ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಸುಖ ಸಂಸಾರಕ್ಕೆ ಸೂತ್ರಗಳು

ಹದಿವಯಸ್ಸಿನ ಮಕ್ಕಳ ಜತೆ ವಾದಿಸಬೇಡಿ—ಮಾತಾಡಿ

ಹದಿವಯಸ್ಸಿನ ಮಕ್ಕಳ ಜತೆ ವಾದಿಸಬೇಡಿ—ಮಾತಾಡಿ

“ನನ್ನ ಮಗಳು 14ನೇ ಪ್ರಾಯದವಳಾಗಿದ್ದಾಗ ನನಗೆ ಎದುರುತ್ತರ ಕೊಡುತ್ತಿದ್ದಳು. ‘ಊಟಕ್ಕೆ ಬಾರಮ್ಮ ಸಮಯ ಆಯಿತು’ ಅಂತ ಕರೆದರೆ ‘ತಿನ್ನಬೇಕನಿಸಿದಾಗ ತಿನ್ನುತ್ತೀನಿ’ ಎಂದು ಹೇಳುತ್ತಿದ್ದಳು. ಅವಳ ಕೆಲಸವನ್ನೆಲ್ಲಾ ಮುಗಿಸಿದ್ದಾಳಾ ಅಂತ ಕೇಳಿದರೆ ‘ಅಮ್ಮ ಸುಮ್ನೆ ನನ್ನ ತಲೆ ತಿನ್ನಬೇಡ’ ಎನ್ನುತ್ತಿದ್ದಳು. ಅನೇಕ ಸಲ ಇಬ್ಬರೂ ಧ್ವನಿಯೇರಿಸಿ ಜೋರುಜೋರಾಗಿ ಜಗಳವಾಡುತ್ತಿದ್ದೆವು.”—ಜಪಾನಿನ ಮ್ಯಾಕಿ. *

ನಿಮಗೆ ಹದಿವಯಸ್ಸಿನ ಮಗ/ಮಗಳಿರುವುದಾದರೆ ನಿಮ್ಮ ಮಧ್ಯೆ ನಡೆಯುವ ಮಾತಿನ ಚಕಮಕಿ ಹೆತ್ತವರಾಗಿ ನಿಮಗಿರುವ ಕೌಶಲಗಳನ್ನು, ತಾಳ್ಮೆಯನ್ನು ಬಹಳವಾಗಿ ಪರೀಕ್ಷಿಸುತ್ತದೆ. ಬ್ರೆಜಿಲ್‌ ದೇಶದ ಮರಿಯಾ ಎಂಬವರಿಗೆ 14 ವರ್ಷದ ಮಗಳಿದ್ದಾಳೆ. ಆಕೆ ಅನ್ನುವುದು: “ನನ್ನ ಮಗಳು ನನ್ನ ಅಧಿಕಾರವನ್ನು ಪ್ರಶ್ನಿಸುವಾಗ ನನ್ನ ರಕ್ತ ಕುದಿಯುತ್ತದೆ. ನನಗೂ ಅವಳಿಗೂ ಎಷ್ಟು ಕಿರಿಕಿರಿಯಾಗುತ್ತದೆಂದರೆ, ಇಬ್ಬರೂ ಕೂಗಾಡುತ್ತೇವೆ.” ಇಟಲಿಯ ಕಾರ್ಮೆಲಾಗೂ ಇಂಥದ್ದೇ ಸಮಸ್ಯೆ. “ನನ್ನ ಮಗನ ಜತೆ ನಡೆಯುವ ವಾಗ್ವಾದ ಯಾವಾಗಲೂ ತುಂಬ ಬಿರುಸು. ಅದು ನಿಂತುಹೋಗುವುದು ಅವನು ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡಾಗಲೇ” ಎನ್ನುತ್ತಾರೆ ಅವರು.

ಕೆಲವು ಹದಿಪ್ರಾಯದವರು ಯಾಕೆ ಜಗಳಗಂಟರಂತಿರುತ್ತಾರೆ? ಅವರ ಸಮಾನಸ್ಥರು ಕಾರಣರಾ? ಇರಬಹುದು. ಬೈಬಲ್‌ ಹೇಳುವಂತೆ ಒಬ್ಬ ವ್ಯಕ್ತಿಯ ಸ್ನೇಹಿತರು ಅವನನ್ನು ತುಂಬ ಪ್ರಭಾವಿಸಬಹುದು. ಆ ಪ್ರಭಾವ ಒಳ್ಳೇದಾಗಿರಬಹುದು ಅಥವಾ ಕೆಟ್ಟದ್ದಾಗಿರಬಹುದು. (ಜ್ಞಾನೋಕ್ತಿ 13:20; 1 ಕೊರಿಂಥ 15:33) ಇದರ ಜೊತೆಗೆ ಇಂದಿನ ಮನೋರಂಜನೆ ಸಹ ಯುವ ಜನರ ದಂಗೆ ಹಾಗೂ ಅಗೌರವದ ವರ್ತನೆ ಸರಿಯೆಂದು ಬಿಂಬಿಸುತ್ತಿದೆ.

