ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುಖೀ ಸಂಸಾರಕ್ಕೆ ಸಲಹೆಗಳು | ಯುವಜನರು

ತಪ್ಪು ಮಾಡುವ ಒತ್ತಡವನ್ನು ಎದುರಿಸುವುದು ಹೇಗೆ?

ತಪ್ಪು ಮಾಡುವ ಒತ್ತಡವನ್ನು ಎದುರಿಸುವುದು ಹೇಗೆ?

ಸಮಸ್ಯೆ

“ಕೆಲವೊಮ್ಮೆ ಹುಡುಗಿಯರು ನನ್ನ ಫೋನ್‌ ನಂಬರ್‌ ಕೇಳಿ ಅವರೊಟ್ಟಿಗೆ ‘ಹುಕ್‌ ಅಪ್‌ಗೆ’ * ಕರೆಯುತ್ತಿದ್ದರು. ನಾನು ಇಲ್ಲ ಅಂಥ ಹೇಳಿ ಹೊರಟು ಹೋಗುತ್ತಿದ್ದೆ. ಆದರೆ ನನ್ನ ಮನಸ್ಸಲ್ಲಿ ಎಲ್ಲೋ ಒಂದು ಕಡೆ ‘ನನ್‌ ನಂಬರ್‌ ಕೊಟ್ಟಿದ್ರೆ ಚೆನ್ನಾಗಿರುತ್ತಿತ್ತೇನೊ . . .’ ಎಂದು ಅನಿಸುತ್ತಿರುತ್ತದೆ. ನಿಜ ಹೇಳಬೇಕೆಂದ್ರೆ ಆ ಹುಡುಗಿಯರಲ್ಲಿ ಕೆಲವರು ನೋಡೋಕೆ ತುಂಬ ಚೆನ್ನಾಗಿದ್ರು. ಆದ್ದರಿಂದ ‘ಅದರಲ್ಲೇನು ತಪ್ಪು?’ ಅಂತ ಒಮ್ಮೊಮೆ ಅನಿಸುತ್ತದೆ.”—ಕಿರಣ್‌, * 16 ವರ್ಷ.

ಕಿರಣ್‌ನಂತೆ ನಿಮಗೂ ತಪ್ಪು ಮಾಡುವ ಒತ್ತಡ ಬಂದಾಗ ನಿಮ್ಮೊಳಗೇ ಒಂದು ಹೋರಾಟ ನಡೆಯುತ್ತಿರುತ್ತದಾ? ಹೌದಾದರೆ ಆ ಹೋರಾಟದಲ್ಲಿ ನೀವು ಜಯಗಳಿಸಬಹುದು.

