ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಜೀವನ ಕಥೆ

ಒಬ್ಬ ತಂದೆಯನ್ನು ಕಳೆದುಕೊಂಡರೂ ಒಬ್ಬ ತಂದೆಯನ್ನು ಪಡೆದುಕೊಂಡೆ

ಒಬ್ಬ ತಂದೆಯನ್ನು ಕಳೆದುಕೊಂಡರೂ ಒಬ್ಬ ತಂದೆಯನ್ನು ಪಡೆದುಕೊಂಡೆ

ನನ್ನ ಅಪ್ಪ ಹುಟ್ಟಿದ್ದು 1899ರಲ್ಲಿ ಆಸ್ಟ್ರಿಯದ ಗ್ರಾಸ್‌ ಎಂಬಲ್ಲಿ. ಒಂದನೇ ವಿಶ್ವ ಯುದ್ಧದ ಸಮಯದಲ್ಲಿ ಅವರಿಗೆ ಹದಿವಯಸ್ಸು. 1939ರಲ್ಲಿ ಎರಡನೇ ವಿಶ್ವ ಯುದ್ಧ ಆರಂಭವಾದ ಸ್ವಲ್ಪದರಲ್ಲೇ ಅವರನ್ನು ಜರ್ಮನ್‌ ಸೇನೆಗೆ ಬಲವಂತವಾಗಿ ಸೇರಿಸಲಾಯಿತು. ರಷ್ಯದಲ್ಲಿ ಹೋರಾಡುತ್ತಿರುವಾಗ 1943ರಲ್ಲಿ ಸತ್ತುಹೋದರು. ಹೀಗೆ ನಾನು ಎರಡು ವರ್ಷದವನಾಗಿದ್ದಾಗ ಸಾವು ಅಪ್ಪನನ್ನು ನನ್ನಿಂದ ಕಸಿದುಕೊಂಡಿತು. ಅವರನ್ನು ನೋಡುವ, ತಿಳಿದುಕೊಳ್ಳುವ ಅವಕಾಶದಿಂದ ವಂಚಿತನಾದೆ. ಶಾಲೆಯಲ್ಲಿ ಎಲ್ಲ ಹುಡುಗರಿಗೂ ಅಪ್ಪ ಇದ್ದಾರೆ, ನನಗೆ ಮಾತ್ರ ಅಪ್ಪ ಇಲ್ಲ ಎಂಬ ನೋವು ಯಾವಾಗಲೂ ಕಾಡುತ್ತಿತ್ತು. ನನಗೂ ಅಪ್ಪ ಬೇಕು ಅಂತ ಅನಿಸುತ್ತಿತ್ತು. ಹದಿವಯಸ್ಸಿಗೆ ಬಂದಾಗ ಸ್ವರ್ಗದಲ್ಲಿರುವ ನಮ್ಮೆಲ್ಲರ ತಂದೆಯ ಬಗ್ಗೆ ಕಲಿತೆ. ಇದು ನನಗೆ ತುಂಬ ಸಾಂತ್ವನ ತಂದಿತು. ಈ ತಂದೆ ಎಷ್ಟು ಶ್ರೇಷ್ಠನೆಂದರೆ ಆತನು ಯಾವತ್ತೂ ಸಾಯುವುದಿಲ್ಲ ಎಂದು ಕಲಿತೆ.

ಬಾಯ್ ಸ್ಕೌಟ್ಸ್‌ನೊಂದಿಗೆ ನನ್ನ ಅನುಭವಗಳು

ಚಿಕ್ಕ ಹುಡುಗನಾಗಿದ್ದಾಗ

ಏಳು ವರ್ಷ ಪ್ರಾಯದಲ್ಲಿ ಬಾಯ್‌ ಸ್ಕೌಟ್ಸ್‌ ಯುವಕರ ಚಳುವಳಿಯ ಸದಸ್ಯನಾದೆ. ಬಾಯ್‌ ಸ್ಕೌಟ್ಸ್‌ ಎಂಬುದು ಒಂದು ಜಗದ್ವಾ್ಯಪಕ ಸಂಘಟನೆ. 1908ರಲ್ಲಿ ಗ್ರೇಟ್‌ ಬ್ರಿಟನ್‍ನಲ್ಲಿ ಆರಂಭವಾಯಿತು. ಅದರ ಸ್ಥಾಪಕ ಬ್ರಿಟಿಷ್‌ ಸೇನೆಯ ಲೆಫ್ಟನೆಂಟ್‌ ಜನರಲ್ ರಾಬರ್ಟ್ ಸ್ಟೀವನ್‌ಸನ್‌ ಸ್ಮಿತ್‌ ಬಾಡೆನ್‌-ಪೌವೆಲ್. 1916ರಲ್ಲಿ ಅವರು ವುಲ್ಫ್ ಕಬ್ಸ್ (ಅಥವಾ ಕಬ್ ಸ್ಕೌಟ್ಸ್‌) ಅನ್ನು ಶುರುಮಾಡಿದರು. ಇದು ನನ್ನ ವಯಸ್ಸಿನ ಎಳೆಯರಿಗಾಗಿತ್ತು.

ವಾರಾಂತ್ಯಗಳಂದು ಹಳ್ಳಿಗಾಡಿನಲ್ಲಿ ಮಾಡುತ್ತಿದ್ದ ಶಿಬಿರವಾಸ ನನಗೆ ತುಂಬ ಇಷ್ಟವಾಗುತ್ತಿತ್ತು. ಗುಡಾರಗಳಲ್ಲಿ ಮಲಗುವುದು, ಸಮವಸ್ತ್ರ ಧರಿಸುವುದು, ನಗಾರಿಯ ತಾಳಕ್ಕೆ ತಕ್ಕ ಪಥಸಂಚಲನ ಇತ್ಯಾದಿ ಮಾಡುತ್ತಿದ್ದೆವು. ಎಲ್ಲಕ್ಕಿಂತ ಹೆಚ್ಚಾಗಿ ಆನಂದಿಸುತ್ತಿದ್ದದ್ದು ಬೇರೆ ಸ್ಕೌಟ್ಸ್‌ ಹುಡುಗರೊಟ್ಟಿಗೆ ಕಾಡಲ್ಲಿ ಆಟಗಳನ್ನಾಡುತ್ತಾ, ರಾತ್ರಿಯಾದಾಗ ಬಯಲಲ್ಲಿ ಬೆಂಕಿ ಹೊತ್ತಿಸಿ, ಅದರ ಸುತ್ತ ಕೂತು ಹಾಡುತ್ತಾ ಕಳೆದ ಸಮಯವನ್ನು. ನಿಸರ್ಗದ ಬಗ್ಗೆಯೂ ಬಹಳಷ್ಟನ್ನು ಕಲಿತೆವು. ಇದರಿಂದಾಗಿ ನಮ್ಮ ಸೃಷ್ಟಿಕರ್ತನ ಕೈಕೆಲಸದ ಬಗ್ಗೆ ನನ್ನಲ್ಲಿ ಮೆಚ್ಚುಗೆ ಹುಟ್ಟಿತು.

ಬಾಯ್‌ ಸ್ಕೌಟ್ಸ್‌ಗಳಿಗೆ ಪ್ರತಿ ದಿನ ಒಂದು ಒಳ್ಳೇ ಕೆಲಸ ಮಾಡುವಂತೆ ಪ್ರೋತ್ಸಾಹಿಸಲಾಗುತ್ತದೆ. ಇದೇ ಅವರ ಧ್ಯೇಯಮಂತ್ರ. “ಸದಾ ಸಿದ್ಧರು” ಎಂಬ ಮಾತುಗಳಿಂದ ನಾವು ಒಬ್ಬರನ್ನೊಬ್ಬರನ್ನು ವಂದಿಸುತ್ತಿದ್ದೆವು. ಇದು ನನಗೆ ತುಂಬ ಹಿಡಿಸಿತು. ನೂರಕ್ಕಿಂತ ಹೆಚ್ಚು ಬಾಲಕರಿದ್ದ ನಮ್ಮ ತಂಡದಲ್ಲಿ ಅರ್ಧದಷ್ಟು ಹುಡುಗರು ಕ್ಯಾಥೊಲಿಕರು, ಇನ್ನರ್ಧ ಪ್ರಾಟೆಸ್ಟಂಟರು. ಒಬ್ಬ ಬೌದ್ಧ ಹುಡುಗನಿದ್ದ.

