ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜ ನಂಬಿಕೆ ನಿಮಗೆ ಇರಸಾಧ್ಯವಿದೆ

ನಿಜ ನಂಬಿಕೆ ನಿಮಗೆ ಇರಸಾಧ್ಯವಿದೆ

ನಿಜ ನಂಬಿಕೆ ನಿಮಗೆ ಇರಸಾಧ್ಯವಿದೆ

ಸೇರ ಜೇನ್‌ 19 ವರ್ಷ ಪ್ರಾಯದವಳಾಗಿದ್ದಾಗ ಅವಳಿಗೆ ಅಂಡಾಶಯದ ಕ್ಯಾನ್ಸರ್‌ ಇದೆಯೆಂದು ತಿಳಿದುಬಂತು. ಶಸ್ತ್ರಚಿಕಿತ್ಸೆಯ ಬಳಿಕ ಅವಳಿಗೆ ಗುಣವಾದ ಅನಿಸಿಕೆಯಾಯಿತು ಮತ್ತು ಅವಳು ಭವಿಷ್ಯವನ್ನು ಒಳ್ಳೇ ಪ್ರತೀಕ್ಷೆಯಿಂದ ಎದುರುನೋಡಿದಳು. ಅವಳೆಷ್ಟು ಆಶಾವಾದಿಯಾದಳೆಂದರೆ, 20ನೆಯ ವಯಸ್ಸಿನಲ್ಲಿ ವಿವಾಹನಿಶ್ಚಯ ಮಾಡಿಕೊಂಡು, ಮದುವೆಗಾಗಿ ಸಿದ್ಧತೆಗಳನ್ನು ಮಾಡತೊಡಗಿದಳು. ಆದರೆ ಅದೇ ವರ್ಷ ಕ್ಯಾನ್ಸರ್‌ ಮರಳಿಬಂತು. ತನಗೆ ಜೀವಿಸಲು ಕೆಲವೇ ವಾರಗಳಿವೆಯೆಂದು ಅವಳಿಗೆ ತಿಳಿದುಬಂತು. ತನ್ನ 21ನೆಯ ವಯಸ್ಸನ್ನು ಮುಟ್ಟುವುದರೊಳಗೆ 2000ದ ಜೂನ್‌ ತಿಂಗಳಿನಲ್ಲಿ ಸೇರ ಜೇನ್‌ ಮೃತಳಾದಳು.

ಆಸ್ಪತ್ರೆಯಲ್ಲಿ ಸೇರ ಜೇನ್‌ಳನ್ನು ಸಂದರ್ಶಿಸಿದವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದಂಥ ಸಂಗತಿಯು, ಭವಿಷ್ಯದ ಕುರಿತಾದ ಆಕೆಯ ಪ್ರಶಾಂತ ಭರವಸೆಯೇ ಆಗಿತ್ತು. ದೇವರಲ್ಲಿ ಮತ್ತು ದೇವರ ವಾಕ್ಯವಾದ ಬೈಬಲಿನಲ್ಲಿ ಆಕೆಗಿದ್ದ ಗಾಢ ನಂಬಿಕೆಯು ಅವರನ್ನು ಸ್ಪರ್ಶಿಸಿತ್ತು. ತನ್ನ ಭೀಕರ ದುರವಸ್ಥೆಯ ಮಧ್ಯೆಯೂ ಪುನರುತ್ಥಾನದ ನಿರೀಕ್ಷೆಯಲ್ಲಿ ಆಕೆ ನಿಶ್ಚಿತಳಾಗಿದ್ದಳು. ತನ್ನೆಲ್ಲಾ ಸ್ನೇಹಿತರನ್ನು ಪುನಃ ನೋಡುವೆನೆಂಬ ಭರವಸೆ ಆಕೆಗಿತ್ತು. (ಯೋಹಾನ 5:​28, 29) “ನಿಮ್ಮೆಲ್ಲರನ್ನು ದೇವರ ಹೊಸ ಲೋಕದಲ್ಲಿ ನೋಡಿಯೇ ನೋಡುವೆ” ಎಂದಳವಳು.

