ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕುಟುಂಬ ವೃತ್ತದಲ್ಲಿ ಪ್ರೀತಿವಾತ್ಸಲ್ಯವನ್ನು ವ್ಯಕ್ತಪಡಿಸಿರಿ

ಕುಟುಂಬ ವೃತ್ತದಲ್ಲಿ ಪ್ರೀತಿವಾತ್ಸಲ್ಯವನ್ನು ವ್ಯಕ್ತಪಡಿಸಿರಿ

ಕುಟುಂಬ ವೃತ್ತದಲ್ಲಿ ಪ್ರೀತಿವಾತ್ಸಲ್ಯವನ್ನು ವ್ಯಕ್ತಪಡಿಸಿರಿ

“ಸುಟ್ಟುಹಾಕು! ಸುಟ್ಟುಹಾಕು! ನಿನ್ನಿಂದ ಆಗುತ್ತದೊ ನೋಡೋಣ!” ಟೋರೂ ತನ್ನ ಪತ್ನಿ ಯೋಕೋಳಿಗೆ ಹೀಗೆ ಸವಾಲೊಡ್ಡಿದನು *. “ಖಂಡಿತವಾಗಿಯೂ ಸುಟ್ಟುಹಾಕುವೆ” ಎಂದು ಎದುರುತ್ತರಿಸುತ್ತಾ ಅವಳು, ಅವರಿಬ್ಬರು ಜೊತೆಯಾಗಿ ತೆಗೆಸಿಕೊಂಡಿದ್ದ ಫೋಟೋವನ್ನು ಸುಟ್ಟುಹಾಕಲು ಬೆಂಕಿಕಡ್ಡಿಯನ್ನು ಗೀರಿದಳು. ಆಮೇಲೆ ಅವಳು ತಟ್ಟನೆ, “ನಾನು ಇಡೀ ಮನೆಯನ್ನೇ ಸುಟ್ಟುಹಾಕುವೆ!” ಎಂದು ಸಿಡುಕಿದಳು. ಇದಕ್ಕುತ್ತರವಾಗಿ ಟೋರೂ ತನ್ನ ಹೆಂಡತಿಯ ಕೆನ್ನೆಗೆ ಬಾರಿಸಿ, ಆ ಮಾತಿನ ಚಕಮಕಿಯನ್ನು ಹಿಂಸಾಚಾರದೊಂದಿಗೆ ನಿಲ್ಲಿಸಿದನು.

ಮೂರು ವರ್ಷಗಳ ಹಿಂದೆ, ಟೋರೂ ಮತ್ತು ಯೋಕೋ ಒಬ್ಬ ಸುಖೀ ವಿವಾಹಿತ ದಂಪತಿಯೋಪಾದಿ ಒಟ್ಟಿಗೆ ಬಾಳನ್ನಾರಂಭಿಸಿದ್ದರು. ಹಾಗಾದರೆ ತಪ್ಪಾದದ್ದೆಲ್ಲಿ? ಟೋರೂ ಒಬ್ಬ ಪ್ರಸನ್ನ ವ್ಯಕ್ತಿಯಾಗಿರುವಂತೆ ತೋರುತ್ತಿದ್ದರೂ, ಅವನು ತನಗೆ ಪ್ರೀತಿಯನ್ನು ತೋರಿಸುವುದಿಲ್ಲ, ತನ್ನ ಭಾವನೆಗಳಿಗೆ ಬೆಲೆಕೊಡುವುದಿಲ್ಲವೆಂದು ಅವನ ಪತ್ನಿಗನಿಸುತ್ತಿತ್ತು. ಮತ್ತು ಅವಳ ಪ್ರೀತಿಗೆ ಅವನು ಸ್ಪಂದಿಸಲು ಅಶಕ್ತನಾಗಿರುವಂತೆ ತೋರುತ್ತಿತ್ತು. ಇದನ್ನು ಸಹಿಸಲಾಗದೆ, ಯೋಕೋ ಹೆಚ್ಚೆಚ್ಚು ಅಸಮಾಧಾನಗೊಂಡಳು ಮತ್ತು ಕುಪಿತಳಾದಳು. ಅವಳು ನಿದ್ರಾಹೀನತೆ, ವ್ಯಾಕುಲತೆ, ಹಸಿವಿಲ್ಲದಿರುವಿಕೆ, ಮುಂಗೋಪ ಮತ್ತು ಖಿನ್ನತೆ ಹಾಗೂ ಭೀತಿಯ ದಾಳಿಗಳನ್ನೂ ಅನುಭವಿಸತೊಡಗಿದಳು. ತನ್ನ ಮನೆಯಲ್ಲಿ ಈ ಬಿಗುಪಿನ ವಾತಾವರಣವಿದ್ದರೂ ಟೋರೂವಿಗೆ ಇದರ ಬಗ್ಗೆ ಸ್ವಲ್ಪವೂ ಚಿಂತೆಯಿಲ್ಲದಿರುವಂತೆ ತೋರುತ್ತಿತ್ತು. ಇದೆಲ್ಲವೂ ಅವನಿಗೆ ಸಾಮಾನ್ಯ ವಿಷಯವಾಗಿ ತೋರಿತು.

“ಕಠಿನಕಾಲಗಳು ಬರುವವು”

ಇಂಥ ಸಮಸ್ಯೆಗಳು ಇಂದು ಸರ್ವಸಮಾನ್ಯವಾಗಿವೆ. ನಮ್ಮ ಸಮಯದಲ್ಲಿ ಜನರು ‘ಮಮತೆಯಿಲ್ಲದವರು’ ಆಗಿರುವರೆಂದು ಅಪೊಸ್ತಲ ಪೌಲನು ಮುಂತಿಳಿಸಿದ್ದನು. (2 ತಿಮೊಥೆಯ 3:​1-5) ಇಲ್ಲಿ “ಮಮತೆಯಿಲ್ಲದವರು” ಎಂದು ಭಾಷಾಂತರಿಸಲ್ಪಟ್ಟಿರುವ ಮೂಲ ಗ್ರೀಕ್‌ ಪದವು, ಕುಟುಂಬ ಸದಸ್ಯರೊಳಗಿರುವ ಸ್ವಾಭಾವಿಕ ಪ್ರೀತಿವಾತ್ಸಲ್ಯವನ್ನು ಚಿತ್ರಿಸುವ ಪದಕ್ಕೆ ನಿಕಟವಾಗಿ ಸಂಬಂಧಿಸಿದೆ. ನಮ್ಮ ಸಮಯದಲ್ಲಿ ಖಂಡಿತವಾಗಿಯೂ ಅಂಥ ಪ್ರೀತಿಯ ಕೊರತೆಯಿದೆ. ಒಂದುವೇಳೆ ಅಂಥ ಪ್ರೀತಿವಾತ್ಸಲ್ಯವಿದ್ದರೂ, ಕುಟುಂಬ ಸದಸ್ಯರು ಅದನ್ನು ಪರಸ್ಪರ ವ್ಯಕ್ತಪಡಿಸುವುದು ತೀರ ಅಪರೂಪ.

