ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಗನನ್ನೇ ಬಲಿಕೊಡುವಂತೆ ದೇವರು ಅಬ್ರಹಾಮನಿಗೆ ಹೇಳಿದ್ದೇಕೆ?

ಮಗನನ್ನೇ ಬಲಿಕೊಡುವಂತೆ ದೇವರು ಅಬ್ರಹಾಮನಿಗೆ ಹೇಳಿದ್ದೇಕೆ?

ನಮ್ಮ ಓದುಗರ ಪ್ರಶ್ನೆ

ಮಗನನ್ನೇ ಬಲಿಕೊಡುವಂತೆ ದೇವರು ಅಬ್ರಹಾಮನಿಗೆ ಹೇಳಿದ್ದೇಕೆ?

▪ ಮಗನನ್ನೇ ಬಲಿಕೊಡುವಂತೆ ಯೆಹೋವ ದೇವರು ಅಬ್ರಹಾಮನಿಗೆ ಹೇಳಿದ್ದನ್ನು ಬೈಬಲಿನ ಆದಿಕಾಂಡ ಪುಸ್ತಕ ವರದಿಸುತ್ತದೆ. (ಆದಿಕಾಂಡ 22:2) ಬೈಬಲ್‌ ಓದುಗರಲ್ಲಿ ಕೆಲವರಿಗೆ ಈ ವಿಷಯ ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಉದಾಹರಣೆಗೆ ಪ್ರಾಧ್ಯಾಪಕಿ ಕ್ಯಾರಲ್‌ ಎಂಬವರು ಹೇಳುವುದನ್ನು ಕೇಳಿ: “ಈ ಕಥೆಯನ್ನು ನಾನು ಮೊದಲ ಬಾರಿ ಕೇಳಿದ್ದು ಚಿಕ್ಕವಳಿದ್ದಾಗ. ಕೇಳಿದಾಕ್ಷಣ ‘ಇಂಥ ಬಲಿಯನ್ನು ಕೇಳುವವನು ಎಂಥ ದೇವರಪ್ಪಾ?’ ಎಂಬ ಆಕ್ರೋಶ ಮನದಲ್ಲಿ ಎದ್ದಿತು.” ಈ ರೀತಿಯ ಅನಿಸಿಕೆ ಸಹಜ. ಆದರೆ ಈ ಕೆಲವೊಂದು ಅಂಶಗಳನ್ನು ಪರಿಗಣಿಸಿ.

ಮೊದಲನೆಯದಾಗಿ, ಇಸಾಕನನ್ನು ಬಲಿಕೊಡುವಂತೆ ಯೆಹೋವನು ಹೇಳಿದರೂ ಏನು ಮಾಡಲಿಲ್ಲ ಎಂಬದನ್ನು ಗಮನಿಸಿ. ಅಬ್ರಹಾಮನೇನೊ ಮಗನನ್ನು ಬಲಿ ಅರ್ಪಿಸಲು ಸಿದ್ಧನಿದ್ದ. ಆದರೆ ಅವನು ಹಾಗೆ ಮಾಡುವಂತೆ ಯೆಹೋವನು ಬಿಡಲಿಲ್ಲ. ಅಂಥ ಬಲಿಯನ್ನು ಯಾರಿಂದಲೂ ಮುಂದೆಂದೂ ಕೇಳಲಿಲ್ಲ. ತನ್ನೆಲ್ಲ ಆರಾಧಕರು, ಮಕ್ಕಳು ಸಹ ದೀರ್ಘಕಾಲ ಬದುಕಬೇಕು, ಸಂತೋಷದಿಂದ ಬಾಳಬೇಕು ಎನ್ನುವುದು ಯೆಹೋವನ ಆಸೆ.

