ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಯನ ಲೇಖನ 44

ನಿಮ್ಮ ನಿರೀಕ್ಷೆಯನ್ನ ಗಟ್ಟಿಯಾಗಿ ಹಿಡಿದುಕೊಳ್ಳಿ

ನಿಮ್ಮ ನಿರೀಕ್ಷೆಯನ್ನ ಗಟ್ಟಿಯಾಗಿ ಹಿಡಿದುಕೊಳ್ಳಿ

“ಯೆಹೋವನ ಮೇಲೆ ನಿರೀಕ್ಷೆ ಇಡು.”—ಕೀರ್ತ. 27:14.

ಗೀತೆ 24 ನಿನ್ನ ದೃಷ್ಟಿಯನ್ನು ಇನಾಮಿನ ಮೇಲಿಡು!

ಕಿರುನೋಟ a

1. ಯೆಹೋವ ನಮಗೆ ಯಾವ ನಿರೀಕ್ಷೆ ಕೊಟ್ಟಿದ್ದಾನೆ?

 ಯೆಹೋವ ನಮಗೆ ಅದ್ಭುತವಾದ ನಿರೀಕ್ಷೆ ಕೊಟ್ಟಿದ್ದಾನೆ. ಕೆಲವರಿಗೆ ಸ್ವರ್ಗದಲ್ಲಿ ಶಾಶ್ವತವಾಗಿ ಜೀವಿಸುವ ನಿರೀಕ್ಷೆ ಇದೆ. (1 ಕೊರಿಂ. 15:50, 53) ಇನ್ನೂ ತುಂಬ ಜನರಿಗೆ ಇದೇ ಭೂಮಿಯಲ್ಲಿ ಪರಿಪೂರ್ಣ ಆರೋಗ್ಯದಿಂದ ಸಂತೋಷವಾಗಿ ಬದುಕೋ ನಿರೀಕ್ಷೆ ಇದೆ. (ಪ್ರಕ. 21:3, 4) ನಮ್ಮ ನಿರೀಕ್ಷೆ ಭೂಮಿಯಲ್ಲಿ ಜೀವಿಸೋದಿರಲಿ ಸ್ವರ್ಗದಲ್ಲಿ ಜೀವಿಸೋದಿರಲಿ ಅದಕ್ಕೆ ಬೆಲೆಕಟ್ಟಕ್ಕಾಗಲ್ಲ.

2. ನಮ್ಮ ನಿರೀಕ್ಷೆ ನಿಜ ಅಂತ ನಾವು ಯಾಕೆ ನಂಬುತ್ತೀವಿ?

2 ಬೈಬಲಲ್ಲಿ “ನಿರೀಕ್ಷೆ” ಅನ್ನೋ ಪದಕ್ಕಿರೋ ಅರ್ಥ ಏನಂದರೆ, “ಮುಂದೆ ಎಲ್ಲಾ ಒಳ್ಳೇದಾಗುತ್ತೆ ಅಂತ ಎದುರುನೋಡೋದು.” ನಮಗೆ ಕೊಟ್ಟಿರೋ ನಿರೀಕ್ಷೆ ನಿಜ ಆಗುತ್ತೆ ಅಂತ ನಾವು ನಂಬಬಹುದು. ಯಾಕಂದ್ರೆ ಆ ನಿರೀಕ್ಷೆಯನ್ನ ಕೊಟ್ಟಿರೋದು ಯೆಹೋವ ದೇವರು. (ರೋಮ. 15:13) ಆತನು ಇಲ್ಲಿ ತನಕ ಕೊಟ್ಟ ಮಾತನ್ನ ಉಳಿಸಿಕೊಂಡು ಬಂದಿದ್ದಾನೆ. ಮುಂದೆನೂ ಉಳಿಸಿಕೊಳ್ತಾನೆ. (ಅರ. 23:19) ಅದರ ಜೊತೆಗೆ, ಆತನು ಮಾತುಕೊಟ್ಟ ಮೇಲೆ ಅದನ್ನ ಮಾಡೋ ಶಕ್ತಿ ಮಾತ್ರ ಅಲ್ಲ, ಅದನ್ನ ಮಾಡೋ ಆಸೆನೂ ಆತನಿಗಿದೆ. ಹಾಗಾಗಿ ನಮ್ಮ ನಿರೀಕ್ಷೆ ಬರೀ ಭ್ರಮೆ ಅಲ್ಲ, ಇದು ಮುಂದೆ ನಡೆದೇ ನಡೆಯುತ್ತೆ ಅನ್ನೋದಕ್ಕೆ ಆಧಾರ ಇದೆ.

3. ನಾವು ಈ ಲೇಖನದಲ್ಲಿ ಏನು ಕಲಿತೀವಿ? (ಕೀರ್ತನೆ 27:14)

3 ಸ್ವರ್ಗದಲ್ಲಿರೋ ಯೆಹೋವ ಅಪ್ಪಾ ನಮ್ಮನ್ನ ಪ್ರೀತಿಸ್ತಾನೆ ಮತ್ತು ನಾವು ಆತನನ್ನ ಪೂರ್ತಿಯಾಗಿ ನಂಬಬೇಕು ಅಂತ ಆಸೆಪಡ್ತಾನೆ. (ಕೀರ್ತನೆ 27:14 ಓದಿ.) ನಾವು ಆತನನ್ನು ನಂಬಿದ್ರೆ ಆತನು ಕೊಟ್ಟಿರೋ ನಿರೀಕ್ಷೆ ಮೇಲೆನೂ ನಮ್ಮ ನಂಬಿಕೆ ಬಲ ಆಗುತ್ತೆ. ಆಗ ಮುಂದೆ ಎಂಥ ಕಷ್ಟ-ತೊಂದರೆಗಳು ಬಂದರೂ ಅದನ್ನ ಧೈರ್ಯದಿಂದ, ಸಂತೋಷದಿಂದ ಎದುರಿಸ್ತೀವಿ. ಹಾಗಾಗಿ ನಿರೀಕ್ಷೆ ನಮ್ಮನ್ನ ಲಂಗರದ ತರ ಮತ್ತು ಶಿರಸ್ತ್ರಾಣದ ತರ ಹೇಗೆ ಕಾಪಾಡುತ್ತೆ ಅಂತ ಮೊದಲು ನೋಡೋಣ. ಆಮೇಲೆ ನಿರೀಕ್ಷೆಯನ್ನ ಬಲಪಡಿಸಿಕೊಳ್ಳೋಕೆ ಏನು ಮಾಡಬೇಕು ಅಂತನೂ ನೋಡೋಣ.