ಇದನ್ನು ನೆನಪಿನಲ್ಲಿಡಿ

ತಪ್ಪು ಮಾಡುವ ಒತ್ತಡಕ್ಕೆ ಮಣಿದರೆ ಹಾನಿಯಾಗುವುದು ನಿಮಗೇ

ಎಲ್ಲರಿಗೂ ತಪ್ಪು ಮಾಡುವ ಒತ್ತಡ ಬಂದೇ ಬರುತ್ತದೆ—ದೊಡ್ಡವರಿಗೂ ಬರುತ್ತದೆ. ತಪ್ಪು ಮಾಡಬೇಕೆಂಬ ಒತ್ತಡ ಬೇರೆ ಬೇರೆ ರೀತಿಯಲ್ಲಿ ಬರಬಹುದು. ಯೇಸುವಿನ ಶಿಷ್ಯನಾಗಿದ್ದ ಪೌಲನು ದೊಡ್ಡವನಾಗಿದ್ದರೂ ಅವನಿಗೆ ಈ ಒತ್ತಡ ಬಂತು. ಅವನು ಹೇಳಿದ್ದು: “ನಾನು ದೇವರ ನಿಯಮದಲ್ಲಿ ನಿಜವಾಗಿಯೂ ಆನಂದಿಸುವವನಾಗಿದ್ದೇನೆ. ಆದರೆ ನನ್ನ ಅಂಗಗಳಲ್ಲಿ ಇನ್ನೊಂದು ನಿಯಮವಿರುವುದನ್ನು ನಾನು ನೋಡುತ್ತೇನೆ; ಅದು ನನ್ನ ಮನಸ್ಸಿನ ನಿಯಮಕ್ಕೆ ವಿರುದ್ಧವಾಗಿ ಹೋರಾಡಿ ನನ್ನ ಅಂಗಗಳಲ್ಲಿರುವ ಪಾಪದ ನಿಯಮಕ್ಕೆ ನನ್ನನ್ನು ಸೆರೆಯವನನ್ನಾಗಿ ಮಾಡುತ್ತಿದೆ.” (ರೋಮನ್ನರಿಗೆ 7:22, 23) ಇಂಥ ಒತ್ತಡ ಬಂದರೂ ಅದಕ್ಕೆ ಮಣಿಯುವ ಮನೋಭಾವದ ವಿರುದ್ಧ ಹೋರಾಡಿದನು. ನೀವು ಸಹ ಅದನ್ನೇ ಮಾಡಬಹುದು! ನಿಮ್ಮ ಆಸೆಗಳಿಗೆ ನೀವು ಯಾಕೆ ಅಡಿಯಾಳು ಆಗಿರಬೇಕು? (1 ಕೊರಿಂಥ 9:27) ತಪ್ಪು ಮಾಡುವ ಒತ್ತಡ ಎದುರಿಸಲು ನೀವೀಗಲೇ ಕಲಿತರೆ ತಪ್ಪು ಮಾಡುವುದರಿಂದ ಆಗುವ ನೋವನ್ನು ತಡೆಯಬಹುದು. ಅಷ್ಟುಮಾತ್ರವಲ್ಲ, ಒತ್ತಡವನ್ನು ಎದುರಿಸಿನಿಲ್ಲುವ ಈ ಕೌಶಲದಿಂದ ಮುಂದೆ ನಿಮಗೆ ತುಂಬ ಪ್ರಯೋಜನ ಆಗುವುದು.

ತಪ್ಪು ಮಾಡುವ ಒತ್ತಡವನ್ನು ಹೆಚ್ಚಿಸುವ ವಾರ್ತಾಮಾಧ್ಯಮ. “ಯೌವನ ಸಹಜವಾದ ಇಚ್ಛೆಗಳ” ಬಗ್ಗೆ ಬೈಬಲ್‌ ತಿಳಿಸುತ್ತದೆ. ಈ ಇಚ್ಛೆಗಳು ತುಂಬ ಬಲವಾಗಿರುತ್ತವೆ. (2 ತಿಮೊಥೆಯ 2:22) ಯುವಜನರಿಗೆಂದೇ ತಯಾರಿಸಲಾದ ಚಲನಚಿತ್ರಗಳು, ಹಾಡುಗಳು, ಟಿವಿ ಕಾರ್ಯಕ್ರಮಗಳು, ಪುಸ್ತಕಗಳು ಯೌವನದ ಇಚ್ಛೆಗಳೆಂಬ ಬೆಂಕಿಗೆ ತುಪ್ಪ ಸುರಿಯುತ್ತವೆ. ಹೇಗೆ? ತಪ್ಪುಮಾಡುವ ಒತ್ತಡಕ್ಕೆ ಮಣಿಯುವುದರಲ್ಲಿ ತಪ್ಪೇನಿಲ್ಲ ಎಂದು ಬಿಂಬಿಸುವ ಮೂಲಕ. ಉದಾಹರಣೆಗೆ, ಹೀರೋ ಹೀರೋಯಿನ್‌ ಪ್ರೀತಿಸುತ್ತಿರುವುದಾದರೆ ಅವರಿಬ್ಬರು ಸೆಕ್ಸ್‌ನಲ್ಲಿ ತೊಡಗುವ ಒಂದು ದೃಶ್ಯ ಹೆಚ್ಚಿನ ಸಿನಿಮಾಗಳಲ್ಲಿ ಇದ್ದೇ ಇರುತ್ತದೆ. ಆದರೆ ನಿಜ ಜೀವನದಲ್ಲಿ ಗಂಡುಹೆಣ್ಣಿಗೆ ‘ಶಾರೀರಿಕ ಬಯಕೆಗಳಿಂದ ದೂರವಿರುವ,’ ಅಂದರೆ ಅದಕ್ಕೆ ಮಣಿಯದೇ ಇರುವ ಶಕ್ತಿ ಇದೆ ಎಂದು ಬೈಬಲ್‍ನಲ್ಲಿ ತಿಳಿಸಲಾಗಿದೆ. (1 ಪೇತ್ರ 2:11) ಹಾಗಾಗಿ ತಪ್ಪುಮಾಡುವ ಒತ್ತಡವನ್ನು ಎದುರಿಸಲು ನಿಮ್ಮಿಂದಲೂ ಸಾಧ್ಯ ಎಂದಾಯಿತು! ಆದರೆ ಹೇಗೆ?

