ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಡಹುಟ್ಟಿದವರೊಂದಿಗೆ ಹೇಗೆ ಹೊಂದಿಕೊಂಡು ಹೋಗಲಿ?

ಒಡಹುಟ್ಟಿದವರೊಂದಿಗೆ ಹೇಗೆ ಹೊಂದಿಕೊಂಡು ಹೋಗಲಿ?

ಯುವಜನರ ಪ್ರಶ್ನೆ

ಒಡಹುಟ್ಟಿದವರೊಂದಿಗೆ ಹೇಗೆ ಹೊಂದಿಕೊಂಡು ಹೋಗಲಿ?

ನಿಮ್ಮ ಮತ್ತು ನಿಮ್ಮ ಒಡಹುಟ್ಟಿದವರ ಸಂಬಂಧ ಹೇಗಿದೆ ಎನ್ನುವಿರಿ?

_____ ನಾವು ಆಪ್ತಮಿತ್ರರು

_____ ಪರ್ವಾಗಿಲ್ಲ. ಹೆಚ್ಚಾಗಿ ಹೊಂದಿಕೊಂಡು ಹೋಗುತ್ತೇವೆ

_____ ಬೇರೆ ದಾರಿಯಿಲ್ಲ, ಸಹಿಸ್ಕೊಂಡು ಹೋಗುತ್ತೇವೆ

_____ ಯಾವಾಗಲೂ ಕಚ್ಚಾಡುತ್ತಿರುತ್ತೇವೆ

ಕೆಲವು ಮಂದಿ ಒಡಹುಟ್ಟಿದವರು ಬಹಳ ಆಪ್ತರಾಗಿರುತ್ತಾರೆ. ಇಂಥದ್ದೊಂದು ಸಂಬಂಧ ಕವಿತಾ * ಹಾಗೂ ಅವಳ ತಂಗಿಯದ್ದು. 19 ವಯಸ್ಸಿನ ಅವಳನ್ನುವುದು: “16ರ ನನ್ನ ತಂಗಿ ಇಪ್ಷಿತಾ ನನ್ನ ಅತ್ಯಾಪ್ತ ಗೆಳತಿಯರಲ್ಲಿ ಒಬ್ಬಳು.” 17ರ ಪ್ರಾಯದ ಶ್ವೇತಾ ತನ್ನ 20 ವಯಸ್ಸಿನ ಅಣ್ಣ ವಿನೋದನೊಂದಿಗಿನ ತನ್ನ ಸಂಬಂಧ ಹೇಗಿದೆ ಎಂದು ವರ್ಣಿಸುತ್ತಾ “ನಾವು ಜಗಳಾನೇ ಆಡೋದಿಲ್ಲ. ನಾವಿಬ್ಬರು ಸಕತ್‌ ಕ್ಲೋಸ್‌” ಎನ್ನುತ್ತಾಳೆ.

ಇನ್ನೊಂದು ಕಡೆ ಅನೇಕರ ಸಂಬಂಧ ಲಾವಣ್ಯ ಮತ್ತು ಶಿಲ್ಪಾರಂಥದ್ದು. “ನಾವು ಜಗಳವಾಡೋದಕ್ಕೆ ಕಾರಣವೇ ಬೇಕಿಲ್ಲ. ಸಣ್ಣಪುಟ್ಟ ವಿಷಯಕ್ಕೂ ರೇಗಾಡುತ್ತೇವೆ” ಎನ್ನುತ್ತಾಳೆ ಲಾವಣ್ಯ. ಅಥವಾ 12 ವಯಸ್ಸಿನ ಜ್ಯೋತಿಯಂತೆ ನಿಮಗೂ ಅನಿಸಬಹುದು. ಆಕೆ ತನ್ನ 14 ವಯಸ್ಸಿನ ಅಣ್ಣ ದೀಪು ಬಗ್ಗೆ “ಅವನು ಯಾವಾಗಲೂ ನನಗೆ ಸಿಟ್ಟುಬರಿಸುತ್ತಾನೆ. ನನ್ನ ರೂಮಿಗೆ ನುಗ್ಗಿ ಹೇಳದೆಕೇಳದೆ ನನ್ನ ಸಾಮಾನುಗಳನ್ನೆಲ್ಲ ಎತ್ಕೊಳ್ತಾನೆ. ಅವನಿಗೆ ಅದ್ಯಾವಾಗ ಬುದ್ಧಿ ಬರುತ್ತೋ!” ಎನ್ನುತ್ತಾಳೆ.

ಯಾವಾಗಲೂ ನಿಮ್ಮ ಸಿಟ್ಟನ್ನೇರಿಸುವ ಒಡಹುಟ್ಟಿದವರು ನಿಮಗಿದ್ದರೆ ಏನು ಮಾಡಬಲ್ಲಿರಿ? ಮನೆಯಲ್ಲಿ ಶಾಂತಿ ಸಮಾಧಾನ ಕಾಪಾಡುವ ಹೊಣೆ ನಿಮ್ಮ ತಂದೆ ತಾಯಿಯದ್ದು ನಿಜ. ಆದರೆ ಇವತ್ತಲ್ಲ ನಾಳೆ ನೀವು ಬೇರೆಯವರೊಂದಿಗೆ ಹೊಂದಿಕೊಂಡು ಹೋಗಲು ಕಲಿಯಲೇಬೇಕಲ್ಲವೆ? ಇದನ್ನು ನಿಮ್ಮ ಮನೆಯಲ್ಲೇ ಒಡಹುಟ್ಟಿದವರೊಂದಿಗೆ ಹೊಂದಿಕೊಂಡು ಹೋಗುವ ಮೂಲಕ ಕಲಿಯಬಹುದು.