ಕೆಲವರು ಆ ರೀತಿಯ ನಂಬಿಕೆಯನ್ನು ಭ್ರಾಂತಿಯೆಂದು ಹೇಳಿ ಅದಕ್ಕೆ ಗಮನ ಕೊಡುವುದಿಲ್ಲ. “ಮರಣಾನಂತರದ ಜೀವಿತದಲ್ಲಿನ ನಂಬಿಕೆಯು, ಅಭದ್ರ ಜನರ ನಂಬಿಕೆಯಲ್ಲದೆ ಬೇರೇನೂ ಅಲ್ಲ. ಕೊನೆಯ ತುತೂರಿ ಮೊಳಗಿದಾಗ ಸುಖ ಸಂತೋಷದ ಚಟುವಟಿಕೆ ಇರುವುದೆಂದೂ ಮತ್ತು ತಮಗಿಂತ ಮುಂಚೆ ಸತ್ತವರೊಂದಿಗೆ ಹಾಗೂ ತಮ್ಮ ನಂತರ ಸತ್ತು ಬರುವವರೊಂದಿಗೆ ಏದೆನ್‌ ತೋಟದಂಥ ಪರಿಸರದಲ್ಲಿ ಸಂಭ್ರಮದಲ್ಲಿ ಜೀವಿಸುವರೆಂಬುದು ಕಲ್ಪನೆಯಲ್ಲದೆ ಇನ್ನೇನು?” ಎಂದು ಕೇಳುತ್ತಾನೆ ಲೂಡೂವಿಕ್‌ ಕೆನಡಿ. ಇದಕ್ಕೆ ನಾವೊಂದು ಮರುಸವಾಲನ್ನು ಹಾಕುತ್ತೇವೆ. ಯಾವುದು ಹೆಚ್ಚು ನ್ಯಾಯೋಚಿತ? ಕೆನಡಿ ಸೂಚಿಸುವಂತೆ, ಇರುವ ಜೀವಿತ ಇಷ್ಟು ಮಾತ್ರವೆಂದು ತಿಳಿದು ಅದರ ಪೂರ್ಣ ಸದುಪಯೋಗಮಾಡುವುದೊ ಇಲ್ಲವೆ ದೇವರಲ್ಲಿ ಮತ್ತು ಪುನರುತ್ಥಾನದ ಕುರಿತಾದ ಆತನ ವಾಗ್ದಾನದಲ್ಲಿ ನಂಬಿಕೆ ಇಡುವುದೋ? ಸೇರ ಜೇನ್‌ ದೇವರಲ್ಲಿ ಮತ್ತು ಪುನರುತ್ಥಾನದ ಕುರಿತಾದ ಆತನ ವಾಗ್ದಾನದಲ್ಲಿ ನಂಬಿಕೆಯಿಟ್ಟಳು. ಅಂಥ ನಂಬಿಕೆಯನ್ನು ಆಕೆ ಬೆಳೆಸಿಕೊಂಡದ್ದು ಹೇಗೆ?

‘ದೇವರನ್ನು ಹುಡುಕಿರಿ . . . ಕಂಡುಕೊಳ್ಳುವಿರಿ’

ಒಬ್ಬ ವ್ಯಕ್ತಿಯಲ್ಲಿ ನಂಬಿಕೆ ಮತ್ತು ಭರವಸೆಯನ್ನು ಬೆಳೆಸಿಕೊಳ್ಳಬೇಕಾದರೆ, ನೀವು ಮೊದಲು ಅವನ ಪರಿಚಯಮಾಡಿಕೊಳ್ಳಬೇಕು. ಅವನ ಯೋಚನೆಗಳು ಮತ್ತು ವರ್ತನೆಗಳು ಹೇಗಿವೆಯೆಂಬುದನ್ನು ತಿಳಿದುಕೊಳ್ಳಬೇಕು. ಈ ಕಾರ್ಯವಿಧಾನದಲ್ಲಿ ನಮ್ಮ ಹೃದಯ ಮತ್ತು ಮನಸ್ಸು ಎರಡೂ ಒಳಗೂಡಿರುತ್ತದೆ. ದೇವರಲ್ಲಿ ನಿಜ ನಂಬಿಕೆಯನ್ನು ಬೆಳೆಸಿಕೊಳ್ಳುವುದರಲ್ಲಿ ಸಹ ಇವೆರಡೂ ಸೇರಿರುತ್ತವೆ. ನಿಮಗೆ ಆತನ ಪರಿಚಯವಾಗುವ ಅಗತ್ಯವಿದೆ. ಆತನ ಗುಣಗಳ ಕುರಿತು ಮತ್ತು ವ್ಯಕ್ತಿತ್ವದ ಕುರಿತು ತಿಳಿದುಕೊಳ್ಳಬೇಕು. ಆಗ ಮಾತ್ರ ಆತನು ನುಡಿದ ಮತ್ತು ಮಾಡಿದ ಎಲ್ಲಾ ವಿಷಯಗಳಲ್ಲಿ ಆತನೆಷ್ಟು ಭರವಸಯೋಗ್ಯನೂ ವಿಶ್ವಾಸಪಾತ್ರನೂ ಆಗಿರುತ್ತಾನೆ ಎಂದು ನಮಗೆ ತಿಳಿದುಬರುವುದು.​—ಕೀರ್ತನೆ 9:10; 145:​1-21.

