ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 14

“ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ಈಡನ್ನು” ಯೆಹೋವನು ಏರ್ಪಡಿಸುತ್ತಾನೆ

“ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ಈಡನ್ನು” ಯೆಹೋವನು ಏರ್ಪಡಿಸುತ್ತಾನೆ

1, 2. ಮಾನವಕುಲದ ಇಂದಿನ ಪರಿಸ್ಥಿತಿಯನ್ನು ಬೈಬಲು ಹೇಗೆ ವರ್ಣಿಸಿದೆ, ಮತ್ತು ಇದರಿಂದ ಮುಕ್ತರಾಗಲು ಇರುವ ಒಂದೇ ಒಂದು ಮಾರ್ಗವು ಯಾವುದು?

“ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ” ಇದೆ. (ರೋಮಾಪುರ 8:22) ನಾವಿರುವ ಶೋಚನೀಯ ಪರಿಸ್ಥಿತಿಯನ್ನು ಅಪೊಸ್ತಲ ಪೌಲನು ಈ ಮೇಲಿನ ಮಾತುಗಳಲ್ಲಿ ವರ್ಣಿಸುತ್ತಾನೆ. ಮಾನವ ದೃಷ್ಟಿಕೋನದಿಂದ ನೋಡುವುದಾದರೆ ಈ ನರಳಾಟ, ಪಾಪ, ಮತ್ತು ಮರಣದಿಂದ ಮುಕ್ತರಾಗಲು ಯಾವ ದಾರಿಯೂ ಇಲ್ಲದಂತೆ ತೋರುತ್ತದೆ. ಆದರೆ ಯೆಹೋವನಿಗೆ ಮನುಷ್ಯನಿಗಿರುವಂಥ ಇತಿಮಿತಿಗಳಿಲ್ಲ. (ಅರಣ್ಯಕಾಂಡ 23:19) ನಾವು ನಮ್ಮ ಸಂಕಷ್ಟಗಳಿಂದ ಮುಕ್ತರಾಗಲು, ನ್ಯಾಯವಂತನಾದ ದೇವರು ನಮಗಾಗಿ ಒಂದು ಮಾರ್ಗವನ್ನು ತೆರೆದಿದ್ದಾನೆ. ಅದು ಈಡು ಎಂದು ಕರೆಯಲ್ಪಡುತ್ತದೆ.

2 ಈ ಈಡು, ಯೆಹೋವನು ಮಾನವಕುಲಕ್ಕೆ ಕೊಟ್ಟಿರುವ ಅತ್ಯಂತ ಮಹಾನ್‌ ಕೊಡುಗೆಯಾಗಿದೆ. ಪಾಪ ಮತ್ತು ಮರಣದಿಂದ ನಮ್ಮ ಬಿಡುಗಡೆಯನ್ನು ಅದು ಶಕ್ಯವನ್ನಾಗಿ ಮಾಡುತ್ತದೆ. (ಎಫೆಸ 1:7) ಪರಲೋಕದಲ್ಲಾಗಲಿ ಇಲ್ಲವೆ ಭೂಮಿಯ ಮೇಲಿನ ಪರದೈಸಿನಲ್ಲಾಗಲಿ ನಿತ್ಯಜೀವದ ನಿರೀಕ್ಷೆಯ ಬುನಾದಿಯೇ ಅದು. (ಲೂಕ 23:43; ಯೋಹಾನ 3:16; 1 ಪೇತ್ರ 1:4) ಆದರೆ ಈಡು ಎಂದರೇನು? ಯೆಹೋವನ ಅತ್ಯುತ್ಕೃಷ್ಟ ನ್ಯಾಯದ ಕುರಿತು ಅದು ನಮಗೇನನ್ನು ಕಲಿಸುತ್ತದೆ?

ಈಡಿನ ಅಗತ್ಯವೆದ್ದದ್ದು ಹೇಗೆ?

3. (ಎ) ಈಡಿನ ಆವಶ್ಯಕತೆ ಏಕೆ ಉಂಟಾಯಿತು? (ಬಿ) ಆದಾಮನ ಸಂತತಿಯ ಮೇಲಿನ ಮರಣಶಿಕ್ಷೆಯನ್ನು ದೇವರು ಸುಲಭವಾಗಿ ಮನ್ನಿಸಿಬಿಡಲು ಸಾಧ್ಯವಿರಲಿಲ್ಲವೇಕೆ?

3 ಆದಾಮನು ಗೈದ ಪಾಪದ ಕಾರಣದಿಂದ ಈಡಿನ ಆವಶ್ಯಕತೆಯು ಉಂಟಾಯಿತು. ದೇವರಿಗೆ ಅವಿಧೇಯನಾಗುವ ಮೂಲಕ, ಆದಾಮನು ತನ್ನ ಸಂತಾನಕ್ಕೆ ರೋಗ, ದುಃಖ, ಬೇನೆ, ಮತ್ತು ಮರಣವನ್ನು ಪಿತ್ರಾರ್ಜಿತ ಆಸ್ತಿಯಾಗಿ ಬಿಟ್ಟುಹೋದನು. (ಆದಿಕಾಂಡ 2:17; ರೋಮಾಪುರ 8:20) ದೇವರು ಭಾವುಕನಾಗಿ, ಆ ಮರಣಶಿಕ್ಷೆಯನ್ನು ಸುಲಭವಾಗಿ ಮನ್ನಿಸಿಬಿಡಲು ಸಾಧ್ಯವಿದ್ದಿರಲಿಲ್ಲ. ಹಾಗೆ ಮಾಡುತ್ತಿದ್ದರೆ, “ಪಾಪವು ಕೊಡುವ ಸಂಬಳ ಮರಣ” ಎಂಬ ತನ್ನ ಸ್ವಂತ ನಿಯಮವನ್ನು ಆತನು ಕಡೆಗಣಿಸುವಂತಾಗುತ್ತಿತ್ತು. (ರೋಮಾಪುರ 6:23) ಮತ್ತು ಒಂದುವೇಳೆ ಯೆಹೋವನು ನ್ಯಾಯದ ತನ್ನ ಸ್ವಂತ ಮಟ್ಟಗಳನ್ನು ನಿರರ್ಥಕಗೊಳಿಸಿದ್ದಲ್ಲಿ, ವಿಶ್ವದಲ್ಲೆಲ್ಲ ಅಸ್ತವ್ಯಸ್ತತೆ ಮತ್ತು ನಿಯಮರಾಹಿತ್ಯವು ರಾರಾಜಿಸುತ್ತಿದ್ದವು!

4, 5. (ಎ) ಸೈತಾನನು ದೇವರನ್ನು ನಿಂದಿಸಿದ್ದು ಹೇಗೆ, ಮತ್ತು ಈ ಸವಾಲುಗಳನ್ನು ಉತ್ತರಿಸಲು ಯೆಹೋವನು ಹಂಗಿಗನಾಗಿದ್ದನು ಏಕೆ? (ಬಿ) ಯೆಹೋವನ ನಿಷ್ಠಾವಂತ ಸೇವಕರ ಸಂಬಂಧದಲ್ಲಿ ಸೈತಾನನು ಯಾವ ಆರೋಪವನ್ನು ಹೊರಿಸಿದನು?