ನಿಮ್ಮ ಮಧ್ಯೆ ಆದ ತಿಕ್ಕಾಟಗಳನ್ನು ಜ್ಞಾಪಿಸಿಕೊಳ್ಳಿ. ನೀವು ಹೆಚ್ಚಾಗಿ ಯಾವ ವಿಷಯದ ಬಗ್ಗೆ ಜಗಳವಾಡುತ್ತೀರಾ? ನಿಮ್ಮ ಕೋಪ ನೆತ್ತಿಗೇರುವಂತೆ ಮಾಡುವ ಸನ್ನಿವೇಶಗಳು ಈ ಮುಂದಿನ ಪಟ್ಟಿಯಲ್ಲಿದ್ದರೆ ಅದರ ಪಕ್ಕ ✔ ಹಾಕಿ. ಇಲ್ಲಿ ಕೊಡಲಾಗದಿದ್ದರೆ ಅವುಗಳನ್ನು ಬರೆಯಿರಿ.

ವಸ್ತುಗಳು. ಹೇಳದೆಕೇಳದೆ ನನ್ನ ಸಾಮಾನುಗಳನ್ನೆಲ್ಲ ಎತ್ಕೊಳ್ತಾನೆ/ಳೆ.

ಸ್ವಭಾವ. ಯಾವಾಗಲೂ ತನ್ನ ಬಗ್ಗೆ ಮಾತ್ರ ಯೋಚಿಸುತ್ತಾನೆ/ಳೆ. ಅವನ/ಳ ತಾಳಕ್ಕೆ ತಕ್ಕಂತೆ ನಾನು ಕುಣಿಯಬೇಕಂತೆ.

ಪ್ರೈವಸಿ. ಇಷ್ಟಬಂದಂತೆ ನನ್ನ ರೂಮಿಗೆ ನುಗ್ಗುತ್ತಾನೆ/ಳೆ, ನನ್ನ ಪರ್ಮಿಷನ್‌ ಇಲ್ಲದೆ ನನ್ನ ಇ-ಮೇಲ್‌, ಮೆಸೆಜ್‌ಗಳನ್ನು ಓದುತ್ತಾನೆ/ಳೆ.

ಇತರೆ. ....

ಒಡಹುಟ್ಟಿದವರು ನಿಮಗೆ ಪ್ರೈವಸಿ ಕೊಡದಿರುವ ಅಥವಾ ನಿಮ್ಮ ಮೇಲೆ ಅಧಿಕಾರ ಚಲಾಯಿಸುವ ಮೂಲಕ ಸದಾ ಕಿರಿಕಿರಿ ಮಾಡುತ್ತಿದ್ದರೆ ಕಹಿಭಾವನೆ ಮೂಡುವುದು ಸಹಜ. “ಮೂಗು ಹಿಂಡುವದರಿಂದ ರಕ್ತ, ಕೋಪಕಲಕುವದರಿಂದ ಜಗಳ” ಎನ್ನುತ್ತದೆ ಬೈಬಲಿನ ಒಂದು ನಾಣ್ಣುಡಿ. (ಜ್ಞಾನೋಕ್ತಿ 30:33) ಮೂಗನ್ನು ಗಟ್ಟಿಯಾಗಿ ಹಿಂಡಿದರೆ ರಕ್ತ ಹೊರಚಿಮ್ಮುತ್ತದೆ; ಕಹಿಭಾವನೆಯನ್ನು ನಿಮ್ಮೊಳಗೇ ಇಟ್ಟುಕೊಂಡರೆ ಒಂದಲ್ಲ ಒಂದು ದಿನ ಕೋಪದಿಂದ ಸಿಡಿದುಬೀಳುವಿರಿ. ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. (ಜ್ಞಾನೋಕ್ತಿ 26:21) ಕಿರಿಕಿರಿಗೊಳಿಸಿದ ಚಿಕ್ಕ ಸಂಗತಿ ದೊಡ್ಡ ರಾದ್ಧಾಂತವಾಗಿ ಪರಿಣಮಿಸುವ ಸಂಭವವಿದೆ. ಇದನ್ನು ತಡೆಗಟ್ಟುವುದು ಹೇಗೆ? ನಿಜವಾದ ಸಮಸ್ಯೆ ಏನು ಎನ್ನುವುದನ್ನು ಗುರುತಿಸುವುದೇ ಮೊದಲನೇ ಹೆಜ್ಜೆ.

