ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತಿಹಾಸದ ಪುಟಗಳಿಂದ | ಅಲ್ಹಾಝನ್‌

ಅಲ್ಹಾಝನ್‌

ಅಲ್ಹಾಝನ್‌

ನೀವು ಅಬು ಅಲಿ ಅಲ್‌-ಹಸನ್‌ ಇಬ್‌ನ್‌ ಅಲ್‌-ಹಿತಮ್‍ರವರ ಬಗ್ಗೆ ಕೇಳಿದ್ದೀರಾ? ಇರಲಿಕ್ಕಿಲ್ಲ. ಅವರು ಪಶ್ಚಿಮ ದೇಶಗಳಲ್ಲಿ ಅಲ್ಹಾಝನ್‌ ಎಂದು ಹೆಸರುವಾಸಿಯಾಗಿದ್ದಾರೆ. ಇದು ಅವರ ಅರೇಬಿಕ್‌ ಹೆಸರಾದ ಅಲ್‌ಹಸನ್‍ನ ಲ್ಯಾಟಿನ್‌ ರೂಪವಾಗಿದೆ. ಅವರ ಸಾಧನೆಗಳಿಂದ ನಮಗೆ ತುಂಬ ಪ್ರಯೋಜನಗಳಾಗಿವೆ. “ವಿಜ್ಞಾನದ ಇತಿಹಾಸದಲ್ಲೇ ಬಹಳ ಪ್ರಾಮುಖ್ಯ ಮತ್ತು ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು” ಎಂದು ಅವರ ಬಗ್ಗೆ ವರ್ಣಿಸಲಾಗಿದೆ.

ಅಲ್ಹಾಝನ್‌ ಜನಿಸಿದ್ದು ಕ್ರಿ.ಶ. 965​ರಲ್ಲಿ ಬಸ್ರಾ ಎಂಬಲ್ಲಿ. ಅದು ಈಗ ಇರಾಕ್‍ನಲ್ಲಿದೆ. ಅವರಿಗೆ ಇಷ್ಟವಿದ್ದ ವಿಷಯಗಳು ಖಗೋಳ ವಿಜ್ಞಾನ, ರಾಸಾಯನಶಾಸ್ತ್ರ, ಗಣಿತಶಾಸ್ತ್ರ, ವೈದ್ಯಶಾಸ್ತ್ರ, ಕಾವ್ಯ-ಸಂಗೀತ, ದೃಗ್ವಿಜ್ಞಾನ (ದೃಷ್ಟಿಗೆ ಸಂಬಂಧಿಸಿದ ವಿಜ್ಞಾನ) ಮತ್ತು ಭೌತಶಾಸ್ತ್ರ. ನಾವು ಕೃತಜ್ಞರಾಗಿರಬೇಕಾದ ಯಾವ ವಿಶೇಷ ಸಾಧನೆಯನ್ನು ಅವರು ಮಾಡಿದರು?

ನೈಲ್‌ ನದಿಗೊಂದು ಅಣೆಕಟ್ಟು

ಅಲ್ಹಾಝನ್‍ರ ಒಂದು ಕಥೆ ಸುಮಾರು ವರ್ಷಗಳವರೆಗೆ ಎಲ್ಲೆಡೆ ಪ್ರಚಲಿತವಾಗಿತ್ತು. ಅದು ನೈಲ್‌ ನದಿಯ ಹರಿವನ್ನು ನಿಯಂತ್ರಿಸಲು ಅವರು ಮಾಡಿದ್ದ ಯೋಜನೆಯ ಕುರಿತಾಗಿದೆ. ಅವರು ಆ ಯೋಜನೆ ಮಾಡಿದ್ದು, ಈ ನದಿಗೆ ಆಸ್ವಾನ್‍ನಲ್ಲಿ 1902​ರಲ್ಲಿ ಅಣೆಕಟ್ಟಿನ ನಿರ್ಮಾಣವಾಗುವ ಸುಮಾರು 1,000 ವರ್ಷ ಮುಂಚೆ!

