ಟ್ರಾನಿಕ್‌ ವಸ್ತುಗಳ ಮೂಲಕ ಮಾಡುವ ಸಂವಹನದ ಆಧಾರದ ಮೇಲೆ ಹದಿಪ್ರಾಯದವರು ತಮ್ಮ ಅಂತಸ್ತನ್ನು ಅಳೆಯುವಲ್ಲಿ ಇದು ಅವರ ಚಟವನ್ನು ಹೆಚ್ಚಿಸುವುದು” ಎಂದವರು ತಮ್ಮ ಪುಸ್ತಕದಲ್ಲಿ ಬರೆದರು.

ಸಾಮಾಜಿಕ ಜಾಲತಾಣದ ಬಳಕೆಯಾಗಲಿ ಇಂಟರ್‌ನೆಟ್‌ನ ಬೇರಾವುದೇ ಬಳಕೆಯಾಗಲಿ ನಿಮ್ಮ ಮನೆಯೊಳಗೆ ನೀವು ಬೆಳೆಸಬೇಕಾದ ಸ್ನೇಹಬಂಧಗಳಿಗೆ ಯಾವತ್ತೂ ಮುಳುವಾಗದಿರಲಿ. ಗ್ರೋನ್‌ ಅಪ್‌ ಡಿಜಿಟಲ್‌ ಎಂಬ ಪುಸ್ತಕದಲ್ಲಿ ಲೇಖಕ ಡಾನ್‌ ಟ್ಯಾಪ್‌ಸ್ಕಾಟ್‌ ಬರೆದದ್ದು: “ಇಂಟರ್‌ನೆಟ್‌ನ ವಿಪರ್ಯಾಸಗಳಲ್ಲಿ ಒಂದೇನೆಂದರೆ, ಯಾವುದೊ ಕಾರ್ಯದ ನಿಮಿತ್ತ ದೂರದಲ್ಲಿರುವ ಕುಟುಂಬ ಸದಸ್ಯರೊಂದಿಗೆ ಸುಲಭವಾಗಿ ಸಂಪರ್ಕ ಕಲ್ಪಿಸಿಕೊಡುವ ಇಂಟರ್‌ನೆಟ್‌ ಆ ಸದಸ್ಯರು ಮನೆಯಲ್ಲಿ ನಿಮ್ಮೊಟ್ಟಿಗೇ ಇರುವಾಗ ಅವರಿಂದ ನಿಮ್ಮನ್ನು ದೂರವಿಡಬಲ್ಲದು.”

ಸಾರ ಇಷ್ಟೇ. ಎಮಿಲಿ ಎಂಬ ಹೆಸರಿನ ತರುಣಿ ಹೇಳಿದ್ದು: “ನನ್ನ ಪ್ರಕಾರ, ಜನರೊಂದಿಗೆ ಸಂಪರ್ಕವಿಡಲು ಸಾಮಾಜಿಕ ಜಾಲತಾಣ ಬಲು ಉಪಯುಕ್ತ. ಆದರೆ ಅದನ್ನು ಎಷ್ಟು ಬಳಸಬೇಕೆಂದು ತಿಳಿದಿರಬೇಕು, ಅದು ಮಹತ್ವದ್ದು. ಯಾವುದೇ ವಸ್ತುವಿನ ಬಳಕೆಯ ವಿಷಯದಲ್ಲಿ ಇದು ಸತ್ಯ ಅಲ್ಲವೇ?”

3 ಸಾಮಾಜಿಕ ಜಾಲತಾಣ ಬಳಕೆಯಿಂದ ನನ್ನ ಹೆಸರಿಗೆ ಏನಾಗುವುದು?

“ಬೆಳ್ಳಿ ಬಂಗಾರಕ್ಕಿಂತಲೂ ಸತ್ಕೀರ್ತಿಯು ಅಮೂಲ್ಯ.”—ಜ್ಞಾನೋಕ್ತಿ 22:1.

