ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆರೂಸಲೇಮಿಗೆ ಮುತ್ತಿಗೆ ಹಾಕಲಾಗುತ್ತದೆಂದು ಯೆಹೆಜ್ಕೇಲನು ನಟಿಸಿ ತೋರಿಸಿದನು

ಪ್ರವಾದಿಗಳ ಮನೋಭಾವವನ್ನು ಅನುಕರಿಸಿ

ಪ್ರವಾದಿಗಳ ಮನೋಭಾವವನ್ನು ಅನುಕರಿಸಿ

ನಮಗೂ ಪ್ರವಾದಿಗಳಿಗೂ ಏನಾದರೂ ಹೋಲಿಕೆ ಇದೆಯಾ? 2013⁠ರ ನೂತನ ಲೋಕ ಭಾಷಾಂತರದ “ಗ್ಲಾಸರಿ ಆಫ್‌ ಬೈಬಲ್‌ ಟರ್ಮ್ಸ್‌” ಎಂಬ ಭಾಗದಲ್ಲಿ ಪ್ರವಾದಿ ಎಂಬ ಪದಕ್ಕೆ ಈ ಅರ್ಥವನ್ನು ಕೊಡಲಾಗಿದೆ: “ದೇವರ ಉದ್ದೇಶಗಳನ್ನು ತಿಳಿಸುವಂಥ ವ್ಯಕ್ತಿ. ಅವರು ದೇವರ ಪ್ರತಿನಿಧಿಗಳಾಗಿ ಮುಂದೆ ಹೀಗಾಗುತ್ತದೆ ಎಂದು ಹೇಳುವುದರ ಜೊತೆಗೆ ಯೆಹೋವ ದೇವರ ಬೋಧನೆಗಳನ್ನು, ಆಜ್ಞೆಗಳನ್ನು ಮತ್ತು ನ್ಯಾಯತೀರ್ಪಿನ ಸಂದೇಶವನ್ನು ತಿಳಿಸಿದ್ದಾರೆ.” ನಾವು ಅವರಂತೆ ಪ್ರವಾದನೆಗಳನ್ನು ಹೇಳದೇ ಇದ್ದರೂ ದೇವರ ವಾಕ್ಯದಲ್ಲಿರುವ ವಿಷಯಗಳನ್ನು ಇತರರಿಗೆ ತಿಳಿಸುವ ಮೂಲಕ ಯೆಹೋವ ದೇವರ ಪ್ರತಿನಿಧಿಗಳಾಗಿದ್ದೇವೆ.—ಮತ್ತಾ. 24:14.

ಯೆಹೋವನ ಬಗ್ಗೆ ಮತ್ತು ಮಾನವರಿಗಾಗಿರುವ ಆತನ ಉದ್ದೇಶದ ಬಗ್ಗೆ ಇತರರಿಗೆ ತಿಳಿಸುವುದು ನಿಜವಾಗಿಯೂ ನಮಗಿರುವ ಒಂದು ದೊಡ್ಡ ಸುಯೋಗ! ಈ ಕೆಲಸದಲ್ಲಿ ನಾವು ‘ಆಕಾಶಮಧ್ಯದಲ್ಲಿ ಹಾರುತ್ತಿರುವ ದೇವದೂತನೊಂದಿಗೆ’ ಕೈಜೋಡಿಸಿದ್ದೇವೆ. (ಪ್ರಕ. 14:6) ಆದರೆ ಸವಾಲುಗಳನ್ನು ಎದುರಿಸುವಾಗ ಈ ಸುಯೋಗದ ಕಡೆಗಿನ ನಮ್ಮ ಗಣ್ಯತೆ ಕಡಿಮೆಯಾಗಬಹುದು. ಆಯಾಸ, ನಿರುತ್ಸಾಹ, ಅಯೋಗ್ಯರೆನ್ನುವ ಭಾವನೆ ಅವುಗಳಲ್ಲಿ ಕೆಲವು. ಇಂತಹ ಸವಾಲುಗಳು ಬೈಬಲ್‌ ಕಾಲದ ಪ್ರವಾದಿಗಳಿಗೆ ಸಹ ಬಂದವು. ಆದರೆ ಅವರು ಅವುಗಳನ್ನು ಜಯಿಸಿದರು. ನೇಮಕಗಳನ್ನು ಪೂರೈಸಲು ಯೆಹೋವನು ಅವರಿಗೆ ನೆರವು ನೀಡಿದನು. ಈಗ ಅಂಥ ಕೆಲವು ಪ್ರವಾದಿಗಳ ಉದಾಹರಣೆಗಳನ್ನು ಪರಿಗಣಿಸುತ್ತಾ ಅವರನ್ನು ನಾವು ಹೇಗೆ ಅನುಕರಿಸಬಹುದೆಂದು ನೋಡೋಣ.

