ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾನು ನನ್ನ ದುಃಖದೊಂದಿಗೆ ಹೇಗೆ ಜೀವಿಸಬಲ್ಲೆ?

ನಾನು ನನ್ನ ದುಃಖದೊಂದಿಗೆ ಹೇಗೆ ಜೀವಿಸಬಲ್ಲೆ?

“ನನ್ನ ಅನಿಸಿಕೆಗಳನ್ನು ಒಳಗೆ ತಡೆದು ಹಿಡಿಯಲು ನನ್ನ ಮೇಲೆ ತುಂಬ ಒತ್ತಡವಿತ್ತು,” ಎನ್ನುತ್ತಾನೆ ಮೈಕ್‌, ತನ್ನ ತಂದೆಯ ಮರಣವನ್ನು ಜ್ಞಾಪಿಸಿಕೊಳ್ಳುತ್ತಾ. ತನ್ನ ದುಃಖವನ್ನು ತಡೆದು ಹಿಡಿಯುವುದು ಮೈಕ್‌ಗೆ ಪುರುಷಯೋಗ್ಯ ಸಂಗತಿಯಾಗಿತ್ತು. ಆದರೂ ತಾನು ತಪ್ಪೆಂದು ಅವನಿಗೆ ಆಮೇಲೆ ತಿಳಿದುಬಂತು. ಹೀಗೆ ಮೈಕ್‌ನ ಸ್ನೇಹಿತ ತನ್ನ ಅಜ್ಜನನ್ನು ಕಳೆದುಕೊಂಡಾಗ ಏನು ಮಾಡಬೇಕೆಂದು ಮೈಕ್‌ಗೆ ಗೊತ್ತಿತ್ತು. ಅವನು ಹೇಳುವುದು: “ಕೆಲವು ವರ್ಷಗಳ ಹಿಂದೆ ನಾನು ಅವನ ಭುಜ ತಟ್ಟಿ, ‘ಪುರುಷತನ ತೋರಿಸು,’ ಎಂದು ಹೇಳುತ್ತಿದ್ದೆ. ಈಗ ನಾನು ಅವನ ತೋಳನ್ನು ಮುಟ್ಟಿ, ‘ನಿನಗೆ ಹೇಗನಿಸುತ್ತದೋ ಹಾಗೆ ಮಾಡು. ಅದನ್ನು ನಿಭಾಯಿಸಲು ಇದು ನಿನ್ನನ್ನು ಸಹಾಯಿಸುವುದು. ನಾನು ಹೋಗಬೇಕೆಂದು ನೀನು ಬಯಸುವಲ್ಲಿ, ನಾನು ಹೋಗುವೆ. ಇಲ್ಲಿರುವಂತೆ ಬಯಸುವಲ್ಲಿ ಇರುವೆ. ಆದರೆ ಅನಿಸಿಕೆಯನ್ನು ತೋರಿಸಲು ಭಯಪಡದಿರು.’”

ತನ್ನ ಗಂಡನು ಸತ್ತಾಗ ತನ್ನ ಅನಿಸಿಕೆಗಳನ್ನು ತಡೆದು ಹಿಡಿಯುವ ಒತ್ತಡ ಮ್ಯಾರಿಯನ್‌ ಮೇಲೆ ಸಹ ಬಂತು. “ಇತರರಿಗೆ ಉತ್ತಮ ಮಾದರಿಯಾಗುವ ವಿಷಯದಲ್ಲಿ ನಾನು ಎಷ್ಟು ಚಿಂತಿತಳಾಗಿದ್ದೆನೆಂದರೆ ಸ್ವಾಭಾವಿಕ ಅನಿಸಿಕೆಗಳನ್ನು ತೋರಿಸಲು ನನ್ನನ್ನು ನಾನು ಅನುಮತಿಸಲಿಲ್ಲ. ಆದರೆ ಇತರರಿಗೆ ಶಕ್ತಿ ಸ್ತಂಭವಾಗಿರಲು ಪ್ರಯತ್ನಿಸುವುದು ನನ್ನನ್ನು ಸಹಾಯಿಸುತ್ತಿಲ್ಲವೆಂದು ನಾನು ಕ್ರಮೇಣ ಕಂಡುಕೊಂಡೆ. ನಾನು ನನ್ನ ಪರಿಸ್ಥಿತಿಯನ್ನು ವಿಶ್ಲೇಷಿಸಲಾರಂಭಿಸಿ ಹೇಳತೊಡಗಿದ್ದೇನಂದರೆ, ‘ಅಳಬೇಕಾಗಿದ್ದರೆ ಅತ್ತುಬಿಡು. ತೀರ ಬಲಾಢ್ಯಳಾಗಿರಲು ಪ್ರಯತ್ನಿಸಬೇಡ. ಮುಂದೆ ಹೆಚ್ಚು ಸೌಖ್ಯವಾಗಿರುವ ಉದ್ದೇಶದಿಂದ ನಿನ್ನ ಅನಿಸಿಕೆಗಳನ್ನು ವ್ಯಕ್ತಪಡಿಸು,” ಎಂದು ಜ್ಞಾಪಿಸಿಕೊಳ್ಳುತ್ತಾಳೆ ಅವಳು.

ಹೀಗೆ ಮೈಕ್‌ ಮತ್ತು ಮ್ಯಾರಿಯನ್‌ ಇವರಿಬ್ಬರೂ ಶಿಫಾರಸ್ಸು ಮಾಡುವುದು: ದುಃಖವಶವಾಗಿರಿ! ಮತ್ತು ಅವರು ಸರಿ. ಏಕೆ? ಏಕೆಂದರೆ ದುಃಖಿಸುವುದು ಒಂದು ಆವಶ್ಯಕವಾದ ಭಾವಾತ್ಮಕ ಬಿಡುಗಡೆ. ನಿಮ್ಮ ಅನಿಸಿಕೆಗಳ ಬಿಡುಗಡೆಯು ನೀವು ಯಾವುದರ ಒತ್ತಡದಲ್ಲಿದ್ದೀರೋ ಅದನ್ನು ಶಮನಗೊಳಿಸಬಲ್ಲದು. ಭಾವಾವೇಶಗಳ ಸ್ವಾಭಾವಿಕ ಅಭಿವ್ಯಕ್ತಿಯು, ತಿಳಿವಳಿಕೆ ಮತ್ತು ನಿಷ್ಕೃಷ್ಟ ಮಾಹಿತಿಯೊಂದಿಗೆ ಜೊತೆಗೂಡಿರುವಲ್ಲಿ, ನಿಮ್ಮ ಅನಿಸಿಕೆಗಳನ್ನು ಯೋಗ್ಯ ಯಥಾದೃಷ್ಟಿಯಲ್ಲಿಟ್ಟಕೊಳ್ಳುವಂತೆ ಬಿಡುವುದು.