ನಮ್ಮ ನಿರೀಕ್ಷೆ ಲಂಗರದ ಹಾಗಿದೆ

4. ನಿರೀಕ್ಷೆ ಹೇಗೆ ಲಂಗರದ ತರ ಇದೆ? (ಇಬ್ರಿಯ 6:19)

4 ಅಪೊಸ್ತಲ ಪೌಲ ಇಬ್ರಿಯ ಕ್ರೈಸ್ತರಿಗೆ ಬರೆದ ಪತ್ರದಲ್ಲಿ ನಮಗಿರೋ ನಿರೀಕ್ಷೆಯನ್ನ ಲಂಗರಕ್ಕೆ ಹೋಲಿಸಿದ. (ಇಬ್ರಿಯ 6:19 ಓದಿ.) ಪೌಲ ಆಗಾಗ ಸಮುದ್ರ ಪ್ರಯಾಣ ಮಾಡುತ್ತಿದ್ದ. ಹಾಗಾಗಿ ಅವನಿಗೆ ಲಂಗರದ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಕೆಲವೊಮ್ಮೆ ಹಡಗು ತೇಲಿ, ಎಲ್ಲೆಲ್ಲೋ ಹೋಗದೇ ಇರೋಕೆ ಈ ಲಂಗರವನ್ನ ಉಪಯೋಗಿಸುತ್ತಿದ್ದರು. ಒಂದುಸಲ ಪೌಲ ಪ್ರಯಾಣ ಮಾಡುತ್ತಿದ್ದಾಗ ದೊಡ್ಡ ಬಿರುಗಾಳಿ ಬಂತು. ಆಗ ಹಡಗಿನಲ್ಲಿ ಇದ್ದವರು ಲಂಗರವನ್ನ ಸಮುದ್ರಕ್ಕೆ ಹಾಕಿದರು. ಇದರಿಂದ ಆ ಹಡಗು ಬಿರುಗಾಳಿಯಲ್ಲಿ ಸಿಕ್ಕಿಹಾಕಿಕೊಂಡು ಬಂಡೆಗೆ ಅಪ್ಪಳಿಸಿ ಒಡೆದು ಚೂರುಚೂರಾಗಲಿಲ್ಲ. (ಅ. ಕಾ. 27:29, 39-41) ನಮ್ಮ ಜೀವನದಲ್ಲಿ ಕಷ್ಟಗಳು ಅನ್ನೋ ಬಿರುಗಾಳಿ ಬಂದಾಗ ದೇವರ ಮೇಲಿರೋ ನಂಬಿಕೆಯನ್ನ ಕಳಕೊಳ್ಳದೇ ಇರೋ ಹಾಗೆ ಅಥವಾ ಆತನನ್ನು ಬಿಟ್ಟು ದೂರ ಹೋಗದ ಹಾಗೆ ನಿರೀಕ್ಷೆ ಅನ್ನೋ ಲಂಗರ ನಮ್ಮನ್ನ ಕಾಪಾಡುತ್ತೆ. ನಮ್ಮ ನಿರೀಕ್ಷೆ ಬಲವಾಗಿದ್ರೆ ಮುಂದೆ ಎಲ್ಲಾ ಸರಿಹೋಗುತ್ತೆ ಅಂತ ನಂಬುತ್ತೀವಿ ಮತ್ತು ಕಷ್ಟಗಳನ್ನ ತಾಳಿಕೊಳ್ಳುತ್ತೀವಿ. ನೆನಪಿಡಿ, ತನ್ನ ಹಿಂಬಾಲಕರಿಗೆ ಹಿಂಸೆ ಬಂದೇ ಬರುತ್ತೆ ಅಂತ ಯೇಸು ಹೇಳಿದ್ದನು. (ಯೋಹಾ. 15:20) ದೇವರು ಕೊಡೋ ಆಶೀರ್ವಾದಗಳ ಬಗ್ಗೆ ಯೋಚಿಸುವಾಗ ಈ ಕಷ್ಟಗಳನ್ನ ನಮಗೆ ತಾಳಿಕೊಳ್ಳೋಕೆ ಆಗುತ್ತೆ ಮತ್ತು ನಿಷ್ಠೆಯಿಂದ ದೇವರ ಸೇವೆ ಮಾಡೋಕೆ ಆಗುತ್ತೆ.

5. ಕಷ್ಟಪಟ್ಟು ಸಾಯಬೇಕಾಗುತ್ತೆ ಅಂತ ಗೊತ್ತಿದ್ರೂ ಯೇಸುಗೆ ಯಾವ ನಿರೀಕ್ಷೆ ಸಹಾಯ ಮಾಡಿತು?

5 ಯೇಸುಗೆ ತಾನು ಹಿಂಸೆ ಅನುಭವಿಸಿ ಸಾಯಬೇಕು ಅಂತ ಗೊತ್ತಿದ್ರೂ ಶಾಂತವಾಗಿದ್ದನು, ಯೆಹೋವನಿಗೆ ನಂಬಿಗಸ್ತನಾಗಿದ್ದನು. ಯಾಕಂದ್ರೆ ಆತನ ನಿರೀಕ್ಷೆ ಬಲವಾಗಿತ್ತು. ಇದು ನಮಗೆ ಕೀರ್ತನೆ ಪುಸ್ತಕದಲ್ಲಿರೋ ಭವಿಷ್ಯವಾಣಿಯಿಂದ ಗೊತ್ತಾಗುತ್ತೆ. “ನೀನು ನನ್ನನ್ನ ಸಮಾಧಿಯಲ್ಲೇ ಬಿಟ್ಟುಬಿಡಲ್ಲ. ನಿನ್ನ ನಿಷ್ಠಾವಂತ ಭಕ್ತನನ್ನ ಕೊಳೆತು ಹೋಗೋಕೆ ಬಿಡಲ್ಲ. . . . ನಿನ್ನ ಸನ್ನಿಧಿಯಲ್ಲಿ ನನ್ನನ್ನ ಆನಂದದಿಂದ ತುಂಬಿಸಿದೆ” ಅಂತ ಆ ಭವಿಷ್ಯವಾಣಿಯಲ್ಲಿ ಯೇಸು ಬಗ್ಗೆ ಹೇಳಿರೋ ಮಾತುಗಳನ್ನ ಅಪೊಸ್ತಲ ಪೇತ್ರ ಕ್ರಿಸ್ತಶಕ 33ರ ಪಂಚಾಶತ್ತಮ ದಿನ ಹೇಳಿದ. (ಅ. ಕಾ. 2:25-28; ಕೀರ್ತ. 16:8-11) ಯೇಸುಗೆ ತಾನು ಸಾಯುತ್ತೀನಿ ಅಂತ ಗೊತ್ತಿತ್ತು. ಆದ್ರೂ ‘ಯೆಹೋವ ನನ್ನನ್ನ ಬದುಕಿಸುತ್ತಾನೆ ಮತ್ತು ನಾನು ಸ್ವರ್ಗಕ್ಕೆ ಹೋಗಿ ಆತನ ಜೊತೆ ಇರುತ್ತೀನಿ’ ಅನ್ನೋ ನಿರೀಕ್ಷೆ ಆತನಿಗಿತ್ತು. ಹಾಗಾಗಿ ಯೇಸು ಸಂತೋಷವಾಗಿ ಇದ್ದನು.—ಇಬ್ರಿ. 12:2, 3.

