ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದುಕು ಬದಲಾದ ವಿಧ

ಈಗ ನಾನೂ ಇನ್ನೊಬ್ಬರಿಗೆ ಸಹಾಯ ಮಾಡಬಹುದು!

ಈಗ ನಾನೂ ಇನ್ನೊಬ್ಬರಿಗೆ ಸಹಾಯ ಮಾಡಬಹುದು!
  • ಜನನ: 1981

  • ದೇಶ: ಗ್ವಾಟೆಮಾಲ

  • ಹಿಂದೆ: ಕತ್ತಲೆಯ ಬಾಲ್ಯ

ಹಿನ್ನೆಲೆ:

ನಾನು ಹುಟ್ಟಿದ್ದು ಗ್ವಾಟೆಮಾಲದ ಆಕುಲ್‌ ಎಂಬ ಊರಿನಲ್ಲಿ. ನನ್ನ ಕುಟುಂಬ ಮಾಯಾ ಬುಡಕಟ್ಟಿನ ಇಸೀಲ್‌ ಗುಂಪಿಗೆ ಸೇರಿದ್ದು. ನನಗೆ ನನ್ನ ಮಾತೃಭಾಷೆಯೊಂದಿಗೆ ಸ್ಪ್ಯಾನಿಷ್‌ ಕೂಡ ಬರುತ್ತದೆ. ನನ್ನ ಬಾಲ್ಯ ಅಷ್ಟೇನೂ ಚೆನ್ನಾಗಿರಲಿಲ್ಲ. ಆಗ ನಾನು ಇನ್ನೂ ಚಿಕ್ಕ ಮಗು. ಗ್ವಾಟೆಮಾಲದಲ್ಲಿ ಸುಮಾರು 36 ವರ್ಷಗಳಿಂದ ಆಂತರಿಕ ಯುದ್ಧ ನಡೆಯುತ್ತಿತ್ತು. ಇದರಿಂದ ಅನೇಕ ಇಸೀಲ್‌ ಜನರು ತಮ್ಮ ಜೀವ ಕಳೆದುಕೊಂಡಿದ್ದರು.

ನಾನು ನಾಲ್ಕು ವರ್ಷದವನಾಗಿದ್ದಾಗ ನಡೆದ ಘಟನೆ ಇದು. ಒಂದು ದಿನ, ನನಗಿಂತ ಮೂರು ವರ್ಷ ದೊಡ್ಡವನಾದ ನನ್ನ ಅಣ್ಣ ಗೊತ್ತಿಲ್ಲದೇ ಸಿಡಿಗುಂಡನ್ನು ಕೈಲ್ಲಿಟ್ಟುಕೊಂಡು ಆಟ ಆಡುತ್ತಿದ್ದ. ಆಗ ಅದು ಇದ್ದಕ್ಕಿದ್ದಂತೆ ಸ್ಫೋಟ ಆಗಿ ಹೋಯಿತು. ಈ ಅನಾಹುತದಲ್ಲಿ ನಾನು ನನ್ನ ಕಣ್ಣನ್ನ ಕಳೆದುಕೊಂಡೆ. ಆದ್ರೆ ಅದಕ್ಕಿಂತ ದುಃಖದ ವಿಷಯ ಏನಂದ್ರೆ ನನ್ನ ಅಣ್ಣ ಆ ಅನಾಹುತದಲ್ಲಿ ತನ್ನ ಪ್ರಾಣನೇ ಕಳೆದುಕೊಂಡ. ಇದಾದ ಮೇಲೆ ನನ್ನನ್ನ ಅಂಧ ಮಕ್ಕಳ ಶಾಲೆಗೆ ಸೇರಿಸಲಾಯಿತು. ಅಲ್ಲೇ ನಾನು ಬ್ರೇಲ್‌ ಲಿಪಿಯನ್ನು ಕಲಿತದ್ದು. ಆದ್ರೆ ಯಾಕೋ ಏನೋ ಆ ಶಾಲೆಯಲ್ಲಿರೋ ಅಧಿಕಾರಿಗಳು ನನ್ನನ್ನ ಬೇರೆಯವರೊಟ್ಟಿಗೆ ಮಾತಾಡುವುದಕ್ಕೆ ಬಿಡುತ್ತಿರಲಿಲ್ಲ. ನನ್ನ ಸಹಪಾಠಿಗಳು ಕೂಡ ನನ್ನ ಜೊತೆ ಸೇರುತ್ತಿರಲಿಲ್ಲ. ಇದರಿಂದ ನನಗೆ ಒಂಟಿ ಭಾವನೆ ಕಾಡೋದಕ್ಕೆ ಶುರು ಆಯಿತು. ಬೇಸಿಗೆ ರಜೆ ಯಾವಾಗಪ್ಪ ಬರುತ್ತೆ ಅಂತ ಯಾವಾಗಲೂ ಕಾಯುತ್ತಿದ್ದೆ. ಆ ರಜೆಯಲ್ಲಿ ನಾನು ನನ್ನ ಅಮ್ಮನ ಜೊತೆ ಇರಬಹುದಿತ್ತು. ನನ್ನ ಅಮ್ಮನಿಗೆ ನನ್ನ ಮೇಲೆ ತುಂಬಾ ಅಕ್ಕರೆ ಮತ್ತು ಪ್ರೀತಿ. ಆದ್ರೆ ನಾನು ಹತ್ತು ವರ್ಷದವನಿದ್ದಾಗ ನನ್ನ ಪ್ರೀತಿಯ ಅಮ್ಮ ತೀರಿ ಹೋದಳು. ಇಡೀ ಪ್ರಪಂಚದಲ್ಲಿ ನನ್ನನ್ನ ಪ್ರೀತಿಸುತ್ತಿದ್ದ ಒಂದೇ ಒಂದು ಜೀವ ಅಂದರೆ ಅದು ನನ್ನ ಅಮ್ಮ. ಅವಳು ತೀರಿ ಹೋದ ಮೇಲೆ ‘ಗಾಯದ ಮೇಲೆ ಬರೆ ಎಳೆದಂತಿತ್ತು’ ನನ್ನ ಜೀವನ.