ಇದಲ್ಲದೆ ಬೇರೆ ಅಂಶಗಳನ್ನೂ ನಾವು ನೋಡಬೇಕು. ಈ ಅಂಶಗಳು ನಿಮ್ಮ ಹದಿಪ್ರಾಯದ ಮಕ್ಕಳನ್ನು ಹೇಗೆ ಪ್ರಭಾವಿಸುತ್ತಿರಬಹುದು ಎಂದು ಅರ್ಥಮಾಡಿಕೊಂಡರೆ ಅವನ್ನು ನಿಭಾಯಿಸುವುದು ಕಷ್ಟವೇನಲ್ಲ. ಕೆಲವು ಉದಾಹರಣೆಗಳನ್ನು ಗಮನಿಸಿ.

“ವಿವೇಚನಾಶಕ್ತಿ” ಬೆಳೆಸಿಕೊಳ್ಳುವುದು

ಯೇಸುವಿನ ಶಿಷ್ಯ ಪೌಲ ಹೀಗೆ ಬರೆದನು: “ನಾನು ಮಗುವಾಗಿದ್ದಾಗ ಮಗುವಿನಂತೆ ಮಾತಾಡುತ್ತಿದ್ದೆನು, ಮಗುವಿನಂತೆ ಆಲೋಚಿಸುತ್ತಿದ್ದೆನು, ಮಗುವಿನಂತೆ ತರ್ಕಿಸುತ್ತಿದ್ದೆನು; ಆದರೆ ಈಗ ನಾನು ಪುರುಷನಾಗಿದ್ದೇನೆ, ಮಗುವಿನ ಗುಣಲಕ್ಷಣಗಳನ್ನು ಬಿಟ್ಟುಬಿಟ್ಟಿದ್ದೇನೆ.” (1 ಕೊರಿಂಥ 13:11) ಪೌಲನ ಮಾತುಗಳಿಂದ ತಿಳಿದು ಬರುವುದೇನೆಂದರೆ ಮಕ್ಕಳು ಮತ್ತು ವಯಸ್ಕರು ಯೋಚಿಸುವ ರೀತಿ ಬೇರೆ ಬೇರೆಯಾಗಿರುತ್ತದೆ. ಹೇಗೆ?

 ಚಿಕ್ಕ ಮಕ್ಕಳು ಹೇಗೆ ಯೋಚಿಸುತ್ತಾರೆಂದರೆ ‘ಇದು ಸರಿ,’ ‘ಇದು ತಪ್ಪು,’ ಅದಕ್ಕಿಂತ ಮುಂದೇನಿಲ್ಲ. ಆದರೆ ತಪ್ಪು ಮತ್ತು ಸರಿ ಎಂದು ಸ್ಪಷ್ಟವಾಗಿ ಹೇಳಲಾಗದ ವಿಷಯಗಳ ಬಗ್ಗೆ ವಿವೇಚಿಸಲು ವಯಸ್ಕರಿಗೆ ಸಾಧ್ಯ. ಆಳವಾಗಿ ಯೋಚಿಸಿ ನಿರ್ಣಯಗಳನ್ನು ಮಾಡುವ ಸಾಮರ್ಥ್ಯ ಅವರಿಗಿರುತ್ತದೆ. ಉದಾಹರಣೆಗೆ ವಯಸ್ಕರು ಒಂದು ಸಂಗತಿಯ ಹಿಂದಿರುವ ನೈತಿಕ ವಿಷಯಗಳಿಗೆ ಗಮನ ಕೊಡುವ ಸಾಧ್ಯತೆ ಹೆಚ್ಚಿದೆ. ತಾವೇನು ಮಾಡುತ್ತೇವೊ ಅದು ಹೇಗೆ ಬೇರೆಯವರನ್ನು ಪ್ರಭಾವಿಸಬಹುದೆಂದು ಯೋಚಿಸುತ್ತಾರೆ. ಅವರು ಆ ರೀತಿ ಯೋಚಿಸುವುದಕ್ಕೆ ಒಗ್ಗಿಹೋಗಿರಬಹುದು. ಆದರೆ ಹದಿಪ್ರಾಯದವರು ಈ ರೀತಿ ಯೋಚಿಸುವ ಹಾದಿಯಲ್ಲಿ ಇನ್ನೂ ಹೊಸಬರು.

