ಮಾಹಿತಿ ಇರುವಲ್ಲಿ ಹೋಗಲು

ಯೇಸುವಿನ ಹೆಸರಿನಲ್ಲಿ ಯಾಕೆ ಪ್ರಾರ್ಥಿಸಬೇಕು?

ಯೇಸುವಿನ ಹೆಸರಿನಲ್ಲಿ ಯಾಕೆ ಪ್ರಾರ್ಥಿಸಬೇಕು?

ನಾವು ಹೇಗೆ ಪ್ರಾರ್ಥಿಸಬೇಕು ಅಂತ ಯೇಸು ಕಲಿಸಿದನು. ಆದರೆ ಯೆಹೂದಿ ಧಾರ್ಮಿಕ ಮುಖಂಡರು ‘ಜನ ನೋಡಲಿ ಅಂತಾನೇ’ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥಿಸುತ್ತಿದ್ದರು. ದೇವರ ಮೇಲೆ ತಮಗೆ ತುಂಬ ಭಕ್ತಿಯಿದೆ ಅಂತ ಜನರಿಗೆ ಗೊತ್ತಾಗಲಿ, ತಮ್ಮನ್ನ ಮೆಚ್ಚಿಕೊಳ್ಳಲಿ ಅಂತ ಹೀಗೆ ಮಾಡುತ್ತಿದ್ದರು. “ತುಂಬ ಮಾತಾಡಿದ್ರೆ” ದೇವರು ಕೇಳುತ್ತಾನೆ ಅಂತ ಉದ್ದುದ್ದ ಪ್ರಾರ್ಥನೆಗಳನ್ನ ಮಾಡುತ್ತಿದ್ದರು. ಹೇಳಿದ್ದನ್ನ ಪದೇಪದೇ ಹೇಳುತ್ತಿದ್ದರು. (ಮತ್ತಾಯ 6:5-8) ಆದರೆ ಯೇಸು ಅವರು ಮಾಡುವ ಪ್ರಾರ್ಥನೆಗಳೆಲ್ಲಾ ವ್ಯರ್ಥ ಅಂತ ಹೇಳಿ ಅವರ ಬಣ್ಣವನ್ನ ಬಯಲು ಮಾಡಿದನು. ಅಷ್ಟೇ ಅಲ್ಲ ದೇವಜನರು ಹೇಗೆ ಪ್ರಾರ್ಥನೆ ಮಾಡಬೇಕು, ಹೇಗೆ ಪ್ರಾರ್ಥನೆ ಮಾಡಬಾರದು ಅಂತ ಕಲಿಸುತ್ತಾನೆ.

ದೇವರ ಹೆಸರು ಪವಿತ್ರವಾಗಲಿ, ಆತನ ಆಳ್ವಿಕೆ ಬರಲಿ ಮತ್ತು ಆತನ ಇಷ್ಟ ನೆರವೇರಲಿ ಅಂತ ನಾವು ಪ್ರಾರ್ಥಿಸಬೇಕು ಅಂತ ಯೇಸು ಕಲಿಸಿಕೊಟ್ಟನು. ಅಷ್ಟೇ ಅಲ್ಲ ನಮಗೆ ಬೇಕಾದ ಅಗತ್ಯ ವಿಷಯಗಳಿಗಾಗಿ ಕೂಡ ನಾವು ಪ್ರಾರ್ಥಿಸಬಹುದು ಅಂತ ಹೇಳಿದನು. (ಮತ್ತಾಯ 6:9-13; ಲೂಕ 11:2-4) ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಬೇಕಾದ್ರೆ ದೀನತೆಯಿಂದ, ನಂಬಿಕೆಯಿಂದ, ಪಟ್ಟುಹಿಡಿದು ಪ್ರಾರ್ಥಿಸಬೇಕು ಅಂತ ಯೇಸು ಉದಾಹರಣೆಗಳ ಮೂಲಕ ಕಲಿಸಿಕೊಟ್ಟನು. (ಲೂಕ 11:5-13; 18:1-14) ಯೇಸು ಹೀಗೆ ಮಾಡಿ ಅಂತ ಹೇಳಿದ್ದಷ್ಟೇ ಅಲ್ಲ ತನ್ನ ಮಾದರಿಯ ಮೂಲಕನೂ ಕಲಿಸಿ ಕೊಟ್ಟನು.—ಮತ್ತಾಯ 14:23; ಮಾರ್ಕ 1:35.