ಕಚ್ಚಾಟದ ಹಿಂದಿರುವ ಕಾರಣ

ಒಡಹುಟ್ಟಿದವರ ನಡುವಿನ ಸಮಸ್ಯೆಗಳು ಮೊಡವೆಗಳಂತೆ. ಮೊಡವೆ ಕಾಣಿಸಿಕೊಳ್ಳುವುದು ಮುಖದ ಮೇಲಿನ ಅಸಹ್ಯ ಗುಳ್ಳೆಯ ರೂಪದಲ್ಲಿ. ಆದರೆ ಕಣ್ಣಿಗೆ ಕಾಣದಿರುವ ಸೋಂಕು ಆ ಗುಳ್ಳೆಗೆ ಕಾರಣ. ಹಾಗೆಯೇ ಹೊರಗೆ ಕಾಣಿಸುವುದು ಒಡಹುಟ್ಟಿದವರ ಕಚ್ಚಾಟವಾದರೂ ಅದರ ಹಿಂದೆ ಕಾರಣ ಒಂದಿರುತ್ತದೆ.

ಮೊಡವೆಯನ್ನು ಹಿಸುಕಿದರೆ ಸಮಸ್ಯೆಯನ್ನು ಮೇಲಿಂದ ಮೇಲೆ ಮಾತ್ರ ಸರಿಪಡಿಸುತ್ತೀರಿ. ಇದರಿಂದ ಮುಖದ ಮೇಲೆ ಕಲೆಯಾಗುತ್ತದೆ ಮತ್ತು ಸೋಂಕು ಹೆಚ್ಚಾಗುವುದೇ ವಿನಾ ಸಮಸ್ಯೆ ನಿವಾರಣೆ ಆಗುವುದಿಲ್ಲ. ಆದ್ದರಿಂದ ಸೋಂಕಿಗಾಗಿ ಚಿಕಿತ್ಸೆ ಪಡೆದು ಮತ್ತೊಮ್ಮೆ ಮೊಡವೆಗಳು ಬರದಂತೆ ನೋಡಿಕೊಳ್ಳುವುದೇ ಉತ್ತಮ. ಇದು ಒಡಹುಟ್ಟಿದವರ ಸಮಸ್ಯೆಗಳ ವಿಷಯದಲ್ಲೂ ನಿಜ. ಕಚ್ಚಾಟದ ಹಿಂದಿರುವ ಕಾರಣವನ್ನು ಗುರುತಿಸಿದರೆ ಕಚ್ಚಾಡುವುದನ್ನು ಬಿಟ್ಟು ಸಮಸ್ಯೆಯ ಮೂಲಕ್ಕೆ ಕೈ ಹಾಕಬಹುದು. ಹೀಗೆ “ಮನುಷ್ಯನ ವಿವೇಕ” ಅಂದರೆ ಒಳನೋಟ “ಅವನ ಸಿಟ್ಟಿಗೆ ಅಡ್ಡಿ” ಎಂದು ಹೇಳಿದ ಬುದ್ಧಿವಂತ ರಾಜ ಸೊಲೊಮೋನನ ಮಾತುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸುತ್ತಿದ್ದೀರಿ.—ಜ್ಞಾನೋಕ್ತಿ 19:11.

ಉದಾಹರಣೆಗೆ, ಈಗಾಗಲೇ ಕೇಳಿರುವ ಜ್ಯೋತಿಯ ಮಾತನ್ನು ಸೂಕ್ಷ್ಮವಾಗಿ ಗಮನಿಸಿ. ಅಣ್ಣ ದೀಪು “ನನ್ನ ರೂಮಿಗೆ ನುಗ್ಗಿ ಹೇಳದೆಕೇಳದೆ ನನ್ನ ಸಾಮಾನುಗಳನ್ನೆಲ್ಲ ಎತ್ಕೊಳ್ತಾನೆ” ಎಂದು ಅವಳು ಹೇಳಿದ್ದಳು. ಇದು ನಡೆದ ಜಗಳ. ಆದರೆ ಅದರ ಹಿಂದಿರುವ ಕಾರಣ ಏನಿರಬಹುದು? ಬಹುಶಃ ಗೌರವದ ವಿಷಯಕ್ಕೆ ಸಂಬಂಧಪಟ್ಟಿದೆ. *

ಜ್ಯೋತಿ ತನ್ನ ಅಣ್ಣನಿಗೆ “ಮತ್ತೆಂದೂ ನನ್ನ ರೂಮಿಗೆ ಕಾಲಿಡಬೇಡ, ನನ್ನ ಸಾಮಾನುಗಳನ್ನು ಮುಟ್ಟಬೇಡ” ಎಂದು ಹೇಳಿ ಆ ಜಗಳವನ್ನು ಅಲ್ಲಿಗೇ ನಿಲ್ಲಿಸಬಹುದು. ಆದರೆ ಇದರಿಂದ ಸಮಸ್ಯೆ ಮೇಲಿಂದ ಮೇಲೆ ಬಗೆಹರಿಯುವುದಷ್ಟೆ. ಬೇರಾವುದೋ ರೂಪದಲ್ಲಿ ಅದು ಮತ್ತೆ ತಲೆದೋರಬಹುದು. ತನ್ನ ವಸ್ತುಗಳನ್ನು ತೆಗೆದುಕೊಳ್ಳುವ ಮುಂಚೆ ಒಂದು ಮಾತು ಕೇಳುವ ಮೂಲಕ ಮತ್ತು ಬಾಗಿಲು ತಟ್ಟಿ ತನ್ನ ರೂಮಿನೊಳಗೆ ಬರುವ ಮೂಲಕ ತನ್ನನ್ನು ಗೌರವಭಾವದಿಂದ ಕಾಣುವಂತೆ ಜ್ಯೋತಿ ಅವನಿಗೆ ಮನವರಿಕೆ ಮಾಡಿದರೆ ಅವರ ನಡುವಿನ ಸಂಬಂಧ ಖಂಡಿತ ಉತ್ತಮಗೊಳ್ಳುವುದು.

