ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಏಕೆ?

ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಏಕೆ?

ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ ಏಕೆ?

ಇತ್ತೀಚೆಗೆ ವಿಪತ್ತುಗಳ ಬಗ್ಗೆ ಕೇಳದ ದಿನವೇ ಇಲ್ಲ. ಮೊದಲಿಗಿಂತ ಈಗ ಹೆಚ್ಚೆಚ್ಚು ಜನರು ವಿಪತ್ತುಗಳಿಗೆ ಬಲಿಯಾಗುತ್ತಿದ್ದಾರೆ. 2010ರ ಇಸವಿ ಒಂದರಲ್ಲೇ 373 ವಿಪತ್ತುಗಳು ಸಂಭವಿಸಿದವು, ಇದರಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 2,96,000 ಎಂದು ಬೆಲ್ಜಿಯಮ್‌ನ ವಿಪತ್ತು ಸಂಶೋಧನಾ ಕೇಂದ್ರ ವರದಿಸಿತು.

ಕಳೆದ ಕೆಲವು ದಶಕಗಳನ್ನೇ ತೆಗೆದುಕೊಳ್ಳಿ. ವರದಿಯಾದ ವಿಪತ್ತುಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. 1975-1999ರ ಅವಧಿಯನ್ನು ತೆಗೆದುಕೊಂಡರೆ ಪ್ರತಿ ವರ್ಷ ಸರಿಸುಮಾರು 300ಕ್ಕಿಂತ ಕಡಿಮೆ ವಿಕೋಪಗಳು ದಾಖಲಾಗಿವೆ. ಆದರೆ 2000-2010ರಲ್ಲಿ ಪ್ರತಿ ವರ್ಷ ಹತ್ತಿರತ್ತಿರ 400 ವಿಪತ್ತುಗಳು ಸಂಭವಿಸಿದವು. ಇದನ್ನೆಲ್ಲಾ ನೋಡಿ ‘ವಿಪತ್ತುಗಳು ಈಗ ಯಾಕೆ ಇಷ್ಟೊಂದು ಹೆಚ್ಚಾಗಿವೆ?’ ಎಂಬ ಪ್ರಶ್ನೆ ನಿಮಗೂ ಬಂದಿರಬಹುದು.

ಇಂಥ ನೈಸರ್ಗಿಕ ವಿಪತ್ತುಗಳನ್ನು “ದೇವಘಟನೆಗಳು” ಎಂದು ಕೆಲವರು ಕರೆಯುತ್ತಾರೆ ನಿಜ, ಆದರೆ ಇದು ಸರಿಯಲ್ಲ. ಇಂದು ಇಷ್ಟೊಂದು ಸಾವು-ನೋವುಗಳನ್ನು ತರುವ ವಿಪತ್ತುಗಳ ಹಿಂದೆ ದೇವರ ಕೈವಾಡವಿಲ್ಲ. ಆದರೆ ನಮ್ಮೀ ದಿನಗಳಲ್ಲಿ ಇಂಥ ವಿಪತ್ತುಗಳು ಸಂಭವಿಸುವವು ಎಂದು ಬೈಬಲ್‌ ಮುಂತಿಳಿಸಿತ್ತು. ಉದಾಹರಣೆಗೆ ಮತ್ತಾಯ 24:7, 8 ತೆಗೆದುಕೊಳ್ಳಿ. ಅಲ್ಲಿ ಯೇಸು, “ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆಯೂ ಭೂಕಂಪಗಳೂ ಆಗುವವು. ಇವೆಲ್ಲವೂ ಸಂಕಟದ ಶೂಲೆಯ ಪ್ರಾರಂಭ” ಎಂದು ಹೇಳಿದನು. ಯೇಸು ಈ ಭವಿಷ್ಯವಾಣಿಯನ್ನು ನುಡಿದದ್ದೇಕೆ? ಇದರಲ್ಲಿ ನಮಗಿರುವ ಸಂದೇಶವೇನು?