ಕೆಲವರಿಗೆ ಇದು ಅಶಕ್ಯವೆಂದು ತೋರುತ್ತದೆ. ದೇವರು ಒಂದುವೇಳೆ ಅಸ್ತಿತ್ವದಲ್ಲಿದ್ದರೂ, ಆತನು ನಮ್ಮಿಂದ ತುಂಬ ದೂರದಲ್ಲಿದ್ದಾನೆ, ಅಸಂವೇದ್ಯನು ಎಂದವರು ಹೇಳುತ್ತಾರೆ. “ದೇವರು ಸೇರ ಜೇನ್‌ಳಂಥ ಕ್ರೈಸ್ತರಿಗೆ ತೋರುವಷ್ಟು ನೈಜವಾಗಿರುವುದಾದರೆ, ಮಿಕ್ಕವರಾದ ನಮಗೆ ತನ್ನನ್ನು ತಿಳಿಯಪಡಿಸಿಕೊಳ್ಳುವುದಿಲ್ಲವೇಕೆ?” ಎಂದು ಒಬ್ಬ ಸಂಶಯವಾದಿಯು ಕೇಳಬಹುದು. ಆದರೆ ದೇವರು ನಿಜವಾಗಿಯೂ ನಮ್ಮಿಂದ ತೀರ ದೂರದಲ್ಲಿದ್ದಾನೋ? ಆತನನ್ನು ಹುಡುಕುವುದು ಅಸಾಧ್ಯವೊ? ಅಥೇನೆಯ ತತ್ತ್ವಜ್ಞಾನಿಗಳಿಗೆ ಮತ್ತು ಪ್ರಜ್ಞಾಶಾಲಿಗಳಿಗೆ ಕೊಟ್ಟ ತನ್ನ ಭಾಷಣದಲ್ಲಿ ಅಪೊಸ್ತಲ ಪೌಲನು, “ಜಗತ್ತನ್ನೂ ಅದರಲ್ಲಿರುವ ಎಲ್ಲವುಗಳನ್ನು ಉಂಟುಮಾಡಿದ ದೇವರು,” ತನ್ನನ್ನು ‘ಹುಡುಕಿ ಕಂಡುಕೊಳ್ಳಲು’ ಬೇಕಾದದ್ದೆಲ್ಲವನ್ನೂ ಒದಗಿಸಿದ್ದಾನೆಂದೂ ಹೇಳಿದ್ದಾನೆ. ವಾಸ್ತವದಲ್ಲಿ ಪೌಲನಂದದ್ದು: “ಆತನು ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.”​—ಅ. ಕೃತ್ಯಗಳು 17:​24-27.

ಹಾಗಾದರೆ ನಾವಾತನನ್ನು ‘ಹುಡುಕಿ ಕಂಡುಕೊಳ್ಳುವುದು’ ಹೇಗೆ? ತಮ್ಮ ಸುತ್ತುಮುತ್ತಲಿನ ವಿಶ್ವವನ್ನು ಕೇವಲ ಅವಲೋಕಿಸುವ ಮೂಲಕ ಕೆಲವರಿದನ್ನು ಮಾಡಿದ್ದಾರೆ. ಅನೇಕರಿಗೆ ನಮ್ಮ ವಿಶ್ವವು ತಾನೇ, ಸೃಷ್ಟಿಕರ್ತನೊಬ್ಬನು ಇರಲೇಬೇಕೆಂಬುದಕ್ಕೆ ಸಾಕಷ್ಟು ರುಜುವಾತನ್ನು ಕೊಡುತ್ತದೆ. * (ಕೀರ್ತನೆ 19:1; ಯೆಶಾಯ 40:26; ಅ. ಕೃತ್ಯಗಳು 14:​16, 17) ಅವರ ಅಭಿಪ್ರಾಯವು ಅಪೊಸ್ತಲ ಪೌಲನಂತೆಯೇ ಇದೆ. ಅದೇನೆಂದರೆ, “ಕಣ್ಣಿಗೆ ಕಾಣದಿರುವ [ದೇವರ] ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.”​—ರೋಮಾಪುರ 1:20; ಕೀರ್ತನೆ 104:24.