4 ನಾವು ಅಧ್ಯಾಯ 12ರಲ್ಲಿ ನೋಡಿದ ಪ್ರಕಾರ, ಏದೆನ್‌ ತೋಟದಲ್ಲಿ ನಡೆದ ದಂಗೆಯು ಇನ್ನೂ ಹೆಚ್ಚು ಮಹತ್ತಾದ ವಾದಾಂಶಗಳನ್ನು ಎಬ್ಬಿಸಿತು. ದೇವರ ಸುನಾಮಕ್ಕೆ ಸೈತಾನನು ಮಸಿಬಳಿದನು. ಕಾರ್ಯತಃ ಅವನು, ಯೆಹೋವನು ಒಬ್ಬ ಸುಳ್ಳುಗಾರನೆಂದೂ ಆತನ ಸೃಷ್ಟಿಜೀವಿಗಳಿಂದ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕ್ರೂರ ಸರ್ವಾಧಿಕಾರಿಯೆಂದೂ ಆರೋಪಹೊರಿಸಿದನು. (ಆದಿಕಾಂಡ 3:1-5) ಭೂಮಿಯನ್ನು ನೀತಿವಂತರಾದ ಮನುಷ್ಯರಿಂದ ತುಂಬಿಸುವ ದೇವರ ಉದ್ದೇಶವು ಭಂಗಗೊಳಿಸಲ್ಪಟ್ಟಿದೆ ಎಂದು ತೋರುವಂತೆ ಮಾಡುವ ಮೂಲಕ, ದೇವರು ಏನನ್ನೂ ಸಾಧಿಸಲಾರನು ಎಂಬ ದೋಷಾರೋಪವನ್ನೂ ಸೈತಾನನು ಹಾಕಿದನು. (ಆದಿಕಾಂಡ 1:28; ಯೆಶಾಯ 55:10, 11) ಈ ಎಲ್ಲಾ ಸವಾಲುಗಳನ್ನು ದೇವರು ಉತ್ತರಿಸದೆ ಬಿಟ್ಟಿದ್ದಲ್ಲಿ, ಆತನ ಬುದ್ಧಿಶಕ್ತಿಯುಳ್ಳ ಸೃಷ್ಟಿಜೀವಿಗಳಲ್ಲಿ ಅನೇಕರು ಆತನ ಆಳಿಕೆಯಲ್ಲಿ ಬಹಳಷ್ಟು ಭರವಸೆಯನ್ನು ಕಳೆದುಕೊಳ್ಳುತ್ತಿದ್ದರು.

5 ಯೆಹೋವನ ನಿಷ್ಠಾವಂತ ಸೇವಕರನ್ನೂ ಸೈತಾನನು ನಿಂದಿಸಿದನು. ಅವರು ಸ್ವಾರ್ಥ ಹೇತುಗಳಿಂದ ಮಾತ್ರ ಆತನನ್ನು ಸೇವಿಸುತ್ತಾರೆಂದೂ ಒತ್ತಡದ ಕೆಳಗೆ ಯಾರೂ ದೇವರಿಗೆ ನಂಬಿಗಸ್ತರಾಗಿ ಉಳಿಯರೆಂದೂ ಅವನು ಆರೋಪಿಸಿದನು. (ಯೋಬ 1:9-11) ಈ ವಾದಾಂಶಗಳು ಮಾನವಕುಲದ ಸಂಕಷ್ಟದ ಪರಿಸ್ಥಿತಿಗಿಂತ ಎಷ್ಟೋ ಹೆಚ್ಚು ಮಹತ್ವವುಳ್ಳವುಗಳಾಗಿದ್ದವು. ಆದುದರಿಂದ ಸೈತಾನನ ನಿಂದಾತ್ಮಕ ಆರೋಪಗಳಿಗೆ ಸದುತ್ತರವನ್ನು ಕೊಡಬೇಕೆಂಬ ಹಂಗಿನ ಅನಿಸಿಕೆ ಯೆಹೋವನಿಗಾದದ್ದು ಯುಕ್ತವಾಗಿತ್ತು. ಆದರೆ ದೇವರು ಈ ವಾದಾಂಶಗಳನ್ನು ಬಗೆಹರಿಸಿ, ಅದೇ ಸಮಯದಲ್ಲಿ ಮಾನವಕುಲವನ್ನು ರಕ್ಷಿಸಲೂ ಸಾಧ್ಯವಾಗುವುದು ಹೇಗೆ?

ಈಡು​—ಅನುರೂಪತೆ

6. ಮಾನವಕುಲವನ್ನು ರಕ್ಷಿಸುವುದಕ್ಕಾಗಿರುವ ದೇವರ ಸಾಧನವನ್ನು ವಿವರಿಸಲು ಬೈಬಲು ಉಪಯೋಗಿಸಿರುವ ಕೆಲವು ಅಭಿವ್ಯಕ್ತಿಗಳಾವುವು?

6 ಯೆಹೋವನು ಏರ್ಪಡಿಸಿದ ಪರಿಹಾರಮಾರ್ಗವು ಅತ್ಯಂತ ಕರುಣಾಭರಿತವೂ ಗಹನವಾಗಿ ನ್ಯಾಯವಾದದ್ದೂ ಆಗಿತ್ತು. ಅದು, ಯಾವ ಮಾನವನೂ ಎಂದೂ ಕಲ್ಪಿಸಲಿಕ್ಕೂ ಸಾಧ್ಯವಿಲ್ಲದಂಥದ್ದು. ಆದರೂ ಅದು ಬಲು ಸೊಗಸಾದ ಸರಳ ಏರ್ಪಾಡಾಗಿತ್ತು. ಅದನ್ನು ವಿವಿಧ ರೀತಿಗಳಲ್ಲಿ, ಅಂದರೆ ಅಪರಾಧ ನಿವಾರಿಸುವುದು, ಕ್ರಯಕ್ಕೆ ಕೊಳ್ಳಲ್ಪಡುವುದು, ಸಂಧಾನಪಡಿಸಿಕೊಳ್ಳುವಿಕೆ ಮತ್ತು ಪಾಪ ನಿವಾರಣೆಮಾಡುವಂಥದ್ದಾಗಿ ಸೂಚಿಸಲಾಗಿದೆ. (ದಾನಿಯೇಲ 9:24; 1 ಕೊರಿಂಥ 6:20; ಕೊಲೊಸ್ಸೆ 1:20; ಇಬ್ರಿಯ 2:17) ಆದರೆ ಇದನ್ನು ಪ್ರಾಯಶಃ ಅತ್ಯುತ್ತಮವಾಗಿ ವರ್ಣಿಸುವ ಅಭಿವ್ಯಕ್ತಿಯು ಸ್ವತಃ ಯೇಸುವಿನಿಂದಲೇ ಉಪಯೋಗಿಸಲ್ಪಟ್ಟ ಅಭಿವ್ಯಕ್ತಿಯಾಗಿದೆ. ಅವನಂದದ್ದು: “ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆಮಾಡುವದಕ್ಕೂ ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು [ಗ್ರೀಕ್‌, ಲೀಟ್ರಾನ್‌]ಕೊಡುವದಕ್ಕೂ ಬಂದನು.”​—ಮತ್ತಾಯ 20:28.

7, 8. (ಎ) ಶಾಸ್ತ್ರವಚನಗಳಲ್ಲಿ “ಈಡು” ಎಂಬ ಪದದ ಅರ್ಥವು ಏನಾಗಿದೆ? (ಬಿ) ಈಡು ಕೊಡುವುದರಲ್ಲಿ ಹೇಗೆ ಸರಿಸಮಾನತೆಯು ಒಳಗೂಡಿರುತ್ತದೆ?

7 ಈಡು ಅಂದರೇನು? ಇದಕ್ಕಾಗಿ ಉಪಯೋಗಿಸಲ್ಪಟ್ಟ ಗ್ರೀಕ್‌ ಪದವು, “ಬಂಧ ಮುಕ್ತಮಾಡುವುದು, ಬಿಡುಗಡೆ ಮಾಡುವುದು” ಎಂಬರ್ಥವಿರುವ ಕ್ರಿಯಾಪದದಿಂದ ಬಂದಿದೆ. ಯುದ್ಧ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕಾಗಿ ವಿನಿಮಯದಲ್ಲಿ ತೆತ್ತ ಹಣವನ್ನು ವರ್ಣಿಸಲು ಈ ಪದವನ್ನು ಉಪಯೋಗಿಸಲಾಗುತ್ತಿತ್ತು. ಹಾಗಾದರೆ ಮೂಲತಃ ಈಡನ್ನು, ಯಾವುದಾದರೊಂದು ವಿಷಯವನ್ನು ಪುನಃ ಖರೀದಿಸಲಿಕ್ಕಾಗಿ ತೆರುವಂಥದ್ದು ಎಂದು ಅರ್ಥನಿರೂಪಿಸಬಹುದಾಗಿದೆ. ಹೀಬ್ರು ಶಾಸ್ತ್ರಗಳಲ್ಲಿ “ಈಡು” (ಕೋಫರ್‌) ಎಂಬ ಪದವು “ಮುಚ್ಚುವುದು” ಎಂಬರ್ಥವಿರುವ ಕ್ರಿಯಾಪದದಿಂದ ಬಂದಿದೆ. ಉದಾಹರಣೆಗಾಗಿ, ದೇವರು ನೋಹನಿಗೆ ನಾವೆಗೆ ರಾಳವನ್ನು “ಹಚ್ಚು” [ಹೀಬ್ರು ಭಾಷೆಯಲ್ಲಿ, ರಾಳದಿಂದ “ಮುಚ್ಚು”] (ಅದೇ ಶಬ್ದದ ಒಂದು ಪದರೂಪ)ವಂತೆ ಹೇಳಿದ್ದನು. (ಆದಿಕಾಂಡ 6:14) ಈಡು ಕೊಡುವುದೆಂದರೆ, ಪಾಪಗಳನ್ನು “ನಿವಾರಣೆ” [ಹೀಬ್ರು ಭಾಷೆಯಲ್ಲಿ, “ಮುಚ್ಚು”] ಮಾಡುವುದೂ ಆಗಿದೆಯೆಂದು ತಿಳಿದುಕೊಳ್ಳಲು ಇದು ನಮಗೆ ಸಹಾಯಮಾಡುತ್ತದೆ.​—ಕೀರ್ತನೆ 65:3.