6. ನಿರೀಕ್ಷೆ ಬಗ್ಗೆ ಒಬ್ಬ ಸಹೋದರ ಏನು ಹೇಳಿದ್ದಾರೆ?

6 ಎಷ್ಟೋ ಸಹೋದರ ಸಹೋದರಿಯರು ನಿರೀಕ್ಷೆ ಇದ್ದಿದ್ದರಿಂದ ತಮಗೆ ಬಂದ ಕಷ್ಟಗಳನ್ನ ಸಹಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿದ್ದ ಸಹೋದರ ಲೆನರ್ಡ್‌ ಚಿನ್‌ ಅವರ ಅನುಭವ ನೋಡಿ. ಒಂದನೇ ಮಹಾಯುದ್ಧದ ಸಮಯದಲ್ಲಿ ಮಿಲಿಟರಿಗೆ ಸೇರಿಕೊಳ್ಳಲ್ಲ ಅಂತ ಹೇಳಿದ್ದಕ್ಕೆ ಅವರನ್ನ ಜೈಲಿಗೆ ಹಾಕಿದ್ರು. ಅವರನ್ನ ಎರಡು ತಿಂಗಳು ಏಕಾಂತ ಬಂಧಿವಾಸದಲ್ಲಿ ಇಟ್ಟರು. ಆಮೇಲೆ ಕಠಿಣ ಕಾರಾಗೃಹ ಶಿಕ್ಷೆ ಕೊಟ್ಟರು. “ನನಗೆ ಬಂದ ಕಷ್ಟಗಳಿಂದ ನಿರೀಕ್ಷೆಯನ್ನ ಬಲವಾಗಿ ಇಟ್ಟುಕೊಳ್ಳೋದು ಎಷ್ಟು ಮುಖ್ಯ ಅಂತ ಕಲಿತೆ. ಯೇಸು ಮತ್ತು ಅಪೊಸ್ತಲರು ತುಂಬ ಕಷ್ಟಗಳನ್ನ ಅನುಭವಿಸಿದರು ಅಂತ ಬೈಬಲಲ್ಲಿ ಇದೆ. ಅವರೆಲ್ಲ ನಮಗೆ ಒಳ್ಳೇ ಮಾದರಿ. ಅಷ್ಟೇ ಅಲ್ಲ, ದೇವರು ಭವಿಷ್ಯದಲ್ಲಿ ಕೊಡೋ ಆಶೀರ್ವಾದಗಳ ಬಗ್ಗೆ ಬೈಬಲಲ್ಲಿ ಬರೆಸಿದ್ದಾರೆ. ಇದು ನಮಗೆ ನಿರೀಕ್ಷೆಯನ್ನ ಕೊಡುತ್ತೆ ಮತ್ತು ಕಷ್ಟಗಳನ್ನ ಸಹಿಸಿಕೊಳ್ಳೋಕೆ ಸಹಾಯ ಮಾಡುತ್ತೆ” ಅಂತ ಸಹೋದರ ಹೇಳ್ತಾರೆ. ಲೆನರ್ಡ್‌ಗೆ ಅವರಲ್ಲಿದ್ದ ನಿರೀಕ್ಷೆ, ಒಂದು ಲಂಗರದ ತರ ಇತ್ತು. ನಮಗೂ ಅದೇ ತರ ಇರುತ್ತೆ.

7. ಕಷ್ಟಗಳಿಂದ ನಮ್ಮ ನಿರೀಕ್ಷೆ ಹೇಗೆ ಬಲವಾಗುತ್ತೆ? (ರೋಮನ್ನರಿಗೆ 5:3-5; ಯಾಕೋಬ 1:12)

7 ಕಷ್ಟಗಳು ಬಂದಾಗ ಅದನ್ನ ಸಹಿಸಿಕೊಳ್ಳೋಕೆ ಯೆಹೋವ ನಮಗೆ ಸಹಾಯ ಮಾಡ್ತಾನೆ. ಆಗ ಯೆಹೋವ ನಮ್ಮ ಜೊತೆ ಇದ್ದಾನೆ, ಆತನು ನಮ್ಮನ್ನ ಮೆಚ್ಚಿಕೊಂಡಿದ್ದಾನೆ ಅನ್ನೋ ಭರವಸೆ ಜಾಸ್ತಿ ಆಗುತ್ತೆ. (ರೋಮನ್ನರಿಗೆ 5:3-5; ಯಾಕೋಬ 1:12 ಓದಿ.) ಇದರಿಂದ, ನಮ್ಮ ನಿರೀಕ್ಷೆ ಸತ್ಯ ಕಲಿತಾಗ ಇದ್ದಿದ್ದಕ್ಕಿಂತ ಇನ್ನೂ ಬಲವಾಗುತ್ತೆ. ಸೈತಾನ ಎಂಥ ಕಷ್ಟಗಳ ಸುರಿಮಳೆಯನ್ನೇ ತಂದರೂ ನಾವು ಅದರಲ್ಲಿ ಕೊಚ್ಚಿಕೊಂಡು ಹೋಗದಿರೋ ತರ ಯೆಹೋವ ನಮ್ಮನ್ನ ಕಾಪಾಡ್ತಾನೆ.