ಆ ಕಥೆಯ ಪ್ರಕಾರ, ಈಜಿಪ್ಟನ್ನು ಪದೇ ಪದೇ ಕಾಡುತ್ತಿದ್ದ ಬರಗಾಲ ಮತ್ತು ನೆರೆಯ ಸಮಸ್ಯೆಯನ್ನು ಪರಿಹರಿಸಲು ಅಲ್ಹಾಝನ್‌ ನೈಲ್‌ ನದಿಗೆ ಅಣೆಕಟ್ಟನ್ನು ಕಟ್ಟುವ ಮಹತ್ವಾಕಾಂಕ್ಷೆಯ ಯೋಜನೆ ಮಾಡಿದರು. ಈ ಯೋಜನೆಯ ಬಗ್ಗೆ ಕೇಳಿದ ಕೈರೋದ ರಾಜನಾದ ಕಲೀಫ್‌ ಅಲ್‌ ಹಕಿಮ್‌ ಅಣೆಕಟ್ಟನ್ನು ಕಟ್ಟಲು ಅಲ್ಹಾಝನ್‍ರನ್ನು ಈಜಿಪ್ಟಿಗೆ ಆಮಂತ್ರಿಸಿದರು. ಆದರೆ ಆ ನದಿಯನ್ನು ಕಣ್ಣಾರೆ ಕಂಡ ಅಲ್ಹಾಝನ್‌ರಿಗೆ ಈ ಕೆಲಸ ತನ್ನಿಂದ ಅಸಾಧ್ಯ ಎಂದು ತಿಳಿಯಿತು. ಚಂಚಲಮನಸ್ಸಿನವನೆಂದು ಕುಖ್ಯಾತನಾಗಿದ್ದ ಈ ರಾಜನಿಂದ ಶಿಕ್ಷೆಯಾಗಬಹುದೆಂದು ಹೆದರಿ ಅಲ್ಹಾಝನ್‌ ಆ ಕಲೀಫನು 1021​ರಲ್ಲಿ ಸಾಯುವ ತನಕ 11 ವರ್ಷಗಳ ಕಾಲ ಹುಚ್ಚನಂತೆ ನಟಿಸಿದರು. ಅಷ್ಟು ಸಮಯ ಅವರನ್ನು ಹುಚ್ಚಾಸ್ಪತ್ರೆಯಲ್ಲಿ ಬಂಧಿಸಿಡಲಾಯಿತು. ಅಲ್ಲಿ ಅವರಿಗೆ ತಮಗೆ ಆಸಕ್ತಿಕರವಾದ ಬೇರೆ ವಿಷಯಗಳನ್ನು ಮಾಡಲು ತುಂಬ ಬಿಡುವು ಸಿಕ್ಕಿತು.

ಬುಕ್‌ ಆಫ್‌ ಆಪ್ಟಿಕ್ಸ್‌

ಅಲ್ಲಿಂದ ಬಿಡುಗಡೆಯಾಗುವಷ್ಟರಲ್ಲಿ ಅಲ್ಹಾಝನ್‍ರು ಏಳು ಸಂಪುಟಗಳಿರುವ ಬುಕ್‌ ಆಫ್‌ ಆಪ್ಟಿಕ್ಸ್‌ ಅನ್ನು ಹೆಚ್ಚಿನಾಂಶ ಬರೆದು ಮುಗಿಸಿದ್ದರು. ಅದನ್ನು “ಭೌತಶಾಸ್ತ್ರದ ಇತಿಹಾಸದಲ್ಲೇ ಅತಿ ಪ್ರಾಮುಖ್ಯವಾದ ಪುಸ್ತಕಗಳಲ್ಲೊಂದು” ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಅವರು ಬೆಳಕಿನ ಸ್ವಭಾವದ ಬಗ್ಗೆ ತಾವು ಮಾಡಿದ ಪ್ರಯೋಗಗಳ ಬಗ್ಗೆ ವಿವರಿಸಿದ್ದಾರೆ. ಬೆಳಕು ತನ್ನದೇ ಆದ ಬೇರೆ ಬೇರೆ ಬಣ್ಣದ ಘಟಕಗಳಾಗಿ ಹೇಗೆ ವಿಭಜನೆಯಾಗುತ್ತದೆ, ಕನ್ನಡಿಗಳಿಂದ ಅದು ಹೇಗೆ ಪ್ರತಿಫಲನವಾಗುತ್ತದೆ ಮತ್ತು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಹಾಯುವಾಗ ಅದು ಹೇಗೆ ಬಾಗುತ್ತದೆ ಎಂದು ತಿಳಿಸಿದ್ದಾರೆ. ಅವರು ಕಣ್ಣಿನ ಗ್ರಹಣ ಶಕ್ತಿ, ರಚನೆ ಮತ್ತು ಅದು ಕೆಲಸ ಮಾಡುವ ವಿಧಾನದ ಕುರಿತು ಮಾಡಿದ ಅಧ್ಯಯನದ ಬಗ್ಗೆಯೂ ತಿಳಿಸಿದ್ದಾರೆ.