ಇಂದು ಅನೇಕ ಹೆತ್ತವರಿಗೆ ತಮ್ಮ ಸ್ವಂತ ಮಕ್ಕಳ ಕಡೆಗೆ ಪ್ರೀತಿವಾತ್ಸಲ್ಯವನ್ನು ಹೇಗೆ ವ್ಯಕ್ತಪಡಿಸಬೇಕೆಂಬುದು ತಿಳಿದಿಲ್ಲ. ಕೆಲವರು ವಾತ್ಸಲ್ಯದ ಕೊರತೆಯಿದ್ದ ಕುಟುಂಬ ವಾತಾವರಣದಲ್ಲಿ ಬೆಳೆದಿರುವುದರಿಂದ, ಪ್ರೀತಿವಾತ್ಸಲ್ಯವನ್ನು ಅನುಭವಿಸಿ, ಅದನ್ನು ವ್ಯಕ್ತಪಡಿಸಿದರೆ ಮಾತ್ರ ಜೀವನವು ಹೆಚ್ಚು ಸಂತೋಷಕರವೂ ಹೆಚ್ಚು ಹಿತಕರವೂ ಆಗಬಲ್ಲದೆಂಬ ಸಂಗತಿ ಅವರಿಗೆ ಗೊತ್ತಿರದಿರಬಹುದು. ಇದು ಟೋರೂವಿನ ವಿಷಯದಲ್ಲಿ ಸತ್ಯವಾಗಿತ್ತು. ಅವನ ಬಾಲ್ಯದಲ್ಲಿ, ತಂದೆಯು ಯಾವಾಗಲೂ ಕೆಲಸದ ಸ್ಥಳದಲ್ಲಿ ಕಾರ್ಯಮಗ್ನರಾಗಿದ್ದು, ಮನೆಗೆ ರಾತ್ರಿ ತಡವಾಗಿ ಬರುತ್ತಿದ್ದರು. ಅವರು ಟೋರೂವಿನೊಂದಿಗೆ ತೀರ ಅಪರೂಪವಾಗಿ ಮಾತಾಡುತ್ತಿದ್ದರು. ಒಂದುವೇಳೆ ಮಾತಾಡಿದರೂ, ಅದು ಬೈಗುಳಗಳಿಂದ ತುಂಬಿರುತ್ತಿತ್ತು. ಟೋರೂವಿನ ತಾಯಿ ಸಹ ಪೂರ್ಣ ಸಮಯ ಕೆಲಸಮಾಡುತ್ತಿದ್ದು, ಅವನೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಿರಲಿಲ್ಲ. ಟಿವಿಯೇ ಅವನ ಪಾಲನೆಮಾಡುತ್ತಿತ್ತು. ಆ ಕುಟುಂಬದಲ್ಲಿ ಪ್ರಶಂಸೆಯಾಗಲಿ, ಮಾತುಸಂಪರ್ಕವಾಗಲಿ ಇರಲಿಲ್ಲ.

ಇದಕ್ಕೆ ಸಂಸ್ಕೃತಿಯೂ ಒಂದು ಕಾರಣಾಂಶವಾಗಿರಬಹುದು. ಲ್ಯಾಟಿನ್‌ ಅಮೆರಿಕದ ಕೆಲವೊಂದು ಭಾಗಗಳಲ್ಲಿ, ಒಬ್ಬ ಪುರುಷನು ತನ್ನ ಹೆಂಡತಿಗೆ ಪ್ರೀತಿಯನ್ನು ವ್ಯಕ್ತಪಡಿಸಬೇಕಾದರೆ ಸಾಮಾನ್ಯವಾಗಿ ಚಾಲ್ತಿಯಲ್ಲಿರುವ ಸಂಸ್ಕೃತಿಯ ವಿರುದ್ಧ ಹೋಗಬೇಕು. ಅನೇಕ ಪೌರಾತ್ಯ ಹಾಗೂ ಆಫ್ರಿಕನ್‌ ದೇಶಗಳಲ್ಲಿ, ಒಬ್ಬನು ತನ್ನ ಪ್ರೀತಿವಾತ್ಸಲ್ಯವನ್ನು ಮಾತುಗಳಲ್ಲೊ ಕಾರ್ಯಗಳಲ್ಲೊ ವ್ಯಕ್ತಪಡಿಸುವುದು ಸಂಪ್ರದಾಯ ವಿರುದ್ಧವಾದ ಸಂಗತಿಯಾಗಿದೆ. ತಮ್ಮ ಪತ್ನಿಗೆ ಇಲ್ಲವೆ ಮಕ್ಕಳಿಗೆ, “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಹೇಳುವುದು ಗಂಡಂದಿರಿಗೆ ಮುಜುಗರದ ಸಂಗತಿಯಾಗಿರಬಹುದು. ಆದರೂ, ಕಾಲ ಪರೀಕ್ಷೆಯನ್ನು ಎದುರಿಸಿರುವ ಅಗ್ರಗಣ್ಯ ಕುಟುಂಬವೊಂದರ ಸಂಬಂಧದಿಂದ ನಾವು ಒಂದು ಪಾಠವನ್ನು ಕಲಿಯಬಲ್ಲೆವು.

ಆದರ್ಶಪ್ರಾಯ ಕುಟುಂಬ ಸಂಬಂಧ

ಕುಟುಂಬಕ್ಕಾಗಿ ಅತ್ಯುತ್ತಮವಾದ ಆದರ್ಶವು, ಯೆಹೋವ ದೇವರು ಮತ್ತು ಆತನ ಏಕಜಾತ ಪುತ್ರನ ನಡುವಣ ಆಪ್ತ ಸಂಬಂಧದಲ್ಲಿ ಕಂಡುಬರುತ್ತದೆ. ಅವರು ಪರಿಪೂರ್ಣ ರೀತಿಯಲ್ಲಿ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಯೇಸು ಕ್ರಿಸ್ತನಾಗಿ ಪರಿಣಮಿಸಿದ ಒಬ್ಬ ಆತ್ಮ ಜೀವಿಯು, ಅಸಂಖ್ಯಾತ ವರ್ಷಗಳ ವರೆಗೆ ತನ್ನ ತಂದೆಯೊಂದಿಗೆ ಒಂದು ಸಂತೋಷಭರಿತ ಸಂಬಂಧದಲ್ಲಿ ಆನಂದಿಸಿದನು. ಈ ಬಂಧವನ್ನು ಅವನು ಈ ರೀತಿಯಲ್ಲಿ ವರ್ಣಿಸಿದನು: “ಆತನು ದಿನೇ ದಿನೇ ವಿಶೇಷವಾದ ಮಮತೆಯನ್ನು ತೋರಿಸಿದ ಒಬ್ಬನಾಗಿ ನಾನು ಪರಿಣಮಿಸಿದೆ. ನಾನು ಎಲ್ಲ ಸಮಯಗಳಲ್ಲಿಯೂ ಆತನ ಮುಂದೆ ಹರ್ಷಿತನಾಗಿದ್ದೆ.” (ಜ್ಞಾನೋಕ್ತಿ 8:​30, NW) ಈ ಮಗನಿಗೆ ತನ್ನ ತಂದೆಯ ಪ್ರೀತಿಯ ಬಗ್ಗೆ ಎಷ್ಟು ಖಾತ್ರಿಯಿತ್ತೆಂದರೆ, ಯೆಹೋವನು ದಿನೇ ದಿನೇ ತನಗೆ ವಿಶೇಷ ಮಮತೆಯನ್ನು ತೋರಿಸುತ್ತಿದ್ದನೆಂಬುದನ್ನು ಅವನು ಇತರರ ಮುಂದೆ ಘೋಷಿಸಸಾಧ್ಯವಿತ್ತು. ಯಾವಾಗಲೂ ತನ್ನ ತಂದೆಯ ಸಮಕ್ಷಮದಲ್ಲಿರಲು ಅವನಿಗೆ ಸಂತೋಷವಾಗುತ್ತಿತ್ತು.

