ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 13

ಒಳ್ಳೆಯ ರಾಜರು ಮತ್ತು ಕೆಟ್ಟ ರಾಜರು

ಒಳ್ಳೆಯ ರಾಜರು ಮತ್ತು ಕೆಟ್ಟ ರಾಜರು

ಇಸ್ರಾಯೇಲ್‌ ಸಾಮ್ರಾಜ್ಯ ವಿಭಜನೆಗೊಂಡಿದೆ. ಒಬ್ಬರ ನಂತರ ಒಬ್ಬರಂತೆ ಅನೇಕ ರಾಜರು ಇಬ್ಭಾಗವಾದ ಈ ಸಾಮ್ರಾಜ್ಯವನ್ನು ಆಳುತ್ತಾರೆ. ಅವರಲ್ಲಿ ಹೆಚ್ಚಿನವರು ಯೆಹೋವನಿಗೆ ನಿಷ್ಠೆ ತೋರಿಸಲಿಲ್ಲ. ಹಾಗಾಗಿ ಯೆರೂಸಲೇಮ್‌ ಪಟ್ಟಣವನ್ನು ಬ್ಯಾಬಿಲೋನಿಯರು ನಾಶಮಾಡುತ್ತಾರೆ

ಸೊಲೊಮೋನನು ಯೆಹೋವನ ಆರಾಧನೆಯನ್ನು ತ್ಯಜಿಸಿದಾಗ ಅವನ ಸಾಮ್ರಾಜ್ಯವು ವಿಭಜನೆಗೊಳ್ಳುವುದೆಂದು ಯೆಹೋವನು ಹೇಳಿದ್ದನು. ಅದರಂತೆಯೇ ಈಗ ನಡೆಯಿತು. ಸೊಲೊಮೋನನ ನಂತರ ಅವನ ಮಗ ರೆಹಬ್ಬಾಮನು ಇಸ್ರಾಯೇಲ್‌ ಸಾಮ್ರಾಜ್ಯದ ಸಿಂಹಾಸನವೇರಿದನು. ಅವನು ತುಂಬಾ ಕ್ರೂರಿಯಾಗಿದ್ದುದರಿಂದ ಇಸ್ರಾಯೇಲಿನ ಹತ್ತು ಕುಲಗಳವರು ಅವನ ವಿರುದ್ಧ ದಂಗೆಯೆದ್ದು ತಮ್ಮದೇ ಆದ ಉತ್ತರದ ಇಸ್ರಾಯೇಲ್‌ ರಾಜ್ಯವನ್ನು ಸ್ಥಾಪಿಸಿಕೊಂಡರು. ಆದರೆ ಉಳಿದ ಎರಡು ಕುಲದವರು ದಾವೀದನ ಮನೆತನಕ್ಕೆ ನಿಷ್ಠರಾಗಿ ಉಳಿದರು. ಈ ಎರಡು ಕುಲದವರಿಂದ ದಕ್ಷಿಣದ ಯೆಹೂದ ರಾಜ್ಯ ಸ್ಥಾಪನೆಯಾಯಿತು.