ನಮ್ಮ ನಿರೀಕ್ಷೆ ಶಿರಸ್ತ್ರಾಣದ ತರ ಇದೆ

8. ನಮ್ಮ ನಿರೀಕ್ಷೆ ಹೇಗೆ ಶಿರಸ್ತ್ರಾಣದ ತರ ಇದೆ? (1 ಥೆಸಲೊನೀಕ 5:8)

8 ನಿರೀಕ್ಷೆಯನ್ನ ಬೈಬಲ್‌ ಶಿರಸ್ತ್ರಾಣಕ್ಕೆ ಹೋಲಿಸುತ್ತೆ. (1 ಥೆಸಲೊನೀಕ 5:8 ಓದಿ.) ಒಬ್ಬ ಸೈನಿಕನನ್ನ ಶತ್ರು ಹೊಡೆಯೋಕೆ ಬಂದಾಗ ಅವನ ತಲೆಯನ್ನ ಶಿರಸ್ತ್ರಾಣ ಕಾಪಾಡುತ್ತೆ. ಆ ಶತ್ರು ತರ ಸೈತಾನ ನಮ್ಮ ಮೇಲೆ ಆಕ್ರಮಣ ಮಾಡ್ತಾನೆ. ಅವನು ಕೆಟ್ಟ ಆಸೆಗಳನ್ನ, ಕೆಟ್ಟ ಯೋಚನೆಗಳನ್ನ ನಮ್ಮ ಮನಸ್ಸಲ್ಲಿ ತುಂಬಿಸೋಕೆ ಪ್ರಯತ್ನಿಸ್ತಾನೆ. ಆಗ ನಿರೀಕ್ಷೆ, ಶಿರಸ್ತ್ರಾಣದ ತರ ನಮ್ಮ ಯೋಚನೆಯನ್ನ ಕಾಪಾಡುತ್ತೆ. ನಾವು ಯೆಹೋವನಿಗೆ ನಂಬಿಗಸ್ತರಾಗಿ ಇರೋಕೆ ಸಹಾಯ ಮಾಡುತ್ತೆ.

9. ನಿರೀಕ್ಷೆ ಇಲ್ಲದಿರೋ ಜನ ಹೇಗೆ ನಡಕೊಳ್ತಾರೆ?

9 ಶಾಶ್ವತ ಜೀವದ ನಿರೀಕ್ಷೆ ನಾವು ವಿವೇಕಿಗಳಾಗಿ ನಡಕೊಳ್ಳೋಕೆ ಮತ್ತು ಜೀವನದಲ್ಲಿ ಸರಿಯಾದ ತೀರ್ಮಾನಗಳನ್ನ ಮಾಡೋಕೆ ಸಹಾಯಮಾಡುತ್ತೆ. ಒಂದುವೇಳೆ ಈ ನಿರೀಕ್ಷೆ ನಮ್ಮಲ್ಲಿ ಬಲವಾಗಿಲ್ಲಾಂದ್ರೆ ಬರೀ ನಮ್ಮ ಆಸೆಗಳನ್ನ ಪೂರೈಸಿಕೊಳ್ಳೋದರ ಬಗ್ಗೆನೇ ಯೋಚನೆ ಮಾಡ್ತಾ ಇರುತ್ತೀವಿ. ಹೋಗ್ತಾ-ಹೋಗ್ತಾ ಶಾಶ್ವತ ಜೀವ ಪಡಕೊಳ್ಳಬೇಕು ಅನ್ನೋ ಗುರಿಯನ್ನೇ ಮರೆತುಬಿಡ್ತೀವಿ. ಕೊರಿಂಥ ಸಭೆಯಲ್ಲಿದ್ದ ಕೆಲವರಿಗೆ ಹೀಗೇ ಆಯ್ತು. ಸತ್ತವರನ್ನ ದೇವರು ಮತ್ತೆ ಬದುಕಿಸ್ತಾನೆ ಅಂತ ಆತನು ಕೊಟ್ಟ ಮಾತಿನ ಮೇಲೆನೇ ಅವರು ನಂಬಿಕೆ ಕಳಕೊಂಡು ಬಿಟ್ಟಿದ್ದರು. (1 ಕೊರಿಂ. 15:12) ಅದಕ್ಕೆ ಅಪೊಸ್ತಲ ಪೌಲ ಅವರಿಗೆ, ಭವಿಷ್ಯದ ನಿರೀಕ್ಷೆ ಇಲ್ಲದಿರುವವರು ತಮ್ಮ ಆಸೆಗಳನ್ನ ಪೂರೈಸಿಕೊಳ್ಳೋಕೆ ನೋಡ್ತಾರೆ ಅಂತ ಹೇಳಿದ. (1 ಕೊರಿಂ. 15:32) ಇವತ್ತು ಕೂಡ ದೇವರ ಮಾತಿನ ಮೇಲೆ ನಂಬಿಕೆ ಇಲ್ಲದಿರೋ ಜನ, ಈಗ ಸುಖವಾಗಿ ಇರೋಕೆ ಏನು ಮಾಡಬೇಕು ಅಂತಾನೇ ಯೋಚನೆ ಮಾಡ್ತಾ ಇರುತ್ತಾರೆ. ಆದ್ರೆ ನಮಗೆ ಯೆಹೋವನ ಮಾತಿನ ಮೇಲೆ ನಂಬಿಕೆ ಇದೆ. ಹಾಗಾಗಿ ನಾವು ಈ ಲೋಕದ ಜನರ ತರ ಕ್ಷಣಿಕ ಸುಖಕ್ಕಾಗಿ ಜೀವನ ಮಾಡಲ್ಲ. ಯಾಕಂದ್ರೆ ಇಂಥ ಯೋಚನೆಗಳು ಯೆಹೋವನ ಜೊತೆಗಿರೋ ನಮ್ಮ ಸಂಬಂಧನ ಹಾಳುಮಾಡುತ್ತೆ. ಆದ್ರೆ ಶಿರಸ್ತ್ರಾಣದ ತರ ಇರೋ ನಿರೀಕ್ಷೆ ಈ ರೀತಿಯ ಯೋಚನೆಗಳು ಬರದೇ ಇರೋ ಹಾಗೆ ನಮ್ಮನ್ನ ಕಾಪಾಡುತ್ತೆ.—1 ಕೊರಿಂ. 15:33, 34.

10. ಯಾವ ತರದ ಯೋಚನೆಗಳು ಬರದಿರೋ ಹಾಗೆ ನಿರೀಕ್ಷೆ ನಮ್ಮನ್ನ ಕಾಪಾಡುತ್ತೆ?