ಪ್ರಾರ್ಥನೆಯನ್ನ ಹೇಗೆ ಮಾಡಬೇಕು ಅಂತ ಯೇಸು ಹೇಳಿಕೊಟ್ಟಿದ್ದರಿಂದ ಅದನ್ನ ಚೆನ್ನಾಗಿ ಮಾಡಕ್ಕೆ ಶಿಷ್ಯರಿಗೆ ಸಹಾಯ ಆಯಿತು. ಆದರೆ ಯೇಸು ಸಾಯುವ ಹಿಂದಿನ ರಾತ್ರಿ, ಪ್ರಾರ್ಥನೆ ಮಾಡೋದು ಎಷ್ಟು ಪ್ರಾಮುಖ್ಯ ಅನ್ನೋ ಪಾಠವನ್ನ ಕಲಿಸಿದನು.

ಪ್ರಾರ್ಥನೆಯಲ್ಲಾದ ಒಂದು ಬದಲಾವಣೆ

ಆ ರಾತ್ರಿ ಯೇಸು ತನ್ನ ಅಪೊಸ್ತಲರನ್ನ ಪ್ರೋತ್ಸಾಹಿಸೋಕೆ ಹೆಚ್ಚಿನ ಸಮಯ ಕಳೆಯುತ್ತಾನೆ. ಆಗಲೇ ಪ್ರಾರ್ಥನೆಯಲ್ಲಿ ಮಾಡಬೇಕಾದ ಒಂದು ಹೊಸ ಬದಲಾವಣೆಯನ್ನ ತಿಳಿಸಿದನು. ಯೇಸು ಹೀಗೆ ಹೇಳಿದನು: “ನಾನೇ ಆ ದಾರಿ, ಸತ್ಯ, ಜೀವ ಆಗಿದ್ದೀನಿ. ನನ್ನ ಮೂಲಕ ಅಲ್ಲದೆ ಯಾರೂ ತಂದೆ ಹತ್ರ ಬರೋಕಾಗಲ್ಲ. ಅಷ್ಟೇ ಅಲ್ಲ ನನ್ನ ಮೂಲಕ ನೀವು ಏನೇ ಕೇಳಿದ್ರೂ ಅದನ್ನ ನಾನು ಮಾಡ್ತೀನಿ. ಮಗನ ಮೂಲಕ ಅಪ್ಪನಿಗೆ ಹೊಗಳಿಕೆ ಸಿಗೋ ತರ ಮಾಡ್ತೀನಿ. ನನ್ನ ಮೂಲಕ ಏನೇ ಬೇಡ್ಕೊಂಡ್ರೂ ನಾನು ಅದನ್ನ ಮಾಡ್ತೀನಿ. ಇಲ್ಲಿ ತನಕ ನೀವು ನನ್ನ ಹೆಸ್ರಲ್ಲಿ ಏನೂ ಕೇಳಿಲ್ಲ. ಕೇಳಿನೋಡಿ, ಅದು ನಿಮಗೆ ಸಿಗುತ್ತೆ. ಆಗ ನಿಮಗೆ ತುಂಬ ಖುಷಿಯಾಗುತ್ತೆ.”—ಯೋಹಾನ 14:6, 13, 14; 16:24.