ಯುವಜನರು “ಬುದ್ಧಿ” ಅಂದರೆ ಯೋಚನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಂತೆ ಬೈಬಲ್‌ ಪ್ರೋತ್ಸಾಹಿಸುತ್ತದೆ. (ಜ್ಞಾನೋಕ್ತಿ 1:4) “ವಿವೇಚನಾಶಕ್ತಿಯನ್ನು” ಬಳಸುವುದು ವಿವೇಕಯುತವೆಂದೂ ಅದು ಹೇಳುತ್ತದೆ. (ರೋಮನ್ನರಿಗೆ 12:1, 2; ಇಬ್ರಿಯ 5:14) ಆದರೆ ಹದಿಪ್ರಾಯದವರಲ್ಲಿ ವಿವೇಚಿಸುವ ಸಾಮರ್ಥ್ಯ ಕಡಿಮೆಯಿರುವ ಕಾರಣ ಕೆಲವೊಮ್ಮೆ ಸಣ್ಣಪುಟ್ಟ ವಿಷಯಕ್ಕೂ ಅವರು ನಿಮ್ಮ ಹತ್ತಿರ ವಾದಕ್ಕಿಳಿಯಬಹುದು. ಅಥವಾ ಅವರು ಹೇಳುತ್ತಿರುವ ವಿಷಯದಿಂದ ನಿರ್ಣಯ ಮಾಡುವ ಸಾಮರ್ಥ್ಯ ಅವರಲ್ಲಿ ಎಷ್ಟು ಕಡಿಮೆಯಿದೆ ಎಂದು ತಿಳಿದುಬರಬಹುದು. (ಜ್ಞಾನೋಕ್ತಿ 14:12) ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಹದಿಪ್ರಾಯದ ಮಕ್ಕಳ ಜೊತೆ ನೀವು ಹೇಗೆ ಜಗಳ ಮಾಡದೆ ಮಾತಾಡುತ್ತೀರ?

ಹೀಗೆ ಮಾಡಿ: ನಿಮ್ಮ ಹದಿವಯಸ್ಸಿನ ಮಗ ವಿವೇಚಿಸುವ ಸಾಮರ್ಥ್ಯವನ್ನು ಬಳಸಲು ಇನ್ನೂ ಕಲಿಯುತ್ತಾ ಇದ್ದಾನೆಂದು ನೆನಪಿಡಿ. * ಅವನು ಒಂದು ಸಲ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ದೃಢವಾಗಿ ಅಂಟಿಕೊಳ್ಳದಿರಲೂಬಹುದು. ಆದ್ದರಿಂದ ಅವನು ಏನು ಹೇಳುತ್ತಿದ್ದಾನೋ ಅದರ ಬಗ್ಗೆ ದೃಢವಾಗಿದ್ದಾನಾ ಎಂದು ತಿಳಿಯಲಿಕ್ಕಾಗಿ ಮೊದಲು ಅವನ ಯೋಚನಾ ಸಾಮರ್ಥ್ಯವನ್ನು ಶ್ಲಾಘಿಸಿ. (“ನೀನು ಯೋಚಿಸುವ ರೀತಿ ನನಗೆ ತುಂಬ ಇಷ್ಟ ಆಯಿತು. ಆದರೆ ನೀನು ಹೇಳಿದ್ದೆಲ್ಲಾ ನನಗೆ ಸರಿಯನಿಸುತ್ತಿಲ್ಲ ಕಣಪ್ಪಾ.”) ನಂತರ ಅವನಿಗೆ ತನ್ನ ಸ್ವಂತ ಯೋಚನಾ ಧಾಟಿಯನ್ನು ಪರೀಕ್ಷಿಸಲು ಸಹಾಯಮಾಡಿ. (“ನೀನೀಗ ಹೇಳಿದ ವಿಷಯ ಎಲ್ಲಾ ಸನ್ನಿವೇಶಕ್ಕೆ ಅನ್ವಯಿಸುತ್ತದೆಂದು ನೆನಸುತ್ತೀಯಾ?”) ನಿಮ್ಮ ಮಗ ತಾನು ಹೇಳಿದ ವಿಷಯವನ್ನು ಪುನಃ ಪರೀಕ್ಷಿಸಿ ಸರಿಪಡಿಸಿಕೊಳ್ಳುವುದನ್ನು ನೋಡಿ ನಿಮಗೇ ಆಶ್ಚರ್ಯವಾಗಬಹುದು.