8ಥಿಯೊಲಾಜಿಕಲ್‌ ಡಿಕ್ಷನೆರಿ ಆಫ್‌ ದ ನ್ಯೂ ಟೆಸ್ಟ್‌ಮೆಂಟ್‌ ತಿಳಿಸುವುದೇನಂದರೆ, ಈ (ಕೋಫರ್‌) ಪದವು, “ಯಾವಾಗಲೂ ಸರಿಸಮವಾದದ್ದನ್ನು,” ಅಥವಾ ಅನುರೂಪವಾದದ್ದನ್ನು ಸೂಚಿಸುತ್ತದೆ ಮತ್ತು ಇದು ಗಮನಾರ್ಹವು. ಈ ಕಾರಣದಿಂದ, ಒಡಂಬಡಿಕೆಯ ಮಂಜೂಷದ ಮುಚ್ಚಳದ ಆಕಾರವು ಮಂಜೂಷದ ಆಕಾರಕ್ಕೆ ಅನುರೂಪವಾಗಿತ್ತು. * ತದ್ರೀತಿ ಈಡು ಕೊಟ್ಟು ವಿಮೋಚಿಸಲು, ಅಥವಾ ಪಾಪವನ್ನು ಮುಚ್ಚಲು, ಪಾಪದಿಂದ ಉಂಟಾದ ನಷ್ಟವನ್ನು ಪೂರ್ಣವಾಗಿ ಮುಚ್ಚುವ ಅಥವಾ ಅದಕ್ಕೆ ಪೂರ್ಣವಾಗಿ ಅನುರೂಪವಾದ ಬೆಲೆಯು ತೆರಲ್ಪಡಲೇಬೇಕಿತ್ತು. ಹೀಗಿರುವುದರಿಂದ ದೇವರ ಧರ್ಮಶಾಸ್ತ್ರವು ಇಸ್ರಾಯೇಲ್ಯರಿಗೆ ಹೀಗೆ ಹೇಳಿತ್ತು: “ಪ್ರಾಣಕ್ಕೆ ಪ್ರತಿಯಾಗಿ ಪ್ರಾಣವನ್ನೂ ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ಕೈಗೆ ಪ್ರತಿಯಾಗಿ ಕೈಯನ್ನೂ ಕಾಲಿಗೆ ಪ್ರತಿಯಾಗಿ ಕಾಲನ್ನೂ ಅವನಿಗೆ ನಷ್ಟಪಡಿಸಬೇಕು.”​—ಧರ್ಮೋಪದೇಶಕಾಂಡ 19:21.

9. ನಂಬಿಗಸ್ತ ಜನರು ಪ್ರಾಣಿಯಜ್ಞಗಳನ್ನು ಅರ್ಪಿಸಿದ್ದೇಕೆ, ಮತ್ತು ಯೆಹೋವನು ಅಂಥ ಯಜ್ಞಗಳನ್ನು ಹೇಗೆ ವೀಕ್ಷಿಸಿದನು?

9 ಹೇಬೆಲನ ಸಮಯದಿಂದ ಹಿಡಿದು ನಂಬಿಗಸ್ತ ಪುರುಷರು ದೇವರಿಗೆ ಪ್ರಾಣಿಯಜ್ಞಗಳನ್ನು ಅರ್ಪಿಸುತ್ತಿದ್ದರು. ಹಾಗೆ ಮಾಡುವ ಮೂಲಕ ಅವರು ತಾವು ಪಾಪಿಗಳಾಗಿದ್ದೇವೆ ಮತ್ತು ತಮಗೆ ವಿಮೋಚನೆಯ ಅಗತ್ಯವಿದೆಯೆಂಬ ಅರಿವಿದೆಯೆಂದು ತೋರಿಸಿದರು, ಮತ್ತು ದೇವರ “ಸಂತಾನ”ದ ಮೂಲಕವಾಗಿ ಆತನ ವಾಗ್ದತ್ತ ಬಿಡುಗಡೆಯಲ್ಲಿ ತಮ್ಮ ನಂಬಿಕೆಯನ್ನು ಸೂಚಿಸಿದರು. (ಆದಿಕಾಂಡ 3:15; 4:1-4; ಯಾಜಕಕಾಂಡ 17:11; ಇಬ್ರಿಯ 11:4) ಯೆಹೋವನು ಅಂಥ ಯಜ್ಞಗಳನ್ನು ಮೆಚ್ಚಿದನು ಮತ್ತು ಆ ಆರಾಧಕರಿಗೆ ಒಂದು ಒಳ್ಳೆಯ ನಿಲುವನ್ನು ಅನುಗ್ರಹಿಸಿದನು. ಹಾಗಿದ್ದರೂ, ಈ ಪ್ರಾಣಿಯಜ್ಞಗಳು ಹೆಚ್ಚೆಂದರೆ ಬರಿಯ ಸೂಚಕಗಳಾಗಿದ್ದವು. ಪ್ರಾಣಿಗಳು ಮನುಷ್ಯನ ಪಾಪವನ್ನು ನಿಜವಾಗಿ ಮುಚ್ಚಲು ಸಾಧ್ಯವಿರಲಿಲ್ಲ, ಯಾಕಂದರೆ ಅವುಗಳು ಮನುಷ್ಯರಿಗಿಂತ ಕಡಿಮೆ ದರ್ಜೆಯವುಗಳು. (ಕೀರ್ತನೆ 8:4-8) ಆದುದರಿಂದಲೇ ಬೈಬಲು ಹೇಳುವುದು: “ಹೋರಿಗಳ ಮತ್ತು ಹೋತಗಳ ರಕ್ತದಿಂದ ಪಾಪಗಳು ಪರಿಹಾರವಾಗುವದು ಅಸಾಧ್ಯ.” (ಇಬ್ರಿಯ 10:1-4) ಅಂಥ ಯಜ್ಞಗಳು ಕೇವಲ ನಿದರ್ಶನರೂಪವಾಗಿದ್ದು ಅಥವಾ ಸಾಂಕೇತಿಕವಾಗಿದ್ದು, ಮುಂದೆ ಬರಲಿದ್ದ ನಿಜವಾದ ಈಡು ಯಜ್ಞವನ್ನು ಸೂಚಿಸಿದವು.

‘ಅನುರೂಪವಾದ ಈಡು’

10. (ಎ) ಈಡನ್ನು ಕೊಡುವವನು ಯಾವುದಕ್ಕೆ ಅನುರೂಪವಾಗಿರಲೇಬೇಕಿತ್ತು, ಮತ್ತು ಯಾಕೆ? (ಬಿ) ಒಂದೇ ಒಂದು ಮಾನವ ಯಜ್ಞದ ಆವಶ್ಯಕತೆಯಿತ್ತು ಏಕೆ?