ನಾನು ಹನ್ನೊಂದು ವರ್ಷದವನಿದ್ದಾಗ ವಾಪಸ್ಸು ಬಂದು ನನ್ನ ದೊಡ್ಡಪ್ಪನೊಂದಿಗೆ ಇದ್ದೆ. ಅವರು ನನಗೆ ಊಟ-ಬಟ್ಟೆ ಕೊಟ್ಟು ನೋಡಿಕೊಳ್ಳುತ್ತಿದ್ದರು. ಆದ್ರೆ ಭಾವನೆಗಳನ್ನ, ನೋವನ್ನ ಹೇಳಿಕೊಳ್ಳಲು ಮತ್ತು ನನ್ನನ್ನು ಬಲಪಡಿಸಲು ಯಾರೂ ಇರಲಿಲ್ಲ. ಆಗೆಲ್ಲಾ ನಾನು ದೇವರಿಗೆ “ನಮ್ಮಮ್ಮ ಯಾಕೆ ಸತ್ತು ಹೋದ್ಳು? ನಾನ್‌ ಯಾಕೆ ಕುರುಡನಾದೆ?” ಅಂತ ಅಳುತ್ತಾ ಕೇಳುತ್ತಿದ್ದೆ. ಜನ ‘ಇದೆಲ್ಲಾ ದೇವರ ಇಚ್ಛೆ’ ಅಂತ ಹೇಳುತ್ತಿದ್ದರು. ಆಗ ‘ದೇವರಿಗೆ ನಮ್ಮ ಬಗ್ಗೆ ಸ್ವಲ್ಪನೂ ಚಿಂತೆ ಇಲ್ಲ, ದೇವರು ಕೆಟ್ಟವನು’ ಅನ್ನೊ ತೀರ್ಮಾನಕ್ಕೆ ಬಂದುಬಿಟ್ಟೆ. ಸತ್ತು ಹೋಗಬೇಕು ಅಂತ ಎಷ್ಟೋ ಸಲ ಅಂದುಕೊಂಡೆ. ಆದ್ರೆ ಹೇಗೆ ಆತ್ಮಹತ್ಯೆ ಮಾಡಿಕೊಳ್ಳೋದು ಅಂತ ಗೊತ್ತಿಲ್ಲದ ಕಾರಣ ಅದಕ್ಕೆ ಪ್ರಯತ್ನ ಮಾಡಲಿಲ್ಲ.