ಎರಡನೆಯದಾಗಿ, ಇಸಾಕನನ್ನು ಬಲಿಯರ್ಪಿಸುವಂತೆ ಯೆಹೋವನು ಕೇಳಲು ಒಂದು ವಿಶೇಷ ಕಾರಣವಿತ್ತೆಂದು ಬೈಬಲಿನಿಂದ ತಿಳಿದುಬರುತ್ತದೆ. ಶತಮಾನಗಳ ನಂತರ ಮಾನವರಿಗಾಗಿ ತನ್ನ ಪುತ್ರ ಯೇಸುವನ್ನು * ಬಲಿಯಾಗಿ ಅರ್ಪಿಸಲಿದ್ದೇನೆಂದು ದೇವರಿಗೆ ತಿಳಿದಿತ್ತು. (ಮತ್ತಾಯ 20:28) ಹಾಗೆ ಮಾಡುವಾಗ ಯೆಹೋವನಿಗೆ ಅಪಾರ ನೋವಾಗಲಿತ್ತು. ಇಸಾಕನನ್ನು ಅರ್ಪಿಸಲು ಅಬ್ರಹಾಮನನ್ನು ವಿನಂತಿಸುವ ಮೂಲಕ ಆ ನೋವನ್ನು ನಮಗೆ ಮನಮುಟ್ಟುವ ರೀತಿಯಲ್ಲಿ ತೋರಿಸಿದನು. ಅದು ಹೇಗೆ?

ಯೆಹೋವನು ಅಬ್ರಹಾಮನಿಗೆ ಹೇಳಿದ ಮಾತನ್ನು ನೆನಪಿಗೆ ತನ್ನಿ: “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ತೆಗೆದುಕೊಂಡು . . . ಸರ್ವಾಂಗಹೋಮವಾಗಿ ಅರ್ಪಿಸಬೇಕು.” (ಆದಿಕಾಂಡ 22:2) ಇಸಾಕನು “ನಿನಗೆ ಪ್ರಿಯನಾಗಿರುವ” ಮಗ ಎಂದು ದೇವರು ಹೇಳಿದ್ದನ್ನು ಗಮನಿಸಿ. ಅಬ್ರಹಾಮನಿಗೆ ಇಸಾಕನ ಮೇಲೆ ಎಷ್ಟು ಪ್ರೀತಿಯಿತ್ತೆಂದು ದೇವರಿಗೆ ತಿಳಿದಿತ್ತು. ಪುತ್ರಪ್ರೇಮ ಏನೆಂದು ದೇವರಿಗೆ ಗೊತ್ತಿತ್ತು ಏಕೆಂದರೆ ತನ್ನ ಪುತ್ರನಾದ ಯೇಸುವನ್ನು ಆತನು ಅಪಾರವಾಗಿ ಪ್ರೀತಿಸುತ್ತಿದ್ದನು. ಆದ್ದರಿಂದಲೇ ಯೇಸು ಭೂಮಿಯಲ್ಲಿದ್ದಾಗ ಎರಡು ಬಾರಿ ಆಕಾಶದಿಂದ ಗಟ್ಟಿಯಾದ ಸ್ವರದಲ್ಲಿ ಯೇಸುವನ್ನು “ಪ್ರಿಯನಾಗಿರುವ ನನ್ನ ಮಗ” ಎಂದು ಕರೆದನು.—ಮಾರ್ಕ 1:11; 9:7.

ಇಸಾಕನನ್ನು ಅರ್ಪಿಸಲು ಯೆಹೋವನು ಹೇಳಿದಾಗ ಹೀಬ್ರು ಭಾಷೆಯಲ್ಲಿ ಬಳಸಿದ ಪದ ದೇವರು ಅಬ್ರಹಾಮನನ್ನು ವಿನಂತಿಸುವಂತೆ ಇದೆ. “ತಾನೇನು ಕೇಳಿಕೊಳ್ಳುತ್ತಿದ್ದೇನೊ ಅದೆಷ್ಟು ಅಮೂಲ್ಯ ಎಂಬ ಅರಿವು” ದೇವರಿಗಿತ್ತೆಂದು ಆ ಪದದ ಬಳಕೆ ತೋರಿಸುತ್ತದೆ ಎನ್ನುತ್ತಾನೆ ಒಬ್ಬ ಬೈಬಲ್‌ ವಿದ್ವಾಂಸ. ದೇವರು ಕೇಳಿಕೊಂಡ ಸಂಗತಿಯಿಂದ ಅಬ್ರಹಾಮನಿಗಾದ ಅತೀವ ದುಃಖವನ್ನು ಸ್ವಲ್ಪ ಊಹಿಸಿ. ಹಾಗೆಯೇ ತನ್ನ ಪ್ರಿಯ ಮಗ ಯೇಸು ಯಾತನೆ-ನೋವು ಅನುಭವಿಸಿ ಸಾಯುವುದನ್ನು ನೋಡಿದಾಗ ಯೆಹೋವನಿಗೆಷ್ಟು ನೋವಾಗಿರಬೇಕಲ್ಲವೆ? ಅಂಥ ನೋವನ್ನು ಆತನು ಹಿಂದೆಂದೂ ಅನುಭವಿಸಲಿಲ್ಲ, ಮುಂದೆಂದೂ ಅನುಭವಿಸುವುದೂ ಇಲ್ಲ.