ನನ್ನ ಹೆಸರಿನಲ್ಲಿ ಪ್ರಾರ್ಥಿಸಿ ಅಂತ ಯೇಸು ಹೇಳಿದ ಈ ಮಾತು ತುಂಬ ಪ್ರಾಮುಖ್ಯವಾಗಿತ್ತು. “ಇದು ಪ್ರಾರ್ಥನೆಯ ಇತಿಹಾಸದಲ್ಲೇ ಆದ ಒಂದು ದೊಡ್ಡ ಬದಲಾವಣೆ” ಅಂತ ಒಂದು ಬೈಬಲ್‌ ಡಿಕ್ಷನೆರಿ ಹೇಳುತ್ತೆ. ಅದರ ಅರ್ಥ, ದೇವರಿಗೆ ಪ್ರಾರ್ಥಿಸದೆ ನನಗೇ ಪ್ರಾರ್ಥಿಸಿ ಅಂತ ಯೇಸು ಇಲ್ಲಿ ಹೇಳುತ್ತಿಲ್ಲ. ಅದರ ಬದಲಿಗೆ ಯೆಹೋವ ದೇವರ ಹತ್ತಿರ ಪ್ರಾರ್ಥಿಸುವ ಒಂದು ಹೊಸ ವಿಧಾನವನ್ನ ಹೇಳಿಕೊಟ್ಟನು.

ದೇವರು ತನ್ನ ನಿಷ್ಠಾವಂತರ ಪ್ರಾರ್ಥನೆಯನ್ನ ಯಾವಾಗ್ಲೂ ಕೇಳಿದನು. (1 ಸಮುವೇಲ 1:9-19; ಕೀರ್ತನೆ 65:2) ದೇವರು ಇಸ್ರಾಯೇಲ್ಯರನ್ನ ತನ್ನ ಜನರನ್ನಾಗಿ ಆಯ್ಕೆ ಮಾಡಿದನು. ಯಾರೆಲ್ಲಾ ಇದನ್ನ ಒಪ್ಪಿಕೊಳ್ಳುತ್ತಾರೋ ಅವರ ಪ್ರಾರ್ಥನೆಯನ್ನ ದೇವರು ಖಂಡಿತ ಕೇಳುತ್ತಿದ್ದನು. ಆದರೆ ಆಮೇಲೆ ಜನರು ಮಾಡುವ ಪ್ರಾರ್ಥನೆಯನ್ನ ದೇವರು ಕೇಳಬೇಕಾದರೆ ಸಲೊಮೋನ ಕಟ್ಟಿದ ದೇವಾಲಯದಲ್ಲಿ ಹೋಗಿ ಆರಾಧನೆ ಮಾಡಬೇಕಿತ್ತು. (ಧರ್ಮೋಪದೇಶಕಾಂಡ 9:29; 2 ಪೂರ್ವಕಾಲವೃತ್ತಾಂತ 6:32, 33) ಆದರೆ ಈ ಏರ್ಪಾಡೆಲ್ಲಾ ತಾತ್ಕಾಲಿಕವಾಗಿತ್ತು. ದೇವರು ಇಸ್ರಾಯೇಲ್ಯರಿಗೆ ಕೊಟ್ಟ ನಿಯಮ ಮತ್ತು ದೇವಾಲಯದಲ್ಲಿ ಇಸ್ರಾಯೇಲ್ಯರು ಅರ್ಪಿಸಬೇಕಾಗಿದ್ದ ಬಲಿಯ ಬಗ್ಗೆ ಅಪೊಸ್ತಲ ಪೌಲ ಹೀಗೆ ಹೇಳುತ್ತಾನೆ, ಇವೆಲ್ಲಾ “ಮುಂದೆ ಬರೋ ಒಳ್ಳೇ ವಿಷ್ಯಗಳ ನೆರಳಷ್ಟೇ, ನಿಜರೂಪ ಅಲ್ಲ.” (ಇಬ್ರಿಯ 10:1, 2) ಹಿಂದೆ ನೆರಳಾಗಿ ಬಂದ ಆ ವಿಷಯ ಏನನ್ನ ಸೂಚಿಸುತ್ತಿತ್ತೋ ಅದು ನಿಜವಾಯಿತು. (ಕೊಲೊಸ್ಸೆ 2:17) ಕ್ರಿಸ್ತಶಕ 33ರಿಂದ ಒಬ್ಬ ವ್ಯಕ್ತಿ ದೇವರ ಜೊತೆ ಆಪ್ತ ಸಂಬಂಧವನ್ನ ಬೆಳೆಸಿಕೊಳ್ಳಬೇಕಾದರೆ ಅವನು ಮೋಶೆಯ ನಿಯಮವನ್ನ ಪಾಲಿಸಬೇಕಾಗಿರಲಿಲ್ಲ. ಅದರ ಬದಲು ಒಬ್ಬ ವ್ಯಕ್ತಿ ಯೇಸು ಹೇಳಿದ ಹಾಗೆ ತನ್ನ ಜೀವನವನ್ನ ನಡೆಸಬೇಕಾಗಿತ್ತು.—ಯೋಹಾನ 15:14-16; ಗಲಾತ್ಯ 3:24, 25.