ಕುರುಡನಾಗಿದ್ದರಿಂದ ನಾನು ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಕುಗ್ಗಿ ಹೋಗಿದ್ದೆ. ನಾನು ಚಿಕ್ಕವನಾಗಿದ್ದಾಗ ನನ್ನನ್ನು ಅನೇಕ ಬಾರಿ ಲೈಂಗಿಕವಾಗಿ ದುರುಪಯೋಗಿಸಲಾಯಿತು. ‘ನನ್ನ ಮಾತನ್ನು ಯಾರೂ ಕೇಳಲ್ಲ, ನನ್ನ ಬಗ್ಗೆ ಯಾರೂ ಯೋಚಿಸಲ್ಲ’ ಅನ್ನೋ ಕಾರಣಕ್ಕೆ ಈ ವಿಷಯವನ್ನು ನಾನು ಯಾರಿಗೂ ಹೇಳಲಿಲ್ಲ. ಜನ ನನ್ನನ್ನು ಅಪರೂಪಕ್ಕೊಮ್ಮೆ ಮಾತ್ರ ಮಾತಾಡಿಸುತ್ತಿದ್ದರು. ನಾನು ಕೂಡ ಹೆಚ್ಚು ಮಾತಾಡುತ್ತಿರಲಿಲ್ಲ. ಒಬ್ಬಂಟಿ ಅನ್ನೋ ಭಾವನೆ ನನ್ನನ್ನು ಕಿತ್ತು ತಿನ್ನುತ್ತಿತ್ತು. ಆಗ ಜನರ ಮೇಲೆ ನಂಬಿಕೆ ಕಳೆದುಕೊಂಡೆ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌:

ನನಗಾಗ ಹದಿಮೂರೋ ಹದಿನಾಲ್ಕೋ ವಯಸ್ಸು. ಒಂದು ದಿನ ಇಬ್ಬರು ಯೆಹೋವನ ಸಾಕ್ಷಿಗಳು (ದಂಪತಿ) ನನ್ನನ್ನು ಭೇಟಿ ಮಾಡಲು ಶಾಲೆಗೆ ಬಂದರು. ನನ್ನ ಕಷ್ಟಗಳನ್ನು ನೋಡಿದ್ದ ನನ್ನ ಶಿಕ್ಷಕರೊಬ್ಬರು ಅವರಿಗೆ ನನ್ನನ್ನು ಭೇಟಿ ಮಾಡುವಂತೆ ತಿಳಿಸಿದ್ದರು. ಆ ಸಾಕ್ಷಿಗಳು ಸತ್ತವರು ಮತ್ತೆ ಬದುಕಿ ಬರುತ್ತಾರೆ ಮತ್ತು ಕುರುಡರಿಗೆ ಮತ್ತೆ ಕಣ್ಣು ಬರುತ್ತದೆ ಅಂತ ಬೈಬಲಿನಲ್ಲಿ ದೇವರು ಕೊಟ್ಟಿರುವ ಮಾತಿನ ಬಗ್ಗೆ ತಿಳಿಸಿದರು. (ಯೆಶಾಯ 35:5; ಯೋಹಾನ 5:28, 29) ಅವರು ಹೇಳಿದ ಆ ವಿಷಯ ಕತ್ತಲೆ ತುಂಬಿದ್ದ ನನ್ನ ಜೀವನದಲ್ಲಿ ಮತ್ತೆ ಆಶಾಕಿರಣವನ್ನು ಮೂಡಿಸಿತು. ಆದರೆ ನಾನು ಯಾರೊಟ್ಟಿಗೂ ಹೆಚ್ಚಾಗಿ ಮಾತಾಡುತ್ತಿರಲಿಲ್ಲ. ಹಾಗಾಗಿ ಈ ಸಾಕ್ಷಿಗಳೊಟ್ಟಿಗೂ ಮಾತಾಡಲು ನನಗೆ ಕಷ್ಟ ಆಗುತ್ತಿತ್ತು. ಆದರೂ ಅವರು ನನಗೆ ತಾಳ್ಮೆಯಿಂದ ಬೈಬಲ್‌ ಬಗ್ಗೆ ಕಲಿಸುತ್ತಿದ್ದರು. ಬೈಬಲ್‌ ಅಧ್ಯಯನಕ್ಕಾಗಿ ಅವರು ಸುಮಾರು 10 ಕಿ.ಮೀ ಬೆಟ್ಟಗುಡ್ಡಗಳನ್ನು ಹತ್ತಿ ನಡೆದುಕೊಂಡೇ ಬರುತ್ತಿದ್ದರು.

