ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶ್ವ-ವೀಕ್ಷಣೆ

ವಿಶ್ವ-ವೀಕ್ಷಣೆ

ಅಮೆರಿಕ

“ಧೂಮಪಾನ ಮಾಡದವರಿಗೆ ಹೋಲಿಸಿದರೆ ಧೂಮಪಾನ ಮಾಡುವ ಕೆಲಸಗಾರರ ಮೇಲೆ ವರ್ಷಕ್ಕೆ 5,816 ಡಾಲರ್‌ಗಳಷ್ಟು ಹೆಚ್ಚಿನ ಹಣವನ್ನು ಖಾಸಗಿ ಸಂಸ್ಥೆಗಳು ವ್ಯಯಿಸಬೇಕಾಗುತ್ತದೆ,” ಎಂದು ನ್ಯೂ ಯಾರ್ಕ್‌ ಟೈಮ್ಸ್ ಪತ್ರಿಕೆಯು ವರದಿಸುತ್ತದೆ. ಧೂಮಪಾನಿಗಳು ಧೂಮಪಾನಕ್ಕಾಗಿ ತೆಗೆದುಕೊಳ್ಳುವ ಸಮಯ, ಅವರಿಗಾಗಿ ಮಾಡುವ ವೈದ್ಯಕೀಯ ವೆಚ್ಚ ಮತ್ತು ಅವರ ಗೈರು ಹಾಜರಿ ಇವೇ ಈ ಹೆಚ್ಚಿನ ಹಣದ ವ್ಯಯಕ್ಕೆ ಮುಖ್ಯ ಕಾರಣಗಳಾಗಿವೆ ಎಂದು ಒಹಾಯೋ ಯುನಿವರ್ಸಿಟಿ ಸಂಶೋಧಕರು ಸಂಗ್ರಹಿಸಿದ ಮಾಹಿತಿಯಿಂದ ತಿಳಿದುಬರುತ್ತದೆ. ಮತ್ತೊಂದು ಕಾರಣ, ನಿಕೋಟಿನ್‌ ಸೇವನೆಯ ಚಟವನ್ನು ಬಿಟ್ಟಾಗ ಅದು ಅವರ ಕೆಲಸದ ಮೇಲೆ ಬೀರುವ ಪರಿಣಾಮವೇ ಆಗಿದೆ.

ಇಟಲಿ

“ಪಾದ್ರಿಗಳು ಮತ್ತು ಚರ್ಚಿನ ಭರವಸಾರ್ಹ ವ್ಯಕ್ತಿಗಳು ತಾವು ಆಡಿದ ಮಾತಿನಂತೆ ನಡೆದುಕೊಳ್ಳದಿರುವುದು ಚರ್ಚ್ಗಳ ಕಡೆಗಿರುವ ನಂಬಿಕೆಯನ್ನು ಶಿಥಿಲಗೊಳಿಸಿದೆ.”—ಪೋಪ್‌ ಫ್ರಾನ್ಸಿಸ್‌

ಮಲೇಷಿಯ

ಮಲೇಷಿಯದಲ್ಲಿನ ಅಧಿಕಾರಿಗಳು 24 ಟನ್‍ನಷ್ಟು ದಂತದ (1,000ಕ್ಕೂ ಹೆಚ್ಚು ಆನೆ ದಂತಗಳು) ಕಳ್ಳಸಾಗಣೆಯನ್ನು ಬಯಲುಪಡಿಸಿದರು. ಅದನ್ನು ಮಹಾಗನಿ ಮರ ಸಾಗಿಸುವ ಎರಡು ಹಡಗುಗಳಲ್ಲಿ ಮುಚ್ಚಿಡಲಾಗಿತ್ತು. ಇಷ್ಟರವರೆಗೆ ಮುಟ್ಟುಗೋಲು ಹಾಕಿರುವ ಕಳ್ಳಸಾಗಣೆಗಳಲ್ಲೇ ಇದು ಬಹು ದೊಡ್ಡದು ಎಂದು ಪರಿಸರವಾದಿಗಳು ಹೇಳಿದರು. ಈ ಹಡಗುಸಾಗಣೆ ಟೋಗೊದಿಂದ ಬಂದಿತ್ತು, ಮುಂದೆ ಚೀನಾವನ್ನು ತಲುಪಲಿತ್ತು.

ಆಫ್ರಿಕ

ವಿಶ್ವ ಆರೋಗ್ಯ ಸಂಸ್ಥೆಯ 2012ರ ವರದಿಯ ಪ್ರಕಾರ, ಅದರ ಹಿಂದಿನ ಕೆಲವು ವರ್ಷಗಳಲ್ಲಿ ಸುಮಾರು 63 ಪ್ರತಿಶತ ಸಾವುಗಳು ಕೇವಲ ಸಾಂಕ್ರಾಮಿಕ ರೋಗಗಳಿಂದಲೇ ಸಂಭವಿಸುತ್ತಿದ್ದು, ಅಂಥ ಸಾಂಕ್ರಾಮಿಕ ರೋಗಗಳಲ್ಲಿ ಹೆಚ್‌ಐವಿ/ಏಡ್ಸ್‌, ಅತಿಸಾರ, ಮಲೇರಿಯಾ, ಕ್ಷಯರೋಗ ಮತ್ತು ಬಾಲ್ಯಾವಸ್ಥೆಯ ರೋಗಗಳು ಮುಖ್ಯವಾಗಿವೆ.

ಆಸ್ಟ್ರೇಲಿಯ

ಸ್ಮಾರ್ಟ್‌ಫೋನ್‌ಗಳಲ್ಲಿ ಮತ್ತು ಇತರ ಸಾಧನಗಳಲ್ಲಿರುವ ಜೂಜಾಟದಂಥ ಕೃತಕವಾದ ಆಟಗಳು ಮಕ್ಕಳಲ್ಲಿ ಬಹು ಜನಪ್ರಿಯವಾಗಿವೆ. ಕೆಲವೊಂದು ಆಟಗಳು ಕ್ಯಾಸಿನೋ ಆಟಗಳನ್ನು ಹೋಲುತ್ತವೆ, ಆದರೆ ಅವುಗಳಲ್ಲಿ ಗೆಲ್ಲುವುದು ಬಹಳ ಸುಲಭವಾಗಿರುತ್ತದೆ. ಇಂಥ ಕೃತಕ ಆಟವನ್ನು ಆಡುವ ಮಕ್ಕಳು ನಿಜ ಜೀವನದಲ್ಲೂ ಜೂಜಾಟ ಆಡುವುದು ತಪ್ಪೇನಲ್ಲ ಎಂದು ಸಮರ್ಥಿಸಿಕೊಂಡು “ಭವಿಷ್ಯದಲ್ಲಿ ಜೂಜಾಟದ ಜಾಲದಲ್ಲಿ ಸಿಕ್ಕಿಬಿದ್ದು, ಸಮಸ್ಯೆಯನ್ನು ಎದುರಿಸುವಂತಾಗಬಹುದು” ಎಂದು ವರದಿಸುತ್ತಾ ಸರ್ಕಾರ ಎಚ್ಚರಿಸಿದೆ. (g14-E 02)