ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕನ್ನೇ ಬದಲಾಯಿಸುವ ಬೈಬಲ್‌

ಬದುಕನ್ನೇ ಬದಲಾಯಿಸುವ ಬೈಬಲ್‌

ಬದುಕನ್ನೇ ಬದಲಾಯಿಸುವ ಬೈಬಲ್‌

ವಜ್ರಗಳ ಕಳ್ಳಸಾಗಣೆ ಮಾಡುತ್ತಿದ್ದ ಮತ್ತು ಕೆಲಸದ ಸ್ಥಳದಲ್ಲಿ ಕದಿಯುತ್ತಿದ್ದ ಒಬ್ಬಾಕೆ ಸ್ತ್ರೀಯನ್ನು ಪ್ರಾಮಾಣಿಕಳಾಗುವಂತೆ ಪ್ರಚೋದಿಸಿದ್ದು ಯಾವುದು? ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ ಇನ್ನೊಬ್ಬ ಮಹಿಳೆಗೆ ಬದುಕಿಗೊಂದು ಅರ್ಥ ಕೊಟ್ಟದ್ದು ಯಾವುದು? ಮಿತಿಮೀರಿ ಮದ್ಯ ಮತ್ತು ಡ್ರಗ್ಸನ್ನು ಸೇವಿಸುತ್ತಿದ್ದ ಒಬ್ಬನಿಗೆ ಆ ಮಾರಕ ದುಶ್ಚಟಗಳಿಂದ ಮುಕ್ತನಾಗಲು ಬಲವು ಸಿಕ್ಕಿದ್ದು ಹೇಗೆ? ಅವರು ಹೇಳುವುದನ್ನು ನೀವೇ ಕೇಳಿ.

ವ್ಯಕ್ತಿ-ಪರಿಚಯ

ಹೆಸರು: ಮಾರ್ಗರೆಟ್‌ ಡಿಬ್ರುನ್‌

ವಯಸ್ಸು: 45

ದೇಶ: ಬಾಟ್ಸ್‌ವಾನ

ಹಿಂದೆ: ಸ್ಮಗ್ಲಿಂಗ್‌ ಮತ್ತು ಕಳ್ಳತನ

ಹಿನ್ನೆಲೆ: ನನ್ನ ತಂದೆ ಮೂಲತಃ ಜರ್ಮನಿಯವರು ಆದರೆ ನಂತರ ನೈಋತ್ಯ ಆಫ್ರಿಕದ (ಈಗ ನಮೀಬಿಯ) ಪ್ರಜೆಯಾದರು. ನನ್ನ ತಾಯಿ ಮಂಗೋಲಗ ಬುಡಗಟ್ಟಿನ ಬಾಟ್ಸ್‌ವಾನ ದೇಶದವರು. ನಾನು ನಮೀಬಿಯದ ಗೊಬಾಬಿಸ್‌ನಲ್ಲಿ ಹುಟ್ಟಿದೆ.

1970ರ ದಶಕದಲ್ಲಿ ದಕ್ಷಿಣ ಆಫ್ರಿಕಾದ ಸರಕಾರವು ನಮೀಬಿಯದ ಮೇಲೆ ಹೆಚ್ಚು ದಬ್ಬಾಳಿಕೆ ಹಾಕಿ ವರ್ಣಭೇದನೀತಿಯ ಕಾಯ್ದೆಯನ್ನು ಪ್ರತಿಯೊಂದು ಹಳ್ಳಿಪಳ್ಳಿಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತಂದಿತು. ನನ್ನ ಹೆತ್ತವರ ಅಂತರ್‌ಕುಲೀಯ ವಿವಾಹದ ಕಾರಣ ಅವರು ಪ್ರತ್ಯೇಕವಾಗುವಂತೆ ಒತ್ತಡ ಹೇರಲಾಯಿತು. ಆದ್ದರಿಂದ ನನ್ನ ತಾಯಿ ನನ್ನೊಂದಿಗೆ ಮತ್ತು ನನ್ನ ಸಹೋದರ ಸಹೋದರಿಯರೊಂದಿಗೆ ಬಾಟ್ಸ್‌ವಾನದ ಘಾನ್ಸಿಗೆ ಹಿಂದಿರುಗಿದರು.

1979ರಲ್ಲಿ ನಾನು ನನ್ನ ವಿದ್ಯಾಭ್ಯಾಸ ಮುಗಿಸಿದ ಬಳಿಕ ಬಾಟ್ಸ್‌ವಾನದ ಲೊಬಟ್ಸಿಗೆ ಹೋಗಿ ಸಾಕು ಹೆತ್ತವರೊಂದಿಗೆ ಜೀವಿಸಿದೆ. ಬಳಿಕ ಗ್ಯಾರೇಜು ಒಂದರಲ್ಲಿ ಗುಮಾಸ್ತೆಯಾಗಿ ಕೆಲಸಮಾಡಿದೆ. ನನ್ನ ಮತ್ತು ನನ್ನ ಕುಟುಂಬದ ಹೊಟ್ಟೆಪಾಡಿಗಾಗಿ ಸರಿಯಾಗಲಿ ತಪ್ಪಾಗಲಿ ಸ್ವತಃ ನಾವೇ ಏನಾದರೂ ಮಾಡಬೇಕೇ ಹೊರತು ದೇವರು ಏನನ್ನೂ ಕೊಡಲಾರ ಎಂಬ ನಂಬಿಕೆಯಲ್ಲೇ ಬೆಳೆದೆ.