‘ಅವರು ನೋಡೋದಕ್ಕೆ ಹೇಗಿದ್ದಾರೆ’ ಅಂತ ನನ್ನ ದೊಡ್ಡಪ್ಪನ ಮಗನನ್ನು ಕೇಳಿದಾಗ ‘ಅವರು ನೀಟಾಗಿ ಕಾಣುತ್ತಾರೆ ಆದ್ರೆ ಶ್ರೀಮಂತರಲ್ಲ ಅಂತ ಅನಿಸುತ್ತೆ’ ಅಂದ. ಆದರೂ ಅವರಿಗೆ ನನ್ನ ಮೇಲೆ ಎಷ್ಟು ಕಾಳಜಿ ಇತ್ತೆಂದರೆ ಅವರ ಕೈಯಲ್ಲಾಗುವ ಚಿಕ್ಕ ಪುಟ್ಟ ಗಿಫ್ಟ್‌ಗಳನ್ನು ತಂದು ಕೊಡುತ್ತಿದ್ದರು. ನಿಜವಾದ ಕ್ರೈಸ್ತರಿಗಷ್ಟೇ ಇಂಥ ಸ್ವತ್ಯಾಗದ ಮನೋಭಾವ ಇರುತ್ತದೆ ಎಂದು ನನಗಾಗ ಮನವರಿಕೆಯಾಯಿತು.

ಬ್ರೇಲ್‌ ಪ್ರಕಾಶನಗಳಿಂದ ನಾನು ಬೈಬಲ್‌ ಕಲಿತೆ. ನಾನು ಏನು ಕಲಿಯುತ್ತಿದ್ದೆನೋ ಅದು ಚೆನ್ನಾಗಿ ಅರ್ಥ ಆಗುತ್ತಿದ್ದರೂ ಕೆಲವೊಂದು ವಿಷಯಗಳನ್ನು ಒಪ್ಪಿಕೊಳ್ಳಲು ಕಷ್ಟವಾಗುತ್ತಿತ್ತು. ಉದಾಹರಣೆಗೆ, ದೇವರಿಗೆ ನನ್ನ ಬಗ್ಗೆ ನಿಜವಾಗಿ ಕಾಳಜಿ ಇದೆ, ಅದನ್ನಾತ ಬೇರೆಯವರ ಮೂಲಕ ನನಗೆ ತೋರಿಸುತ್ತಾನೆ ಅನ್ನೋದನ್ನು ನಂಬಲು ನನಗೆ ಕಷ್ಟವಾಗುತ್ತಿತ್ತು. ಯೆಹೋವ ದೇವರು ದುಷ್ಟತನವನ್ನು ಅನುಮತಿಸಿರುವುದಕ್ಕೆ ಕಾರಣವೇನೆಂದು ನನಗೆ ಅರ್ಥವಾಗಿದ್ದರೂ, ದೇವರು ನಿಜವಾಗಿಯೂ ಒಬ್ಬ ಪ್ರೀತಿಯ ತಂದೆ ಎಂದು ಒಪ್ಪಿಕೊಳ್ಳಲು ನನಗೆ ಕಷ್ಟವಾಗುತ್ತಿತ್ತು. *

ಬೈಬಲಿನಿಂದ ಕಲಿತ ವಿಷಯಗಳು ದೇವರ ಬಗ್ಗೆ ನನಗಿದ್ದ ತಪ್ಪಭಿಪ್ರಾಯವನ್ನು ಬದಲಾಯಿಸಿಕೊಳ್ಳಲು ಸಹಾಯ ಮಾಡಿದವು. ಉದಾಹರಣೆಗೆ, ಕಷ್ಟ ಅನುಭವಿಸುವವರ ಬಗ್ಗೆ ದೇವರು ಕಾಳಜಿ ವಹಿಸಿ, ಅಂಥವರಿಗೆ ಕನಿಕರ ತೋರಿಸುತ್ತಾನೆ. ಆದ್ದರಿಂದಲೇ ಅಂಥವರ ಬಗ್ಗೆ ದೇವರು “ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ . . . ಅವರ ದುಃಖವನ್ನೆಲ್ಲಾ ನಾನು ಬಲ್ಲೆನು” ಎಂದು ಬೈಬಲಿನಲ್ಲಿ ಹೇಳಿದ್ದಾನೆ. (ವಿಮೋಚನಕಾಂಡ 3:7) ಯೆಹೋವ ದೇವರ ಗುಣಗಳನ್ನು ತಿಳಿದುಕೊಳ್ಳುತ್ತಾ ಹೋದಂತೆ ಆತನ ಮೇಲೆ ಪ್ರೀತಿ ಹೆಚ್ಚಾಯಿತು. ನನ್ನ ಜೀವನವನ್ನೇ ಆತನಿಗೆ ಸಮರ್ಪಿಸಬೇಕೆಂದು ತೀರ್ಮಾನಿಸಿ, 1998ರಲ್ಲಿ ದೀಕ್ಷಾಸ್ನಾನ ಪಡೆದು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾದೆ.

