ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 44

ಯೆಹೋವನಿಗಾಗಿ ಒಂದು ಆಲಯ

ಯೆಹೋವನಿಗಾಗಿ ಒಂದು ಆಲಯ

ಸೊಲೊಮೋನ ಇಸ್ರಾಯೇಲಿನ ರಾಜನಾದ ಮೇಲೆ ಯೆಹೋವನು ಅವನಿಗೆ ‘ನಿನಗೇನು ಬೇಕು ಕೇಳು’ ಎಂದನು. ಅದಕ್ಕೆ ಸೊಲೊಮೋನ ‘ನಾನಿನ್ನೂ ಚಿಕ್ಕವನು. ಜ್ಞಾನವಿಲ್ಲದವನು. ಆದ್ದರಿಂದ ನಿನ್ನ ಜನರನ್ನು ಚೆನ್ನಾಗಿ ನೋಡಿಕೊಳ್ಳಲು ದಯವಿಟ್ಟು ನನಗೆ ವಿವೇಕ ಕೊಡು’ ಎಂದನು. ಆಗ ಯೆಹೋವನು ‘ನೀನು ವಿವೇಕವನ್ನು ಕೇಳಿಕೊಂಡಿದ್ದರಿಂದ ಇಡೀ ಭೂಮಿಯಲ್ಲೇ ಯಾರಿಗೂ ಇರದಷ್ಟು ವಿವೇಕವನ್ನು ನಿನಗೆ ಅನುಗ್ರಹಿಸುತ್ತೇನೆ. ಅದರೊಂದಿಗೆ ಅಪಾರ ಐಶ್ವರ್ಯವನ್ನೂ ಕೊಡುತ್ತೇನೆ. ನೀನು ನನಗೆ ವಿಧೇಯನಾಗಿದ್ದರೆ ನಿನ್ನ ಆಯಸ್ಸನ್ನು ಸಹ ಹೆಚ್ಚಿಸುತ್ತೇನೆ’ ಎಂದನು.

ಸೊಲೊಮೋನ ಆಲಯ ಕಟ್ಟುವ ಕೆಲಸವನ್ನು ಆರಂಭಿಸಿದ. ಅವನು ಅದಕ್ಕಾಗಿ ಅತ್ಯುತ್ತಮವಾದ ಚಿನ್ನ, ಬೆಳ್ಳಿ, ಮರ ಹಾಗೂ ಕಲ್ಲುಗಳನ್ನು ಉಪಯೋಗಿಸಿದ. ಸಾವಿರಾರು ಕುಶಲ ಸ್ತ್ರೀ ಪುರುಷರು ಕಟ್ಟುವ ಕೆಲಸದಲ್ಲಿ ಕೈಜೋಡಿಸಿದರು. ಏಳು ವರ್ಷಗಳ ನಂತರ ಆಲಯವನ್ನು ಯೆಹೋವನಿಗೆ ಸಮರ್ಪಿಸುವ ಸಮಯ ಬಂತು. ಆಗ ಆಲಯದಲ್ಲಿದ್ದ ಯಜ್ಞವೇದಿಯ ಮೇಲೆ ಯಜ್ಞಗಳನ್ನು ಅರ್ಪಿಸಲು ಸಿದ್ಧಮಾಡಿದರು. ಸೊಲೊಮೋನ ಯಜ್ಞವೇದಿಯ ಮುಂದೆ ಮೊಣಕಾಲೂರಿ ‘ಯೆಹೋವನೇ, ಈ ಆಲಯವು ನಿನಗೆ ಸಾಲುವಷ್ಟು ದೊಡ್ಡದೂ ಅಲ್ಲ, ಸುಂದರವಾಗಿಯೂ ಇಲ್ಲ. ಆದರೂ ದಯವಿಟ್ಟು ನಮ್ಮ ಆರಾಧನೆಯನ್ನು ಸ್ವೀಕರಿಸಿ, ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡು’ ಎಂದು ಬೇಡಿಕೊಂಡ. ಯೆಹೋವನಿಗೆ ಆ ಆಲಯ ಇಷ್ಟ ಆಯಿತಾ? ಆತನು ಸೊಲೊಮೋನನ ಪ್ರಾರ್ಥನೆಗೆ ಉತ್ತರ ಕೊಟ್ಟನಾ? ಸೊಲೊಮೋನನ ಪ್ರಾರ್ಥನೆ ಮುಗಿದ ತಕ್ಷಣ ಆಕಾಶದಿಂದ ಬೆಂಕಿ ಬಿದ್ದು ಯಜ್ಞವೇದಿಯಲ್ಲಿದ್ದ ಎಲ್ಲವನ್ನು ದಹಿಸಿಬಿಟ್ಟಿತು. ಹೀಗೆ ಯೆಹೋವನು ಆಲಯವನ್ನು ಮೆಚ್ಚಿದನೆಂದು ತೋರಿಸಿದನು. ಇದನ್ನೆಲ್ಲ ಕಂಡ ಇಸ್ರಾಯೇಲ್ಯರ ಸಂತೋಷ ಮುಗಿಲು ಮುಟ್ಟಿತು.

ರಾಜ ಸೊಲೊಮೋನ ತನ್ನ ವಿವೇಕದಿಂದ ಇಸ್ರಾಯೇಲಿನಲ್ಲಿ ಹಾಗೂ ದೇಶ-ವಿದೇಶಗಳಲ್ಲಿ ಹೆಸರುವಾಸಿಯಾದ. ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸೊಲೊಮೋನನ ಹತ್ತಿರ ಬರುತ್ತಿದ್ದರು. ಶೆಬದ ರಾಣಿ ಕಷ್ಟದ ಪ್ರಶ್ನೆಗಳಿಂದ ಸೊಲೊಮೋನನನ್ನು ಪರೀಕ್ಷಿಸಲು ಬಂದಳು. ಆದರೆ ಸೊಲೊಮೋನನ ಉತ್ತರಗಳನ್ನು ಕೇಳಿದಾಗ ಅವಳು ‘ಜನರು ನಿನ್ನ ಬಗ್ಗೆ ಹೇಳಿದಾಗ ನಾನು ಅವರನ್ನು ನಂಬಲಿಲ್ಲ. ಆದರೆ ಅವರು ಹೇಳಿದ್ದಕ್ಕಿಂತ ಹೆಚ್ಚಿನ ವಿವೇಕ ನಿನ್ನಲ್ಲಿದೆ ಎಂದು ನನಗೀಗ ಗೊತ್ತಾಯಿತು. ನಿನ್ನ ದೇವರಾದ ಯೆಹೋವನು ನಿನ್ನನ್ನು ತುಂಬ ಆಶೀರ್ವದಿಸಿದ್ದಾನೆ’ ಅಂದಳು. ಇಸ್ರಾಯೇಲ್ಯರು ನೆಮ್ಮದಿಯಿಂದಿದ್ದರು ಮತ್ತು ಅವರ ಜೀವನ ಸುಖಮಯವಾಗಿತ್ತು. ಆದರೆ ಪರಿಸ್ಥಿತಿ ಬೇಗನೆ ಬದಲಾಯಿತು.

“ಸೊಲೊಮೋನನಿಗಿಂತಲೂ ಹೆಚ್ಚಿನವನು ಇಲ್ಲಿದ್ದಾನೆ.”—ಮತ್ತಾಯ 12:42