ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎರಡು ಲೋಕಗಳ ಕೆಟ್ಟತನವನ್ನು ನೋಡಿದ ಶೇಮ್‌

ಎರಡು ಲೋಕಗಳ ಕೆಟ್ಟತನವನ್ನು ನೋಡಿದ ಶೇಮ್‌

ನಿಮ್ಮ ಮಕ್ಕಳಿಗೆ ಕಲಿಸಿರಿ

ಎರಡು ಲೋಕಗಳ ಕೆಟ್ಟತನವನ್ನು ನೋಡಿದ ಶೇಮ್‌

ನೋಹನ ಮಗ ಶೇಮ್‌ ಒಂದು ಲೋಕದ ಅಂತ್ಯವನ್ನು ಪಾರಾಗಿ ಇನ್ನೊಂದು ಲೋಕದ ಆರಂಭವನ್ನು ಕಂಡನು. ಆ ಮೊದಲ ಲೋಕ ನಾಶವಾದದ್ದೇಕೆ ಮತ್ತು ಅವನೂ ಅವನ ಕುಟುಂಬವೂ ಅದರಿಂದ ಪಾರಾದದ್ದು ಹೇಗೆ ಎಂದು ನಿನಗೆ ಗೊತ್ತಾ?— * ಅದರ ಬಗ್ಗೆ ನಾವೀಗ ತಿಳಿಯೋಣ.

ಶೇಮ್‌ ಚಿಕ್ಕವನಾಗಿದ್ದಾಗ “ಮನುಷ್ಯರ ಕೆಟ್ಟತನ” ತುಂಬ ಹೆಚ್ಚಾಗಿತ್ತು ಎಂದು ಬೈಬಲ್‌ ಹೇಳುತ್ತದೆ. ಜನರು ‘ಯಾವಾಗಲೂ ಬರೀ ಕೆಟ್ಟದ್ದನ್ನೇ’ ಯೋಚಿಸುತ್ತಿದ್ದರು. ಅದಕ್ಕೆ ದೇವರು ಏನು ಮಾಡಿದನು ಗೊತ್ತಾ?— ಆ ದುಷ್ಟ ಲೋಕದಲ್ಲಿದ್ದ ಕೆಟ್ಟವರನ್ನೆಲ್ಲ ನಾಶಮಾಡಲು ದೇವರು ಒಂದು ದೊಡ್ಡ ಪ್ರವಾಹ ಅಥವಾ ನೆರೆಯನ್ನು ತಂದನು. ಇದರ ಬಗ್ಗೆ ಅಪೊಸ್ತಲ ಪೇತ್ರನು ಹೇಳಿದ್ದು: “ಆ ಕಾಲದ ಲೋಕವು ಜಲಪ್ರಳಯ [ದೊಡ್ಡ ನೆರೆ] ಬಂದಾಗ ನಾಶವಾಯಿತು.”—ಆದಿಕಾಂಡ 6:5; 2 ಪೇತ್ರ 3:6.

ಆ ಲೋಕವನ್ನು ದೇವರು ಏಕೆ ನಾಶಮಾಡಿದನೆಂದು ತಿಳಿಯಿತಾ?— ಜನರು ಕೆಟ್ಟವರಾಗಿದ್ದರು ಮತ್ತು ಅವರು ಯೋಚಿಸುತ್ತಿದ್ದದ್ದೆಲ್ಲ ‘ಯಾವಾಗಲೂ ಬರೀ ಕೆಟ್ಟದ್ದೇ.’ ಇದರ ಬಗ್ಗೆ ಯೇಸು ಕೂಡ ಮಾತಾಡಿದನು. ಅವನು ಹೇಳಿದ್ದು: ‘ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ಜನರು ಊಟಮಾಡುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮದುವೆಮಾಡಿಕೊಡುತ್ತಾ ಇದ್ದರು.’ ಅವನು ಮತ್ತೂ ಹೇಳಿದ್ದು: “ಪ್ರಳಯವು ಬಂದು ಅವರೆಲ್ಲರನ್ನು ಕೊಚ್ಚಿಕೊಂಡುಹೋಗುವ ತನಕ ಅವರು ಲಕ್ಷ್ಯಕೊಡಲೇ ಇಲ್ಲ.”ಮತ್ತಾಯ 24:37-39.