ಹುರುಪಿನಿಂದ ತಮ್ಮನ್ನೇ ನೀಡಿಕೊಂಡರು

ಕೆಲವೊಮ್ಮೆ ನಮ್ಮ ದಿನನಿತ್ಯದ ಕೆಲಸಗಳಿಂದಾಗಿ ಬಳಲಿ, ಸೇವೆಗೆ ಹೋಗಲು ಹಿಂದೇಟು ಹಾಕಬಹುದು. ಖಂಡಿತ ನಮ್ಮೆಲ್ಲರಿಗೂ ವಿಶ್ರಾಂತಿಯ ಅಗತ್ಯವಿದೆ. ಯೇಸು ಮತ್ತು ಅಪೊಸ್ತಲರು ಕೂಡ ವಿಶ್ರಾಂತಿ ಪಡೆದರು. (ಮಾರ್ಕ 6:31) ಆದರೆ ಬಾಬೆಲಿನಲ್ಲಿದ್ದ ಪ್ರವಾದಿ ಯೆಹೆಜ್ಕೇಲನನ್ನು ಗಮನಿಸಿ. ಇಸ್ರಾಯೇಲ್ಯರು ಅಲ್ಲಿ ಸೆರೆಯಾಳುಗಳಾಗಿದ್ದರು. ಅವರಿಗೆ ಒಂದು ವಿಷಯವನ್ನು ತಿಳಿಸುವ ನೇಮಕವನ್ನು ಯೆಹೆಜ್ಕೇಲನಿಗೆ ಕೊಡಲಾಯಿತು. ದೇವರು ಅವನಿಗೆ ಒಂದು ಕಲ್ಲನ್ನು ತೆಗೆದುಕೊಂಡು ಅದರ ಮೇಲೆ ಯೆರೂಸಲೇಮಿನ ನಕ್ಷೆಯನ್ನು ಕೆತ್ತುವಂತೆ ತಿಳಿಸಿದನು. ಆ ನಕ್ಷೆಯ ಕಡೆಗೆ ಮುಖಮಾಡಿ 390 ದಿನಗಳವರೆಗೆ ತನ್ನ ಎಡ ಮಗ್ಗುಲಲ್ಲಿ ಮಲಗಿಕೊಳ್ಳಬೇಕಿತ್ತು. ನಂತರದ 40 ದಿನ ಬಲ ಮಗ್ಗುಲಲ್ಲಿ ಮಲಗಿಕೊಳ್ಳಬೇಕಿತ್ತು. ಹೀಗೆ ಅವನು ಯೆರೂಸಲೇಮಿನ ಆಕ್ರಮಣವನ್ನು ಸಾಂಕೇತಿಕವಾಗಿ ಮಾಡಿ ತೋರಿಸಬೇಕಿತ್ತು. ಹಾಗಾಗಿ, ಯೆಹೋವನು ಯೆಹೆಜ್ಕೇಲನಿಗೆ, “ಇಗೋ, ನಿನ್ನ ಮುತ್ತಿಗೆಯ ದಿನಗಳು ತೀರುವ ತನಕ ನೀನು ಬಲಮಗ್ಗುಲಿಂದ ಎಡಮಗ್ಗುಲಿಗೆ ಹೊರಳದಂತೆ ನಿನ್ನನ್ನು ಬಂಧಿಸುವೆನು” ಎಂದು ಹೇಳಿದನು. (ಯೆಹೆ. 4:1-8) ಈ ವಿಷಯ ಸೆರೆಯಾಳುಗಳಾಗಿದ್ದ ಇಸ್ರಾಯೇಲ್ಯರ ಗಮನವನ್ನು ಸೆಳೆದಿರಬೇಕು. ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರತಿದಿನ ಈ ಕಠಿಣ ನೇಮಕವನ್ನು ಅವನು ಮಾಡಬೇಕಿತ್ತು. ಯೆಹೆಜ್ಕೇಲನು ಇದನ್ನು ಹೇಗೆ ಮಾಡಿದನು?