1920ರಿಂದ ಆರಂಭಿಸಿ, ‘ಜಾಂಬರೀಸ್‌’ ಅಂದರೆ ಅಂತಾರಾಷ್ಟ್ರೀಯ ಸ್ಕೌಟ್‌ ಮೇಳಗಳನ್ನು ಕೆಲವು ವರ್ಷಗಳಿಗೊಮ್ಮೆ ನಡೆಸಲಾಗುತ್ತಿವೆ. ಆಗಸ್ಟ್‌ 1951ರಲ್ಲಿ ಆಸ್ಟ್ರಿಯದ ಬ್ಯಾಟ್‌ಇಶ್‌ ಎಂಬಲ್ಲಿ 7ನೇ ವರ್ಲ್ಡ್ ಸ್ಕೌಟ್‌ ಜಾಂಬರೀಗೆ ಹಾಜರಾದೆ. ನಂತರ ಆಗಸ್ಟ್‌ 1957ರಲ್ಲಿ ಇಂಗ್ಲೆಂಡ್‍ನ ಬಿರ್ಮಿ೦ಗ್ಯಾಮ್‌ ಹತ್ತಿರದ ಸಟನ್‌ ಪಾರ್ಕ್‍ನಲ್ಲಿ 9ನೇ ವರ್ಲ್ಡ್ ಸ್ಕೌಟ್‌ ಜಾಂಬರೀಗೆ ಹಾಜರಾದೆ. ಈ ಎರಡನೆಯ ಜಾಂಬರೀಗೆ 85 ದೇಶ ಹಾಗೂ ಕ್ಷೇತ್ರಗಳಿಂದ ಸುಮಾರು 33,000 ಸ್ಕೌಟ್ಸ್‌ ಬಂದಿದ್ದರು. ಅಲ್ಲದೆ ಆ ಮೇಳದಲ್ಲಿ ನಮ್ಮನ್ನು ನೋಡಲು ಸುಮಾರು 7,50,000 ಜನರು ಬಂದಿದ್ದರು. ಅವರಲ್ಲಿ ಇಂಗ್ಲೆಂಡಿನ ರಾಣಿ ಎಲಿಸಬೇತ್‌ ಸಹ ಒಬ್ಬರು. ನನಗಂತೂ ಅದೊಂದು ಜಗದ್ವಾ್ಯಪಕ ಸಹೋದರತ್ವದಂತಿತ್ತು. ಆದರೆ ಇದಕ್ಕಿಂತಲೂ ಎಷ್ಟೊ ಹೆಚ್ಚು ದೊಡ್ಡದಾದ ಒಂದು ಆಧ್ಯಾತ್ಮಿಕ ಸಹೋದರತ್ವದ ಪರಿಚಯವಾಗಲಿದೆ ಎಂಬುದರ ಬಗ್ಗೆ ನನಗಾಗ ಯಾವುದೇ ಸುಳಿವಿರಲಿಲ್ಲ.

ಯೆಹೋವನ ಸಾಕ್ಷಿಗಳೊಂದಿಗಿನ ಪ್ರಥಮ ಭೇಟಿ

ಅಡುಗೆಭಟನಾಗಿದ್ದ ರೂಡೀ ಟ್ಶಿಗರ್‌ ನನಗೆ ಅನೌಪಚಾರಿಕ ಸಾಕ್ಷಿಕೊಟ್ಟ ಪ್ರಥಮ ವ್ಯಕ್ತಿ

ಆಸ್ಟ್ರಿಯದ ಗ್ರಾಸ್‍ನಲ್ಲಿ ಗ್ರ್ಯಾ೦ಡ್‌ ಹೋಟೆಲ್‌ ವೀಸ್ಲರ್‌ನಲ್ಲಿ ಪರಿಚಾರಕನಾಗಿ ತರಬೇತಿ ಪಡೆಯುತ್ತಿದ್ದೆ. ಅದು 1958ರ ವಸಂತಕಾಲದಲ್ಲಿ ಇನ್ನೇನು ಮುಗಿಯುವುದರಲ್ಲಿತ್ತು. ಆಗ, ನನ್ನ ಸಹಕರ್ಮಿ ಹಾಗೂ  ಅಡುಗೆಭಟನಾಗಿದ್ದ ರುಡಾಲ್ಫ್ ಟ್ಶಿಗರ್‌ ಎಂಬವನು ಅನೌಪಚಾರಿಕವಾಗಿ ಸಾಕ್ಷಿಕೊಟ್ಟನು. ಈ ಮುಂಚೆ ಸತ್ಯದ ಯಾವುದೇ ವಿಷಯ ನನ್ನ ಕಿವಿಗೆ ಬಿದ್ದಿರಲಿಲ್ಲ. ಮೊದಲು ಅವನು ತ್ರಯೈಕ್ಯ ಬೋಧನೆಯ ಮಾತೆತ್ತಿದ. ಅದು ಬೈಬಲ್‌ ಬೋಧನೆಯಲ್ಲ ಎಂದು ಹೇಳಿದ. ಆದರೆ ನಾನು ಅದು ತಪ್ಪಲ್ಲ ಎಂದು ವಾದಿಸಿದೆ. ಹೇಗಾದರೂ ಮಾಡಿ ಅವನು ಹೇಳಿದ್ದು ತಪ್ಪೆಂದು ಸಾಬೀತು ಪಡಿಸಬೇಕೆಂದಿದ್ದೆ. ಅವನೆಂದರೆ ನನಗೆ ತುಂಬ ಇಷ್ಟವಿತ್ತು. ಹಾಗಾಗಿ ಅವನ ಮನವೊಪ್ಪಿಸಿ ಕ್ಯಾಥೊಲಿಕ್‌ ಚರ್ಚಿಗೆ ವಾಪಸ್‌ ತರುವುದೇ ನನ್ನ ಉದ್ದೇಶವಾಗಿತ್ತು.

ರುಡಾಲ್ಫನ್ನು ನಾವು ರೂಡೀ ಎಂದು ಕರೆಯುತ್ತಿದ್ದೆವು. ಅವನು ನನಗಾಗಿ ಒಂದು ಬೈಬಲ್‌ ತರಬೇಕೆಂದಿದ್ದ. ಆದರೆ ಅದು ಕ್ಯಾಥೊಲಿಕ್‌ ಆವೃತ್ತಿಯೇ ಆಗಿರಬೇಕೆಂದು ನಾನು ಹಟಹಿಡಿದಿದ್ದರಿಂದ ಅದನ್ನೇ ತಂದು ಕೊಟ್ಟ. ಅದನ್ನು ಓದಲಾರಂಭಿಸಿದೆ. ಅದರಲ್ಲಿ ರೂಡೀ ಹಾಕಿಟ್ಟಿದ್ದ ಒಂದು ಕರಪತ್ರ ಸಿಕ್ಕಿತು. ಅದನ್ನು ಮುದ್ರಿಸಿದವರು ವಾಚ್‍ಟವರ್‌ ಸೊಸೈಟಿ. ಈ ಕರಪತ್ರದ ಬಗ್ಗೆ ತಕರಾರೆಬ್ಬಿಸಿದೆ. ಇಂಥೆಲ್ಲ ಸಾಹಿತ್ಯ ಮೇಲ್ನೋಟಕ್ಕೆ ಸರಿ ಅನಿಸುತ್ತದೆ ಆದರೆ ನಿಜವಾಗಿ ಸರಿ ಇರುವುದಿಲ್ಲವೆಂದು ರೂಡೀಗೆ ಹೇಳಿದೆ. ಅವನು ಜಾಣತನದಿಂದ ಮುಂದೆ ಬೇರಾವುದೇ ಸಾಹಿತ್ಯವನ್ನು ನನಗೆ ಕೊಡಲಿಲ್ಲ. ಹಾಗಿದ್ದರೂ ಅವನ ಜತೆ ಬೈಬಲ್‌ ಬಗ್ಗೆ ಚರ್ಚಿಸಲು ನನಗೇನು ಅಭ್ಯಂತರ ಇರಲಿಲ್ಲ. ಈ ಚರ್ಚೆಗಳನ್ನು ಸುಮಾರು ಮೂರು ತಿಂಗಳುಗಳ ವರೆಗೆ ಆಗಾಗ್ಗೆ ನಡೆಸಿದೆವು. ಎಷ್ಟೋ ಸಲ ಅವು ಮುಗಿಯುವಾಗ ರಾತ್ರಿ ತುಂಬ ಹೊತ್ತಾಗಿರುತ್ತಿತ್ತು.

ನನ್ನ ಊರಾದ ಗ್ರಾಸ್‍ನಲ್ಲಿ ಹೋಟೆಲ್‌ ತರಬೇತಿ ಮುಗಿಸಿದ ನಂತರ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಸ್ಕೂಲಲ್ಲಿ ಹೆಚ್ಚಿನ ಶಿಕ್ಷಣ ಪಡೆಯಲು ಅಮ್ಮ ಹಣಕೊಟ್ಟರು. ಈ ಸ್ಕೂಲ್‌ ಇದದ್ದು ಆ್ಯಲ್‌್ಪ್ಸ ಪರ್ವತಗಳ ಕಣಿವೆಯಲ್ಲಿರುವ ಬ್ಯಾಟ್‌ಹಾಫ್‌ಗಾಸ್ಟಿನ್‌ ಎಂಬ ಪಟ್ಟಣದಲ್ಲಿ. ಹಾಗಾಗಿ ಅಲ್ಲಿಗೆ ಹೋದೆ. ಈ ಸ್ಕೂಲಿಗೆ ಬ್ಯಾಟ್‌ಹಾಫ್‌ಗಾಸ್ಟಿನ್‍ನಲ್ಲಿದ್ದ ಗ್ರ್ಯಾ೦ಡ್‌ ಹೋಟೆಲಿನೊಟ್ಟಿಗೆ ಸಂಪರ್ಕವಿತ್ತು. ಸ್ಕೂಲಲ್ಲಿ ಕಲಿತ ವಿಷಯಗಳಿಗೆ ಪೂರಕವಾಗಿ ಅನುಭವ ಪಡೆಯಲು ಒಮ್ಮೊಮ್ಮೆ ಆ ಹೋಟೆಲಲ್ಲಿ ಕೆಲಸಮಾಡುತ್ತಿದ್ದೆ.