ಈ ಎರಡು ರಾಜ್ಯಗಳನ್ನು ಆಳಿದ ಅರಸರು ಯೆಹೋವನಲ್ಲಿ ನಂಬಿಕೆಯಿಡದೆ ಅವಿಧೇಯರಾಗಿದ್ದ ಕಾರಣ, ಆ ರಾಜ್ಯಗಳ ಇತಿಹಾಸವು ತೊಂದರೆಗಳಿಂದಲೇ ತುಂಬಿತ್ತು. ಅದರಲ್ಲೂ, ಉತ್ತರದ ಇಸ್ರಾಯೇಲ್‌ ರಾಜ್ಯದ ಸ್ಥಿತಿ ಯೆಹೂದ ರಾಜ್ಯಕ್ಕಿಂತ ಹೀನಾಯವಾಗಿತ್ತು. ಏಕೆಂದರೆ, ಅದರ ಅರಸರು ಪ್ರಾರಂಭದಿಂದಲೇ ಸುಳ್ಳು ಆರಾಧನೆಗೆ ಕುಮ್ಮಕ್ಕು ನೀಡಿದರು. ಅವರ ಈ ಕೆಟ್ಟ ಮಾರ್ಗವನ್ನು ಸರಿಪಡಿಸಲಿಕ್ಕಾಗಿ ಯೆಹೋವನು ಎಲೀಯ ಮತ್ತು ಎಲೀಷರಂಥ ಅನೇಕ ಪ್ರವಾದಿಗಳನ್ನು ಕಳುಹಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಎಲೀಯ ಮತ್ತು ಎಲೀಷರು ಯೆಹೋವನ ಶಕ್ತಿ ಮಹಿಮೆಯನ್ನು ತೋರಿಸಿಕೊಡಲಿಕ್ಕಾಗಿ ಅನೇಕ ಅದ್ಭುತಗಳನ್ನು ಮಾಡಿದರೂ, ಸತ್ತವರನ್ನು ಬದುಕಿಸಿದರೂ ಆ ರಾಜರು ಮಾತ್ರ ತಮ್ಮ ಕೆಟ್ಟ ಮಾರ್ಗವನ್ನು ಬಿಡಲೇ ಇಲ್ಲ. ಹೀಗೆ ಉತ್ತರದ ಇಸ್ರಾಯೇಲ್‌ ರಾಜ್ಯವು ದೇವರ ಅನುಗ್ರಹವನ್ನು ಕಳೆದುಕೊಂಡದ್ದರಿಂದ ಕೊನೆಗೆ ಅಶ್ಶೂರ್ಯರಿಂದ ನಾಶವಾಯಿತು.

ಇದಾಗಿ ನೂರಕ್ಕಿಂತ ಸ್ವಲ್ಪ ಹೆಚ್ಚು ವರ್ಷ ಯೆಹೂದ ರಾಜ್ಯವು ಅಸ್ತಿತ್ವದಲ್ಲಿತ್ತು. ಆದರೆ ಅವರೂ ಯೆಹೋವನ ಆರಾಧನೆಯನ್ನು ತೊರೆದ ಕಾರಣ ಶಿಕ್ಷೆಗೆ ಗುರಿಯಾದರು. ಯೆಹೂದದ ಕೇವಲ ಕೆಲವೇ ರಾಜರು ದೇವರ ಪ್ರವಾದಿಗಳ ಮಾತನ್ನು ಕೇಳಿ ಜನರನ್ನು ಯೆಹೋವನ ಕಡೆಗೆ ತಿರುಗಿಸಲು ಪ್ರಯತ್ನಿಸಿದರು. ಹಾಗೆ ಮಾಡಿದವರಲ್ಲಿ ರಾಜ ಯೋಷೀಯನು ಒಬ್ಬನು. ಅವನು ದೇಶದಲ್ಲೆಲ್ಲಾ ತುಂಬಿದ್ದ ಸುಳ್ಳು ಆರಾಧನೆಯನ್ನು ತೊಲಗಿಸುವ ಕಾರ್ಯ ಕೈಗೊಂಡನು. ಮಾತ್ರವಲ್ಲ, ಯೆಹೋವನ ಆಲಯದ ಜೀರ್ಣೋದ್ಧಾರ ಕಾರ್ಯವನ್ನೂ ಪ್ರಾರಂಭಿಸಿದನು. ಆಗ, ಮೋಶೆಯ ಮುಖಾಂತರ ಕೊಡಲ್ಪಟ್ಟ ದೇವರ ಧರ್ಮೋಪದೇಶದ ಮೂಲಗ್ರಂಥವು ಅವನಿಗೆ ಸಿಕ್ಕಿತು. ಅದರಲ್ಲಿ ಬರೆದಿದ್ದ ವಿಷಯಗಳನ್ನು ತಾನು ಮಾಡುತ್ತಿಲ್ಲವೆಂದು ತಿಳಿದು ಪಶ್ಚಾತ್ತಾಪಪಟ್ಟ ಯೋಷೀಯನು ಸುಳ್ಳು ಆರಾಧನೆಯನ್ನು ನಿರ್ಮೂಲಗೊಳಿಸುವ ತನ್ನ ಕೆಲಸವನ್ನು ಇನ್ನಷ್ಟು ತೀವ್ರಗೊಳಿಸಿದನು.