ಕಚ್ಚಾಟ ನಿಲ್ಲಿಸಲು ಅಥವಾ ತಪ್ಪಿಸಲು ಕಲಿಯಿರಿ

ಕಚ್ಚಾಟದ ಹಿಂದಿರುವ ಕಾರಣವನ್ನು ಗುರುತಿಸುವುದು ಸಮಸ್ಯೆಯನ್ನು ಬಗೆಹರಿಸುವ ಮೊದಲ ಹೆಜ್ಜೆ ಆಗಿತ್ತಷ್ಟೆ. ಅದನ್ನು ಬಗೆಹರಿಸಲು ಹಾಗೂ ಆ ವಿಷಯದಲ್ಲಿ ಮತ್ತೊಮ್ಮೆ ಜಗಳವಾಗುವುದನ್ನು ತಪ್ಪಿಸಲು ನೀವೇನು ಮಾಡಬಹುದು? ಮುಂದಿನ ಆರು ಹೆಜ್ಜೆಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸಿ.

1. ಪರಸ್ಪರ ಸಮ್ಮತಿಯಿಂದ ಕೆಲವು ರೂಲ್ಸ್‌ ಮಾಡಿ. “ಆಪ್ತ ಮಾತುಕತೆಯಿಲ್ಲದೆ ಯೋಜನೆಗಳು ಭಂಗವಾಗುವವು” ಎಂದು ಬರೆದನು ರಾಜ ಸೊಲೊಮೋನನು. (ಜ್ಞಾನೋಕ್ತಿ 15:22, NW) ಆ ರೀತಿಯ ನಿರಾಶೆಯನ್ನು ತಪ್ಪಿಸಲು ಹೀಗೆ ಮಾಡಿ: ಯಾವುದಕ್ಕೆಲ್ಲ ಜಗಳವಾಡುತ್ತೀರೆಂದು ಈ ಮುಂಚೆ ಬರೆದಿದ್ದೀರೋ ಅದನ್ನು ಪುನಃ ನೋಡಿ. ಆಮೇಲೆ, ಒಟ್ಟಿಗೆ ಕುಳಿತು ನಿಮ್ಮಿಬ್ಬರಿಗೂ ಸಮ್ಮತಿಯಿರುವ ಹಾಗೂ ಸಮಸ್ಯೆಯನ್ನು ಬಗೆಹರಿಸುವಂಥ ರೂಲ್ಸ್‌ಗಳನ್ನು ಮಾಡಿ. ಉದಾಹರಣೆಗೆ, ವಸ್ತುಗಳ ವಿಷಯದಲ್ಲಿ ನೀವು ಕಚ್ಚಾಡುವುದಾದರೆ ರೂಲ್‌ ನಂ. 1 ಹೀಗಿರಬಹುದು: “ಬೇರೆಯವರ ಸಾಮಾನುಗಳನ್ನು ತೆಗೆದುಕೊಳ್ಳುವ ಮುಂಚೆ ಅನುಮತಿ ಕೇಳಬೇಕು.” ರೂಲ್‌ ನಂ. 2 ಹೀಗಿರಬಹುದು: “‘ಇಲ್ಲ, ಅದನ್ನು ತಗೊಳ್ಬೇಡ’ ಎಂದು ಹೇಳಲು ಒಡಹುಟ್ಟಿದವರಿಗಿರುವ ಹಕ್ಕನ್ನು ಮಾನ್ಯಮಾಡಬೇಕು.” ಈ ರೂಲ್ಸ್‌ ಮಾಡುವಾಗ “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು” ಎಂಬ ಯೇಸುವಿನ ಆಜ್ಞೆಯನ್ನು ಮನಸ್ಸಿನಲ್ಲಿಡಿ. (ಮತ್ತಾಯ 7:12) ಹೀಗೆ ನೀವಿಬ್ಬರು ಪಾಲಿಸಬಹುದಾದ ರೂಲ್ಸ್‌ ಮಾಡಲು ಸಾಧ್ಯವಾಗುವುದು. ಇವುಗಳನ್ನು ಮಾಡಿದ ನಂತರ ನಿಮ್ಮ ಈ ನಿರ್ಣಯದ ಬಗ್ಗೆ ತಂದೆತಾಯಿಗೆ ತಿಳಿಸಿ ಅವರ ಸಮ್ಮತಿ ಪಡೆಯಿರಿ.—ಎಫೆಸ 6:1.