ಇಬ್ಬರು ಮಿಷನರಿ ಸಹೋದರಿಯರ ಭೇಟಿ

ಇಲ್ಸಾ ಅಂಟರ್‌ಡಾರ್ಫರ್‌ ಮತ್ತು ಎಲ್‌ಫ್ರೀಡ್‌ ಲೊರ್‌ 1958ರಲ್ಲಿ ನನ್ನೊಟ್ಟಿಗೆ ಬೈಬಲ್‌ ಅಧ್ಯಯನ ಮಾಡಲಾರಂಭಿಸಿದರು

ರೂಡೀ ನನ್ನ ಹೊಸ ವಿಳಾಸವನ್ನು ವಿಯೆನ್ನಾದಲ್ಲಿರುವ ಬ್ರಾಂಚ್‌ ಆಫೀಸ್‌ಗೆ ಕಳುಹಿಸಿದ. ಬ್ರಾಂಚ್‌ ಆಫೀಸ್‌ ಇದನ್ನು ಇಲ್ಸಾ ಅಂಟರ್‌ಡಾರ್ಫರ್‌ ಮತ್ತು ಎಲ್‌ಫ್ರೀಡ್‌ ಲೊರ್‌ ಎಂಬ ಇಬ್ಬರು ಮಿಷನರಿ ಸಹೋದರಿಯರಿಗೆ ಕಳುಹಿಸಿತು. ನಾನು ಕೆಲಸಮಾಡುತ್ತಿದ್ದ ಹೋಟೆಲಿನ ರಿಸೆಪ್ಶನಿಸ್ಟ್‌ ಒಂದು ದಿನ ನನಗೆ ಫೋನ್‌ ಮಾಡಿ, ಇಬ್ಬರು ಮಹಿಳೆಯರು ನನ್ನ ಜೊತೆ ಮಾತಾಡಲಿಕ್ಕಾಗಿ ಹೊರಗೆ ಕಾರಲ್ಲಿ ಕಾಯುತ್ತಿದ್ದಾರೆಂದು ಹೇಳಿದರು. ನಾನು ತಬ್ಬಿಬ್ಬಾದೆ. ಯಾಕೆಂದರೆ ಅವರು ಯಾರು, ಯಾಕೆ ಬಂದಿದ್ದಾರೆಂದು ಗೊತ್ತಿರಲಿಲ್ಲ. ಹಾಗಿದ್ದರೂ ಹೊರಗೆ ಹೋಗಿ ಭೇಟಿಯಾದೆ. ಎರಡನೇ ವಿಶ್ವ ಯುದ್ಧದ ಮುಂಚೆ ಸಾಕ್ಷಿಗಳ ಕೆಲಸದ ಮೇಲೆ ನಿಷೇಧವಿದ್ದಾಗ ನಾಸಿ ಆಳ್ವಿಕೆಯಡಿ ಇದ್ದ ಜರ್ಮನಿಯಲ್ಲಿ ಈ ಸಹೋದರಿಯರು ಗುಟ್ಟಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಹಿತ್ಯ ಕೊಂಡೊಯ್ಯುತ್ತಿದ್ದರೆಂದು ನನಗೆ ಆಮೇಲೆ ಗೊತ್ತಾಯಿತು. ಎರಡನೇ ವಿಶ್ವ ಯುದ್ಧ ಶುರುವಾಗುವುದಕ್ಕೆ ಮುಂಚೆಯೇ ಅವರನ್ನು ಜರ್ಮನಿಯ ಗುಪ್ತ ಪೊಲೀಸರು (ಗೆಸ್ಟಾಪೊ) ಹಿಡಿದು ಲಿಕ್ಟೆನ್‌ಬರ್ಗ್‌ ಸೆರೆಶಿಬಿರಕ್ಕೆ ಕಳುಹಿಸಿದರು. ಆಮೇಲೆ ಯುದ್ಧದ ಸಮಯದಲ್ಲಿ ಅವರನ್ನು ಬರ್ಲಿನ್‌ ಹತ್ತಿರವಿದ್ದ ರಾವೆನ್ಸ್‌ಬ್ರುಕ್‌ ಶಿಬಿರಕ್ಕೆ ವರ್ಗಾಯಿಸಲಾಯಿತು.

ನನ್ನ ಅಮ್ಮನ ವಯಸ್ಸಿನವರಾಗಿದ್ದ ಆ ಸಹೋದರಿಯರ ಬಗ್ಗೆ ನನಗೆ ಗೌರವವಿತ್ತು. ಹಾಗಾಗಿ ಅವರ ಜೊತೆ ಚರ್ಚೆಗಳನ್ನು ಮಾಡಿ, ಕೆಲವು ವಾರಗಳ ನಂತರ ಇನ್ನು ಚರ್ಚೆ ಬೇಡವೆಂದು ಹೇಳಿ ಅವರ ಸಮಯ ಪೋಲು ಮಾಡಲು ಮನಸ್ಸಾಗಲಿಲ್ಲ. ಆದ್ದರಿಂದ ‘ಅಪೊಸ್ತಲರ ಪರಂಪರೆ’ ಎಂಬ ಕ್ಯಾಥೊಲಿಕ್‌ ಬೋಧನೆಗೆ ಸಂಬಂಧಪಟ್ಟ ವಚನಗಳ ಪಟ್ಟಿಯನ್ನು ತಂದುಕೊಡಲು ಹೇಳಿದೆ. ನಾನದನ್ನು ಸ್ಥಳೀಯ ಪಾದ್ರಿಗೆ ತೋರಿಸಿ ಅವರ ಜೊತೆ ಚರ್ಚಿಸುವೆ ಎಂದು ತಿಳಿಸಿದೆ. ಆಗ ನನಗೆ ಸತ್ಯ ತಿಳಿದುಬರುವುದು ಎಂಬುದು ನನ್ನ ಅನಿಸಿಕೆಯಾಗಿತ್ತು.

ಸ್ವರ್ಗದಲ್ಲಿರುವ ನಿಜವಾದ ಪವಿತ್ರ ತಂದೆ ಬಗ್ಗೆ ಸತ್ಯವನ್ನು ಕಲಿತದ್ದು

ಅಪೊಸ್ತಲ ಪೇತ್ರನು ಮೊದಲ ಪೋಪ್‌ ಆಗಿದ್ದಾನೆ ಮತ್ತು ಬೇರೆಲ್ಲ ಪೋಪರಿಗೆ ಅವನಿಂದಲೇ ಅಧಿಕಾರ ಸಿಕ್ಕಿದೆ ಎನ್ನುವುದು ‘ಅಪೊಸ್ತಲರ ಪರಂಪರೆ’ ಎಂಬ ರೋಮನ್‌ ಕ್ಯಾಥೊಲಿಕರ ಬೋಧನೆಯಾಗಿದೆ. (ಮತ್ತಾಯ 16:18, 19ರಲ್ಲಿರುವ ಯೇಸುವಿನ ಮಾತುಗಳನ್ನು ಚರ್ಚು ತಪ್ಪಾಗಿ ವಿವರಿಸುತ್ತದೆ.) ಬೋಧನೆಗಳ ವಿಷಯದಲ್ಲಿ ಪೋಪನು ಯಾವತ್ತೂ ತಪ್ಪು ಮಾಡಲಾರ ಎನ್ನುವುದು ಕ್ಯಾಥೊಲಿಕ್‌ ಚರ್ಚಿನ  ಇನ್ನೊಂದು ಬೋಧನೆ. ನಾನು ಇದನ್ನೇ ನಂಬುತ್ತಿದ್ದೆ. ಕ್ಯಾಥೊಲಿಕರು ‘ಪವಿತ್ರ ತಂದೆ’ ಎಂದು ಕರೆಯುವ ಪೋಪನು ಬೋಧನೆಗಳ ವಿಷಯದಲ್ಲಿ ತಪ್ಪುಮಾಡಲು ಸಾಧ್ಯವಿಲ್ಲವಾದರೆ ಅವನು ಘೋಷಿಸಿರುವ ತ್ರಯೈಕ್ಯ ಬೋಧನೆ ಸಹ ಸತ್ಯ. ಅವನು ತಪ್ಪುಮಾಡುವವನಾಗಿದ್ದರೆ ಮಾತ್ರ ಆ ಬೋಧನೆಯೂ ಸುಳ್ಳಾಗಿರುತ್ತೆಂದು ನೆನಸುತ್ತಿದ್ದೆ. ಅನೇಕ ಕ್ಯಾಥೊಲಿಕರಿಗೆ ‘ಅಪೊಸ್ತಲರ ಪರಂಪರೆ’ ಕುರಿತ ಬೋಧನೆ ಅತೀ ಪ್ರಾಮುಖ್ಯ ಬೋಧನೆ. ಇತರ ಕ್ಯಾಥೊಲಿಕ್‌ ಬೋಧನೆಗಳು ಸರಿಯಾ ತಪ್ಪಾ ಎಂಬುದು ಈ ಬೋಧನೆಯ ಮೇಲೆ ಹೊಂದಿಕೊಂಡಿದೆ!!

