ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆಪಟೈಟಿಸ್‌ ಬಿ ಎಂಬ ಮೌನ ಹಂತಕ

ಹೆಪಟೈಟಿಸ್‌ ಬಿ ಎಂಬ ಮೌನ ಹಂತಕ

ಹೆಪಟೈಟಿಸ್‌ ಬಿ ಎಂಬ ಮೌನ ಹಂತಕ

“ನನಗಾಗ 27 ವರ್ಷ. ಆಗಷ್ಟೇ ಮದುವೆಯಾಗಿದ್ದೆ. ತುಂಬ ಒತ್ತಡವಿದ್ದ ಉದ್ಯೋಗವನ್ನು ನಿಭಾಯಿಸುತ್ತಿದ್ದೆ. ಯೆಹೋವನ ಸಾಕ್ಷಿಗಳ ಸ್ಥಳೀಯ ಸಭೆಯಲ್ಲೂ ನನಗೆ ಅನೇಕ ಜವಾಬ್ದಾರಿಗಳಿದ್ದವು. ನೋಡಲು ಆರೋಗ್ಯವಂತನಾಗಿದ್ದೆ. ಯಾವುದೇ ಆರೋಗ್ಯ ಸಮಸ್ಯೆ ಇದ್ದಂತೆ ನನಗನಿಸಲಿಲ್ಲ. ಆದರೆ ಹೆಪಟೈಟಿಸ್‌ ಬಿ ನನ್ನ ಲಿವರನ್ನು ನಾಶಮಾಡತೊಡಗಿದ್ದು ನನಗೆ ಗೊತ್ತೇ ಇರಲಿಲ್ಲ.”—ಡಕ್‌ ಗ್ಯುನ್‌.

ನಮ್ಮ ಲಿವರ್‌ ರಕ್ತದಿಂದ ವಿಷವಸ್ತುಗಳನ್ನು ಸೋಸಿ ತೆಗೆದುಹಾಕುತ್ತದೆ. ಮಾತ್ರವಲ್ಲ 500ಕ್ಕಿಂತಲೂ ಹೆಚ್ಚಿನ ಮುಖ್ಯ ಕೆಲಸಗಳನ್ನು ಮಾಡುತ್ತದೆ. ಆದ್ದರಿಂದಲೇ ಹೆಪಟೈಟಿಸ್‌ ಅಂದರೆ ಲಿವರ್‌ನ (ಯಕೃತ್ತಿನ) ಉರಿಯೂತವು ಒಬ್ಬ ವ್ಯಕ್ತಿಯ ಆರೋಗ್ಯವನ್ನು ಪೂರ್ತಿ ಕೆಡಿಸಬಲ್ಲದು. ಅತಿಯಾದ ಮದ್ಯಸೇವನೆ ಇಲ್ಲವೆ ವಿಷಕಾರಿ ಪದಾರ್ಥಗಳಿಗೆ ಒಡ್ಡಲ್ಪಟ್ಟಿರುವುದು ಇದಕ್ಕೆ ಕಾರಣವಾಗಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಈ ಉರಿಯೂತಕ್ಕೆ ವೈರಸ್‌ಗಳೇ ಕಾರಣ. ಇಂಥ 5 ವಿಧದ ವೈರಸ್‌ಗಳನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಕಡಿಮೆಪಕ್ಷ ಇನ್ನೂ 3 ವಿಧದ ವೈರಸ್‌ಗಳಿವೆ ಎಂಬುದು ಅವರ ಆಂಬೋಣ.—ಕೆಳಗಿನ ಚೌಕ ನೋಡಿ.

ಈ 5 ವಿಧದ ವೈರಸ್‌ಗಳಲ್ಲಿ ಒಂದು ಹೆಪಟೈಟಿಸ್‌ ಬಿ ವೈರಸ್‌ (ಎಚ್‌ಬಿವಿ). ಇದೊಂದೇ ವೈರಸ್‌ ಪ್ರತಿ ವರ್ಷ ಕಡಿಮೆಪಕ್ಷ 6 ಲಕ್ಷ ಜನರ ಪ್ರಾಣ ತೆಗೆಯುತ್ತಿದೆ. ಇದು ಮಲೇರಿಯದಿಂದ ಪ್ರಾಣ ಕಳಕೊಳ್ಳುತ್ತಿರುವವರ ಸಂಖ್ಯೆಗೆ ಸಮವಾಗಿದೆ. ಇದರಿಂದ ಸೋಂಕಿತರಾದವರು ಪ್ರಪಂಚದ ಜನಸಂಖ್ಯೆಯಲ್ಲಿ 1/3 ಭಾಗದಷ್ಟು ಅಂದರೆ 200 ಕೋಟಿಗಿಂತಲೂ ಹೆಚ್ಚು ಜನರು. ಅವರಲ್ಲಿ ಹೆಚ್ಚಿನವರು ಕೆಲವೇ ತಿಂಗಳಲ್ಲಿ ಚೇತರಿಸಿಕೊಂಡರು. ಇನ್ನು ಸುಮಾರು 35 ಕೋಟಿ ಜನರಲ್ಲಿ ಇದು ದೀರ್ಘಕಾಲೀನ ರೋಗವಾಗಿ ಪರಿಣಮಿಸಿದೆ. ಇವರಲ್ಲಿ ರೋಗಲಕ್ಷಣಗಳು ಕಾಣಿಸಲಿ ಕಾಣಿಸದಿರಲಿ ಉಳಿದ ಜೀವಮಾನವೆಲ್ಲ ಅವರು ಎಚ್‌ಬಿವಿಯನ್ನು ಇತರರಿಗೆ ಹರಡಿಸುವ ಸಂಭಾವ್ಯತೆಯಂತೂ ಖಂಡಿತ ಇದೆ. *