ಎಚ್ಚರಿಕೆಯ ಮಾತು: ನಿಮ್ಮ ಹದಿವಯಸ್ಸಿನ ಮಕ್ಕಳ ಜತೆ ತರ್ಕಿಸುವಾಗ ನೀವು ಹೇಳಿದ್ದನ್ನು ಅವರು ಒಪ್ಪಿಕೊಳ್ಳುವ ತನಕ ವಾದಿಸುತ್ತಾ ಕೊನೆ ಮಾತು ನಿಮ್ಮದೇ ಆಗಿರಬೇಕೆಂದು ನೆನಸಬೇಡಿ. ನಿಮ್ಮ ಮಾತನ್ನು ಮಗ ಕಿವಿಗೆ ಹಾಕಿಕೊಂಡಿಲ್ಲ ಎಂದು ತೋರಿದರೂ ಆ ಚರ್ಚೆಯಿಂದ ನೀವು ಅಂದುಕೊಂಡದ್ದಕ್ಕಿಂತ ಜಾಸ್ತಿ ವಿಷಯವನ್ನೇ ಗ್ರಹಿಸಿರುತ್ತಾನೆ. ಬಹುಶಃ ಅವನದನ್ನು ಒಪ್ಪಲಿಕ್ಕಿಲ್ಲ. ಆದರೆ ಕೆಲವು ದಿನಗಳ ನಂತರ ನಿಮ್ಮ ಅಭಿಪ್ರಾಯವನ್ನೇ ಸ್ವೀಕರಿಸಿದರೂ ಸ್ವೀಕರಿಸುವನು. ನಿಮ್ಮ ಅಭಿಪ್ರಾಯವನ್ನು ತನ್ನದ್ದೇ ಎಂದು ಅವನು ಹೇಳಲೂಬಹುದು!!!

“ಕೆಲವು ಸಲ ನಾನೂ ನನ್ನ ಮಗ ಚಿಕ್ಕಚಿಕ್ಕ ವಿಷಯಗಳಿಗಾಗಿ ವಾದ ಮಾಡುತ್ತಿದ್ದೆವು. ಉದಾಹರಣೆಗೆ, ‘ಏನನ್ನೇ ಆಗಲಿ ಪೋಲು ಮಾಡಬಾರದು’ ಅಥವಾ ‘ತಂಗಿಯನ್ನು ರೇಗಿಸಬಾರದು’ ಇಂಥ ವಿಷಯಗಳ ಬಗ್ಗೆ. ಆದರೆ ಅನೇಕ ಸಲ ಅವನು ನನ್ನಿಂದ ಬಯಸುತ್ತಿದ್ದದ್ದೇನೆಂದರೆ ಅವನ ಮನಸ್ಸಲ್ಲಿ ಏನಿದೆ ಎಂದು ನಾನು ಕೇಳಬೇಕು, ಯೋಚಿಸುವ ರೀತಿಯನ್ನು ಅರ್ಥಮಾಡಿಕೊಂಡು ‘ಓ ಹಾಗಾ ವಿಷಯ’ ಇಲ್ಲವೆ ‘ನೀನು ಹೀಗೆ ಯೋಚಿಸುತ್ತೀಯಾ’ ಎಂದು ಹೇಳಬೇಕು ಅಂತ. ಹಿಂದೆ ನಡೆದ ವಾದಗಳ ಬಗ್ಗೆ ಈಗ ಯೋಚಿಸಿದರೆ ನಾನು ಸ್ವಲ್ಪ ಹೊಂದಿಸಿಕೊಂಡು ಹೋಗಿದ್ದರೆ ಎಷ್ಟೋ ವಾದಗಳನ್ನು ತಡೆಯಬಹುದಿತ್ತು ಎಂದನಿಸುತ್ತದೆ.”—ಜಪಾನಿನ ಕೆಂಜಿ.

ದೃಢ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವುದು

ಹದಿಪ್ರಾಯದ ಮಕ್ಕಳು ತಮ್ಮ ದೃಢ ಅಭಿಪ್ರಾಯಗಳನ್ನು ಹಿಂಜರಿಕೆಯಿಲ್ಲದೆ ಹೇಳುವಂಥ ವಾತಾವರಣವನ್ನು ವಿವೇಕವುಳ್ಳ ಹೆತ್ತವರು ಸೃಷ್ಟಿಸುತ್ತಾರೆ