10 ‘ಆದಾಮನ ಸಂಬಂಧದಿಂದ ಎಲ್ಲರೂ ಸಾಯುವವರಾದರು’ ಎಂದು ಅಪೊಸ್ತಲ ಪೌಲನು ಹೇಳಿದನು. (1 ಕೊರಿಂಥ 15:22) ಹೀಗೆ ಆ ಈಡಿನಲ್ಲಿ, ಆದಾಮನಿಗೆ ಸರಿಸಮಾನವಾದ ಬೆಲೆಯುಳ್ಳ ಒಬ್ಬ ಪರಿಪೂರ್ಣ ಮಾನವನ ಮರಣವು ಒಳಗೂಡಿರಲೇಬೇಕಿತ್ತು. (ರೋಮಾಪುರ 5:14) ಬೇರೆ ಯಾವುದೇ ವಿಧದ ಸೃಷ್ಟಿಜೀವಿಯು ಆ ನ್ಯಾಯದ ತಕ್ಕಡಿಯನ್ನು ಸರಿದೂಗಿಸಸಾಧ್ಯವಿರಲಿಲ್ಲ. ಆದಾಮನಿಂದ ಬಂದಿರುವ ಮರಣಶಿಕ್ಷೆಗೆ ಒಳಗಾಗಿರದ ಒಬ್ಬ ಪರಿಪೂರ್ಣ ಮಾನವನು ಮಾತ್ರವೇ ಒಂದು ‘ಅನುರೂಪವಾದ ಈಡನ್ನು’​—ಆದಾಮನಿಗೆ ಪರಿಪೂರ್ಣವಾಗಿ ಅನುರೂಪವಾಗಿರುವ ಯಜ್ಞವನ್ನು ನೀಡಸಾಧ್ಯವಿತ್ತು. (1 ತಿಮೊಥೆಯ 2:​6, NW) ಆದಾಮನ ಪ್ರತಿಯೊಬ್ಬ ವಂಶಜನಿಗೆ ಅನುರೂಪವಾಗಿ ಅಗಣಿತ ಲಕ್ಷಾಂತರ ಮಾನವರನ್ನು ಯಜ್ಞಾರ್ಪಿಸುವ ಅಗತ್ಯವು ಅಲ್ಲಿರಲಿಲ್ಲ. ಅಪೊಸ್ತಲ ಪೌಲನು ವಿವರಿಸಿದ್ದು: “ಒಬ್ಬ ಮನುಷ್ಯ [ಆದಾಮ]ನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು.” (ಓರೆ ಅಕ್ಷರಗಳು ನಮ್ಮವು.) (ರೋಮಾಪುರ 5:12) ಮತ್ತು “[ಒಬ್ಬ] ಮನುಷ್ಯನ ಮೂಲಕ ಮರಣವು ಉಂಟಾದ ಕಾರಣ, [ಒಬ್ಬ] ಮನುಷ್ಯನ ಮೂಲಕ”ವೇ ಮಾನವಕುಲದ ವಿಮೋಚನೆಯೂ ಆಗುವಂತೆ ದೇವರು ಏರ್ಪಡಿಸಿದನು. (1 ಕೊರಿಂಥ 15:21) ಹೇಗೆ?

‘ಎಲ್ಲರಿಗಾಗಿ ಒಂದು ಅನುರೂಪವಾದ ಈಡು’

11. (ಎ) ಈಡು ಕೊಡುವವನು “ಎಲ್ಲರಿಗೋಸ್ಕರ ಮರಣವನ್ನು ಅನುಭವಿಸ”ಸಾಧ್ಯವಾದದ್ದು ಹೇಗೆ? (ಬಿ) ಆದಾಮಹವ್ವರು ಆ ಈಡಿನ ಏರ್ಪಾಡಿನಿಂದ ಪ್ರಯೋಜನ ಹೊಂದಸಾಧ್ಯವಿರಲಿಲ್ಲ ಏಕೆ? (ಪಾದಟಿಪ್ಪಣಿ ನೋಡಿ.)

11 ಒಬ್ಬ ಪರಿಪೂರ್ಣ ಮಾನವನು ಸ್ವಇಷ್ಟದಿಂದ ತನ್ನ ಜೀವವನ್ನು ಅರ್ಪಿಸುವಂತೆ ಯೆಹೋವನು ಏರ್ಪಾಡು ಮಾಡಿದನು. ರೋಮಾಪುರ 6:23​ಕ್ಕೆ ಅನುಸಾರವಾಗಿ, “ಪಾಪವು ಕೊಡುವ ಸಂಬಳ ಮರಣ.” ತನ್ನ ಜೀವವನ್ನು ಯಜ್ಞಾರ್ಪಿಸುವ ಮೂಲಕ, ಈಡು ಕೊಡುವವನು ‘ಎಲ್ಲರಿಗೋಸ್ಕರ ಮರಣವನ್ನು ಅನುಭವಿಸಲಿದ್ದನು.’ ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಆದಾಮನ ಪಾಪಕ್ಕಾಗಿ ಅವನು ಸಂಬಳವನ್ನು ತೆರಲಿಕ್ಕಿದ್ದನು. (ಇಬ್ರಿಯ 2:9; 2 ಕೊರಿಂಥ 5:21; 1 ಪೇತ್ರ 2:24) ಇದರಿಂದಾಗಿ ಅಗಾಧವಾದ ಶಾಸನಸಮ್ಮತ ಫಲಿತಾಂಶಗಳು ಉಂಟಾಗಲಿದ್ದವು. ಆದಾಮನ ವಿಧೇಯ ಸಂತತಿಯ ಮೇಲಿನ ಮರಣಶಿಕ್ಷೆಯನ್ನು ರದ್ದುಮಾಡುವ ಮೂಲಕ ಆ ಈಡು, ಪಾಪದ ನಾಶಕಾರಕ ಶಕ್ತಿಯನ್ನು ಬೇರುಸಮೇತ ಕಿತ್ತುಹಾಕಲಿತ್ತು. *​—ರೋಮಾಪುರ 5:16.

12. ಒಂದೇ ಸಾಲವನ್ನು ತೀರಿಸುವ ಮೂಲಕ ಅನೇಕ ಜನರು ಹೇಗೆ ಪ್ರಯೋಜನಹೊಂದಬಲ್ಲರು ಎಂಬುದನ್ನು ದೃಷ್ಟಾಂತಿಸಿರಿ.