ನಿಮಗಿದು ತಿಳಿದಿರಲಿ. ಸಾಮಾಜಿಕ ಜಾಲತಾಣದಲ್ಲಿ ನೀವೇನನ್ನು ಪೋಸ್ಟ್‌ ಮಾಡುತ್ತೀರೊ ಅದರಿಂದಾಗಿ ನಿಮಗೆ ಬರುವ ಹೆಸರು ಕಲ್ಲಿನ ಮೇಲೆ ಕೆತ್ತಿದಂತಿರುತ್ತದೆ. ಅದನ್ನು ಅಳಿಸಿಹಾಕುವುದು ಕಷ್ಟ. (ಜ್ಞಾನೋಕ್ತಿ 20:11; ಮತ್ತಾಯ 7:17) ಮುಂದೆ ಆಗಬಹುದಾದ ಅಪಾಯದ ಬಗ್ಗೆ ಅನೇಕರಿಗೆ ಪರಿವೆಯೇ ಇಲ್ಲವೆಂದು ತೋರುತ್ತದೆ. “ಜನರು ಸಾಮಾಜಿಕ ಜಾಲತಾಣ ಬಳಸುವಾಗ ಅವರ ವಿವೇಚನಾ ಶಕ್ತಿಗೆ ಏನಾಗುತ್ತದೊ ಗೊತ್ತಿಲ್ಲ. ಸಾಮಾನ್ಯವಾಗಿ ಅವರು ಹೇಳದಂಥದ್ದನ್ನು ಇದರಲ್ಲಿ ಹೇಳಿಬಿಡುತ್ತಾರೆ. ಅವರು ಹಾಕುವ ಒಂದೇ ಒಂದು ಹೇಳಿಕೆ ಅವರ ಒಳ್ಳೇ ಹೆಸರನ್ನು ಕೆಡಿಸಬಲ್ಲದೆಂದು ಅವರು ಯೋಚಿಸುವುದಿಲ್ಲ” ಎನ್ನುತ್ತಾಳೆ ರಾಕೆಲ್‌ ಎಂಬ ಯುವತಿ.

ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಹೆಸರು ಹಾಳಾದರೆ ಅದು ದೀರ್ಘಕಾಲಿಕ ಪರಿಣಾಮಗಳನ್ನು ಬೀರಬಲ್ಲದು. ಗ್ರೋನ್‌ ಅಪ್‌ ಡಿಜಿಟಲ್‌ ಪುಸ್ತಕ ಹೇಳುವುದು: “ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಅನೇಕರು ತಾವು ಆನ್‌ಲೈನ್‌ನಲ್ಲಿ ಹಾಕಿದ ಪೋಸ್ಟ್‌ಗಳಿಂದಾಗಿ ಕೆಲಸಕಳಕೊಂಡ ಇಲ್ಲವೆ ಹೊಸ ಉದ್ಯೋಗಕ್ಕೆ ಹಾಕಿದ ಅರ್ಜಿ ತಿರಸ್ಕೃತವಾದ ಹಲವಾರು ಉದಾಹರಣೆಗಳಿವೆ.”