ದೀರ್ಘಕಾಲೀನ ಎಚ್‌ಬಿವಿ ರೋಗವುಳ್ಳವರಿಗೆ ಕೂಡಲೇ ಸರಿಯಾದ ಚಿಕಿತ್ಸೆ ಆರಂಭಿಸಿದರೆ ಲಿವರ್‌ ತೀರ ಹಾಳಾಗುವುದನ್ನು ಕೆಲವರಲ್ಲಿ ತಡೆಯಬಹುದು. ಆದರೆ ಇವರಲ್ಲಿ ಹೆಚ್ಚಿನವರಿಗೆ ತಾವು ಸೋಂಕಿತರಾಗಿದ್ದೇವೆ ಎಂದು ತಿಳಿದೇ ಇರುವುದಿಲ್ಲ. ಏಕೆಂದರೆ ಒಂದು ನಿರ್ದಿಷ್ಟ ರಕ್ತ ಪರೀಕ್ಷೆಯಿಂದ ಮಾತ್ರವೇ ಎಚ್‌ಬಿವಿ ಅನ್ನು ಪತ್ತೆಹಚ್ಚಸಾಧ್ಯ. ಸಾಮಾನ್ಯವಾಗಿ ಮಾಡುವ ಲಿವರ್‌ ಪರೀಕ್ಷೆಗಳಲ್ಲಿ ಅದು ತೋರಿಬರುವುದಿಲ್ಲ. ಹೀಗೆ, ಯಾವುದೇ ಸುಳಿವು ಕೊಡದೆ ಪ್ರಾಣ ತೆಗೆಯುವ ಮೌನ ಹಂತಕ ಈ ಎಚ್‌ಬಿವಿ. ವ್ಯಕ್ತಿಗೆ ಸೋಂಕು ತಗಲಿ ಹಲವಾರು ದಶಕಗಳ ವರೆಗೂ ಯಾವುದೇ ರೋಗಲಕ್ಷಣಗಳು ಕಾಣಿಸಲಿಕ್ಕಿಲ್ಲ. ಇವು ತಲೆದೋರುವಷ್ಟರಲ್ಲಿ ಈ ಸೋಂಕು ಸಿರೋಸಿಸ್‌ ಇಲ್ಲವೆ ಲಿವರ್‌ನ ಕ್ಯಾನ್ಸರ್‌ ಆಗಿಬಿಟ್ಟಿರಬಹುದು. ಈ ರೋಗಗಳು ಎಚ್‌ಬಿವಿ ಸೋಂಕು ತಗಲಿರುವ 4 ಮಂದಿಯಲ್ಲಿ ಒಬ್ಬರನ್ನು ಆಹುತಿ ತೆಗೆದುಕೊಳ್ಳುತ್ತದೆ.

“ಎಚ್‌ಬಿವಿ ನನಗೆ ಬಂದದ್ದಾದರೂ ಹೇಗೆ?”

ಡಕ್‌ ಗ್ಯುನ್‌ ಹೇಳುವುದು: “ನನ್ನ 30ನೇ ವಯಸ್ಸಿನಲ್ಲಿ ರೋಗಲಕ್ಷಣಗಳು ಮೊದಲ ಬಾರಿಗೆ ಕಾಣಿಸಿಕೊಂಡವು. ನನಗೆ ಭೇದಿಯಾಗುತ್ತಿದ್ದ ಕಾರಣ ಆಲೋಪತಿ ವೈದ್ಯನ ಬಳಿ ಹೋದೆ. ಅವರು ರೋಗಲಕ್ಷಣ ನೋಡಿ ಔಷಧ ನೀಡಿದರು. ಭೇದಿ ನಿಲ್ಲದ ಕಾರಣ ನಾಟಿ ವೈದ್ಯನ ಬಳಿ ಹೋದೆ. ಅವರು ಕರುಳು ಮತ್ತು ಹೊಟ್ಟೆಗಾಗಿ ಔಷಧ ಕೊಟ್ಟರು. ಆದರೆ ಆ ವೈದ್ಯರಿಬ್ಬರೂ ನನಗೆ ಹೆಪಟೈಟಿಸ್‌ ಇದೆಯೋ ಎಂದು ಪರೀಕ್ಷೆ ಮಾಡಲಿಲ್ಲ. ಚಿಕಿತ್ಸೆ ಫಲಕಾರಿಯಾಗದ ಕಾರಣ ನಾನು ಪುನಃ ಆಲೋಪತಿ ವೈದ್ಯನ ಬಳಿ ಹೋದೆ. * ಅವರು ನನ್ನ ಹೊಟ್ಟೆಯ ಬಲಬದಿಯನ್ನು ಮೆಲ್ಲಗೆ ತಟ್ಟಿದಾಗ ನೋವಾಯಿತು. ಅವರ ಗುಮಾನಿ ಸರಿಯಾಗಿತ್ತು. ನನಗೆ ಹೆಪಟೈಟಿಸ್‌ ಬಿ ಇದೆ ಎಂದು ರಕ್ತಪರೀಕ್ಷೆ ದೃಢೀಕರಿಸಿತು. ನನಗೆ ನಂಬಲಿಕ್ಕಾಗಲಿಲ್ಲ! ನಾನು ಎಂದೂ ರಕ್ತ ತೆಗೆದುಕೊಂಡವನಲ್ಲ, ಅನೈತಿಕ ಸಂಬಂಧಗಳನ್ನೂ ಇಟ್ಟುಕೊಂಡವನಲ್ಲ.”

ಡಕ್‌ ಗ್ಯುನ್‌ಗೆ ಎಚ್‌ಬಿವಿ ಇರುವುದು ಗೊತ್ತಾದಾಗ ಆತನ ಪತ್ನಿಯ, ಹೆತ್ತವರ, ಒಡಹುಟ್ಟಿದವರ ರಕ್ತಪರೀಕ್ಷೆ ಮಾಡಲಾಯಿತು. ಅವರ ದೇಹದಲ್ಲಿ ಎಚ್‌ಬಿವಿಯ ವಿರುದ್ಧ ಹೋರಾಡುವ ಪ್ರತಿಕಾಯಗಳು ಕಂಡುಬಂದವು. ಇದರರ್ಥ ಅವರ ದೇಹಕ್ಕೆ ದಾಳಿಯಿಟ್ಟಿದ್ದ ವೈರಸನ್ನು ಅವರಲ್ಲಿದ್ದ ರೋಗನಿರೋಧಕ ಶಕ್ತಿ ನಾಶ ಮಾಡಿಬಿಟ್ಟಿತು. ಡಕ್‌ ಗ್ಯುನ್‌ಗೆ ಎಚ್‌ಬಿವಿ ಬಂದದ್ದು ಆತನ ಕುಟುಂಬದವರಿಂದಲೋ? ಅಥವಾ ಅವರೆಲ್ಲರಿಗೂ ಒಂದೇ ಮೂಲದಿಂದ ಎಚ್‌ಬಿವಿ ಅಂಟಿಕೊಂಡಿತೋ? ಅದನ್ನು ಹೇಳುವುದು ಕಷ್ಟ. ಏಕೆಂದರೆ ಶೇಕಡಾ 35ರಷ್ಟು ಸಂದರ್ಭಗಳಲ್ಲಿ ಸೋಂಕು ಹೇಗೆ ತಗಲಿತೆಂಬುದು ರಹಸ್ಯವಾಗಿ ಉಳಿದಿದೆ. ಆದರೆ ಇದಂತೂ ಖಚಿತ: ಹೆಪಟೈಟಿಸ್‌ ಬಿ ಆನುವಂಶಿಕವಾಗಿ ಬರುವುದಿಲ್ಲ ಮತ್ತು ಇನ್ನೊಬ್ಬರನ್ನು ಮುಟ್ಟುವುದರಿಂದಾಗಲಿ ಆಹಾರ ಹಂಚಿಕೊಳ್ಳುವುದರಿಂದಾಗಲಿ ಹರಡುವುದಿಲ್ಲ. ಬದಲಿಗೆ ಸೋಂಕಿತ ವ್ಯಕ್ತಿಯ ರಕ್ತ ಅಥವಾ ದೇಹ ದ್ರವಗಳು ಅಂದರೆ ವೀರ್ಯ, ಯೋನಿಯ ಸ್ರವಿಕೆಗಳು, ಜೊಲ್ಲು ಇನ್ನೊಬ್ಬ ವ್ಯಕ್ತಿಯ ರಕ್ತಪ್ರವಾಹವನ್ನು ಚರ್ಮದ ಮೇಲಿನ ಗಾಯದ ಅಥವಾ ಲೋಳ್ಪೊರೆಯ ಮೂಲಕ ಸೇರಿದರೆ ಅವನು ಎಚ್‌ಬಿವಿ ಸೋಂಕಿತನಾಗುತ್ತಾನೆ.