ನಾನು ಪಾದ್ರಿ ಬಳಿ ಹೋದಾಗ ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲು ಅವನಿಂದಾಗಲಿಲ್ಲ. ಅಲ್ಲಿನ ಶೆಲ್ಫ್ವೊಂದರಿಂದ ‘ಅಪೊಸ್ತಲರ ಪರಂಪರೆ’ ವಿಷಯವಾದ ಕ್ಯಾಥೊಲಿಕ್‌ ಬೋಧನೆಯ ಕುರಿತ ಪುಸ್ತಕವನ್ನು ನನಗೆ ಕೊಟ್ಟನು. ಅದನ್ನು ಮನೆಗೆ ತಂದು ಅವನು ಹೇಳಿದಂತೆ ಓದಲಾರಂಭಿಸಿದೆ. ಆದರೆ ಮನಸ್ಸಲ್ಲಿ ಇನ್ನಷ್ಟು ಪ್ರಶ್ನೆಗಳು ಎದ್ದು ಅವನ ಬಳಿ ಮತ್ತೆ ಹೋದೆ. ಕೊನೆಗೆ ನನ್ನ ಪ್ರಶ್ನೆಗಳನ್ನು ಉತ್ತರಿಸಲಾಗದೆ ಪಾದ್ರಿ ಹೀಗಂದನು: “ನಾನು ನಿನಗೆ ಮನವರಿಕೆಮಾಡಲಾರೆ. ನೀನು ನನಗೆ ಮನವರಿಕೆ ಮಾಡಲಾರಿ. . . . ಹೇಗೂ ನಿನಗೆ ಒಳ್ಳೇದಾಗಲಿ!” ನನ್ನ ಜೊತೆ ಇನ್ನು ಮುಂದೆ ಚರ್ಚೆಗಳನ್ನು ಮಾಡಲು ಅವನಿಗೆ ಮನಸ್ಸಿರಲಿಲ್ಲ.

ಆಗ ನಾನು ಇಲ್ಸಾ ಮತ್ತು ಎಲ್‌ಫ್ರೀಡ್‌ ಜೊತೆ ಬೈಬಲ್‌ ಅಧ್ಯಯನಕ್ಕಾಗಿ ಸಿದ್ಧನಾದೆ. ಅವರು ನನಗೆ ಸ್ವರ್ಗದಲ್ಲಿರುವ ನಿಜವಾದ ಪವಿತ್ರ ತಂದೆ ಯೆಹೋವ ದೇವರ ಬಗ್ಗೆ ಬಹಳಷ್ಟನ್ನು ಕಲಿಸಿದರು. (ಯೋಹಾ. 17:11) ಆ ಸಮಯದಲ್ಲಿ ಅಲ್ಲಿ ಒಂದು ಸಭೆ ಇರಲಿಲ್ಲ. ಹಾಗಾಗಿ ಈ ಇಬ್ಬರು ಸಹೋದರಿಯರು ಸತ್ಯದಲ್ಲಿ ಆಸಕ್ತಿಯಿದ್ದ ಒಂದು ಕುಟುಂಬದ ಮನೆಯಲ್ಲಿ ಕೂಟಗಳನ್ನು ನಡೆಸುತ್ತಿದ್ದರು. ಹಾಜರಾಗುತ್ತಿದ್ದವರು ತುಂಬ ಕಡಿಮೆ ಮಂದಿ. ಮುಂದಾಳತ್ವ ವಹಿಸಲು ದೀಕ್ಷಾಸ್ನಾನಿತ ಸಹೋದರರಿಲ್ಲದಿದ್ದ ಕಾರಣ ಆ ಸಹೋದರಿಯರೇ ಹೆಚ್ಚಾಗಿ ಕೂಟದ ಭಾಗಗಳನ್ನು ನಿರ್ವಹಿಸುತ್ತಿದ್ದರು. ಎಲ್ಲಾದರೊಮ್ಮೆ ಒಬ್ಬ ಸಹೋದರ ಬೇರೊಂದು ಸ್ಥಳದಿಂದ ಬಂದು, ಬಾಡಿಗೆಗೆ ತೆಗೆದುಕೊಂಡ ಒಂದು ಜಾಗದಲ್ಲಿ ಸಾರ್ವಜನಿಕ ಭಾಷಣ ಕೊಡುತ್ತಿದ್ದನು.

ಶುಶ್ರೂಷೆಯಲ್ಲಿ ಪ್ರಥಮ ಹೆಜ್ಜೆಗಳು

ಇಲ್ಸಾ ಮತ್ತು ಎಲ್‌ಫ್ರೀಡ್‌ 1958ರ ಅಕ್ಟೋಬರ್‌ನಲ್ಲಿ ನನ್ನ ಬೈಬಲ್‌ ಅಧ್ಯಯನ ಆರಂಭಿಸಿದರು. ಮೂರು ತಿಂಗಳ ಬಳಿಕ ಅಂದರೆ 1959ರ ಜನವರಿಯಲ್ಲಿ ನಾನು ದೀಕ್ಷಾಸ್ನಾನ ತೆಗೆದುಕೊಂಡೆ. ಅದಕ್ಕೆ ಮುಂಚೆ ನಾನವರಿಗೆ, ಸಾರುವ ಕೆಲಸವನ್ನು ಹೇಗೆ ಮಾಡಬೇಕೆಂದು ನೋಡಲು ಅವರ ಜೊತೆ ಮನೆಮನೆ ಸೇವೆಗೆ ಬರಬಹುದಾ ಎಂದು ಕೇಳಿದೆ. (ಅ. ಕಾ. 20:20) ಮೊದಲ ಬಾರಿ ಅವರ ಜೊತೆ ಹೋದ ಬಳಿಕ ಸೇವೆಮಾಡಲು ನನಗೊಂದು ಟೆರಿಟೊರಿ ಕೊಡುವಂತೆ ವಿನಂತಿಸಿದೆ. ನನಗೊಂದು ಹಳ್ಳಿಯನ್ನು ನೇಮಿಸಿದರು. ಅಲ್ಲಿ ಒಬ್ಬನೇ ಮನೆಯಿಂದ ಮನೆ ಸೇವೆಗೆ ಹೋಗಿ, ಆಸಕ್ತ ಜನರ ಪುನರ್ಭೇಟಿಗಳನ್ನೂ ಮಾಡುತ್ತಿದ್ದೆ. ಮನೆಮನೆಯ ಶುಶ್ರೂಷೆಯಲ್ಲಿ ನಾನು ಇನ್ನೊಬ್ಬ ಸಹೋದರನೊಂದಿಗೆ ಪ್ರಪ್ರಥಮ ಬಾರಿ ಹೋಗಲು ಅವಕಾಶ ಸಿಕ್ಕಿದ್ದು ನಮ್ಮ ಸರ್ಕಿಟ್‌ ಮೇಲ್ವಿಚಾರಕರೊಂದಿಗೆ!

1960ರಲ್ಲಿ ಹೋಟೆಲ್‌ ತರಬೇತಿ ಮುಗಿಸಿದೆ. ನನ್ನ ಸಂಬಂಧಿಕರಿಗೆ ಬೈಬಲ್‌ ಸತ್ಯಗಳನ್ನು ಕಲಿಸಲೆಂದು ನನ್ನ ಊರಿಗೆ ಹಿಂದಿರುಗಿದೆ. ಇಲ್ಲಿ ವರೆಗೂ ಒಬ್ಬರೂ ಸತ್ಯಕ್ಕೆ ಬಂದಿಲ್ಲ. ಆದರೆ ಕೆಲವರು ಈಗ ಆಸಕ್ತಿ ತೋರಿಸುತ್ತಿದ್ದಾರೆ.