ನೀವು ಮಾಡಬೇಕಾದದ್ದು. ನಿಮ್ಮ ಸಾಮಾಜಿಕ ಜಾಲತಾಣ ಪೇಜ್‌ ಮೇಲೆ ಕಣ್ಣಾಡಿಸಿ. ಬೇರೆಯವರು ಅದನ್ನು ನೋಡುವಾಗ ನಿಮ್ಮ ಬಗ್ಗೆ ಯಾವ ಅಭಿಪ್ರಾಯ ಮೂಡಬಹುದೆಂದು ಯೋಚಿಸಿ. ನಿಮ್ಮನ್ನೇ ಹೀಗೆ ಕೇಳಿ: ‘ನನ್ನ ಬಗ್ಗೆ ಜನರಿಗೆ ಈ ಅಭಿಪ್ರಾಯ ಇರುವಂತೆ ಇಷ್ಟಪಡುತ್ತೇನಾ? ನಾನು ಪೋಸ್ಟ್‌ ಮಾಡಿರುವ ಫೋಟೋಗಳನ್ನು ನೋಡುವವರು ನನ್ನ ವ್ಯಕ್ತಿತ್ವವನ್ನು ಹೇಗೆ ವರ್ಣಿಸಬಹುದು? ಯಾವೆಲ್ಲ ಪದಗಳು ಅವರ ಮನಸ್ಸಿಗೆ ಬರಬಹುದು? “ಚೆಲ್ಲಾಟವಾಡುವವನು/ಳು”? “ಸೆಕ್ಸಿ?” “ಪಾರ್ಟಿ ಹುಚ್ಚ/ಹುಚ್ಚಿ”? ನಾನು ಉದ್ಯೋಗಕ್ಕೆ ಅರ್ಜಿಹಾಕಿದಾಗ ಧಣಿ ನನ್ನ ಪೇಜ್‌ ನೋಡಿದರೆ ಅವರ ಮನಸ್ಸಲ್ಲಿ ಆ ಅಭಿಪ್ರಾಯ ಮೂಡಬೇಕೆಂದು ಬಯಸುತ್ತೇನಾ? ನಿಜವಾಗಿ ನನಗಿರುವ ಮೌಲ್ಯಗಳನ್ನು ಈ ಚಿತ್ರಗಳು ತೋರಿಸುತ್ತವಾ?’

ನೀವೊಬ್ಬ ಯುವ ವ್ಯಕ್ತಿ ಆಗಿರುವಲ್ಲಿ ನಿಮ್ಮನ್ನೇ ಕೇಳಿಕೊಳ್ಳಿ: ‘ನನ್ನ ಹೆತ್ತವರಾಗಲಿ, ಶಿಕ್ಷಕರಾಗಲಿ, ಅಚ್ಚುಮೆಚ್ಚಿನ ದೊಡ್ಡವರಾಗಲಿ ಈ ಪೇಜ್‌ ನೋಡಿದ್ರೆ ನನ್ನ ಬಗ್ಗೆ ಏನು ಅಂದುಕೊಳ್ಳುವರು? ಅವರು ಅಲ್ಲಿ ಓದುವ, ನೋಡುವ ವಿಷಯಗಳು ನನ್ನನ್ನು ಮುಜುಗರಕ್ಕೆ ಸಿಲುಕಿಸುವಂಥವುಗಳಾ?’

ಸಾರ ಇಷ್ಟೇ. ನಿಮ್ಮ ಹೆಸರಿನ ವಿಷಯದಲ್ಲಿ ಅಪೊಸ್ತಲ ಪೌಲನ ಈ ಮಾತುಗಳನ್ನು ನೆನಪಿನಲ್ಲಿಡಿ: “ನೀವೇನು ಬಿತ್ತುತ್ತೀರೊ ಅದನ್ನೇ ಕೊಯ್ಯುವಿರಿ.”—ಗಲಾತ್ಯ 6:7, ಗುಡ್‌ ನ್ಯೂಸ್‌ ಟ್ರಾನ್ಸ್‌ಲೇಶನ್‌.

4 ಸಾಮಾಜಿಕ ಜಾಲತಾಣ ಬಳಕೆಯಿಂದ ನನಗೆ ಎಂಥ ಮಿತ್ರರು ಸಿಗುವರು?

“ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.