ದೇವರ ಮಗನು ಭೂಮಿಯ ಮೇಲೆ ಯೇಸು ಎಂಬ ಮನುಷ್ಯನೋಪಾದಿ ಇದ್ದಾಗಲೂ, ಅವನ ತಂದೆಯ ಗಾಢವಾದ ಪ್ರೀತಿಯ ಬಗ್ಗೆ ಅವನಿಗೆ ಪುನರಾಶ್ವಾಸನೆಯು ಕೊಡಲ್ಪಟ್ಟಿತ್ತು. ಯೇಸು ದೀಕ್ಷಾಸ್ನಾನ ಪಡೆದುಕೊಂಡ ಬಳಿಕ, ಅವನು ತನ್ನ ತಂದೆಯ ಈ ಆಕಾಶವಾಣಿಯನ್ನು ಕೇಳಿಸಿಕೊಂಡನು: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ.” (ಮತ್ತಾಯ 3:17) ಈ ಭೂಮಿಯ ಮೇಲೆ ಯೇಸುವಿನ ಕಾರ್ಯಾಚರಣೆಯ ಆರಂಭದಲ್ಲೇ, ಅವನಿಗಾಗಿ ಪ್ರೀತಿಯ ಎಂಥ ಉತ್ತೇಜಕ ಅಭಿವ್ಯಕ್ತಿಯಿದು! ಪರಲೋಕದಲ್ಲಿನ ತನ್ನ ಜೀವನದ ಪೂರ್ಣ ಸ್ಮರಣೆಯು ಅವನಿಗೆ ಹಿಂದಿರುಗಿದ ಆ ಸಮಯದಲ್ಲಿ, ತನ್ನ ತಂದೆಯ ಮೆಚ್ಚಿಕೆಯ ಮಾತು ಅವನ ಹೃದಯವನ್ನು ಖಂಡಿತವಾಗಿಯೂ ಸ್ಪರ್ಶಿಸಿರಬೇಕು.

ಹೀಗೆ, ವಿಶ್ವ ಕುಟುಂಬಕ್ಕಾಗಿರುವ ತನ್ನ ಪ್ರೀತಿಯನ್ನು ಪೂರ್ಣ ಮಟ್ಟಿಗೆ ವ್ಯಕ್ತಪಡಿಸುವುದರಲ್ಲಿ ಯೆಹೋವನು ಅತ್ಯುತ್ತಮವಾದ ಮಾದರಿಯನ್ನಿಡುತ್ತಾನೆ. ನಾವು ಯೇಸು ಕ್ರಿಸ್ತನನ್ನು ಅಂಗೀಕರಿಸುವಲ್ಲಿ, ನಾವು ಕೂಡ ಯೆಹೋವನ ಮಮತೆಯನ್ನು ಅನುಭವಿಸಬಲ್ಲೆವು. (ಯೋಹಾನ 16:27) ನಮಗೆ ಈಗ ಪರಲೋಕದಿಂದ ಯಾವುದೇ ವಾಣಿಗಳು ಕೇಳಿಬರುವುದಿಲ್ಲವಾದರೂ, ನಾವು ಯೆಹೋವನ ಪ್ರೀತಿಯು ನಿಸರ್ಗದಲ್ಲಿ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ಮತ್ತು ಇತರ ವಿಧಗಳಲ್ಲಿ ವ್ಯಕ್ತಪಡಿಸಲ್ಪಟ್ಟಿರುವುದನ್ನು ನೋಡುತ್ತೇವೆ. (1 ಯೋಹಾನ 4:​9, 10) ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುತ್ತಾನೆ ಮತ್ತು ನಮಗೆ ಅತ್ಯಂತ ಉಪಯುಕ್ತವಾಗಿರುವ ವಿಧದಲ್ಲಿ ಉತ್ತರಿಸುತ್ತಾನೆ ಕೂಡ. (ಕೀರ್ತನೆ 145:18; ಯೆಶಾಯ 48:17) ನಾವು ಯೆಹೋವನೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಂಡಂತೆ, ಆತನ ಪ್ರೀತಿಯ ಆರೈಕೆಗಾಗಿರುವ ನಮ್ಮ ಗಣ್ಯತೆಯು ಗಾಢವಾಗುತ್ತಾ ಹೋಗುತ್ತದೆ.

ಇತರರಿಗೆ ಅನುಭೂತಿ, ಪರಿಗಣನೆ, ದಯೆ ಮತ್ತು ಬಹಳಷ್ಟು ಕಾಳಜಿಯನ್ನು ತೋರಿಸುವುದು ಹೇಗೆಂಬುದನ್ನು ಯೇಸು ತನ್ನ ತಂದೆಯಿಂದ ಕಲಿತುಕೊಂಡನು. ಅವನು ವಿವರಿಸಿದ್ದು: “[ತಂದೆಯು] ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ. ತಂದೆಯು ಮಗನ ಮೇಲೆ ಮಮತೆಯಿಟ್ಟು ತಾನು ಮಾಡುವವುಗಳನ್ನೆಲ್ಲಾ ಅವನಿಗೆ ತೋರಿಸುತ್ತಾನೆ. ಇದಲ್ಲದೆ ಇವುಗಳಿಗಿಂತ ದೊಡ್ಡ ಕೆಲಸಗಳನ್ನು ಅವನಿಗೆ ತೋರಿಸುವನು; ಅವುಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುವದು.” (ಯೋಹಾನ 5:19, 20) ಇದಕ್ಕೆ ಪ್ರತಿಯಾಗಿ ನಾವು, ಯೇಸು ಈ ಭೂಮಿಯ ಮೇಲಿದ್ದಾಗ ಇಟ್ಟ ಮಾದರಿಯನ್ನು ಅಧ್ಯಯನಮಾಡುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುವ ಕಲೆಯನ್ನು ಕಲಿತುಕೊಳ್ಳಸಾಧ್ಯವಿದೆ.​—ಫಿಲಿಪ್ಪಿ 1:8.