ನಿಮಗೆ ಬೈಬಲಿನ ಅಗತ್ಯವಿದೆ

ಆದರೂ ಸೃಷ್ಟಿಕರ್ತನಲ್ಲಿ ನಿಜ ನಂಬಿಕೆಯನ್ನು ಬೆಳೆಸಿಕೊಳ್ಳಬೇಕಾದರೆ, ಆತನು ಒದಗಿಸಿರುವ ಬೇರೊಂದು ವಿಷಯವು ನಮಗೆ ಬೇಕು. ಅದೇನು? ದೇವರ ಪ್ರೇರಿತ ವಾಕ್ಯವಾದ ಬೈಬಲೇ ಅದು. ಅದರಲ್ಲಿ ಆತನು ತನ್ನ ಚಿತ್ತವನ್ನೂ ಉದ್ದೇಶವನ್ನೂ ಪ್ರಕಟಪಡಿಸಿದ್ದಾನೆ. (2 ತಿಮೊಥೆಯ 3:​16, 17) ಆದರೆ ಕೆಲವರು ಹೀಗೆ ಕೇಳಾರು: “ಬೈಬಲನ್ನು ಅನುಸರಿಸುತ್ತೇವೆಂದು ಹೇಳಿಕೊಳ್ಳುವ ಜನರಿಂದ ನಡಿಸಲ್ಪಡುವ ಭೀಕರ ಸಂಗತಿಗಳನ್ನು ನೋಡುವಾಗ, ಬೈಬಲು ಹೇಳುವ ಯಾವ ಮಾತನ್ನಾದರೂ ನಾವು ಹೇಗೆ ತಾನೇ ನಂಬಬಹುದು?” ಸರಿ, ಕ್ರೈಸ್ತಪ್ರಪಂಚಕ್ಕೆ ಕಪಟತನ, ಕ್ರೌರ್ಯ ಮತ್ತು ಅನೈತಿಕತೆಯ ಧಕ್ಕೆಬರಿಸುವ ದಾಖಲೆಯಿದೆ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಕ್ರೈಸ್ತಪ್ರಪಂಚವು ಬೈಬಲ್‌ ಸಿದ್ಧಾಂತಗಳನ್ನು ಅನುಸರಿಸುವ ಕೇವಲ ನಟನೆಯನ್ನು ಮಾಡುತ್ತದೆ ಎಂಬುದನ್ನು ಬುದ್ಧಿಯುಳ್ಳ ಯಾವನೇ ವ್ಯಕ್ತಿಯು ನೋಡಬಲ್ಲನು.​—ಮತ್ತಾಯ 15:8.

ಅನೇಕರು ತಾವು ದೇವರನ್ನು ಆರಾಧಿಸುತ್ತೇವೆಂದು ಹೇಳಿಕೊಂಡರೂ “ತಮ್ಮನ್ನು ಕೊಂಡುಕೊಂಡ ಒಡೆಯನನ್ನು ಕೂಡಾ ತಾವು ಅರಿಯೆವು” ಎಂದು ಹೇಳುವರೆಂದು ಬೈಬಲು ತಾನೇ ಎಚ್ಚರಿಸಿದೆ. “ಅವರ ನಿಮಿತ್ತ ಸತ್ಯಮಾರ್ಗಕ್ಕೆ ದೂಷಣೆ ಉಂಟಾಗುವದು” ಎಂದು ಅಪೊಸ್ತಲ ಪೇತ್ರನು ಹೇಳಿದ್ದಾನೆ. (2 ಪೇತ್ರ 2:​1, 2) ಇವರು “ಧರ್ಮವನ್ನು ಮೀರಿ ನಡೆಯುವವರು” ಎಂದು ಯೇಸು ಕ್ರಿಸ್ತನು ಹೇಳಿದನು. ಅವರು ತಮ್ಮ ಕೆಟ್ಟ ಕೃತ್ಯಗಳಿಂದ ಸ್ಪಷ್ಟವಾಗಿ ಗುರುತಿಸಲ್ಪಡುವರು. (ಮತ್ತಾಯ 7:​15-23) ಕ್ರೈಸ್ತಪ್ರಪಂಚದ ಕೃತ್ಯಗಳ ಆಧಾರದ ಮೇಲೆ ದೇವರ ವಾಕ್ಯವನ್ನು ತಿರಸ್ಕರಿಸುವುದು, ಪತ್ರವನ್ನು ತಂದುಕೊಟ್ಟವನು ಒಳ್ಳೆಯವನಲ್ಲವೆಂಬ ಕಾರಣಕ್ಕಾಗಿ ವಿಶ್ವಾಸಪಾತ್ರ ಮಿತ್ರನೊಬ್ಬನ ಪತ್ರವನ್ನು ಎಸೆದುಬಿಡುವಂತಿದೆ.