ಹರೆಯದ ಮಗನನ್ನು ಬೆಳೆಸುವುದರ ಒಂದು ಮುಖ್ಯ ಅಂಶ, ಅವನು ತನ್ನ ಕಾಲ ಮೇಲೆ ನಿಲ್ಲುವ ಜವಾಬ್ದಾರಿಯುತ ವ್ಯಕ್ತಿಯಾಗುವಂತೆ ಸಜ್ಜುಗೊಳಿಸುವುದೇ. (ಆದಿಕಾಂಡ 2:24) ಇದರಲ್ಲಿ ಅವನ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಸೇರಿದೆ. ಅವನ ಗುಣಗಳು, ನಂಬಿಕೆಗಳು, ಮೌಲ್ಯಗಳೂ ಇದರಲ್ಲಿ ಒಳಗೂಡಿವೆ. ತನ್ನ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಂಡಿರುವ ಹುಡುಗನಿಗೆ ಅವನ ವಯಸ್ಸಿನ ಇತರರಿಂದ ತಪ್ಪು ಕೆಲಸವನ್ನು ಮಾಡುವ ಒತ್ತಡ ಬಂದಾಗ ಅವನು ಪರಿಣಾಮದ ಬಗ್ಗೆ ಮಾತ್ರ ಯೋಚಿಸುವುದಿಲ್ಲ. ಬದಲಾಗಿ ತನ್ನನ್ನೇ ಹೀಗೆ ಕೇಳಿಕೊಳ್ಳುತ್ತಾನೆ: ‘ನಾನೆಂಥ ವ್ಯಕ್ತಿ? ನಾನು ನಂಬುವಂಥ ಮೌಲ್ಯಗಳಾವುವು? ಇಂಥ ಮೌಲ್ಯಗಳಿರುವ ಒಬ್ಬ ವ್ಯಕ್ತಿ ಈ ಸನ್ನಿವೇಶದಲ್ಲಿ ಏನು ಮಾಡಬೇಕು?’—2 ಪೇತ್ರ 3:11.

ಪ್ರಾಚೀನ ಕಾಲದಲ್ಲಿ ಜೀವಿಸಿದ್ದ ಒಬ್ಬ ದೇವಭಕ್ತ ಯುವಕ ಯೋಸೇಫನ ಬಗ್ಗೆ ಬೈಬಲ್‌ ತಿಳಿಸುತ್ತದೆ. ಇವನ ಧಣಿಯ ಹೆಸರು ಪೋಟೀಫರ. ಯೋಸೇಫನು ತನ್ನದೇ ಆದ ಸ್ಥಿರ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದ. ಹಾಗಾಗಿಯೇ ಪೋಟೀಫರನ ಪತ್ನಿ ಅವನಿಗೆ ತನ್ನ ಜತೆ ಸಂಭೋಗ ಮಾಡುವಂತೆ ಕೇಳಿದಾಗ ಅವನು ಕೊಟ್ಟ ಉತ್ತರ: “ನಾನು ಇಂಥಾ ಮಹಾ ದುಷ್ಕೃತ್ಯವನ್ನು ನಡಿಸಿ ದೇವರಿಗೆ ವಿರುದ್ಧವಾಗಿ ಹೇಗೆ ಪಾಪಮಾಡಲಿ?” (ಆದಿಕಾಂಡ 39:9) ಹಾದರ ಮಾಡಬಾರದು ಎಂಬ ಆಜ್ಞೆಯನ್ನು ದೇವರು ಆಗಿನ್ನೂ ತನ್ನ ಜನರಾದ ಇಸ್ರಾಯೇಲ್ಯರಿಗೆ ಕೊಟ್ಟಿರಲಿಲ್ಲ. ಹಾಗಿದ್ದರೂ ಈ ವಿಷಯದ ಬಗ್ಗೆ ಯೋಸೇಫನು ದೇವರ ನೋಟವನ್ನು ಗ್ರಹಿಸಿದ್ದನು. ಅದಕ್ಕಿಂತಲೂ ಹೆಚ್ಚಿನ ಸಂಗತಿಯೇನೆಂದರೆ ಅವನು ದೇವರ ನೋಟವನ್ನು ತನ್ನದ್ದಾಗಿಸಿಕೊಂಡಿದ್ದನು, ತನ್ನ ವ್ಯಕ್ತಿತ್ವದ ಭಾಗವಾಗಿಸಿಕೊಂಡಿದ್ದನು. ಇದು ‘ನಾನು ಹೇಗೆ ಪಾಪಮಾಡಲಿ’ ಎಂಬ ಅವನ ಮಾತುಗಳಿಂದ ತೋರಿಬರುತ್ತದೆ.—ಎಫೆಸ 5:1.