ಹೌದು, ಸಕಲರೂ ಏಕರೀತಿಯಾಗಿ ದುಃಖವನ್ನು ವ್ಯಕ್ತಪಡಿಸುವುದಿಲ್ಲವೆಂಬುದು ನಿಶ್ಚಯ. ಮತ್ತು ಪ್ರಿಯನೊಬ್ಬನು ಅನಿರೀಕ್ಷಿತವಾಗಿ ಸತ್ತನೋ ಅಥವಾ ಮರಣವು ದೀರ್ಘ ಕಾಯಿಲೆಯ ಬಳಿಕ ಬಂತೋ ಎಂಬಂತಹ ವಿಷಯಗಳ ಮೇಲೆ ಬದುಕಿ ಉಳಿದಿರುವವರ ಭಾವಾತ್ಮಕ ಪ್ರತಿಕ್ರಿಯೆ ಹೊಂದಿಕೊಂಡಿರಬಹುದು. ಆದರೆ ಒಂದು ವಿಷಯ ನಿಶ್ಚಯವೆಂದು ತೋರಿಬರುತ್ತದೆ: ನಿಮ್ಮ ಅನಿಸಿಕೆಗಳನ್ನು ನಿರೋಧಿಸುವುದು ಶಾರೀರಿಕವಾಗಿಯೂ ಭಾವಾತ್ಮಕವಾಗಿಯೂ ಹಾನಿಕರವಾಗಿರಬಲ್ಲದು. ನಿಮ್ಮ ದುಃಖವನ್ನು ಬಿಡುಗಡೆಗೊಳಿಸುವುದು ಎಷ್ಟೋ ಆರೋಗ್ಯಕರ. ಹೇಗೆ? ಶಾಸ್ತ್ರಗಳು ಕೆಲವು ಪ್ರಾಯೋಗಿಕ ಬುದ್ಧಿವಾದವನ್ನೊಳಗೊಂಡಿವೆ.

ದುಃಖವನ್ನು ಬಿಡುಗಡೆಗೊಳಿಸುವುದು—ಹೇಗೆ?

ಮಾತಾಡುವುದು ಸಹಾಯಕಾರಿಯಾದ ಬಿಡುಗಡೆಯಾಗಿರಬಲ್ಲದು. ತನ್ನ ಎಲ್ಲ ಹತ್ತು ಮಕ್ಕಳ ಮರಣಾನಂತರ ಹಾಗೂ ಇತರ ವೈಯಕ್ತಿಕ ದುರಂತಗಳ ಬಳಿಕ, ಪುರಾತನ ಕಾಲದ ಮೂಲಪಿತೃ ಯೋಬನು ಹೇಳಿದ್ದು: “ನನ್ನ ಜೀವವೇ ನನಗೆ ಬೇಸರವಾಗಿದೆ. ಎದೆಬಿಚ್ಚಿ [ಹೀಬ್ರೂ, “ಬಿಡುಗಡೆ ಹೊಂದಿದ”] ಮೊರೆಯಿಡುವೆನು; ಮನೋವ್ಯಥೆಯಿಂದ ನುಡಿಯುವೆನು.” (ಯೋಬ 1:2, 18, 19; 10:1) ಯೋಬನಿಗೆ ತನ್ನ ಚಿಂತೆಯನ್ನು ತಡೆದುಕೊಳ್ಳಲಾಗಲಿಲ್ಲ. ಅವನು ಅದನ್ನು ಬಿಡುಗಡೆಗೊಳಿಸುವ ಅಗತ್ಯವಿತ್ತು; ಅವನು “ನುಡಿಯ” ಬೇಕಾಗಿತ್ತು. ತದ್ರೀತಿ, ಇಂಗ್ಲಿಷ್‌ ನಾಟಕಕಾರ ಷೇಕ್ಸ್‌ಪಿಯರ್‌ ಮ್ಯಾಕ್ಬೆತ್‌ ನಾಟಕದಲ್ಲಿ ಬರೆದುದು: “ಕೊಡು ವ್ಯಥೆಗೆ ಮಾತುಗಳನ್ನು; ಮಾತಾಡದ ದುಃಖ ತುಂಬಿ ತುಳುಕುವ ಹೃದಕ್ಕೆ ಪಿಸುಗುಟ್ಟಿ, ಒಡೆಯುತ್ತದೆ ಅದನ್ನು.”

ಹೀಗೆ ನಿಮ್ಮ ಅನಿಸಿಕೆಗಳನ್ನು ತಾಳ್ಮೆಯಿಂದ ಮತ್ತು ಸಹಾನುಭೂತಿಯಿಂದ ಕೇಳುವ “ನಿಜ ಸಂಗಾತಿ”ಗೆ ತಿಳಿಸುವುದು ಸ್ವಲ್ಪ ಮಟ್ಟಿಗೆ ಉಪಶಮನವನ್ನು ತರಬಲ್ಲದು. (ಜ್ಞಾನೋಕ್ತಿ 17:17, NW) ಅನುಭವಗಳನ್ನು ಮತ್ತು ಅನಿಸಿಕೆಗಳನ್ನು ಮಾತುಗಳಿಗೆ ಪರಿವರ್ತಿಸುವುದು ಅನೇಕ ವೇಳೆ ಅವುಗಳನ್ನು ತಿಳಿಯಲು ಮತ್ತು ಅವುಗಳನ್ನು ನಿಭಾಯಿಸಲು ಸುಲಭ ಮಾಡುತ್ತದೆ. ಮತ್ತು ಕಿವಿಗೊಡುವ ವ್ಯಕ್ತಿಯು ಅವನ ಅಥವಾ ಅವಳ ಸ್ವಂತ ನಷ್ಟವನ್ನು ಕಾರ್ಯಸಾಧಕವಾಗಿ ನಿಭಾಯಿಸಿರುವ ಇನ್ನೊಬ್ಬ ವಿರಹಿಯಾಗಿರುವಲ್ಲಿ, ನೀವು ಹೇಗೆ ನಿಭಾಯಿಸಬಲ್ಲಿರಿ ಎಂಬ ಬಗೆಗೆ ಕೆಲವು ಪ್ರಾಯೋಗಿಕ ಸೂಚನೆಗಳನ್ನು ಶೇಖರಿಸಲು ನೀವು ಶಕ್ತರಾಗಬಹುದು. ತನ್ನ ಮಗು ಸತ್ತಾಗ, ತದ್ರೀತಿಯ ನಷ್ಟವನ್ನು ಎದುರಿಸಿದ್ದ ಇನ್ನೊಬ್ಬ ಸ್ತ್ರೀಯೊಂದಿಗೆ ಮಾತಾಡಿದ್ದು ಹೇಗೆ ಸಹಾಯ ಮಾಡಿತೆಂದು ಒಬ್ಬಾಕೆ ತಾಯಿ ವಿವರಿಸಿದಳು: “ಇನ್ನೊಬ್ಬಾಕೆ ಇದೇ ಸಂಗತಿಯನ್ನು ಅನುಭವಿಸಿ, ಅದರಿಂದ ಸುಸ್ಥಿತಿಯಿಂದ ಹೊರಬಂದು, ಇನ್ನೂ ಬದುಕುತ್ತಿದ್ದು, ಪುನಃ ತನ್ನ ಜೀವನದಲ್ಲಿ ಒಂದು ರೀತಿಯ ಕ್ರಮವನ್ನು ಕಂಡುಕೊಳ್ಳುತ್ತಿದ್ದಾಳೆಂದು ತಿಳಿಯುವುದು ನನಗೆ ಅತ್ಯಂತ ಬಲದಾಯಕವಾಗಿತ್ತು.”

