ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಕ್ಕಳಿಗೆ ಕಲಿಸಿರಿ

ದೇವರಿಗೆ ದುಃಖವಾಗುತ್ತದೆ—ದೇವರನ್ನು ಖುಷಿಪಡಿಸೋದು ಹೇಗೆ?

ದೇವರಿಗೆ ದುಃಖವಾಗುತ್ತದೆ—ದೇವರನ್ನು ಖುಷಿಪಡಿಸೋದು ಹೇಗೆ?

ನೀವು ಯಾವತ್ತಾದರೂ ಅತ್ತಿದ್ದೀರಾ? a ನಾವೆಲ್ಲರೂ ಅತ್ತಿರುತ್ತೇವೆ. ಯಾರಾದರೂ ಹೊಡೆದಾಗ ಮಾತ್ರವಲ್ಲ, ನಮ್ಮ ಬಗ್ಗೆ ಚಾಡಿ ಹೇಳಿದಾಗ ಕೂಡ ನಾವು ಅಳುತ್ತೇವೆ. ಯಾರಾದರೂ ಹೀಗೆ ಮಾಡಿದಾಗ ಬೇಜಾರಾಗುತ್ತೆ, ಅಲ್ವಾ?— ದೇವರ ಬಗ್ಗೆ ಸುಳ್ಳು ಹೇಳಿದಾಗ ದೇವರಿಗೂ ದುಃಖವಾಗುತ್ತದೆ. ಈಗ ನಾವು ಅದರ ಬಗ್ಗೆ ನೋಡೋಣ. ದೇವರ ಮನಸ್ಸಿಗೆ ನೋವು ಕೊಡದೆ ಖುಷಿಪಡಿಸುವುದು ಹೇಗೆ ಅಂತ ಕಲಿಯೋಣ.

ದೇವರನ್ನು ಪ್ರೀತಿಸುತ್ತೇವೆ ಅಂತ ಹೇಳುತ್ತಿದ್ದ ಜನರೇ “ದೇವರಿಗೆ ದುಃಖವಾಗುವ ಥರ ನಡೆದುಕೊಂಡರು” ಅಂದರೆ ದೇವರಿಗೆ “ನೋವು ಮಾಡಿದರು!” ಅಂತ ಬೈಬಲ್‌ ಹೇಳುತ್ತದೆ. ದೇವರಿಗೆ ಯಾರೂ ಹೊಡೆದು ನೋವು ಮಾಡಕ್ಕಾಗಲ್ಲ. ಯಾಕೆಂದರೆ ದೇವರಿಗೆ ಎಲ್ಲರಿಗಿಂತ ಜಾಸ್ತಿ ಶಕ್ತಿ ಇದೆ. ಆದ್ದರಿಂದ ಯೆಹೋವ ದೇವರಿಗೆ ನೋವಾಗುವುದು ಯಾವಾಗೆಂದರೆ ಹೇಳಿದ ಹಾಗೆ ನಾವು ಕೇಳದೆ ಇದ್ದಾಗ. ಹೇಗೆ ಅಂತ ನೋಡೋಣ.

ಮೊದಲ ಮನುಷ್ಯರನ್ನು ಸೃಷ್ಟಿಸಿದ ಮೇಲೆ ಅವರು ಏದೆನ್‌ ತೋಟದಲ್ಲಿ ವಾಸಿಸುವಂತೆ ಯೆಹೋವ ದೇವರು ಏರ್ಪಾಡು ಮಾಡಿದನು. ಈ ಇಬ್ಬರು ಮನುಷ್ಯರು ದೇವರನ್ನು ದುಃಖಪಡಿಸಿದರು. ಈ ಇಬ್ಬರು ಯಾರು?— ಹೌದು. . . ಆದಾಮ ಹವ್ವ. ಇವರು ದೇವರನ್ನು ದುಃಖಪಡಿಸಿದರು. ಅವರು ಅಂಥದ್ದು ಏನು ಮಾಡಿದರು ಅಂತ ಈಗ ನೋಡೋಣ.