ಹದಿಪ್ರಾಯದ ನಿಮ್ಮ ಮಗ ಸಹ ತನ್ನದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾ ಇದ್ದಾನೆ. ಇದು ಒಳ್ಳೆಯದೇ. ಏಕೆಂದರೆ ಸಮಾನಸ್ಥರಿಂದ ಒತ್ತಡ ಬಂದಾಗ ಅದನ್ನು ಎದುರಿಸಿ ನಿಲ್ಲಲು ಅವನ ದೃಢ ಅಭಿಪ್ರಾಯಗಳು, ನಂಬಿಕೆಗಳು ಸಹಾಯಮಾಡುವವು. (ಜ್ಞಾನೋಕ್ತಿ 1:10-15) ಆದರೆ ಇದೇ ವ್ಯಕ್ತಿತ್ವ ಅವನು ನಿಮ್ಮನ್ನು ಎದುರಿಸಿ ನಿಲ್ಲುವಂತೆಯೂ ಮಾಡಬಹುದು. ಆಗೇನು ಮಾಡುತ್ತೀರಿ?

ಹೀಗೆ ಮಾಡಿ: ವಾದ ಮಾಡಿ ಸನ್ನಿವೇಶವನ್ನು ಇನ್ನಷ್ಟು ಜಟಿಲ ಮಾಡುವ ಬದಲು ಅವನು ಹೇಳಿದ ಮಾತನ್ನು ಪುನಃ ಹೇಳಿ. (“ಒಂದ್ನಿಮಿಷ. ನೀನ್‌ ಹೇಳಿದ್ದನ್ನ ಸರಿಯಾಗಿ ಅರ್ಥಮಾಡಿಕೊಳ್ತೇನೆ . . . ಅಂತ ತಾನೆ ನೀನ್‌ ಹೇಳುತ್ತಿರೊದು.”) ನಂತರ ಪ್ರಶ್ನೆಗಳನ್ನು ಕೇಳಿ. (“ನಿನಗೆ ಯಾಕೆ ಹೀಗನಿಸ್ತದೆ?” ಅಥವಾ “ಈ ರೀತಿ ಅಂದುಕೊಳ್ಳೊದಕ್ಕೆ ಏನು ಕಾರಣ?”)  ಅವನನ್ನು ಮಾತಿಗೆಳೆಯಿರಿ. ಈ ವಿಷಯದ ಬಗ್ಗೆ ಅವನಿಗೆ ಯಾಕಷ್ಟು ದೃಢ ಅಭಿಪ್ರಾಯ ಇದೆ ಅಂತ ಅವನು ವಿವರಿಸಲಿ. ಅವನು ಹೇಳಿದ ಮಾತಲ್ಲಿ ಯಾವುದೇ ತಪ್ಪಿಲ್ಲದಿದ್ದರೂ ಅದು ನಿಮ್ಮ ಇಷ್ಟದ ಪ್ರಕಾರ ಇಲ್ಲ ಅನ್ನೋ ಒಂದೇ ಕಾರಣಕ್ಕೆ ಅವನ ಅಭಿಪ್ರಾಯವನ್ನು ತಳ್ಳಿಹಾಕಬೇಡಿ. ಅದನ್ನು ಗೌರವಿಸಿ.

ತನ್ನದೇ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಮತ್ತು ಅದರ ಜತೆಗೇ ಬರುವ ದೃಢ ಅಭಿಪ್ರಾಯಗಳು ಸಹಜ ಮಾತ್ರವಲ್ಲ, ಅದರಿಂದ ಪ್ರಯೋಜನ ಸಹ ಇದೆ. “ಬೋಧನೆಯ ಪ್ರತಿಯೊಂದು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವ” ಚಿಕ್ಕ ಮಕ್ಕಳಂತಿರಬಾರದು ಎಂದು ಬೈಬಲ್‌ ಎಚ್ಚರಿಸುತ್ತದೆ. (ಎಫೆಸ 4:14) ಆದ್ದರಿಂದ ನಿಮ್ಮ ಹದಿಪ್ರಾಯದ ಮಗನಿಗೆ ವ್ಯಕ್ತಿತ್ವವನ್ನೂ ಅದರ ಜತೆಗೆ ದೃಢ ಅಭಿಪ್ರಾಯಗಳನ್ನೂ ಬೆಳೆಸಿಕೊಳ್ಳಲು ಬಿಡಿ ಮತ್ತು ಪ್ರೋತ್ಸಾಹಿಸಿ.