ನಾನು ಗ್ಯಾರೇಜಿನಲ್ಲಿ ಮುಖ್ಯ ಕೆಲಸದಲ್ಲಿದ್ದುದರಿಂದ ಅಲ್ಲಿಂದ ಯಂತ್ರಗಳ ಬಿಡಿಭಾಗಗಳನ್ನು ಕದಿಯುತ್ತಿದ್ದೆ. ರಾತ್ರಿಯಲ್ಲಿ ರೈಲುಗಾಡಿ ನಮ್ಮ ಊರನ್ನು ಹಾದುಹೋಗುವಾಗ ನಾನೂ ನನ್ನ ಜೊತೆಗಾರರೂ ಅದನ್ನು ಹತ್ತಿ ಕೈಗೆ ಸಿಕ್ಕಿದ್ದೆಲ್ಲವನ್ನೂ ದೋಚುತ್ತಿದ್ದೆವು. ವಜ್ರ, ಚಿನ್ನ ಮತ್ತು ತಾಮ್ರದ ಕಳ್ಳಸಾಗಣೆಯಲ್ಲಿಯೂ ನಾನು ಒಳಗೂಡಿದ್ದೆ. ಡ್ರಗ್ಸ್‌ ಸೇವಿಸಲೂ ತೊಡಗಿದ್ದೆ. ಬಹಳ ಹಿಂಸಾಚಾರಿಯಾದೆ ಮತ್ತು ನನಗೆ ಅನೇಕ ಬಾಯ್‌ಫ್ರೆಂಡ್ಸ್‌ ಇದ್ದರು.

ಕೊನೆಗೆ 1993ರಲ್ಲಿ ಒಮ್ಮೆ ನಾನು ಕದಿಯುತ್ತಿರುವಾಗ ಸಿಕ್ಕಿಬಿದ್ದು ಕೆಲಸ ಕಳಕೊಂಡೆ. ನನ್ನ ಮಿತ್ರರು ತಾವು ಕೂಡ ಸಿಕ್ಕಿಬಿದ್ದೇವೆಂದು ಭಯಪಟ್ಟು ನನ್ನನ್ನು ತೊರೆದುಬಿಟ್ಟರು. ಅವರು ಹೀಗೆ ಮಾಡಿದ್ದು ನನಗೆ ತುಂಬಾ ನೋವನ್ನುಂಟುಮಾಡಿತು. ಇನ್ನು ಮುಂದೆ ಯಾರನ್ನೂ ನಂಬಬಾರದೆಂದು ನಿರ್ಣಯಿಸಿದೆ.

ನನ್ನ ಬದುಕನ್ನು ಬದಲಾಯಿಸಿತು ಬೈಬಲ್‌: 1994ರಲ್ಲಿ, ಮಿಷನೆರಿಗಳಾಗಿದ್ದ ಟಿಮ್‌ ಮತ್ತು ವರ್ಜೀನಿಯ ಎಂಬ ಇಬ್ಬರು ಯೆಹೋವನ ಸಾಕ್ಷಿಗಳನ್ನು ನಾನು ಭೇಟಿಯಾದೆ. ನನ್ನ ಹೊಸ ಕೆಲಸದ ಸ್ಥಳದಲ್ಲಿ ಅವರು ನನ್ನೊಂದಿಗೆ ಮಾತಾಡಿ ಊಟದ ವಿರಾಮದ ಸಮಯದಲ್ಲಿ ಬೈಬಲಿನ ಕುರಿತು ಕಲಿಸಿದರು. ಅವರು ನಂಬಲರ್ಹರೆಂದು ತಿಳಿದುಬಂದಾಗ ಅವರನ್ನು ಅಧ್ಯಯನಕ್ಕಾಗಿ ಮನೆಗೆ ಕರೆದೆ.

ದೇವರನ್ನು ಮೆಚ್ಚಿಸಬೇಕಾದರೆ ನನ್ನ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಬೇಕೆಂದು ನನಗೆ ಬೇಗನೆ ತಿಳಿದುಬಂತು. ಉದಾಹರಣೆಗೆ, “ಜಾರರು . . . ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ” ಎಂದು 1 ಕೊರಿಂಥ 6:​9, 10ರಿಂದ ನಾನು ಕಲಿತೆ. ಒಂದೊಂದಾಗಿ ದುಶ್ಚಟಗಳನ್ನು ನಾನು ಬಿಟ್ಟುಬಿಟ್ಟೆ. ಕಳ್ಳತನವನ್ನೂ ತೊರೆದೆ. ನನಗೆ ಆತ್ಮೀಯರಾಗಿದ್ದ ಗ್ಯಾಂಗ್‌ಸ್ಟರ್‌ಗಳ ಒಡನಾಟ ತ್ಯಜಿಸಿದೆ. ಯೆಹೋವ ದೇವರ ಸಹಾಯದಿಂದ ನನ್ನ ಬಾಯ್‌ಫ್ರೆಂಡ್ಸ್‌ ಸಹವಾಸವನ್ನು ಪೂರ್ತಿಯಾಗಿ ಕಡಿದುಹಾಕಿದೆ.

