ಮಾಹಿತಿ ಇರುವಲ್ಲಿ ಹೋಗಲು

ಯುವ ಜನರ ಪ್ರಶ್ನೆಗಳು

ನಾಚಿಕೆ ಸ್ವಭಾವನ ಜಯಿಸೋದು ಹೇಗೆ?

ನಾಚಿಕೆ ಸ್ವಭಾವನ ಜಯಿಸೋದು ಹೇಗೆ?

 ಕೆಟ್ಟ ಸುದ್ದಿ: ನಾಚಿಕೆ ಸ್ವಭಾವ ಇದ್ರೆ ನಾವು ಎಲ್ರನ್ನ ಫ್ರೆಂಡ್ಸ್‌ ಮಾಡ್ಕೊಳಕ್ಕೆ ಆಗಲ್ಲ, ಮತ್ತೆ ತುಂಬ ವಿಷ್ಯಗಳಿಂದ ದೂರನೇ ಇರ್ತೀವಿ.

 ಒಳ್ಳೇ ಸುದ್ದಿ: ನಾಚಿಕೆ ಪಟ್ಕೊಳೋದು ಯಾವಾಗ್ಲೂ ಕೆಟ್ಟದಲ್ಲ. ನಾಚಿಕೆ ಇದ್ರೆ ಮಾತಾಡೋಕು ಮುಂಚೆ ಸರಿಯಾಗಿ ಯೋಚ್ನೆ ಮಾಡಿ ಮಾತಾಡೋಕೆ ಆಗುತ್ತೆ. ಚೆನ್ನಾಗಿ ಗಮನಿಸೋಕೆ ಮತ್ತು ಬೇರೆಯವ್ರು ಮಾತಾಡೋವಾಗ ಕೇಳಿಸಿಕೊಳ್ಳಕಾಗುತ್ತೆ.

 ಸಂತೋಷದ ಸುದ್ದಿ: ನಿಮಗೆ ಈಗ ನಾಚಿಕೆ ಸ್ವಭಾವ ಇದ್ರೆ, ಅದು ಯಾವಾಗ್ಲೂ ಇರುತ್ತೆ ಅಂತೇನಿಲ್ಲ. ಅಲ್ಲದೇ ನಿಮ್ಮಲ್ಲಿರೋ ನಾಚಿಕೆ ಸ್ವಭಾವನ ಹೊಡೆದು ಓಡಿಸಬಹುದು. ಅದು ಹೇಗೆ ಅನ್ನೋದು ಈ ಲೇಖನದಲ್ಲಿ ಇದೆ.

 ನೀವು ಯಾಕೆ ಭಯ ಪಡ್ತೀರ ಅಂತ ಅರ್ಥಮಾಡ್ಕೊಳ್ಳಿ

 ನಾಚಿಕೆ ಸ್ವಭಾವ ಇದ್ರೆ ಒಬ್ರನ್ನ ಅವರ ಮುಖ ನೋಡಿ ಮಾತಾಡೋಕೆ ಆಗಲ್ಲ. ಇದ್ರಿಂದ ಯಾರ ಜೊತೆನೂ ಸೇರಕ್ಕಾಗಲ್ಲ, ಒಂಟಿತನ ಕಾಡುತ್ತೆ. ನಾವೊಬ್ರೆ ಕತ್ತಲೆ ಕೋಣೆಲಿ ಇದ್ರೆ ಎಷ್ಟು ಭಯ ಆಗುತ್ತೋ ಅಷ್ಟು ಭಯ ಆಗುತ್ತೆ. ಆದ್ರೆ ಲೈಟ್‌ ಆನ್‌ ಮಾಡಿದ್ರೆ ಭಯ ಎಲ್ಲ ಮಂಗಮಾಯ ಆಗುತ್ತೆ. ಅದೇ ತರ ನೀವು ಯಾವುದಕ್ಕೆ ಭಯ ಪಡ್ತೀರ ಅಂತ ಅರ್ಥ ಮಾಡ್ಕೊಂಡ್ರೆ ನಾಚಿಕೆನಾ ಜಯಿಸಬಹುದು. ಸಾಮಾನ್ಯವಾಗಿ ನಾವು ಯಾವುದಕ್ಕೆ ಭಯಪಡ್ತೀವಿ? ಮುಂದಿನ ಮೂರು ಕಾರಣಗಳನ್ನು ಗಮನಿಸಿ.