ನನಗೆ ಸಹಾಯ ಮಾಡಿದ ಸಹೋದರ

ನನಗೆ ಬೈಬಲ್‌ ಅಧ್ಯಯನ ಕೊಡುತ್ತಿದ್ದ ಆ ದಂಪತಿಗಳು ಎಲ್ಲಿಂದ ಬರುತ್ತಿದ್ದರೋ ಕೂಟಕ್ಕಾಗಿ ನಾನು ಅಲ್ಲಿಗೇ ಹೋಗಬೇಕಾಗಿತ್ತು. ಇದರಿಂದ ನನಗೆ ತುಂಬಾ ಕಷ್ಟವಾಗುತ್ತಿತ್ತು. ದೀಕ್ಷಾಸ್ನಾನವಾಗಿ ಒಂದು ವರ್ಷದ ನಂತರ ಎಸ್ಕ್‌ವಿಂಟ್ಲಾ ಎಂಬ ನಗರದ ಹತ್ತಿರದಲ್ಲಿದ್ದ ಅಂಧರ ತರಬೇತಿ ಶಿಬಿರಕ್ಕೆ ಹಾಜರಾದೆ. ಅಲ್ಲಿದ್ದ ಸಭೆಯ ಹಿರಿಯನೊಬ್ಬನಿಗೆ, ಈ ಹಿಂದೆ ನಾನು ಕೂಟಗಳಿಗೆ ಹಾಜರಾಗಲು ಪಡುತ್ತಿದ್ದ ಕಷ್ಟದ ಬಗ್ಗೆ ತಿಳಿಯಿತು. ಆಗ ಅವನು ಕೂಟಕ್ಕೆ ಹಾಜರಾಗಲು ಕುಟುಂಬವೊಂದು ನನಗೆ ನೆರವು ನೀಡುವಂತೆ ಏರ್ಪಾಡು ಮಾಡಿದನು. ಆ ಕುಟುಂಬದವರು ನನ್ನನ್ನು ತಮ್ಮ ಕುಟುಂಬದ ಸದಸ್ಯನಂತೆ ನೆನಸಿ ಇದುವರೆಗೂ ಕೂಟಗಳಿಗೆ ಹಾಜರಾಗಲು ನನಗೆ ಸಹಾಯ ಮಾಡುತ್ತಿದ್ದಾರೆ.

ಸಹೋದರ ಸಹೋದರಿಯರು ನನಗೋಸ್ಕರ ತುಂಬಾ ಸಹಾಯ ಮಾಡಿದ್ದಾರೆ. ಇದು ನಿಜ ಕ್ರೈಸ್ತರಲ್ಲಿ ನಾನೂ ಒಬ್ಬ ಅಂತ ನನಗೆ ಮನದಟ್ಟು ಮಾಡಿದೆ.—ಯೋಹಾನ 13:34, 35.