ಸಿಕ್ಕಿದ ಪ್ರಯೋಜನ: ಏನಾದರು ತಪ್ಪಾದಾಗ ನನ್ನ ಕೋಪವನ್ನು ಅಂಕೆಯಲ್ಲಿಡಲು ಮತ್ತು ಮಕ್ಕಳ ಮೇಲೆ ಚೀರಾಡದಿರಲು ಬಹಳ ಪ್ರಯಾಸದಿಂದ ಕಲಿತೆ. (ಎಫೆಸ 4:31) ಶಾಂತಭಾವದಿಂದ ಮಾತಾಡತೊಡಗಿದೆ. ಈ ರೀತಿಯ ಸಂವಾದವು ಒಳ್ಳೇ ಫಲಿತಾಂಶಗಳನ್ನು ತಂದು ಕುಟುಂಬವನ್ನು ಆಪ್ತವಾಗಿರಿಸುತ್ತದೆ.

ನನ್ನ ಮಾಜಿಮಿತ್ರರೂ ನೆರೆಯವರೂ ನನ್ನನ್ನು ನಂಬಲರ್ಹಳಾಗಿ ಕಂಡುಕೊಂಡಿದ್ದಾರೆ. ಪ್ರಾಮಾಣಿಕ ಹಾಗೂ ಭರವಸಾರ್ಹ ಕೆಲಸಗಾರಳು ನಾನಾಗಿದ್ದು ಹಣವನ್ನೂ ಸರಕು ಸಾಮಗ್ರಿಗಳನ್ನೂ ಈಗ ನಿಷ್ಠೆಯಿಂದ ನಿರ್ವಹಿಸುತ್ತಿದ್ದೇನೆ. ಹೀಗೆ, ಬೈಬಲಿನ ಕುರಿತು ಇತರರು ಕಲಿಯುವಂತೆ ಸಹಾಯಮಾಡಲು ಹೆಚ್ಚು ಸಮಯವನ್ನು ಬಳಸುವಾಗ ನನ್ನ ಜೀವನೋಪಾಯವನ್ನು ನಡಿಸಿಕೊಳ್ಳ ಶಕ್ತಳಾದೆ. ಜ್ಞಾನೋಕ್ತಿ 10:22ರ ಮಾತುಗಳನ್ನು ನಾನು ಮನಃಪೂರ್ವಕವಾಗಿ ಒಪ್ಪುತ್ತೇನೆ: “ಯೆಹೋವನ ಆಶೀರ್ವಾದವು ಭಾಗ್ಯದಾಯಕವು; ಅದು ವ್ಯಸನವನ್ನು ಸೇರಿಸದು.”

ವ್ಯಕ್ತಿ-ಪರಿಚಯ

ಹೆಸರು: ಗ್ಲೋರಿಯ ಎಲಿಜರಾಸ್‌ ಡಿ ಚೊಪ್ರೀನ

ವಯಸ್ಸು: 37

ದೇಶ: ಮೆಕ್ಸಿಕೊ

ಹಿಂದೆ: ಆತ್ಮಹತ್ಯೆಗೆ ಪ್ರಯತ್ನ

ಹಿನ್ನೆಲೆ: ನಾನು ಮೆಕ್ಸಿಕೊ ದೇಶದ ನೌಕಲ್‌ಪಾನ್‌ ನಗರದ ಶ್ರೀಮಂತ ಬಡಾವಣೆಯಲ್ಲಿ ಬೆಳೆದೆ. ಚಿಕ್ಕಂದಿನಿಂದಲೇ ತುಂಬ ಮೊಂಡಳಾಗಿದ್ದೆ. ಪಾರ್ಟಿಗೆ ಹೋಗುವುದೆಂದರೆ ನನಗೆ ಪ್ರಾಣ. 12 ವಯಸ್ಸಿಗೆ ಸಿಗರೇಟು ಸೇದತೊಡಗಿದೆ. 14 ಪ್ರಾಯದಲ್ಲಿ ಕುಡಿಯಲಾರಂಭಿಸಿದೆ, 16ರಲ್ಲಿ ಡ್ರಗ್‌ ಸೇವಿಸಿದೆ. ಬಳಿಕ ಕೆಲವೇ ವರ್ಷಗಳಲ್ಲಿ ಮನೆಬಿಟ್ಟುಹೋದೆ. ನನ್ನ ಮಿತ್ರರು ಒಡೆದ ಕುಟುಂಬದಿಂದ ಬಂದವರು. ದೈಹಿಕ ಇಲ್ಲವೆ ಮಾನಸಿಕ ದುರುಪಚಾರಕ್ಕೆ ಬಲಿಯಾದವರು. ನನಗೆ ಬದುಕು ಎಷ್ಟು ನಿಸ್ಸಾರವೆನಿಸಿತ್ತೆಂದರೆ ಎರಡು ಸಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ.