ನಿಮ್ಮ ಅನಿಸಿಕೆಗಳನ್ನು ಬರೆದಿಡುವುದು ನಿಮ್ಮ ದುಃಖವನ್ನು ವ್ಯಕ್ತಪಡಿಸುವಂತೆ ಸಹಾಯ ಮಾಡಬಹುದೆಂದು ಬೈಬಲ್‌ ದೃಷ್ಟಾಂತಗಳು ತೋರಿಸುತ್ತವೆ

ನಿಮ್ಮ ಅನಿಸಿಕೆಗಳ ಕುರಿತು ಮಾತಾಡಲು ನಿರಾತಂಕವಾದ ಮನಸ್ಸು ನಿಮಗಿಲ್ಲದಿದ್ದರೆ ಆಗೇನು? ಸೌಲ ಮತ್ತು ಯೋನಾತಾನನ ಮರಣಾನಂತರ, ದಾವೀದನು ತೀರ ಭಾವಪೂರಿತವಾದ ಒಂದು ಶೋಕಗೀತೆಯನ್ನು ರಚಿಸಿ ತನ್ನ ದುಃಖವನ್ನು ಅದರಲ್ಲಿ ಎರೆದನು. ಈ ಶೋಕಭರಿತ ಗೀತರಚನೆಯು ಕ್ರಮೇಣ ಬೈಬಲಿನ ಎರಡನೆಯ ಸಮುವೇಲ ಪುಸ್ತಕದ ಲಿಖಿತ ದಾಖಲೆಯಾಯಿತು. (2 ಸಮುವೇಲ 1:17-27; 2 ಪೂರ್ವಕಾಲವೃತ್ತಾಂತ 35:25) ತತ್ಸಮಾನವಾಗಿ, ಬರವಣಿಗೆಯಲ್ಲಿ ತಮ್ಮನ್ನು ವ್ಯಕ್ತಪಡಿಸಿಕೊಳ್ಳುವುದು ಸುಲಭವೆಂದು ಕೆಲವರು ಕಂಡುಕೊಳ್ಳುತ್ತಾರೆ. ತಾನು ತನ್ನ ಅನಿಸಿಕೆಗಳನ್ನು ಬರೆದಿಡುತ್ತಿದ್ದಳೆಂದೂ, ಅನೇಕ ದಿನಗಳಾನಂತರ ತಾನು ಬರೆದಿಟ್ಟದ್ದನ್ನು ಪುನಃ ಓದುತ್ತಿದ್ದಳೆಂದೂ ಒಬ್ಬಾಕೆ ವಿಧವೆ ವರದಿ ಮಾಡಿದಳು. ಇದು ಒಂದು ಸಹಾಯಕಾರಿ ಬಿಡುಗಡೆಯೆಂದು ಅವಳು ಕಂಡುಹಿಡಿದಳು.

ಮಾತಾಡುವ ಮೂಲಕವಾಗಲಿ ಬರೆಯುವ ಮೂಲಕವಾಗಲಿ, ನಿಮ್ಮ ಅನಿಸಿಕೆಗಳನ್ನು ನಿವೇದಿಸುವುದು ನಿಮ್ಮ ದುಃಖವನ್ನು ನೀವು ಬಿಡುಗಡೆ ಮಾಡುವಂತೆ ಸಹಾಯ ಮಾಡಬಲ್ಲದು. ವಿರಹಿಯಾದ ಒಬ್ಬ ತಾಯಿ ವಿವರಿಸುವುದು: “ಒಂದು ಮಗುವಿನ ಮರಣನಷ್ಟದ ಬಳಿಕ ವಿವಾಹ ವಿಚ್ಛೇದ ಮಾಡಿಕೊಂಡಿದ್ದ ದಂಪತಿಗಳ ಕುರಿತು ನನ್ನ ಗಂಡನೂ ನಾನೂ ಕೇಳಿದ್ದೆವು. ನಮಗೆ ಅದು ಸಂಭವಿಸಬೇಕೆಂಬ ಬಯಕೆ ನಮಗಿರಲಿಲ್ಲ. ಆದುದರಿಂದ ನಮಗೆ ಕೋಪ ಬಂದಾಗೆಲ್ಲ, ಒಬ್ಬರು ಇನ್ನೊಬ್ಬರ ಮೇಲೆ ದೂರು ಹೊರಿಸಬಯಸಿದಾಗ, ನಾವು ಅದರ ಕುರಿತು ಚರ್ಚಿಸಿ ಮುಗಿಸುತ್ತಿದ್ದೆವು. ನಾವು ಹಾಗೆ ಮಾಡಿದ್ದರಿಂದ ನಾವು ಕೂಡಿ ನಿಜವಾಗಿಯೂ ಹೆಚ್ಚು ನಿಕಟವಾಗಿ ಬೆಳೆದಿದ್ದೇವೆಂದು ನನ್ನ ಯೋಚನೆ.” ಹೀಗೆ, ನಿಮ್ಮ ಅನಿಸಿಕೆಗಳನ್ನು ತಿಳಿಯಪಡಿಸುವುದು, ನೀವು ಒಂದೇ ನಷ್ಟದಲ್ಲಿ ಪಾಲಿಗರಾಗುವುದಾದರೂ, ಇತರರು ಭಿನ್ನ ರೀತಿಯಲ್ಲಿ—ಅವರ ಸ್ವಂತ ವೇಗ ಮತ್ತು ಸ್ವಂತ ವಿಧದಲ್ಲಿ—ದುಃಖಿಸಬಹುದೆಂದು ತಿಳಿಯುವಂತೆ ಸಹಾಯ ಮಾಡಬಲ್ಲದು.