10 ಕೆಲವರು ‘ನನಗೆ ಶಾಶ್ವತ ಜೀವ ಪಡಕೊಳ್ಳೋ ಯೋಗ್ಯತೆ ಇಲ್ಲ, ಯೆಹೋವನಿಗೆ ಇಷ್ಟ ಆಗೋ ತರ ನಡಕೊಳ್ಳೋಕೆ ಆಗುತ್ತೋ ಇಲ್ವೋ’ ಅಂತೆಲ್ಲಾ ಮಾತಾಡಿರೋದನ್ನ ನೀವು ಕೇಳಿಸಿಕೊಂಡಿರಬಹುದು. ಒಂದುವೇಳೆ ಇಂಥ ಯೋಚನೆ ನಮ್ಮ ಮನಸ್ಸಿಗೆ ಬಂದುಬಿಟ್ಟರೆ ಯೆಹೋವನನ್ನು ಮೆಚ್ಚಿಸೋ ಆಸೆನೇ ಹೋಗಿಬಿಡುತ್ತೆ. ಆದರೆ ನಿರೀಕ್ಷೆ ಅನ್ನೋ ಶಿರಸ್ತ್ರಾಣ ಇಂಥ ಯೋಚನೆ ನಮ್ಮಲ್ಲಿ ಬರದಿರೋ ತರ ನೋಡಿಕೊಳ್ಳುತ್ತೆ. ಯೋಬನಿಗೆ ಎಲೀಫಜ, “ಇವತ್ತು ಇದ್ದು ನಾಳೆ ಸಾಯೋ ಮನುಷ್ಯ ತಪ್ಪು ಮಾಡದೇ ಇರೋಕೆ ಆಗುತ್ತಾ?” ದೇವರಿಗೆ “ತನ್ನ ದೇವದೂತರಲ್ಲಿ ನಂಬಿಕೆ ಇಲ್ಲ, ಸ್ವರ್ಗ ಸಹ ಆತನ ದೃಷ್ಟಿಯಲ್ಲಿ ಪರಿಶುದ್ಧ ಅಲ್ಲ” ಅಂತ ಹೇಳಿಬಿಟ್ಟ. (ಯೋಬ 15:14, 15) ಆದ್ರೆ ಅವನು ಹೇಳಿದ್ದೆಲ್ಲ ಶುದ್ಧ ಸುಳ್ಳು. ನಾವು ದೇವರ ಬಗ್ಗೆ ಈ ತರ ತಪ್ಪು ತಿಳಿದುಕೊಳ್ಳಬೇಕು ಅನ್ನೋದೇ ಸೈತಾನನ ಆಸೆ. ನಾವು ಈ ತರ ಯೋಚನೆ ಮಾಡ್ತಾ ಇದ್ರೆ ಒಂದಲ್ಲ ಒಂದಿನ ನಮ್ಮ ಮನಸ್ಸಲ್ಲಿರೋ ನಿರೀಕ್ಷೆ ಮಾಸಿಹೋಗುತ್ತೆ ಅಂತ ಅವನಿಗೆ ಚೆನ್ನಾಗಿ ಗೊತ್ತು. ಹಾಗಾಗಿ ನಾವು ಇಂಥ ಸುಳ್ಳುಗಳಿಗೆ ಗಮನ ಕೊಡೋಕೇ ಹೋಗಬಾರದು. ದೇವರ ಮಾತಿನ ಮೇಲೆ ನಂಬಿಕೆ ಇಡಬೇಕು. ಯಾಕಂದ್ರೆ ನಾವು ಶಾಶ್ವತ ಜೀವ ಪಡಕೊಳ್ಳಬೇಕು ಅನ್ನೋದೇ ದೇವರ ಆಸೆ. ಆ ಗುರಿಯನ್ನ ಮುಟ್ಟೋಕೆ ಆತನು ನಮಗೆ ಖಂಡಿತ ಸಹಾಯ ಮಾಡ್ತಾನೆ.—1 ತಿಮೊ. 2:3, 4.

ನಿಮ್ಮ ನಿರೀಕ್ಷೆಯನ್ನ ಬಲವಾಗಿ ಇಟ್ಟುಕೊಳ್ಳಿ

11. ನಮ್ಮ ನಿರೀಕ್ಷೆ ನಿಜ ಆಗೋ ತನಕ ನಾವು ಯಾಕೆ ತಾಳ್ಮೆಯಿಂದ ಇರಬೇಕು?

11 ನಮ್ಮ ನಿರೀಕ್ಷೆನ ಯಾವಾಗಲೂ ಬಲವಾಗಿ ಇಟ್ಟುಕೊಳ್ಳೋದು ಅಷ್ಟೊಂದು ಸುಲಭ ಅಲ್ಲ. ಕೆಲವೊಮ್ಮೆ ‘ಯೆಹೋವ ಹೇಳಿರೋದೆಲ್ಲ ಇನ್ನೂ ಯಾಕೆ ನಡೆದಿಲ್ಲ’ ಅಂತ ನಮಗೆ ಅನಿಸಬಹುದು. ಇದರಿಂದ ನಾವು ತಾಳ್ಮೆ ಕಳಕೊಂಡು ಬಿಡಬಹುದು. ಆದ್ರೆ ಯೆಹೋವ ಶಾಶ್ವತವಾಗಿ ಇರೋ ದೇವರು. ಆತನು ಯೋಚನೆ ಮಾಡೋ ರೀತಿಗೂ ನಾವು ಯೋಚನೆ ಮಾಡೋ ರೀತಿಗೂ ತುಂಬ ವ್ಯತ್ಯಾಸ ಇದೆ. (2 ಪೇತ್ರ 3:8, 9) ಆತನಿಗೆ ಯಾವಾಗ ಏನು ಮಾಡಬೇಕು ಅಂತ ನಮಗಿಂತ ಚೆನ್ನಾಗಿ ಗೊತ್ತು. ಹಾಗಾಗಿ ನಾವು ನೆನಸೋ ಸಮಯದಲ್ಲಿ ಕೆಲವು ವಿಷಯಗಳು ಆಗದೆ ಇರಬಹುದು. ಆದ್ರೆ ನಾವು ನಿರೀಕ್ಷೆ ಮತ್ತು ತಾಳ್ಮೆಯನ್ನ ಕಳಕೊಳ್ಳದೆ ಇರೋಕೆ ಏನು ಮಾಡಬೇಕು?—ಯಾಕೋ. 5:7, 8.

12. ಇಬ್ರಿಯ 11:1, 6 ಹೇಳೋ ತರ ನಮ್ಮ ನಿರೀಕ್ಷೆಗೂ ನಂಬಿಕೆಗೂ ಏನು ಸಂಬಂಧ?