2. ಮೊದಲು ನೀವು ರೂಲ್ಸ್‌ ಪಾಲಿಸಿ. “ಇತರರಿಗೆ ಬೋಧಿಸುವ ನೀನು ನಿನಗೇ ಬೋಧಿಸಿಕೊಳ್ಳದೆ ಇದ್ದೀಯೊ? ‘ಕದಿಯಬಾರದು’ ಎಂದು ಸಾರುವ ನೀನು ಕದಿಯುತ್ತೀಯೊ?” ಎಂದು ಅಪೊಸ್ತಲ ಪೌಲನು ಬರೆದನು. (ರೋಮನ್ನರಿಗೆ 2:21) ಈ ಮೂಲತತ್ವವನ್ನು ನೀವು ಹೇಗೆ ಅನ್ವಯಿಸುವಿರಿ? ನಿಮ್ಮ ಒಡಹುಟ್ಟಿದವರ ರೂಮಿಗೆ ಹೋಗುವ ಮುಂಚೆ ಕದ ತಟ್ಟಿ. ಅವರ ಇ-ಮೇಲ್‌, ಮೆಸೆಜ್‌ಗಳನ್ನು ಓದುವ ಮುಂಚೆ ಪರ್ಮಿಷನ್‌ ಕೇಳಿ. ಆಗ ಅವರೂ ಹಾಗೆ ಮಾಡುವರು.

3. ಮುಂಗೋಪ ಬೇಡ. ಇದು ಉತ್ತಮ ಬುದ್ಧಿವಾದ. ಏಕೆ? “ಮುಂಗೋಪಿಯೂ ಹಗೆಯನ್ನು ಮನಸ್ಸಿನಲ್ಲಿಡುವವನೂ ಮೂರ್ಖನೇ ಸರಿ” ಎನ್ನುತ್ತದೆ ಬೈಬಲಿನ ಒಂದು ನಾಣ್ಣುಡಿ. (ಪ್ರಸಂಗಿ 7:9, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌) ನೀವು ಮುಂಗೋಪಿಗಳಾಗಿದ್ದರೆ ನಿಮ್ಮ ಬದುಕು ಅಸಹನೀಯವೆನಿಸಬಹುದು. ನಿಮ್ಮ ಒಡಹುಟ್ಟಿದವರು ನಿಮಗೆ ಸಿಟ್ಟುಬರಿಸುವಂಥ ರೀತಿಯಲ್ಲಿ ಮಾತಾಡುವರು ಅಥವಾ ನಡೆದುಕೊಳ್ಳುವರು ಖಂಡಿತ. ಆದರೆ ‘ಹಿಂದೆಂದಾದರೂ ನಾನೂ ಅವರೊಡನೆ ಹೀಗೆ ವರ್ತಿಸಿದ್ದೇನೋ?’ ಎಂದು ಕೇಳಿಕೊಳ್ಳಿ. (ಮತ್ತಾಯ 7:1-5) “ನಾನು 13 ವಯಸ್ಸಿನವಳಾಗಿದ್ದಾಗ ನನ್ನ ಅಭಿಪ್ರಾಯವೇ ಉತ್ತಮ, ಎಲ್ಲರೂ ಅದನ್ನು ಕೇಳಲೇಬೇಕೆಂಬ ಹಠ ನನ್ನಲ್ಲಿತ್ತು. ಈಗ ನನ್ನ ತಂಗಿ ಅದೇ ರೀತಿ ಮಾಡುವಾಗ ನಾನು ಮಾಡುತ್ತಿದ್ದದ್ದನ್ನು ಜ್ಞಾಪಿಸಿಕೊಂಡು ಅವಳ ಮೇಲೆ ಸಿಟ್ಟುಮಾಡದಿರಲು ಪ್ರಯತ್ನಿಸುತ್ತೇನೆ” ಎನ್ನುತ್ತಾಳೆ ಜೆನಿಫರ್‌.

4. ತಪ್ಪನ್ನು ಕ್ಷಮಿಸಿ ಮರೆತುಬಿಡಿ. ಗಂಭೀರ ಸಮಸ್ಯೆಗಳನ್ನು ಮಾತಾಡಿ ಬಗೆಹರಿಸಬೇಕು. ಹಾಗೆಂದು ಒಡಹುಟ್ಟಿದವರು ಮಾಡಿದ ಪ್ರತಿಯೊಂದು ತಪ್ಪಿನ ಬಗ್ಗೆ ಅವರೊಂದಿಗೆ ಮಾತನಾಡುವ ಅಗತ್ಯವಿದೆಯೋ? ನೀವು ‘ದೋಷವನ್ನು ಲಕ್ಷಿಸದಿರಲು’ ಸಿದ್ಧರಿರುವಾಗ ಯೆಹೋವ ದೇವರು ಅದನ್ನು ಮೆಚ್ಚುತ್ತಾನೆ. (ಜ್ಞಾನೋಕ್ತಿ 19:11) 19 ವಯಸ್ಸಿನ ಆಯೇಷ ಹೇಳುವುದು: “ನನ್ನ ಮತ್ತು ನನ್ನ ತಂಗಿ ವಿನೀಷಳ ನಡುವಿನ ಮನಸ್ತಾಪಗಳು ಬೇಗನೆ ಇತ್ಯರ್ಥವಾಗುತ್ತವೆ. ಏಕೆಂದರೆ ನಾವು ಒಬ್ಬರಿಗೊಬ್ಬರು ಕೂಡಲೇ ‘ಸ್ಸಾರಿ’ ಹೇಳಿ ಜಗಳಕ್ಕೆ ಏನು ಕಾರಣ ಎಂಬುದರ ಬಗ್ಗೆ ಮಾತನಾಡಿ ನಮ್ಮ ಮನಸ್ತಾಪ ದೂರ ಮಾಡಿಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಮಾತನ್ನು ಮರುದಿನಕ್ಕೆ ತಳ್ಳುವುದೇ ಉತ್ತಮ ಎಂದು ಕಂಡುಕೊಂಡಿದ್ದೇನೆ. ಮರುದಿನ ಬೆಳಿಗ್ಗೆ ಎದ್ದಾಗ ಕೋಪ, ಮನಸ್ತಾಪ ಎಲ್ಲ ಮಾಯ. ಅದರ ಬಗ್ಗೆ ಮಾತ್ತೆತ್ತುವ ಅಗತ್ಯವೇ ಇರುವುದಿಲ್ಲ.”