12 ದೃಷ್ಟಾಂತಕ್ಕಾಗಿ: ನೀವು ಜೀವಿಸುತ್ತಿರುವ ಪಟ್ಟಣದಲ್ಲಿ ಹೆಚ್ಚಿನ ನಿವಾಸಿಗಳು ಒಂದು ದೊಡ್ಡ ಕಾರ್ಖಾನೆಯಲ್ಲಿ ಕೆಲಸಕ್ಕಿದ್ದಾರೆಂದು ಭಾವಿಸಿರಿ. ನೀವೂ ನಿಮ್ಮ ನೆರೆಯವರೂ ನಿಮ್ಮ ಕೆಲಸದಲ್ಲಿ ಒಳ್ಳೆಯ ಸಂಬಳ ಪಡೆಯುತ್ತಿದ್ದು, ಆರಾಮದ ಜೀವನವನ್ನು ನಡಿಸುತ್ತಿದ್ದೀರಿ. ಆದರೆ ಒಂದು ದಿನ ಆ ಕಾರ್ಖಾನೆಯು ಅಕಾಸ್ಮಾತ್‌ ಮುಚ್ಚಲ್ಪಡುತ್ತದೆ. ಕಾರಣ? ಕಾರ್ಖಾನೆಯ ಮೆನೇಜರನ ಭ್ರಷ್ಟಾಚಾರದಿಂದಾಗಿ ವ್ಯಾಪಾರವು ದಿವಾಳಿಯಾಯಿತು. ಇದ್ದಕ್ಕಿದ್ದ ಹಾಗೆ ನಿಮಗೆ ಮತ್ತು ನಿಮ್ಮ ನೆರೆಯವರಿಗೆ ಕೆಲಸವಿಲ್ಲ, ಆವಶ್ಯಕವಾದಂಥ ಸಾಮಗ್ರಿಗಳನ್ನು ಕೊಳ್ಳಲು ಹಣವಿಲ್ಲ. ಆ ಒಬ್ಬ ಮನುಷ್ಯನ ಭ್ರಷ್ಟಾಚಾರದಿಂದಾಗಿ ವಿವಾಹಿತ ಸಂಗಾತಿಗಳು, ಮಕ್ಕಳುಮರಿಗಳು, ಮತ್ತು ಸಾಲಿಗರೆಲ್ಲರೂ ಕಷ್ಟಪಡುತ್ತಾರೆ. ಇದಕ್ಕೆ ಪರಿಹಾರವೇನಾದರೂ ಇದೆಯೇ? ಹೌದು! ಒಬ್ಬ ಧನಿಕ ದಾನಶೂರನು ಹಸ್ತಕ್ಷೇಪಮಾಡಲು ಮುಂಬರುತ್ತಾನೆ. ಕಾರ್ಖಾನೆಯು ನಡಿಸುತ್ತಿದ್ದ ಕೆಲಸದ ಮೌಲ್ಯವನ್ನು ಅವನು ಅರಿತಿದ್ದಾನೆ. ಅಲ್ಲಿ ಕೆಲಸಕ್ಕಿದ್ದ ಅನೇಕ ಕಾರ್ಮಿಕರ ಮತ್ತು ಅವರ ಕುಟುಂಬಗಳಿಗಾಗಿಯೂ ಅವನಲ್ಲಿ ಮರುಕಹುಟ್ಟುತ್ತದೆ. ಆದ್ದರಿಂದ ಅವನು ಕಾರ್ಖಾನೆಯ ಸಾಲವನ್ನೆಲ್ಲಾ ತೀರಿಸಲು ಏರ್ಪಾಡುಮಾಡಿ ಅದನ್ನು ಪುನಃ ತೆರೆಯುತ್ತಾನೆ. ಆ ಒಂದೇ ಸಾಲದ ರದ್ದುಮಾಡುವಿಕೆಯು ಅನೇಕ ಕಾರ್ಮಿಕರಿಗೆ, ಅವರ ಕುಟುಂಬಗಳಿಗೆ ಮತ್ತು ಸಾಲಿಗರಿಗೆ ಪರಿಹಾರವನ್ನು ತರುತ್ತದೆ. ತದ್ರೀತಿಯಲ್ಲೇ ಆದಾಮನ ಸಾಲದ ರದ್ದುಮಾಡುವಿಕೆಯೂ ಅಗಣಿತ ಲಕ್ಷಾಂತರ ಜನರಿಗೆ ಪ್ರಯೋಜನಗಳನ್ನು ತರುತ್ತದೆ.

ಈಡನ್ನು ಒದಗಿಸುವವನಾರು?

13, 14. (ಎ) ಮಾನವಕುಲಕ್ಕಾಗಿ ಯೆಹೋವನು ಈಡನ್ನು ಏರ್ಪಡಿಸಿದ್ದು ಹೇಗೆ? (ಬಿ) ಯಾರಿಗೆ ಈಡನ್ನು ಸಲ್ಲಿಸಲಾಯಿತು, ಮತ್ತು ಹಾಗೆ ಸಲ್ಲಿಸುವುದು ಏಕೆ ಆವಶ್ಯಕವಾಗಿತ್ತು?

13 ಯೆಹೋವ ದೇವರು ಮಾತ್ರವೇ “ಲೋಕದ ಪಾಪವನ್ನು ನಿವಾರಣೆ ಮಾಡುವ . . . ಕುರಿಮರಿ”ಯನ್ನು ಒದಗಿಸಶಕ್ತನಾಗಿದ್ದನು. (ಯೋಹಾನ 1:29) ಆದರೆ ದೇವರು ತನ್ನ ಮನಸ್ಸಿಗೆ ತೋಚಿದ ಯಾವನೇ ಒಬ್ಬ ದೇವದೂತನನ್ನು ಮಾನವಕುಲದ ರಕ್ಷಣೆಗಾಗಿ ಕಳುಹಿಸಿಕೊಡಲಿಲ್ಲ. ಬದಲಿಗೆ, ಯೆಹೋವನ ಸೇವಕರ ವಿರುದ್ಧವಾಗಿ ಸೈತಾನನ ಆರೋಪಕ್ಕೆ ಕೊನೆಯ ಹಾಗೂ ನಿರ್ಣಾಯಕ ಉತ್ತರವನ್ನು ಕೊಡಶಕ್ತನಾದಾತನನ್ನೇ ಆತನು ಕಳುಹಿಸಿಕೊಟ್ಟನು. ಹೌದು, ‘ಆತನಿಗೆ ಪ್ರಾಣಪ್ರಿಯನಾಗಿದ್ದ’ ಏಕಜಾತ ಪುತ್ರನನ್ನು ಕಳುಹಿಸಿಕೊಟ್ಟದ್ದರಲ್ಲಿ ಯೆಹೋವನು ಸರ್ವಶ್ರೇಷ್ಠ ತ್ಯಾಗವನ್ನು ಮಾಡಿದನು. (ಯೆಶಾಯ 42:1) ದೇವಕುಮಾರನಾದರೋ ಸಿದ್ಧಮನಸ್ಸಿನಿಂದ ತನ್ನ ಸ್ವರ್ಗೀಯ ಸ್ವರೂಪವನ್ನು ಕಳಚಿ ತನ್ನನ್ನು ‘ಬರಿದು ಮಾಡಿಕೊಂಡನು.’ (ಫಿಲಿಪ್ಪಿ 2:7) ಯೆಹೋವನು ತನ್ನ ಸ್ವರ್ಗೀಯ ಜ್ಯೇಷ್ಠಪುತ್ರನ ಜೀವವನ್ನು ಮತ್ತು ವ್ಯಕ್ತಿತ್ವ ನಮೂನೆಯನ್ನು ಯೆಹೂದಿ ಕನ್ನಿಕೆಯಾದ ಮರಿಯಳ ಗರ್ಭಕ್ಕೆ ಅದ್ಭುತಕರವಾಗಿ ಸ್ಥಳಾಂತರಿಸಿದನು. (ಲೂಕ 1:27, 35) ಮನುಷ್ಯನೋಪಾದಿ ಅವನಿಗೆ ಯೇಸು ಎಂಬ ಹೆಸರಿರುವುದು. ಆದರೆ ನ್ಯಾಯಾನುಸಾರವಾಗಿ, ಅವನನ್ನು ಎರಡನೆಯ ಆದಾಮನೆಂದು ಕರೆಯಸಾಧ್ಯವಿತ್ತು ಯಾಕಂದರೆ ಅವನು ಆದಾಮನಿಗೆ ಪರಿಪೂರ್ಣವಾಗಿ ಅನುರೂಪವಾಗಿದ್ದನು. (1 ಕೊರಿಂಥ 15:45, 47) ಯೇಸು ಹೀಗೆ ತನ್ನನ್ನು ಪಾಪಿ ಮಾನವಕುಲಕ್ಕಾಗಿ ಒಂದು ಈಡಿನೋಪಾದಿ ಯಜ್ಞಾರ್ಪಿಸಿಕೊಳ್ಳಲು ಶಕ್ತನಾದನು.

14 ಆ ಈಡು ಯಾರಿಗೆ ಸಲ್ಲಿಸಲ್ಪಡಬೇಕಾಗಿತ್ತು? ಕೀರ್ತನೆ 49:​7, 8 ಸ್ಪಷ್ಟವಾಗಿ ತಿಳಿಸುವ ಪ್ರಕಾರ ಆ ಈಡು “ದೇವರಿಗೆ” ಸಲ್ಲಿಸಲ್ಪಟ್ಟಿತ್ತು. ಆದರೆ ಮೊದಲಾಗಿ ಆ ಈಡನ್ನು ಏರ್ಪಡಿಸಿದವನು ಯೆಹೋವ ದೇವರೇ ಅಲ್ಲವೇ? ಹೌದು, ಆದರೆ ಇದು ಆ ಈಡನ್ನು ಒಂದು ಅರ್ಥರಹಿತವಾದ ಯಾಂತ್ರಿಕ ವಿನಿಮಯವನ್ನಾಗಿ​—ಒಂದು ಕಿಸೆಯಿಂದ ಹಣ ತೆಗೆದು ಇನ್ನೊಂದು ಕಿಸೆಗೆ ಹಾಕುವಂತೆ​—ಮಾಡುವುದಿಲ್ಲ. ಆ ಈಡು ಒಂದು ಭೌತಿಕ ವಿನಿಮಯವಲ್ಲ, ಬದಲಿಗೆ ಒಂದು ಕಾನೂನುರೀತ್ಯ ನಿರ್ವಹಣೆಯಾಗಿದೆಯೆಂದು ತಿಳಿದುಕೊಳ್ಳುವ ಅಗತ್ಯವಿದೆ. ಸ್ವತಃ ಭಾರೀ ಬೆಲೆಯನ್ನು ತೆರಬೇಕಾಗಿ ಬಂದರೂ ಈಡನ್ನು ಸಲ್ಲಿಸಲಿಕ್ಕಾಗಿ ಏರ್ಪಾಡನ್ನು ಮಾಡುವ ಮೂಲಕ ಯೆಹೋವನು ತನ್ನ ಸ್ವಂತ ಪರಿಪೂರ್ಣ ನ್ಯಾಯಕ್ಕೆ ತನ್ನ ಅಚಲವಾದ ಅಂಟಿಕೊಳ್ಳುವಿಕೆಯನ್ನು ದೃಢೀಕರಿಸಿದನು.​—ಆದಿಕಾಂಡ 22:7, 8, 11-13; ಇಬ್ರಿಯ 11:17; ಯಾಕೋಬ 1:17.