ದೇವರ ವಾಕ್ಯದ ಹೊರತು ನಿಜ ನಂಬಿಕೆಯನ್ನು ಕಟ್ಟುವುದು ಅಸಾಧ್ಯ. ಯೆಹೋವನು ತನ್ನ ಕುರಿತು ತಿಳಿಯಪಡಿಸುವುದು ಬೈಬಲಿನ ಮೂಲಕವಾಗಿ ಮಾತ್ರ. ಕಷ್ಟಸಂಕಟಗಳಿಗೆ ಆತನು ಅನುಮತಿ ಕೊಟ್ಟಿರುವುದೇಕೆ ಮತ್ತು ಈ ಪರಿಸ್ಥಿತಿಯನ್ನು ಹೇಗೆ ತೆಗೆದುಹಾಕುವನು ಎಂಬ ಚಿರಕಾಲದ ಪ್ರಶ್ನೆಗಳಿಗೆ ಉತ್ತರವನ್ನೂ ಆತನು ನೀಡುತ್ತಾನೆ. (ಕೀರ್ತನೆ 119:105; ರೋಮಾಪುರ 15:4) ಸೇರ ಜೇನ್‌ ಬೈಬಲು ದೇವರ ಪ್ರೇರಿತ ವಾಕ್ಯವೆಂದು ನಂಬುವವಳಾದಳು. (1 ಥೆಸಲೊನೀಕ 2:13; 2 ಪೇತ್ರ 1:​19-21) ಹೇಗೆ? ಬರೇ ಅವಳ ತಂದೆತಾಯಿಗಳು ಅವಳು ಹಾಗೆ ನಂಬುವಂತೆ ಹೇಳಿದ್ದರಿಂದಾಗಿ ಅಲ್ಲ. ಬೈಬಲು ದೇವರ ಪ್ರಕಟನೆಗಳ ಅಸದೃಶ ಪುಸ್ತಕವೆಂದು ತೋರಿಸುವ ಎಲ್ಲಾ ಪುರಾವೆಗಳನ್ನು ಪ್ರಾಮಾಣಿಕತೆಯಿಂದ ಪರೀಕ್ಷಿಸಲು ಸಮಯ ತೆಗೆದುಕೊಂಡದ್ದರಿಂದಲೇ ಅವಳು ಅದನ್ನು ನಂಬುವವಳಾದಳು. (ರೋಮಾಪುರ 12:2) ಉದಾಹರಣೆಗೆ, ಬೈಬಲ್‌ ಸಿದ್ಧಾಂತಗಳಿಗೆ ವಿಧೇಯರಾಗುವವರ ಜೀವಿತದಲ್ಲಿ ಬೈಬಲಿನ ಶಕ್ತಿಯುತ ಪ್ರಭಾವವನ್ನು ಆಕೆ ಗಮನಿಸಿದಳು. ಬೈಬಲ್‌​—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್‌) * ಎಂಬಂಥ ಪ್ರಕಾಶನಗಳ ಮೂಲಕ ಬೈಬಲಿನ ದೈವಪ್ರೇರಣೆಯನ್ನು ರುಜುಪಡಿಸುವ ಬಹಳಷ್ಟು ಪುರಾವೆಯನ್ನು ಸಹ ಆಕೆ ಜಾಗರೂಕತೆಯಿಂದ ಪರೀಕ್ಷಿಸಿ ನೋಡಿದಳು.

‘ಕೇಳಿದ ವಾರ್ತೆಯು ನಂಬಿಕೆಗೆ ಆಧಾರ’

ಆದರೂ ಬರೇ ಒಂದು ಬೈಬಲು ಹೊಂದಿರುವುದು ಅಥವಾ ಅದು ದೈವಪ್ರೇರಿತ ಪುಸ್ತಕವೆಂದು ನಂಬುವುದು ಸಹ ಸಾಕಾಗದು. ‘ಕೇಳಿದ ವಾರ್ತೆಯು ನಂಬಿಕೆಗೆ ಆಧಾರ’ ಎಂದು ಅಪೊಸ್ತಲ ಪೌಲನು ಬರೆಯುತ್ತಾನೆ. ಕೇವಲ ಬೈಬಲನ್ನು ಹೊಂದಿರುವುದು ಅಲ್ಲ, ಬದಲಿಗೆ ಬೈಬಲಿಗೆ ಕಿವಿಗೊಡುವುದು ನಂಬಿಕೆಯನ್ನು ಕಟ್ಟುತ್ತದೆ. ದೇವರ ವಾಕ್ಯವನ್ನು ಓದುವ ಮೂಲಕ ಮತ್ತು ಅದನ್ನು ಅಧ್ಯಯನಮಾಡುವ ಮೂಲಕ ನೀವು ದೇವರ ಮಾತುಗಳಿಗೆ ಕಿವಿಗೊಡುತ್ತೀರಿ. ಚಿಕ್ಕ ಮಕ್ಕಳು ಸಹ ಇದನ್ನು ಮಾಡಬಲ್ಲರು. “ಚಿಕ್ಕಂದಿನಿಂದಲೇ” ತಿಮೊಥೆಯನಿಗೆ ಅವನ ತಾಯಿ ಮತ್ತು ಅಜ್ಜಿಯು “ಪರಿಶುದ್ಧಗ್ರಂಥಗಳ” ಕುರಿತು ಕಲಿಸಿದ್ದರೆಂದು ಪೌಲನು ಹೇಳುತ್ತಾನೆ. ಇಲ್ಲಿ ಒಂದು ರೀತಿಯ ಬ್ರೇನ್‌ವಾಷ್‌ ನಡೆದಿತ್ತು ಎಂದಿದರ ಅರ್ಥವೊ? ಇಲ್ಲ! ತಿಮೊಥೆಯನನ್ನು ಯಾವುದೇ ರೀತಿಯ ಕೈಚಳಕದಿಂದಾಗಲಿ ಮೋಸದಿಂದಾಗಲಿ ಅವರು ನಂಬಿಸಲಿಲ್ಲ. ಅವನು ಕೇಳಿಸಿಕೊಂಡು, ಓದಿದ ವಿಷಯಗಳನ್ನು ತಾನೇ ‘ದೃಢವಾಗಿ ನಂಬುವಂತೆ’ ಮನಗಾಣಿಸಲ್ಪಟ್ಟನು.​—2 ತಿಮೊಥೆಯ 1:5; 3:​14, 15.