ಎಚ್‌ಬಿವಿ ಸೋಂಕು ಇರುವ ರಕ್ತಪೂರಣದಿಂದ ಹಲವಾರು ಜನರಿಗೆ ಈ ರೋಗ ತಗಲುತ್ತಿದೆ. ಅದರಲ್ಲೂ ರಕ್ತದಲ್ಲಿ ಹೆಪಟೈಟಿಸ್‌ ಬಿ ವೈರಸನ್ನು ಪತ್ತೆಹಚ್ಚಲು ಬೇಕಾದ ಸೌಲಭ್ಯ ಇಲ್ಲದಿರುವ ದೇಶಗಳಲ್ಲಿ ಅಥವಾ ಆ ಸೌಲಭ್ಯ ಕೆಲವೆಡೆ ಮಾತ್ರ ಲಭ್ಯವಿರುವ ದೇಶಗಳಲ್ಲಿ ಇದು ಜಾಸ್ತಿ. ಏಡ್ಸ್‌ಗೆ ಕಾರಣವಾದ ಎಚ್‌ಐವಿಗಿಂತ ಎಚ್‌ಬಿವಿ 100 ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ. ಅತ್ಯಲ್ಪ ಪ್ರಮಾಣದ ಸೋಂಕಿತ ರಕ್ತ ಉದಾಹರಣೆಗೆ ರೇಜರ್‌ ಬ್ಲೇಡಿಗೆ ಅಂಟಿಕೊಂಡಿರುವ ರಕ್ತ ಕೂಡ ಎಚ್‌ಬಿವಿಯನ್ನು ದಾಟಿಸಬಲ್ಲದು. ಸುಮಾರು ಒಂದಕ್ಕಿಂತ ಹೆಚ್ಚು ವಾರಗಳ ಮುಂಚೆ ಆದ ರಕ್ತ ಕಲೆಯಿಂದಲೂ ಎಚ್‌ಬಿವಿ ಸೋಂಕು ಹರಡಬಲ್ಲದು. *

ತಿಳುವಳಿಕೆ ಅಗತ್ಯ

“ನನಗೆ ಎಚ್‌ಬಿವಿ ಇದೆಯೆಂದು ಕಂಪೆನಿಯವರಿಗೆ ಗೊತ್ತಾದಾಗ ಹೆಚ್ಚಿನ ಸಹೋದ್ಯೋಗಿಗಳಿಂದ ದೂರ, ಒಂದು ಸಣ್ಣ ಆಫೀಸಿನಲ್ಲಿ ನನ್ನನ್ನು ಹಾಕಿದರು” ಎಂದು ಜ್ಞಾಪಿಸಿಕೊಳ್ಳುತ್ತಾರೆ ಡಕ್‌ ಗ್ಯುನ್‌. ಜನರು ಈ ರೀತಿ ನಡಕೊಳ್ಳುವುದು ಸಾಮಾನ್ಯ. ಏಕೆಂದರೆ ವೈರಸ್‌ ಹೇಗೆ ಹರಡುತ್ತದೆ ಎಂಬದರ ಬಗ್ಗೆ ಹೆಚ್ಚಿನವರಿಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ. ವಿದ್ಯಾವಂತರು ಸಹ ಹೆಪಟೈಟಿಸ್‌ ಬಿ ಅನ್ನು ಬಹಳ ಸಾಂಕ್ರಾಮಿಕ ಆದರೆ ಜೀವಕ್ಕೆ ಅಷ್ಟೇನೂ ಅಪಾಯ ತರದ ಹೆಪಟೈಟಿಸ್‌ ಎ ಅಂತ ತಪ್ಪು ತಿಳಿದುಕೊಳ್ಳಬಹುದು. ಎಚ್‌ಬಿವಿ ಲೈಂಗಿಕ ಸಂಪರ್ಕದಿಂದಲೂ ಹರಡುವುದರಿಂದ ಸೋಂಕಿತ ವ್ಯಕ್ತಿ ನೈತಿಕ ರೀತಿಯಲ್ಲಿ ಶುದ್ಧನಾಗಿದ್ದರೂ ಜನರು ಅವನನ್ನು ಸಂಶಯದಿಂದ ನೋಡಬಹುದು.