ದುಃಖದ ಬಿಡುಗಡೆಗೆ ಅನುಕೂಲ ಮಾಡಬಲ್ಲ ಇನ್ನೊಂದು ವಿಷಯವು ಅಳುವುದು. “ಅಳುವ ಸಮಯ” ಒಂದಿದೆ ಎನ್ನುತ್ತದೆ ಬೈಬಲು. (ಪ್ರಸಂಗಿ 3:1, 4) ನಿಶ್ಚಯವಾಗಿ, ನಾವು ಪ್ರೀತಿಸುವ ವ್ಯಕ್ತಿಯೊಬ್ಬನ ಮರಣವು ಇಂತಹ ಸಮಯವನ್ನು ತಂದೊಡ್ಡುತ್ತದೆ. ದುಃಖದ ಕಣ್ಣೀರನ್ನು ಬಿಡುವುದು ಆ ವಾಸಿಯಾಗುವ ಕಾರ್ಯಗತಿಯ ಅಗತ್ಯ ಭಾಗವಾಗಿರುವಂತೆ ತೋರುತ್ತದೆ.

ತನ್ನ ತಾಯಿ ತೀರಿಕೊಂಡಾಗ ತನ್ನ ಆಪ್ತ ಮಿತ್ರಳೊಬ್ಬಳು ತಾನು ನಿಭಾಯಿಸುವಂತೆ ಹೇಗೆ ಸಹಾಯ ಮಾಡಿದಳೆಂದು ಒಬ್ಬ ಯುವ ಮಹಿಳೆ ವಿವರಿಸುತ್ತಾಳೆ. ಅವಳು ನೆನಪಿಸಿಕೊಳ್ಳುವುದು: “ನನ್ನ ಸ್ನೇಹಿತೆ ನನಗಾಗಿ ಸದಾ ಅಲ್ಲಿದ್ದಳು. ಅವಳು ನನ್ನೊಂದಿಗೆ ಅತ್ತಳು. ನನ್ನೊಂದಿಗೆ ಮಾತಾಡಿದಳು. ನನ್ನ ಭಾವಾವೇಶದಲ್ಲಿ ನಾನು ಎಷ್ಟೋ ಬಿಚ್ಚಿದ ಮನಸ್ಸಿನವಳಾಗಿ ಇರಬಹುದಾಗಿತ್ತು, ಮತ್ತು ಅದು ನನಗೆ ಪ್ರಾಮುಖ್ಯವಾಗಿತ್ತು. ಅಳುವುದರಿಂದ ನಾನು ಸಂಕೋಚಪಡಬೇಕಾಗಿರಲಿಲ್ಲ.” (ರೋಮಾಪುರ 12:15 ನೋಡಿ.) ನಿಮ್ಮ ಕಣ್ಣೀರಿಗಾಗಿ ನೀವು ನಾಚಿಕೆಪಡಬೇಕಾಗಿಯೂ ಇಲ್ಲ. ನಾವು ನೋಡಿರುವಂತೆ, ಬೈಬಲಿನಲ್ಲಿ ವ್ಯಕ್ತವಾದ ಯಾವ ಸಂಕೋಚವೂ ಇಲ್ಲದೆ ಬಹಿರಂಗವಾಗಿ ದುಃಖದ ಕಣ್ಣೀರು ಬಿಟ್ಟ, ಯೇಸು ಕ್ರಿಸ್ತನು ಸೇರಿರುವ ನಂಬಿಕೆಯ ಪುರುಷ ಮತ್ತು ಸ್ತ್ರೀಯರ ಉದಾಹರಣೆಗಳಿವೆ.—ಆದಿಕಾಂಡ 50:3; 2 ಸಮುವೇಲ 1:11, 12; ಯೋಹಾನ 11:33, 35.

ಪ್ರತಿಯೊಂದು ಸಂಸ್ಕೃತಿಯಲ್ಲಿ, ದುಃಖಿಸುವ ಜನರು ದುಃಖಶಮನ ಪಡೆಯುವುದನ್ನು ಗಣ್ಯಮಾಡುತ್ತಾರೆ

ಸ್ವಲ್ಪ ಸಮಯದ ವರೆಗೆ ನಿಮ್ಮ ಭಾವಾವೇಶವು ತುಸು ಮುಂತಿಳಿಸಲಸಾಧ್ಯವಾದದ್ದೆಂದು ನೀವು ಕಂಡುಕೊಳ್ಳಬಹುದು. ಹೆಚ್ಚು ಮುನ್ನೆಚ್ಚರಿಕೆಯಿಲ್ಲದೇ ಕಣ್ಣೀರು ಸುರಿಯಬಹುದು. ತಾನು ಸೂಪರ್‌ಮಾರ್ಕೆಟಿನಲ್ಲಿ ವಸ್ತುಗಳನ್ನು ಖರೀದಿಸುವುದು—ವಿಶೇಷವಾಗಿ, ಅಭ್ಯಾಸ ಬಲದಿಂದ ತನ್ನ ಗಂಡನಿಗೆ ಪ್ರಿಯವಾಗಿದ್ದ ಆಹಾರಕ್ಕೆ ಕೈಚಾಚುತ್ತಿದ್ದಾಗ—ತನ್ನನ್ನು ಅಳುವಂತೆ ಮಾಡುತ್ತದೆಂದು ಒಬ್ಬ ವಿಧವೆ ಕಂಡುಕೊಂಡಳು. ನಿಮ್ಮೊಂದಿಗೆ ತಾಳ್ಮೆಯಿಂದಿರ್ರಿ. ಕಣ್ಣೀರನ್ನು ತಡೆಹಿಡಿಯಬೇಕೆಂದು ಭಾವಿಸಬೇಡಿರಿ. ಅದು ದುಃಖಿಸುವುದರಲ್ಲಿರುವ ಸ್ವಾಭಾವಿಕ ಹಾಗೂ ಅಗತ್ಯವಾದ ಭಾಗವೆಂಬುದನ್ನು ನೆನಪಿನಲ್ಲಿಡಿರಿ.