5. ಮಧ್ಯಸ್ಥಿಕೆ ವಹಿಸಲು ನಿಮ್ಮ ಪೋಷಕರನ್ನು ಕೇಳಿ. ಒಂದು ಗಂಭೀರ ಸಮಸ್ಯೆಯನ್ನು ನಿಮ್ಮ ನಿಮ್ಮಲ್ಲೇ ಬಗೆಹರಿಸಲು ಸಾಧ್ಯವಾಗದಿರುವಲ್ಲಿ ನಿಮ್ಮ ಮಧ್ಯೆ ಸಮಾಧಾನ ತರಲು ತಂದೆತಾಯಿ ನೆರವು ನೀಡಬಲ್ಲರು. (ರೋಮನ್ನರಿಗೆ 14:19) ಆದರೆ ನೆನಪಿಡಿ, ಸಮಸ್ಯೆಯನ್ನು ಹೆತ್ತವರ ಮಧ್ಯಸ್ಥಿಕೆ ಇಲ್ಲದೆ ನೀವೇ ಬಗೆಹರಿಸಿದರೆ ಅದು ನಿಮ್ಮ ಪ್ರೌಢತೆಯ ನಿಜ ಸಂಕೇತ.

6. ನಿಮ್ಮ ಒಡಹುಟ್ಟಿದವರ ಒಳ್ಳೇ ಗುಣಗಳನ್ನು ಮೆಚ್ಚಿರಿ. ನಿಮಗೆ ಇಷ್ಟವಾಗುವ ಗುಣಗಳು ನಿಮ್ಮ ಒಡಹುಟ್ಟಿದವರಲ್ಲಿ ಇರಬಹುದು. ಅವರಲ್ಲಿ ಒಬ್ಬೊಬ್ಬರಲ್ಲೂ ನೀವು ಮೆಚ್ಚುವ ಒಂದೊಂದು ಗುಣವನ್ನು ಬರೆಯಿರಿ.

ಹೆಸರು ನಾನು ಮೆಚ್ಚುವ ಗುಣ

....

ಅವರಲ್ಲಿನ ದೋಷಗಳನ್ನು ಯಾವಾಗಲೂ ಹುಡುಕಿ ಎತ್ತಿತೋರಿಸುತ್ತಾ ಇರುವ ಬದಲು ನೀವು ಅವರಲ್ಲಿ ಏನನ್ನು ಮೆಚ್ಚುತ್ತೀರೆಂದು ಅವರಿಗೆ ತಿಳಿಸಲು ಅವಕಾಶಕ್ಕಾಗಿ ಹುಡುಕಬಾರದೇಕೆ?—ಕೀರ್ತನೆ 130:3; ಜ್ಞಾನೋಕ್ತಿ 15:23.

ಬದುಕಿನ ಸತ್ಯ: ನೀವು ಹೊರಗಿನ ಲೋಕಕ್ಕೆ ಕಾಲಿಟ್ಟಾಗ ನಿಮ್ಮ ಭಾವನೆಗಳನ್ನು ಲೆಕ್ಕಿಸದ, ಸ್ವಾರ್ಥಪರ, ಒರಟು ಸ್ವಭಾವದ ಸಹೋದ್ಯೋಗಿಗಳೊಂದಿಗೆ ಹಾಗೂ ಇತರರೊಂದಿಗೆ ವ್ಯವಹರಿಸಬೇಕಾಗುತ್ತದೆ. ಇವರು ನಿಮ್ಮನ್ನು ಕಿರಿಕಿರಿಗೊಳಿಸಬಹುದು. ‘ಮನೆಯಲ್ಲಿ ನಿಲ್ಲದವನ ಕಾಲು ಮಠದಲ್ಲಿ ನಿಂತಾವ’ ಎಂಬಂತೆ ಮನೆಯವರೊಂದಿಗೆ ಶಾಂತಿಯಿಂದಿರಲು ನೀವು ಕಲಿತಿಲ್ಲವೆಂದರೆ ಹೊರಗಿನವರೊಂದಿಗೆ ಹೊಂದಿಕೊಂಡು ಹೋಗಲು ಕಷ್ಟವಾಗುತ್ತದೆ. ಅಕ್ಕತಂಗಿ, ಅಣ್ಣತಮ್ಮ ಇವರಲ್ಲಿ ಯಾರೊಂದಿಗಾದರೂ ಹೊಂದಿಕೊಂಡು ಹೋಗಲು ನಿಮಗೆ ಕಷ್ಟವಾಗುತ್ತಿರುವಲ್ಲಿ ಸಕಾರಾತ್ಮಕ ನೋಟವನ್ನಿಡಿ. ಬದುಕಿಗೆ ಬೇಕಾದ ಅತ್ಯಮೂಲ್ಯ ಕೌಶಲಗಳನ್ನು ಈ ಒಡಹುಟ್ಟಿದವನಿಂದಾಗಿ/ಳಿಂದಾಗಿ ನೀವು ಕಲಿಯುತ್ತಿದ್ದೀರಿ!