ಈ ರೀತಿಯ ತಪ್ಪು ತಿಳುವಳಿಕೆ ಮತ್ತು ಸಂಶಯ ಗಂಭೀರ ಸಮಸ್ಯೆಗಳನ್ನು ಹುಟ್ಟುಹಾಕಬಲ್ಲದು. ಉದಾಹರಣೆಗೆ ಅನೇಕ ಸ್ಥಳಗಳಲ್ಲಿ ಎಚ್‌ಬಿವಿ ಸೋಂಕಿತರಾದ ಆಬಾಲವೃದ್ಧರನ್ನು ವಿನಾ ಕಾರಣ ದೂರಮಾಡಲಾಗುತ್ತದೆ. ಸೋಂಕಿತರೊಂದಿಗೆ ಆಟವಾಡಲು ನೆರೆಯವರು ತಮ್ಮ ಮಕ್ಕಳನ್ನು ಬಿಡುವುದಿಲ್ಲ, ಶಾಲೆಗಳು ಅವರನ್ನು ಸೇರಿಸಿಕೊಳ್ಳುವುದಿಲ್ಲ, ಕೆಲಸಕ್ಕೂ ಯಾರೂ ಇಟ್ಟುಕೊಳ್ಳುವುದಿಲ್ಲ. ಈ ರೀತಿ ತಮ್ಮನ್ನು ಜನರು ದೂರಮಾಡುವರು ಎಂಬ ಭಯದಿಂದ ಅನೇಕರು ಎಚ್‌ಬಿವಿಯ ತಪಾಸಣೆ ಮಾಡಿಸಿಕೊಳ್ಳುವ ಇಲ್ಲವೆ ತಮಗೆ ಎಚ್‌ಬಿವಿ ಇರುವುದನ್ನು ಇತರರಿಗೆ ಹೇಳುವ ಗೊಡವೆಗೇ ಹೋಗುವುದಿಲ್ಲ. ಕೆಲವರು ಸತ್ಯವನ್ನು ಮುಚ್ಚಿಟ್ಟು, ತಮ್ಮ ಆರೋಗ್ಯವನ್ನಲ್ಲದೆ ಕುಟುಂಬದವರ ಆರೋಗ್ಯವನ್ನೂ ಗಂಡಾಂತರಕ್ಕೆ ಒಡ್ಡುತ್ತಾರೆ. ಈ ರೀತಿ ಎಚ್‌ಬಿವಿಯ ವಿಷಚಕ್ರ ತಲೆಮಾರುಗಳ ವರೆಗೂ ದಾಟುತ್ತಾ ಹೋಗಬಲ್ಲದು.

ವಿಶ್ರಾಂತಿ ಅಗತ್ಯ

“ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಡಾಕ್ಟರ್‌ ಹೇಳಿದರೂ 2 ತಿಂಗಳಲ್ಲೇ ಕೆಲಸಕ್ಕೆ ವಾಪಸ್ಸಾದೆ. ಸಿರೋಸಿಸ್‌ ಇಲ್ಲವೆಂದು ರಕ್ತಪರೀಕ್ಷೆ, ಸಿ.ಟಿ. ಸ್ಕ್ಯಾನ್‌ಗಳು ತೋರಿಸಿದಾಗ ಗುಣಮುಖನಾಗಿದ್ದೇನೆಂದು ಭಾವಿಸಿದೆ” ಎನ್ನುತ್ತಾರೆ ಡಕ್‌ ಗ್ಯುನ್‌. 3 ವರ್ಷಗಳ ಬಳಿಕ ಕಂಪೆನಿಯು ಡಕ್‌ ಗ್ಯುನ್‌ರನ್ನು ದೊಡ್ಡ ನಗರವೊಂದಕ್ಕೆ ವರ್ಗಾಯಿಸಿತು. ಅಲ್ಲಿನ ಜೀವನ ತುಂಬ ಒತ್ತಡಭರಿತವಾಗಿತ್ತು. ಮನೆ ಖರ್ಚುಗಳು ಏರುತ್ತಿದ್ದವು, ಸಂಸಾರ ನಡೆಸಬೇಕಾಗಿತ್ತು. ಹಾಗಾಗಿ ಅವರು ದುಡಿಯುವುದು ಅನಿವಾರ್ಯವಾಯಿತು.

ಕೆಲವೇ ತಿಂಗಳಲ್ಲಿ ಡಕ್‌ ಗ್ಯುನ್‌ರ ರಕ್ತದಲ್ಲಿ ಹೆಪಟೈಟಿಸ್‌ ಬಿ ವೈರಸ್‌ಗಳ ಸಂಖ್ಯೆ ಏರಿತು. ಅವರಿಗೆ ತುಂಬ ಸುಸ್ತಾಗುತ್ತಿತ್ತು. “ನಾನು ಕೆಲಸ ಬಿಡಬೇಕಾಯಿತು. ವಿಶ್ರಾಂತಿ ತೆಗೆದುಕೊಳ್ಳದೆ ದುಡಿದದ್ದೇ ನಾನು ಮಾಡಿದ ದೊಡ್ಡ ತಪ್ಪು ಎಂದು ಈಗ ಅರಿವಾಗುತ್ತಿದೆ. ನಾನು ಈ ಮೊದಲೇ ಕೆಲಸ ಕಡಿಮೆಮಾಡುತ್ತಿದ್ದರೆ ನನ್ನ ಆರೋಗ್ಯ ಇಷ್ಟು ಕೆಡುತ್ತಿರಲಿಲ್ಲ, ಲಿವರ್‌ ಕೂಡ ಇಷ್ಟು ಹಾಳಾಗುತ್ತಿರಲಿಲ್ಲ” ಎನ್ನುತ್ತಾರೆ ಡಕ್‌ ಗ್ಯುನ್‌. ಅವರೊಂದು ಒಳ್ಳೇ ಪಾಠ ಕಲಿತುಕೊಂಡರು. ಅಂದಿನಿಂದ ಅವರು ಕೆಲಸವನ್ನೂ ಖರ್ಚುಗಳನ್ನೂ ಕಡಿಮೆಮಾಡಿದರು. ಅಲ್ಲದೆ ಅವರ ಕುಟುಂಬವೂ ಉತ್ತಮ ಸಹಕಾರ ನೀಡಿತು. ಖರ್ಚುಗಳನ್ನು ಭರಿಸಲು ಅವರ ಪತ್ನಿ ಒಂದು ಸಣ್ಣ ಕೆಲಸವನ್ನು ಮಾಡತೊಡಗಿದರು.

ಹೆಪಟೈಟಿಸ್‌ ಬಿ ಇದ್ದರೂ ಬದುಕುವುದು ಹೇಗೆ?