ಇದಕ್ಕೇನು ಪರಿಹಾರ?

ನೀವು ಯಾವ ವಿಷಯಗಳಲ್ಲಿ ಬಲಹೀನರು ಎಂದು ಮೊದಲು ತಿಳಿದುಕೊಳ್ಳಿ. ಬಲವಾದ ಸರಪಳಿಯನ್ನು ಮುರಿಯಲು ಅದರಲ್ಲಿರುವ ದುರ್ಬಲವಾದ ಕೊಂಡಿಯೇ ಸಾಕು. ಹಾಗೆಯೇ ಸರಿಯಾದದ್ದನ್ನು ಮಾಡಬೇಕೆಂಬ ನಿಮ್ಮ ಗಟ್ಟಿ ನಿರ್ಧಾರವು ನೀವು ಯಾವ ಅಂಶಗಳಲ್ಲಿ ಬಲಹೀನರಾಗಿದ್ದೀರೊ ಅದರಿಂದಾಗಿ ಮುರಿದುಬೀಳಬಹುದು. ಎಚ್ಚರವಹಿಸಬೇಕಾದ ಯಾವ ಬಲಹೀನ ಅಂಶಗಳು ನಿಮ್ಮಲ್ಲಿವೆ?ಬೈಬಲ್‌ ತತ್ವ: ಯಾಕೋಬ 1:14.

ತಪ್ಪು ಮಾಡುವ ಒತ್ತಡವನ್ನು ನಿರೀಕ್ಷಿಸಿ. ಯಾವ್ಯಾವ ಸನ್ನಿವೇಶಗಳಲ್ಲಿ ತಪ್ಪು ಮಾಡಲು ಒತ್ತಡ ಬರಬಹುದೆಂದು ಮುಂಚೆನೇ ಯೋಚಿಸಿರಿ. ಅಂಥ ಒತ್ತಡ ಬಂದರೆ ಅದನ್ನು ಹೇಗೆ ಎದುರಿಸಬೇಕು ಅಂಥ ಮೊದಲೇ ಮನಸ್ಸಲ್ಲಿ ಅಭ್ಯಾಸಮಾಡಿ.—ಬೈಬಲ್‌ ತತ್ವ: ಜ್ಞಾನೋಕ್ತಿ 22:3.

ಸರಿ ತಪ್ಪಿನ ಬಗ್ಗೆ ನಿಮಗಿರುವ ಅಭಿಪ್ರಾಯ ದೃಢವಾಗಿರಲಿ. ಬೈಬಲಿನಲ್ಲಿ ತಿಳಿಸಲಾಗಿರುವ ಯೋಸೇಫ ಎಂಬವನಿಗೆ ಅನೈತಿಕತೆ ನಡೆಸಲು ಒತ್ತಡ ಬಂತು. ಆಗ ಅವನು “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ” ಎಂದು ಹೇಳಿದನು. (ಆದಿಕಾಂಡ 39:9) “ನಾನು . . . ಹೇಗೆ” ಎಂದು ಯೋಸೇಫ ಹೇಳಿದ ಮಾತು ಯಾವುದು ಸರಿ ಯಾವುದು ತಪ್ಪು ಎನ್ನುವುದರ ಬಗ್ಗೆ ಅವನಿಗಿದ್ದ ಅಭಿಪ್ರಾಯ ದೃಢವಾಗಿತ್ತು ಎಂದು ತೋರಿಸುತ್ತದೆ. ನಿಮಗೂ ಅಂಥದ್ದೇ ದೃಢಾಭಿಪ್ರಾಯ ಇದೆಯಾ?