12 ನಮ್ಮ ನಿರೀಕ್ಷೆ ಬಲವಾಗಿ ಇರಬೇಕಂದ್ರೆ ನಾವು ಯೆಹೋವನಿಗೆ ಹತ್ರ ಆಗಬೇಕು. ಯಾಕಂದ್ರೆ ಆ ನಿರೀಕ್ಷೆಯನ್ನ ಕೊಟ್ಟಿರೋದೇ ಯೆಹೋವ. ನಮ್ಮ ನಿರೀಕ್ಷೆಗೂ ಆತನ ಮೇಲೆ ನಾವು ಇಟ್ಟಿರೋ ನಂಬಿಕೆಗೂ ಸಂಬಂಧ ಇದೆ. ಹಾಗಾಗಿ ನಮ್ಮ ನಿರೀಕ್ಷೆ ಬಲವಾಗಿ ಇರಬೇಕಂದ್ರೆ ಯೆಹೋವ ಇದ್ದಾನೆ ಮತ್ತು “ಆತನನ್ನ ಶ್ರದ್ಧೆಯಿಂದ ಆರಾಧಿಸೋರನ್ನ ಆತನು ಆಶೀರ್ವದಿಸ್ತಾನೆ” ಅಂತ ಪೂರ್ತಿಯಾಗಿ ನಂಬಬೇಕು. (ಇಬ್ರಿಯ 11:1, 6 ಓದಿ.) ಯೆಹೋವ ನಿಜವಾಗಲೂ ಇದ್ದಾನೆ ಅಂತ ನಾವು ನಂಬಿದ್ರೆ ಆತನು ಹೇಳಿರೋದನ್ನೆಲ್ಲ ಮಾಡೇ ಮಾಡ್ತಾನೆ ಅಂತನೂ ನಂಬುತ್ತೀವಿ. ಹಾಗಾದ್ರೆ ನಾವು ಯೆಹೋವನಿಗೆ ಹತ್ರ ಆಗೋದು ಹೇಗೆ ಅಂತ ಈಗ ನೋಡೋಣ.

ಪ್ರಾರ್ಥನೆ ಮಾಡೋದರಿಂದ ಮತ್ತು ಧ್ಯಾನಿಸೋದರಿಂದ ನಮ್ಮ ನಿರೀಕ್ಷೆ ಬಲವಾಗುತ್ತೆ (ಪ್ಯಾರ 13-15 ನೋಡಿ) b

13. ನಾವು ಯೆಹೋವನಿಗೆ ಹತ್ರ ಆಗೋಕೆ ಏನು ಮಾಡಬೇಕು?

13 ಪ್ರಾರ್ಥನೆ ಮಾಡಿ, ಬೈಬಲ್‌ ಓದಿ. ನಾವು ಯೆಹೋವನನ್ನು ನೋಡಕ್ಕಾಗಲ್ಲ ನಿಜ. ಆದ್ರೆ ಆತನಿಗೆ ಹತ್ರ ಆಗಬಹುದು. ನಾವು ಪ್ರಾರ್ಥನೆ ಮಾಡುವಾಗ ಆತನ ಜೊತೆ ಮಾತಾಡುತ್ತೀವಿ. ಯೆಹೋವ ನಮ್ಮ ಪ್ರಾರ್ಥನೆಗಳನ್ನ ಖಂಡಿತ ಕೇಳ್ತಾನೆ. (ಯೆರೆ. 29:11, 12) ನಾವು ಬೈಬಲ್‌ ಓದಿದಾಗ ಆತನು ನಮ್ಮ ಹತ್ರ ಮಾತಾಡಿದ ಹಾಗಿರುತ್ತೆ. ಹಾಗಾಗಿ ನಾವು ಅದನ್ನ ಓದಬೇಕು, ಓದಿದ್ದರ ಬಗ್ಗೆ ಯೋಚನೆ ಮಾಡಬೇಕು. ಯೆಹೋವನು ತನಗೆ ನಿಯತ್ತಾಗಿದ್ದ ಜನರನ್ನ ಎಷ್ಟು ಚೆನ್ನಾಗಿ ನೋಡಿಕೊಂಡನು ಅಂತ ಬೈಬಲ್‌ನಲ್ಲಿ ಇದೆ. ಇದನ್ನ ತಿಳುಕೊಂಡಾಗ ನಮ್ಮ ನಿರೀಕ್ಷೆ ಬಲವಾಗುತ್ತೆ. ಅಷ್ಟೇ ಅಲ್ಲ, ಬೈಬಲಲ್ಲಿ “ಬರೆದ ವಿಷ್ಯಗಳನ್ನೆಲ್ಲ ನಾವು ಕಲಿಬೇಕಂತ ಬರೆದ್ರು. ಈ ಪವಿತ್ರ ಬರಹಗಳು ತಾಳಿಕೊಳ್ಳೋಕೆ, ಸಾಂತ್ವನ ಪಡಿಯೋಕೆ ಸಹಾಯ ಮಾಡೋದ್ರಿಂದ ನಮಗೀಗ ನಿರೀಕ್ಷೆಯಿದೆ.”—ರೋಮ. 15:4.

14. ಯೆಹೋವ ತಾನು ಕೊಟ್ಟ ಮಾತನ್ನ ಹೇಗೆಲ್ಲಾ ಉಳಿಸಿಕೊಂಡಿದ್ದಾನೆ ಅಂತ ನಾವು ಯಾಕೆ ಯೋಚನೆ ಮಾಡಬೇಕು?