ದೇವರ ಮಗ ಯೇಸು ಈ ಭವಿಷ್ಯವಾಣಿಯನ್ನು ನುಡಿದದ್ದು ‘[ಈ ದುಷ್ಟ ವ್ಯವಸ್ಥೆಯ] ಸಮಾಪ್ತಿಗೆ ಸೂಚನೆ ಏನು?’ ಎಂಬ ಪ್ರಶ್ನೆಯನ್ನು ಅವನ ಶಿಷ್ಯರು ಕೇಳಿದಾಗ. (ಮತ್ತಾಯ 24:3) ಆಹಾರದ ಅಭಾವ, ಭೂಕಂಪಗಳಲ್ಲದೆ ಬೇರೆಷ್ಟೋ ವಿಷಯಗಳು “ಸಂಭವಿಸುತ್ತಿರುವುದನ್ನು ನೀವು . . . ನೋಡುವಾಗ ದೇವರ ರಾಜ್ಯವು ಹತ್ತಿರದಲ್ಲಿದೆ ಎಂಬುದನ್ನು ತಿಳಿದುಕೊಳ್ಳಿರಿ” ಎಂದನಾತ. (ಲೂಕ 21:31) ನಮಗಿರುವ ಸಂದೇಶ ಇಲ್ಲಿದೆ: ಬಲುಬೇಗನೆ ಭೂಮಿಯಲ್ಲಾಗಲಿರುವ ಮಹತ್ವಪೂರ್ಣ ಬದಲಾವಣೆಗಳಿಗೆ ಈ ನೈಸರ್ಗಿಕ ವಿಪತ್ತುಗಳು ಬೊಟ್ಟುಮಾಡುತ್ತವೆ.

ವಿಪತ್ತುಗಳಿಗೆ ಕಾರಣವಾಗಿರುವ ಶಕ್ತಿಗಳು

ಆದರೂ ಜನರು ಕೇಳುವ ಪ್ರಶ್ನೆ: ದೇವರು ಇದಕ್ಕೆಲ್ಲಾ ಕಾರಣನಲ್ಲದಿದ್ದರೆ ಬೇರೆ ಯಾರು ಅಥವಾ ಯಾವುದು ಕಾರಣ? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಬೈಬಲಿನಲ್ಲಿರುವ ಮತ್ತೊಂದು ಪ್ರಮುಖ ಸತ್ಯವನ್ನು ನೀವು ಅರ್ಥಮಾಡಿಕೊಳ್ಳಬೇಕು. ಅದೇನೆಂದರೆ, “ಇಡೀ ಲೋಕವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19) ಇಂದಿನ ದುಃಖಕರ ಪರಿಸ್ಥಿತಿಗಳಿಗೆ ದೇವರು ಕಾರಣನಲ್ಲ, ಆತನ ವೈರಿಯಾದ ಆ ‘ಕೆಡುಕನೇ’ ಕಾರಣ ಎಂದು ಈ ವಚನ ತಿಳಿಸುತ್ತದೆ. ಈ ಕೆಡುಕನನ್ನು ಬೈಬಲ್‌ “ಸೈತಾನ” ಎಂದು ಕರೆಯುತ್ತದೆ.—ಪ್ರಕಟನೆ 12:9, 12.

ಸೈತಾನ ಮಹಾ ಸ್ವಾರ್ಥಿ. ಜನರನ್ನು ತನ್ನ ಸ್ವಲಾಭಕ್ಕಾಗಿ ಬಳಸಿಕೊಳ್ಳುತ್ತಾನೆ. ಇಡೀ ಲೋಕವನ್ನೇ ತನ್ನ ಕಪಿಮುಷ್ಟಿಯಲ್ಲಿಟ್ಟು ಆಡಿಸುವ ಸೈತಾನನು ಜನರಲ್ಲೂ ತನ್ನ ದುರ್ಗುಣಗಳು ಹುಟ್ಟಿಕೊಳ್ಳುವಂತೆ ಮಾಡಿದ್ದಾನೆ. ಇದರ ಫಲವಾಗಿ ಈ “ಕಡೇ ದಿವಸಗಳಲ್ಲಿ” ಜನರು “ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ” ಆಗಿರುವರೆಂದು ಬೈಬಲ್‌ ಮುಂತಿಳಿಸಿತು. (2 ತಿಮೊಥೆಯ 3:1, 2, ಸತ್ಯವೇದವು) ಇಂಥ ಗುಣಗಳ ಮೇಲೆ ತಳವೂರಿರುವ ಒಂದು ಲೋಕ ವ್ಯವಸ್ಥೆಯನ್ನು ಸೈತಾನನು ರೂಪಿಸಿದ್ದಾನೆ. ಹಾಗಾಗಿ ಜನರು ಸ್ವಾರ್ಥಿಗಳಾಗಿ ದುರಾಶೆಯಿಂದ ಪೃಥ್ವಿಯ ನೈಸರ್ಗಿಕ ಸಂಪನ್ಮೂಲಗಳನ್ನು ಕಬಳಿಸುತ್ತಿದ್ದಾರೆ. ಇದು ಹೆಚ್ಚಾಗಿ ಅವರ ಕೊರಳಿಗೇ ಉರುಲಾಗುತ್ತಿದೆ.