ಕುಟುಂಬದಲ್ಲಿ ಪ್ರೀತಿವಾತ್ಸಲ್ಯವನ್ನು ವ್ಯಕ್ತಪಡಿಸುವುದು​—ಹೇಗೆ?

“ದೇವರು ಪ್ರೀತಿಸ್ವರೂಪಿ”ಯಾಗಿರುವುದರಿಂದ ಮತ್ತು ನಾವು ‘ಆತನ ಸ್ವರೂಪದಲ್ಲಿ’ ಸೃಷ್ಟಿಸಲ್ಪಟ್ಟಿರುವುದರಿಂದ, ನಮ್ಮಲ್ಲಿ ಪ್ರೀತಿಯನ್ನು ಅನುಭವಿಸುವ ಮತ್ತು ಅದೇ ಸಮಯದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವ ಸಾಮರ್ಥ್ಯವೂ ಇದೆ. (1 ಯೋಹಾನ 4:8; ಆದಿಕಾಂಡ 1:​26, 27) ನಾವು ಪ್ರೀತಿಯನ್ನು ವ್ಯಕ್ತಪಡಿಸಲು ಶಕ್ತರಾಗಿರುವುದಾದರೂ, ಇದು ತನ್ನಷ್ಟಕ್ಕೆ ತಾನೇ ಸಂಭವಿಸುವುದಿಲ್ಲ. ಪ್ರೀತಿವಾತ್ಸಲ್ಯವನ್ನು ವ್ಯಕ್ತಪಡಿಸಲಿಕ್ಕೋಸ್ಕರ, ಪ್ರಥಮವಾಗಿ ನಮ್ಮೊಳಗೆ ನಮ್ಮ ಸಂಗಾತಿ ಮತ್ತು ಮಕ್ಕಳಿಗೋಸ್ಕರ ಪ್ರೀತಿವಾತ್ಸಲ್ಯ ಉಂಟಾಗಬೇಕು. ಅವರನ್ನು ಚೆನ್ನಾಗಿ ಗಮನಿಸುವವರಾಗಿರಿ ಮತ್ತು ಅವರಲ್ಲಿ ಇಷ್ಟಪಡಬಹುದಾದ ಗುಣಗಳನ್ನು ಲಕ್ಷಿಸಿರಿ. ಅವು ಆರಂಭದಲ್ಲಿ ತೀರ ಕ್ಷುಲ್ಲಕವಾಗಿ ತೋರಿದರೂ ಅವುಗಳನ್ನು ಲಕ್ಷಿಸಿ, ಅವುಗಳ ಕುರಿತು ಚಿಂತಿಸಿರಿ. ‘ನನ್ನ ಗಂಡನಲ್ಲಿ [ಹೆಂಡತಿ ಇಲ್ಲವೆ ಮಕ್ಕಳಲ್ಲಿ] ಇಷ್ಟಪಡಬಹುದಾದ ಒಂದು ಗುಣವೂ ಇಲ್ಲ’ ಎಂದು ನೀವು ಹೇಳಬಹುದು. ಕುಟುಂಬದ ಹಿರಿಯರು ಏರ್ಪಡಿಸಿರುವ ವ್ಯಕ್ತಿಯೊಂದಿಗೆ ಮದುವೆಯಾದವರಿಗೆ, ತಮ್ಮ ಸಂಗಾತಿಗಳ ಕಡೆಗೆ ಕಡಿಮೆ ಪ್ರೀತಿ ಇದ್ದಿರಬಹುದು. ಮತ್ತು ಕೆಲವು ದಂಪತಿಗಳಿಗೆ, ಮಕ್ಕಳನ್ನು ಪಡೆಯುವ ಮನಸ್ಸಿಲ್ಲದಿದ್ದಿರಬಹುದು. ಹಾಗಿದ್ದರೂ, ಯೆಹೋವನಿಗೆ ತನ್ನ ಸಾಂಕೇತಿಕ ಪತ್ನಿಯಾದ ಇಸ್ರಾಯೇಲ್‌ ಜನಾಂಗದ ಬಗ್ಗೆ ಸಾ.ಶ.ಪೂ. ಹತ್ತನೆಯ ಶತಮಾನದಲ್ಲಿ ಯಾವ ಭಾವನೆಯಿತ್ತೆಂಬುದನ್ನು ಪರಿಗಣಿಸಿರಿ. ತನ್ನ ಪ್ರವಾದಿಯಾದ ಎಲೀಯನು, ಇಸ್ರಾಯೇಲಿನ ಹತ್ತು ಗೋತ್ರಗಳ ಜನಾಂಗದಲ್ಲಿ ಯೆಹೋವನ ಬೇರಾವ ಆರಾಧಕರೂ ಇಲ್ಲವೆಂದು ಅಭಿಪ್ರಯಿಸಿದಾಗ, ಯೆಹೋವನು ಆ ಗೋತ್ರಗಳನ್ನು ಜಾಗ್ರತೆಯಿಂದ ಪರಿಶೀಲಿಸಿ, ತನ್ನ ದೃಷ್ಟಿಯಲ್ಲಿ ಆಕರ್ಷಕವಾಗಿರುವ ಗುಣಗಳನ್ನು ಹೊಂದಿದ್ದಂಥ ಒಟ್ಟು 7,000 ಮಂದಿಯನ್ನು, ಅಂದರೆ ಗಣನೀಯ ಸಂಖ್ಯೆಯ ಜನರನ್ನು ಕಂಡುಹಿಡಿದನು. ನಿಮ್ಮ ಕುಟುಂಬದ ಸದಸ್ಯರಲ್ಲಿರುವ ಒಳಿತನ್ನು ಹುಡುಕುವ ಮೂಲಕ ನೀವು ಯೆಹೋವನನ್ನು ಅನುಕರಿಸಬಲ್ಲಿರೊ?​—1 ಅರಸುಗಳು 19:​14-18.