15. ಯೇಸು ನರಳಿ ಸಾಯುವುದು ಏಕೆ ಆವಶ್ಯಕವಾಗಿತ್ತು?

15 ಸಾ.ಶ. 33ನೆಯ ವಸಂತಕಾಲದಲ್ಲಿ, ಆ ಈಡನ್ನು ಪಾವತಿಸಲು ನಡಿಸಿದ ವಿಷಮ ಪರೀಕ್ಷೆಗೆ ಯೇಸು ಕ್ರಿಸ್ತನು ಇಷ್ಟಪೂರ್ವಕವಾಗಿ ಒಳಗಾದನು. ಸುಳ್ಳಾರೋಪಗಳ ಮೇಲೆ ಕೈದುಮಾಡಲ್ಪಡಲು, ಅಪರಾಧಿಯೆಂಬ ತೀರ್ಪನ್ನು ಹೊಂದಲು, ಮತ್ತು ಮರಣದ ಕಂಬಕ್ಕೆ ಜಡಿಯಲ್ಪಡಲು ಅವನು ಬಿಟ್ಟುಕೊಟ್ಟನು. ಯೇಸು ಅಷ್ಟೊಂದು ನರಳಾಡುವುದು ನಿಜವಾಗಿಯೂ ಆವಶ್ಯಕವಾಗಿತ್ತೋ? ಹೌದು, ಯಾಕಂದರೆ ದೇವರ ಸೇವಕರ ಸಮಗ್ರತೆಯ ಕುರಿತ ವಾದಾಂಶವು ಇತ್ಯರ್ಥವಾಗಬೇಕಿತ್ತು. ಆದುದರಿಂದ ಕೂಸಾದ ಯೇಸು ಹೆರೋದನಿಂದ ಕೊಲ್ಲಲ್ಪಡುವಂತೆ ದೇವರು ಅನುಮತಿಸದಿದ್ದದ್ದು ಗಮನಾರ್ಹವು. (ಮತ್ತಾಯ 2:13-18) ಆದರೆ ಯೇಸು ವಯಸ್ಕನಾದಾಗ, ವಾದಾಂಶಗಳ ಪೂರ್ಣ ಗ್ರಹಿಕೆಯೊಂದಿಗೆ ಸೈತಾನನ ಆಕ್ರಮಣಗಳ ಬಿರುಸನ್ನು ಎದುರಿಸಿ ನಿಲ್ಲಲು ಅವನು ಶಕ್ತನಾಗಿದ್ದನು. * ಭೀಕರವಾದ ದುರುಪಚಾರದ ಮಧ್ಯೆಯೂ “ಪರಿಶುದ್ಧನೂ ನಿರ್ದೋಷಿಯೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿ” ಉಳಿಯುವ ಮೂಲಕ ಯೇಸು, ಸಂಕಷ್ಟಗಳ ಕೆಳಗೂ ನಂಬಿಗಸ್ತರಾಗಿ ಉಳಿಯುವ ಸೇವಕರು ಯೆಹೋವನಿಗಿದ್ದಾರೆಂದು ಕೊನೆ ತನಕ ಮನಮುಟ್ಟುವಂಥ ರೀತಿಯಲ್ಲಿ ರುಜುಪಡಿಸಿದನು. (ಇಬ್ರಿಯ 7:26) ಆದುದರಿಂದಲೇ ಯೇಸು ತನ್ನ ಕೊನೆಯುಸಿರೆಳೆಯುವ ಸ್ವಲ್ಪ ಮುಂಚೆ ಜಯೋತ್ಸಾಹದಿಂದ ‘ಅದು ನೆರವೇರಿತು’ ಎಂದು ಕೂಗಿ ಹೇಳಿದ ಮಾತನ್ನು ನಾವು ಅರ್ಥಮಾಡಿಕೊಳ್ಳಬಹುದು.​—ಯೋಹಾನ 19:​30, NW.

ಅವನ ವಿಮೋಚನಾ ಕಾರ್ಯವನ್ನು ಮುಗಿಸುವುದು

16, 17. (ಎ) ಯೇಸು ತನ್ನ ವಿಮೋಚನಾ ಕಾರ್ಯವನ್ನು ಮುಂದುವರಿಸಿದ್ದು ಹೇಗೆ? (ಬಿ) “ದೇವರ ಸಮ್ಮುಖದಲ್ಲಿ” ಕಾಣಿಸಿಕೊಳ್ಳುವುದು ಯೇಸುವಿಗೆ ಅವಶ್ಯವಾಗಿತ್ತೇಕೆ?

16 ತನ್ನ ವಿಮೋಚನಾ ಕಾರ್ಯವನ್ನು ಯೇಸುವಿಗೆ ಇನ್ನೂ ಮುಗಿಸಲಿಕ್ಕಿತ್ತು. ಅವನ ಮರಣಾನಂತರ ಮೂರನೆಯ ದಿನದಂದು, ಯೆಹೋವನು ಅವನನ್ನು ಸತ್ತವರೊಳಗಿಂದ ಎಬ್ಬಿಸಿದನು. (ಅ. ಕೃತ್ಯಗಳು 3:15; 10:41) ಈ ಮಹತ್ವಪೂರ್ಣ ಕೃತ್ಯದ ಮೂಲಕ, ಯೆಹೋವನು ತನ್ನ ಪುತ್ರನ ನಂಬಿಗಸ್ತ ಸೇವೆಗಾಗಿ ಪ್ರತಿಫಲವನ್ನಿತ್ತನು ಮಾತ್ರವಲ್ಲ, ದೇವರ ಮಹಾ ಯಾಜಕನೋಪಾದಿ ಅವನ ವಿಮೋಚನಾ ಕಾರ್ಯವನ್ನು ಮುಗಿಸುವ ಸುಸಂದರ್ಭವನ್ನೂ ನೀಡಿದನು. (ರೋಮಾಪುರ 1:4; 1 ಕೊರಿಂಥ 15:3-8) ಅಪೊಸ್ತಲ ಪೌಲನು ವಿವರಿಸುವದು: ‘ಕ್ರಿಸ್ತನು ಮಹಾಯಾಜಕನಾಗಿ ಹೋತಗಳ ಮತ್ತು ಹೋರಿಕರುಗಳ ರಕ್ತವನ್ನು ತೆಗೆದುಕೊಳ್ಳದೆ ಸ್ವಂತ ರಕ್ತವನ್ನೇ ತೆಗೆದುಕೊಂಡು ನಮಗೋಸ್ಕರ ನಿತ್ಯವಿಮೋಚನೆಯನ್ನು ಸಂಪಾದಿಸಿಕೊಂಡವನಾಗಿ ಒಂದೇ ಸಾರಿ ದೇವರ ಸನ್ನಿಧಾನಕ್ಕೆ ಪ್ರವೇಶಿಸಿದನು. ಯಾಕಂದರೆ ಕ್ರಿಸ್ತನು ನಿಜವಾದ ದೇವಾಲಯಕ್ಕೆ ಅನುರೂಪಮಾತ್ರವಾದದ್ದಾಗಿಯೂ ಕೈಯಿಂದ ಕಟ್ಟಿದ್ದಾಗಿಯೂ ಇರುವ ಆಲಯದಲ್ಲಿ ಪ್ರವೇಶಿಸದೆ ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದನು.’​—ಇಬ್ರಿಯ 9:11, 12, 24.