ಅಪರಾಧ ಪ್ರಜ್ಞೆಯನ್ನು ನಿಭಾಯಿಸುವುದು

ಈ ಹಿಂದೆ ಗಮನಿಸಿರುವಂತೆ, ಒಬ್ಬ ಪ್ರಿಯನನ್ನು ಮರಣದಲ್ಲಿ ಕಳೆದುಕೊಂಡ ಮೇಲೆ ಕೆಲವರಿಗೆ ಅಪರಾಧ ಪ್ರಜ್ಞೆಯ ಅನಿಸಿಕೆಗಳು ಬರುತ್ತದೆ. ತನ್ನ ಮಗನಾದ ಯೋಸೇಫನು ಒಂದು “ದುಷ್ಟಮೃಗ” ದಿಂದ ಕೊಲ್ಲಲ್ಪಟ್ಟನೆಂದು ನಂಬುವಂತೆ ನಡೆಸಲ್ಪಟ್ಟಾಗ ನಂಬಿಗಸ್ತನಾದ ಯಾಕೋಬನಿಗಾದ ತೀವ್ರ ವ್ಯಥೆಯನ್ನು ಇದು ವಿವರಿಸಲು ಸಹಾಯ ಮಾಡಬಹುದು. ತನ್ನ ಸಹೋದರರ ಕ್ಷೇಮವನ್ನು ವಿಚಾರಿಸಲು ಯೋಸೇಫನನ್ನು ಯಾಕೋಬನು ತಾನೇ ಕಳುಹಿಸಿದ್ದನು. ಆದುದರಿಂದ, ‘ನಾನು ಯೋಸೇಫನನ್ನು ಒಬ್ಬನಾಗಿ ಏಕೆ ಕಳುಹಿಸಿದೆ? ಕಾಡು ಮೃಗಗಳು ಹೇರಳವಾಗಿದ್ದ ಒಂದು ಪ್ರದೇಶಕ್ಕೆ ನಾನು ಅವನನ್ನು ಏಕೆ ಕಳುಹಿಸಿದೆ?’ ಎಂಬಂತಹ ದೋಷಿ ಮನೋಭಾವದಿಂದ ಯಾಕೋಬನು ಕಾಡಿಸಲ್ಪಟ್ಟದ್ದು ಸಂಭವನೀಯ.—ಆದಿಕಾಂಡ 37:33-35.

ಪ್ರಾಯಶಃ ನೀವು ತೋರಿಸಿದ ಯಾವುದೋ ಅಸಡ್ಡೆಯು ನಿಮ್ಮ ಪ್ರಿಯನ ಮರಣಕ್ಕೆ ಸಹಾಯಮಾಡಿತೆಂದು ನೀವು ಭಾವಿಸುತ್ತೀರಿ. ಆ ಅಪರಾಧ ಪ್ರಜ್ಞೆ—ವಾಸ್ತವವಾಗಲಿ, ಕಾಲ್ಪನಿಕವಾಗಲಿ—ದುಃಖದ ಸಾಮಾನ್ಯ ಪ್ರತಿಕ್ರಿಯೆಯೆಂದು ಗ್ರಹಿಸಿಕೊಳ್ಳುವುದು ತಾನೇ ಸಹಾಯಕರವಾಗಿರಬಲ್ಲದು. ಇಲ್ಲಿಯೂ ಸಹ, ಇಂತಹ ಭಾವನೆಗಳನ್ನು ನಿಮ್ಮಲ್ಲಿಯೇ ಇಟ್ಟಕೊಳ್ಳಬೇಕೆಂದು ಭಾವಿಸಬೇಡಿರಿ. ನಿಮಗೆಷ್ಟು ಅಪರಾಧ ಪ್ರಜ್ಞೆಯಿದೆ ಎಂಬುದರ ಕುರಿತು ಮಾತಾಡುವುದೇ ಅತ್ಯಾವಶ್ಯಕವಾದ ಬಿಡುಗಡೆಯನ್ನು ಒದಗಿಸಬಲ್ಲದು.

ಆದರೂ, ನಾವು ಇನ್ನೊಬ್ಬ ವ್ಯಕ್ತಿಯನ್ನು ಎಷ್ಟೇ ಪ್ರೀತಿಸಲಿ, ನಾವು ಅವನ ಅಥವಾ ಅವಳ ಜೀವವನ್ನು ನಿಯಂತ್ರಿಸಲಾರೆವು ಮಾತ್ರವಲ್ಲ ನಾವು ಪ್ರೀತಿಸುವವರ ಮೇಲೆ “ಕಾಲವೂ ಮುಂಗಾಣದ ಸಂಭವವೂ” ಬರುವುದನ್ನು ಸಹ ತಡೆಯಲಾರೆವು ಎಂಬುದನ್ನು ಗ್ರಹಿಸಿರಿ. (ಪ್ರಸಂಗಿ 9:11) ಅದಲ್ಲದೆ, ನಿಮ್ಮ ಹೇತುಗಳು ಕೆಟ್ಟವಾಗಿರಲಿಲ್ಲವೆಂಬುದು ನಿಸ್ಸಂಶಯ. ದೃಷ್ಟಾಂತಕ್ಕೆ, ಬೇಗನೆ ಡಾಕ್ಟರರ ಭೇಟಿ ಮಾಡಿಸದೆ ಇದುದ್ದರಲ್ಲಿ, ನಿಮ್ಮ ಪ್ರಿಯನು ಕಾಯಿಲೆ ಬಿದ್ದು ಸಾಯಬೇಕೆಂದು ನೀವು ಉದ್ದೇಶಿಸಿದ್ದಿರೊ? ನಿಶ್ಚಯವಾಗಿ ಇಲ್ಲ! ಹಾಗಾದರೆ ಅವನ ಸಾವಿನ ಕಾರಣದ ಸಂಬಂಧದಲ್ಲಿ ನೀವು ನಿಜವಾಗಿಯೂ ಅಪರಾಧಿಗಳೊ?

ಒಬ್ಬಾಕೆ ತಾಯಿ ತನ್ನ ಮಗಳು ಒಂದು ಕಾರ್‌ ಅಪಘಾತದಲ್ಲಿ ಸತ್ತ ಬಳಿಕ ಅಪರಾಧ ಪ್ರಜ್ಞೆಯನ್ನು ನಿಭಾಯಿಸಲು ಕಲಿತಳು. ಅವಳು ವಿವರಿಸುವುದು: “ಅವಳನ್ನು ಹೊರಗೆ ಕಳುಹಿಸಿದ್ದಕ್ಕಾಗಿ ನಾನು ಅಪರಾಧ ಪ್ರಜ್ಞೆಯನ್ನು ಅನುಭವಿಸಿದೆ. ಆದರೆ ಹಾಗೆ ಅನಿಸುವುದು ಅಸಂಬದ್ಧವೆಂದು ನನಗೆ ಮನವರಿಕೆಯಾಯಿತು. ಅವಳನ್ನು ಅವಳ ತಂದೆಯೊಂದಿಗೆ ಯಾವುದೋ ಕೆಲಸಕ್ಕೆ ಕಳುಹಿಸಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ಅದು ಕೇವಲ ಒಂದು ಭಯಂಕರ ಅಪಘಾತವಾಗಿತ್ತು.”