ಸಿಕ್ಕಿದ ಪ್ರಯೋಜನಗಳು:

ಈಗ ನನಗೆ ನಿರಾಶೆ ಅಥವಾ ‘ನಾನು ಪ್ರಯೋಜನಕ್ಕೆ ಬಾರದವನು’ ಎಂಬ ಭಾವನೆ ದೂರವಾಗಿದೆ. ನನ್ನ ಜೀವನಕ್ಕೆ ಒಂದು ಉದ್ದೇಶ ಇದೆ. ನನಗಿರೋ ಕಷ್ಟಗಳ ಬಗ್ಗೆನೇ ಯೋಚಿಸುವುದನ್ನು ಬಿಟ್ಟು, ಇತರರಿಗೆ ಬೈಬಲಿನ ಅಮೂಲ್ಯ ಸತ್ಯಗಳ ಬಗ್ಗೆ ಕಲಿಸಲು ಹೆಚ್ಚು ಸಮಯ ವ್ಯಯಿಸುತ್ತಿದ್ದೇನೆ. ಅಲ್ಲದೆ, ನಾನು ಒಬ್ಬ ಹಿರಿಯನಾಗಿ ಸ್ಥಳೀಯ ಸಭೆಗಳಲ್ಲಿ ಭಾಷಣಗಳನ್ನು ಕೊಡುತ್ತಿದ್ದೇನೆ. ಪ್ರಾದೇಶಿಕ ಅಧಿವೇಶಗಳಲ್ಲಿ ಸಾವಿರಾರು ಜನರ ಮುಂದೆ ಭಾಷಣ ಕೊಡುವ ಸುಯೋಗ ಸಹ ನನಗೆ ಸಿಕ್ಕಿದೆ.

ಬ್ರೇಲ್‌ ಬೈಬಲನ್ನು ಉಪಯೋಗಿಸಿ ಭಾಷಣ ಕೊಡುತ್ತಿರುವುದು

2010ರಲ್ಲಿ ಎಲ್‌ ಸಾಲ್ವಡಾರ್‌ನಲ್ಲಿ ನಡೆದ ಶುಶ್ರೂಷಾ ತರಬೇತಿ ಶಾಲೆಗೆ (ಈಗ ರಾಜ್ಯ ಪ್ರಚಾರಕರ ಶಾಲೆ) ಹಾಜರಾದೆ. ಸಭೆಯಲ್ಲಿ ನನ್ನ ಜವಾಬ್ದಾರಿಯನ್ನು ಇನ್ನೂ ಉತ್ತಮವಾಗಿ ಮಾಡುವಂತೆ ಈ ಶಾಲೆ ನನಗೆ ಸಹಾಯ ಮಾಡಿತು. ಯೆಹೋವ ದೇವರು ನನ್ನನ್ನು ತುಂಬಾ ಪ್ರೀತಿಸುತ್ತಾನೆ, ಆತನಿಗೆ ನಾನು ತುಂಬಾ ಅಮೂಲ್ಯ, ತನ್ನ ಕೆಲಸಕ್ಕೆ ಯಾರನ್ನು ಬೇಕಾದರೂ ಆತನು ಸಮರ್ಥನನ್ನಾಗಿ ಮಾಡಬಲ್ಲನೆಂದು ಈ ಶಾಲೆಯಿಂದ ಗೊತ್ತಾಯಿತು.

ಯೇಸು ಹೇಳಿದ್ದು: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅಪೊಸ್ತಲರ ಕಾರ್ಯಗಳು 20:35) ಈಗ ನಾನು ಮುಂಚೆಗಿಂತ ತುಂಬಾ ಸಂತೋಷವಾಗಿದ್ದೇನೆ. ಕಾರಣ, ಇಲ್ಲಿವರೆಗೂ ನನ್ನ ಜೀವನದಲ್ಲಿ ಬೇರೆಯವರಿಂದ ಸಹಾಯ ಪಡೆದುಕೊಳ್ಳುತ್ತಿದ್ದೆ. ಆದರೆ ಈಗ, ನಾನೂ ಇನ್ನೊಬ್ಬರಿಗೆ ಸಹಾಯ ಮಾಡುತ್ತಿದ್ದೇನೆ! ಈ ಮುಂಚೆ ‘ಅದು ನನ್ನಿಂದಾಗುತ್ತೆ’ ಅಂತ ನಾನು ನನ್ನ ಕನಸು ಮನಸ್ಸಿನಲ್ಲೂ ನೆನಸಿರಲಿಲ್ಲ. ▪ (w15-E 10/01)

^ ಪ್ಯಾರ. 13 ದೇವರು ಕಷ್ಟ ಸಂಕಟಗಳನ್ನು ಯಾಕೆ ಅನುಮತಿಸುತ್ತಾನೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ 11ನೇ ಅಧ್ಯಾಯದಲ್ಲಿ ಸಿಗುತ್ತದೆ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.