17 ಕ್ರಿಸ್ತನು ತನ್ನ ಸ್ವಂತ ರಕ್ತವನ್ನು ಅಕ್ಷರಶಃ ಪರಲೋಕಕ್ಕೆ ಕೊಂಡೊಯ್ಯಲು ಸಾಧ್ಯವಿರಲಿಲ್ಲ. (1 ಕೊರಿಂಥ 15:50) ಬದಲಿಗೆ, ಆ ರಕ್ತವು ಏನನ್ನು ಸೂಚಿಸಿತ್ತೋ ಅದನ್ನು ಕೊಂಡೊಯ್ದನು: ಅವನ ಪರಿಪೂರ್ಣ ಮಾನವ ಜೀವದ ಕಾನೂನುಬದ್ಧ ಮೌಲ್ಯವೇ ಅದು. ಅನಂತರ ಅವನು ದೇವರ ಸನ್ನಿಧಾನದಲ್ಲಿ, ಪಾಪಿಗಳಾದ ಮಾನವಕುಲವನ್ನು ಬಿಡಿಸಲಿಕ್ಕೋಸ್ಕರ ಆ ಜೀವದ ಮೌಲ್ಯವನ್ನು ಒಂದು ಈಡಿನೋಪಾದಿ ವಿಧಿವತ್ತಾಗಿ ಸಮರ್ಪಿಸಿದನು. ಯೆಹೋವನು ಆ ಯಜ್ಞವನ್ನು ಸ್ವೀಕರಿಸಿದನೋ? ಹೌದು, ಮತ್ತು ಇದು ಸಾ.ಶ. 33ರ ಪಂಚಾಶತ್ತಮ ದಿನದಂದು, ಯೆರೂಸಲೇಮಿನಲ್ಲಿ ಕೂಡಿಬಂದಿದ್ದ ಸುಮಾರು 120 ಮಂದಿ ಶಿಷ್ಯರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟಾಗ ಪ್ರತ್ಯಕ್ಷವಾಗಿ ತೋರಿಬಂತು. (ಅ. ಕೃತ್ಯಗಳು 2:1-4) ಆ ಘಟನೆಯು ಬಹು ರೋಮಾಂಚಕರವಾಗಿತ್ತಾದರೂ, ಈಡಿನ ಆಶ್ಚರ್ಯಕರವಾದ ಪ್ರಯೋಜನಗಳಲ್ಲಿ ಅದು ಕೇವಲ ಮೊದಲಿನದ್ದಾಗಿತ್ತು.

ಈಡಿನ ಪ್ರಯೋಜನಗಳು

18, 19. (ಎ) ಕ್ರಿಸ್ತನ ರಕ್ತದಿಂದ ಶಕ್ಯವಾಗಿ ಮಾಡಲ್ಪಟ್ಟ ಸಂಧಾನಪಡಿಸಿಕೊಳ್ಳುವಿಕೆಯಿಂದ ಜನರ ಯಾವ ಎರಡು ಗುಂಪುಗಳು ಪ್ರಯೋಜನ ಹೊಂದುತ್ತಿವೆ? (ಬಿ) “ಮಹಾ ಸಮೂಹ”ದ ಜನರಿಗೆ ಸದ್ಯದಲ್ಲಿ ಮತ್ತು ಭವಿಷ್ಯದಲ್ಲಿ ಈಡಿನಿಂದ ದೊರೆಯುವ ಕೆಲವು ಪ್ರಯೋಜನಗಳಾವುವು?

18 ಯೇಸು ಯಾತನಾ ಕಂಬದ ಮೇಲೆ ಸುರಿಸಿದ ರಕ್ತದ ಮುಖಾಂತರ ಸಮಾಧಾನಮಾಡಿ, ಸಮಸ್ತವನ್ನೂ ಕ್ರಿಸ್ತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಲು ದೇವರು ನಿಷ್ಕರ್ಷೆಮಾಡಿದನೆಂದು ಪೌಲನು ಕೊಲೊಸ್ಸೆಯವರಿಗೆ ಬರೆದ ಪತ್ರದಲ್ಲಿ ವಿವರಿಸುತ್ತಾನೆ. ಈ ಸಂಧಾನದಲ್ಲಿ ಎರಡು ನಿರ್ದಿಷ್ಟ ಜನರ ಗುಂಪುಗಳು, ಅಂದರೆ, ‘ಭೂಪರಲೋಕಗಳಲ್ಲಿ ಇರುವ ಸಮಸ್ತವು’ ಸೇರಿರುತ್ತವೆಯೆಂದೂ ಪೌಲನು ತಿಳಿಸುತ್ತಾನೆ. (ಕೊಲೊಸ್ಸೆ 1:19, 20; ಎಫೆಸ 1:9) ‘ಪರಲೋಕಗಳಲ್ಲಿ ಇರುವ ಸಮಸ್ತವು’ 1,44,000 ಕ್ರೈಸ್ತರಾಗಿದ್ದು, ಅವರಿಗೆ ಕ್ರಿಸ್ತನೊಂದಿಗೆ ಸ್ವರ್ಗೀಯ ಯಾಜಕರೋಪಾದಿ ಸೇವೆಸಲ್ಲಿಸಿ, ರಾಜರಾಗಿ ಆಳುವ ನಿರೀಕ್ಷೆಯು ಕೊಡಲ್ಪಟ್ಟಿರುತ್ತದೆ. (ಪ್ರಕಟನೆ 5:9, 10; 7:4; 14:1-3) ಅವರ ಮೂಲಕವಾಗಿ ಈಡಿನ ಪ್ರಯೋಜನಗಳು ವಿಧೇಯ ಮಾನವಕುಲಕ್ಕೆ ಸಹಸ್ರವರ್ಷದ ಕಾಲಾವಧಿಯಲ್ಲಿ ಕ್ರಮೇಣ ಅನ್ವಯಿಸಲ್ಪಡುವವು.​—1 ಕೊರಿಂಥ 15:24-26; ಪ್ರಕಟನೆ 20:6; 21:3, 4.