ಹತ್ತೊಂಬತ್ತು ವರ್ಷ ಪ್ರಾಯದಲ್ಲಿ ನಾನು ಮಾಡೆಲ್‌ ಆಗಿ ಕೆಲಸ ಮಾಡಿದೆ. ಈ ರೀತಿಯಲ್ಲಿ ರಾಜಕೀಯ ಮತ್ತು ಮನರಂಜನಾ ಜಗತ್ತಿನ ಜನರೊಂದಿಗೆ ಬೆರೆತುಬಿಟ್ಟೆ. ಕೊನೆಗೆ ನನಗೆ ಮದುವೆಯಾಗಿ ಮಕ್ಕಳಾದವು. ನನ್ನ ಕುಟುಂಬದಲ್ಲಿ ನಾನು ಹೇಳಿದ್ದೇ ನಡೆಯುತ್ತಿತ್ತು. ಧೂಮಪಾನ ಮತ್ತು ಕುಡಿತದ ಚಟ ನನಗೆ ಇನ್ನೂ ಇತ್ತು. ಸಾಮಾಜಿಕ ಜೀವನದಲ್ಲಿ ಪೂರ್ತಿ ಮುಳುಗಿಹೋಗಿದ್ದೆ. ನನ್ನ ಸಂಭಾಷಣೆಯಲ್ಲಿ ದುರ್ಭಾಷೆ ತುಂಬಿತ್ತು. ಕೊಳಕು ಜೋಕ್ಸ್‌ ನನಗೆ ತುಂಬಾ ಇಷ್ಟ. ಅಲ್ಲದೆ, ಮೂಗಿನ ತುದಿಯಲ್ಲೇ ಇತ್ತು ಕೋಪ.

ನಾನು ಬೆರೆತಿದ್ದ ಹೆಚ್ಚಿನ ಜನರ ಜೀವನಶೈಲಿ ನನ್ನಂತೆಯೇ ಇತ್ತು. ನನ್ನ ಜೀವನ ಹಾಯಾಗಿದೆ, ಏನೂ ಕಡಿಮೆಯಿಲ್ಲ ಎಂದು ಅನಿಸಿತ್ತು ಅವರಿಗೆ. ಆದರೆ ನನ್ನ ಬದುಕು ಬರಡು, ಶೂನ್ಯ, ಉದ್ದೇಶರಹಿತವಾಗಿತ್ತು.

ನನ್ನ ಬದುಕನ್ನು ಬದಲಾಯಿಸಿತು ಬೈಬಲ್‌: 1998ರಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಧ್ಯಯನಮಾಡಲು ಆರಂಭಿಸಿದೆ. ಜೀವನಕ್ಕೆ ಸದುದ್ದೇಶವಿದೆ ಎಂದು ಬೈಬಲ್‌ ಕಲಿಸಿತು. ಭೂಮಿ ಪರದೈಸವಾಗಲಿದೆ. ಸತ್ತವರು ಪುನಃ ಜೀವಿತರಾಗಿ ಏಳುವರು ಮತ್ತು ಆ ಭವಿಷ್ಯತ್ತು ನನ್ನದೂ ಆಗಸಾಧ್ಯವಿದೆ ಎಂದು ನಾನು ಕಲಿತೆ. ಯೆಹೋವ ದೇವರೇ ಇದೆಲ್ಲವನ್ನೂ ಮಾಡಲಿದ್ದಾನೆಂದು ನನಗೆ ತಿಳಿಯಿತು.

ದೇವರಿಗೆ ನನ್ನ ಪ್ರೀತಿಯನ್ನು ತೋರಿಸುವ ವಿಧ ಆತನಿಗೆ ವಿಧೇಯಳಾಗುವುದೇ ಎಂದು ನಾನು ಕಲಿತೆ. (1 ಯೋಹಾನ 5:⁠3) ಇದು ಮೊದಮೊದಲು ಕಷ್ಟವಾಗಿತ್ತು ಏಕೆಂದರೆ ನಾನು ಯಾರ ಮಾತೂ ಕೇಳುತ್ತಿರಲಿಲ್ಲ. ಆದರೆ ನನ್ನ ಬಾಳನ್ನು ನಾನಾಗಿಯೇ ಸಾಗಿಸಲಾರೆ ಎಂದು ಕಡೆಗೆ ನನಗೆ ಗೊತ್ತಾಯಿತು. (ಯೆರೆಮೀಯ 10:23) ಯೆಹೋವ ದೇವರೇ ನನ್ನನ್ನು ನಡೆಸುವಂತೆ ಪ್ರಾರ್ಥಿಸಿದೆ. ಆತನ ನೀತಿಯ ತತ್ತ್ವಗಳಿಗೆ ಹೊಂದಿಕೆಯಲ್ಲಿ ನನ್ನ ಬಾಳನ್ನು ಸಾಗಿಸಲು ಮತ್ತು ನನ್ನ ಮಕ್ಕಳಿಗೆ ಅದನ್ನು ಕಲಿಸಲು ಸಹಾಯಕ್ಕಾಗಿ ಬೇಡಿದೆ.