ಜನರು ಯಾವುದಕ್ಕೆ ಲಕ್ಷ್ಯಕೊಡಲಿಲ್ಲ ಅಂದರೆ ಗಮನಕೊಡಲಿಲ್ಲ?— ಶೇಮ್‌ನ ತಂದೆ ನೋಹ “ನೀತಿಯನ್ನು ಸಾರುವವನಾಗಿದ್ದ.” ಆದರೆ ಅವನು ಹೇಳುತ್ತಿದ್ದ ವಿಷಯವನ್ನು ಜನರಾರೂ ಕೇಳುತ್ತಿರಲಿಲ್ಲ. ನೋಹನು ದೇವರ ಮಾತನ್ನು ಕೇಳಿ ಒಂದು ನಾವೆಯನ್ನು ಕಟ್ಟಿದನು. ಅದು ನೀರಿನಲ್ಲಿ ತೇಲುವ ದೊಡ್ಡ ಪೆಟ್ಟಿಗೆಯಂತೆ ಇತ್ತು. ಅದರೊಳಗೆ ಅವನು ಮತ್ತು ಅವನ ಕುಟುಂಬದವರು ಜಲಪ್ರಳಯ ಬಂದಾಗ ಸುರಕ್ಷಿತವಾಗಿ ಇರಬಹುದಿತ್ತು. ದೇವರ ಮಾತಿಗೆ ಕಿವಿಗೊಟ್ಟು ಆತನು ಹೇಳಿದಂತೆ ಮಾಡಿದವರು ನೋಹ, ಅವನ ಹೆಂಡತಿ, ಅವನ ಗಂಡು ಮಕ್ಕಳಾದ ಶೇಮ್‌, ಹಾಮ್‌, ಯೆಫೆತ್‌ ಮತ್ತವರ ಪತ್ನಿಯರು ಮಾತ್ರ. ಉಳಿದ ಜನರೆಲ್ಲರೂ ತಮಗೆ ಇಷ್ಟಬಂದಂತೆ ನಡೆಯುತ್ತಿದ್ದರು. ಆದ್ದರಿಂದಲೇ ಅವರು ಜಲಪ್ರಳಯದಲ್ಲಿ ನಾಶವಾದರು.—2 ಪೇತ್ರ 2:5; 1 ಪೇತ್ರ 3:20.

ಜಲಪ್ರಳಯ ಆರಂಭವಾಗಿ ಸುಮಾರು ಒಂದು ವರ್ಷದ ನಂತರ ಶೇಮ್‌ ಮತ್ತು ಅವನ ಕುಟುಂಬದವರು ನಾವೆಯಿಂದ ಹೊರಗೆ ಬಂದರು. ಆಗ ಜಲಪ್ರಳಯದ ನೀರೆಲ್ಲ ಬತ್ತಿಹೋಗಿತ್ತು. ಕೆಟ್ಟ ಜನರೆಲ್ಲರೂ ನಾಶವಾಗಿ ಹೋಗಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ಕೆಟ್ಟತನ ಪುನಃ ಆರಂಭವಾಯಿತು. ಶೇಮ್‌ನ ಸಹೋದರನಾದ ಹಾಮ್‌ನ ಮಗ ಕಾನಾನ್‌ ಎಂಬವನು ತೀರ ಕೆಟ್ಟ ವಿಷಯವನ್ನು ಮಾಡಿದನು. ಆಗ ನೋಹನು, “ಕಾನಾನನು ಶಾಪಗ್ರಸ್ತನಾಗಲಿ” ಎಂದು ಹೇಳಿದನು. ಕಾನಾನನ ಮೊಮ್ಮಗನಾದ ನಿಮ್ರೋದ ಕೂಡ ಮಹಾ ದುಷ್ಟ. ಅವನು ಸತ್ಯ ದೇವರಾದ ಯೆಹೋವನ ಮಾತನ್ನು ವಿರೋಧಿಸಿ, ತಮಗಾಗಿ ದೊಡ್ಡ ಹೆಸರನ್ನು ಮಾಡಲು ಒಂದು ಎತ್ತರದ ಗೋಪುರವನ್ನು ಕಟ್ಟುವಂತೆ ಜನರಿಗೆ ಹೇಳಿದನು. ಇದನ್ನು ಕೇಳಿ ಶೇಮ್‌ ಮತ್ತು ಅವನ ತಂದೆಗೆ ಹೇಗನಿಸಿರಬೇಕೆಂದು ನೀನು ನೆನಸುತ್ತೀ?—ಆದಿಕಾಂಡ 9:25; 10:6-10; 11:4, 5.