19 ‘ಭೂಲೋಕದಲ್ಲಿ ಇರುವ ಸಮಸ್ತವು,’ ಭೂಪರದೈಸಿನಲ್ಲಿ ಪರಿಪೂರ್ಣ ಜೀವನವನ್ನು ಆನಂದಿಸುವ ಪ್ರತೀಕ್ಷೆಯಿರುವ ವ್ಯಕ್ತಿಗಳಿಗೆ ಸೂಚಿಸುತ್ತದೆ. ಪ್ರಕಟನೆ 7:​9-17 ಅವರನ್ನು ಮುಂಬರುತ್ತಿರುವ “ಮಹಾಸಂಕಟ”ವನ್ನು (NW) ಪಾರಾಗುವ “ಮಹಾ ಸಮೂಹ”ವಾಗಿ ವರ್ಣಿಸುತ್ತದೆ. ಆದರೆ ಈಡಿನ ಪ್ರಯೋಜನಗಳನ್ನು ಅನುಭವಿಸಲಿಕ್ಕಾಗಿ ಅಷ್ಟರ ತನಕ ಅವರು ಕಾಯಬೇಕೆಂದಿಲ್ಲ. ಅವರು ಈವಾಗಲೇ “ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರ”ಮಾಡಿದ್ದಾರೆ. ಅವರು ಈಡು ಯಜ್ಞದಲ್ಲಿ ನಂಬಿಕೆಯನ್ನಿಟ್ಟಿರುವುದರಿಂದಾಗಿ, ಆ ಪ್ರೀತಿಪರ ಏರ್ಪಾಡಿನಿಂದ ಈಗಲೂ ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ದೇವರ ಸ್ನೇಹಿತರೋಪಾದಿ ನೀತಿವಂತರೆಂಬ ನಿರ್ಣಯವನ್ನು ಅವರು ಪಡೆದಿದ್ದಾರೆ! (ಯಾಕೋಬ 2:23) ಯೇಸುವಿನ ಯಜ್ಞಾರ್ಪಣೆಯ ಫಲಿತಾಂಶವಾಗಿ ಅವರೀಗ ‘ಆತನ ದಯೆಯಿಂದ ಧೈರ್ಯದಿಂದ ಕೃಪಾಸನದ ಮುಂದೆ ಬರಲು’ ಶಕ್ತರಾಗಿದ್ದಾರೆ. (ಇಬ್ರಿಯ 4:14-16) ಅವರು ತಪ್ಪುಮಾಡುವಾಗ, ನಿಜವಾದ ಕ್ಷಮೆಯು ಅವರಿಗೆ ದೊರಕುತ್ತದೆ. (ಎಫೆಸ 1:7) ಅಪರಿಪೂರ್ಣತೆಯಿದ್ದಾಗ್ಯೂ ಅವರು ಶುದ್ಧ ಮನಸ್ಸಾಕ್ಷಿಯಲ್ಲಿ ಆನಂದಿಸುತ್ತಾರೆ. (ಇಬ್ರಿಯ 9:9; 10:22; 1 ಪೇತ್ರ 3:21) ಹೀಗೆ ದೇವರೊಂದಿಗಿನ ಸಂಧಾನಪಡಿಸುವಿಕೆಯು ಮುಂದಕ್ಕೆ ಕ್ರಮೇಣ ವಿಕಸಿಸುವ ವಿಷಯವಾಗಿರದೆ, ಈಗಲೇ ಒಂದು ವಾಸ್ತವಿಕತೆಯಾಗಿದೆ! (2 ಕೊರಿಂಥ 5:19, 20) ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ ಅವರು ಕ್ರಮೇಣ “ನಾಶದ ವಶದಿಂದ ಬಿಡುಗಡೆಯಾಗಿ” ಕಟ್ಟಕಡೆಗೆ “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲು”ಹೊಂದುವರು.​—ರೋಮಾಪುರ 8:21.

20. ಈಡಿನ ಕುರಿತು ಧ್ಯಾನ ಮಾಡುವುದು ನಿಮ್ಮನ್ನು ವ್ಯಕ್ತಿಶಃ ಹೇಗೆ ಪ್ರಭಾವಿಸುತ್ತದೆ?

20 ಈಡಿನ ಏರ್ಪಾಡಿಗಾಗಿ “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ”! (ರೋಮಾಪುರ 7:25) ಅದು ತತ್ತ್ವದಲ್ಲಿ ಸರಳವಾಗಿದ್ದರೂ, ನಮ್ಮನ್ನು ಭಯವಿಸ್ಮಯದಿಂದ ತುಂಬಿಸುವಷ್ಟು ಅಗಾಧವಾಗಿದೆ. (ರೋಮಾಪುರ 11:33) ಅದರ ಬಗ್ಗೆ ನಾವು ಕೃತಜ್ಞತಾಪೂರ್ವಕವಾಗಿ ಧ್ಯಾನ ಮಾಡುವುದರಿಂದ, ಅದು ನಮ್ಮ ಹೃದಯವನ್ನು ಸ್ಪರ್ಶಿಸಿ, ನ್ಯಾಯದ ದೇವರ ಕಡೆಗೆ ನಮ್ಮನ್ನು ಇನ್ನಷ್ಟು ಸಮೀಪಕ್ಕೆ ಸೆಳೆಯಬಲ್ಲದು. ಹೀಗೆ ಕೀರ್ತನೆಗಾರನಂತೆ, ‘ನೀತಿನ್ಯಾಯಗಳನ್ನು ಪ್ರೀತಿಸುವವನಾದ’ ಯೆಹೋವನನ್ನು ಸ್ತುತಿಸುತ್ತಾ ಇರಲು ನಮಗೆ ಪ್ರತಿಯೊಂದು ಕಾರಣವಿದೆ.​—ಕೀರ್ತನೆ 33:5.

^ ಪ್ಯಾರ. 8 ವಿಮೋಚನಕಾಂಡ 25:​17-22 ರಲ್ಲಿರುವ “ಕೃಪಾಸನ” (ಅಂದರೆ, ಮಂಜೂಷದ ಮುಚ್ಚಳ) ಎಂಬ ಪದವು, ಕೋಫರ್‌ ಎಂಬ ಪದಕ್ಕೆ ಸಂಬಂಧಿತವಾದ ಒಂದು ಪದದಿಂದ ಭಾಷಾಂತರಿಸಲ್ಪಟ್ಟಿದೆ.

^ ಪ್ಯಾರ. 11 ಆದಾಮಹವ್ವರು ಆ ಈಡಿನಿಂದ ಪ್ರಯೋಜನ ಹೊಂದಲು ಸಾಧ್ಯವಿದ್ದಿರಲಿಲ್ಲ. ಬೇಕುಬೇಕೆಂದೇ ಕೊಲೆಗೈದವನ ಸಂಬಂಧದಲ್ಲಿ ಮೋಶೆಯ ಧರ್ಮಶಾಸ್ತ್ರವು ಈ ಮೂಲತತ್ತ್ವವನ್ನು ತಿಳಿಸಿತ್ತು: “ಮರಣಶಿಕ್ಷೆಗೆ ಪಾತ್ರನಾದ ಕೊಲೆಪಾತಕನನ್ನು ಉಳಿಸುವದಕ್ಕೆ ಈಡನ್ನು ತೆಗೆದುಕೊಳ್ಳಕೂಡದು.” (ಅರಣ್ಯಕಾಂಡ 35:31) ಆದಾಮಹವ್ವರು ಬುದ್ಧಿಪೂರ್ವಕವಾಗಿ ಮತ್ತು ತಿಳಿದೂ ತಿಳಿದು ದೇವರಿಗೆ ಅವಿಧೇಯರಾದ ಕಾರಣ ಸಾಯಲು ಅರ್ಹರಾಗಿದ್ದರೆಂಬುದು ಸ್ಪಷ್ಟ. ಹೀಗೆ ಅವರು ತಮ್ಮ ನಿತ್ಯಜೀವದ ಪ್ರತೀಕ್ಷೆಯನ್ನು ಕೈಬಿಟ್ಟರು.

^ ಪ್ಯಾರ. 15 ಆದಾಮನ ಪಾಪವನ್ನು ಸರಿದೂಗಿಸಲು ಯೇಸು ಸಾಯಬೇಕಾದದ್ದು, ಪರಿಪೂರ್ಣ ಕೂಸಾಗಿ ಅಲ್ಲ, ಬದಲಾಗಿ ಒಬ್ಬ ಪರಿಪೂರ್ಣ ಪುರುಷನಾಗಿ. ಆದಾಮನ ಪಾಪವು ಬುದ್ಧಿಪೂರ್ವಕವಾಗಿತ್ತು, ಅಂದರೆ ಕ್ರಿಯೆಯ ಗಂಭೀರತೆ ಮತ್ತು ಫಲಿತಾಂಶಗಳನ್ನು ಪೂರ್ಣ ತಿಳಿದೇ ಮಾಡಿದ್ದಾಗಿತ್ತೆಂಬುದನ್ನು ನೆನಪಿನಲ್ಲಿಡಿರಿ. ಆದುದರಿಂದ “ಕಡೇ ಆದಾಮ”ನಾಗಿ ಆ ಪಾಪವನ್ನು ಮುಚ್ಚಲು, ಯೆಹೋವನಿಗೆ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಪ್ರೌಢ ಹಾಗೂ ತಿಳಿವಳಿಕೆಭರಿತ ಆಯ್ಕೆಯನ್ನು ಯೇಸು ಮಾಡಬೇಕಾಗಿತ್ತು. (1 ಕೊರಿಂಥ 15:45, 47) ಹೀಗೆ ಯೇಸುವಿನ ಇಡೀ ನಂಬಿಗಸ್ತ ಜೀವನಕ್ರಮವು ಅವನ ಯಜ್ಞಾರ್ಪಿತ ಮರಣದ ಸಮೇತ “ಒಂದೇ ಸತ್ಕಾರ್ಯ”ವಾಗಿ ಕಾರ್ಯನಡಿಸಿತು.​—ರೋಮಾಪುರ 5:18, 19.