ಕುಟುಂಬದಲ್ಲಿರುವ ಇತರ ಸದಸ್ಯರ ಕಡೆಗೆ ನಿಮಗಿರುವ ಪ್ರೀತಿವಾತ್ಸಲ್ಯದ ಅರಿವು ಅವರಿಗಾಗಬೇಕಾದರೆ, ಅದನ್ನು ತೋರ್ಪಡಿಸಲು ನೀವು ಪ್ರಜ್ಞಾಪೂರ್ವಕವಾದ ಪ್ರಯತ್ನವನ್ನು ಮಾಡಬೇಕು. ನೀವು ಎಂದಾದರೂ ಒಂದು ಶ್ಲಾಘನೀಯ ಸಂಗತಿಯನ್ನು ಗಮನಿಸುವಲ್ಲಿ, ಆ ಗಣ್ಯತೆಯನ್ನು ಮಾತುಗಳಲ್ಲಿ ವ್ಯಕ್ತಪಡಿಸಿರಿ. ಗುಣವತಿಯಾದ ಹೆಂಡತಿಯನ್ನು ವರ್ಣಿಸುವಾಗ, ದೇವರ ವಾಕ್ಯವು ಅವಳ ಕುಟುಂಬದ ಬಗ್ಗೆ ಒಂದು ಆಸಕ್ತಿಕರ ಗುಣಲಕ್ಷಣವನ್ನು ತಿಳಿಸುತ್ತದೆ: “ಮಕ್ಕಳು ಎದ್ದುನಿಂತು ಆಕೆಯನ್ನು ಧನ್ಯಳು ಎಂದು ಹೇಳುವರು; ಪತಿಯು ಸಹ . . . ಆಕೆಯನ್ನು ಕೊಂಡಾಡುವನು.” (ಜ್ಞಾನೋಕ್ತಿ 31:​28, 29) ಇಲ್ಲಿ ಕುಟುಂಬದ ಸದಸ್ಯರು ಪರಸ್ಪರರಿಗಾಗಿರುವ ತಮ್ಮ ಗಣ್ಯತೆಯನ್ನು ಎಷ್ಟು ಮುಕ್ತವಾಗಿ ವ್ಯಕ್ತಪಡಿಸಿದರೆಂಬುದನ್ನು ಗಮನಿಸಿರಿ. ತನ್ನ ಹೆಂಡತಿಯನ್ನು ಬಾಯಿಮಾತಿನಿಂದ ಕೊಂಡಾಡುವ ಮೂಲಕ, ತಂದೆಯು ತನ್ನ ಮಗನಿಗೆ ಒಂದು ಒಳ್ಳೇ ಮಾದರಿಯನ್ನಿಡುತ್ತಾನೆ. ಈ ರೀತಿಯಲ್ಲಿ, ಮಗನು ಸಹ ಮದುವೆಯಾದಾಗ ಅವನು ತನ್ನ ಸಂಗಾತಿಯನ್ನು ಧಾರಾಳವಾಗಿ ಪ್ರಶಂಸಿಸುವಂತೆ ತಂದೆಯು ಉತ್ತೇಜಿಸುತ್ತಾನೆ.

ಅಲ್ಲದೆ, ಹೆತ್ತವರು ತಮ್ಮ ಮಕ್ಕಳನ್ನೂ ಪ್ರಶಂಸಿಸಬೇಕು. ಇದು ಮಕ್ಕಳ ಹೃದಯಗಳಲ್ಲಿ ಸ್ವಗೌರವವನ್ನು ತುಂಬಿಸಲು ಸಹಾಯಮಾಡಬಲ್ಲದು. ಒಬ್ಬ ವ್ಯಕ್ತಿಯು ತನ್ನನ್ನೇ ಗೌರವಿಸದಿರುವಾಗ, ‘ತನ್ನ ನೆರೆಯವನನ್ನು ಹೇಗೆ ಪ್ರೀತಿಸಾನು?’ (ಮತ್ತಾಯ 22:39) ಇನ್ನೊಂದು ಬದಿಯಲ್ಲಿ, ಹೆತ್ತವರು ಯಾವಾಗಲೂ ಮಕ್ಕಳನ್ನು ಟೀಕಿಸುತ್ತಾ ಇದ್ದು, ಅವರನ್ನು ಎಂದೂ ಪ್ರಶಂಸಿಸದಿರುವಲ್ಲಿ, ಮಕ್ಕಳು ಸುಲಭವಾಗಿ ತಮ್ಮ ಸ್ವಗೌರವವನ್ನು ಕಳೆದುಕೊಳ್ಳುವರು, ಮತ್ತು ಇತರರಿಗೆ ಪ್ರೀತಿವಾತ್ಸಲ್ಯವನ್ನು ತೋರಿಸುವುದು ಅವರಿಗೆ ಕಷ್ಟವಾಗಬಹುದು.​—ಎಫೆಸ 4:​31, 32.

ನೀವು ಸಹಾಯವನ್ನು ಕಂಡುಕೊಳ್ಳಬಹುದು

ಪ್ರೀತಿಯೇ ತೋರಿಸಲ್ಪಡದಿದ್ದ ಒಂದು ಕುಟುಂಬದಲ್ಲಿ ನೀವು ಬೆಳೆಸಲ್ಪಟ್ಟಿರುವಲ್ಲಿ ಆಗೇನು? ಆಗಲೂ ನೀವು ಪ್ರೀತಿವಾತ್ಸಲ್ಯವನ್ನು ವ್ಯಕ್ತಪಡಿಸಲು ಕಲಿಯಬಹುದು. ಇದನ್ನು ಮಾಡುವ ಮೊದಲನೆಯ ಹೆಜ್ಜೆಯು, ನಿಮಗಿರುವ ಸಮಸ್ಯೆಯನ್ನು ಗುರುತಿಸಿ, ಆ ವಿಷಯದಲ್ಲಿ ನೀವು ಸುಧಾರಣೆಯನ್ನು ಮಾಡಬೇಕೆಂಬುದನ್ನು ಅಂಗೀಕರಿಸುವುದೇ ಆಗಿದೆ. ಈ ವಿಷಯದಲ್ಲಿ ದೇವರ ವಾಕ್ಯವಾದ ಬೈಬಲು ತುಂಬ ಸಹಾಯವನ್ನು ಕೊಡುತ್ತದೆ. ಅದನ್ನು ಒಂದು ಕನ್ನಡಿಗೆ ಹೋಲಿಸಬಹುದು. ಬೈಬಲಿನ ಕನ್ನಡಿಯಂಥ ಬೋಧನೆಗಳಲ್ಲಿ ನಾವು ನಮ್ಮನ್ನೇ ಪರೀಕ್ಷಿಸಿ ನೋಡುವಾಗ, ನಮ್ಮ ಯೋಚನಾಧಾಟಿಯಲ್ಲಿರುವ ಲೋಪದೋಷಗಳ ಪ್ರತಿಬಿಂಬ ನಮಗೆ ತೋರುತ್ತದೆ. (ಯಾಕೋಬ 1:23) ಬೈಬಲ್‌ ಬೋಧನೆಗಳಿಗೆ ಹೊಂದಿಕೆಯಲ್ಲಿ, ನಾವು ಯಾವುದೇ ರೀತಿಯ ಅನುಚಿತವಾದ ಪ್ರವೃತ್ತಿಗಳನ್ನು ಸರಿಪಡಿಸಿಕೊಳ್ಳಬಹುದು. (ಎಫೆಸ 4:​20-24; ಫಿಲಿಪ್ಪಿ 4:​8, 9) ಇದನ್ನು ನಾವು ಕ್ರಮವಾಗಿ ಮಾಡಿ, ಎಂದಿಗೂ ‘ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದಿರಬೇಕು.’​—ಗಲಾತ್ಯ 6:9.