ಆವಶ್ಯಕ ಬದಲಾವಣೆಗಳನ್ನು ಮಾಡಲು ನನಗೆ ತುಂಬಾ ಕಷ್ಟವಾಯಿತು. ಆದರೆ ಎಫೆಸ 4:​22-24ರಲ್ಲಿರುವ ಸಲಹೆಯನ್ನು ಅನ್ವಯಿಸಲು ಪ್ರಾರಂಭಿಸಿದೆ: “ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು . . . ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನ ಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ.” ನೂತನ ಸ್ವಭಾವವನ್ನು ಧರಿಸುವುದರಲ್ಲಿ ಧೂಮಪಾನದಂಥ ದುಶ್ಚಟಗಳನ್ನು ತ್ಯಜಿಸುವುದು ಸೇರಿತ್ತು. ಹಾಗೂ ಹೊಲಸು ಮಾತುಗಳಿಲ್ಲದ ಒಂದು ಹೊಸಭಾಷೆಯನ್ನೇ ನಾನು ಕಲಿಯಬೇಕಾಯಿತು. ಈ ಬದಲಾವಣೆಗಳನ್ನು ಮಾಡಲು ಸುಮಾರು ಮೂರು ವರ್ಷಗಳೇ ಹಿಡಿದವು. ಆಮೇಲೆ ನಾನು ದೀಕ್ಷಾಸ್ನಾನ ಪಡೆದ ಸಾಕ್ಷಿಯಾದೆ.

ಮಾತ್ರವಲ್ಲ ಹೆಂಡತಿ ಮತ್ತು ತಾಯಿಯಾಗಿ ನನ್ನ ಪಾತ್ರವನ್ನು ಗಂಭೀರವಾಗಿ ತೆಗೆದುಕೊಂಡೆ. 1 ಪೇತ್ರ 3:​1, 2ರಲ್ಲಿರುವ ಬುದ್ಧಿವಾದವನ್ನು ಅನ್ವಯಿಸಲು ತೊಡಗಿದೆ: “ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.”

ಸಿಕ್ಕಿದ ಪ್ರಯೋಜನ: ಬದುಕಿಗೊಂದು ಉದ್ದೇಶವಿದೆ ಎಂದು ನನಗೆ ಈಗ ತಿಳಿದದ್ದಕ್ಕಾಗಿ ನಾನು ಯೆಹೋವನಿಗೆ ಕೃತಜ್ಞಳು. ನಾನು ಈಗ ಎಷ್ಟೋ ಒಳ್ಳೇ ವ್ಯಕ್ತಿಯಾಗಿದ್ದೇನೆ ಹಾಗೂ ನನ್ನ ಮಕ್ಕಳನ್ನು ಚೆನ್ನಾಗಿ ಪರಿಪಾಲಿಸಶಕ್ತಳಾಗಿದ್ದೇನೆಂದು ನೆನಸುತ್ತೇನೆ. ಆಗಿಂದಾಗ್ಗೆ ನನ್ನ ಹಿಂದಣ ಕೃತ್ಯಗಳಿಗಾಗಿ ನನ್ನ ಹೃದಯ ನನ್ನನ್ನು ಖಂಡಿಸುತ್ತದೆ. ಆದರೆ ಯೆಹೋವನು ನನ್ನ ಹೃದಯವನ್ನು ಬಲ್ಲನು. (1 ಯೋಹಾನ 3:​19, 20) ನಿಜವಾಗಿಯೂ ಬೈಬಲಿನ ನೀತಿತತ್ತ್ವಗಳಿಗನುಸಾರ ಜೀವಿಸುವುದು ನನ್ನನ್ನು ಸಕಲ ಹಾನಿಗೂ ತಪ್ಪಿಸಿ ನನಗೆ ಮನಶ್ಶಾಂತಿಯನ್ನು ಕೊಟ್ಟಿದೆ ಎಂಬುದಕ್ಕೆ ಸಂದೇಹವಿಲ್ಲ.