‘ಬೇರೆಲ್ಲ ಹೆಸ್ರಿಗಿಂತ ಶ್ರೇಷ್ಠವಾದ’ ಒಂದು ಹೆಸರು

ದೇವರು ನಮ್ಮ ಪ್ರಾರ್ಥನೆಯನ್ನ ಕೇಳೋಕೆ ಯೇಸು ಒಂದು ದಾರಿಯನ್ನ ತೆರೆದಿದ್ದಾನೆ. ಇದ್ರಿಂದ ಯೆಹೋವನ ಜೊತೆ ಒಳ್ಳೇ ಸಂಬಂಧವನ್ನ ಬೆಳೆಸಿಕೊಳ್ಳೋಕೆ ಆಗುತ್ತಿದೆ. ಈ ರೀತಿ ಯೇಸು ಒಬ್ಬ ಆಪ್ತ ಸ್ನೇಹಿತನಂತೆ ನಮಗೆ ಸಹಾಯ ಮಾಡಿದ್ದಾನೆ. ಹಾಗಾದ್ರೆ ಯೇಸು ಈ ತರ ಮಾಡಕ್ಕೆ ಕಾರಣ ಏನು?

ಯಾಕಂದ್ರೆ ನಾವು ಹುಟ್ಟಿನಿಂದನೇ ಪಾಪಿಗಳು. ಈ ಪಾಪದಿಂದ ಬಿಡುಗಡೆ ಪಡೆದುಕೊಳ್ಳಕ್ಕೆ ಮತ್ತು ಯೆಹೋವನ ಜೊತೆ ಒಂದು ಒಳ್ಳೇ ಸಂಬಂಧ ಕಾಪಾಡಿಕೊಳ್ಳೋಕೆ ನಾವು ಏನೇ ಮಾಡಿದ್ರೂ ಪ್ರಯೋಜನ ಇಲ್ಲ. ಅಷ್ಟೇ ಅಲ್ಲ ನಾವು ಯಾವುದೇ ಬಲಿ ಕೊಟ್ಟರೂ ನಮಗೆ ಆ ಪಾಪದಿಂದ ಬಿಡುಗಡೆ ಸಿಗಲ್ಲ. (ರೋಮನ್ನರಿಗೆ 3:20, 24; ಇಬ್ರಿಯ 1:3, 4) ಆದರೆ ಯೇಸು ನಮ್ಮನ್ನ ಪಾಪದಿಂದ ಬಿಡುಗಡೆ ಮಾಡಕ್ಕೆ ತನ್ನ ಪರಿಪೂರ್ಣವಾದ ಜೀವವನ್ನೇ ಕೊಟ್ಟನು. (ರೋಮನ್ನರಿಗೆ 5:12, 18, 19) ಆದರೆ ನಾವು ದೇವರ ಮುಂದೆ ಶುದ್ಧರಾಗಬೇಕಾದ್ರೆ ಮತ್ತು ಆತನ ಜೊತೆ ‘ಧೈರ್ಯದಿಂದ ಮಾತಾಡಬೇಕಾದರೆ’ ಯೇಸು ಕೊಟ್ಟ ಬಿಡುಗಡೆಯ ಬೆಲೆಯ ಮೇಲೆ ನಂಬಿಕೆಯಿಡಬೇಕು ಮತ್ತು ಆತನ ಹೆಸರಿನಲ್ಲೇ ದೇವರಿಗೆ ಪ್ರಾರ್ಥಿಸಬೇಕು.—ಎಫೆಸ 3:11, 12.