ಇಂದಿನ ಈ ದುರಾಶೆ ತುಂಬಿದ ವ್ಯವಸ್ಥೆ ವಿಪತ್ತುಗಳಿಗೆ ಕಾರಣವಾಗುತ್ತಿರುವುದು ಹೇಗೆ? ಭೌಗೋಳಿಕ ವಿಪತ್ತುಗಳ ಬಗ್ಗೆ ವಿಶ್ವ ಸಂಸ್ಥೆಯ ವರದಿ ಹೀಗಿದೆ: “ನದಿಗಳ ಪಕ್ಕದಲ್ಲಿರುವ ಸಮತಟ್ಟಾದ ಪ್ರದೇಶಗಳಂಥ ಅಪಾಯಕರ ಸ್ಥಳಗಳಲ್ಲಿ ಜನರು ಕಿಕ್ಕಿರಿದು ವಾಸಿಸುತ್ತಾರೆ. ಕಾಡುಗಳ ಮತ್ತು ಜೌಗು ನೆಲಗಳ ವಿನಾಶದಿಂದಾಗಿ ಅವಘಡಗಳನ್ನು ತಡೆಗಟ್ಟಬಲ್ಲ ನಿಸರ್ಗದ ಸಾಮರ್ಥ್ಯ ಕ್ಷೀಣಿಸುತ್ತಾ ಇದೆ. ಮನುಷ್ಯರಿಂದಾಗಿ ಪರಿಸರದಲ್ಲಿ ಸೇರುತ್ತಿರುವ ಅನಿಲಗಳಿಂದಾಗಿ ಭೂಮಿ ಕಾವೇರುತ್ತಿದೆ, ಜಾಗತಿಕ ಹವಾಮಾನದಲ್ಲಿ ಏರುಪೇರಾಗುತ್ತಿದೆ ಮತ್ತು ಸಮುದ್ರ ಮಟ್ಟ ಸಹ ಏರುತ್ತಿದೆ. ಇದು ದೊಡ್ಡ ಚಿಂತೆಗೆ ಕಾರಣವಾಗಿದೆ. . . . ಇದೆಲ್ಲಾ ಮಾನವ ಚಟುವಟಿಕೆಯ ಪರಿಣಾಮ.” ಆರ್ಥಿಕ ಅಭಿವೃದ್ಧಿಗೆ ಇಂಥ ಮಾನವ ಚಟುವಟಿಕೆ ಅವಶ್ಯವೆಂದು ಹೇಳಲಾಗುತ್ತದೆ. ಆದರೆ ನಿಜಾಂಶವೇನೆಂದರೆ ಇದೆಲ್ಲದರ ಹಿಂದೆ ಅಡಗಿರುವುದು ಜನರ ಸ್ವಾರ್ಥ, ದುರಾಶೆಗಳೇ.