ಸೇರ ಜೇನ್‌ ಮನಗಾಣಿಸಲ್ಪಟ್ಟದ್ದೂ ಇದೇ ರೀತಿಯಲ್ಲಿ. ಒಂದನೆಯ ಶತಮಾನದ ಬೆರೋಯದವರಂತೆ, ಅವಳು ತನ್ನ ಹೆತ್ತವರಿಂದ ಮತ್ತು ಇತರ ಶಿಕ್ಷಕರಿಂದ ದೊರೆತ “ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿದಳು.” ಚಿಕ್ಕ ಮಗುವಾಗಿದ್ದಾಗ ತನ್ನ ಹೆತ್ತವರು ಏನು ಹೇಳಿದರೊ ಅದರಲ್ಲಿ ಆಕೆ ಸಹಜವಾಗಿಯೇ ಭರವಸೆಯನ್ನು ಇಟ್ಟಿದ್ದಳೆಂಬ ವಿಷಯದಲ್ಲಿ ಸಂಶಯವಿಲ್ಲ. ಆದರೆ ಬೆಳೆದು ದೊಡ್ಡವಳಾದ ಹಾಗೆ, ತಾನು ಕಲಿತದ್ದೆಲ್ಲವನ್ನು ಆಕೆ ಕಣ್ಣುಮುಚ್ಚಿಕೊಂಡು ನಂಬಿಬಿಡಲಿಲ್ಲ. ಅವಳು ಅವರು ‘ಹೇಳುವ ಮಾತು ಹೌದೋ ಏನೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸು’ತ್ತಿದ್ದಳು.​—ಅ. ಕೃತ್ಯಗಳು 17:11.

ನಿಜ ನಂಬಿಕೆಯನ್ನು ನೀವು ಬೆಳೆಸಿಕೊಳ್ಳಬಲ್ಲಿರಿ

ನೀವೂ ನಿಜ ನಂಬಿಕೆಯನ್ನು​—ಇಬ್ರಿಯ ಕ್ರೈಸ್ತರಿಗೆ ಅಪೊಸ್ತಲ ಪೌಲನು ತನ್ನ ಪತ್ರದಲ್ಲಿ ವಿವರಿಸಿದಂಥ ನಂಬಿಕೆಯನ್ನು ಬೆಳೆಸಿಕೊಳ್ಳಬಲ್ಲಿರಿ. ಅಂಥ ನಂಬಿಕೆಯು ‘ನಾವು ನಿರೀಕ್ಷಿಸುವವುಗಳ ವಿಷಯವಾಗಿ ಭರವಸದಿಂದಿರುವದೂ ಕಣ್ಣಿಗೆ ಕಾಣದವುಗಳನ್ನು ನಿಜವೆಂದು ತಿಳುಕೊಳ್ಳುವದೂ ಆಗಿದೆ’ ಎಂದು ಅವನಂದಿದ್ದಾನೆ. (ಇಬ್ರಿಯ 11:​1, ಓರೆ ಅಕ್ಷರಗಳು ನಮ್ಮವು.) ಇಂಥ ನಂಬಿಕೆಯುಳ್ಳವರಾಗಿ ನಿಮ್ಮೆಲ್ಲ ನಿರೀಕ್ಷೆಗಳು ಮತ್ತು ಹಾರೈಕೆಗಳು, ದೇವರು ವಾಗ್ದಾನಿಸಿರುವ ಪುನರುತ್ಥಾನದ ನಿರೀಕ್ಷೆಯು ಕೂಡ ಖಂಡಿತವಾಗಿ ಕೈಗೂಡುವುದೆಂಬ ದೃಢನಿಶ್ಚಯ ನಿಮಗಿರುವುದು. ಅಂಥ ನಿರೀಕ್ಷೆಗಳು ಸ್ಥಿರವಾದ ಭರವಸೆಯ ಮೇಲೆ ಆಧಾರಿಸಲ್ಪಟ್ಟಿವೆ, ಬರೇ ಹಾರೈಕೆಗಳ ಮೇಲಲ್ಲ ಎಂಬ ಮನಗಾಣಿಕೆ ನಿಮಗಾಗುವುದು. ಯೆಹೋವನು ತನ್ನ ವಾಗ್ದಾನಗಳನ್ನು ನೆರವೇರಿಸಲು ಎಂದೂ ತಪ್ಪಿರುವುದಿಲ್ಲವೆಂದು ನಿಮಗೆ ತಿಳಿದುಬರುವುದು. (ಯೆಹೋಶುವ 21:45; 23:14; ಯೆಶಾಯ 55:​10, 11; ಇಬ್ರಿಯ 6:18) ದೇವರ ಹೊಸ ಲೋಕದ ವಾಗ್ದಾನವು ನಿಮಗೆ ಅದೀಗ ಇಲ್ಲಿಯೇ ಇದೆಯೊ ಎಂಬಷ್ಟು ನೈಜವಾಗಿರುವುದು. (2 ಪೇತ್ರ 3:13) ಯೆಹೋವ ದೇವರು, ಯೇಸು ಕ್ರಿಸ್ತನು, ಮತ್ತು ದೇವರ ರಾಜ್ಯ ಇವೆಲ್ಲವು ನಿಜವಾದ ನೈಜತೆಗಳು, ಬರಿಯ ಭ್ರಾಂತಿಗಳಲ್ಲವೆಂದು ನೀವು ನಿಮ್ಮ ನಂಬಿಕೆಯ ನೇತ್ರಗಳಿಂದ ಸ್ಪಷ್ಟವಾಗಿ ಕಾಣುವಿರಿ.