ಯೇಸು ಕ್ರಿಸ್ತ ದೇವರ ಉದ್ದೇಶವನ್ನ ನೆರವೇರಿಸುತ್ತಿದ್ದಾನೆ. ಹಾಗಾಗಿ ನಾವು ಯೇಸುವಿನ ಮೂಲಕ ಪ್ರಾರ್ಥಿಸುವಾಗ ಆತನ ಮೂರು ಪಾತ್ರಗಳಲ್ಲಿ ನಂಬಿಕೆಯಿಡುತ್ತೀವಿ ಅಂತ ತೋರಿಸಿಕೊಡುತ್ತೀವಿ. (1) ಆತನು “ದೇವರ ಕುರಿಮರಿ.” ಆತನು ಕೊಟ್ಟಿರುವ ಬಲಿಯಿಂದಾಗಿ ನಮ್ಮ ಪಾಪಗಳಿಗೆ ಬಿಡುಗಡೆ ಸಿಕ್ಕಿದೆ. (2) ಯೆಹೋವ ಆತನನ್ನು ಜೀವಂತವಾಗಿ ಎಬ್ಬಿಸಿದ್ದಾನೆ ಮತ್ತು ನಾವು ಬಿಡುಗಡೆಯ ಬೆಲೆಯಿಂದ ಪ್ರಯೋಜನ ಪಡೆಯೋಕೆ ಯೆಹೋವ ದೇವರು ಯೇಸುವನ್ನ ‘ಮಹಾ ಪುರೋಹಿತನನ್ನಾಗಿ’ ನೇಮಿಸಿದ್ದಾನೆ. (3) ಯೆಹೋವನಿಗೆ ನಾವು ಪ್ರಾರ್ಥನೆಯಲ್ಲಿ ಹತ್ತಿರವಾಗಕ್ಕೆ ಯೇಸುವೇ ‘ದಾರಿಯಾಗಿದ್ದಾನೆ.’—ಯೋಹಾನ 1:29; 14:6; ಇಬ್ರಿಯ 4:14, 15.

ನಾವು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುವಾಗ ಯೇಸುವನ್ನ ಗೌರವಿಸ್ತೀವಿ. ಆ ಗೌರವವನ್ನ ಪಡೆದುಕೊಳ್ಳಕ್ಕೆ ಆತನು ಅರ್ಹನಾಗಿದ್ದಾನೆ. ನಾವು ಹೀಗೆ ಮಾಡಬೇಕು ಅನ್ನೋದೇ ಯೆಹೋವ ದೇವರ ಆಸೆ. “ಪ್ರತಿಯೊಬ್ರೂ ಯೇಸುವಿನ ಹೆಸ್ರಿಗೆ ಗೌರವ ಕೊಡಬೇಕಂತ ಮತ್ತು ಯೇಸು ಕ್ರಿಸ್ತನೇ ಪ್ರಭು ಅಂತ ಎಲ್ರೂ ಒಪ್ಕೊಂಡು ತಂದೆಯಾದ ದೇವರಿಗೆ ಮಹಿಮೆ ಕೊಡಬೇಕು.” (ಫಿಲಿಪ್ಪಿ 2:10, 11) ಎಲ್ಲಕ್ಕಿಂತ ಮುಖ್ಯವಾಗಿ ನಾವು ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುವಾಗ ತನ್ನ ಮಗನನ್ನ ಕೊಟ್ಟ ಯೆಹೋವನ ಹೆಸರಿಗೆ ಮಹಿಮೆಯನ್ನ ಸಲ್ಲಿಸುತ್ತೀವಿ.—ಯೋಹಾನ 3:16.