ನಿಮಗಿದು ತಿಳಿದಿರಲಿ. ನಿಮ್ಮ ಮಿತ್ರರು ನಿಮ್ಮ ಯೋಚನಾರೀತಿ ಹಾಗೂ ವರ್ತನಾ ರೀತಿಯನ್ನು ಪ್ರಭಾವಿಸುತ್ತಾರೆ. (1 ಕೊರಿಂಥ 15:33) ಆದ್ದರಿಂದ ನೀವು ಸಾಮಾಜಿಕ ಜಾಲತಾಣದಲ್ಲಿ ಯಾರೊಟ್ಟಿಗೆ ಸ್ನೇಹ ಬೆಳೆಸಬೇಕೆಂಬ ವಿಷಯದಲ್ಲಿ ಜಾಗ್ರತೆವಹಿಸುವುದು ವಿವೇಕಯುತ. ಕೆಲವರು ತಮಗೆ ಅಷ್ಟೇನೂ ಪರಿಚಯವಿಲ್ಲದ ಅಥವಾ ಯಾರೆಂದು ಗೊತ್ತೇ ಇಲ್ಲದ ಹತ್ತಾರು ಇಲ್ಲವೇ ನೂರಾರು ಜನರು ಕಳುಹಿಸುವ ರಿಕ್ವೆಸ್ಟ್‌ಗಳನ್ನು ಒಪ್ಪಿಕೊಳ್ಳುತ್ತಾರೆ. ಇನ್ನಿತರರಿಗಾದರೊ ತಮ್ಮ ಮಿತ್ರರ ಲಿಸ್ಟ್‌ನಲ್ಲಿ ಇರುವವರೆಲ್ಲರ ಸಹವಾಸ ಒಳ್ಳೇದಲ್ಲ ಎಂದು ಆಮೇಲೆ ತಿಳಿದುಬರುತ್ತದೆ. ಕೆಲವರು ಹೇಳಿದ ಮಾತು ಕೇಳಿ.

“ಫ್ರೆಂಡ್‌ ಆಗಲು ಯಾರ್ಯಾರೊ ಕಳುಹಿಸುವ ರಿಕ್ವೆಸ್ಟ್‌ಗಳನ್ನೆಲ್ಲ ಒಪ್ಪಿದರೆ, ತೊಂದರೆಗೆ ಸಿಲುಕುವುದು ಖಂಡಿತ.”—ಅನಾಲಿಸ್‌.

“ನನಗೆ ಗೊತ್ತಿರುವ ಅನೇಕರು, ತಮಗೆ ನಿಜವಾಗಿ ಇಷ್ಟವಿಲ್ಲದವರನ್ನು ಫ್ರೆಂಡ್ಸ್‌ ಆಗಿ ಸೇರಿಸಿಕೊಳ್ಳುತ್ತಾರೆ. ಅವರ ರಿಕ್ವೆಸ್ಟ್‌ ಅನ್ನು ತಿರಸ್ಕರಿಸಿ ಮನನೋಯಿಸಬಾರದೆಂದು ಹಾಗೆ ಮಾಡಿದೆವು ಎನ್ನುತ್ತಾರೆ.”—ಲಿಯಾನ್‌.

“ಇದು ನಾವು ಅವರೊಟ್ಟಿಗೆ ನೇರವಾಗಿ ಸಹವಾಸ ಮಾಡುವುದಕ್ಕೆ ಸಮ. ಹಾಗಾಗಿ ನೀವು ಯಾರನ್ನು ಮಿತ್ರರಾಗಿ ಸ್ವೀಕರಿಸುತ್ತೀರೆಂಬ ವಿಷಯದಲ್ಲಿ ಜಾಗ್ರತೆ ವಹಿಸಬೇಕು.”—ಅಲೆಕ್ಸಿಸ್‌.

ನೀವು ಮಾಡಬೇಕಾದದ್ದು. ಯಾರನ್ನು ಮಿತ್ರರಾಗಿ ಸ್ವೀಕರಿಸುವಿರಿ ಎಂಬ ವಿಷಯದಲ್ಲಿ ನಿಮಗಾಗಿಯೇ ಕಟ್ಟುಪಾಡುಗಳನ್ನಿಡಿ. ಕೆಲವರು ಇಟ್ಟಿರುವ ಕಟ್ಟುಪಾಡುಗಳ ಉದಾಹರಣೆಗಳನ್ನು ಕೆಳಗೆ ಗಮನಿಸಿ.