ಕೆಲವರು ಬೆಳೆಸಲ್ಪಟ್ಟಿರುವ ರೀತಿ ಇಲ್ಲವೆ ಸಂಸ್ಕೃತಿಯಿಂದಾಗಿ, ಅವರಿಗೆ ಪ್ರೀತಿವಾತ್ಸಲ್ಯವನ್ನು ತೋರಿಸುವುದು ಕಷ್ಟಕರವಾದ ಸಂಗತಿಯಾಗಿರಬಹುದು. ಆದರೆ ಅಂಥ ತಡೆಗಳನ್ನು ಜಯಿಸಸಾಧ್ಯವಿದೆ ಎಂದು ಇತ್ತೀಚಿನ ಸಂಶೋಧನೆಗಳು ತೋರಿಸುತ್ತವೆ. ಮಾನಸಿಕ ಆರೋಗ್ಯ ವಿಶೇಷಜ್ಞರಾಗಿರುವ ಡಾಕ್ಟರ್‌ ಡ್ಯಾನಿಯಲ್‌ ಗೋಲ್‌ಮನ್‌ ವಿವರಿಸುವುದೇನೆಂದರೆ, ‘ಬಾಲ್ಯದಲ್ಲಿ ಕಲಿಯಲ್ಪಟ್ಟು, ತುಂಬ ಆಳವಾಗಿ ಬೇರೂರಿಬಿಟ್ಟಿರುವ ರೂಢಿಗಳನ್ನು ಸಹ ಪರಿವರ್ತಿಸಸಾಧ್ಯವಿದೆ.’ 19ಕ್ಕಿಂತಲೂ ಹೆಚ್ಚು ಶತಮಾನಗಳ ಹಿಂದೆ ಬೈಬಲ್‌ ಸೂಚಿಸಿದ್ದೇನೆಂದರೆ, ದೇವರ ವಾಕ್ಯದ ಸಹಾಯದಿಂದ ಹೃದಯದಲ್ಲಿ ತುಂಬ ಆಳವಾಗಿ ಬೇರುಬಿಟ್ಟಿರುವ ಪ್ರವೃತ್ತಿಗಳನ್ನು ಸಹ ಪರಿವರ್ತಿಸಸಾಧ್ಯವಿದೆ. ಅದು ನಮಗೆ ಬುದ್ಧಿವಾದ ನೀಡುವುದು: ‘ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನಸ್ವಭಾವವನ್ನು ಧರಿಸಿಕೊಳ್ಳಿ.’​—ಕೊಲೊಸ್ಸೆ 3:9, 10.

ಸಮಸ್ಯೆಯೇನೆಂಬುದನ್ನು ಒಮ್ಮೆ ಗುರುತಿಸಿದ ನಂತರ, ಕುಟುಂಬವು ಅದರ ಅಗತ್ಯಗಳನ್ನು ಮನಸ್ಸಿನಲ್ಲಿಟ್ಟು ಬೈಬಲ್‌ ಅಧ್ಯಯನಮಾಡಬಹುದು. ದೃಷ್ಟಾಂತಕ್ಕಾಗಿ, ಬೈಬಲ್‌ಗೆ ‘ವಾತ್ಸಲ್ಯದ’ ಬಗ್ಗೆ ಏನು ಹೇಳಲಿಕ್ಕಿದೆ ಎಂಬುದನ್ನು ಏಕೆ ಸಂಶೋಧನೆಮಾಡಬಾರದು? ಈ ರೀತಿಯ ವಚನವನ್ನು ನೀವು ಕಂಡುಹಿಡಿಯಬಹುದು: “ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು [“ಯೆಹೋವನು,” NW] ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು ಕರುಣಾಸಾಗರನೂ [“ಯೆಹೋವನು ತುಂಬ ಕೋಮಲ ವಾತ್ಸಲ್ಯವುಳ್ಳವನೂ,” NW] ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” (ಯಾಕೋಬ 5:11) ಆಮೇಲೆ ಯೋಬನ ಬಗ್ಗೆ ಇರುವ ಬೈಬಲ್‌ ವೃತ್ತಾಂತವನ್ನು ಪರಿಗಣಿಸಿ, ಯೆಹೋವನು ಹೇಗೆ ಯೋಬನ ಕಡೆಗೆ ಕೋಮಲ ವಾತ್ಸಲ್ಯವುಳ್ಳವನೂ ದಯಾಳುವೂ ಆಗಿದ್ದನೆಂಬುದರ ಮೇಲೆ ಗಮನವನ್ನು ಕೇಂದ್ರೀಕರಿಸಿರಿ. ನಿಸ್ಸಂದೇಹವಾಗಿಯೂ ನೀವು ನಿಮ್ಮ ಕುಟುಂಬದೊಂದಿಗೆ ತುಂಬ ಕೋಮಲ ವಾತ್ಸಲ್ಯವುಳ್ಳವರೂ ದಯಾಳುವೂ ಆಗಿರುವ ಮೂಲಕ ಯೆಹೋವನನ್ನು ಅನುಕರಿಸಲು ಬಯಸುವಿರಿ.

ಆದರೆ ಅಪರಿಪೂರ್ಣರಾಗಿರಲಾಗಿ, ನಮ್ಮ ಮಾತಿನಲ್ಲಿ ‘ನಾವೆಲ್ಲರೂ ತಪ್ಪುವದುಂಟು.’ (ಯಾಕೋಬ 3:2) ಕುಟುಂಬ ವೃತ್ತದಲ್ಲಿ, ನಾವು ನಮ್ಮ ನಾಲಗೆಯನ್ನು ಉತ್ತೇಜನದಾಯಕ ರೀತಿಯಲ್ಲಿ ಉಪಯೋಗಿಸಲು ತಪ್ಪಿಬೀಳಬಹುದು. ಇಲ್ಲಿಯೇ ನಮಗೆ ಪ್ರಾರ್ಥನೆ ಮತ್ತು ಯೆಹೋವನ ಮೇಲಿನ ಅವಲಂಬನೆಯು ಆವಶ್ಯಕ. ಪ್ರಯತ್ನವನ್ನು ಬಿಟ್ಟುಬಿಡಬೇಡಿರಿ. “ಎಡೆಬಿಡದೆ ಪ್ರಾರ್ಥನೆಮಾಡಿರಿ.” (1 ಥೆಸಲೊನೀಕ 5:​16, 17) ಕುಟುಂಬದಲ್ಲಿ ಪ್ರೀತಿವಾತ್ಸಲ್ಯವನ್ನು ತೋರಿಸಲು ಹಾತೊರೆಯುವವರಿಗೆ ಮತ್ತು ಅದನ್ನು ತೋರಿಸಲು ಬಯಸುತ್ತಾರಾದರೂ ಹಾಗೆ ಮಾಡಲು ಹಿಂಜರಿಯುವವರಿಗೂ ಯೆಹೋವನು ಸಹಾಯಮಾಡುವನು.