ದೇವರು ತನ್ನನ್ನು ಪ್ರವಾದಿಯಾಗಿ ಯಾಕೆ ಕಳುಹಿಸಿದ್ದಾನೆ ಎಂದು ಯೆಹೆಜ್ಕೇಲನು ಅರ್ಥಮಾಡಿಕೊಂಡಿದ್ದನು. ಯೆಹೋವ ದೇವರು ಆತನನ್ನು ಕಳುಹಿಸುವಾಗ ಹೇಳಿದ್ದು: “ಅವರು [ಇಸ್ರಾಯೇಲ್ಯರು] . . .  ಕೇಳಿದರೂ ಕೇಳದೆ ಹೋದರೂ ಒಬ್ಬ ಪ್ರವಾದಿಯು ತಮ್ಮ ಮಧ್ಯದಲ್ಲಿ ಕಾಣಿಸಿಕೊಂಡಿದ್ದಾನೆಂದು ತಿಳಿದೇ ಇರುವರು.” (ಯೆಹೆ. 2:5) ತನ್ನ ನೇಮಕದ ಉದ್ದೇಶವನ್ನು ಯೆಹೆಜ್ಕೇಲನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದನು. ಯೆರೂಸಲೇಮಿನ ಬಂಧನವನ್ನು ಸೂಚಿಸುವಂಥ ವಿಷಯಗಳನ್ನು ಮನಪೂರ್ವಕವಾಗಿ ಮಾಡಿ ತಾನೊಬ್ಬ ನಿಜ ಪ್ರವಾದಿ ಎಂದು ತೋರಿಸಿದನು. “ಪಟ್ಟಣವು ಶತ್ರುವಶವಾಯಿತು” ಎಂಬ ವಿಷಯ ಯೆಹೆಜ್ಕೇಲ ಮತ್ತವನ ಜೊತೆ ಸೆರೆಯಾಳುಗಳಿಗೆ ಮುಟ್ಟಿತು. ಆಗ ತಮ್ಮ ಮಧ್ಯದಲ್ಲಿ ಒಬ್ಬ ಪ್ರವಾದಿ ಇದ್ದಾನೆಂದು ಇಸ್ರಾಯೇಲ್ಯರು ಮನಗಂಡರು.—ಯೆಹೆ. 33:21, 33.

ಸೈತಾನನ ಲೋಕದ ನಾಶನದ ಬಗ್ಗೆ ಇಂದು ನಾವು ಜನರಿಗೆ ಎಚ್ಚರಿಸುತ್ತಿದ್ದೇವೆ. ನಮಗೆ ಆಯಾಸವಾಗುವುದಾದರೂ ಸುವಾರ್ತೆ ಸಾರಲು, ಪುನರ್ಭೇಟಿ ಮತ್ತು ಬೈಬಲ್‌ ಅಧ್ಯಯನಗಳನ್ನು ಮಾಡಲು ನಮ್ಮ ಶಕ್ತಿಯನ್ನು ಉಪಯೋಗಿಸುತ್ತೇವೆ. ಕಡೇ ದಿವಸಗಳ ಕುರಿತ ಪ್ರವಾದನೆಗಳು ನೆರವೇರುತ್ತಿರುವಾಗ ‘ದೇವರ ಉದ್ದೇಶಗಳನ್ನು ತಿಳಿಸುವಂಥ ವ್ಯಕ್ತಿಗಳಲ್ಲಿ’ ನಾವೂ ಒಬ್ಬರು ಎಂಬ ತೃಪ್ತಿ ನಮಗಿದೆ.

