ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಶಿಷ್ಟ

ಪ್ರಧಾನ ದೇವದೂತನಾದ ಮೀಕಾಯೇಲನು ಯಾರು?

ಪ್ರಧಾನ ದೇವದೂತನಾದ ಮೀಕಾಯೇಲನು ಯಾರು?

ಮೀಕಾಯೇಲನೆಂದು ಕರೆಯಲ್ಪಟ್ಟಿರುವ ಆತ್ಮಜೀವಿಯನ್ನು ಬೈಬಲಿನಲ್ಲಿ ಹೆಚ್ಚು ಬಾರಿ ಸೂಚಿಸಲಾಗಿರುವುದಿಲ್ಲ. ಆದರೆ ಅವನ ಬಗ್ಗೆ ಸೂಚಿಸಿರುವಾಗಲೆಲ್ಲಾ ಅವನು ಏನನ್ನೊ ಕ್ರಿಯಾಶೀಲವಾಗಿ ಮಾಡುತ್ತಿದ್ದಾನೆ. ದಾನಿಯೇಲನ ಪುಸ್ತಕದಲ್ಲಿ ಮೀಕಾಯೇಲನು ದುಷ್ಟದೂತರೊಂದಿಗೆ ಹೋರಾಡುತ್ತಿದ್ದಾನೆ; ಯೂದನ ಪತ್ರಿಕೆಯಲ್ಲಿ ಅವನು ಸೈತಾನನೊಂದಿಗೆ ವಾಗ್ವಾದಮಾಡುತ್ತಿದ್ದಾನೆ; ಮತ್ತು ಪ್ರಕಟನೆ ಪುಸ್ತಕದಲ್ಲಿ ಅವನು ಪಿಶಾಚನ ಮತ್ತು ದೆವ್ವಗಳ ವಿರುದ್ಧ ಯುದ್ಧ ನಡೆಸುತ್ತಿದ್ದಾನೆ. ಹೀಗೆ ಯೆಹೋವನ ಆಳ್ವಿಕೆಯನ್ನು ಸಮರ್ಥಿಸುವ ಮತ್ತು ದೇವವಿರೋಧಿಗಳೊಂದಿಗೆ ಹೋರಾಡುವ ಮೂಲಕ ಅವನು ತನ್ನ ಹೆಸರಿನ ಅರ್ಥಕ್ಕೆ ಅಂದರೆ “ದೇವರಂತೆ ಯಾರಿದ್ದಾನೆ?” ಎಂಬ ಅರ್ಥಕ್ಕೆ ತಕ್ಕಂತೆ ಜೀವಿಸುತ್ತಾನೆ. ಆದರೆ ಈ ಮೀಕಾಯೇಲನು ಯಾರು?

ಕೆಲವು ಬಾರಿ, ಕೆಲವು ವ್ಯಕ್ತಿಗಳು ಒಂದಕ್ಕಿಂತ ಹೆಚ್ಚು ಹೆಸರುಗಳಿಂದ ಪ್ರಸಿದ್ಧರಾಗಿರುತ್ತಾರೆ. ಉದಾಹರಣೆಗೆ, ಮೂಲಪಿತ ಯಾಕೋಬನು ಇಸ್ರಾಯೇಲ್‌ ಎಂದೂ ಜ್ಞಾತನಾಗಿದ್ದಾನೆ, ಮತ್ತು ಅಪೊಸ್ತಲ ಪೇತ್ರನು ಸೀಮೋನನೆಂದೂ ಕರೆಯಲ್ಪಟ್ಟಿದ್ದಾನೆ. (ಆದಿಕಾಂಡ 49:1, 2; ಮತ್ತಾಯ 10:2) ಅದೇ ರೀತಿ ಯೇಸು ಕ್ರಿಸ್ತನಿಗೆ, ಅವನ ಭೂಜೀವಿತಕ್ಕೆ ಮುನ್ನ ಮತ್ತು ಬಳಿಕ ಇರುವ ಇನ್ನೊಂದು ಹೆಸರು ಮೀಕಾಯೇಲ ಎಂದಾಗಿದೆ ಎಂದು ಬೈಬಲ್‌ ಸೂಚಿಸುತ್ತದೆ. ಈ ತೀರ್ಮಾನಕ್ಕೆ ಬರಲು ನಮಗಿರುವ ಶಾಸ್ತ್ರೀಯ ಕಾರಣಗಳನ್ನು ನಾವು ಪರಿಗಣಿಸೋಣ.