ವ್ಯಕ್ತಿ-ಪರಿಚಯ

ಹೆಸರು: ಜೆಲ್‌ಸನ್‌ ಕೊರ್ರೀಯ ಡಿ ಒಲಿವೆರಾ

ವಯಸ್ಸು: 33

ದೇಶ: ಬ್ರಸಿಲ್‌

ಹಿಂದೆ: ಮದ್ಯಪಾನ ಮತ್ತು ಮಾದಕವ್ಯಸನಿ

“ಬದುಕಿಬಾಳುವ ಮತ್ತು ಸಂತೋಷದಿಂದಿರುವ ಆಸೆ ನನ್ನಲ್ಲಿ ಅಂಕುರಿಸಿತು”

ಹಿನ್ನೆಲೆ: ನಾನು ಬೆಜೇಯಲ್ಲಿ ಹುಟ್ಟಿದೆ. ಸುಮಾರು ಒಂದು ಲಕ್ಷ ಜನರಿರುವ ಬ್ರಸಿಲ್‌ನ ಒಂದು ಊರು ಅದು. ಬ್ರಸಿಲ್‌ ಮತ್ತು ಉರುಗ್ವೆಯ ನಡುವಣ ಗಡಿನಾಡಿನ ಸಮೀಪದಲ್ಲಿದೆ. ಕೃಷಿ ಮತ್ತು ಪಶುಸಂಗೋಪನೆ ಅಲ್ಲಿನ ಮುಖ್ಯ ಕಸುಬು. ನಾನು ಬೆಳೆದದ್ದು ಒಂದು ಬಡ ಕ್ಷೇತ್ರದಲ್ಲಿ. ಹಿಂಸಾಚಾರಕ್ಕೆ ಕುಪ್ರಸಿದ್ಧವಾದ ಒಂದು ಗ್ಯಾಂಗ್‌ ಇದ್ದದ್ದು ಅಲ್ಲಿಯೇ. ಮದ್ಯ ಮತ್ತು ಮಾದಕದ್ರವ್ಯದ ದುರುಪಯೋಗವು ಅಲ್ಲಿಯ ಯುವಜನರಲ್ಲಿ ಸರ್ವಸಾಮಾನ್ಯ.

ಶಾಲೆ ಬಿಟ್ಟನಂತರ ನಾನು ಮದ್ಯ, ಮಾರಿವಾನ ಸೇವಿಸಲಾರಂಭಿಸಿದೆ, ರಾಕ್‌ ಮ್ಯೂಸಿಕ್‌ ನನಗೆ ಬಲುಇಷ್ಟ. ದೇವರಲ್ಲಿ ನನಗೆ ನಂಬಿಕೆ ಇರಲಿಲ್ಲ. ಪ್ರಪಂಚದ ಸಕಲ ಕಷ್ಟಸಂಕಟ ಮತ್ತು ದುರವಸ್ಥೆಗಳು ದೇವರಿಲ್ಲ ಎಂಬದಕ್ಕೆ ರುಜುವಾತು ಎಂದು ನನಗನಿಸಿತ್ತು.

ನಾನೊಬ್ಬ ಗಿಟಾರ್‌ ವಾದಕ ಮತ್ತು ಗೀತರಚಕ. ಬೈಬಲ್‌ ಪುಸ್ತಕವಾದ ಪ್ರಕಟನೆಯಿಂದ ನಾನು ಆಗಾಗ್ಗೆ ಸ್ಫೂರ್ತಿಪಡೆಯುತ್ತಿದ್ದೆ. ನನ್ನ ಬ್ಯಾಂಡ್‌ ನಾನು ನೆನಸಿದಷ್ಟು ಹೆಚ್ಚು ಯಶಸ್ವಿಯಾಗಲಿಲ್ಲ. ಆದುದರಿಂದ ಹೆಚ್ಚೆಚ್ಚಾಗಿ ಮಾದಕದ್ರವ್ಯದ ಮರೆಹೊಕ್ಕೆ. ಅತಿಯಾಗಿ ಸೇವಿಸಿ ಸತ್ತರೂ ಪರವಾಗಿಲ್ಲ ಎಂದುಕೊಂಡೆ. ನನ್ನ ಅಚ್ಚುಮೆಚ್ಚಿನ ಅನೇಕ ಗಾಯಕರು ಸಹ ಹಾಗೆಯೇ ತಮ್ಮ ಜೀವನವನ್ನು ಕೊನೆಗೊಳಿಸಿದ್ದರು.

ಡ್ರಗ್ಸ್‌ ವ್ಯಸನಕ್ಕೆ ಬೇಕಾದ ಹಣವನ್ನು ನಾನು ಸಾಲಪಡೆಯುತ್ತಿದ್ದದ್ದು ನನ್ನನ್ನು ಸಾಕಿದ ಅಜ್ಜಿಯಿಂದ. ಏಕೆ ಹಣ ಬೇಕು ಎಂದು ಅಜ್ಜಿ ಕೇಳುವಾಗ ಸುಳ್ಳುಹೇಳುತ್ತಿದ್ದೆ. ಇನ್ನೂ ಹೆಚ್ಚು ಕೆಟ್ಟದೆಂದರೆ ಪ್ರೇತವ್ಯವಹಾರಕ್ಕೂ ಕೈಹಾಕಿದೆ. ನನ್ನ ಗೀತರಚನೆಯ ಸಾಮರ್ಥ್ಯವನ್ನು ಹೆಚ್ಚಿಸುವುದೆಂದು ನೆನಸಿಕೊಂಡು ನಾನು ಮಾಟಮಂತ್ರಕ್ಕೂ ತುಂಬ ಮರುಳಾಗಿದ್ದೆ.