ನಿರುತ್ಸಾಹವನ್ನು ಜಯಿಸಿದರು

ಯೆಹೋವ ದೇವರ ಪವಿತ್ರಾತ್ಮದ ನೆರವಿನಿಂದ ನಾವು ಉತ್ಸಾಹದಿಂದ ಸೇವೆ ಮಾಡುತ್ತೇವೆ. ಆದರೆ ಜನರು ಸುವಾರ್ತೆಗೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸದಿದ್ದಾಗ ನಾವು ಬೇಸರಗೊಳ್ಳಬಹುದು. ಇಂಥ ಸಂದರ್ಭದಲ್ಲಿ ಯೆರೆಮೀಯನ ಮಾದರಿ ನಮಗೆ ಉತ್ತೇಜನ ನೀಡುತ್ತದೆ. ದೇವರು ಹೇಳಿದ ಸಂದೇಶವನ್ನು ಅವನು ಇಸ್ರಾಯೇಲ್ಯರಿಗೆ ತಿಳಿಸಿದಾಗ ಅವರು ಅವನನ್ನು ಅಪಹಾಸ್ಯ ಮಾಡಿದರು. ಆಗ ಅವನಿಗೆ ಎಷ್ಟು ಬೇಸರವಾಯಿತೆಂದರೆ “ನಾನು ಯೆಹೋವನ ವಿಷಯವನ್ನು ಪ್ರಕಟಿಸೆನು, ಆತನ ಹೆಸರಿನಲ್ಲಿ ಇನ್ನು ಮಾತಾಡೆನು” ಎಂದು ಹೇಳಿದನು. ಯೆರೆಮೀಯನು ನಮ್ಮಂಥ ಭಾವನೆಗಳಿದ್ದ ವ್ಯಕ್ತಿಯಾಗಿದ್ದನು. ಆದರೂ ದೇವರ ಸಂದೇಶವನ್ನು ಸಾರುತ್ತಾ ಮುಂದುವರಿದನು. ಇದಕ್ಕೆ ಸ್ವತಃ ಅವನೇ ಕಾರಣ ಕೊಡುತ್ತಾ ಹೀಗಂದನು: “ಉರಿಯುವ ಬೆಂಕಿಯು ನನ್ನ ಎಲುಬುಗಳಲ್ಲಿ ಅಡಕವಾಗಿದೆಯೋ ಎಂಬಂತೆ ನನ್ನ ಹೃದಯದಲ್ಲಿ ಸಂಕಟವಾಗುತ್ತದೆ; ತಡೆದು ತಡೆದು ಆಯಾಸಗೊಂಡಿದ್ದೇನೆ, ಸಹಿಸಲಾರೆ.”—ಯೆರೆ. 20:7-9.

ಜನರು ಸುವಾರ್ತೆಗೆ ಒಳ್ಳೆಯ ರೀತಿಯಲ್ಲಿ ಪ್ರತಿಕ್ರಿಯಿಸದಿದ್ದಾಗ ನಮಗೆ ಬೇಸರವಾಗುವುದು ಸಹಜ. ಆದರೆ ಸಾರುವ ಸಂದೇಶದ ಕುರಿತು ಮನನ ಮಾಡುವ ಮೂಲಕ ನಾವು ಪುನಃ ಉತ್ಸಾಹವನ್ನು ಪಡೆಯಬಹುದು. ಆಗ ಆ ಸಂದೇಶ ‘ನಮ್ಮ ಎಲುಬುಗಳಲ್ಲಿ ಉರಿಯುವ ಬೆಂಕಿಯಂತಿರುವುದು.’ ಪ್ರತಿದಿನ ಬೈಬಲ್‌ ಓದುವ ಮೂಲಕ ಈ ಬೆಂಕಿ ಆರಿಹೋಗದಂತೆ ನೋಡಿಕೊಳ್ಳಬಹುದು.