ಯೆಹೋವ ದೇವರು ಅವರನ್ನು ಏದೆನ್‌ ತೋಟದಲ್ಲಿ ವಾಸ ಮಾಡಲು ಹೇಳಿ ಅದನ್ನು ನೋಡಿಕೊಳ್ಳಿ ಅಂತ ಅವರಿಗೆ ಹೇಳಿದನು. ಅಷ್ಟೇ ಅಲ್ಲ ನೀವು ಮಕ್ಕಳನ್ನು ಪಡೆಯಬಹುದು ಮತ್ತು ಅವರ ಜತೆ ಏದೆನ್‌ ತೋಟದಲ್ಲಿ ಸಾಯದೆ ಬದುಕಿರಬಹುದು ಅಂತ ಹೇಳಿದನು. ಆದರೆ ಅವರಿಗೆ ಮಕ್ಕಳಾಗುವ ಮುಂಚೆನೇ ಆದಾಮ ಹವ್ವರು ಒಂದು ತಪ್ಪು ಕೆಲಸ ಮಾಡಿದರು. ಅದೇನು ಅಂತ ನಿನಗೆ ಗೊತ್ತಾ?— ಮೊದಲು ಹವ್ವ ಆಮೇಲೆ ಆದಾಮ ಯೆಹೋವ ದೇವರ ವಿರುದ್ಧ ತಪ್ಪು ಮಾಡೋ ಹಾಗೆ ಒಬ್ಬ ದೇವದೂತ ಪ್ರಚೋದಿಸಿದ. ಹೇಗೆ?

ಆ ದೇವದೂತ ಒಂದು ಸರ್ಪ ಅಂದರೆ ಹಾವನ್ನು ಮಾತಾಡುವ ಹಾಗೆ ಮಾಡಿದ. ಆ ಹಾವು ಹವ್ವಳ ಹತ್ತಿರ ಬಂದು ಹೇಳಿದ್ದು ನೀನು “ದೇವರ ಥರ ಆಗುತ್ತೀಯ” ಅಂತ. ಇದನ್ನು ಕೇಳಿದಾಗ ಅವಳಿಗೆ ತುಂಬ ಖುಷಿಯಾಯಿತು. ಹಾಗಾಗಿ ಹಾವು ಹೇಳಿದ ಹಾಗೆ ಮಾಡಿದಳು. ಅವಳು ಏನು ಮಾಡಿದಳು?

ಆದಾಮನಿಗೆ ದೇವರು ಯಾವುದನ್ನು ತಿನ್ನಬಾರದು ಅಂತ ಹೇಳಿದನೋ ಆ ಮರದ ಹಣ್ಣನ್ನು ಹವ್ವ ಕಿತ್ತು ತಿಂದಳು. ಹವ್ವಳನ್ನು ಸೃಷ್ಟಿ ಮಾಡುವ ಮುಂಚೆನೇ ದೇವರು ಆದಾಮನಿಗೆ ಹೀಗೆ ಹೇಳಿದ್ದನು: “ನಿನಗೆ ಎಷ್ಟು ಬೇಕೋ ಅಷ್ಟು ಹಣ್ಣನ್ನು ತಿನ್ನಬಹುದು. ಆದರೆ ಒಳ್ಳೇದರ ಕೆಟ್ಟದರ ತಿಳುವಳಿಕೆ ಮೂಡಿಸುವ ಮರದ ಹಣ್ಣನ್ನು ಮಾತ್ರ ನೀನು ತಿನ್ನಬಾರದು. ಅದನ್ನು ತಿಂದ ದಿನವೇ ನೀನು ಸತ್ತುಹೋಗುತ್ತಿಯಾ.”

ದೇವರು ಹೀಗೆ ಹೇಳಿದ್ದು ಹವ್ವಳಿಗೂ ಗೊತ್ತಿತ್ತು. ಆದರೆ ಅವಳು ಯಾವಾಗಲೂ ಆ ಮರವನ್ನೇ ನೋಡುತ್ತಾ ಇದ್ದಳು. ಅದು ಅವಳಿಗೆ “ತಿನ್ನುವದಕ್ಕೆ ಉತ್ತಮವಾಗಿಯೂ ನೋಡುವದಕ್ಕೆ ರಮ್ಯವಾಗಿಯೂ ಕಾಣಿಸಿತು. ಅವಳದನ್ನು ತೆಗೆದುಕೊಂಡು ತಿಂದಳು.” ಆಮೇಲೆ ಆದಾಮನಿಗೂ ಕೊಟ್ಟಳು. ಅವನೂ ತಿಂದ. ಯಾಕೆ ತಿಂದ? ನಿನಗೇನು ಅನಿಸುತ್ತೆ?— ಯಾಕೆಂದರೆ ಆದಾಮನಿಗೆ ದೇವರಿಗಿಂತ ಹವ್ವಳ ಮೇಲೆ ಜಾಸ್ತಿ ಪ್ರೀತಿ ಇತ್ತು. ಹಾಗಾಗಿ ದೇವರನ್ನು ಖುಷಿ ಪಡಿಸುವುದಕ್ಕಿಂತ ಹವ್ವಳನ್ನು ಖುಷಿಪಡಿಸಿದನು. ಆದರೆ ನಾವು ದೇವರ ಮಾತನ್ನು ಯಾವಾಗಲೂ ಕೇಳಬೇಕು. ಅದು ಬಹಳ ಮುಖ್ಯ!