ನನ್ನ ಬದುಕನ್ನು ಬದಲಾಯಿಸಿತು ಬೈಬಲ್‌: ಬೈಬಲ್‌ ಅಧ್ಯಯನ ಮಾಡಿ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾದ ಬಳಿಕ ನನ್ನ ಮಾನಸಿಕ ಸ್ಥಿತಿಯು ಬದಲಾಗತೊಡಗಿತು. ಬದುಕಿಬಾಳುವ ಮತ್ತು ಸಂತೋಷದಿಂದಿರುವ ಆಸೆ ನನ್ನಲ್ಲಿ ಅಂಕುರಿಸಿತು. ನನ್ನ ಮೊಂಡತನ ಮತ್ತು ಜಿಗುಪ್ಸೆಯಿಂದಾಗಿ ಬೆಳೆಸಿದ್ದ ಉದ್ದ ತಲೇಕೂದಲನ್ನು ಕತ್ತರಿಸಿಬಿಟ್ಟೆ. ದೇವರಿಗೆ ಮೆಚ್ಚಿಗೆಯಾಗಬೇಕಾದರೆ ನಾನು ಮದ್ಯಪಾನ, ಧೂಮಪಾನ ಮತ್ತು ಡ್ರಗ್ಸನ್ನು ತ್ಯಜಿಸಬೇಕಿತ್ತು. ಸಂಗೀತದಲ್ಲಿನ ನನ್ನ ಅತಿಒಲವನ್ನು ಬದಲಾಯಿಸುವ ಅಗತ್ಯವೂ ಇತ್ತು.

ಯೆಹೋವನ ಸಾಕ್ಷಿಗಳ ಕೂಟಗಳಿಗೆ ಪ್ರಥಮ ಸಾರಿ ಹಾಜರಾದಾಗ, ಗೋಡೆಯ ಮೇಲೆ ತೂಗಹಾಕಿದ್ದ ಜ್ಞಾನೋಕ್ತಿ 3:​5, 6 ವಚನವು ನನ್ನ ಕಣ್ಣಿಗೆ ಬಿತ್ತು. ಅದು ತಿಳಿಸಿದ್ದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ಈ ವಚನವು ನನಗೆ ಈ ಆಶ್ವಾಸನೆ ಕೊಟ್ಟಿತು ಏನೆಂದರೆ ಯೆಹೋವನಿಗೆ ನನ್ನನ್ನು ಒಪ್ಪಿಸಿಕೊಡುವಲ್ಲಿ ನನ್ನ ಜೀವನವನ್ನು ಉತ್ತಮಗೊಳಿಸಲು ಆತನು ಸಹಾಯ ಮಾಡುವನೆಂದು.

ಆದರೂ ಆಳವಾಗಿ ಬೇರೂರಿದ ಒಂದು ಜೀವನಶೈಲಿಯನ್ನು ಬದಲಾಯಿಸುವುದು ಮತ್ತು ಎಲ್ಲಾ ದುಶ್ಚಟಗಳನ್ನು ತ್ಯಜಿಸಿಬಿಡುವುದೆಂದರೆ ತನ್ನ ಸ್ವಂತ ಕೈಯನ್ನು ಕಡಿದುಬಿಡುವಷ್ಟೇ ಕಷ್ಟಕರವಾಗಿತ್ತು. (ಮತ್ತಾಯ 18:​8, 9) ನಾನು ಈ ರೀತಿಯ ಬದಲಾವಣೆಗಳನ್ನು ನಿಧಾನವಾಗಿ ಮಾಡುವಂತಿರಲಿಲ್ಲ. ಆ ವಿಧಾನ ನನಗೆ ಅಶಕ್ಯವಾಗಿತ್ತು. ಆದ್ದರಿಂದ ಎಲ್ಲಾ ದುಶ್ಚಟಗಳನ್ನು ಒಮ್ಮೆಲೇ ಬಿಟ್ಟುಬಿಡಲು ನಿಶ್ಚಯಿಸಿದೆ. ಆ ಮಾರಕ ಜೀವನಶೈಲಿಗೆ ಮರು ಸೆಳೆಯಬಹುದಾದ ಎಲ್ಲಾ ಸ್ಥಳಗಳನ್ನು ಮತ್ತು ಜನರ ಒಡನಾಟವನ್ನೂ ವರ್ಜಿಸಿದೆ.