14 ಯೆಹೋವ ತಾನು ಕೊಟ್ಟ ಮಾತನ್ನ ಹೇಗೆಲ್ಲಾ ಉಳಿಸಿಕೊಂಡು ಬಂದಿದ್ದಾನೆ ಅಂತ ಯೋಚನೆ ಮಾಡಿ. ಅಬ್ರಹಾಮ ಮತ್ತು ಸಾರಳಿಗೆ ತುಂಬ ವಯಸ್ಸಾಗಿತ್ತು. ಅವರಿಗೆ ಮಕ್ಕಳಾಗೋ ಸಾಧ್ಯತೆನೇ ಇರಲಿಲ್ಲ. ಆದ್ರೂ ಯೆಹೋವ ಅವರಿಗೆ ‘ನಿಮಗೆ ಮಗು ಆಗುತ್ತೆ’ ಅಂತ ಮಾತುಕೊಟ್ಟನು. (ಆದಿ. 18:10) ಅದನ್ನ ಅಬ್ರಹಾಮ ನಂಬಿದನಾ? ಹೌದು, “ಆ ಮಾತು ನಿಜ ಆಗುತ್ತೆ ಅಂತ ಅವನು ಬಲವಾಗಿ ನಂಬಿದ” ಅಂತ ಬೈಬಲ್‌ ಹೇಳುತ್ತೆ. (ರೋಮ. 4:18) ಮನುಷ್ಯರ ದೃಷ್ಟಿಯಲ್ಲಿ ಇದೆಲ್ಲ ನಡಿಯಲ್ಲ ಅಂತ ಅನಿಸಬಹುದು. ಆದ್ರೆ ಯೆಹೋವ ದೇವರು ಒಂದು ಸಲ ಮಾತುಕೊಟ್ಟ ಮೇಲೆ ಅದನ್ನ ಮಾಡೇ ಮಾಡ್ತಾನೆ ಅಂತ ಅಬ್ರಹಾಮ ಪೂರ್ತಿಯಾಗಿ ನಂಬಿದ. ಅವನ ನಂಬಿಕೆ ಸುಳ್ಳಾಗಲಿಲ್ಲ. (ರೋಮ. 4:19-21) ಇಂಥ ಘಟನೆಗಳು ನಮಗೇನು ಕಲಿಸುತ್ತೆ? ಯೆಹೋವ ಏನಾದ್ರೂ ಮಾತು ಕೊಟ್ಟರೆ ಅದನ್ನ ಮಾಡಿ ತೋರಿಸೋ ಶಕ್ತಿ ಆತನಿಗಿದೆ ಅಂತ ಕಲಿಸುತ್ತೆ. ಇದ್ರಿಂದ ಆತನ ಮೇಲಿರೋ ಭರವಸೆ ಜಾಸ್ತಿಯಾಗುತ್ತೆ.

15. ಯೆಹೋವ ನಮಗೆ ಏನನ್ನೆಲ್ಲ ಮಾಡಿದ್ದಾನೋ ಅದರ ಬಗ್ಗೆ ನಾವು ಯಾಕೆ ಯೋಚನೆ ಮಾಡಬೇಕು?

15 ಯೆಹೋವ ದೇವರು ನಿಮಗೋಸ್ಕರ ಏನೆಲ್ಲ ಮಾಡಿದ್ದಾನೆ ಅಂತ ಯೋಚನೆ ಮಾಡಿ. ಯೆಹೋವ ತನ್ನ ಆರಾಧಕರಿಗೆ ಜೀವನ ನಡೆಸೋಕೆ ಬೇಕಾದ ವಿಷಯಗಳನ್ನ ಕೊಡ್ತಾನೆ ಅಂತ ಯೇಸು ಹೇಳಿದ್ದನು. (ಮತ್ತಾ. 6:32, 33) ಆತನನ್ನು ಬೇಡಿಕೊಳ್ಳುವವರಿಗೆ ಪವಿತ್ರ ಶಕ್ತಿ ಕೊಡ್ತಾನೆ ಅಂತಾನೂ ಹೇಳಿದ್ದನು. (ಲೂಕ 11:13) ಯೆಹೋವ ಕೂಡ ನಿಮ್ಮ ಪಾಪಗಳನ್ನ ಕ್ಷಮಿಸ್ತೀನಿ, ಕಷ್ಟ ಬಂದಾಗ ಧೈರ್ಯ ತುಂಬಿ ಸಮಾಧಾನ ಮಾಡ್ತೀನಿ ಮತ್ತು ನನ್ನ ಜೊತೆ ಒಳ್ಳೇ ಸಂಬಂಧ ಕಾಪಾಡಿಕೊಳ್ಳೋಕೆ ಸಹಾಯ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ. (ಮತ್ತಾ. 6:14; 24:45; 2 ಕೊರಿಂ. 1:3) ಆತನು ಹೇಳಿರೋದೆಲ್ಲ ನಮ್ಮ ಜೀವನದಲ್ಲಿ ನಿಜ ಆಗಿದೆ. ಇದರ ಬಗ್ಗೆ ನಾವು ಯೋಚಿಸುವಾಗ ಮುಂದೆ ಕೂಡ ತಾನು ಕೊಟ್ಟ ಮಾತನ್ನ ಆತನು ಖಂಡಿತ ಉಳಿಸಿಕೊಳ್ತಾನೆ ಅನ್ನೋ ನಂಬಿಕೆ ನಮಗೆ ಜಾಸ್ತಿ ಆಗುತ್ತೆ.

ನಿರೀಕ್ಷೆಗಾಗಿ ಖುಷಿಪಡಿ

16. ನಿರೀಕ್ಷೆಯನ್ನ ಒಂದು ಬೆಲೆಕಟ್ಟಲಾಗದ ಉಡುಗೊರೆ ಅಂತ ನಾವು ಯಾಕೆ ಹೇಳ್ತೀವಿ?

16 ಶಾಶ್ವತ ಜೀವದ ನಿರೀಕ್ಷೆ ಯೆಹೋವ ದೇವರು ನಮಗೆ ಕೊಟ್ಟಿರೋ ಉಡುಗೊರೆ. ಅದಕ್ಕೆ ನಾವು ಬೆಲೆಕಟ್ಟಕ್ಕಾಗಲ್ಲ. ಏನೇ ಆದ್ರೂ ಈ ನಿರೀಕ್ಷೆ ಸುಳ್ಳಾಗಲ್ಲ. ಇದು ಲಂಗರದ ತರ ಇದೆ. ನಮಗೆ ಕಷ್ಟ ಬರಲಿ, ಹಿಂಸೆ ಬರಲಿ, ಸಾವೇ ನಮ್ಮ ಮುಂದೆ ಬಂದ್ರೂ ನಾವು ಧೈರ್ಯವಾಗಿ ಇರುತ್ತೀವಿ. ಈ ನಿರೀಕ್ಷೆ ಶಿರಸ್ತ್ರಾಣದ ತರ ಇದೆ. ಅದು ನಾವು ಕೆಟ್ಟದನ್ನ ಯೋಚನೆ ಮಾಡದೆ ಯಾವಾಗಲೂ ಒಳ್ಳೇದನ್ನೇ ಯೋಚನೆ ಮಾಡೋಕೆ ಸಹಾಯ ಮಾಡುತ್ತೆ. ಈ ನಿರೀಕ್ಷೆ ನಮ್ಮನ್ನ ಆತನ ಹತ್ರಕ್ಕೆ ಸೆಳೆಯುತ್ತೆ ಮತ್ತು ಆತನು ನಮ್ಮನ್ನೆಷ್ಟು ಪ್ರೀತಿಸ್ತಾನೆ ಅಂತ ತೋರಿಸಿಕೊಡುತ್ತೆ. ಹಾಗಾಗಿ ನಮ್ಮ ನಿರೀಕ್ಷೆಯನ್ನ ಗಟ್ಟಿಯಾಗಿ ಇಟ್ಟುಕೊಳ್ಳೋಣ, ಬಲವಾಗಿ ಇಟ್ಟುಕೊಳ್ಳೋಣ.