ಪೂರ್ಣಸಮಯ ಸೇವೆಯ ಜೀವನ

20-30ರೊಳಗಿನ ಪ್ರಾಯದಲ್ಲಿ

1961ರಲ್ಲಿ ಬ್ರಾಂಚ್‌ ಆಫೀಸಿನಿಂದ ಸಭೆಗಳಿಗೆ ಬಂದ ಪತ್ರಗಳು ಪಯನೀಯರ್‌ ಸೇವೆಯನ್ನು ಉತ್ತೇಜಿಸಿದವು. ಅವಿವಾಹಿತನಾಗಿದ್ದ ನನಗೆ ಒಳ್ಳೇ ಆರೋಗ್ಯವೂ ಇದ್ದ ಕಾರಣ ಪಯನೀಯರ್‌ ಸೇವೆಮಾಡದೆ ಇರಲು ಯಾವುದೇ ಕಾರಣವಿಲ್ಲ ಎಂದನಿಸಿತು. ನಮ್ಮ ಸರ್ಕಿಟ್‌ ಮೇಲ್ವಿಚಾರಕರಾದ ಕರ್ಟ್ ಕುನ್‌ರೊಟ್ಟಿಗೆ ಮಾತಾಡಿದೆ. ಪಯನೀಯರ್‌ ಸೇವೆಯಲ್ಲಿ ತುಂಬ ಸಹಾಯವಾಗುವ ಕಾರನ್ನು ಖರೀದಿಸಲಿಕ್ಕಾಗಿ ನಾನು ಇನ್ನೂ ಕೆಲವು ತಿಂಗಳು ಕೆಲಸಮಾಡಿದರೆ ಹೇಗಿರಬಹುದೆಂದು ಅವರನ್ನು ಕೇಳಿದೆ. ಅವರೇನಂದರು ಗೊತ್ತೇ? “ಪೂರ್ಣ ಸಮಯದ ಸೇವೆಮಾಡಲಿಕ್ಕಾಗಿ ಯೇಸುವಿಗೆ ಮತ್ತು ಅಪೊಸ್ತಲರಿಗೆ ಕಾರ್‌ ಬೇಕಾಗಿತ್ತಾ?” ಅಷ್ಟೇ! ಅದರಲ್ಲೇ ನನಗೆ ಉತ್ತರ ಸಿಕ್ಕಿತು. ಸಾಧ್ಯವಾದಷ್ಟು ಬೇಗನೆ ಪಯನೀಯರ್‌ ಸೇವೆ ಶುರುಮಾಡಲು ಯೋಜನೆಮಾಡಿದೆ. ಆದರೆ ನಾನು ರೆಸ್ಟಾರೆಂಟಲ್ಲಿ ಪ್ರತಿ ವಾರ 72 ತಾಸು ಕೆಲಸಮಾಡುತ್ತಿದ್ದ ಕಾರಣ, ಮೊದಲು ಕೆಲವೊಂದು ಹೊಂದಾಣಿಕೆಗಳನ್ನು ಮಾಡಬೇಕಾಯಿತು.

72 ತಾಸುಗಳ ಬದಲು 60 ತಾಸು ಕೆಲಸಮಾಡಬಹುದಾ ಎಂದು ಧಣಿಗೆ ಕೇಳಿದೆ. ಅವರು ಒಪ್ಪಿದರು. ಜೊತೆಗೆ ಮುಂಚೆ ಕೊಡುತ್ತಿದ್ದಷ್ಟೇ ಸಂಬಳ ಕೊಟ್ಟರು. ಸ್ವಲ್ಪ ಸಮಯ ನಂತರ, ನಾನು ವಾರದಲ್ಲಿ ಬರೀ 48 ತಾಸು ಕೆಲಸಮಾಡಬಹುದಾ ಎಂದು ಕೇಳಿದೆ. ಅದಕ್ಕೂ ತಲೆದೂಗಿದರು. ಸಂಬಳವನ್ನೂ ಕಡಿಮೆಮಾಡಲಿಲ್ಲ. ಮುಂದೆ ಪ್ರತಿ ವಾರ ಬರೀ 36 ತಾಸು, ಅಂದರೆ 6 ದಿನ 6 ತಾಸು ಕೆಲಸಮಾಡಲು ಅನುಮತಿ ಕೊಡಬಹುದಾ ಎಂದು ಕೇಳಿದೆ. ಇದಕ್ಕೂ ಹೂ೦ಗುಟ್ಟಿದರು. ಆಶ್ಚರ್ಯದ ಸಂಗತಿಯೇನೆಂದರೆ ನನ್ನ ಸಂಬಳವನ್ನು ಧಣಿ ಸ್ವಲ್ಪವೂ  ಕಡಿಮೆಮಾಡಲಿಲ್ಲ!! ನಾನು ಕೆಲಸ ಬಿಟ್ಟುಹೋಗುವುದು ಅವರಿಗೆ ಇಷ್ಟವಿಲ್ಲವೆಂದು ತೋರುತ್ತಿತ್ತು. ನನ್ನ ಈಗಿನ ಕೆಲಸದ ಸಮಯದಿಂದಾಗಿ ರೆಗ್ಯುಲರ್‌ ಪಯನೀಯರ್‌ ಸೇವೆ ಮಾಡಲಾರಂಭಿಸಿದೆ. ಆಗ ರೆಗ್ಯುಲರ್‌ ಪಯನೀಯರರು ತಿಂಗಳಿಗೆ 100 ತಾಸು ಸೇವೆಮಾಡಬೇಕಾಗಿತ್ತು.

ನಾಲ್ಕು ತಿಂಗಳ ನಂತರ ನನ್ನನ್ನು ವಿಶೇಷ ಪಯನೀಯರ್‌ ಮತ್ತು ಸಭಾ ಸೇವಕನಾಗಿ ನೇಮಿಸಲಾಯಿತು. ನನ್ನ ನೇಮಕವಿದ್ದದ್ದು, ಕಾರಿಂತ್ಯಾ ಪ್ರಾಂತದ ಶ್ಪಿಟಾಲ್‌ ಅನ್‌ ಡಾರ್‌ ಡ್ರೌ ಪಟ್ಟಣದ ಒಂದು ಚಿಕ್ಕ ಸಭೆಯಲ್ಲಿ. ಆ ಕಾಲದಲ್ಲಿ ವಿಶೇಷ ಪಯನೀಯರರು ತಿಂಗಳಿಗೆ 150 ತಾಸು ಸೇವೆಮಾಡಬೇಕಿತ್ತು. ನನಗೆ ಪಯನೀಯರ್‌ ಸಂಗಡಿಗನಿರಲಿಲ್ಲ. ಆದರೆ ಗೆಟ್ರೂಡ್‌ ಲಾಬ್‍ನರ್‌ ಎಂಬ ಸಹೋದರಿ ನನಗೆ ಶುಶ್ರೂಷೆಯಲ್ಲಿ ಬೆಂಬಲ ಕೊಡುತ್ತಿದ್ದರು. ಇದು ನನಗೆ ತುಂಬ ಅಮೂಲ್ಯವಾಗಿತ್ತು. ಈ ಸಹೋದರಿ ಸಭಾ ಸೇವಕನ ಸಹಾಯಕಿ ಆಗಿದ್ದರು. *

ನೇಮಕದಲ್ಲಿ ಒಂದರ ನಂತರ ಒಂದು ಬದಲಾವಣೆಗಳು

1963ರಲ್ಲಿ ನನಗೆ ಸರ್ಕಿಟ್‌ ಕೆಲಸದಲ್ಲಿ ತೊಡಗುವಂತೆ ಹೇಳಲಾಯಿತು. ಒಮ್ಮೊಮ್ಮೆ ಒಂದು ಸಭೆಯಿಂದ ಇನ್ನೊಂದು ಸಭೆಗೆ ಹೋಗಲು ಭಾರವಾದ ಸೂಟುಕೇಸುಗಳನ್ನು ಹೊತ್ತು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಹೆಚ್ಚಿನ ಸಹೋದರರಿಗೆ ಸ್ವಂತ ಕಾರುಗಳಿರಲಿಲ್ಲ. ಆದ್ದರಿಂದ ನನ್ನನ್ನು ರೈಲು ನಿಲ್ದಾಣದಿಂದ ಕರಕೊಂಡು ಹೋಗಲು ಅವರಿಂದ ಆಗುತ್ತಿರಲಿಲ್ಲ. ಅವರ ಮುಂದೆ ‘ಮೆರೆಯಲು’ ನನಗೆ ಮನಸ್ಸಿರಲಿಲ್ಲ. ಹಾಗಾಗಿ ಟ್ಯಾಕ್ಸಿಯಲ್ಲಿ ಹೋಗುವ ಬದಲು ನಿಲ್ದಾಣದಿಂದ ತಂಗಬೇಕಾಗಿದ್ದ ಸ್ಥಳಕ್ಕೆ ನಡೆದೇ ಹೋಗುತ್ತಿದ್ದೆ.

1965ರಲ್ಲಿ ನನಗೆ ಗಿಲ್ಯಡ್‌ ಶಾಲೆಯ 41ನೇ ತರಗತಿಗೆ ಹಾಜರಾಗಲು ಆಮಂತ್ರಣ ಸಿಕ್ಕಿತು. ನಾನಾಗ ಅವಿವಾಹಿತನಾಗಿದ್ದೆ. ನನ್ನ ಸಹಪಾಠಿಗಳಲ್ಲೂ ಹೆಚ್ಚಿನವರು ಅವಿವಾಹಿತರಿದ್ದರು. ಪದವಿಪ್ರಾಪ್ತಿಯ ಸಮಯದಲ್ಲಿ ನನ್ನನ್ನು ವಾಪಸ್‌ ನನ್ನ ದೇಶ ಆಸ್ಟ್ರಿಯದಲ್ಲಿ ಸರ್ಕಿಟ್‌ ಕೆಲಸ ಮಾಡಲು ನೇಮಿಸಲಾಯಿತು. ನನಗೆ ಪರಮಾಶ್ಚರ್ಯ! ಆದರೆ ಅಮೆರಿಕದಿಂದ ಹೊರಡುವ ಮುನ್ನ, ಒಬ್ಬ ಸರ್ಕಿಟ್‌ ಮೇಲ್ವಿಚಾರಕರೊಂದಿಗೆ ನಾಲ್ಕು ವಾರ ಕೆಲಸಮಾಡುವಂತೆ ಹೇಳಲಾಯಿತು. ಈ ಸಹೋದರರ ಹೆಸರು ಆ್ಯಂತನಿ ಕೊಂಟಿ. ತುಂಬ ಪ್ರೀತಿ ತೋರಿಸುವ ಸಹೋದರರು. ಕ್ಷೇತ್ರ ಸೇವೆಯೆಂದರೆ ಅವರಿಗೆ ಜೀವ. ಪರಿಣಾಮಕಾರಿಯೂ ಆಗಿದ್ದರು. ನಾವು ನ್ಯೂ ಯಾರ್ಕ್‍ನ ಉತ್ತರಭಾಗವಾದ ಕಾರ್ನ್‌ವಾಲ್‍ನಲ್ಲಿ ಒಟ್ಟಿಗೆ ಕೆಲಸಮಾಡಿದೆವು.

