ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನೆಷ್ಟು ಕಾಣಿಕೆ ಕೊಡಬೇಕು?

ನಾನೆಷ್ಟು ಕಾಣಿಕೆ ಕೊಡಬೇಕು?

ನಮ್ಮ ಓದುಗರ ಪ್ರಶ್ನೆ

ನಾನೆಷ್ಟು ಕಾಣಿಕೆ ಕೊಡಬೇಕು?

“ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.” (2 ಕೊರಿಂಥ 9:7) ಜಗತ್ತಿನಾದ್ಯಂತ ಲಕ್ಷಾಂತರ ಮಂದಿಗೆ ಈ ಮಾತುಗಳು ಚಿರಪರಿಚಿತ. ಚರ್ಚಿಗೆ ಹೋಗುವವರಲ್ಲಿ ಕೆಲವರಿಗಾದರೊ ಶಕ್ತಿಮೀರಿ ಕಾಣಿಕೆಕೊಡುವ ಹಂಗು ತಮಗಿದೆಯೆಂದು ಅನಿಸಬಹುದು. ವಾಸ್ತವದಲ್ಲಿ ಕೆಲವು ಧಾರ್ಮಿಕ ಪಂಗಡಗಳು ತಮ್ಮ ಸದಸ್ಯರು ಇಂತಿಷ್ಟೇ ಕಾಣಿಕೆ ಕೊಡಬೇಕೆಂದು ಕಡ್ಡಾಯಪಡಿಸುತ್ತವೆ. ಈ ರೂಢಿಯನ್ನು ‘ದಶಮಾಂಶ ಕೊಡುವಿಕೆ’ ಎಂದು ಕರೆಯಲಾಗುತ್ತದೆ. ಅಂದರೆ ಒಬ್ಬ ವ್ಯಕ್ತಿ ಚರ್ಚಿಗೆ ತನ್ನ ಆದಾಯದಲ್ಲಿ 10% ಕೊಡುವುದಾಗಿದೆ.

ನಾವು ನಿರ್ದಿಷ್ಟ ಮೊತ್ತವನ್ನು ಕಾಣಿಕೆಕೊಡಬೇಕೆಂದು ಬೈಬಲ್‌ ನಿಜವಾಗಿಯೂ ಕಡ್ಡಾಯಪಡಿಸುತ್ತದೊ? ವೈಯಕ್ತಿಕವಾಗಿ ನಾವು ಹೀಗೆ ಕೇಳಬಹುದು: ನಾನೆಷ್ಟು ಕಾಣಿಕೆ ಕೊಡಬೇಕು?

ಗತಕಾಲದಲ್ಲಿ ಕಡ್ಡಾಯ ಮತ್ತು ಸ್ವಯಂಪ್ರೇರಿತ ಕಾಣಿಕೆಗಳು

ದೇವರು ಇಸ್ರಾಯೇಲ್‌ ಜನಾಂಗಕ್ಕೆ ಕಡ್ಡಾಯಪಡಿಸಿದ ಕಾಣಿಕೆಗಳ ಮೊತ್ತದ ಕುರಿತ ಸ್ಪಷ್ಟ ಆಜ್ಞೆಗಳು ಬೈಬಲ್‌ನಲ್ಲಿವೆ. (ಯಾಜಕಕಾಂಡ 27:30-32; ಅರಣ್ಯಕಾಂಡ 18:21, 24; ಧರ್ಮೋಪದೇಶಕಾಂಡ 12:4-7, 11, 17, 18; 14:22-27) ಈ ಆಜ್ಞೆಗಳು ಜನರಿಗೆ ಹೊರಲಾಗದಷ್ಟು ವಿಪರೀತವಾಗಿರಲಿಲ್ಲ. ಅವರು ತನ್ನೆಲ್ಲ ನಿಯಮಗಳನ್ನು ಪಾಲಿಸುವಲ್ಲಿ ಆ ಜನಾಂಗಕ್ಕೆ ‘ಸಮೃದ್ಧಿಯನ್ನುಂಟುಮಾಡುವೆನು’ ಎಂದು ಯೆಹೋವನು ಮಾತುಕೊಟ್ಟಿದ್ದನು.—ಧರ್ಮೋಪದೇಶಕಾಂಡ 28:1, 2, 11, 12.