ನಾವು ಯಾಂತ್ರಿಕವಾಗಿ ಪ್ರಾರ್ಥಿಸದೆ “ಪೂರ್ಣಹೃದಯದಿಂದ” ಪ್ರಾರ್ಥಿಸಬೇಕು

ಬೈಬಲಿನಲ್ಲಿ ಯೇಸುವಿಗಿರುವ ಹೆಸರುಗಳನ್ನ, ಬಿರುದುಗಳನ್ನ ನೋಡಬಹುದು. ಇದ್ರಿಂದ ಆತನಿಗಿರುವ ಪಾತ್ರಗಳನ್ನ ನಾವು ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ಆಗುತ್ತೆ. ಅಷ್ಟೇ ಅಲ್ಲ ಹಿಂದೆ ಯೇಸು ಏನೆಲ್ಲಾ ಮಾಡಿದ್ದಾನೆ, ಈಗ ಏನು ಮಾಡುತ್ತಿದ್ದಾನೆ ಮತ್ತು ಮುಂದೆ ಏನೆಲ್ಲಾ ಮಾಡಲಿದ್ದಾನೆ ಹಾಗೂ ಇದರಿಂದ ನಮಗೆ ಏನೆಲ್ಲಾ ಪ್ರಯೋಜನಗಳು ಸಿಗಲಿಕ್ಕಿವೆ ಅಂತ ಅರ್ಥಮಾಡಿಕೊಳ್ಳೋಕೆ ಸಹಾಯ ಮಾಡುತ್ತೆ. (“ ಯೇಸುವಿಗಿರುವ ಪ್ರಾಮುಖ್ಯ ಪಾತ್ರಗಳು” .) ಹಾಗೂ ‘ಬೇರೆಲ್ಲ ಹೆಸ್ರಿಗಿಂತ ಶ್ರೇಷ್ಠ ಹೆಸ್ರನ್ನ ಆತನಿಗೆ ಕೊಟ್ಟಿದ್ದಾನೆ.’ * ಅಷ್ಟೇ ಅಲ್ಲ ಸ್ವರ್ಗದಲ್ಲೂ ಭೂಮಿಯಲ್ಲೂ ಎಲ್ಲಾ ಅಧಿಕಾರವನ್ನ ಆತನಿಗೆ ಕೊಟ್ಟಿದ್ದಾನೆ.—ಫಿಲಿಪ್ಪಿ 2:9; ಮತ್ತಾಯ 28:18.

ಕೇವಲ ಒಂದು ರೂಢಿಯಾಗಿ ಮಾಡಬೇಡಿ

ಹೌದು, ಯೆಹೋವ ದೇವರು ನಮ್ಮ ಪ್ರಾರ್ಥನೆ ಕೇಳಬೇಕಂದ್ರೆ ನಾವು ಯೇಸುವಿನ ಹೆಸರಿನಲ್ಲೇ ಪ್ರಾರ್ಥಿಸಬೇಕು. (ಯೋಹಾನ 14:13, 14) ಆದರೆ “ಯೇಸುವಿನ ಹೆಸರಿನಲ್ಲಿ” ಅಂತ ಪದೇ ಪದೇ ರೂಢಿಯಾಗಿ ಹೇಳಬಾರದು. ಯಾಕೆ?