ನಮ್ಮ ಮದುವೆ ದಿನ

ನಾನು ಆಸ್ಟ್ರಿಯಕ್ಕೆ ವಾಪಸ್‌ ಬಂದಾಗ ನನ್ನನ್ನು ನೇಮಿಸಲಾದ ಸರ್ಕಿಟ್‍ನಲ್ಲಿ ಟೊವೀ ಮೆರೆಟ್‌ ಎಂಬ ಹೆಸರಿನ ಆಕರ್ಷಕ, ಅವಿವಾಹಿತ ಸಹೋದರಿಯನ್ನು ಭೇಟಿಯಾದೆ. ಈಕೆ 5 ವರ್ಷ ಪ್ರಾಯದಿಂದ ಸತ್ಯದಲ್ಲೇ ಬೆಳೆಸಲ್ಪಟ್ಟಿದ್ದಳು. ನಮ್ಮಿಬ್ಬರ ಮೊದಲ ಭೇಟಿ ಹೇಗಾಯಿತೆಂದು ಸಹೋದರರು ಕೇಳುವಾಗ ನಾವು ತಮಾಷೆಯಾಗಿ, “ಬ್ರಾಂಚ್‌ ಆಫೀಸೇ ಇದಕ್ಕೆ ಏರ್ಪಾಡು ಮಾಡಿತು!” ಎನ್ನುತ್ತೇವೆ. ಒಂದು ವರ್ಷದ ನಂತರ ಅಂದರೆ 1967ರ ಏಪ್ರಿಲ್‍ನಲ್ಲಿ ನಮ್ಮ ಮದುವೆ ಆಯಿತು. ಒಟ್ಟಿಗೆ ಸಂಚರಣಾ ಕೆಲಸದಲ್ಲಿ ಮುಂದುವರಿಯುವಂತೆ ನಮಗೆ ಅನುಮತಿ ಕೊಡಲಾಯಿತು.

ಕೆಲವು ಮಾನವರು ಯೆಹೋವನೊಂದಿಗೆ ವಿಶೇಷ ಸಂಬಂಧವನ್ನು ಹೊಂದಿ ಆತನ ಆತ್ಮಿಕ ಪುತ್ರರಾಗಬಲ್ಲರೆಂದು ರೋಮನ್ನರಿಗೆ 8:15ರಲ್ಲಿ ವಿವರಿಸಲಾಗಿದೆ. ಅವರು ಪ್ರೀತಿಯಿಂದ ಆತನನ್ನು “ಅಪ್ಪಾ, ತಂದೆಯೇ!” ಎಂದು ಕರೆಯುತ್ತಾರೆ. 1968ರಲ್ಲಿ ಯೆಹೋವನು ಅಪಾತ್ರ ಕೃಪೆಯನ್ನು ತೋರಿಸಿ ನನ್ನನ್ನು ತನ್ನ ಆತ್ಮಿಕ ಪುತ್ರನಾಗಿ ದತ್ತು ತೆಗೆದುಕೊಂಡಿದ್ದಾನೆಂದು ಗ್ರಹಿಸಿದೆ. ಅಭಿಷಿಕ್ತ ಕ್ರೈಸ್ತರ ಆಧ್ಯಾತ್ಮಿಕ ಸಹೋದರತ್ವದಲ್ಲಿ ನಾನೂ ಒಬ್ಬನಾದೆ.

1976ರ ತನಕ ನಾನು ಮೆರೆಟ್‌ ಜೊತೆ ಸರ್ಕಿಟ್‌ ಹಾಗೂ ಡಿಸ್ಟ್ರಿಕ್ಟ್‌ ಕೆಲಸದಲ್ಲಿ ಸೇವೆಮಾಡಿದೆ. ಕೆಲವೊಮ್ಮೆ ಮರಗಟ್ಟಿ ಹೋಗುವಷ್ಟು ಚಳಿಯಿದ್ದ ತಾಪಮಾನದಲ್ಲಿ ಯಾವುದೇ ರೀತಿಯ ಶಾಖ ವ್ಯವಸ್ಥೆಯಿಲ್ಲದ ಕೋಣೆಗಳಲ್ಲಿ ಮಲಗಬೇಕಾಗುತ್ತಿತ್ತು. ಒಮ್ಮೆ ಬೆಳಿಗ್ಗೆ ಎದ್ದು ನೋಡುವಾಗ ನಾವು ಹೊದ್ದುಕೊಂಡಿದ್ದ ಕಂಬಳಿಯ ಮೇಲಿನ ಅಂಚು ಸೆಟೆದುಕೊಂಡು, ಬಿಳಿಬಿಳಿಯಾಗಿತ್ತು! ನಮ್ಮ ಬಿಸಿಯುಸಿರು ಅಲ್ಲಿ ಮರಗಟ್ಟಿಹೋಗಿತ್ತು! ಹಾಗಾಗಿ ರಾತ್ರಿ ಸಮಯದಲ್ಲಿ ಇಂಥ ಚಳಿಯನ್ನು ಸಹಿಸಲು ನಾವು ಒಂದು ಚಿಕ್ಕ ಎಲೆಕ್ಟ್ರಿಕ್‌ ಹೀಟರ್‌ ಅನ್ನು ಒಯ್ಯಲಾರಂಭಿಸಿದೆವು. ಕೆಲವು ಕಡೆಗಳಲ್ಲಿ ಶೌಚಾಲಯವು ಮನೆಯಿಂದ ಸ್ವಲ್ಪ ದೂರದಲ್ಲಿರುತ್ತಿತ್ತು ಮತ್ತು ಚಳಿಗಾಳಿ ಬೀಸುತ್ತಿರುತ್ತಿತ್ತು. ರಾತ್ರಿ ವೇಳೆ ಅಲ್ಲಿಗೆ ಹೋಗಬೇಕಾದರೆ ಹಿಮದಲ್ಲಿ ನಡಕೊಂಡು ಹೋಗಬೇಕಾಗುತ್ತಿತ್ತು. ನಮಗೆ ನಮ್ಮದೇ ಆದ ಮನೆ ಇರಲಿಲ್ಲ. ಹಾಗಾಗಿ ಹಿಂದಿನ ವಾರ ಎಲ್ಲಿ ಉಳಿದುಕೊಂಡಿದ್ದೇವೊ  ಅಲ್ಲೇ ಸೋಮವಾರ ಉಳಿದು ಮಂಗಳವಾರ ಬೆಳಗ್ಗೆ ಮುಂದಿನ ಸಭೆಗೆ ಪ್ರಯಾಣಿಸುತ್ತಿದ್ದೆವು.

ಈ ಎಲ್ಲ ವರ್ಷಗಳಲ್ಲಿ ನನ್ನ ಮುದ್ದಿನ ಮಡದಿ ಯಾವಾಗಲೂ ನನಗೆ ತುಂಬ ಬೆಂಬಲ ಕೊಟ್ಟಿದ್ದಾಳೆಂದು ಹೇಳಲು ಖುಷಿಪಡುತ್ತೇನೆ. ಅವಳಿಗೆ ಕ್ಷೇತ್ರ ಸೇವೆಯೆಂದರೆ ತುಂಬ ಇಷ್ಟ. ಸೇವೆಗೆ ಹೋಗುವಂತೆ ನಾನವಳಿಗೆ ಒಮ್ಮೆಯೂ ಪ್ರೋತ್ಸಾಹಿಸಬೇಕಾಗಿ ಬರಲಿಲ್ಲ. ಅವಳಿಗೆ ಸಭೆಯಲ್ಲಿರುವ ಸಹೋದರ ಸಹೋದರಿಯರ ಮೇಲೆ ತುಂಬ ಪ್ರೀತಿ. ಬೇರೆಯವರಿಗೆ ಕಳಕಳಿ ತೋರಿಸುವುದರಲ್ಲೂ ಸದಾ ಮುಂದು. ಆಕೆಯ ಈ ಮನೋಭಾವ ನನಗೆ ತುಂಬ ಸಹಾಯಮಾಡಿದೆ.