ಡಕ್‌ ಗ್ಯುನ್‌ರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡರೂ ಲಿವರ್‌ನಲ್ಲಿ ರಕ್ತ ಹಾದುಹೋಗುವುದಕ್ಕೆ ಅಡಚಣೆ ಹೆಚ್ಚುತ್ತಾ ಹೋಯಿತು. ಇದರಿಂದ ರಕ್ತದೊತ್ತಡವೂ ಹೆಚ್ಚಾಯಿತು. 11 ವರ್ಷಗಳ ಬಳಿಕ ಅವರ ಅನ್ನನಾಳದಲ್ಲಿನ ರಕ್ತನಾಳವೊಂದು ಒಡೆದು ಗಂಟಲಿನಿಂದ ರಕ್ತ ಚಿಮ್ಮಿ ಹೊರಬಂತು. ಅವರು ಒಂದು ವಾರ ಆಸ್ಪತ್ರೆಯಲ್ಲಿ ಇರಬೇಕಾಯಿತು. 4 ವರ್ಷಗಳ ಬಳಿಕ, ಅವರ ಲಿವರ್‌ ಅಮೋನಿಯವನ್ನು ಸೋಸುವ ಶಕ್ತಿಗುಂದಿ ಮಿದುಳಿನಲ್ಲಿ ಅಮೋನಿಯ ಸಂಗ್ರಹವಾದ ಕಾರಣ ಅವರ ಮಾನಸಿಕ ಸ್ಥಿತಿಯಲ್ಲಿ ಏರುಪೇರು ಕಂಡುಬಂತು. ಅದಕ್ಕಾಗಿ ಚಿಕಿತ್ಸೆ ಪಡೆದ ಕೆಲವೇ ದಿನಗಳಲ್ಲಿ ಈ ಸಮಸ್ಯೆ ಸರಿಹೋಯಿತು.

ಈಗ ಡಕ್‌ ಗ್ಯುನ್‌ರಿಗೆ 54 ವರ್ಷ. ಅವರ ಆರೋಗ್ಯ ಹದಗೆಟ್ಟರೆ ರೋಗವನ್ನು ಹತೋಟಿಗೆ ತರಲು ಯಾವ ಉಪಾಯವೂ ಉಳಿದಿಲ್ಲ. ವೈರಸ್‌ವಿರೋಧಿ ಚಿಕಿತ್ಸೆ ಕೊಟ್ಟರೂ ವೈರಸ್‌ಗಳನ್ನು ಸಂಪೂರ್ಣವಾಗಿ ನಾಶಮಾಡಲಾಗದು. ಮಾತ್ರವಲ್ಲ ಅದರಿಂದಾಗಬಹುದಾದ ಅಡ್ಡಪರಿಣಾಮಗಳೂ ಗಂಭೀರ. ಉಳಿದಿರುವ ಒಂದೇ ಒಂದು ಮಾರ್ಗವೆಂದರೆ ಲಿವರ್‌ನ ಬದಲಿ ಜೋಡಣೆ. ಆದರೆ ಲಿವರ್‌ನ ದಾನಿಗಳ ಪಟ್ಟಿಗಿಂತ ಅದರ ಅಗತ್ಯವಿರುವವರ ಪಟ್ಟಿಯೇ ತುಂಬ ಉದ್ದವಿದೆ! “ಯಾವುದೇ ಕ್ಷಣದಲ್ಲಿ ಸಿಡಿಯಬಹುದಾದ ಬಾಂಬ್‌ನಂತಿದೆ ನನ್ನ ಪರಿಸ್ಥಿತಿ. ಹಾಗೆಂದು ಅದರ ಬಗ್ಗೆಯೇ ಚಿಂತಿಸುತ್ತಾ ಕೂರುವ ಬದಲು ನನಗೆ ಜೀವವಿದೆ, ತಲೆ ಮೇಲೊಂದು ಸೂರಿದೆ, ಪ್ರೀತಿವಾತ್ಸಲ್ಯದಿಂದ ಕೂಡಿದ ಕುಟುಂಬವಿದೆ ಎಂಬುದನ್ನು ಯೋಚಿಸಿ ಸಂತೋಷ ಪಡುತ್ತೇನೆ. ನಿಜವಾಗಿ ನೋಡುವುದಾದರೆ ನನ್ನ ಪರಿಸ್ಥಿತಿಯಿಂದಾಗಿ ಕೆಲವು ವಿಧಗಳಲ್ಲಿ ಒಳಿತೇ ಆಗಿದೆ. ಹೇಗೆಂದರೆ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಿದೆ. ಬೈಬಲನ್ನು ಓದಿ, ಅಧ್ಯಯನ ಮಾಡಲು ತುಂಬ ಸಮಯ ಸಿಗುತ್ತಿದೆ. ಇದು ಅಕಾಲಿಕ ಮರಣದ ಭಯವನ್ನು ಶಮನಮಾಡಲು ಮತ್ತು ಇದೇ ಭೂಮಿಯಲ್ಲಿ ಕಾಯಿಲೆಗಳಿಲ್ಲದೆ ಜೀವಿಸುವ ದಿನಕ್ಕಾಗಿ ಎದುರುನೋಡಲು ಸಹಾಯಮಾಡುತ್ತದೆ.” *

ಡಕ್‌ ಗ್ಯುನ್‌ರ ಈ ಸಕಾರಾತ್ಮಕ ನೋಟದಿಂದಾಗಿ ಅವರ ಕುಟುಂಬದಲ್ಲಿ ಸಂತೋಷದ ವಾತಾವರಣವಿದೆ. ಮಾತ್ರವಲ್ಲ ಅವರೂ ಅವರ ಪತ್ನಿ ಮತ್ತು ಮೂವರು ಮಕ್ಕಳೂ ಕ್ರೈಸ್ತ ಶುಶ್ರೂಷೆಯಲ್ಲಿ ಪೂರ್ಣ ಸಮಯ ತಲ್ಲೀನರಾಗಿರಲು ಸಾಧ್ಯವಾಗಿದೆ. (g10-E 08)

[ಪಾದಟಿಪ್ಪಣಿಗಳು]

^ ದೇಹದಲ್ಲಿ ಸೇರಿದ ವೈರಸನ್ನು ರೋಗನಿರೋಧಕ ಶಕ್ತಿಯು 6 ತಿಂಗಳೊಳಗೆ ನಾಶಮಾಡದಿದ್ದಲ್ಲಿ ಇದನ್ನು ‘ದೀರ್ಘಕಾಲೀನ ರೋಗ’ ಎಂದು ಹೇಳಲಾಗುತ್ತದೆ.

^ಎಚ್ಚರ! ಪತ್ರಿಕೆ ಯಾವುದೇ ಒಂದು ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುವುದಿಲ್ಲ.