ಬೈಬಲಿನ ಮಾತುಗಳು ಸೂಚಿಸುವಂತೆ ನಿಮ್ಮ ಒಡಹುಟ್ಟಿದವರು ನಿಮ್ಮ ಅತ್ಯಾಪ್ತ ಮಿತ್ರರಾಗಿರದೆ ಇರಬಹುದು. (ಜ್ಞಾನೋಕ್ತಿ 18:24) ಹಾಗಿದ್ದರೂ, ಅವರೊಂದಿಗಿನ ನಿಮ್ಮ ಸ್ನೇಹವನ್ನು ಬಲಪಡಿಸಬಹುದು. ಹೇಗೆ? ಅವರ ಮೇಲೆ “ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ” ನೀವು “ಸೈರಿಸಿಕೊಂಡು” ಹೋಗುವ ಮೂಲಕವೇ. (ಕೊಲೊಸ್ಸೆ 3:13, ಸತ್ಯವೇದವು) ಹೀಗೆ ನಿಮ್ಮ ಒಡಹುಟ್ಟಿದವರ ಮಾತು ಹಾಗೂ ವರ್ತನೆ ನಿಮಗೆ ಹೆಚ್ಚು ಕಿರಿಕಿರಿ ಎನಿಸುವುದಿಲ್ಲ. ಅಲ್ಲದೆ ಅವರಿಗೂ ನಿಮ್ಮ ಕಿರಿಕಿರಿ ತಪ್ಪುತ್ತದೆ! (g10-E 08)

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ

[ಪಾದಟಿಪ್ಪಣಿಗಳು]

^ ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ.

^ ಹೆಚ್ಚಿನ ನೆರವಿಗಾಗಿ ಕೆಳಗಿನ ಚೌಕ ನೋಡಿ.

ಯೋಚಿಸಿ ನೋಡಿ

● ಕಚ್ಚಾಟದ ಹಿಂದಿರುವ ಕಾರಣವನ್ನು ಗುರುತಿಸುವುದು ಏಕೆ ಪ್ರಾಮುಖ್ಯ?

● ಮೇಲೆ ಕೊಡಲಾಗಿರುವ 6 ಹೆಜ್ಜೆಗಳಲ್ಲಿ ಯಾವುದನ್ನು ಕಾರ್ಯಕ್ಕಿಳಿಸಲು ನೀವು ಹೆಚ್ಚು ಶ್ರಮಪಡಬೇಕು?

[ಪುಟ 27ರಲ್ಲಿರುವ ಚೌಕ]

ನಿಜ ಕಾರಣವನ್ನು ಗುರುತಿಸಿ

ಒಡಹುಟ್ಟಿದವರ ನಡುವಿನ ಸಮಸ್ಯೆಗಳ ಹಿಂದಿರುವ ಕಾರಣವನ್ನು ಗುರುತಿಸುವುದರಲ್ಲಿ ನಿಪುಣರಾಗಲು ಬಯಸುತ್ತೀರೋ? ಹೌದಾದರೆ, ಯೇಸು ಹೇಳಿದ ಈ ಸಾಮ್ಯವನ್ನು ಓದಿ. ಅದು, ಮನೆ ಬಿಟ್ಟು ಹೋಗಿ ತನಗೆ ಕೊಡಲಾಗಿದ್ದ ಆಸ್ತಿಯನ್ನೆಲ್ಲ ಹಾಳುಮಾಡಿಕೊಂಡ ಮಗನ ಕುರಿತಾಗಿದೆ.—ಲೂಕ 15:11-32.

ತಮ್ಮನು ಮನೆಗೆ ಹಿಂದಿರುಗಿದಾಗ ಅಣ್ಣನ ಪ್ರತಿಕ್ರಿಯೆ ಏನಾಗಿತ್ತೆಂದು ಸೂಕ್ಷ್ಮವಾಗಿ ಗಮನಿಸಿ. ಈಗ ಮುಂದಿನ ಪ್ರಶ್ನೆಗಳನ್ನು ಉತ್ತರಿಸಿ.

ಯಾವ ಘಟನೆಯಿಂದಾಗಿ ಅಣ್ಣ ಹೀಗೆ ಪ್ರತಿಕ್ರಿಯಿಸಿದನು?