ವಿಷಾದಕರವಾಗಿ, ಯೋಷೀಯನ ನಂತರ ಆಳ್ವಿಕೆಗೆ ಬಂದ ಅರಸರು ಅವನಷ್ಟು ಒಳ್ಳೆಯವರಾಗಿರಲಿಲ್ಲ. ಅವರು ಯೆಹೋವನ ಆರಾಧನೆಗೆ ಗಮನ ಕೊಡಲಿಲ್ಲವಾದ ಕಾರಣ, ಯೆಹೂದದ ಮೇಲೆ ಬ್ಯಾಬಿಲೋನ್‌ ಮುತ್ತಿಗೆ ಹಾಕುವಂತೆ ಯೆಹೋವನು ಅನುಮತಿಸಿದನು. ಅವರು ಯೆರೂಸಲೇಮನ್ನು ಮತ್ತು ಅಲ್ಲಿದ್ದ ದೇವಾಲಯವನ್ನು ನಾಶಪಡಿಸಿ ಬದುಕಿ ಉಳಿದವರನ್ನು ಸೆರೆವಾಸಿಗಳಾಗಿ ಬ್ಯಾಬಿಲೋನಿಗೆ ತೆಗೆದುಕೊಂಡು ಹೋದರು. ಯೆಹೂದ್ಯರು 70 ವರ್ಷ ಬ್ಯಾಬಿಲೋನಿನಲ್ಲೇ ಸೆರೆವಾಸಿಗಳಾಗಿ ಇರುವರೆಂದು ದೇವರು ಮುಂತಿಳಿಸಿದನು. ಆ 70 ವರ್ಷ ಯೆಹೂದವು ನಿರ್ಜನವಾಗಿ ಪಾಳು ಬಿದ್ದಿತ್ತು. ತದನಂತರ ಯೆಹೂದ್ಯರು ತಮ್ಮ ತಾಯ್ನಾಡಿಗೆ ಹಿಂದಿರುಗಿದರು.

ಆದರೆ, ವಾಗ್ದಾನಿಸಲಾದ ವಿಮೋಚಕನು ಅಂದರೆ ಮೆಸ್ಸೀಯನು ಆಡಳಿತ ವಹಿಸುವ ತನಕ ದಾವೀದನ ವಂಶದ ಇನ್ನಾವ ರಾಜನೂ ಆಳ್ವಿಕೆ ನಡೆಸಲಾರನು. ಈಗಾಗಲೇ ದಾವೀದನ ಸಿಂಹಾಸನವೇರಿದ ರಾಜರಲ್ಲಿ ಹೆಚ್ಚಿನವರು ಸರಿಯಾಗಿ ಆಳ್ವಿಕೆ ನಡೆಸಲಿಲ್ಲ. ಹೀಗೆ, ಅಪರಿಪೂರ್ಣ ಮಾನವರು ಸರಿಯಾಗಿ ಆಳ್ವಿಕೆ ನಡೆಸಲಾರರು ಎಂಬುದನ್ನು ಅವರು ತೋರಿಸಿಕೊಟ್ಟರು. ಮೆಸ್ಸೀಯನೊಬ್ಬನೇ ರಾಜನಾಗಿ ಆಳಲು ಅರ್ಹನು. ಆದುದರಿಂದಲೇ, ದಾವೀದನ ವಂಶದ ಕೊನೆಯ ಅರಸನಿಗೆ ಯೆಹೋವನು ಹೇಳಿದ್ದು: “ಕಿರೀಟವನ್ನು ಎತ್ತಿಹಾಕು! . . . [ರಾಜ್ಯಕ್ಕೆ] ಬಾಧ್ಯನು ಬರುವದರೊಳಗೆ ಒಂದೂ ಇದ್ದಂತಿರದು; ಅವನಿಗೇ ರಾಜ್ಯವನ್ನು ವಹಿಸುವೆನು.”—ಯೆಹೆಜ್ಕೇಲ 21:26, 27.

1 ಅರಸುಗಳು; 2 ಅರಸುಗಳು; 2 ಪೂರ್ವಕಾಲವೃತ್ತಾಂತ ಅಧ್ಯಾಯ 10ರಿಂದ 36; ಯೆರೆಮೀಯ 25:8-11 ರ ಮೇಲೆ ಆಧಾರಿತವಾಗಿದೆ.