^ ಸೋಂಕಿತ ವ್ಯಕ್ತಿಯ ರಕ್ತ ಎಲ್ಲಾದರೂ ತಗಲಿರುವಲ್ಲಿ ಗೃಹಬಳಕೆಯ ಬ್ಲೀಚಿನ ಒಂದು ಭಾಗಕ್ಕೆ 10 ಭಾಗದಷ್ಟು ನೀರನ್ನು ಸೇರಿಸಿ ಆಗಷ್ಟೇ ಮಾಡಿದ ದ್ರಾವಣದಿಂದ ಆ ಜಾಗ ಇಲ್ಲವೆ ವಸ್ತುವನ್ನು ಕೈಗವಸು ಧರಿಸಿಕೊಂಡು ತಕ್ಷಣವೇ ಚೆನ್ನಾಗಿ ಶುಚಿಮಾಡತಕ್ಕದ್ದು.

^ ಅಸ್ವಸ್ಥತೆ ಇಲ್ಲದಿರುವ ಸಮಯದ ಬಗ್ಗೆ ಬೈಬಲ್‌ ಕೊಡುವ ಆಶ್ವಾಸನೆಯ ಕುರಿತು ತಿಳಿಯಲು ಪ್ರಕಟನೆ 21:3, 4ನ್ನು ಮತ್ತು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕ ನೋಡಿ.

[ಪುಟ 15ರಲ್ಲಿರುವ ಸಂಕ್ಷಿಪ್ತ ವಿವರಣೆ]

ಆದಷ್ಟು ಕೂಡಲೇ ಚಿಕಿತ್ಸೆ ಆರಂಭಿಸಿದರೆ ಹೆಚ್ಚಿನ ಹಾನಿಯನ್ನು ತಡೆಗಟ್ಟಬಹುದು

[ಪುಟ 16ರಲ್ಲಿರುವ ಸಂಕ್ಷಿಪ್ತ ವಿವರಣೆ]

ಜನರು ತಮ್ಮನ್ನು ದೂರಮಾಡುವರು ಎಂಬ ಭಯದಿಂದ ಅನೇಕರು ಎಚ್‌ಬಿವಿ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ, ತಮಗೆ ಎಚ್‌ಬಿವಿ ಇರುವುದನ್ನು ಇತರರಿಗೆ ಹೇಳುವುದೂ ಇಲ್ಲ

[ಪುಟ 14ರಲ್ಲಿರುವ ಚೌಕ]

ಯಾವ ಹೆಪಟೈಟಿಸ್‌ ಇದು?

ಹೆಪಟೈಟಿಸ್‌ಗೆ 5 ವಿಧದ ವೈರಸ್‌ಗಳು ಕಾರಣವಾಗಿವೆ. ಅವುಗಳಲ್ಲಿ ಎ, ಬಿ, ಸಿ ಎಂದು ವರ್ಗೀಕರಿಸಲಾದ ವೈರಸ್‌ಗಳು ತೀರ ಸಾಮಾನ್ಯವಾದುದು. ಹೆಪಟೈಟಿಸ್‌ಗೆ ಕಾರಣವಾದ ಇನ್ನೂ ಕೆಲವು ವೈರಸ್‌ಗಳಿವೆ ಎಂದು ಶಂಕಿಸಲಾಗಿದೆ. ಎಲ್ಲ ವಿಧದ ಹೆಪಟೈಟಿಸ್‌ನಲ್ಲಿ ಫ್ಲೂ ಜ್ವರದಂಥ ರೋಗಲಕ್ಷಣಗಳು ಕಂಡುಬರುತ್ತವೆ. ಇದರ ಜೊತೆ ಕಾಮಾಲೆ ಇರಲೂಬಹುದು, ಇಲ್ಲದಿರಲೂಬಹುದು. ಅನೇಕರಲ್ಲಿ ವಿಶೇಷವಾಗಿ ಮಕ್ಕಳಲ್ಲಿ ರೋಗಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ. ಹೆಪಟೈಟಿಸ್‌ ಬಿ ಮತ್ತು ಹೆಪಟೈಟಿಸ್‌ ಸಿ ಸೋಂಕಿನ ರೋಗಲಕ್ಷಣಗಳು ಕಾಣಿಸಿಕೊಳ್ಳುವಷ್ಟರಲ್ಲಿ ಲಿವರ್‌ ಗಂಭೀರ ಹಾನಿಗೆ ಒಳಗಾಗಿರಬಹುದು.

ಹೆಪಟೈಟಿಸ್‌ ಎ ವೈರಸ್‌ (ಎಚ್‌ಎವಿ)

ಸೋಂಕಿತ ವ್ಯಕ್ತಿಯ ಮಲದಲ್ಲಿ ಎಚ್‌ಎವಿ ಇರುತ್ತದೆ. ಇದು ಉಪ್ಪುನೀರು, ಸಿಹಿನೀರು ಮತ್ತು ಐಸ್‌ ಕ್ಯೂಬ್‌ಗಳಲ್ಲೂ ಬದುಕಿರಬಲ್ಲದು. ಒಬ್ಬ ವ್ಯಕ್ತಿಗೆ ಎಚ್‌ಎವಿ ಹೇಗೆ ತಗಲಬಹುದು?

ಮಲದಿಂದ ಕಲುಷಿತಗೊಂಡ ನೀರಿನ ಸಮುದ್ರಾಹಾರವನ್ನು ಬೇಯಿಸದೆ ತಿನ್ನುವುದರಿಂದ ಮತ್ತು ಕಲುಷಿತಗೊಂಡ ನೀರಿನ ಸೇವನೆಯಿಂದ

ಸೋಂಕಿತ ವ್ಯಕ್ತಿಯೊಂದಿಗೆ ದೈಹಿಕವಾಗಿ ನಿಕಟ ಸಂಪರ್ಕ ಇಡುವುದರಿಂದ ಅಥವಾ ಅವರ ಆಹಾರ ಪಾನೀಯಗಳನ್ನು ಹಂಚಿಕೊಳ್ಳುವುದರಿಂದ ಅಥವಾ ಅವರು ಬಳಸಿದ ಪಾತ್ರೆಗಳನ್ನು ಬಳಸುವುದರಿಂದ

ಮಲ ವಿಸರ್ಜನೆ ಮಾಡಿದ ಬಳಿಕ ಇಲ್ಲವೇ ಮಲ ವಿಸರ್ಜನೆ ಮಾಡಿದ ಸೋಂಕಿತ ಶಿಶುವನ್ನು ಶುಚಿಗೊಳಿಸಿದ ಬಳಿಕ ಇಲ್ಲವೇ ಅಡುಗೆ ಮಾಡುವ ಮುನ್ನ ಚೆನ್ನಾಗಿ ಕೈ ತೊಳೆಯದೇ ಇರುವುದರಿಂದ