ಇದಕ್ಕೆ ಕೂಡಿಸಿ, ಯೆಹೋವನು ಕ್ರೈಸ್ತ ಸಭೆಯಲ್ಲಿ ದಯಾಪೂರ್ವಕವಾಗಿ ಸಹಾಯವನ್ನು ಒದಗಿಸಿದ್ದಾನೆ. ಯಾಕೋಬನು ಬರೆದುದು: “ನಿಮ್ಮಲ್ಲಿ [ಆತ್ಮಿಕವಾಗಿ] ಅಸ್ವಸ್ಥನಾಗಿರುವವನು ಇದ್ದಾನೋ? ಅವನು ಸಭೆಯ ಹಿರಿಯರನ್ನು ಕರೇಕಳುಹಿಸಲಿ; ಅವರು ಕರ್ತನ [“ಯೆಹೋವನ,” NW] ಹೆಸರಿನಿಂದ ಅವನಿಗೆ ಎಣ್ಣೆಹಚ್ಚಿ ಅವನಿಗೋಸ್ಕರ ದೇವರನ್ನು ಪಾರ್ಥಿಸಲಿ.” (ಯಾಕೋಬ 5:14) ಹೌದು, ಯೆಹೋವನ ಸಾಕ್ಷಿಗಳ ಸಭೆಗಳಲ್ಲಿರುವ ಹಿರಿಯರು, ಪರಸ್ಪರ ಪ್ರೀತಿವಾತ್ಸಲ್ಯವನ್ನು ತೋರಿಸುವ ವಿಷಯದಲ್ಲಿ ಸಮಸ್ಯೆಗಳುಳ್ಳ ಕುಟುಂಬಗಳಿಗೆ ಬಹಳಷ್ಟು ಸಹಾಯವನ್ನು ಮಾಡಬಲ್ಲರು. ಹಿರಿಯರು ಚಿಕಿತ್ಸಕರಲ್ಲದಿದ್ದರೂ, ಅವರು ತಮ್ಮ ಜೊತೆ ವಿಶ್ವಾಸಿಗಳಿಗೆ ತಾಳ್ಮೆಯಿಂದ ಸಹಾಯಮಾಡಸಾಧ್ಯವಿದೆ. ಜೊತೆ ವಿಶ್ವಾಸಿಗಳು ಏನು ಮಾಡಬೇಕು ಇಲ್ಲವೆ ಮಾಡಬಾರದು ಎಂಬುದನ್ನು ಹೇಳದೆ, ಯೆಹೋವನ ದೃಷ್ಟಿಕೋನದ ಬಗ್ಗೆ ಅವರಿಗೆ ಜ್ಞಾಪಕಹುಟ್ಟಿಸುತ್ತಾ, ಅವರೊಂದಿಗೆ ಮತ್ತು ಅವರಿಗಾಗಿ ಪ್ರಾರ್ಥಿಸಸಾಧ್ಯವಿದೆ.​—ಕೀರ್ತನೆ 119:105; ಗಲಾತ್ಯ 6:1.

ಟೋರೂ ಮತ್ತು ಯೋಕೋವಿನ ವಿದ್ಯಮಾನದಲ್ಲಿ, ಕ್ರೈಸ್ತ ಹಿರಿಯರು ಸದಾ ಅವರ ಸಮಸ್ಯೆಗಳಿಗೆ ಕಿವಿಗೊಟ್ಟು, ಅವರನ್ನು ಸಂತೈಸಿದರು. (1 ಪೇತ್ರ 5:​2, 3) ಕೆಲವೊಂದು ಸಂದರ್ಭಗಳಲ್ಲಿ ಒಬ್ಬ ಹಿರಿಯನು ಮತ್ತು ಅವನ ಪತ್ನಿಯು ಯೋಕೋಳನ್ನು ಭೇಟಿಮಾಡುತ್ತಿದ್ದರು. ಏಕೆಂದರೆ ‘ತನ್ನ ಗಂಡನನ್ನು ಪ್ರೀತಿಸುವಂತೆ ಬುದ್ಧಿಹೇಳುವ ಹಾಗೆ’ ಯೋಕೋಳಿಗೆ ಬೋಧಿಸಸಾಧ್ಯವಿದ್ದ ಅನುಭವೀ ಕ್ರೈಸ್ತ ಸ್ತ್ರೀಯೊಬ್ಬಳ ಸಹವಾಸದಿಂದ ಅವಳು ಪ್ರಯೋಜನವನ್ನು ಪಡೆಯಸಾಧ್ಯವಿತ್ತು. (ತೀತ 2:​3, 4) ಜೊತೆ ಕ್ರೈಸ್ತರ ಕಷ್ಟದುಃಖಗಳ ವಿಷಯದಲ್ಲಿ ತಿಳಿವಳಿಕೆ ಮತ್ತು ಸಹಾನುಭೂತಿಯನ್ನು ತೋರಿಸುವ ಮೂಲಕ, ಹಿರಿಯರು ‘ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಇರುವರು.’​—ಯೆಶಾಯ 32:1, 2.

ದಯಾಪರ ಹಿರಿಯರ ನೆರವಿನಿಂದಾಗಿ ಟೋರೂ, ತನ್ನ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ತನಗೊಂದು ಸಮಸ್ಯೆಯಿದೆ ಮತ್ತು ‘ಕಡೇ ದಿವಸಗಳಲ್ಲಿ’ ಸೈತಾನನು ಕುಟುಂಬದ ಏರ್ಪಾಡಿನ ಮೇಲೆ ದಾಳಿ ನಡೆಸುತ್ತಾನೆಂಬುದನ್ನು ಗ್ರಹಿಸಿದನು. (2 ತಿಮೊಥೆಯ 3:1) ಟೋರೂ ತನ್ನ ಸಮಸ್ಯೆಯನ್ನು ಎದುರಿಸಲು ನಿರ್ಣಯಿಸಿದನು. ಪ್ರೀತಿಯನ್ನು ವ್ಯಕ್ತಪಡಿಸಲು ತಾನು ತಪ್ಪಿಬೀಳುತ್ತಿರಲು ಕಾರಣ, ತಾನು ಬೆಳೆಯುತ್ತಿದ್ದಾಗ ತನ್ನ ಕಡೆಗೆ ಯಾವುದೇ ರೀತಿಯ ಪ್ರೀತಿವಾತ್ಸಲ್ಯವು ತೋರಿಸಲ್ಪಡದೇ ಇದ್ದದ್ದಾಗಿದೆ ಎಂಬುದನ್ನು ಅವನು ಮನಗಾಣಲಾರಂಭಿಸಿದನು. ಗಂಭೀರವಾದ ಬೈಬಲ್‌ ಅಧ್ಯಯನ ಮತ್ತು ಪ್ರಾರ್ಥನೆಯ ಮೂಲಕ, ಟೋರೂ ನಿಧಾನವಾಗಿ ಯೋಕೋಳ ಭಾವನಾತ್ಮಕ ಅಗತ್ಯಗಳಿಗೆ ಸ್ಪಂದಿಸಲಾರಂಭಿಸಿದನು.