“ನನ್ನ ಇಬ್ಬರು ಹೆಣ್ಮಕ್ಕಳು ಏನಾದರೂ ಹೇಳುವಾಗ ನಾನು ಕೇಳಿಸಿಕೊಂಡರೆ ಅವರೂ ನಾನು ಹೇಳುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಾರೆ. ಅದು ಅವರ ಅಭಿಪ್ರಾಯಕ್ಕಿಂತ ಭಿನ್ನವಾಗಿದ್ದರೂ ಸರಿಯೇ. ನಾನು ಯೋಚಿಸಿದ ಹಾಗೇ ಅವರೂ ಯೋಚಿಸಬೇಕೆಂದು ನಾನು ಒತ್ತಾಯಿಸುವುದಿಲ್ಲ ಬದಲಿಗೆ ಅವರೇ ದೃಢವಾಗಿ ಒಂದು ಅಭಿಪ್ರಾಯ ತಾಳುವಂತೆ ಬಿಟ್ಟುಕೊಡುತ್ತೇನೆ.”—ಚೆಕ್‌ ಗಣರಾಜ್ಯದ ಇವಾನ.

ದೃಢವಾಗಿರಿ ಆದರೂ ಮಣಿಯಿರಿ

ಕೆಲವು ಹದಿಪ್ರಾಯದವರು ತಮ್ಮ ಬೇಳೆ ಬೇಯಬೇಕೆಂದರೆ ಚಿಕ್ಕ ಮಕ್ಕಳ ಹಾಗೆ ಒಂದು ವಿಷಯದ ಬಗ್ಗೆ ಪದೇ ಪದೇ ಹೇಳಿ ತಂದೆ ತಾಯಿಗೆ ಕಿರಿಕಿರಿ ಹುಟ್ಟಿಸುವ ಕಲೆಯನ್ನು ಕರಗತಗೊಳಿಸಿರುತ್ತಾರೆ. ನಿಮ್ಮ ಮನೆಯಲ್ಲೂ ಇದೇ ಕಥೆಯಾದರೆ ಎಚ್ಚರ! ಅವರ ಮಾತಿಗೆ ಹೂ೦ಗುಟ್ಟರೆ ಕಿರಿಕಿರಿಯಿಂದ ಸ್ವಲ್ಪ ಸಮಯ ನಿಮಗೆ ಮುಕ್ತಿ ಸಿಗಬಹುದು. ಆದರೆ ಬೇಕಾದದ್ದನ್ನು ಪಡೆಯಬೇಕಾದರೆ ಹೀಗೆ ವಾದ ಮಾಡಲೇಬೇಕೆಂದು ನಿಮ್ಮ ಹದಿಪ್ರಾಯದ ಮಕ್ಕಳು ಕಲಿತುಬಿಡುತ್ತಾರೆ. ಇದಕ್ಕೇನು ಮಾಡುವುದು? ಯೇಸುವಿನ ಸಲಹೆ ಪಾಲಿಸಿ: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ.” (ಮತ್ತಾಯ 5:37) ನೀವು ಒಮ್ಮೆ ಹೇಳಿದ ಮಾತಿಗೆ ಅಂಟಿಕೊಳ್ಳುತ್ತೀರಿ ಎಂದು ನಿಮ್ಮ ಮಕ್ಕಳು ತಿಳಿದರೆ ಅವರು ವಾದ ಮಾಡುವ ಸಾಧ್ಯತೆ ತುಂಬ ಕಡಿಮೆ.

ಅದೇ ಸಮಯದಲ್ಲಿ ನ್ಯಾಯಸಮ್ಮತತೆ ತೋರಿಸಿ. ಉದಾ: ನಿಮ್ಮ ಮಗನಿಗೆ ಇಷ್ಟು ಗಂಟೆಗೆ ಮನೆಗೆ ಬರಬೇಕು ಎಂದು ನಿರ್ಬಂಧ ಇಟ್ಟಿದ್ದೀರಿ. ಒಂದು ನಿರ್ದಿಷ್ಟ ದಿನದಂದು ಅವನು ತಡವಾಗಿ ಬರಲು ಕೇಳಿಕೊಳ್ಳುತ್ತಾನೆ. ಕಾರಣವೇನೆಂದು ವಿವರಿಸಲು ಬಿಡಿ. ಹೀಗೆ ಮಾಡುವಾಗ ನೀವು ಅವನ ಒತ್ತಡಕ್ಕೆ ಮಣಿಯುತ್ತಿದ್ದೀರಿ ಎಂದರ್ಥವಲ್ಲ. ಬೈಬಲಿನ ಈ ಸಲಹೆಯನ್ನು ಪಾಲಿಸುತ್ತಿದ್ದೀರಿ: “ನಿಮ್ಮ ನ್ಯಾಯಸಮ್ಮತತೆಯು ಎಲ್ಲ ಮನುಷ್ಯರಿಗೆ ತಿಳಿದುಬರಲಿ.”—ಫಿಲಿಪ್ಪಿ 4:5.