ಎಚ್‌ಎವಿ ಉಂಟುಮಾಡುವ ಕಾಯಿಲೆ ತೀವ್ರವಾಗಿರುತ್ತದೆ ಆದರೆ ದೀರ್ಘಕಾಲೀನವಲ್ಲ. ಹೆಚ್ಚಾಗಿ ಕೆಲವೇ ವಾರ ಅಥವಾ ತಿಂಗಳೊಳಗೆ ವೈರಸ್‌ಗಳನ್ನು ದೇಹ ನಾಶಮಾಡುತ್ತದೆ. ಎಲ್ಲ ವೈದ್ಯರು ಒಂದೇ ರೀತಿಯ ಔಷಧೋಪಚಾರವನ್ನು ಶಿಫಾರಸ್ಸು ಮಾಡಲಿಕ್ಕಿಲ್ಲ ಆದರೆ ವಿಶ್ರಾಂತಿ ಮತ್ತು ಸಾಕಷ್ಟು ಪೌಷ್ಟಿಕಾಂಶಗಳ ಸೇವನೆಯನ್ನು ಅವರೆಲ್ಲರೂ ಶಿಫಾರಸ್ಸು ಮಾಡುತ್ತಾರೆ. ಲಿವರ್‌ ಸಂಪೂರ್ಣ ಗುಣವಾಗಿದೆ ಎಂದು ವೈದ್ಯರು ಹೇಳುವ ವರೆಗೂ ಮದ್ಯಪಾನ ಆಗಲಿ ಲಿವರಿಗೆ ಕುತ್ತು ತರಬಲ್ಲ ಆ್ಯಸಿಟಮಿನಫಿನ್‌ನಂಥ ಔಷಧಗಳ ಸೇವನೆಯಾಗಲಿ ವರ್ಜ್ಯ. ಎಚ್‌ಎವಿ ಸೋಂಕಿತ ವ್ಯಕ್ತಿ ಗುಣಮುಖನಾದ ಮೇಲೆ ಅದು ಅವನಿಗೆ ಪುನಃ ಮರುಕಳಿಸದು ಆದರೆ ಇತರ ಹೆಪಟೈಟಿಸ್‌ಗಳು ತಗಲುವ ಸಾಧ್ಯತೆಯಿದೆ. ಲಸಿಕೆ ಪಡೆದು ಹೆಪಟೈಟಿಸ್‌ ಎ ಅನ್ನು ತಡೆಗಟ್ಟಬಹುದು.

ಹೆಪಟೈಟಿಸ್‌ ಬಿ ವೈರಸ್‌ (ಎಚ್‌ಬಿವಿ)

ಸೋಂಕಿತ ವ್ಯಕ್ತಿಯ ರಕ್ತ, ವೀರ್ಯ, ಯೋನಿಯ ಸ್ರವಿಕೆಗಳಲ್ಲಿ ಎಚ್‌ಬಿವಿ ಇರುತ್ತದೆ. ರೋಗನಿರೋಧಕ ಶಕ್ತಿ ಕಡಿಮೆಯಿರುವ ವ್ಯಕ್ತಿಯ ದೇಹವನ್ನು ಇಂಥ ದ್ರವ ಪ್ರವೇಶಿಸಿದಾಗ ವೈರಸ್‌ ಹರಡುತ್ತದೆ. ಅದು ಯಾವ ವಿಧಗಳಲ್ಲಿ ಪ್ರವೇಶಿಸಬಹುದು?

ಸೋಂಕುಳ್ಳ ತಾಯಿ ಮಗುವಿಗೆ ಜನ್ಮಕೊಡುವ ಸಮಯದಲ್ಲಿ

ಹಚ್ಚೆ ಹಾಕಿಸಿಕೊಳ್ಳಲು, ದೇಹವನ್ನು ಚುಚ್ಚಿಸಿಕೊಳ್ಳಲು ಇಲ್ಲವೇ ವೈದ್ಯಕೀಯ ಮತ್ತು ದಂತ ಚಿಕಿತ್ಸೆಗಾಗಿ ಬಳಸಲಾಗುವ ಪರಿಕರಗಳನ್ನು ಸರಿಯಾದ ವಿಧಾನದಲ್ಲಿ ಸ್ಟೆರಿಲೈಸ್‌ (ಕ್ರಿಮಿಶುದ್ಧ) ಮಾಡಿರದಿದ್ದರೆ

ಚುಚ್ಚುಮದ್ದಿನ ಸೂಜಿ, ರೇಜರ್‌ ಬ್ಲೇಡ್‌, ನೇಲ್‌ ಕಟರ್‌, ಕತ್ತರಿ, ಹಲ್ಲುಜ್ಜುವ ಬ್ರಷ್‌ನ ಅಥವಾ ಇನ್ನಾವುದೇ ವಸ್ತುವಿನ ಮೂಲಕ ಅತ್ಯಲ್ಪ ಪ್ರಮಾಣದ ಸೋಂಕಿತ ರಕ್ತವು ಚರ್ಮದ ಮೇಲಿನ ಗಾಯದ ಮೂಲಕ ನಮ್ಮ ರಕ್ತವನ್ನು ಸೇರಿದರೆ

