ಮಾಹಿತಿ ಇರುವಲ್ಲಿ ಹೋಗಲು

ದೇವರನ್ನ ಯಾರಾದ್ರೂ ನೋಡಿದ್ದಾರಾ?

ದೇವರನ್ನ ಯಾರಾದ್ರೂ ನೋಡಿದ್ದಾರಾ?

ಬೈಬಲ್‌ ಕೊಡೋ ಉತ್ತರ

 ಯಾವ ಮನುಷ್ಯನೂ ದೇವರನ್ನ ಕಣ್ಣಾರೆ ನೋಡಿಲ್ಲ. (ವಿಮೋಚನಕಾಂಡ 33:20; ಯೋಹಾನ 1:18; 1 ಯೋಹಾನ 4:12) ಬೈಬಲ್‌ “ದೇವರು ಆತ್ಮಜೀವಿಯಾಗಿದ್ದಾನೆ” ಅಂತ ಹೇಳುತ್ತೆ. ಹಾಗಾಗಿ ಮನುಷ್ಯರ ಕಣ್ಣಿಗೆ ದೇವರು ಕಾಣಿಸಲ್ಲ.—ಯೋಹಾನ 4:24; 1 ತಿಮೊತಿ 1:17.

 ದೇವದೂತರಿಗೆ ಮಾತ್ರ ದೇವರನ್ನ ನೋಡೋಕೆ ಆಗುತ್ತೆ. ಯಾಕಂದ್ರೆ ಅವರೂ ಆತ್ಮಜೀವಿಗಳಾಗಿದ್ದಾರೆ. (ಮತ್ತಾಯ 18:10) ಭೂಮಿಯಲ್ಲಿರೋ ಕೆಲವು ಮನುಷ್ಯರು ಸತ್ತ ಮೇಲೆ ಆತ್ಮಜೀವಿಗಳಾಗಿ ಸ್ವರ್ಗಕ್ಕೆ ಹೋಗ್ತಾರೆ. ಆಗ ಅವರಿಗೂ ದೇವರನ್ನ ನೋಡಬಹುದು.—ಫಿಲಿಪ್ಪಿ 3:20, 21; 1 ಯೋಹಾನ 3:2.

ಈಗ ದೇವರನ್ನ “ನೋಡೋಕೆ” ಆಗುತ್ತಾ?

 ಕೆಲವೊಮ್ಮೆ ನೋಡೋದು ಅನ್ನೋ ಪದವನ್ನ ಬೈಬಲಿನಲ್ಲಿ ಸಾಂಕೇತಿಕವಾಗಿ ಜ್ಞಾನ ಪಡೆದುಕೊಳ್ಳೋಕೆ ಸೂಚಿಸುತ್ತೆ. (ಯೆಶಾಯ 6:10; ಯೆರೆಮೀಯ 5:21; ಯೋಹಾನ 9:39-41) ಒಬ್ಬ ವ್ಯಕ್ತಿ ದೇವರ ಬಗ್ಗೆ, ಆತನ ಗುಣಗಳ ಬಗ್ಗೆ ಕಲಿತು ಯಾವಾಗ ಆತನ ಮೇಲೆ ಭರವಸೆ ಇಡ್ತಾನೋ ಆಗ ಅವನು ದೇವರನ್ನ ‘ಹೃದಯದ ಕಣ್ಣುಗಳಿಂದ’ ನೋಡ್ತಾನೆ. (ಎಫೆಸ 1:18) ಈ ತರ ನಂಬಿಕೆಯನ್ನ ಬೆಳೆಸೋಕೆ ಬೈಬಲ್‌ ಹೇಗೆ ಸಹಾಯ ಮಾಡುತ್ತೆ?

  •   ದೇವರ ಗುಣಗಳಾಗಿರೋ ಪ್ರೀತಿ, ಉದಾರತೆ, ವಿವೇಕ ಮತ್ತು ಶಕ್ತಿಯನ್ನ ಸೃಷ್ಟಿ ನೋಡಿ ಕಲಿಯಿರಿ. (ರೋಮನ್ನರಿಗೆ 1:20) ಯೋಬ ದೇವರ ಸೃಷ್ಟಿಕಾರ್ಯಗಳನ್ನ ನೋಡಿ ದೇವರನ್ನ ಕಣ್ಣಾರೆ ನೋಡಿದೆ ಅಂತ ಹೇಳಿದ.—ಯೋಬ 42:5.

  •   ಬೈಬಲ್‌ ಕಲಿಯೋ ಮೂಲಕ ದೇವರ ಬಗ್ಗೆ ತಿಳುಕೊಳ್ಳಿ. “ನೀನು ಆತನನ್ನ ಹುಡುಕಿದ್ರೆ ನಿನಗೆ ಸಿಕ್ತಾನೆ” ಅಂತ ಬೈಬಲ್‌ ಹೇಳುತ್ತೆ.—1 ಪೂರ್ವಕಾಲವೃತ್ತಾಂತ 28:9; ಕೀರ್ತನೆ 119:2; ಯೋಹಾನ 17:3.