ನಕರಾತ್ಮಕ ಮನೋಭಾವವನ್ನು ಜಯಿಸಿದರು

ಒಂದು ಹೊಸ ನೇಮಕವನ್ನು ಯಾಕೆ ಕೊಟ್ಟಿದ್ದಾರೆ, ಅದನ್ನು ಹೇಗೆ ಮಾಡುವುದು ಎಂದು ಗೊತ್ತಾಗದಿದ್ದಾಗ ಕೆಲವರಿಗೆ ಆಕಾಶನೇ ತಲೆ ಮೇಲೆ ಬಿದ್ದಂತಾಗುತ್ತದೆ. ಇದೇ ರೀತಿ ಪ್ರವಾದಿ ಹೋಶೇಯನಿಗೂ ಅನಿಸಿರಬಹುದು. ಯೆಹೋವನು ಹೋಶೇಯನಿಗೆ ಆಜ್ಞಾಪಿಸಿದ್ದು: “ನೀನು ಹೋಗಿ ವ್ಯಭಿಚಾರಿಣಿಯನ್ನು ಮದುವೆಮಾಡಿಕೊಂಡು ವ್ಯಭಿಚಾರದಿಂದಾಗುವ ಮಕ್ಕಳನ್ನು ಸೇರಿಸಿಕೋ.” (ಹೋಶೇ. 1:2) ನೆನಸಿ, ನೀವು ಮದುವೆಯಾಗಬೇಕು ಅಂದುಕೊಂಡಿದ್ದೀರಿ. ಆಗ ದೇವರು ನಿಮಗೆ ಒಬ್ಬ ವೇಶ್ಯೆಯನ್ನು ಮದುವೆಯಾಗಬೇಕೆಂದು ಹೇಳಿದರೆ ಹೇಗನಿಸುತ್ತದೆ? ಇದನ್ನೇ ಯೆಹೋವ ದೇವರು ಹೋಶೇಯನಿಗೆ ಹೇಳಿದಾಗ ಅವನದನ್ನು ಮಾಡಿದನು! ಅವನು ಗೋಮೆರಳನ್ನು ಮದುವೆಯಾಗಿ ಒಬ್ಬ ಮಗನನ್ನು ಪಡೆದನು. ನಂತರ ಆಕೆಗೆ ಒಬ್ಬ ಮಗಳು, ಮತ್ತೊಬ್ಬ ಮಗ ಹುಟ್ಟಿದರು. ಈ ಇಬ್ಬರು ಮಕ್ಕಳು ಆಕೆಗೆ ವ್ಯಭಿಚಾರದಿಂದ ಹುಟ್ಟಿದ ಮಕ್ಕಳಾಗಿದ್ದರು. ಹೋಶೇಯನ ಹೆಂಡತಿ ‘ತನ್ನ ಮಿಂಡರ ಹಿಂದೆ ಹೋಗುವಳು’ ಎಂದು ಯೆಹೋವ ದೇವರು ಹೇಳಿದ್ದನು. ಗಮನಿಸಿ, ಇಲ್ಲಿ ‘ಮಿಂಡರ’ ಎಂದು ಬಹುವಚನ ಬಳಸಲಾಗಿದೆ. ಇದಾದ ಮೇಲೆ ಆಕೆ ಪುನಃ ಹೋಶೇಯನ ಬಳಿ ಮರಳಿ ಬರಲು ಬಯಸುತ್ತಾಳೆ. ಹೋಶೇಯನ ಸ್ಥಾನದಲ್ಲಿ ನೀವಿದ್ದಿದ್ದರೆ ಆಕೆಯನ್ನು ಪುನಃ ಸ್ವೀಕರಿಸುತ್ತಿದ್ದಿರಾ? ಯೆಹೋವನು ಹೋಶೇಯನಿಗೆ ಆಕೆಯನ್ನು ಸ್ವೀಕರಿಸುವಂತೆ ಹೇಳಿದನು. ಆಗ ಹೋಶೇಯನು ತುಂಬ ಹಣ ಕೊಟ್ಟು ಆಕೆಯನ್ನು ಖರೀದಿಸಿ, ಕರೆದುಕೊಂಡು ಬಂದನು.—ಹೋಶೇ. 2:7; 3:1-5.

ಈ ನೇಮಕವನ್ನು ಪೂರೈಸುವುದರಿಂದ ಏನು ಪ್ರಯೋಜನ ಎಂದು ಹೋಶೇಯನು ನೆನೆಸಿದ್ದಿರಬಹುದು. ಆದರೂ ಈ ನೇಮಕವನ್ನು ನಂಬಿಗಸ್ತಿಕೆಯಿಂದ ಚಾಚೂತಪ್ಪದೆ ಮಾಡಿದನು. ಇಸ್ರಾಯೇಲ್ಯರು ದ್ರೋಹಮಾಡಿದಾಗ ಯೆಹೋವನಿಗಾದ ನೋವು, ಸಂಕಟವನ್ನು ನಾವು ಅರ್ಥಮಾಡಿಕೊಳ್ಳಲು ಹೋಶೇಯನ ಉದಾಹರಣೆ ಸಹಾಯಮಾಡುತ್ತದೆ. ಯೆಹೋವನಿಂದ ದೂರ ಹೋದವರಲ್ಲಿ ಕೆಲವು ನಂಬಿಗಸ್ತ ಇಸ್ರಾಯೇಲ್ಯರು ಮತ್ತೆ ಯೆಹೋವನ ಬಳಿ ಬಂದರು.