ಲೈಂಗಿಕ ಚಟುವಟಿಕೆ ಮೂಲಕ

ಆರೋಗ್ಯ ಅಧಿಕಾರಿಗಳ ಪ್ರಕಾರ ಕೀಟಗಳು, ಕೆಮ್ಮು, ಕೈ ಹಿಡಿದುಕೊಳ್ಳುವುದು, ಅಪ್ಪಿಕೊಳ್ಳುವುದು, ಕೆನ್ನೆಗೆ ಮುತ್ತು ಕೊಡುವುದು, ಎದೆಹಾಲು ಉಣಿಸುವುದು, ಆಹಾರಪಾನೀಯಗಳನ್ನು ಹಂಚಿಕೊಳ್ಳುವುದು, ಸೋಂಕಿತ ವ್ಯಕ್ತಿ ಬಳಸಿದ ಪಾತ್ರೆಪಗಡೆಗಳ ಬಳಕೆ ಇವು ಯಾವುದರಿಂದಲೂ ಎಚ್‌ಬಿವಿ ಹರಡುವುದಿಲ್ಲ. ತೀವ್ರವಾದ ಎಚ್‌ಬಿವಿಯಿಂದ ಹೆಚ್ಚಿನ ವಯಸ್ಕರು ಚೇತರಿಸಿಕೊಳ್ಳುತ್ತಾರೆ ಮತ್ತು ಅದರ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಚಿಕ್ಕ ಮಕ್ಕಳಲ್ಲಿ ಈ ಸೋಂಕು ದೀರ್ಘಕಾಲೀನವಾಗುವ ಅಪಾಯ ಹೆಚ್ಚು. ಆದರೆ ದೀರ್ಘಕಾಲೀನ ಎಚ್‌ಬಿವಿಗೆ ಚಿಕಿತ್ಸೆ ಮಾಡದೆ ಹಾಗೆ ಬಿಟ್ಟರೆ ಲಿವರ್‌ ವೈಫಲ್ಯ ಮತ್ತು ಮರಣ ಕಟ್ಟಿಟ್ಟ ಬುತ್ತಿ. ಲಸಿಕೆ ಪಡೆದು ಹೆಪಟೈಟಿಸ್‌ ಬಿ ಅನ್ನು ತಡೆಗಟ್ಟಬಹುದು.

ಹೆಪಟೈಟಿಸ್‌ ಸಿ ವೈರಸ್‌ (ಎಚ್‌ಸಿವಿ)

ಎಚ್‌ಬಿವಿ ಹರಡುವ ರೀತಿಗಳಲ್ಲೇ ಎಚ್‌ಸಿವಿ ಕೂಡ ಹರಡುತ್ತದೆ. ಆದರೆ ಸಾಮಾನ್ಯವಾಗಿ ಕಲುಷಿತಗೊಂಡ ಸೂಜಿಗಳಿಂದ ಚುಚ್ಚುಮದ್ದು ಕೊಟ್ಟಾಗ ಹರಡುವುದು ಹೆಚ್ಚು. ಇದಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ. *

[ಪಾದಟಿಪ್ಪಣಿ]

^ ಹೆಪಟೈಟಿಸ್‌ ಬಗ್ಗೆ ಹೆಚ್ಚಿನ ಮಾಹಿತಿಯನ್ನು ವಿಶ್ವ ಆರೋಗ್ಯ ಸಂಸ್ಥೆ www.who.int ವೆಬ್‌ಸೈಟಿನಲ್ಲಿ ಅನೇಕ ಭಾಷೆಗಳಲ್ಲಿ ಲಭ್ಯಗೊಳಿಸಿದೆ.

[ಪುಟ 16ರಲ್ಲಿರುವ ಚೌಕ]

ಎಚ್‌ಬಿವಿ ವಿಷಚಕ್ರ ಮುರಿಯಲು ...

ಲೋಕವ್ಯಾಪಕವಾಗಿ ಎಚ್‌ಬಿವಿ ಜನರನ್ನು ಭಾದಿಸುತ್ತಿದೆ. ಆದರೆ ದೀರ್ಘಕಾಲೀನ ಎಚ್‌ಬಿವಿಯುಳ್ಳ ಜನರಲ್ಲಿ ಶೇಕಡಾ 78ರಷ್ಟು ಮಂದಿ ಏಷ್ಯಾ ಖಂಡ ಹಾಗೂ ಪೆಸಿಫಿಕ್‌ ದ್ವೀಪಗಳ ನಿವಾಸಿಗಳು. ಈ ಪ್ರದೇಶಗಳ ಹಲವೆಡೆ 10 ಜನರಲ್ಲಿ ಒಬ್ಬರು ಎಚ್‌ಬಿವಿ ಸೋಂಕಿತರು. ಇವರಲ್ಲಿ ಅನೇಕರು ಜನನದ ಸಮಯದಲ್ಲಿ ತಮ್ಮ ತಾಯಂದಿರಿಂದ ಇಲ್ಲವೆ ಬಾಲ್ಯದಲ್ಲಿ ಇತರ ಮಕ್ಕಳ ಸೋಂಕಿತ ರಕ್ತ ತಗಲಿದಾಗ ಈ ವೈರಸ್‌ ಅನ್ನು ಪಡೆಯುತ್ತಾರೆ. ನವಜಾತ ಶಿಶುಗಳು ಹಾಗೂ ಬಾಧಿತರಾಗಬಹುದಾದ ಇತರರಿಗೆ ಕೊಡಲಾಗುತ್ತಿರುವ ಲಸಿಕೆಯಿಂದ ಎಚ್‌ಬಿವಿಯ ವಿಷಚಕ್ರ ಮುರಿಯಲು ಸಾಧ್ಯವಾಗುತ್ತಿದೆ.* ಎಲ್ಲೆಲ್ಲ ಈ ಲಸಿಕೆ ಬಳಸಲಾಗಿದೆಯೋ ಅಲ್ಲೆಲ್ಲ ಈ ರೋಗದಿಂದ ನರಳುತ್ತಿರುವವರ ಸಂಖ್ಯೆ ತೀವ್ರ ಇಳಿತ ಕಂಡಿದೆ.

[ಪಾದಟಿಪ್ಪಣಿ]

ರಕ್ತದ ಅಂಶಗಳಿಂದಲೂ ಹೆಪಟೈಟಿಸ್‌ನ ಲಸಿಕೆಯನ್ನು ತಯಾರಿಸಲಾಗುತ್ತದೆ. ಈ ಸಂಬಂಧದಲ್ಲಿ ಹೇಗೆ ನಿರ್ಣಯ ತೆಗೆದುಕೊಳ್ಳಬೇಕೆಂದು ಚಿಂತಿತರಾದ ಓದುಗರು ಜೂನ್‌ 15, 2000 ಮತ್ತು ಅಕ್ಟೋಬರ್‌ 1, 1994ರ ಕಾವಲಿನಬುರುಜು ಪತ್ರಿಕೆಗಳ “ವಾಚಕರಿಂದ ಪ್ರಶ್ನೆಗಳು” ಎಂಬ ಭಾಗವನ್ನು ನೋಡಬಹುದು. “ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ” ಪುಸ್ತಕದ ಪುಟ 246ರಲ್ಲಿರುವ ಮಾಹಿತಿಯನ್ನೂ ಓದಬಹುದು. ಇವು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 17ರಲ್ಲಿರುವ ಚಿತ್ರ]

ಡಕ್‌ ಗ್ಯುನ್‌ ತನ್ನ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ

[ಪುಟ 14ರಲ್ಲಿರುವ ಚಿತ್ರ ಕೃಪೆ]

© Sebastian Kaulitzki/Alamy