1976ರಲ್ಲಿ ನಮ್ಮನ್ನು ವಿಯೆನ್ನದಲ್ಲಿರುವ ಆಸ್ಟ್ರಿಯ ಬ್ರಾಂಚ್‌ ಆಫೀಸಲ್ಲಿ ಸೇವೆಸಲ್ಲಿಸಲು ಆಮಂತ್ರಿಸಲಾಯಿತು. ನನ್ನನ್ನು ಬ್ರಾಂಚ್‌ ಕಮಿಟಿಯ ಸದಸ್ಯನಾಗಿ ನೇಮಿಸಲಾಯಿತು. ಆ ಸಮಯದಲ್ಲಿ ಆಸ್ಟ್ರಿಯದ ಬ್ರಾಂಚ್‌, ಪೂರ್ವ ಯುರೋಪಿನ ಹಲವಾರು ದೇಶಗಳಲ್ಲಿ ನಡೆಯುತ್ತಿದ್ದ ಕೆಲಸದ ಮೇಲ್ವಿಚಾರಣೆ ಮಾಡುತ್ತಿತ್ತು. ಈ ದೇಶಗಳಲ್ಲಿ ಸಾಹಿತ್ಯವನ್ನು ಜಾಣ್ಮೆಯಿಂದ ರವಾನಿಸುವ ಕೆಲಸವನ್ನು ಸಂಘಟಿಸುತ್ತಿತ್ತು. ಸಹೋದರ ಯಾರ್ಗನ್‌ ರನ್‌ಡೆಲ್‌ ಎಂಬವರು ಈ ಕೆಲಸದ ನೇತೃತ್ವ ವಹಿಸುತ್ತಿದ್ದರು. ನನಗೆ ಅವರ ಜತೆ ಕೆಲಸಮಾಡುವ ಸುಯೋಗವಿತ್ತು. ನಂತರ ನನಗೆ ಪೂರ್ವ ಯುರೋಪಿನ ಹತ್ತು ಭಾಷೆಗಳ ಭಾಷಾಂತರ ಕೆಲಸದ ಮೇಲ್ವಿಚಾರಣೆಮಾಡುವಂತೆ ಹೇಳಲಾಯಿತು. ಯಾರ್ಗನ್‌ ಮತ್ತವರ ಹೆಂಡತಿ ಗೆಟ್ರೂಡ್‌ ಈಗಲೂ ನಂಬಿಗಸ್ತರಾಗಿ ಜರ್ಮನಿಯಲ್ಲಿ ವಿಶೇಷ ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದಾರೆ. 1978ರಲ್ಲಿ ಆಸ್ಟ್ರಿಯದ ಬ್ರಾಂಚ್‌ ಆಫೀಸ್‌ ಪತ್ರಿಕೆಗಳನ್ನು ಫೋಟೋ-ಟೈಪ್‌ಸೆಟ್‌ ಮಾಡಿ, ಒಂದು ಚಿಕ್ಕ ಆಫ್‌ಸೆಟ್‌ ಪ್ರೆಸ್‍ನಲ್ಲಿ ಆರು ಭಾಷೆಗಳಲ್ಲಿ ಮುದ್ರಿಸಲಾರಂಭಿಸಿತು. ಈ ಭಾಷೆಗಳ ಪತ್ರಿಕೆಗಳ ಚಂದಾ ಪ್ರತಿಗಳನ್ನು ಕೇಳುತ್ತಿದ್ದ ದೇಶಗಳಿಗೂ ಅದನ್ನು ಕಳುಹಿಸಿದೆವು. ಈ ಎಲ್ಲ ಕಾರ್ಯಾಚರಣೆಗಳನ್ನು ನೋಡಿಕೊಳ್ಳುತ್ತಿದ್ದವರು ಸಹೋದರ ಓಟೊ ಕಗ್ಲಿಚ್‌. ಇವರು ಈಗ ತಮ್ಮ ಹೆಂಡತಿ ಇಂಗ್ರಿಡ್‌ ಜತೆ ಜರ್ಮನಿಯ ಬ್ರಾಂಚ್‌ ಆಫೀಸಲ್ಲಿ ಕೆಲಸಮಾಡುತ್ತಿದ್ದಾರೆ.

ಆಸ್ಟ್ರಿಯದಲ್ಲಿ ಭಿನ್ನಭಿನ್ನ ರೀತಿಯ ಸಾಕ್ಷಿಕಾರ್ಯದಲ್ಲಿ ತೊಡಗಲು ಶಕ್ತನಾದೆ. ಬೀದಿ ಸಾಕ್ಷಿಕಾರ್ಯದಲ್ಲೂ ಪಾಲ್ಗೊಂಡೆ

ಪೂರ್ವ ಯುರೋಪಿನ ಸಹೋದರರು ಸಹ ತಮ್ಮ ತಮ್ಮ ದೇಶಗಳಲ್ಲಿ ಮಿಮಿಯೊಗ್ರಾಫ್‌ ಯಂತ್ರಗಳನ್ನು ಬಳಸಿ ಇಲ್ಲವೇ ಫಿಲ್ಮ್ನಿಂದ ಮಾಹಿತಿಯನ್ನು ಪುನರ್‌ಮುದ್ರಿಸುವ ಮೂಲಕ ಸಾಹಿತ್ಯವನ್ನು ಮುದ್ರಿಸಿದರು. ಹಾಗಿದ್ದರೂ ಅವರಿಗೆ ತಮ್ಮ ದೇಶಗಳ ಹೊರಗಿನ ಬ್ರಾಂಚ್‌ಗಳಿಂದ ಬೆಂಬಲ ಬೇಕಾಗಿತ್ತು. ಯೆಹೋವನು ಈ ಚಟುವಟಿಕೆಯನ್ನು ಕಾಪಾಡಿದನು. ಬ್ರಾಂಚ್‌ನಲ್ಲಿದ್ದ ನಮಗೆ, ಆ ಕಷ್ಟಕರ ಪರಿಸ್ಥಿತಿ ಮತ್ತು ನಿಷೇಧದ ಕೆಳಗೂ ಹಲವಾರು ವರ್ಷಗಳ ವರೆಗೆ ಸೇವೆಸಲ್ಲಿಸಬೇಕಾಗಿದ್ದ ಸಹೋದರರ ಮೇಲೆ ಪ್ರೀತಿ ಹೆಚ್ಚಾಯಿತು.

ರೊಮೇನಿಯಗೆ ವಿಶೇಷ ಭೇಟಿ

1989ರಲ್ಲಿ ನನಗೆ ಆಡಳಿತ ಮಂಡಲಿಯ ಸದಸ್ಯರಾದ ಸಹೋದರ ಥಿಯೊಡರ್‌ ಜಾರಸ್‌ರವರ ಜೊತೆ ರೊಮೇನಿಯಗೆ ಹೋಗುವ ಸುಯೋಗ ಸಿಕ್ಕಿತು. ನಾವಲ್ಲಿಗೆ ಹೋಗುವುದರ ಉದ್ದೇಶ, ಸಹೋದರರ ಒಂದು ದೊಡ್ಡ ಗುಂಪನ್ನು ಸಂಘಟನೆಯೊಂದಿಗೆ ಪುನಃ ಸೇರಿಸುವುದೇ ಆಗಿತ್ತು. 1949ರಿಂದಾರಂಭಿಸಿ ಇವರೆಲ್ಲರೂ ಭಿನ್ನ ಭಿನ್ನ ಕಾರಣದಿಂದ ಸಂಘಟನೆಯೊಂದಿಗೆ ಸಂಬಂಧವನ್ನು ಕಡಿದುಹಾಕಿ, ತಮ್ಮ ಸ್ವಂತ ಸಭೆಗಳನ್ನು ರಚಿಸಿದ್ದರು. ಆದರೆ ಸಾರುವ ಮತ್ತು ದೀಕ್ಷಾಸ್ನಾನ ಕೊಡುವ ಕೆಲಸವನ್ನು ಅವರು ನಿಲ್ಲಿಸಿರಲಿಲ್ಲ.  ಕ್ರೈಸ್ತ ತಾಟಸ್ಥ್ಯವನ್ನು ಕಾಪಾಡಿಕೊಂಡದಕ್ಕಾಗಿ ಅವರು ಸೆರೆಮನೆಗೂ ಹೋದರು. ಇದೆಲ್ಲವನ್ನೂ ಜಾಗತಿಕ ಮುಖ್ಯಕಾರ್ಯಾಲಯದ ಒಪ್ಪಿಗೆಯಿದ್ದ ಸಂಘಟನೆಯ ಸಹೋದರರಂತೆಯೇ ಮಾಡಿದರು. ನಾವು 1989ರಲ್ಲಿ ಅಲ್ಲಿಗೆ ಹೋದಾಗ ನಿಷೇಧ ಇನ್ನೂ ಜಾರಿಯಲ್ಲಿತ್ತು. ಹಾಗಾಗಿ ನಾವು ಸಹೋದರ ಪಾಮ್‌ಫಿಲ್‌ ಆಲ್ಬು ಎಂಬವರ ಮನೆಯಲ್ಲಿ ಗುಟ್ಟಾಗಿ ಸೇರಿದೆವು. ಅಲ್ಲಿ ಆ ಗುಂಪಿನ ನಾಲ್ಕು ಮುಖ್ಯ ಹಿರಿಯರು ಮತ್ತು ನಮ್ಮ ಸಂಘಟನೆಯ ಒಪ್ಪಿಗೆಯಿದ್ದ ರೊಮೇನಿಯದ ಕಂಟ್ರಿ ಕಮಿಟಿಯ ಪ್ರತಿನಿಧಿಗಳು ಇದ್ದರು. ನಮ್ಮ ಜೊತೆ ಆಸ್ಟ್ರಿಯದವರಾಗಿದ್ದ ರಾಲ್ಫ್ ಕೆಲ್ನ ಸಹ ಇದ್ದರು. ಸಹೋದರ ರಾಲ್ಫ್ ನಮಗೆ ಆ ಸಹೋದರರು ಹೇಳಿದ್ದನ್ನು ಮತ್ತು ಅವರಿಗೆ ನಾವು ಹೇಳಿದ್ದನ್ನು ಅನುವಾದ ಮಾಡಿ ಹೇಳುತ್ತಿದ್ದರು.