ಯೆಹೋವನು ಅಬ್ರಹಾಮನಿಗೆ ಮಾಡಲು ಹೇಳಿದ ಸಂಗತಿ ನಮಗೆ ಇಷ್ಟವಾಗದಿದ್ದರೂ ಒಂದು ವಿಷಯ ನೆನಪಿಡುವುದು ಒಳ್ಳೇದು. ತಂದೆಯಾದವನೊಬ್ಬನಿಗೆ ಆಗಬಹುದಾದ ಅತ್ಯಂತ ನೋವಿನ ಅನುಭವದಿಂದ ಯೆಹೋವನು ಅಬ್ರಹಾಮನನ್ನು ತಪ್ಪಿಸಿದನು. ಅವನು ಆ ಬಲಿ ಕೊಡುವಂತೆ ಬಿಡಲಿಲ್ಲ. ಇಸಾಕನನ್ನು ಉಳಿಸಿದನು. ಆದರೆ ತನ್ನ ಮಗನ ವಿಷಯದಲ್ಲಿ ಯೆಹೋವನು ಏನು ಮಾಡಿದನು? ‘ಸ್ವಂತ ಮಗನನ್ನು ಉಳಿಸಿಕೊಳ್ಳದೆ ನಮಗೆಲ್ಲರಿಗೋಸ್ಕರ ಒಪ್ಪಿಸಿಕೊಟ್ಟನು.’ (ರೋಮನ್ನರಿಗೆ 8:32) ಇಂಥ ನೋವನ್ನು ಯೆಹೋವನು ಯಾತಕ್ಕಾಗಿ ಸಹಿಸಿಕೊಂಡನು? ನಾವು ಜೀವವನ್ನು ಪಡೆದುಕೊಳ್ಳಬೇಕೆಂದೇ. (1 ಯೋಹಾನ 4:9) ನೋಡಿ, ದೇವರಿಗೆ ನಮ್ಮ ಮೇಲೆ ಎಷ್ಟು ಪ್ರೀತಿಯಿದೆ! ಇದು ನಾವೂ ಆತನಿಗೆ ನಮ್ಮ ಪ್ರೀತಿ ತೋರಿಸುವಂತೆ ಪ್ರೇರಿಸುತ್ತದಲ್ಲವೇ? * (w12-E 01/01)

[ಪಾದಟಿಪ್ಪಣಿಗಳು]

^ ಪ್ಯಾರ. 5 ದೇವರಿಗೆ ಈ ಮಗ ಸ್ತ್ರೀ ಸಂಬಂಧದಿಂದ ಹುಟ್ಟಿದನೆಂದು ಇದರರ್ಥವಲ್ಲ. ಬೈಬಲ್‌ ಇದನ್ನು ಕಲಿಸುವುದಿಲ್ಲ. ದೇವರು ಯೇಸುವನ್ನು ಕನ್ಯೆ ಮರಿಯಳ ಗರ್ಭಕ್ಕೆ ಸ್ಥಳಾಂತರಿಸಿ ಮಾನವನಾಗಿ ಹುಟ್ಟುವಂತೆ ಮಾಡುವ ಎಷ್ಟೋ ಮುಂಚೆ ಸ್ವರ್ಗದಲ್ಲಿ ವಾಸಿಸುವ ಜೀವಿಯಾಗಿ ಸೃಷ್ಟಿಸಿದ್ದನು. ಹಾಗಾಗಿ ಯೆಹೋವನನ್ನು ಯೇಸುವಿನ ತಂದೆ ಎಂದು ಕರೆಯುವುದು ಸೂಕ್ತ.

^ ಪ್ಯಾರ. 8 ಯೇಸು ಸಾಯುವ ಅಗತ್ಯವೇನಿತ್ತು? ಈ ತ್ಯಾಗಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಲ್ಲೆವು? ಈ ಬಗ್ಗೆ ಹೆಚ್ಚು ತಿಳಿಯಲಿಕ್ಕಾಗಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 5ನ್ನು ಓದಿ.