ಒಂದು ಸರ್ಪ ಅಥವಾ ಹಾವು ಹವ್ವಳ ಹತ್ತಿರ ಮಾತಾಡಿದ್ದರ ಬಗ್ಗೆ ನೋಡಿದೆವಲ್ಲಾ? ಮನುಷ್ಯನೊಬ್ಬ ಒಂದು ಗೊಂಬೆಯ ಬಾಯನ್ನು ಅಲ್ಲಾಡಿಸಿ ಹಿಂದೆಯಿಂದ ಮಾತಾಡುತ್ತಾನಲ್ಲ ಅದೇ ರೀತಿ ಯಾರೋ ಒಬ್ಬ ಹಾವಿನ ಹಿಂದೆ ನಿಂತು ಮಾತಾಡುತ್ತಿದ್ದ. ಯಾರದು?— ಅದು “ಪುರಾತನ ಸರ್ಪ ಅಂದರೆ ಪಿಶಾಚನಾದ ಸೈತಾನ.”

ಯೆಹೋವ ದೇವರನ್ನು ಹೇಗೆ ಖುಷಿಪಡಿಸಬಹುದು ಅಂತ ಹೇಳ್ತಿಯಾ?— ಯೆಹೋವ ದೇವರು ಹೇಳಿದ ಮಾತನ್ನು ನೀನು ಕೇಳಿದರೆ ಆತನಿಗೆ ಖುಷಿಪಡಿಸಬಹುದು. ಸೈತಾನ ಏನು ಹೇಳಿದ್ದಾನೆ ಗೊತ್ತಾ? ಎಲ್ಲ ಜನರೂ ತನ್ನ ಮಾತನ್ನು ಕೇಳುವ ಹಾಗೆ ಮಾಡುತ್ತೇನೆ ಅಂತ ಹೇಳಿದ್ದಾನೆ. ಹಾಗಾಗಿ ಯೆಹೋವ ದೇವರು “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರಕೊಡಲಾಗುವದು” ಅಂತ ನಮಗೆ ಪ್ರೀತಿಯಿಂದ ಹೇಳುತ್ತಿದ್ದಾನೆ. ಸೈತಾನ ಯೆಹೋವ ದೇವರನ್ನು ದೂರುತ್ತಿದ್ದಾನೆ ಅಥವಾ ಗೇಲಿಮಾಡುತ್ತಿದ್ದಾನೆ. ‘ಎಲ್ಲರನ್ನೂ ನನ್ನ ಕಡೆಗೆ ಎಳೆದು ಕೊಂಡು ನಿನ್ನನ್ನು ಆರಾಧಿಸದ ಹಾಗೆ ಮಾಡ್ತೇನೆ, ನೋಡ್ತಾ ಇರು’ ಅಂತ ಯೆಹೋವ ದೇವರನ್ನು ಸೈತಾನ ಗೇಲಿಮಾಡುತ್ತಿದ್ದಾನೆ. ಹಾಗಾಗಿ ನೀನು ಯೆಹೋವ ದೇವರ ಮಾತನ್ನು ಪಾಲಿಸಬೇಕು. ಆತನನ್ನು ಆರಾಧಿಸಬೇಕು. ಆಗ ದೇವರಿಗೆ ತುಂಬ ಖುಷಿಯಾಗುತ್ತೆ! ಎಷ್ಟೇ ಕಷ್ಟ ಆದರೂ ನೀನಿದನ್ನು ಮಾಡ್ತೀಯಾ ಕಂದಾ?— (w13-E 09/01)

a ಈ ಲೇಖನವನ್ನು ನೀವು ಚಿಕ್ಕ ಮಗುವಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಮಗು ಉತ್ತರ ಹೇಳುವಂತೆ ಪ್ರೋತ್ಸಾಹಿಸಿ.