ನಿಜ ನಂಬಿಕೆಯನ್ನು ಬೆಳೆಸಿಕೊಳ್ಳಲು ನಿಮ್ಮಷ್ಟಕ್ಕೇ ಬಿಡಲಾಗಿಲ್ಲ. ಯೆಹೋವನು ತನ್ನ ವಾಕ್ಯವನ್ನು ಸುಲಭವಾಗಿ ಲಭ್ಯವಿರುವಂತೆ ಮಾಡಿದ್ದಾನೆ ಮಾತ್ರವಲ್ಲದೆ, ಒಂದು ಲೋಕವ್ಯಾಪಕ ಕ್ರೈಸ್ತ ಸಭೆಯನ್ನು ಒದಗಿಸಿಕೊಟ್ಟಿದ್ದಾನೆ. ಸುಹೃದಯಿಗಳಾದ ಜನರು ದೇವರಲ್ಲಿ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಲು ಅದು ಮೀಸಲಾಗಿದೆ. (ಯೋಹಾನ 17:20; ರೋಮಾಪುರ 10:​14, 15) ಆ ಸಂಸ್ಥೆಯ ಮೂಲಕ ಯೆಹೋವನು ಕೊಡುವ ಎಲ್ಲಾ ಸಹಾಯವನ್ನು ಸ್ವೀಕರಿಸಿರಿ. (ಅ. ಕೃತ್ಯಗಳು 8:​30, 31) ಮತ್ತು ನಂಬಿಕೆಯು ದೇವರಾತ್ಮದ ಫಲವಾಗಿರುವುದರಿಂದ, ನಿಜ ನಂಬಿಕೆಯನ್ನು ಬೆಳೆಸಿಕೊಳ್ಳಲು ಸಹಾಯಕ್ಕಾಗಿ ಸದಾ ಆ ಪವಿತ್ರಾತ್ಮಕ್ಕೆ ಭಿನ್ನಹವನ್ನು ಮಾಡಿರಿ.​—ಗಲಾತ್ಯ 5:22.

ದೇವರಲ್ಲಿ ಮತ್ತು ಆತನ ವಾಕ್ಯದಲ್ಲಿ ನಂಬಿಕೆಯಿದೆ ಎಂದು ಹೇಳಿಕೊಳ್ಳುವ ಯಾವನನ್ನಾದರೂ ಗೇಲಿಮಾಡುವ ಸಂದೇಹವಾದಿಗಳಿಂದ ಧೈರ್ಯಗೆಡಬೇಡಿ. (1 ಕೊರಿಂಥ 1:​18-21; 2 ಪೇತ್ರ 3:​3, 4) ವಾಸ್ತವದಲ್ಲಿ ನಿಜ ನಂಬಿಕೆಯು, ಅಂಥ ಆಕ್ರಮಣಗಳ ಎದುರಾಗಿ ದೃಢವಾಗಿ ನಿಲ್ಲಲು ಅತ್ಯಂತ ಸಹಾಯಕರವಾಗಿದೆ. (ಎಫೆಸ 6:16) ಸೇರ ಜೇನ್‌ ಅದು ಸತ್ಯವೆಂಬುದನ್ನು ಕಂಡುಕೊಂಡಳು. ಆಸ್ಪತ್ರೆಯಲ್ಲಿ ತನ್ನನ್ನು ನೋಡಲು ಬರುತ್ತಿದ್ದ ಜನರಿಗೆ, ಅವರು ತಮ್ಮ ಸ್ವಂತ ನಂಬಿಕೆಯನ್ನು ಬಲಗೊಳಿಸಲು ಅವಳು ಯಾವಾಗಲೂ ಉತ್ತೇಜನ ನೀಡಿದಳು. “ಸತ್ಯವನ್ನು ನಿಮ್ಮದಾಗಿ ಮಾಡಿಕೊಳ್ಳಿರಿ . . . ದೇವರ ವಾಕ್ಯವನ್ನು ಅಭ್ಯಾಸಿಸಿರಿ. ದೇವರ ಸಂಸ್ಥೆಗೆ ಹತ್ತಿರವಾಗಿ ಉಳಿಯಿರಿ. ಎಡೆಬಿಡದೆ ಪ್ರಾರ್ಥಿಸಿರಿ. ಯೆಹೋವನ ಸೇವೆಯಲ್ಲಿ ಕ್ರಿಯಾಶೀಲರಾಗಿರಿ” ಎಂದನ್ನುತ್ತಿದ್ದಳಾಕೆ.​—ಯಾಕೋಬ 2:​17, 26.