ಹೀಗೆ ಮಾಡಿ: ಇಷ್ಟೇ ಗಂಟೆಗೆ ಮನೆಗೆ ಬರಬೇಕು ಎಂಬ ನಿಯಮದ ಬಗ್ಗೆ ಅಥವಾ ಮನೆಯಲ್ಲಿ ಪಾಲಿಸಬೇಕಾದ ಬೇರಾವುದೇ ನಿಯಮಗಳ ಬಗ್ಗೆ ಮಕ್ಕಳ ಜತೆ ಕೂತು ಮಾತಾಡಿ. ಅವರು ಹೇಳುತ್ತಿರುವ ವಿಷಯವನ್ನು ಕೇಳಿ. ಎಲ್ಲಾ ವಿಷಯಗಳನ್ನು ತೂಗಿ ನೋಡಿದ ನಂತರ ನಿರ್ಣಯ ಮಾಡಿ. “ತಾವು ಕೇಳುವಂಥ ವಿಷಯ ಬೈಬಲ್‌ ತತ್ವವನ್ನು ಉಲ್ಲಂಘಿಸದಿದ್ದರೆ ಅಪ್ಪ-ಅಮ್ಮ ಒಪ್ಪಿಗೆ ಕೊಡುತ್ತಾರೆಂದು ಹದಿಪ್ರಾಯದವರಿಗೆ ಗೊತ್ತಾಗಬೇಕು” ಎನ್ನುತ್ತಾರೆ ಬ್ರೆಜಿಲ್‌ ದೇಶದ ರೊಬರ್ಟೊ.

ಹೆತ್ತವರು ಪರಿಪೂರ್ಣರೇನಲ್ಲ. ಬೈಬಲ್‌ ಹೇಳುವುದು: “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ.” (ಯಾಕೋಬ 3:2) ವಾದ ಶುರುವಾಗುವುದರಲ್ಲಿ ನಿಮ್ಮದೇನಾದರೂ ಚಿಕ್ಕ ಪಾತ್ರ ಇದ್ದರೂ ಮಗನ ಹತ್ತಿರ ಕ್ಷಮೆ ಕೇಳಲು ಹಿಂಜರಿಯಬೇಡಿ. ಹೀಗೆ ತಪ್ಪನ್ನು ಒಪ್ಪಿಕೊಳ್ಳುವಾಗ ದೀನತೆ ತೋರಿಸುವುದರಲ್ಲಿ ಮಾದರಿ ಇಡುತ್ತೀರಿ. ನಿಮ್ಮ ಹದಿಪ್ರಾಯದ ಮಗನಿಗೂ ಹಾಗೆ ಮಾಡಲು ಇದು ದಾರಿ ಮಾಡಿಕೊಡುತ್ತದೆ.

“ಒಮ್ಮೆ ಮಗನ ಜತೆ ಜೋರುಜೋರಾಗಿ ವಾದ ನಡೆಯಿತು. ಆಮೇಲೆ ಕೋಪವೆಲ್ಲ ಇಳಿದ ನಂತರ ಹಾಗೆ ಕೂಗಾಡಿದ್ದಕ್ಕೆ ಕ್ಷಮೆ ಕೇಳಿದೆ. ಇದಾದ ನಂತರ ಅವನೂ ಸ್ವಲ್ಪ ತಣ್ಣಗಾದ. ನನ್ನ ಮಾತನ್ನು ಕೇಳಿದ.”—ಜಪಾನಿನ ಕೆಂಜಿ. (w13-E 11/01)

^ ಪ್ಯಾರ. 3 ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 11 ಈ ಲೇಖನದಲ್ಲಿ ಹದಿಪ್ರಾಯದ ಮಗನ ಬಗ್ಗೆ ಹೇಳಿರುವುದಾದರೂ ಸೂತ್ರಗಳು ಹುಡುಗಿಯರಿಗೂ ಅನ್ವಯ.

ನಿಮ್ಮನ್ನೇ ಕೇಳಿಕೊಳ್ಳಿ. . .

  • ನನ್ನ ಹದಿಪ್ರಾಯದ ಮಗನೊಂದಿಗಿನ ವಾದಗಳಿಗೆ ನಾನು ಯಾವ ವಿಧಗಳಲ್ಲಿ ಕಾರಣನಾಗುತ್ತಿರಬಹುದು?

  • ನನ್ನ ಹದಿಪ್ರಾಯದ ಮಗನನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಲೇಖನವನ್ನು ಹೇಗೆ ಬಳಸಲಿ?

  • ವಾದ ಮಾಡದೆ ನನ್ನ ಹದಿಪ್ರಾಯದ ಮಗನೊಂದಿಗೆ ಮಾತಾಡುವುದು ಹೇಗೆ?