‘ಆದರೆ ನಾನು ಹೇಳಬಹುದಾಗಿದ್ದ ಅಥವಾ ಮಾಡಬಹುದಾಗಿದ್ದ ಎಷ್ಟೋ ವಿಷಯಗಳಿವೆ,’ ಎಂದು ನೀವನ್ನಬಹುದು. ಆದರೆ ನಾನು ಪರಿಪೂರ್ಣನಾಗಿದ್ದ ತಂದೆಯೋ, ತಾಯಿಯೋ ಅಥವಾ ಮಗುವೂ ಆಗಿದ್ದೆನೆಂದು ನಮ್ಮಲ್ಲಿ ಯಾರು ತಾನೇ ಹೇಳಬಲ್ಲನು? ಬೈಬಲು ನಮಗೆ ಜ್ಞಾಪಕ ಹುಟ್ಟಿಸುವುದು: “ಅನೇಕ ವಿಷಯಗಳಲ್ಲಿ ನಾವೆಲ್ಲರೂ ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು . . . ಸಮರ್ಥನೂ (ಪರಿಪೂರ್ಣನು, NW) ಆಗಿದ್ದಾನೆ.” (ಯಾಕೋಬ 3:2; ರೋಮಾಪುರ 5:12) ಆದುದರಿಂದ ನೀವು ಪರಿಪೂರ್ಣರಲ್ಲವೆಂಬ ನಿಜತ್ವವನ್ನು ಅಂಗೀಕರಿಸಿರಿ. ಸಕಲ ವಿಧಗಳಲ್ಲಿ “ನಾನು ಕೇವಲ ಇಂಥಿಂಥದನ್ನು ಮಾಡುತ್ತಿದ್ದರೆ” ಎಂಬುದರ ಕುರಿತು ಯೋಚಿಸುತ್ತಿರುವುದು ಯಾವುದನ್ನೂ ಬದಲಾಯಿಸಲಾರದು, ಬದಲಿಗೆ ಅದು ನಿಮ್ಮ ವಾಸಿಯಾಗುವಿಕೆಯನ್ನು ನಿಧಾನಿಸೀತು.

ನಿಮ್ಮ ಅಪರಾಧ ಪ್ರಜ್ಞೆ ನಿಜವೆಂದು ನಂಬಲು ನಿಮಗೆ ಸ್ವಸ್ಥ ಕಾರಣಗಳು—ಕಲ್ಪಿತ ಕಾರಣಗಳಲ್ಲ—ಇರುವಲ್ಲಿ, ಅಪರಾಧ ಪ್ರಜ್ಞೆಯನ್ನು ಶಮನ ಮಾಡಲು ಇರುವ ಅತಿ ಪ್ರಾಮುಖ್ಯ ಸಂಗತಿ—ದೇವರ ಕ್ಷಮೆ—ಯನ್ನು ಪರಿಗಣಿಸಿರಿ. ಬೈಬಲು ನಮಗೆ ಆಶ್ವಾಸನೆ ನೀಡುವುದು: “ಯೆಹೋವನೇ, ದೇವರೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?” (ಕೀರ್ತನೆ 130:3, 4) ಗತಕಾಲಕ್ಕೆ ಹಿಂದೆ ಹೋಗಿ ನೀವು ಯಾವುದನ್ನೂ ಬದಲಾಯಿಸಲಾರಿರಿ. ಆದರೆ ಗತ ಪಾಪಗಳಿಗಾಗಿ ನೀವು ದೇವರಿಂದ ಕ್ಷಮೆಯನ್ನು ಯಾಚಿಸಬಲ್ಲಿರಿ. ಆಗ ಏನು? ಒಳ್ಳೆಯದು, ದೇವರು ನಿಮ್ಮ ಗತ ಪಾಪಗಳನ್ನು ಕ್ಷಮಿಸಲು ವಾಗ್ದಾನಿಸುವಲ್ಲಿ ನೀವು ಸಹ ನಿಮ್ಮನ್ನು ಕ್ಷಮಿಸಿಕೊಳ್ಳಬಾರದೊ?—ಜ್ಞಾನೋಕ್ತಿ 28:13; 1 ಯೋಹಾನ 1:9.

ಕೋಪದೊಂದಿಗೆ ವ್ಯವಹರಿಸುವುದು

ನೀವು ಪ್ರಾಯಶಃ, ಡಾಕ್ಟರರ ಮೇಲೆ, ನರ್ಸ್‌ಗಳ ಮೇಲೆ, ಮಿತ್ರರ ಮೇಲೆ, ಅಥವಾ ಸತ್ತವನ ಮೇಲೆಯೂ ಕೋಪಗೊಳ್ಳುತ್ತೀರೊ? ಇದು ಸಹ ಆದ ನಷ್ಟಕ್ಕೆ ಆಗುವ ಸಾಮಾನ್ಯ ಪ್ರತಿಕ್ರಿಯೆ ಎಂದು ಗ್ರಹಿಸಿಕೊಳ್ಳಿ. ಪ್ರಾಯಶಃ ನಿಮ್ಮ ಕೋಪವು ನಿಮಗನಿಸುವ ನೋವಿನ ಸಾಮಾನ್ಯ ಪರಿಕರವಾಗಿದೆ. ಒಬ್ಬ ಲೇಖಕನು ಹೇಳಿದ್ದು: “ಕೋಪದ ಪ್ರಜ್ಞೆಯುಳ್ಳವನಾಗುವುದರಿಂದ ಮಾತ್ರ—ಕೋಪದಿಂದ ವರ್ತಿಸುವುದಲ್ಲ, ನಿಮಗೆ ಅದರ ಅನಿಸಿಕೆಯಾಗುತ್ತದೆಂದು ತಿಳಿಯುವುದು—ನೀವು ಅದರ ನಾಶಕಾರಕ ಪರಿಣಾಮದಿಂದ ಮುಕ್ತರಾಗಬಲ್ಲಿರಿ.”

ಕೋಪವನ್ನು ವ್ಯಕ್ತಪಡಿಸುವುದು ಅಥವಾ ಅದರಲ್ಲಿ ಪಾಲಿಗರಾಗುವುದು ಸಹ ಸಹಾಯಕಾರಿಯಾಗಬಹುದು. ಹೇಗೆ? ಅನಿಯಂತ್ರಿತವಾದ ಕೋಪದ ಕೆರಳಿನಿಂದಲ್ಲವೆಂಬುದು ನಿಶ್ಚಯ. ಲಂಬಿಸಿರುವ ಕೋಪವು ಅಪಾಯಕರವೆಂದು ಬೈಬಲು ಎಚ್ಚರಿಸುತ್ತದೆ. (ಜ್ಞಾನೋಕ್ತಿ 14:29, 30) ಅದರ ಕುರಿತು ಒಮ್ಮನಸ್ಸಿರುವ ಒಬ್ಬ ಸ್ನೇಹಿತನೊಂದಿಗೆ ಮಾತಾಡುವುದರಲ್ಲಿ ನೀವು ಸಮಾಧಾನವನ್ನು ಕಂಡುಕೊಂಡೀರಿ. ಮತ್ತು ಕೋಪದಿಂದಿರುವಾಗ ಹುರುಪಿನ ವ್ಯಾಯಾಮವು ಒಂದು ಸಹಾಯಕಾರಿಯಾದ ಬಿಡುಗಡೆಯೆಂದು ಕೆಲವರು ಕಂಡುಹಿಡಿಯುತ್ತಾರೆ.—ಎಫೆಸ 4:25, 26 ಸಹ ನೋಡಿ.