ದೇವರಲ್ಲಿ ಮತ್ತು ಪುನರುತ್ಥಾನದಲ್ಲಿ ಆಕೆಯ ನಂಬಿಕೆಯನ್ನು ಗಮನಿಸುತ್ತಾ ನರ್ಸ್‌ಗಳಲ್ಲಿ ಒಬ್ಬಳು ಅಂದದ್ದು: “ನೀನು ನಿಜವಾಗಿ ಇದನ್ನು ಎಷ್ಟೊಂದು ನಂಬುತ್ತೀಯಲ್ಲಾ.” ಅವಳ ಸಂಕಷ್ಟಗಳ ನಡುವೆಯೂ ಅಷ್ಟೊಂದು ಆಶಾವಾದದ ಹೊರನೋಟವನ್ನು ಅವಳಿಗೆ ಯಾವುದು ಕೊಡುತ್ತದೆಂದು ಕೇಳಲಾಗಿ ಅವಳಂದದ್ದು: “ಯೆಹೋವನಲ್ಲಿ ನನಗಿರುವ ನಂಬಿಕೆಯೇ. ಆತನು ನನ್ನ ನಿಜ ಸ್ನೇಹಿತನು. ನಾನಾತನನ್ನು ಅತಿಯಾಗಿ ಪ್ರೀತಿಸುತ್ತೇನೆ.”

[ಪಾದಟಿಪ್ಪಣಿಗಳು]

^ ಪ್ಯಾರ. 8 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ನಿಮ್ಮ ಕುರಿತಾಗಿ ಚಿಂತಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್‌) ಎಂಬ ಪುಸ್ತಕವನ್ನು ನೋಡಿರಿ.

^ ಪ್ಯಾರ. 12 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿದೆ.

[ಪುಟ 6ರಲ್ಲಿರುವ ಚಿತ್ರ]

“ಚಿಕ್ಕಂದಿನಿಂದಲೂ” ತಿಮೊಥೆಯನಿಗೆ ಅವನ ತಾಯಿ ಮತ್ತು ಅಜ್ಜಿ ‘ಪರಿಶುದ್ಧಗ್ರಂಥಗಳ’ ಕುರಿತು ಕಲಿಸಿದರು

[ಪುಟ 6ರಲ್ಲಿರುವ ಚಿತ್ರ]

ಪ್ರತಿದಿನವೂ ಶಾಸ್ತ್ರಗ್ರಂಥಗಳನ್ನು ಶೋಧಿಸಿದ್ದಕ್ಕಾಗಿ ಬೆರೋಯದವರನ್ನು ಪ್ರಶಂಸಿಸಲಾಯಿತು

[ಕೃಪೆ]

“ಫೋಟೋ-ಡ್ರಾಮಾ ಆಫ್‌ ಕ್ರಿಯೇಷನ್‌”ನಿಂದ, 1914

[ಪುಟ 7ರಲ್ಲಿರುವ ಚಿತ್ರಗಳು]

ಬೈಬಲಿಗೆ ಕಿವಿಗೊಡುವುದು ಮತ್ತು ಅದಕ್ಕನುಸಾರವಾಗಿ ನಡೆಯುವುದು ನಂಬಿಕೆಯನ್ನು ಬೆಳೆಸುತ್ತದೆ, ಕೇವಲ ಬೈಬಲನ್ನು ಹೊಂದಿರುವುದಲ್ಲ

[ಪುಟ 7ರಲ್ಲಿರುವ ಚಿತ್ರ]

“ನಿಮ್ಮೆಲ್ಲರನ್ನು ನಾನು ದೇವರ ಹೊಸ ಲೋಕದಲ್ಲಿ ನೋಡಿಯೇ ನೋಡುವೆ”