13​ನೇ ಶತಮಾನದಷ್ಟಕ್ಕೆ ಅಲ್ಹಾಝನ್‍ರ ಪುಸ್ತಕಗಳನ್ನು ಅರೇಬಿಕ್‍ನಿಂದ ಲ್ಯಾಟಿನ್‌ಗೆ ಭಾಷಾಂತರಿಸಲಾಗಿತ್ತು. ಅಂದಿನಿಂದ ಶತಮಾನಗಳವರೆಗೆ ಯೂರೋಪಿನ ವಿದ್ವಾಂಸರು ಅದನ್ನು ಆಧಾರಗ್ರಂಥವಾಗಿ ಬಳಸಿದರು. ಮಸೂರಗಳ ಗುಣಲಕ್ಷಣಗಳ ಕುರಿತ ಅಲ್‌ಹಸನ್‍ರ ಬರಹಗಳು ಯೂರೋಪಿನ ಕನ್ನಡಕ ತಯಾರಕರಿಗೆ ಅಗತ್ಯವಾದ ಅಸ್ತಿವಾರದಂತಿತ್ತು. ಅವರು ಒಂದರ ಮುಂದೊಂದು ಮಸೂರಗಳನ್ನಿಟ್ಟು ದೂರದರ್ಶಕ ಮತ್ತು ಸೂಕ್ಷ್ಮದರ್ಶಕದ ಆವಿಷ್ಕಾರ ಮಾಡಿದರು.

ಕ್ಯಾಮರಾ ಅಬ್ಸ್‌ಕ್ಯೂರ

ಅಲ್ಹಾಝನ್‌ ಕ್ಯಾಮರಾ ಅಬ್ಸ್‌ಕ್ಯೂರವನ್ನು ಮಾಡುವಾಗ ಛಾಯಾಚಿತ್ರ ಗ್ರಹಣದ ತತ್ವಗಳನ್ನು ಕಂಡುಹಿಡಿದರು. ಈ ಕ್ಯಾಮರಾ ಅಬ್ಸ್‌ಕ್ಯೂರ ದಾಖಲೆಯಾಗಿರುವವುಗಳಲ್ಲೇ ಮೊದಲನೆಯದ್ದು. ಇದು ಒಂದು “ಕತ್ತಲ ಕೋಣೆ” ಆಗಿದ್ದು ಅದಕ್ಕೆ ಒಂದು ಚಿಕ್ಕ ರಂಧ್ರವಿತ್ತು. ಅದರ ಮೂಲಕ ಬೆಳಕು ಹಾಯುವಾಗ ಹೊರಗಿರುವ ಚಿತ್ರದ ಪ್ರತಿಬಿಂಬವು ಕೋಣೆಯ ಒಳಗಿನ ಗೋಡೆಯ ಮೇಲೆ ತಲೆಕೆಳಗಾಗಿ ಕಾಣುತ್ತಿತ್ತು.