ಅವರೊಟ್ಟಿಗಿನ ಚರ್ಚೆಯ ಎರಡನೇ ರಾತ್ರಿಯಂದು ಸಹೋದರ ಆಲ್ಬು ತನ್ನ ನಾಲ್ಕು ಮಂದಿ ಜೊತೆ ಹಿರಿಯರಿಗೆ ನಮ್ಮ ಜೊತೆ ಐಕ್ಯವಾಗುವಂತೆ ಮನವೊಪ್ಪಿಸಲು ಹೀಗಂದರು: “ಇದನ್ನು ಮಾಡುವುದಾದರೆ ಈಗಲೇ ಮಾಡಬೇಕು. ಇಂಥ ಅವಕಾಶ ಪುನಃ ಸಿಗಲಿಕ್ಕಿಲ್ಲ.” ಫಲಿತಾಂಶವಾಗಿ ಸುಮಾರು 5,000 ಸಹೋದರರನ್ನು ಸಂಘಟನೆಯೊಳಗೆ ಸೇರಿಸಲಾಯಿತು. ಇದು ಯೆಹೋವನಿಗೆ ದೊಡ್ಡ ವಿಜಯವಾಗಿತ್ತು! ಸೈತಾನನಿಗಂತೂ ಮುಖಕ್ಕೆ ಹೊಡೆದ ಹಾಗಾಗಿರಬೇಕು!

1989ರ ಅಂತ್ಯದಷ್ಟಕ್ಕೆ, ಪೂರ್ವ ಯುರೋಪಿನಲ್ಲಿ ಸಮಾಜವಾದ ಪತನವಾಗುವ ಮುಂಚೆ ಆಡಳಿತ ಮಂಡಲಿಯು ನಾನು ನನ್ನ ಪತ್ನಿ ಜೊತೆ ನ್ಯೂ ಯಾರ್ಕ್‍ನಲ್ಲಿರುವ ಜಾಗತಿಕ ಮುಖ್ಯಕಾರ್ಯಾಲಯಕ್ಕೆ ಸ್ಥಳಾಂತರಿಸುವಂತೆ ಆಮಂತ್ರಿಸಿತು. ಇದು ನಮಗೆ ದೊಡ್ಡ ಅಚ್ಚರಿ ಆಗಿತ್ತು. ಬ್ರೂಕ್ಲಿನ್‌ ಬೆತೆಲಿನಲ್ಲಿ ನಮ್ಮ ಸೇವೆಯನ್ನು 1990ರ ಜುಲೈಯಲ್ಲಿ ಆರಂಭಿಸಿದೆವು. 1992ರಲ್ಲಿ ನನ್ನನ್ನು ಆಡಳಿತ ಮಂಡಲಿಯ ಸೇವಾ ಕಮಿಟಿಗೆ ಸಹಾಯಕನಾಗಿ ನೇಮಿಸಲಾಯಿತು. 1994ರ ಜುಲೈಯಿಂದ ನನಗೆ ಆಡಳಿತ ಮಂಡಲಿಯ ಸದಸ್ಯನಾಗಿ ಸೇವೆಸಲ್ಲಿಸುವ ಸುಯೋಗ ಸಿಕ್ಕಿದೆ.

ಗತಕಾಲವನ್ನು ಮೆಲುಕುಹಾಕುತ್ತಾ ಭವಿಷ್ಯದೆಡೆ ಮುನ್ನೋಡುವುದು

ನನ್ನ ಹೆಂಡತಿಯೊಟ್ಟಿಗೆ ನ್ಯೂ ಯಾರ್ಕ್‌, ಬ್ರೂಕ್ಲಿನ್‍ನಲ್ಲಿ

ಎಷ್ಟೋ ವರ್ಷ ಹಿಂದೆ ನಾನು ಹೋಟೇಲಿನಲ್ಲಿ ಪಾರಿಚಾರಕನಾಗಿ ಕೆಲಸಮಾಡುತ್ತಿದ್ದೆ. ಆದರೆ ಈಗ ನನಗೆ ನಮ್ಮ ಲೋಕವ್ಯಾಪಕ ಸಹೋದರತ್ವಕ್ಕೆ ಆಧ್ಯಾತ್ಮಿಕ ಆಹಾರವನ್ನು ತಯಾರಿಸಿ ವಿತರಿಸುವ ಕೆಲಸದಲ್ಲಿ ಪಾಲ್ಗೊಳ್ಳುವ ಸುಯೋಗವಿದೆ. (ಮತ್ತಾ. 24:45-47) ವಿಶೇಷ ಪೂರ್ಣ ಸಮಯ ಸೇವೆಯಲ್ಲಿ ನಾನು ಕಳೆದ 50ಕ್ಕಿಂತ ಹೆಚ್ಚು ವರ್ಷಗಳನ್ನು ಮೆಲುಕುಹಾಕುವಾಗ, ಯೆಹೋವನು ನಮ್ಮ ಲೋಕವ್ಯಾಪಕ ಸಹೋದರತ್ವದ ಮೇಲೆ ಸುರಿಸಿರುವ ಆಶೀರ್ವಾದಗಳಿಗಾಗಿ ನನ್ನ ಗಾಢವಾದ ಕೃತಜ್ಞತೆ ಹಾಗೂ ಆನಂದವನ್ನು ವ್ಯಕ್ತಪಡಿಸುತ್ತೇನೆ. ಅಂತಾರಾಷ್ಟ್ರೀಯ ಅಧಿವೇಶನಗಳಿಗೆ ಹಾಜರಾಗುವುದು ನನಗೆ ತುಂಬ ಇಷ್ಟ. ಏಕೆಂದರೆ ಇಂಥ ಅಧಿವೇಶನಗಳಲ್ಲಿ ಸ್ವರ್ಗದಲ್ಲಿರುವ ನಮ್ಮ ತಂದೆಯಾದ ಯೆಹೋವನ ಬಗ್ಗೆ ಮತ್ತು ಬೈಬಲ್‌ ಸತ್ಯದ ಬಗ್ಗೆ ಕಲಿಯಲು ತುಂಬ ಒತ್ತು ಕೊಡಲಾಗುತ್ತದೆ.

ಮಾನವರಲ್ಲಿ ಇನ್ನೂ ಕೋಟಿಗಟ್ಟಲೆ ಜನರು ಬೈಬಲಿನ ಅಧ್ಯಯನ ಮಾಡಿ, ಸತ್ಯವನ್ನು ಸ್ವೀಕರಿಸಿ, ನಮ್ಮ ಲೋಕವ್ಯಾಪಕ ಕ್ರೈಸ್ತ ಸಹೋದರತ್ವದೊಂದಿಗೆ ಯೆಹೋವನ ಸೇವೆ ಮಾಡಬೇಕೆನ್ನುವುದು ನನ್ನ ಹಾರೈಕೆ. (1 ಪೇತ್ರ 2:17) ಭೂಮಿಯಲ್ಲಾಗುವ ಪುನರುತ್ಥಾನವನ್ನು ಸ್ವರ್ಗದಿಂದ ನೋಡಲು ಹಾತೊರೆಯುತ್ತಿದ್ದೇನೆ. ಕೊನೆಗೂ ನನ್ನ ಶಾರೀರಿಕ ತಂದೆಯನ್ನು ನಾನಾಗ ನೋಡಬಹುದು. ಪರದೈಸಿನಲ್ಲಿ ನನ್ನ ತಂದೆ, ತಾಯಿ ಮತ್ತು ಪ್ರೀತಿಯ ಇತರ ಸಂಬಂಧಿಕರೆಲ್ಲರೂ ಯೆಹೋವನನ್ನು ಆರಾಧಿಸಲು ಮನಸ್ಸು ಮಾಡುವರೆನ್ನುವುದು ನನ್ನ ನಿರೀಕ್ಷೆ.

ಭೂಮಿಯಲ್ಲಾಗುವ ಪುನರುತ್ಥಾನವನ್ನು ಸ್ವರ್ಗದಿಂದ ನೋಡಲು ಹಾತೊರೆಯುತ್ತಿದ್ದೇನೆ. ಕೊನೆಗೂ ನನ್ನ ಶಾರೀರಿಕ ತಂದೆಯನ್ನು ನಾನಾಗ ನೋಡಬಹುದು

^ ಪ್ಯಾರ. 27 ಈಗ ಸಭಾ ಸೇವಕ ಮತ್ತು ಆತನಿಗಿರುವ ಸಹಾಯಕನ ಬದಲಿಗೆ ಹಿರಿಯರ ಮಂಡಲಿಯಲ್ಲಿ ಒಬ್ಬ ಸಂಯೋಜಕ ಮತ್ತು ಒಬ್ಬ ಸೆಕ್ರಿಟರಿಯನ್ನು ನೇಮಿಸಲಾಗುತ್ತದೆ.