ಯೋಕೋಳು ಟೋರೂವಿನ ವಿಷಯದಲ್ಲಿ ತುಂಬ ಕೋಪಗೊಂಡಿದ್ದರೂ, ಅವನ ಕೌಟುಂಬಿಕ ಹಿನ್ನಲೆಯನ್ನು ಅವಳು ಅರ್ಥಮಾಡಿಕೊಂಡು, ತನ್ನ ಸ್ವಂತ ದೋಷಗಳನ್ನು ಪರಿಗಣಿಸಿದಾಗ, ತನ್ನ ಗಂಡನಲ್ಲಿರುವ ಒಳಿತನ್ನು ನೋಡಲಿಕ್ಕಾಗಿ ಅವಳು ಗಂಭೀರವಾದ ಪ್ರಯತ್ನವನ್ನು ಮಾಡಿದಳು. (ಮತ್ತಾಯ 7:​1-3; ರೋಮಾಪುರ 5:12; ಕೊಲೊಸ್ಸೆ 3:​12-14) ತನ್ನ ಗಂಡನನ್ನು ಪ್ರೀತಿಸುತ್ತಾ ಇರಲು ಬಲವನ್ನು ಕೊಡುವಂತೆ ಅವಳು ಮನಃಪೂರ್ವಕವಾಗಿ ಯೆಹೋವನ ಬಳಿ ಬೇಡಿಕೊಂಡಳು. (ಫಿಲಿಪ್ಪಿ 4:​6, 7) ಕಾಲಾನಂತರ, ಟೋರೂ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲಾರಂಭಿಸಿದನು ಮತ್ತು ಇದರಿಂದಾಗಿ ಅವನ ಹೆಂಡತಿಯು ಹರ್ಷಿತಳಾದಳು.

ಹೌದು, ಕುಟುಂಬದಲ್ಲಿ ಪ್ರೀತಿವಾತ್ಸಲ್ಯವನ್ನು ಅನುಭವಿಸಲು ಮತ್ತು ವ್ಯಕ್ತಪಡಿಸಲು ನಿಮಗೆ ಕಷ್ಟವಾಗುತ್ತಿರುವಲ್ಲಿ, ಆ ಸಮಸ್ಯೆಯನ್ನು ನೀವು ಕೂಡ ಜಯಿಸಬಲ್ಲಿರಿ. ದೇವರ ವಾಕ್ಯವು ಹಿತಕರವಾದ ಮಾರ್ಗದರ್ಶನವನ್ನು ಕೊಡುತ್ತದೆ. (ಕೀರ್ತನೆ 19:7) ಆ ವಿಷಯದ ಗಂಭೀರತೆಯನ್ನು ಗ್ರಹಿಸುವ ಮೂಲಕ, ನಿಮ್ಮ ಕುಟುಂಬ ಸದಸ್ಯರಲ್ಲಿರುವ ಒಳಿತನ್ನು ನೋಡಲು ಪ್ರಯತ್ನಿಸುವ ಮೂಲಕ, ದೇವರ ವಾಕ್ಯದ ಅಧ್ಯಯನ ಮಾಡಿ ಅದನ್ನು ಅನ್ವಯಿಸಿಕೊಳ್ಳುವ ಮೂಲಕ, ಮನಃಪೂರ್ವಕವಾದ ಪ್ರಾರ್ಥನೆಯ ಮುಖಾಂತರ ಯೆಹೋವನ ಮೇಲೆ ಆತುಕೊಳ್ಳುವ ಮೂಲಕ ಮತ್ತು ಪ್ರೌಢ ಕ್ರೈಸ್ತ ಹಿರಿಯರ ಸಹಾಯವನ್ನು ಕೋರುವ ಮೂಲಕ, ನಿಮ್ಮ ಹಾಗೂ ನಿಮ್ಮ ಕುಟುಂಬದ ನಡುವೆಯಿರುವ ಒಂದು ದುಸ್ಸಾಧ್ಯವಾದ ತಡೆಯನ್ನು ನೀವು ಜಯಿಸಸಾಧ್ಯವಿದೆ. (1 ಪೇತ್ರ 5:7) ಅಮೆರಿಕದಲ್ಲಿರುವ ಒಬ್ಬ ಗಂಡನು ಹರ್ಷಿಸಿದಂತೆಯೇ ನೀವೂ ಹರ್ಷಿಸಬಲ್ಲಿರಿ. ಅವನು ತನ್ನ ಹೆಂಡತಿಯ ಕಡೆಗೆ ಪ್ರೀತಿವಾತ್ಸಲ್ಯವನ್ನು ವ್ಯಕ್ತಪಡಿಸುವಂತೆ ಉತ್ತೇಜಿಸಲ್ಪಟ್ಟಿದ್ದನು. ಕಟ್ಟಕಡೆಗೆ ಅವನು ಧೈರ್ಯವನ್ನು ಒಟ್ಟುಗೂಡಿಸಿಕೊಂಡು, “ನಾನು ನಿನ್ನನ್ನು ಪ್ರೀತಿಸುತ್ತೇನೆ” ಎಂದು ಅವಳಿಗಂದಾಗ, ಅವಳ ಪ್ರತಿಕ್ರಿಯೆಯಿಂದ ಆಶ್ಚರ್ಯಚಕಿತನಾದನು. ತನ್ನ ಕಣ್ಣುಗಳಲ್ಲಿ ಆನಂದಾಶ್ರುಗಳೊಂದಿಗೆ ಅವಳಂದದ್ದು: “ನಾನೂ ನಿಮ್ಮನ್ನು ಪ್ರೀತಿಸುತ್ತೇನೆ, ಆದರೆ ಈ 25 ವರ್ಷಗಳಲ್ಲಿ ನೀವಿದನ್ನು ಪ್ರಥಮ ಬಾರಿ ಹೇಳಿದ್ದೀರಿ.” ನಿಮ್ಮ ಸಂಗಾತಿಗಾಗಲಿ ನಿಮ್ಮ ಮಕ್ಕಳಿಗಾಗಲಿ ನಿಮಗಿರುವ ಪ್ರೀತಿವಾತ್ಸಲ್ಯವನ್ನು ವ್ಯಕ್ತಪಡಿಸಲು ಅಷ್ಟು ದೀರ್ಘ ಸಮಯದ ವರೆಗೆ ಕಾಯಬೇಡಿರಿ!

[ಪಾದಟಿಪ್ಪಣಿ]

^ ಪ್ಯಾರ. 2 ಕೆಲವೊಂದು ಹೆಸರುಗಳನ್ನು ಬದಲಾಯಿಸಲಾಗಿದೆ.

[ಪುಟ 28ರಲ್ಲಿರುವ ಚಿತ್ರ]

ಯೆಹೋವನು ತನ್ನ ವಾಕ್ಯವಾದ ಬೈಬಲಿನಲ್ಲಿ ಸಹಾಯವನ್ನು ಒದಗಿಸುತ್ತಾನೆ