ಅಲ್ಹಾಝನ್‌ ಮಾಡಿದ ಮೊದಲ ಕ್ಯಾಮರಾ ಅಬ್ಸ್ಕ್ಯೂರ

ಚಿತ್ರಗಳನ್ನು ಕಾಯಂ ಸೆರೆಹಿಡಿಯಲಿಕ್ಕಾಗಿ ಕ್ಯಾಮರಾ ಅಬ್ಸ್‌ಕ್ಯೂರದಲ್ಲಿ 19​ನೇ ಶತಮಾನದಲ್ಲಿ ಫೋಟೋಗ್ರಾಫಿಕ್‌ ಪ್ಲೇಟ್‌ಗಳನ್ನು ಅಳವಡಿಸಲಾಯಿತು. ಪರಿಣಾಮ ಕ್ಯಾಮರಾದ ಸೃಷ್ಟಿಯಾಯಿತು. ಕ್ಯಾಮರಾ ಅಬ್ಸ್‌ಕ್ಯೂರದ ತತ್ವಗಳ ಅನುಸಾರವಾಗಿಯೇ ಎಲ್ಲಾ ಆಧುನಿಕ ಕ್ಯಾಮರಾಗಳು ಮತ್ತು ನಮ್ಮ ಕಣ್ಣುಗಳು ಕೆಲಸ ಮಾಡುತ್ತವೆ. *

ವೈಜ್ಞಾನಿಕ ವಿಧಾನ

ಅಲ್ಹಾಝನ್‍ರ ಸಾಧನೆಗಳಲ್ಲಿ, ಪ್ರಕೃತಿಯಲ್ಲಿನ ಸಂಗತಿಗಳ ಬಗ್ಗೆ ಅವರು ಮಾಡಿದ ನಿಖರ, ಸುವ್ಯವಸ್ಥಿತ ಸಂಶೋಧನೆ ಎದ್ದುಕಾಣುತ್ತದೆ. ಅವರು ಮಾಡಿದ ಕೆಲಸ ಆಗಿನ ಕಾಲಕ್ಕೆ ಅಸಾಧಾರಣವಾಗಿತ್ತು. ಪ್ರಯೋಗಗಳ ಮೂಲಕ ಸಿದ್ಧಾಂತಗಳನ್ನು ಪರೀಕ್ಷಿಸಿದ ಮೊಟ್ಟಮೊದಲ ಸಂಶೋಧಕರಲ್ಲಿ ಇವರು ಒಬ್ಬರು. ಎಲ್ಲರೂ ಒಪ್ಪುತ್ತಿದ್ದ ಯಾವುದೇ ವಿಷಯಕ್ಕೆ ಪುರಾವೆಯಿಲ್ಲದಿದ್ದರೆ ಅದನ್ನು ಪ್ರಶ್ನಿಸಲು ಅವರು ಹಿಂಜರಿಯುತ್ತಿರಲಿಲ್ಲ.

“ನೀವು ನಂಬಿದ್ದಕ್ಕೆ ಆಧಾರ ಕೊಡಿ!” ಎಂಬ ಹೇಳಿಕೆ ಆಧುನಿಕ ವಿಜ್ಞಾನದ ತತ್ವಗಳ ಸಾರಾಂಶ ಆಗಿದೆ. ಕೆಲವರು ಅಲ್ಹಾಝನ್‍ರನ್ನು “ಆಧುನಿಕ ವೈಜ್ಞಾನಿಕ ವಿಧಾನದ ತಂದೆ” ಎಂದು ಕರೆಯುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ ನಾವು ಅವರಿಗೆ ಕೃತಜ್ಞರಾಗಿದ್ದೇವೆ.

^ ಪ್ಯಾರ. 13 17​ನೇ ಶತಮಾನದಲ್ಲಿ ಜೊಹಾನ್ಸ್‌ ಕೆಪ್ಲರ್‌ರು ಕ್ಯಾಮರಾ ಅಬ್ಸ್ಕ್ಯೂರ ಮತ್ತು ಕಣ್ಣುಗಳ ನಡುವಣ ಹೋಲಿಕೆಯ ಕುರಿತು ವಿವರಿಸಿದ ನಂತರವೇ ಪಶ್ಚಿಮ ದೇಶದಲ್ಲಿರುವವರಿಗೆ ಇದರ ಬಗ್ಗೆ ಸರಿಯಾಗಿ ಅರ್ಥವಾಯಿತು