  •   ಯೇಸುವಿನ ಜೀವನ ರೀತಿಯ ಮೂಲಕ ದೇವರ ಬಗ್ಗೆ ಕಲಿಯಿರಿ. ಯೇಸು ಭೂಮಿ ಮೇಲಿದ್ದಾಗ ತನ್ನ ತಂದೆಯಾದ ಯೆಹೋವನ ಗುಣಗಳನ್ನ ತೋರಿಸಿದನು. ಅದಕ್ಕೇ ಆತನು ಹೀಗೆ ಹೇಳಿದನು: “ನನ್ನನ್ನ ನೋಡಿದವನು ನನ್ನ ಅಪ್ಪನನ್ನೂ ನೋಡಿದ್ದಾನೆ.”—ಯೋಹಾನ 14:9.

  •   ನೀವು ದೇವರಿಗೆ ಇಷ್ಟ ಆಗೋ ತರ ನಡ್ಕೊಳ್ಳಿ. ಆಗ ದೇವರು ನಿಮಗೆ ಏನು ಬೇಕೋ ಅದನ್ನ ಮಾಡ್ತಾನೆ. “ಪ್ರಾಮಾಣಿಕ ಹೃದಯದ ಜನ್ರು ಆತನ ಮುಖವನ್ನ ನೋಡ್ತಾರೆ” ಅಂತ ಯೇಸು ಹೇಳಿದನು. ನಾವೀಗಾಗ್ಲೇ ನೋಡಿದ ತರ ದೇವರಿಗೆ ಇಷ್ಟಪಡೋ ತರ ಜೀವಿಸೋ ಕೆಲವರು ಸ್ವರ್ಗಕ್ಕೆ ಹೋಗ್ತಾರೆ. ಆಗ ಅವರು “ದೇವರನ್ನ ನೋಡ್ತಾರೆ.”—ಮತ್ತಾಯ 5:8; ಕೀರ್ತನೆ 11:7

ಮೋಶೆ, ಅಬ್ರಹಾಮ ಮತ್ತು ಇನ್ನು ಕೆಲವರು ದೇವರನ್ನ ಕಣ್ಣಾರೆ ನೋಡಿದ್ರಾ?

 ಬೈಬಲಿನಲ್ಲಿರೋ ಕೆಲವು ಘಟನೆಗಳನ್ನ ಓದುವಾಗ ಕೆಲವು ಸೇವಕರು ದೇವರನ್ನ ಕಣ್ಣಾರೆ ನೋಡಿದ್ರು ಅಂತ ನಮಗನಿಸಬಹುದು. ಆದರೆ ಅದು ನಿಜ ಅಲ್ಲ. ದೇವರು ಅವರಿಗೆ ಒಬ್ಬ ದೇವದೂತನ ಮೂಲಕ ಅಥವಾ ದರ್ಶನದ ಮೂಲಕ ಕಾಣಿಸಿಕೊಂಡಿರ್ತಾನೆ.

 ದೇವದೂತರು.

ಹಿಂದಿನ ಕಾಲದಲ್ಲಿ ದೇವರು ಮನುಷ್ಯರ ಹತ್ತಿರ ತನ್ನ ಪರವಾಗಿ ಮಾತಾಡೋಕೆ ದೇವದೂತರನ್ನ ಕಳಿಸ್ತಿದ್ದನು. (ಕೀರ್ತನೆ 103:20) ಉದಾಹರಣೆಗೆ ಒಂದು ಸಲ ಉರಿತಿದ್ದ ಪೊದೆ ಒಳಗಿಂದ ದೇವರು ಮೋಶೆ ಹತ್ತಿರ ಮಾತಾಡಿದನು. “ಆಗ ಮೋಶೆ ಸತ್ಯ ದೇವರನ್ನ ನೋಡೋಕೆ ಭಯಪಟ್ಟು ಮುಖ ಮುಚ್ಕೊಂಡ” ಅಂತ ಬೈಬಲ್‌ ಹೇಳುತ್ತೆ. (ವಿಮೋಚನಕಾಂಡ 3:4, 6) ಮೋಶೆಗೆ ನಿಜವಾಗಲೂ ದೇವರು ಕಾಣಿಸಿಕೊಂಡಿಲ್ಲ ಬದಲಿಗೆ ಅವನಿಗೆ ಕಾಣಿಸಿದ್ದು “ಯೆಹೋವನ ದೂತ.”—ವಿಮೋಚನಕಾಂಡ 3:2.