“ನನಗೆ ಪರಿಚಯ ಇದ್ದವರನ್ನು ಮಾತ್ರ ನನ್ನ ಫ್ರೆಂಡ್‌ ಆಗಿ ಸ್ವೀಕರಿಸುತ್ತೇನೆ. ಬರೀ ಮುಖ ಪರಿಚಯ ಇದ್ದವರನ್ನಲ್ಲ ಬದಲಾಗಿ ನಿಜವಾಗಿ ಒಳ್ಳೇ ಪರಿಚಯವಿದ್ದವರನ್ನು ಮಾತ್ರ.”—ಜೀನ್‌.

“ನನಗೆ ತುಂಬ ಸಮಯದಿಂದ ಪರಿಚಯವಿದ್ದವರನ್ನು ಮಾತ್ರ ಫ್ರೆಂಡ್‌ ಪಟ್ಟಿಗೆ ಸೇರಿಸುತ್ತೇನೆ. ಅಪರಿಚಿತರನ್ನು ಸೇರಿಸುವುದೇ ಇಲ್ಲ.”—ಮೊನಿಕ್‌.

“ಒಳ್ಳೇ ಪರಿಚಯವಿದ್ದವರನ್ನು ಮತ್ತು ನನಗಿರುವಂಥದ್ದೇ ಆದರ್ಶ, ಮೌಲ್ಯಗಳಿರುವವರನ್ನು ಮಾತ್ರ ಸೇರಿಸುತ್ತೇನೆ.”—ರೇ.

“ನನಗೆ ಗೊತ್ತಿಲ್ಲದವ್ರು ಯಾರಾದ್ರೂ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ರೆ, ಅದನ್ನು ಅಲಕ್ಷಿಸಿಬಿಡುತ್ತೇನೆ ಅಷ್ಟೇ. ನನ್ನ ಫ್ರೆಂಡ್‌ ಲಿಸ್ಟ್‌ನಲ್ಲಿರುವವರೆಲ್ಲರೂ ನನಗೆ ಗೊತ್ತಿರುವವರು. ಇಂಟರ್‌ನೆಟ್‌ ಜಗತ್ತಿನಲ್ಲಿ ಮಾತ್ರವಲ್ಲ ಹೊರಜಗತ್ತಿನಲ್ಲೂ ನಾವು ಮಿತ್ರರು.”—ಮಾರೀ.

“ಫ್ರೆಂಡ್‌ ಒಬ್ಬರು, ನನಗೆ ಆಕ್ಷೇಪಣೀಯ ಎಂದನಿಸುವಂಥ ಚಿತ್ರಗಳನ್ನಾಗಲಿ, ಹೇಳಿಕೆಗಳನ್ನಾಗಲಿ ಪೋಸ್ಟ್‌ ಮಾಡಲಾರಂಭಿಸಿದರೆ, ಮುಲಾಜಿಲ್ಲದೆ ಅವರ ಹೆಸರನ್ನು ಲಿಸ್ಟ್‌ನಿಂದ ತೆಗೆದುಬಿಡುತ್ತೇನೆ. ಅಂಥವರು ಪೋಸ್ಟ್‌ ಮಾಡಿದ್ದನ್ನು ನಾವು ಬರೀ ನೋಡುತ್ತಿರಬಹುದು. ಆದ್ರೂ ಅದು ಕೆಟ್ಟ ಸಹವಾಸವೇ.”—ಕಿಮ್‌.