ನಿಮ್ಮನ್ನು ಬೆಂಬಲಿಸುವವರನ್ನು ಸ್ನೇಹಿತರನ್ನಾಗಿ ಮಾಡಿ. ನಿಮ್ಮಂಥದ್ದೇ ನೈತಿಕ ಮಟ್ಟಗಳಿರುವ ಸ್ನೇಹಿತರೊಂದಿಗೆ ಸಹವಾಸಮಾಡಿ. ಆಗ ತಪ್ಪು ಮಾಡುವ ಒತ್ತಡ ಕಡಿಮೆಯಾಗುತ್ತದೆ. ಅದಕ್ಕೆ ಬೈಬಲಿನಲ್ಲಿ ಹೇಳುತ್ತದೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು.”—ಜ್ಞಾನೋಕ್ತಿ 13:20.

ಒತ್ತಡ ಎದುರಿಸಲು ಕಷ್ಟ ಆಗುವಂಥ ಸನ್ನಿವೇಶಗಳಿಂದ ದೂರ ಇರಿ. ಉದಾಹರಣೆಗೆ:

  • ವಿರುದ್ಧ ಲಿಂಗದ ವ್ಯಕ್ತಿಯೊಟ್ಟಿಗೆ ಒಬ್ಬರೇ ಇರಬೇಡಿ.

  • ಅಶ್ಲೀಲ ಚಿತ್ರ ನೋಡಲು ನಿಮ್ಮ ಮನಸ್ಸು ಎಳೆಯಬಹುದಾದ ಸಮಯ, ಸ್ಥಳದಲ್ಲಿ ಇಂಟರ್‌ನೆಟ್‌ ಬಳಸಬೇಡಿ.

  • ಕೆಲವರ ಮಾತು ಮತ್ತು ನಡತೆ ‘ತಪ್ಪು ಮಾಡುವುದರಲ್ಲೇ ಮಜಾ’ ಎಂಬ ಅಭಿಪ್ರಾಯ ಮೂಡಿಸುತ್ತದೆ. ಅಂಥವರಿಂದ ದೂರ ಇರಿ.

ತಪ್ಪು ಮಾಡುವ ಒತ್ತಡಕ್ಕೆ ಸಿಲುಕದಿರಲು ನಿಮಗೆ ನೀವೇ ಯಾವ ನಿಯಮಗಳನ್ನು ಇಟ್ಟುಕೊಳ್ಳಬಹುದು?—ಬೈಬಲ್‌ ತತ್ವ: 2 ತಿಮೊಥೆಯ 2:22.

ಸಹಾಯಕ್ಕಾಗಿ ಪ್ರಾರ್ಥಿಸಿ. “ನೀವು ಪ್ರಲೋಭನೆಗೆ ಒಳಗಾಗದಂತೆ . . . ಪ್ರಾರ್ಥಿಸುತ್ತಾ ಇರಿ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾಯ 26:41) ತಪ್ಪು ಮಾಡುವ ಒತ್ತಡವನ್ನು ನಾವು ಎದುರಿಸಬೇಕೆನ್ನುವುದೇ ಯೆಹೋವ ದೇವರ ಆಸೆ. ಅದನ್ನು ಮಾಡಲು ಸಹಾಯವನ್ನೂ ಕೊಡುತ್ತಾನೆ. ಬೈಬಲಿನಲ್ಲಿ ಹೇಳುತ್ತದೆ: “ನೀವು ಸಹಿಸಿಕೊಳ್ಳಲು ಅಸಾಧ್ಯವಾಗುವಷ್ಟರ ಮಟ್ಟಿಗೆ ನೀವು ಪ್ರಲೋಭಿಸಲ್ಪಡುವಂತೆ ಆತನು ಅನುಮತಿಸುವುದಿಲ್ಲ; ನೀವು ತಾಳಿಕೊಳ್ಳಲು ಶಕ್ತರಾಗುವಂತೆ ಪ್ರಲೋಭನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನೂ ಆತನು ಸಿದ್ಧಪಡಿಸುವನು.”—1 ಕೊರಿಂಥ 10:13. ▪ (g14-E 10)

^ ಪ್ಯಾರ. 4 ಯಾವುದೇ ಬದ್ಧತೆಯಿಲ್ಲದೆ ಲೈಂಗಿಕ ಸಂಬಂಧ ಇಡುವುದು.

^ ಪ್ಯಾರ. 4 ಹೆಸರನ್ನು ಬದಲಾಯಿಸಲಾಗಿದೆ.