ಉದಾಹರಣೆಗೆ ಒಬ್ಬ ಅಧಿಕಾರಿಯಿಂದ ನಿಮಗೆ ಒಂದು ಪತ್ರ ಸಿಕ್ಕಿರುತ್ತೆ. ಅದರ ಕೊನೆಯಲ್ಲಿ “ಇಂತಿ ನಿಮ್ಮ ವಿಶ್ವಾಸಿ” ಅಂತ ಬರೆದಿರುತ್ತೆ. ನಿಮ್ಮ ಮೇಲೆ ಅವನಿಗೆ ಇರೋ ಅಕ್ಕರೆ ಕಾಳಜಿಯಿಂದ ಹಾಗೆ ಬರೆದಿರುತ್ತಾನೆ ಅಂತ ನಿಮಗೆ ಅನಿಸುತ್ತಾ? ಅಥವಾ ಪತ್ರದಲ್ಲಿ ಹಾಗೆ ಇರಬೇಕು ಅನ್ನೋ ನಿಯಮ ಇರೋದ್ರಿಂದ ಹಾಗೆ ಬರೆದಿದ್ದಾನೆ ಅಂತ ನಿಮಗೆ ಅನಿಸುತ್ತಾ? ಹೇಗೆ ಒಂದು ಪತ್ರದ ಕೊನೆಯಲ್ಲಿ “ಇಂತಿ ನಿಮ್ಮ ವಿಶ್ವಾಸಿ” ಅಂತ ಇರುತ್ತೋ ಹಾಗೆ ಪ್ರಾರ್ಥನೆಯ ಕೊನೆಯಲ್ಲಿ ಯೇಸುವಿನ ಹೆಸರಿನಲ್ಲಿ ಅಂತ ಬರೀ ಒಂದು ಕರ್ತವ್ಯಕ್ಕಾಗಿ ಹೇಳಬಾರದು. ನಾವು ‘ಯಾವಾಗ್ಲೂ ಪ್ರಾರ್ಥನೆ ಮಾಡಬೇಕು.’ ಆದ್ರೆ ಅದನ್ನ ಯಾಂತ್ರಿಕವಾಗಿ ಮಾಡಬಾರದು ಬದಲಿಗೆ “ಪೂರ್ಣಹೃದಯದಿಂದ” ಪ್ರಾರ್ಥಿಸಬೇಕು.—1 ಥೆಸಲೊನೀಕ 5:17; ಕೀರ್ತನೆ 119:145.

“ಯೇಸುವಿನ ಹೆಸರಿನಲ್ಲಿ” ಅಂತ ಯಾಂತ್ರಿಕವಾಗಿ ಹೇಳದೇ ಇರಕ್ಕೆ ನಾವು ಏನು ಮಾಡಬೇಕು? ಇಲ್ಲಿಯವರೆಗೆ ಆತನು ಏನು ಮಾಡಿದ್ದಾನೆ ಮತ್ತು ಈಗ ಏನು ಮಾಡುತ್ತಿದ್ದಾನೆ ಅಂತ ಯೋಚಿಸಬೇಕು. ನಾವು ಪ್ರಾರ್ಥನೆ ಮಾಡುವಾಗ ತನ್ನ ಪ್ರೀತಿಯ ಮಗನನ್ನ ನಮಗೋಸ್ಕರ ಕೊಟ್ಟಿದ್ದಕ್ಕಾಗಿ ಯೆಹೋವನಿಗೆ ಕೃತಜ್ಞತೆ ಹೇಳಬೇಕು ಮತ್ತು ಆತನ ಹೆಸರನ್ನ ಸ್ತುತಿಸಬೇಕು. ಯೇಸು ಹೀಗೆ ಹೇಳಿದನು: “ನೀವು ನನ್ನ ಅಪ್ಪನ ಹತ್ರ ನನ್ನ ಹೆಸ್ರಲ್ಲಿ ಏನೇ ಬೇಡ್ಕೊಂಡ್ರೂ ಅದನ್ನ ಕೊಡ್ತಾನೆ.” (ಯೋಹಾನ 16:23) ಈ ಮಾತನ್ನ ನಾವು ಗ್ಯಾರಂಟಿ ನಂಬುತ್ತೀವಿ ಅಂತ ಯೇಸುವಿನ ಹೆಸರಿನಲ್ಲಿ ಪ್ರಾರ್ಥಿಸುವಾಗ ತೋರಿಸಿಕೊಡುತ್ತೀವಿ.

^ ಗ್ರೀಕ್‌ ಭಾಷೆಯಲ್ಲಿ “ಹೆಸರು” ಅನ್ನೋ ಪದ ಒಬ್ಬ ವ್ಯಕ್ತಿಗಿರುವ ಸ್ಥಾನ, ಗುಣ ಮತ್ತು ಶಕ್ತಿಯನ್ನ ಸೂಚಿಸುತ್ತೆ ಅಂತ ಒಂದು ಬೈಬಲ್‌ ಡಿಕ್ಷನೆರಿ ಹೇಳುತ್ತೆ.