ನಿಮ್ಮ ಅನಿಸಿಕೆಗಳ ಸಂಬಂಧದಲ್ಲಿ ತೆರೆದ ಮನಸ್ಸು ಮತ್ತು ಪ್ರಾಮಾಣಿಕತೆ ಪ್ರಾಮುಖ್ಯವಾಗಿರುವುದಾದರೂ, ಎಚ್ಚರಿಕೆಯ ಒಂದು ಮಾತು ಸೂಕ್ತ. ನಿಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವುದಕ್ಕೂ ಅವನ್ನು ಇತರರ ಮೇಲೆ ಕಾರುವುದಕ್ಕೂ ವ್ಯತ್ಯಾಸವಿದೆ. ನಿಮ್ಮ ಕೋಪ ಮತ್ತು ಹತಾಶೆಗಾಗಿ ಇತರರನ್ನು ದೂರುವ ಅವಶ್ಯವಿಲ್ಲ. ಆದುದರಿಂದ ನಿಮ್ಮ ಅನಿಸಿಕೆಗಳನ್ನು ಮಾತಾಡುವುದಕ್ಕೆ ಗಮನ ಕೊಡಿರಿ, ಆದರೆ ಪ್ರತಿಕೂಲ ರೀತಿಯಲ್ಲಲ್ಲ. (ಜ್ಞಾನೋಕ್ತಿ 18:21) ದುಃಖವನ್ನು ನಿಭಾಯಿಸಲು ಒಂದು ಸರ್ವೋತ್ತಮ ಸಹಾಯವಿದೆ, ಮತ್ತು ನಾವು ಈಗ ಅದನ್ನು ಚರ್ಚಿಸುವೆವು.

ದೇವರಿಂದ ಸಹಾಯ

ಬೈಬಲು ನಮಗೆ ಆಶ್ವಾಸನೆ ಕೊಡುವುದು: “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರ ಮಾಡುತ್ತಾನೆ.” (ಕೀರ್ತನೆ 34:18) ಹೌದು, ಬೇರೆ ಯಾವುದಕ್ಕೂ ಹೆಚ್ಚಾಗಿ, ದೇವರೊಂದಿಗೆ ಒಂದು ಸಂಬಂಧವು ನೀವು ಪ್ರೀತಿಸುವ ಒಬ್ಬನ ಮರಣವನ್ನು ನೀವು ನಿಭಾಯಿಸುವಂತೆ ಸಹಾಯಮಾಡಬಲ್ಲದು. ಹೇಗೆ? ಹೇಗಂದರೆ ಇದು ವರೆಗೆ ನೀಡಲ್ಪಟ್ಟಿರುವ ಪ್ರಾಯೋಗಿಕ ಸೂಚನೆಗಳೆಲ್ಲ ದೇವರ ವಾಕ್ಯವಾದ ಬೈಬಲಿನ ಮೇಲೆ ಆಧಾರಿಸಲ್ಪಟ್ಟದ್ದಾಗಿವೆ ಅಥವಾ ಅದಕ್ಕೆ ಹೊಂದಿಕೆಯಾಗಿವೆ. ಇವುಗಳನ್ನು ಅನ್ವಯಿಸಿಕೊಳ್ಳುವುದು ನಿಮಗೆ ನಿಭಾಯಿಸಲು ಸಹಾಯ ಮಾಡಬಲ್ಲದು.

ಇದಕ್ಕೆ ಕೂಡಿಕೆಯಾಗಿ, ಪ್ರಾರ್ಥನೆಯ ಮೌಲ್ಯಕ್ಕೆ ಕಡಮೆ ಬೆಲೆಕಟ್ಟಬೇಡಿರಿ. ಬೈಬಲು ನಮ್ಮನ್ನು ಪ್ರೋತ್ಸಾಹಿಸುವುದು: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.” (ಕೀರ್ತನೆ 55:22) ನಿಮ್ಮ ಅನಿಸಿಕೆಗಳನ್ನು ಸಹಾನುಭೂತಿಯ ಒಬ್ಬ ಮಿತ್ರನಿಗೆ ತಿಳಿಸುವುದು ಸಹಾಯಕಾರಿಯಾಗಿದ್ದರೆ, “ಸಕಲವಿಧವಾಗಿ ಸಂತೈಸುವ ದೇವರು” ಆಗಿರುವಾತನಿಗೆ ನಿಮ್ಮ ಹೃದಯದಲ್ಲಿರುವುದನ್ನು ಹೊಯ್ಯುವುದು ಅದೆಷ್ಟು ಹೆಚ್ಚು ಸಹಾಯಕಾರಿಯಾಗಿರುವುದು!—2 ಕೊರಿಂಥ 1:3.

ಪ್ರಾರ್ಥನೆ ನಮ್ಮ ಅನಿಸಿಕೆಗಳನ್ನು ಕೇವಲ ಉತ್ತಮಗೊಳಿಸುತ್ತದೆ ಎಂಬುದು ವಿಷಯವಲ್ಲ. “ಪ್ರಾರ್ಥನೆಯನ್ನು ಕೇಳುವವನು” ಯಥಾರ್ಥತೆಯಿಂದ ಕೇಳುವ ತನ್ನ ಸೇವಕರಿಗೆ ಪವಿತ್ರಾತ್ಮವನ್ನು ಕೊಡಲು ವಾಗ್ದಾನಿಸುತ್ತಾನೆ. (ಕೀರ್ತನೆ 65:2; ಲೂಕ 11:13) ಮತ್ತು ದೇವರ ಪವಿತ್ರಾತ್ಮ ಅಥವಾ ಕ್ರಿಯಾಶೀಲ ಶಕ್ತಿ, ನಾವು ಒಂದು ದಿನವನ್ನು ದಾಟಿ ಇನ್ನೊಂದಕ್ಕೆ ಹೋಗುವರೆ ನಮ್ಮನ್ನು “ಬಲಾಧಿಕ್ಯ” ದಿಂದ ಸಜ್ಜುಗೊಳಿಸಬಲ್ಲದು. (2 ಕೊರಿಂಥ 4:7) ನೆನಪಿಗೆ ತಂದುಕೊಳ್ಳಿರಿ: ತನ್ನ ನಂಬಿಗಸ್ತ ಸೇವಕರು ಯಾವುದೇ ಮತ್ತು ಪ್ರತಿಯೊಂದು ಸಮಸ್ಯೆಯನ್ನು ತಾಳಿಕೊಳ್ಳುವಂತೆ ದೇವರು ಸಹಾಯಮಾಡಬಲ್ಲನು.