ದೇವರು ಇಂದು ಯಾರಿಗೂ ‘ನೀನು ವೇಶ್ಯೆಯನ್ನು ಮದುವೆಮಾಡಿಕೊ’ ಅಂತ ಹೇಳುವುದಿಲ್ಲ. ಆದರೂ ಇಂತಹ ಕಷ್ಟಕರ ನೇಮಕವನ್ನು ಸ್ವೀಕರಿಸಿದ ಹೋಶೇಯನಿಂದ ನಾವೇನನ್ನು ಕಲಿಯಬಹುದು? ಮೊದಲನೆಯದಾಗಿ, ಸಾರಲು ಸಿದ್ಧ ಮನಸ್ಸು ತೋರಿಸಬೇಕು. ನಮಗೆ “ಸಾರ್ವಜನಿಕವಾಗಿಯೂ ಮನೆಮನೆಯಲ್ಲಿಯೂ” ಸಾರಲು ಕಷ್ಟವೆನಿಸಿದರೂ ನಾವದನ್ನು ಮಾಡಬೇಕು. (ಅ. ಕಾ. 20:20) ಹೌದು, ಕೆಲವೊಂದು ಸಾರುವ ವಿಧಾನಗಳು ನಮಗೆ ಕಷ್ಟವೆನಿಸಬಹುದು. ಬೈಬಲ್‌ ವಿದ್ಯಾರ್ಥಿಗಳಲ್ಲಿ ಎಷ್ಟೋ ಮಂದಿ, ‘ಬೈಬಲ್‌ ಬಗ್ಗೆ ಕಲಿಯೋದಕ್ಕೆ ಇಷ್ಟ, ಆದರೆ ಮನೆಯಿಂದ ಮನೆಗೆ ಹೋಗಿ ಸಾರೋದಕ್ಕೆ ಮಾತ್ರ ನನ್ನಿಂದಾಗಲ್ಲ’ ಎಂದು ಹೇಳಿದ್ದಾರೆ. ಆದರೆ ಹೀಗೆ ಹೇಳಿದವರಲ್ಲಿ ಅನೇಕರು ಈಗ ಹುರುಪಿನಿಂದ ಸಾರುತ್ತಿದ್ದಾರೆ. ನಾವೂ ಅವರಂತೆ ಸಿದ್ಧ ಮನಸ್ಸು ತೋರಿಸೋಣ.

ಹೋಶೇಯನಿಂದ ನಾವು ಇನ್ನೊಂದು ಪಾಠವನ್ನು ಕಲಿಯಬಹುದು. ಈ ವೃತ್ತಾಂತವನ್ನು ಹೋಶೇಯ ಬರೆಯದೆ ಇದ್ದಿದ್ದರೆ ಅವನ ನೇಮಕದ ಬಗ್ಗೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಹಾಗಾಗಿ, ‘ನಾನಿದನ್ನು ಮಾಡುವುದಿಲ್ಲ’ ಎಂದು ಅವನು ಹೇಳಬಹುದಿತ್ತು. ಆದರೆ ಅವನದನ್ನು ಸ್ವೀಕರಿಸಿದ. ಕೆಲವೊಮ್ಮೆ ನಿಮಗೂ ಯೆಹೋವನ ಬಗ್ಗೆ ಇತರರಿಗೆ ತಿಳಿಸುವ ಅವಕಾಶ ಸಿಗಬಹುದು. ಆ ಅವಕಾಶದ ಬಗ್ಗೆ ನಿಮ್ಮನ್ನು ಬಿಟ್ಟು ಬೇರೆ ಯಾರಿಗೂ ಗೊತ್ತಾಗದೇ ಇರಬಹುದು. ಇಂಥ ಸಮಯದಲ್ಲಿ ನೀವೇನು ಮಾಡುತ್ತೀರಿ? ಉದಾಹರಣೆ ಗಮನಿಸಿ. ಅಮೆರಿಕಾದ ಹೈಸ್ಕೂಲ್‌ನಲ್ಲಿ ಓದುತ್ತಿರುವ ಆ್ಯನಾ ಎಂಬ ಯುವತಿಯ ಶಿಕ್ಷಕಿ, ಎಲ್ಲರೂ ತಮಗಿಷ್ಟವಾದ ವಿಷಯದ ಬಗ್ಗೆ ಪ್ರಬಂಧ ಬರೆದು ಆ ವಿಷಯ ನಿಜವೆಂದು ವಿದ್ಯಾರ್ಥಿಗಳು ಒಪ್ಪುವ ಹಾಗೆ ಮಾತಾಡುವಂತೆ ಹೇಳಿದರು. ಸಾಕ್ಷಿ ಕೊಡಲು ಸಿಕ್ಕ ಈ ಅವಕಾಶವನ್ನು ಆ್ಯನಾ ಬೇಕಿದ್ದರೆ ಬಿಟ್ಟುಬಿಡಬಹುದಿತ್ತು. ಆದರೆ, ಇದು ಯೆಹೋವನೇ ಕೊಟ್ಟ ಅವಕಾಶ ಎಂದು ಅವಳಿಗನಿಸಿತು. ತಾನು ಸಾಕ್ಷಿ ನೀಡಲು ಈ ಅವಕಾಶವನ್ನು ಉಪಯೋಗಿಸಿದರೆ ಏನಾಗಬಹುದೆಂದು ಯೋಚಿಸಿ ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಿದಳು. ಆಗ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಲೇಬೇಕೆಂಬ ಬಯಕೆ ಅವಳಲ್ಲಿ ಮೂಡಿತು. ಅವಳು “ವಿಕಾಸವಾದ—ಸತ್ಯನಾ ಸುಳ್ಳಾ?” ಎಂಬ ವಿಷಯದ ಬಗ್ಗೆ ಪ್ರಬಂಧ ಬರೆದಳು.