  •   ಭಯ #1: “ಏನು ಮಾತಾಡ್ಬೇಕು ಅಂತ ನನ್ಗೆ ಗೊತ್ತಿಲ್ಲ.”

     ನಿಜ: ಜನ ಸಾಮಾನ್ಯವಾಗಿ ನೀವು ಅವ್ರತ್ರ ಏನು ಮಾತಾಡಿದ್ರಿ ಅನ್ನೋದಕ್ಕಿಂತ ಹೇಗೆ ನಡ್ಕೊಂಡ್ರಿ ಅನ್ನೋದನ್ನ ಜ್ಞಾಪ್ಕದಲ್ಲಿ ಇಟ್ಕೊತಾರೆ. ಅದಕ್ಕೆ, ಬೇರೆಯವ್ರು ಮಾತಾಡ್ವಾಗ ಗಮನಕೊಟ್ಟು ಕೇಳಿಸಿಕೊಳ್ಳಿ. ಆಗ ಮಾತಿಗ್‌ ಮುಂಚೆ ನಾಚಿಕೆ ಪಟ್ಕೊಳ್ಳೋದು ಕಮ್ಮಿ ಆಗುತ್ತೆ.

     ಸ್ವಲ್ಪ ಯೋಚಿಸಿ: ನೀವು ಯಾವ ತರದ ಫ್ರೆಂಡ್‌ನ ಇಷ್ಟಪಡ್ತೀರ? ಮಾತಾಡ್ವಾಗ ಚೆನ್ನಾಗಿ ಕೇಳಿಸ್ಕೊಳವ್ರನ್ನಾ ಅಥ್ವಾ ವಟವಟ ಅಂತ ಮಾತಾಡೋರನ್ನಾ?

  •   ಭಯ #2: “ನಾನು ಬೋರಿಂಗ್‌ ಅಂತ ಅನ್ಕೊತಾರೆ.”

     ನಿಜ: ನೀವು ನಾಚಿಕೆ ಪಡಲಿ, ಪಡದೆ ಇರಲಿ ಜನಕ್ಕೆ ನಿಮ್ಮ ಮೇಲೆ ಒಂದು ಅಭಿಪ್ರಾಯ ಇದ್ದೇ ಇರುತ್ತೆ. ನೀವು ನಾಚಿಕೆ ಮತ್ತೆ ಭಯನ ದೂರ ಇಟ್ಟು ಬೇರೆಯವ್ರ ಜೊತೆ ಬೆರೆತ್ರೆನೇ, ಬೇರೆಯವರಿಗೆ ನಿಮ್ಮ ಬಗ್ಗೆ ಒಳ್ಳೇ ಅಭಿಪ್ರಾಯ ಬರೋದು. ಜನರ ಜೊತೆ ಸೇರಿದ್ರೆನೇ ನೀವು ನಿಜವಾಗ್ಲೂ ಎಂಥವ್ರು ಅಂತ ಗೊತ್ತಾಗೋದು.

     ಸ್ವಲ್ಪ ಯೋಚಿಸಿ: ಎಲ್ರೂ ನಿಮ್ಮ ಬಗ್ಗೆ ತಪ್ಪಾಗಿ ಹೇಳ್ತಿದ್ದಾರೆ ಅಂತ ನಿಮಗೆ ಅನಿಸಿದ್ರೆ ನೀವೇ ಅವ್ರನ್ನ ಸರಿಯಾಗಿ ಅರ್ಥ ಮಾಡ್ಕೊಳ್ಳದೇ ಇರಬಹುದು ಅಲ್ವಾ?

  •   ಭಯ #3: “ನಾನೇನಾದ್ರೂ ತಪ್ಪಾಗಿ ಹೇಳಿಬಿಟ್ರೆ.”

     ನಿಜ: ಎಲ್ರಿಗೂ ಒಂದಲ್ಲಾ ಒಂದ್ಸಲ ಇಂಗಾಗಿದೆ. ತಪ್ಪುಗಳಾಗೋದು ಸಹಜ, ಅದಿಕ್ಕಂತ ಭಯದಿಂದ ನಾಚಿಕೆ ಪಟ್ಕೊಂಡು ಏನೂ ಮಾತಾಡದೇ ಸುಮ್ನೆ ಇರಬೇಡಿ. ಯಾಕಂದ್ರೆ ನಾವೆಲ್ಲರೂ ತಪ್ಪು ಮಾಡೇ ಮಾಡ್ತೀವಿ.