“ನನಗೊಂದು ಸಾಮಾಜಿಕ ಜಾಲತಾಣ ಅಕೌಂಟ್‌ ಇದ್ದಾಗ, ತುಂಬ ಕಟ್ಟುನಿಟ್ಟಿನ ಪ್ರೈವಸಿ ಸೆಟ್ಟಿಂಗ್ಸ್‌ ಅನ್ನು ಬಳಸುತ್ತಿದ್ದೆ. ನಾನು ಹಾಕುತ್ತಿದ್ದ ಹೇಳಿಕೆಗಳು, ಫೋಟೋಗಳನ್ನು ಬರೀ ನನ್ನ ಮಿತ್ರರಿಗೆ ನೋಡಲಿಕ್ಕಾಗುವಂತೆ, ಅವರ ಮಿತ್ರರಿಗೆ ನೋಡಲಿಕ್ಕಾಗದಂತೆ ಸೆಟ್ಟಿಂಗ್ಸ್‌ ಹಾಕುತ್ತಿದ್ದೆ. ನಾನಿದನ್ನು ಮಾಡಿದ್ದೇಕೆಂದ್ರೆ ನನಗೆ ಅವರ ಮಿತ್ರರ ಪರಿಚಯವೂ ಇರಲಿಲ್ಲ, ಒಳ್ಳೆಯವ್ರ ಕೆಟ್ಟವ್ರ ಅಂತ ಗೊತ್ತಿರಲಿಲ್ಲ, ಅವರೊಂದಿಗೆ ಸಹವಾಸ ಮಾಡಿದ್ರೆ ಒಳ್ಳೇದು ಎಂಬ ಖಾತ್ರಿ ಇರ್ಲಿಲ್ಲ.”—ಹೆದರ್‌.

ಸಾರ ಇಷ್ಟೇ. ಡಾಕ್ಟರ್‌ ಗ್ವೆನ್‌ ಶೂರ್ಗನ್‌ ಓಕೀಫಿ ಸೈಬರ್‌ಸೇಫ್‌ ಎಂಬ ತನ್ನ ಪುಸ್ತಕದಲ್ಲಿ ಹೇಳಿದ್ದು: “ಅತ್ಯುತ್ತಮವಾದ ಮಾರ್ಗದರ್ಶಕ ಸೂತ್ರವೇನೆಂದರೆ, ನಿಮಗೆ ಒಳ್ಳೇ ಪರಿಚಯವಿರುವ ಮತ್ತು ನಿಮಗೆ ಈಗಾಗಲೇ ಹೊಕ್ಕುಬಳಕೆಯಿರುವ ಮಿತ್ರರನ್ನು ಮಾತ್ರ ಲಿಸ್ಟ್‌ಗೆ ಸೇರಿಸಬೇಕು.” * (g12-E 02)

[ಪಾದಟಿಪ್ಪಣಿಗಳು]

^ ಎಚ್ಚರ! ಪತ್ರಿಕೆ ಯಾವುದೇ ನಿರ್ದಿಷ್ಟ ಸಾಮಾಜಿಕ ಜಾಲತಾಣವನ್ನು ಅನುಮೋದಿಸುವುದಿಲ್ಲ, ಖಂಡಿಸುವುದೂ ಇಲ್ಲ. ಇಂಟರ್‌ನೆಟ್‌ ಬಳಕೆ ಬೈಬಲ್‌ ತತ್ವಗಳನ್ನು ಮುರಿಯುವಂತಿರಬಾರದೆಂಬ ಸಂಗತಿಯನ್ನು ಕ್ರೈಸ್ತರು ಸದಾ ನೆನಪಿನಲ್ಲಿಡಬೇಕು.—1 ತಿಮೊಥೆಯ 1:5, 19.

^ ಸಾಮಾಜಿಕ ಜಾಲತಾಣದ ಬಳಕೆ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಎಚ್ಚರ! ಪತ್ರಿಕೆಯ ಜನವರಿ-ಮಾರ್ಚ್‌ 2012 ಸಂಚಿಕೆಯಲ್ಲಿ ಪುಟ 14-21 ನೋಡಿ.

[ಪುಟ 31ರಲ್ಲಿರುವ ಚೌಕ]

ಸೈನ್‌ ಔಟ್‌ ಮಾಡಲು ಮರೆಯಬೇಡಿ!