 “ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಜೊತೆ ಮಾತಾಡೋ ಹಾಗೇ ಯೆಹೋವ ಮೋಶೆ ಜೊತೆ ಮಾತಾಡ್ತಿದ್ದನು” ಅಂತ ಬೈಬಲ್‌ ಹೇಳುತ್ತೆ. (ವಿಮೋಚನಕಾಂಡ 4:10, 11; 33:11) ಇದರ ಅರ್ಥ ಒಬ್ಬ ಸ್ನೇಹಿತನ ಜೊತೆ ಮಾತಾಡೋ ಹಾಗೆ ಯೆಹೋವ ಅವನ ಜೊತೆ ಮಾತಾಡಿದನು. ಮೋಶೆ ನಿಜವಾಗಲೂ ಯೆಹೋವನ ಮುಖನೋಡಿ ಮಾತಾಡಲಿಲ್ಲ. ಆದರೆ “ದೇವದೂತರ ಮೂಲಕ” ಅವನಿಗೆ ಸಂದೇಶ ಸಿಕ್ತು ಅಂತ ಗೊತ್ತಾಗುತ್ತೆ. (ಗಲಾತ್ಯ 3:19; ಅಪೊಸ್ತಲರ ಕಾರ್ಯ 7:53) ಮೋಶೆಗೆ ತುಂಬ ನಂಬಿಕೆ ಇದ್ದದ್ದರಿಂದ ಅವನು ‘ಕಣ್ಣಿಗೆ ಕಾಣದ ದೇವರನ್ನ ನೋಡಿದ’ ಅಂತ ಬೈಬಲ್‌ ಹೇಳುತ್ತೆ.—ಇಬ್ರಿಯ 11:27.

 ಯೆಹೋವ ಮೋಶೆ ಜೊತೆ ಮಾತಾಡಿದ ತರ ಅಬ್ರಹಾಮನ ಜೊತೆ ದೇವದೂತರ ಮೂಲಕ ಮಾತಾಡಿದನು. ಆದರೆ ಬೈಬಲ್‌ ಓದುವಾಗ ಅಬ್ರಹಾಮ ಯೆಹೋವನನ್ನ ಕಣ್ಣಾರೆ ನೋಡಿದ ಅಂತ ನಮಗೆ ಅನಿಸಬಹುದು. (ಆದಿಕಾಂಡ 18:1, 33) ಆದರೆ ಈ ಘಟನೆಯಲ್ಲಿ “ಮೂರು ಗಂಡಸರು” ಬಂದರು ಅಂತ ಇದೆ. ಈ ಮೂರು ಗಂಡಸರೇ ಯೆಹೋವ ಕಳಿಸಿದ ದೇವದೂತರು. ಇವರು ಯೆಹೋವನನ್ನ ಪ್ರತಿನಿಧಿಸೋ ದೇವದೂತರು ಅಂತ ಗೊತ್ತಿದ್ದರೂ ಅವನು ಯೆಹೋವ ದೇವರ ಜೊತೆ ಮಾತಾಡೋ ತರನೇ ಇವರ ಜೊತೆ ಮಾತಾಡಿದ.—ಆದಿಕಾಂಡ 18:2, 3, 22, 32; 19:1.

 ದರ್ಶನಗಳು.

ದೇವರು ಮನುಷ್ಯರಿಗೆ ದರ್ಶನಗಳ ಮೂಲಕ ಅಥವಾ ದೃಶ್ಯಗಳ ಮೂಲಕ ಕಾಣಿಸಿಕೊಂಡಿದ್ದಾನೆ. ಉದಾಹರಣೆಗೆ ಮೋಶೆ ಮತ್ತು ಕೆಲವು ಇಸ್ರಾಯೇಲ್ಯರು “ಇಸ್ರಾಯೇಲಿನ ದೇವರನ್ನ ನೋಡಿದ್ರು” ಅಂತ ಬೈಬಲಲ್ಲಿ ಇದೆ. ಅದರ ಅರ್ಥ ಅವರು ನಿಜವಾಗ್ಲೂ “ದರ್ಶನದಲ್ಲಿ ಸತ್ಯ ದೇವರನ್ನ ನೋಡಿದ್ರು.” (ವಿಮೋಚನಕಾಂಡ 24:9-11) ಅದೇ ತರ ಬೈಬಲಲ್ಲಿ ಕೆಲಮೊಮ್ಮೆ ಪ್ರವಾದಿಗಳು ‘ಯೆಹೋವನನ್ನ ನೋಡಿದ್ರು’ ಅಂತಿದೆ. (ಯೆಶಾಯ 6:1; ದಾನಿಯೇಲ 7:9; ಆಮೋಸ 9:1) ಇದರಿಂದ ಏನು ಗೊತ್ತಾಗುತ್ತೆ? ಪ್ರತಿಯೊಂದು ಸಂದರ್ಭದಲ್ಲೂ ಇವರು ದೇವರನ್ನ ನೇರವಾಗಿ ನೋಡಿಲ್ಲ. ಬದಲಿಗೆ ದರ್ಶನದಲ್ಲಿ ನೋಡಿದ್ರು ಅಂತ ಗೊತ್ತಾಗುತ್ತೆ.—ಯೆಶಾಯ 1:1; ದಾನಿಯೇಲ 7:2; ಆಮೋಸ 1:1.