ಮಾನವನ ಈ ಸ್ವಚ್ಛಂದ ಚಟುವಟಿಕೆ ಉರಿವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎಂದು ತಜ್ಞರು ಈಗ ಗುರುತಿಸಿದ್ದಾರೆ. ಅಂದರೆ ಈ ಮಾನವ ಚಟುವಟಿಕೆ ನೈಸರ್ಗಿಕ ವಿಪತ್ತುಗಳಿಂದಾಗುವ ಹಾನಿಯನ್ನು ಹೆಚ್ಚಿಸಿದೆ. ನಾಶ-ವಿನಾಶಗಳಿಗೆ ಇಂಬುಕೊಡುವ ಒಂದು ವ್ಯವಸ್ಥೆಗೆ ಬೆಂಬಲ ನೀಡುವ ಮೂಲಕ ಮಾನವರು ಸೈತಾನನ ಕೈಗೊಂಬೆಗಳಾಗಿ ಪರಿಣಮಿಸಿದ್ದಾರೆ.

ಅಜಾಗರೂಕ ಮಾನವ ಚಟುವಟಿಕೆಯಿಂದಾಗಿಯೂ ಎಷ್ಟೋ ವಿಪತ್ತುಗಳು ಸಂಭವಿಸುತ್ತವೆ ಎಂಬುದು ನಮಗೆ ತಿಳಿದುಬಂತು. ಇನ್ನು ಕೆಲವು ವಿಪತ್ತುಗಳು ನಡೆದಂಥ ಸ್ಥಳದ ಮೇಲೆ ಹೊಂದಿಕೊಂಡು ಹಾನಿ ಹೆಚ್ಚಾಗಿದೆ. ಲೋಕದ ಬಹುಭಾಗಗಳಲ್ಲಿ ಭ್ರಷ್ಟ ವ್ಯಕ್ತಿಗಳ ಅಕ್ರಮ ವ್ಯವಹಾರದಿಂದಾಗಿ ಮತ್ತು ಆರ್ಥಿಕ ಅಥವಾ ಸಾಮಾಜಿಕ ಅಸಮಾನತೆಯಿಂದಾಗಿ ಎಷ್ಟೋ ಜನರು ಅಪಾಯಕರ ಸ್ಥಳಗಳಲ್ಲಿ ವಾಸಿಸಬೇಕಾಗಿ ಬಂದಿದೆ. ಈ ಕಾರಣದಿಂದ ಇಂಥ ಕ್ಷೇತ್ರಗಳಲ್ಲಿನ ಹಾನಿ ಹೆಚ್ಚಾಗಿರುತ್ತದೆ. ಆದರೆ ಕೆಲವೊಮ್ಮೆ ಜನರಿಗೆ ವಿಪತ್ತುಗಳಿಂದ ಹಾನಿಯಾಗುವುದು ಮನುಷ್ಯನ ತಪ್ಪು ಅಥವಾ ನಿರ್ಲಕ್ಷ್ಯದ ಕಾರಣದಿಂದಲ್ಲ, ಅನಿರೀಕ್ಷಿತವಾಗಿ ನಡೆದ ಘಟನೆಯಿಂದ.—ಪ್ರಸಂಗಿ 9:11.

ಯಾವುದೇ ಕಾರಣದಿಂದ ವಿಪತ್ತು ಸಂಭವಿಸಲಿ, ನೀವು ಅದರಲ್ಲಿ ಸಿಕ್ಕಿಬಿದ್ದರೆ ಏನು ಮಾಡಬಲ್ಲಿರಿ? ವಿಪತ್ತುಗಳು ಸಂಭವಿಸುವಾಗ ಅದರ ಪರಿಣಾಮವನ್ನು ನಿಭಾಯಿಸಲು ಏನು ಮಾಡಬಲ್ಲೆವೆಂದು ನೋಡೋಣ. (w11-E 12/01)

[ಪುಟ 5ರಲ್ಲಿರುವ ಚಿತ್ರ]

ಜನನಿಬಿಡತೆ

[ಪುಟ 5ರಲ್ಲಿರುವ ಚಿತ್ರ]

ಅರಣ್ಯನಾಶ

[ಪುಟ 5ರಲ್ಲಿರುವ ಚಿತ್ರ]

ಮಾಲಿನ್ಯ

[ಪುಟ 5ರಲ್ಲಿರುವ ಚಿತ್ರ ಕೃಪೆ]

ಎಡಬದಿ: © Mark Henley/Panos Pictures

ಮಧ್ಯ: © Jeroen Oerlemans/Panos Pictures