ನೀವಿಲ್ಲದಿರುವ ಸಮಯದಲ್ಲಿ ನಿಮ್ಮ ಅಕೌಂಟನ್ನು ಸೈನ್‌ ಔಟ್‌ ಮಾಡದೆ ಇಟ್ಟರೆ, ಇತರರು ನಿಮ್ಮ ಪೇಜ್‌ ಮೇಲೆ ವಿಷಯಗಳನ್ನು ಪೋಸ್ಟ್‌ ಮಾಡುವ ಅಪಾಯವಿದೆ. ರಾಬರ್ಟ್‌ ವಿಲ್ಸನ್‌ ಎಂಬ ವಕೀಲರು ಅನ್ನುವಂತೆ ಸೈನ್‌ ಔಟ್‌ ಮಾಡದೆ ಇರುವುದು, “ನಿಮ್ಮ ಪರ್ಸನ್ನೋ ಮೊಬೈಲನ್ನೊ ಒಂದು ಸಾರ್ವಜನಿಕ ಸ್ಥಳದಲ್ಲಿ ಮೇಜಿನ ಮೇಲೆ ಬಿಟ್ಟು ಹೋಗುವುದಕ್ಕೆ ಸಮಾನ. ಯಾರು ಬೇಕಾದರೂ ಬಂದು ನಿಮ್ಮ ಪೇಜ್‌ ಮೇಲೆ ಪೋಸ್ಟ್‌ಗಳನ್ನು ಮಾಡಬಹುದು.” ಅವರ ಸಲಹೆ? “ಮರೆಯದೆ ಸೈನ್‌ ಔಟ್‌ ಮಾಡಿ.”

[ಪುಟ 31ರಲ್ಲಿರುವ ಚೌಕ]

ಕೋಲು ಕೊಟ್ಟು ಪೆಟ್ಟು ತಿನ್ನುತ್ತೀರಾ?

ಕನ್ಸೂಮರ್ಸ್‌ ರಿಪೋರ್ಟ್ಸ್‌ ನಡೆಸಿದ ಸಮೀಕ್ಷೆಯೊಂದರ ಪ್ರಕಾರ ಸಾಮಾಜಿಕ ಜಾಲತಾಣ ಬಳಕೆದಾರರು “ಮಾಡುವ ಸಂಗತಿಗಳು ಕೆಲವೊಮ್ಮೆ ಮನೆಗಳ್ಳತನಕ್ಕೆ, ಅವರ ವೈಯಕ್ತಿಕ ವಿವರಗಳ ದುರ್ಬಳಕೆಗೆ ಮತ್ತು ಯಾರೊ ಕದ್ದುಮುಚ್ಚಿ ಬೆಂಬತ್ತುವ ಅಪಾಯಕ್ಕೆ ಅವರನ್ನು ಸಿಲುಕಿಸುತ್ತದೆ. ಶೇ. 15ರಷ್ಟು ಮಂದಿ ತಾವು ಸದ್ಯಕ್ಕೆ ಎಲ್ಲಿದ್ದೇವೆ ಎಂಬದನ್ನು ಇಲ್ಲವೆ ಪ್ರವಾಸದ ಯೋಜನೆಗಳನ್ನು ಪೋಸ್ಟ್‌ ಮಾಡಿದ್ದರು. ಶೇ. 34 ಮಂದಿ ತಮ್ಮ ಪೂರ್ತಿ ಜನ್ಮ ದಿನಾಂಕವನ್ನು ಹಾಕಿದ್ದರು. ಮಕ್ಕಳನ್ನು ಮನೆಯಲ್ಲಿ ಬಿಟ್ಟುಹೋಗುವ ಶೇ. 21 ಮಂದಿ ಆ ಮಕ್ಕಳ ಹೆಸರುಗಳನ್ನೂ ಫೋಟೋಗಳನ್ನೂ ಪೋಸ್ಟ್‌ ಮಾಡಿದ್ದರು.”