ಪ್ರಧಾನ ದೇವದೂತ. ದೇವರ ವಾಕ್ಯವು ಮೀಕಾಯೇಲನನ್ನು ‘ಪ್ರಧಾನ ದೇವದೂತನು’ ಎಂದು ಕರೆಯುತ್ತದೆ. (ಯೂದ 9) ಬೈಬಲಿನಲ್ಲಿ ‘ಪ್ರಧಾನ ದೇವದೂತನು’ ಎಂಬ ಪದವು ಏಕವಚನದಲ್ಲಿ ಮಾತ್ರ ಕಂಡುಬರುತ್ತದೆ, ಬಹುವಚನದಲ್ಲಿ ಎಂದೂ ಕಂಡುಬರುವುದಿಲ್ಲ. ಇದು ಅಂತಹ ಒಬ್ಬನೇ ದೇವದೂತನಿದ್ದಾನೆಂದು ಸೂಚಿಸುತ್ತದೆ. ಅಲ್ಲದೆ, ಯೇಸುವನ್ನು ಪ್ರಧಾನ ದೇವದೂತನ ಸ್ಥಾನದೊಂದಿಗೆ ಸಂಬಂಧಿಸಲಾಗಿದೆ. ಪುನರುತ್ಥಿತ ಕರ್ತನಾದ ಯೇಸು ಕ್ರಿಸ್ತನ ಸಂಬಂಧದಲ್ಲಿ 1 ಥೆಸಲೊನೀಕ 4:16 ಹೇಳುವುದು: “ಕರ್ತನು ತಾನೇ ಆಜ್ಞಾಘೋಷದೊಡನೆಯೂ ಪ್ರಧಾನದೂತನ ಶಬ್ದದೊಡನೆಯೂ . . . ಆಕಾಶದಿಂದ ಇಳಿದುಬರುವನು.” ಹೀಗೆ ಯೇಸುವಿನ ಧ್ವನಿಯನ್ನು ಪ್ರಧಾನ ದೇವದೂತನದ್ದೆಂದು ವರ್ಣಿಸಲಾಗಿದೆ. ಆದಕಾರಣ ಈ ಶಾಸ್ತ್ರವಚನವು ಯೇಸುವೇ ಆ ಪ್ರಧಾನ ದೇವದೂತನಾದ ಮೀಕಾಯೇಲನೆಂದು ಸೂಚಿಸುತ್ತದೆ.

ಸೇನಾನಾಯಕನು. ‘ಮೀಕಾಯೇಲನೂ ಅವನ ದೂತರೂ ಘಟಸರ್ಪನ ಮತ್ತು ಅವನ ದೂತರ ಮೇಲೆ ಯುದ್ಧಮಾಡಿದರು’ ಎನ್ನುತ್ತದೆ ಬೈಬಲು. (ಪ್ರಕಟನೆ 12:7) ಹೀಗೆ ಮೀಕಾಯೇಲನು ನಂಬಿಗಸ್ತ ದೇವದೂತಸೇನೆಯ ನಾಯಕನಾಗಿದ್ದಾನೆ. ಪ್ರಕಟನೆ ಪುಸ್ತಕವು ಯೇಸುವನ್ನು ನಂಬಿಗಸ್ತ ದೇವದೂತ ಸೇನೆಯ ನಾಯಕನೆಂದೂ ವರ್ಣಿಸುತ್ತದೆ. (ಪ್ರಕಟನೆ 19:14-16) ಮತ್ತು ಅಪೊಸ್ತಲ ಪೌಲನು ನಿರ್ದಿಷ್ಟವಾಗಿ ‘ಯೇಸುಕರ್ತನ’ ಮತ್ತು ಶಕ್ತಿಯಿಂದ ಕೂಡಿದ ಅವನ ‘ದೇವದೂತರ’ ಕುರಿತು ಮಾತಾಡುತ್ತಾನೆ. (2 ಥೆಸಲೊನೀಕ 1:7) ಹೀಗೆ ಬೈಬಲು ಮೀಕಾಯೇಲ ಮತ್ತು ‘ಅವನ ದೂತರು’ ಹಾಗೂ ಯೇಸು ಮತ್ತು ‘ಅವನ ದೂತರ’ ಕುರಿತು ಮಾತಾಡುತ್ತದೆ. (ಮತ್ತಾಯ 13:41; 16:27; 24:31; 1 ಪೇತ್ರ 3:22) ಸ್ವರ್ಗದಲ್ಲಿ ಮೀಕಾಯೇಲನು ನಾಯಕನಾಗಿರುವ ಮತ್ತು ಯೇಸು ನಾಯಕನಾಗಿರುವ ಎರಡು ಸೈನ್ಯಗಳಿವೆಯೆಂದು ಬೈಬಲು ಎಲ್ಲಿಯೂ ಸೂಚಿಸದಿರುವುದರಿಂದ, ಈ ಮೀಕಾಯೇಲನು ಸ್ವರ್ಗೀಯ ಪಾತ್ರದಲ್ಲಿ ಯೇಸು ಕ್ರಿಸ್ತನೇ ಆಗಿದ್ದಾನೆ ಎಂಬ ತೀರ್ಮಾನಕ್ಕೆ ಬರುವುದು ತರ್ಕಸಮ್ಮತವಾಗಿದೆ. *

^ ಪ್ಯಾರ. 1 ಮೀಕಾಯೇಲನೆಂಬ ಹೆಸರು ದೇವರ ಮಗನಿಗೆ ಅನ್ವಯಿಸುತ್ತದೆಂಬ ವಿಷಯದಲ್ಲಿ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಟಿಸಲ್ಪಟ್ಟಿರುವ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಪುಸ್ತಕದ ಸಂಪುಟ 2, 393-4ನೇ ಪುಟಗಳನ್ನು ನೋಡಿ.