ನಮ್ಮ ಯೌವನಸ್ಥರು ಪ್ರವಾದಿಗಳ ಮನೋಭಾವವನ್ನು ಅನುಕರಿಸುತ್ತಾರೆ —ಯೆಹೋವನೇ ತಮ್ಮ ಸೃಷ್ಟಿಕರ್ತ ಎಂದು ಸಾಬೀತುಪಡಿಸುತ್ತಾರೆ

ಆ್ಯನಾ ತನ್ನ ಪ್ರಬಂಧದ ಬಗ್ಗೆ ಮಾತಾಡಿದಾಗ ವಿಕಾಸವಾದವನ್ನು ನಂಬಿದ್ದ ಸಹಪಾಠಿಯೊಬ್ಬಳು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಳು. ಆ್ಯನಾ ಅವಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದಳು. ಇದನ್ನು ನೋಡಿ ಆಕರ್ಷಿತರಾದ ಶಿಕ್ಷಕಿ ಅವಳ ಅತ್ಯುತ್ತಮ ಪ್ರಬಂಧಕ್ಕೆ ಬಹುಮಾನ ಕೊಟ್ಟರು. ಇದಾದ ನಂತರವೂ ಅನೇಕ ಬಾರಿ ಸೃಷ್ಟಿಯ ಬಗ್ಗೆ ಆ ಸಹಪಾಠಿಯೊಂದಿಗೆ ಚರ್ಚೆ ನಡೆಯಿತು. ಯೆಹೋವನು ಕೊಟ್ಟ ಈ “ನೇಮಕವನ್ನು” ಸ್ವೀಕರಿಸಿದ್ದರಿಂದ “ಈಗ ನಾನು ಧೈರ್ಯದಿಂದ ಸುವಾರ್ತೆ ಸಾರುತ್ತೇನೆ” ಎಂದು ಆ್ಯನಾ ಹೇಳುತ್ತಾಳೆ.

ನಾವು ಪ್ರವಾದಿಗಳಲ್ಲದಿದ್ದರೂ ಯೆಹೆಜ್ಕೇಲ, ಯೆರೆಮೀಯ ಮತ್ತು ಹೋಶೇಯರ ಸ್ವತ್ಯಾಗದ ಮನೋಭಾವವನ್ನು ಅನುಕರಿಸೋಣ. ಹೀಗೆ ಮಾಡಿದರೆ ಅವರಂತೆ ನಾವು ಕೂಡ ಯೆಹೋವನು ನಮ್ಮಿಂದ ಬಯಸುವುದನ್ನು ಮಾಡಲು ಖಂಡಿತ ಸಾಧ್ಯವಾಗುತ್ತದೆ. ಇನ್ನಿತರ ಪ್ರವಾದಿಗಳ ಬಗ್ಗೆಯೂ ಓದಿ, ಅವರ ಮಾದರಿಯನ್ನು ಹೇಗೆ ಅನುಕರಿಸಬಹುದೆಂದು ವೈಯಕ್ತಿಕ ಅಧ್ಯಯನದಲ್ಲಿ ಅಥವಾ ಕುಟುಂಬ ಆರಾಧನೆಯಲ್ಲಿ ಧ್ಯಾನಿಸಿ.