ಬೇರೆ ಸಂದರ್ಭಗಳಲ್ಲಿ, ಇಸ್ರಾಯೇಲ್ಯರು ಸ್ವಯಂಪ್ರೇರಣೆಯಿಂದ ಎಷ್ಟಾದರೂ ಕಾಣಿಕೆಕೊಡಬಹುದಿತ್ತು. ಅದು ಹೆಚ್ಚಾಗಿರಬಹುದಿತ್ತು ಇಲ್ಲವೆ ಕಡಿಮೆಯೂ ಆಗಿರಬಹುದಿತ್ತು. ಉದಾಹರಣೆಗೆ, ರಾಜ ದಾವೀದನು ಯೆಹೋವನಿಗಾಗಿ ಒಂದು ಆಲಯವನ್ನು ಕಟ್ಟಲು ಯೋಜನೆ ಮಾಡಿದಾಗ ಅವನ ಪ್ರಜೆಗಳು ‘ಐದು ಸಾವಿರ ತಲಾಂತು ಬಂಗಾರವನ್ನು’ ಕಾಣಿಕೆಯಾಗಿ ಕೊಟ್ಟರು. * (1 ಪೂರ್ವಕಾಲವೃತ್ತಾಂತ 29:7) ಇದನ್ನು, ಯೇಸು ಭೂಮಿಯಲ್ಲಿದ್ದಾಗ ಗಮನಿಸಿದ ಬಡ ವಿಧವೆಯ ಕಾಣಿಕೆಯೊಂದಿಗೆ ಹೋಲಿಸಿನೋಡಿ. ಆಲಯದ ಕಾಣಿಕೆಪೆಟ್ಟಿಗೆಗಳಲ್ಲಿ ಆ “ಬಡ ವಿಧವೆಯು ತೀರ ಕಡಮೆ ಬೆಲೆಯ ಎರಡು ಚಿಕ್ಕ ನಾಣ್ಯಗಳನ್ನು ಹಾಕುವುದನ್ನು” ಅವನು ಕಂಡನು. ಆಕೆಯ ಕಾಣಿಕೆಯ ಮೌಲ್ಯವೇನಾಗಿತ್ತು? ದಿನಗೂಲಿಯ 1/64ರಷ್ಟು ಭಾಗ ಮಾತ್ರ. ಆದರೂ ಆಕೆಯ ಆ ಚಿಕ್ಕ ಮೊತ್ತ ಸ್ವೀಕರಣೀಯವೆಂದು ಯೇಸು ಹೇಳಿದನು.—ಲೂಕ 21:1-4.

ಇಂತಿಷ್ಟೇ ಕೊಡಬೇಕೆಂದು ಕ್ರೈಸ್ತರಿಗೆ ಕಡ್ಡಾಯವಿದೆಯೋ?

ಇಸ್ರಾಯೇಲ್ಯರಿಗೆ ಕೊಡಲಾಗಿದ್ದ ಮೋಶೆಯ ಧರ್ಮಶಾಸ್ತ್ರದಲ್ಲಿರುವ ನಿಯಮಗಳಿಗೆ ಕ್ರೈಸ್ತರು ಅಧೀನರಲ್ಲ. ಹೀಗಿರಲಾಗಿ ದೇವರಿಗೆ ಇಂತಿಷ್ಟೇ ಮೊತ್ತವನ್ನು ಕೊಡಬೇಕೆಂಬ ಕಡ್ಡಾಯ ಅವರಿಗಿಲ್ಲ. ನಿಜ ಕ್ರೈಸ್ತ ಸಭೆಯಲ್ಲಿ ಕೊಡುವಿಕೆಯು ಆನಂದ ತರುತ್ತದೆ. ಸ್ವತಃ ಯೇಸು ಕ್ರಿಸ್ತನೇ ಹೇಳಿದ್ದು: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”—ಅ. ಕಾರ್ಯಗಳು 20:35.

ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಸಾರುವ ಕೆಲಸ ಸ್ವಯಂಪ್ರೇರಿತ ದಾನಗಳಿಂದ ನಡೆಯುತ್ತದೆ. ಈ ದಾನಗಳನ್ನು ನಿಮ್ಮ ಕೈಯಲ್ಲಿರುವ ಈ ಪತ್ರಿಕೆಯಂಥ ಸಾಹಿತ್ಯದ ಮುದ್ರಣಕ್ಕಾಗಿ ಮತ್ತು ‘ರಾಜ್ಯ ಸಭಾಗೃಹ’ ಎಂದು ಕರೆಯಲ್ಪಡುವ ಅವರ ಆರಾಧನಾ ಸ್ಥಳಗಳ ನಿರ್ಮಾಣ ಹಾಗೂ ದುರಸ್ತಿಗಾಗಿ ಬಳಸಲಾಗುತ್ತದೆ. ಸಂಗ್ರಹಿಸಲಾದ ಹಣವನ್ನು ಯಾರಿಗೂ ಸಂಬಳ ಕೊಡಲಿಕ್ಕಾಗಿ ಬಳಸಲಾಗುವುದಿಲ್ಲ. ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪೂರ್ಣ ಸಮಯ ತೊಡಗುವವರ ಸಾರಿಗೆ ಮತ್ತು ಇನ್ನಿತರ ವೈಯಕ್ತಿಕ ಖರ್ಚುವೆಚ್ಚಗಳಿಗೆಂದು ಸ್ವಲ್ಪ ನೆರವನ್ನು ಕೊಡಲಾಗುತ್ತದಷ್ಟೇ. ಆದರೆ ಇವರಾರೂ ಅಂಥ ಸಹಾಯಕ್ಕಾಗಿ ತಗಾದೆಮಾಡುವುದಿಲ್ಲ. ವಾಸ್ತವದಲ್ಲಿ ಸಾರುವ ಕೆಲಸದಲ್ಲಿ ಪಾಲ್ಗೊಳ್ಳುವ ಅಧಿಕಾಂಶ ಯೆಹೋವನ ಸಾಕ್ಷಿಗಳಿಗೆ ಯಾವುದೇ ಆರ್ಥಿಕ ನೆರವು ಸಿಗುವುದಿಲ್ಲ. ಗುಡಾರ ಹೊಲಿಯುವ ಕೆಲಸ ಮಾಡುತ್ತಿದ್ದ ಅಪೊಸ್ತಲ ಪೌಲನಂತೆಯೇ ಹೆಚ್ಚಿನವರು ಐಹಿಕ ಉದ್ಯೋಗದಿಂದ ಜೀವನ ನಡೆಸುತ್ತಾರೆ.—2 ಕೊರಿಂಥ 11:9; 1 ಥೆಸಲೊನೀಕ 2:9.

ಯೆಹೋವನ ಸಾಕ್ಷಿಗಳ ಕೆಲಸಕ್ಕಾಗಿ ಯಾರಾದರೂ ದಾನಕೊಡಲು ಇಚ್ಛಿಸುವಲ್ಲಿ ಅವನೆಷ್ಟು ಕೊಡಬೇಕು? ಅಪೊಸ್ತಲ ಪೌಲನು ಬರೆದದ್ದು: “ಪ್ರತಿಯೊಬ್ಬನು ತನ್ನ ಮನಸ್ಸಿನಲ್ಲಿ ನಿರ್ಧರಿಸಿದ್ದನ್ನು ಕೊಡಲಿ. ಮನಸ್ಸಿಲ್ಲದ ಮನಸ್ಸಿನಿಂದಾಗಲಿ ಅಥವಾ ಬಲವಂತದಿಂದಾಗಲಿ ಯಾರೂ ಕೊಡಬಾರದು. ಏಕೆಂದರೆ ಸಂತೋಷದಿಂದ ಕೊಡುವವನನ್ನು ದೇವರು ಪ್ರೀತಿಸುತ್ತಾನೆ.”—2 ಕೊರಿಂಥ 8:12; 9:7NIBV. (w09 08/01)

[ಪಾದಟಿಪ್ಪಣಿ]

^ ಪ್ಯಾರ. 7 2008ರಲ್ಲಿ ಚಿನ್ನದ ಸರಾಸರಿ ಬೆಲೆ 1 ಗ್ರ್ಯಾಮ್‌ಗೆ ಸುಮಾರು 1,500 ರೂ. ಆಗಿತ್ತು. ಈ ಲೆಕ್ಕಕ್ಕನುಸಾರ ಆ ಜನರು ಕೊಟ್ಟ ಕಾಣಿಕೆ ಸುಮಾರು 479,48,55,000 ಡಾಲರ್‌ (23,000 ಕೋಟಿಗಿಂತಲೂ ಹೆಚ್ಚು ರೂ.) ಮೌಲ್ಯದ್ದಾಗುತ್ತದೆ.