ನಿರಾಶೆಯನ್ನುಂಟುಮಾಡುವ ವಿಷಯಗಳ ಮೇಲೆ ಮನಸ್ಸನ್ನಿಡದೆ ದಿನನಿತ್ಯದ ಸಾಧನೆಗಳಲ್ಲಿ ಹಿಗ್ಗಿಕೊಳ್ಳಲು ನಾನು ಕಲಿತೆ. ಯೆಹೋವನ ದೃಷ್ಟಿಯಲ್ಲಿ ಶಾರೀರಿಕವಾಗಿ, ನೈತಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶುದ್ಧವಾಗಿರುವುದು ಒಂದು ಘನವಾದ ವಿಷಯವೆಂದು ನನಗನಿಸಿತು. ನನ್ನ ಪೂರ್ವದ ಕೆಟ್ಟ ಜೀವನಶೈಲಿಗೆ ಹಿಂತಿರುಗದೆ ಮುಂದೆ ಸಾಗುತ್ತಾ ಇರುವಂತೆ ಯೆಹೋವನ ಸಹಾಯಕ್ಕಾಗಿ ನಾನು ಪ್ರಾರ್ಥಿಸಿದೆ ಮತ್ತು ಸಹಾಯ ಪಡೆದೆ. ಆದರೂ ಕೆಲವೊಮ್ಮೆ ಪುನಃ ಹಿಂದಿನ ಸ್ಥಿತಿಗೆ ಇಳಿಯುತ್ತಿದ್ದೆ. ದುಶ್ಚಟದಿಂದಾಗಿ ಕೆಲವು ಸಾರಿ ಅತಿ ತಲೆಭಾರವಿದ್ದರೂ ನನ್ನ ಉಪದೇಶಕನು ನನ್ನೊಂದಿಗೆ ಬೈಬಲಧ್ಯಯನ ನಡಿಸುವಂತೆ ಪಟ್ಟುಹಿಡಿಯುತ್ತಿದ್ದೆ.

ದೇವರ ಕುರಿತು ಬೈಬಲ್‌ನಿಂದ ಕಲಿತ ಸತ್ಯಗಳು ನನಗೆ ಯುಕ್ತವಾಗಿ ಕಂಡವು. ದೇವರು ನಮ್ಮ ಕುರಿತು ಚಿಂತಿಸುತ್ತಾನೆ, ಮಿಥ್ಯಾಧರ್ಮವನ್ನು ಆತನು ಬೇಗನೆ ನಾಶಮಾಡಲಿರುವನು ಮತ್ತು ಲೋಕವ್ಯಾಪಕ ಸಾರುವ ಕೆಲಸವನ್ನು ಆತನೀಗ ಬೆಂಬಲಿಸುತ್ತಿದ್ದಾನೆ ಎಂಬ ಸತ್ಯವನ್ನು ನಾನು ಕಲಿತೆ. (ಮತ್ತಾಯ 7:​21-23; 24:14; 1 ಪೇತ್ರ 5:​6, 7) ಆ ನಿಜತ್ವಗಳು ನನ್ನ ಭರವಸೆಯನ್ನು ಕಟ್ಟಿದವು. ಕೊನೆಗೆ ನಾನು ನನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡೆ. ಆತನು ನನಗೆ ಮಾಡಿದ ಸಕಲ ಒಳಿತಿಗಾಗಿ ನಾನು ಆತನಿಗೆ ಕೃತಜ್ಞನಾಗಬಯಸಿದೆ.

ಸಿಕ್ಕಿದ ಪ್ರಯೋಜನ: ಈಗ ನನ್ನ ಬದುಕಿಗೆ ಸದುದ್ದೇಶ ಮತ್ತು ಅರ್ಥ ಸಿಕ್ಕಿತು. (ಪ್ರಸಂಗಿ 12:13) ನನ್ನ ಕುಟುಂಬಕ್ಕೆ ಭಾರವಾಗಿರುವ ಬದಲು ನಾನೇ ಅವರಿಗೆ ಈಗ ಸಹಾಯಮಾಡುತ್ತಿದ್ದೇನೆ. ಬೈಬಲಿನಿಂದ ನಾನು ಕಲಿತ ಒಳ್ಳೇ ವಿಷಯಗಳನ್ನು ನನ್ನ ಅಜ್ಜಿಗೂ ತಿಳಿಸಿದೆ. ಅವರು ಈಗ ತಮ್ಮನ್ನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದಾರೆ. ನನ್ನ ಕುಟುಂಬದ ಹಲವಾರು ಮಂದಿ ಹಾಗೂ ನನ್ನ ಮಾಜಿ ಬ್ಯಾಂಡ್‌ ಮಿತ್ರನೊಬ್ಬನು ಕೂಡ ಹಾಗೆ ಮಾಡಿದ್ದಾರೆ.

ನಾನೀಗ ವಿವಾಹಿತನು. ನನ್ನ ಪತ್ನಿಯೊಡಗೂಡಿ ಬೈಬಲನ್ನು ಇತರರಿಗೆ ಕಲಿಸಲು ನಮ್ಮ ಹೆಚ್ಚಿನ ಸಮಯವನ್ನು ನಾವು ಬಳಸುತ್ತೇವೆ. ‘ಪೂರ್ಣ ಮನಸ್ಸಿನಿಂದ ಯೆಹೋವನಲ್ಲಿ ಭರವಸೆಯಿಡಲು’ ಕಲಿತ ಕಾರಣ ನನಗೆ ಹೇರಳ ಆಶೀರ್ವಾದ ದೊರೆತಿದೆ. (w09 2/1)