17. ನಾವು ಯಾಕೆ ಖುಷಿಯಾಗಿ ಇದ್ದೀವಿ?

17 “ನಿರೀಕ್ಷೆ ಇರೋದ್ರಿಂದ ಖುಷಿಪಡಿ” ಅಂತ ಅಪೊಸ್ತಲ ಪೌಲ ರೋಮನ್ನರಿಗೆ ಪತ್ರದಲ್ಲಿ ಬರೆದ. (ರೋಮ. 12:12) ಪೌಲ ಯಾಕೆ ಅಷ್ಟು ಖುಷಿಯಾಗಿದ್ದ? ಯಾಕಂದ್ರೆ, ಯೆಹೋವನನ್ನು ನಂಬಿದ್ರೆ ಸ್ವರ್ಗದಲ್ಲಿ ತನಗೆ ಶಾಶ್ವತ ಜೀವ ಸಿಗುತ್ತೆ ಅಂತ ಅವನಿಗೆ ಚೆನ್ನಾಗಿ ಗೊತ್ತಿತ್ತು. ಯೆಹೋವ ಕೊಟ್ಟ ಮಾತನ್ನ ಖಂಡಿತ ಉಳಿಸಿಕೊಳ್ತಾನೆ ಅಂತ ಗೊತ್ತಿರೋದರಿಂದ ನಾವು ಕೂಡ ಖುಷಿಯಾಗಿ ಇದ್ದೀವಿ. “ಯೆಹೋವನ ಮೇಲೆ ನಿರೀಕ್ಷೆ ಇಡೋರು ಭಾಗ್ಯವಂತರು. . . . [ಯಾಕಂದ್ರೆ] ಆತನು ಯಾವಾಗ್ಲೂ ನಂಬಿಗಸ್ತನಾಗೇ ಇರ್ತಾನೆ” ಅಂತ ಕೀರ್ತನೆಗಾರ ಹೇಳಿದ ಮಾತು ಎಷ್ಟು ನಿಜ ಅಲ್ವಾ!—ಕೀರ್ತ. 146:5, 6.

ಗೀತೆ 134 ಸರ್ವವೂ ನೂತನವಾಗುವಾಗ ನಿನ್ನನ್ನು ನೋಡು

a ಭವಿಷ್ಯದ ಬಗ್ಗೆ ಅದ್ಭುತವಾದ ನಿರೀಕ್ಷೆಯನ್ನ ಯೆಹೋವ ದೇವರು ನಮಗೆ ಕೊಟ್ಟಿದ್ದಾನೆ. ಈ ನಿರೀಕ್ಷೆ, ನಮಗೆ ಏನೇ ಕಷ್ಟ ಬಂದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಇರೋಕೆ, ಯೆಹೋವನನ್ನು ನಿಷ್ಠೆಯಿಂದ ಸೇವೆ ಮಾಡೋಕೆ ನಮ್ಮಲ್ಲಿ ಬಲ ತುಂಬುತ್ತೆ. ಅಷ್ಟೇ ಅಲ್ಲ, ನಮ್ಮ ನಿರೀಕ್ಷೆಯನ್ನ ಕಳಕೊಳ್ಳೋ ತರ ಮಾಡೋ ಕೆಟ್ಟ ಯೋಚನೆಗಳಿಂದ ನಮ್ಮನ್ನ ಕಾಪಾಡುತ್ತೆ. ಅದಕ್ಕೆ ನಾವು ನಮ್ಮ ನಿರೀಕ್ಷೆ ಗಟ್ಟಿಯಾಗಿ ಇಟ್ಟುಕೊಳ್ಳಬೇಕು.

b ಚಿತ್ರ ವಿವರಣೆ: ಒಂದು ಶಿರಸ್ತ್ರಾಣ ಹೇಗೆ ಸೈನಿಕನ ತಲೆಯನ್ನ ಕಾಪಾಡುತ್ತೋ ಹಾಗೇ ನಿರೀಕ್ಷೆ ನಮ್ಮ ಯೋಚನೆಯನ್ನ ಕಾಪಾಡುತ್ತೆ. ಒಂದು ಲಂಗರ ಹೇಗೆ ಹಡಗನ್ನ ಹಿಡಿದಿಟ್ಟುಕೊಳ್ಳುತ್ತೋ ಹಾಗೇ ನಿರೀಕ್ಷೆ ನಮಗೆ ಕಷ್ಟಗಳು ಬಂದಾಗ ನಾವು ಬಿದ್ದುಹೋಗದೆ ಇರೋ ಹಾಗೆ ನಮ್ಮನ್ನ ಹಿಡಿದಿಟ್ಟುಕೊಳ್ಳುತ್ತೆ. ಒಬ್ಬ ಸಹೋದರಿ, ಯೆಹೋವನ ಮೇಲೆ ನಂಬಿಕೆ ಇಟ್ಟು ಪ್ರಾರ್ಥನೆ ಮಾಡ್ತಿದ್ದಾಳೆ. ಯೆಹೋವ ತಾನು ಅಬ್ರಹಾಮನಿಗೆ ಕೊಟ್ಟ ಮಾತನ್ನ ಹೇಗೆ ಉಳಿಸಿಕೊಂಡ ಅನ್ನೋದರ ಬಗ್ಗೆ ಒಬ್ಬ ಸಹೋದರ ಯೋಚನೆ ಮಾಡ್ತಿದ್ದಾನೆ. ಇನ್ನೊಬ್ಬ ಸಹೋದರ, ಯೆಹೋವ ತನ್ನನ್ನ ಹೇಗೆಲ್ಲಾ ಆಶೀರ್ವದಿಸಿದ್ದಾನೆ ಅನ್ನೋದರ ಬಗ್ಗೆ ಯೋಚನೆ ಮಾಡ್ತಿದ್ದಾನೆ.