ಮಗುವನ್ನು ಮರಣದಲ್ಲಿ ಕಳೆದುಕೊಂಡ ಒಬ್ಬ ಸ್ತ್ರೀ, ಪ್ರಾರ್ಥನೆಯ ಶಕ್ತಿಯು ತನಗೂ ತನ್ನ ಗಂಡನಿಗೂ ತಮ್ಮ ಮರಣನಷ್ಟದ ಸಮಯದಲ್ಲಿ ಹೇಗೆ ಸಹಾಯಮಾಡಿತೆಂದು ಜ್ಞಾಪಿಸಿಕೊಳ್ಳುತ್ತಾಳೆ. “ನಾವು ರಾತ್ರಿ ಮನೆಯಲ್ಲಿದ್ದಾಗ ದುಃಖವು ಜಯಿಸಲಾಗದ್ದಾಗಿ ಪರಿಣಮಿಸಿದಾಗ, ನಾವು ಕೂಡಿ ಗಟ್ಟಿಯಾಗಿ ಪ್ರಾರ್ಥನೆ ಮಾಡುತ್ತಿದ್ದೆವು,” ಎಂದು ಆಕೆ ವಿವರಿಸುತ್ತಾಳೆ. “ಮೊದಲ ಬಾರಿ ಅವಳಿಲ್ಲದೆ ನಮಗೆ ಏನಾದರೂ ಮಾಡಲಿಕ್ಕಿದ್ದಾಗ—ನಾವು ಹೋದ ಮೊದಲಿನ ಸಭಾ ಕೂಟ, ನಾವು ಹಾಜರಾದ ಪ್ರಥಮ ಸಮ್ಮೇಳನ—ನಾವು ಬಲಕ್ಕಾಗಿ ಪ್ರಾರ್ಥಿಸುತ್ತಿದ್ದೆವು. ನಾವು ಬೆಳಗ್ಗೆ ಎದ್ದು, ಇದೆಲ್ಲದರ ವಾಸ್ತವಿಕತೆಯು ತಾಳಲಸಾಧ್ಯವಾಗಿ ತೋರಿದಾಗ, ನಮಗೆ ಸಹಾಯ ಮಾಡಲು ನಾವು ಯೆಹೋವನಿಗೆ ಪ್ರಾರ್ಥಿಸುತ್ತಿದ್ದೆವು. ನಾನಾಗಿಯೆ ಮನೆಯೊಳಗೆ ನಡೆದು ಹೋಗುವುದು ಯಾವುದೋ ಕಾರಣದಿಂದ ನನಗೆ ನಿಜವಾಗಿಯೂ ಪೆಟ್ಟಿನ ವಿಷಯವಾಗುತ್ತಿತ್ತು. ಆದುದರಿಂದ ಪ್ರತಿ ಸಾರಿ ನಾನೊಬ್ಬಳೇ ಮನೆಗೆ ಬಂದಾಗ, ನಾನು ತುಸು ಶಾಂತತೆಯನ್ನು ಕಾಪಾಡಿಕೊಳ್ಳುವಂತೆ ದಯವಿಟ್ಟು ಸಹಾಯ ಮಾಡಲು ನಾನು ಯೆಹೋವನಿಗೆ ಒಂದು ಪ್ರಾರ್ಥನೆ ಮಾಡುತ್ತಿದ್ದೆ.” ಆ ನಂಬಿಗಸ್ತೆಯಾದ ಸ್ತ್ರೀಯು ಆ ಪ್ರಾರ್ಥನೆಗಳು ಬಹಳ ಮುಖ್ಯವಾಗಿದ್ದವೆಂದು ಸ್ಥಿರವಾಗಿ ಮತ್ತು ಸಮರ್ಪಕವಾಗಿ ನಂಬುತ್ತಾಳೆ. ನೀವು ಪಟ್ಟುಹಿಡಿದು ಮಾಡುವ ಪ್ರಾರ್ಥನೆಗೆ ಪ್ರತ್ಯುತ್ತರವಾಗಿ, “ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ . . . ಕಾಯುವುದು” ಎಂದು ನೀವೂ ಕಂಡುಕೊಂಡೀರಿ.—ಫಿಲಿಪ್ಪಿ 4:6, 7; ರೋಮಾಪುರ 12:12.

ದೇವರು ಒದಗಿಸುವ ಸಹಾಯ ಬಹಳ ಮುಖ್ಯವೆಂಬುದು ನಿಜ. ಕ್ರೈಸ್ತ ಅಪೊಸ್ತಲ ಪೌಲನು, “ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವದಕ್ಕೆ” ದೇವರು ಸಂತೈಸುವಿಕೆಯನ್ನು ಕೊಡುತ್ತಾನೆಂದು ಹೇಳಿದನು. ದೈವಿಕ ಸಹಾಯ ನೋವನ್ನು ನಿವಾರಿಸುವುದಿಲ್ಲವೆಂಬುದು ನಿಜ, ಆದರೆ ಅದು ನಾವು ತಾಳಲು ಸುಲಭವಾಗುವಂತೆ ಮಾಡಬಲ್ಲದು. ನೀವು ಇನ್ನು ಮುಂದೆ ಅಳುವುದಿಲ್ಲ ಅಥವಾ ನಿಮ್ಮ ಪ್ರಿಯರನ್ನು ಮರೆತು ಬಿಡುವಿರಿ ಎಂದು ಇದರ ಅರ್ಥವಲ್ಲ. ಆದರೆ ನೀವು ಗುಣಹೊಂದಬಲ್ಲಿರಿ. ಮತ್ತು ನೀವು ಹೀಗೆ ಮಾಡುವಾಗ, ನಿಮಗಾದ ಅನುಭವವು, ತದ್ರೀತಿಯ ನಷ್ಟವನ್ನು ಇತರರು ನಿಭಾಯಿಸುವಂತೆ ಸಹಾಯ ಮಾಡಲು ನೀವು ಹೆಚ್ಚು ಒಮ್ಮನಸ್ಸಿನವರೂ ಸಹಾನುಭೂತಿಯವರೂ ಆಗುವಂತೆ ಮಾಡಬಲ್ಲದು.—2 ಕೊರಿಂಥ 1:4.