ಅಣ್ಣನ ಪ್ರತಿಕ್ರಿಯೆಗೆ ನಿಜ ಕಾರಣವೇನೆಂದು ನೆನಸುತ್ತೀರಿ?

ಸಮಸ್ಯೆಯನ್ನು ಬಗೆಹರಿಸಲು ತಂದೆ ಏನು ಮಾಡಿದರು?

ಸಮಸ್ಯೆಯನ್ನು ಬಗೆಹರಿಸಲು ಅಣ್ಣ ಏನು ಮಾಡಬೇಕಾಗಿತ್ತು?

ಈಗ, ನಿಮ್ಮ ಒಡಹುಟ್ಟಿದವರೊಂದಿಗೆ ಇತ್ತೀಚೆಗೆ ನಡೆದ ಜಗಳವನ್ನು ಜ್ಞಾಪಿಸಿಕೊಳ್ಳಿ. ಬಳಿಕ, ಪ್ರಶ್ನೆಗಳ ಪಕ್ಕದಲ್ಲಿ ನಿಮ್ಮ ಉತ್ತರ ಬರೆಯಿರಿ.

ಜಗಳ ಹೇಗೆ ಪ್ರಾರಂಭವಾಯಿತು?

ಈ ಜಗಳದ ಹಿಂದಿರುವ ಕಾರಣವೇನೆಂದು ನಿಮಗನಿಸುತ್ತದೆ?

ನಿಮ್ಮಿಬ್ಬರಿಗೂ ಸಮ್ಮತಿಯಿರುವ ಮತ್ತು ಸಮಸ್ಯೆಯನ್ನು ಬಗೆಹರಿಸಿ ಅದು ಮರುಕಳಿಸದಂತೆ ನೋಡಿಕೊಳ್ಳಲು ಯಾವ ರೂಲ್ಸ್‌ ಮಾಡಬಹುದು?

[ಪುಟ 28, 29ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?

“ಜೀವನಪರ್ಯಂತ ನಾನೂ ನನ್ನ ತಂಗಿಯರೂ ಸ್ನೇಹಿತರಾಗಿರಬೇಕು ಎಂಬುದು ನನ್ನಾಸೆ. ಆದ್ದರಿಂದ ಈ ಪ್ರಾಜೆಕ್ಟನ್ನು ಈಗಲೇ ಆರಂಭಿಸಬೇಕೆಂದಿದ್ದೇನೆ.”

“ಏನೇ ಮಾಡಿದರೂ ಕುಟುಂಬವಾಗಿ ಸೇರಿ ಮಾಡುವುದರಿಂದ ನಮ್ಮಲ್ಲಿ ಒಗ್ಗಟ್ಟಿದೆ. ಈಗ ನಾವು ಮುಂಚಿನಂತೆ ಕಚ್ಚಾಡುವುದಿಲ್ಲ.”

“ಕೆಲವು ವಿಷಯಗಳಲ್ಲಿ ನನಗೂ ನನ್ನ ತಂಗಿಗೂ ಹಗಲಿರುಳಿನಷ್ಟು ವ್ಯತ್ಯಾಸ. ಆದರೆ ಒಂದು ಮಾತು ನಿಜ. ಅವಳಂತೆ ಬೇರಾರೂ ಇಲ್ಲ. ಇಡೀ ಜಗತ್ತನ್ನೇ ನನ್ನ ಕಾಲಿಗೆ ತಂದಿಟ್ಟರೂ ನಾನು ಅವಳನ್ನು ಬಿಟ್ಟುಕೊಡಲ್ಲ.”

“ನನ್ನ ಪ್ರತಿಯೊಂದು ಮಧುರ ಕ್ಷಣದಲ್ಲಿ ತಂಗಿತಮ್ಮನ ಪಾತ್ರವಿದೆ. ಅವರಿಲ್ಲದಿರುತ್ತಿದ್ದರೆ ಯಾವ ಸಿಹಿನೆನಪೂ ಇರುತ್ತಿರಲಿಲ್ಲ. ಒಡಹುಟ್ಟಿದವರು ಇರುವವರಿಗೆಲ್ಲ ನಾನು ಹೇಳುವುದಿಷ್ಟೆ: ‘ಅವರು ನಿಮ್ಮೊಂದಿಗಿದ್ದಾಗಲೇ ಅವರ ಮೌಲ್ಯ ಗ್ರಹಿಸಿ.’”

[ಚಿತ್ರಗಳು]

ಟಿಯಾ

ಬಿಯಾಂಕಾ

ಸಮಾಂತಾ

ಮೆರಲಿನ್‌

[ಪುಟ 27ರಲ್ಲಿರುವ ಚಿತ್ರ]

ಒಡಹುಟ್ಟಿದವರ ನಡುವಿನ ಸಮಸ್ಯೆಗಳು ಮೊಡವೆಗಳಂತೆ. ಅದಕ್ಕೆ ಮೇಲಿಂದ ಮೇಲೆ ಚಿಕಿತ್ಸೆ ಕೊಡುವ ಬದಲು ಅದರ ಹಿಂದಿರುವ ಕಾರಣವನ್ನು ಗುರುತಿಸಿ ಪರಿಹರಿಸಿ