     ಸ್ವಲ್ಪ ಯೋಚಿಸಿ: ಎಲ್ರೂ ತಪ್ಪು ಮಾಡ್ತೀವಿ ಅಂತ ಒಪ್ಕೊಳ್ಳೋ ಜನ್ರ ಜೊತೆ ಇರೋಕೆ ನೀವು ಇಷ್ಟಪಡ್ತೀರೋ ಇಲ್ಲಾ ತಪ್ಪೇ ಮಾಡಬಾರದು ಅನ್ನೋ ಜನರ ಜೊತೆ ಇರೋಕೆ ಇಷ್ಟಪಡ್ತೀರೋ?

 ನಿಮಗೆ ಗೊತ್ತಾ? ಯಾರು ತುಂಬ ಮೆಸೇಜ್‌ ಮಾಡ್ತಾರೋ ಅವ್ರಿಗೆ ನಾಚಿಕೆ ಸ್ವಭಾವ ಇರಲ್ಲ ಅಂತ ಕೆಲವ್ರು ಅನ್ಕೊತಾರೆ. ನಿಜ ಏನಂದ್ರೆ ಒಬ್ರ ಜೊತೆ ನೇರವಾಗಿ ಮಾತಾಡಿದ್ರೆನೇ ಒಳ್ಳೇ ಸ್ನೇಹ ಬೆಳೆಸಕ್ಕಾಗೋದು. ಮನಶಾಸ್ತ್ರಜ್ಞೆ ಮತ್ತು ತಂತ್ರಜ್ಞಾನಿಯಾದ ಶೆರೀ ಟರ್ಕಲ್‌ ಹೇಳೋದು: “ಒಬ್ರ ಮುಖ ನೋಡಿ ಮಾತಾಡಿದಾಗ, ಅವ್ರು ಮಾತಾಡೋದನ್ನ ಕೇಳಿಸಿಕೊಂಡಾಗ ಮಾತ್ರ ಅವ್ರ ಜೊತೆ ಬೆರೆಯೋಕೆ ಸಾಧ್ಯ.” a

ಭಯನಾ ನೀವು ಕಂಟ್ರೋಲ್‌ ಮಾಡಿದ್ರೆ ಒಂದು ಕಾಲದಲ್ಲಿ ಯಾವುದು ಕಬ್ಬಿಣದ ಕಡಲೆಯಾಗಿತ್ತೋ ಅಂದ್ರೆ ಬೇರೆವ್ರ ಜೊತೆ ಮಾತಾಡೋದು ಕಷ್ಟ ಆಗಿತ್ತೋ ಅದು ಈಗ ನಿಮಗೆ ನೀರು ಕುಡಿದಷ್ಟು ಸುಲಭ ಅನ್ಸುತ್ತೆ

 ಬದಲಾವಣೆ ಮಾಡ್ಕೊಳ್ಳಿ

  •   ಬೇರೆಯವರ ಜೊತೆ ಹೋಲಿಸ್ಕೊಬೇಡಿ. ಜಾಸ್ತಿ ಮಾತಾಡೋರನ್ನ ನೋಡಿ ನೀವು ಕೂಡ ಅವ್ರ ತರ ಜಾಸ್ತಿ ಮಾತಾಡಬೇಕು ಅಂದ್ಕೊಬೇಡಿ. ನೀವು ಬೇರೆವ್ರ ಜೊತೆ ಮಾತಾಡೋದು ನಿಮ್ಮಲ್ಲಿರೋ ನಾಚಿಕೆನಾ ಹೊಡೆದೋಡಿಸಬೇಕು ಅಂತಷ್ಟೇ. ಇದ್ರಿಂದ ನೀವು ತುಂಬಾ ಜನ್ರನ್ನ ಫ್ರೆಂಡ್ಸ್‌ ಮಾಡ್ಕೊಬಹುದು.

     “ನೀವು ಬೇರೆವ್ರ ಹತ್ರ ಮಾತಾಡಬೇಕು ಅಂದ್ರೆ ಉದ್ದುದ್ದ ಭಾಷಣ ಕೊಡಬೇಕು, ದೊಡ್ಡ ದೊಡ್ಡ ಪದಗಳನ್ನ ಉಪಯೋಗಿಸಬೇಕು ಅಂತಿಲ್ಲ. ಬರೀ ನಿಮ್ಮ ಪರಿಚಯ ಮಾಡ್ಕೊಂಡು ಕೆಲವು ಪ್ರಶ್ನೆಗಳನ್ನ ಕೇಳಿದ್ರೆ ಸಾಕು.”—ಅಲಿಸಿಯಾ.

     ಬೈಬಲ್‌ ತತ್ವ: “ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರೀಕ್ಷಿಸಿಕೊಳ್ಳಲಿ, ಆಗ ಅವನಿಗೆ ತನ್ನ ವಿಷಯದಲ್ಲೇ ಹೆಚ್ಚಳಪಡಲು ಕಾರಣವಿರುವುದೇ ಹೊರತು ಬೇರೊಬ್ಬ ವ್ಯಕ್ತಿಯೊಂದಿಗೆ ಹೋಲಿಕೆಯಲ್ಲಿ ಅಲ್ಲ.”—ಗಲಾತ್ಯ 6:4.

  •   ಚೆನ್ನಾಗಿ ಗಮನಿಸಿ. ಚೆನ್ನಾಗಿ ಮಾತಾಡೋರನ್ನ, ಅವ್ರು ಹೇಗೆ ಎಲ್ರ ಹತ್ರ ಮಾತಾಡ್ತಾರೆ ಅಂತ ಗಮನಿಸಿ. ಯಾವ ತರ ಮಾತಾಡಬೇಕು, ಯಾವ ತರ ಮಾತಾಡಬಾರದು ಅಂತ ತಿಳ್ಕೊಳ್ಳಿ. ನೀವು ಯಾವ ವಿಷ್ಯದಲ್ಲಿ ಬದಲಾವಣೆ ಮಾಡ್ಕೊಬೇಕು ಅಂತ ನೋಡಿ.

     “ಬೇಗ ಫ್ರೆಂಡ್ಸ್‌ ಮಾಡ್ಕೊಳ್ಳೋರನ್ನ ಗಮನಿಸಿ. ಅವ್ರು ಹೊಸಬ್ರನ್ನ ಭೇಟಿ ಮಾಡ್ದಾಗ ಹೇಗೆ ನಡ್ಕೊತಾರೆ, ಏನು ಮಾತಾಡ್ತಾರೆ ಅಂತ ಚೆನ್ನಾಗಿ ಗಮನಿಸಿ.”—ಏರನ್‌.

     ಬೈಬಲ್‌ ತತ್ವ: “ಕಬ್ಬಿಣವು ಕಬ್ಬಿಣವನ್ನು ಹೇಗೋ ಮಿತ್ರನು ಮಿತ್ರನ ಬುದ್ಧಿಯನ್ನು ಹಾಗೆ ಹರಿತಮಾಡುವನು.”—ಜ್ಞಾನೋಕ್ತಿ 27:17.

  •   ಪ್ರಶ್ನೆಗಳನ್ನ ಕೇಳಿ. ಜನ ಸಾಮಾನ್ಯವಾಗಿ ಅವ್ರಿಗೆ ಅನಿಸಿದ್ದನ್ನ ಹೇಳೋಕೆ ಇಷ್ಟ ಪಡ್ತಾರೆ. ಅದಕ್ಕೆ ಪ್ರಶ್ನೆಗಳನ್ನ ಕೇಳಿ. ಆಗ ಮಾತು ಮುಂದುವರೆಯುತ್ತೆ. ನಿಮ್ಮ ಕಡೆ ಅನಾವಶ್ಯಕ ಗಮನ ಇರಲ್ಲ.

     “ಯಾವುದಾದ್ರೂ ಕಾರ್ಯಕ್ರಮಕ್ಕೆ ಹೋಗಬೇಕು, ಅಲ್ಲಿ ಜಾಸ್ತಿ ಜನನಾ ಭೇಟಿ ಮಾಡಬೇಕು ಅಂತಿದ್ರೆ ಯಾವ ವಿಷ್ಯದ ಬಗ್ಗೆ ಮಾತಾಡಬೇಕು ಅಂತ ಮೊದಲೇ ತಯಾರಿ ಮಾಡ್ಕೊಳ್ಳಿ. ಆಗ ನಿಮ್ಗೆ ಭಯ ಆಗಲ್ಲ.”—ಆ್ಯಲೆನ.

     ಬೈಬಲ್‌ ತತ್ವ: “ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.”—ಫಿಲಿಪ್ಪಿ 2:4.

a ರಿಕ್ಲೇಮಿಂಗ್‌ ಕನ್‌ವರ್ಸೇಷನ್‌ ಪುಸ್ತಕ ನೋಡಿ.