ಹೌದು ಅವರಿಗೆ ದುಃಖವಾಯಿತು ಮಾತ್ರವಲ್ಲ ಯೆಹೋವನಿಗೂ ದುಃಖವಾಯಿತು. ಯೆಹೋವನು ಏನು ಮಾಡಿದನು ಗೊತ್ತಾ?— ಜನರ ಭಾಷೆಯನ್ನು ಬೇರೆ ಬೇರೆ ಮಾಡಿ ಗಲಿಬಿಲಿಗೊಳಿಸಿದನು. ಇದರಿಂದ ಒಬ್ಬರ ಮಾತು ಇನ್ನೊಬ್ಬರಿಗೆ ಅರ್ಥವಾಗುತ್ತಿರಲಿಲ್ಲ. ಆಗ ಅವರು ಆ ಗೋಪುರ ಕಟ್ಟುವ ಕೆಲಸವನ್ನು ಅಲ್ಲಿಗೇ ನಿಲ್ಲಿಸಬೇಕಾಯಿತು. ಮಾತ್ರವಲ್ಲ ತಮ್ಮ ತಮ್ಮ ಭಾಷೆಯನ್ನು ಮಾತಾಡುವ ಜನರೊಂದಿಗೆ ಅವರು ಬೇರೆ ಬೇರೆ ಊರುಗಳಿಗೆ ಹೋಗಬೇಕಾಗಿ ಬಂತು. (ಆದಿಕಾಂಡ 11:6-9) ಆದರೆ ಶೇಮ್‌ ಮತ್ತು ಅವನ ಕುಟುಂಬದ ಭಾಷೆಯನ್ನು ಮಾತ್ರ ದೇವರು ಬದಲಾಯಿಸಲಿಲ್ಲ. ಯಾಕೆಂದರೆ ಅವರು ಒಟ್ಟಾಗಿದ್ದು ದೇವರ ಸೇವೆಮಾಡಲು ಒಬ್ಬರಿಗೊಬ್ಬರು ಸಹಾಯಮಾಡಬಹುದಲ್ಲ ಅದಕ್ಕೆ. ಶೇಮ್‌ ಎಷ್ಟು ವರ್ಷ ದೇವರ ಸೇವೆಮಾಡಿದನೆಂದು ಯಾವತ್ತಾದರೂ ಯೋಚಿಸಿದ್ದಿಯಾ?—

ಶೇಮ್‌ ಬದುಕಿದ್ದು 600 ವರ್ಷ. ಜಲಪ್ರಳಯಕ್ಕೆ ಮುಂಚೆ 98 ವರ್ಷ, ಜಲಪ್ರಳಯದ ನಂತರ 502 ವರ್ಷ! ನಾವೆ ಕಟ್ಟಲು ಮತ್ತು ಜಲಪ್ರಳಯದ ಬಗ್ಗೆ ಜನರಿಗೆ ಎಚ್ಚರಿಕೆ ಕೊಡಲು ಅವನು ಖಂಡಿತ ನೋಹನಿಗೆ ಸಹಾಯಮಾಡಿದನು. ಆದರೆ ಜಲಪ್ರಳಯದ ನಂತರ 500ಕ್ಕೂ ಹೆಚ್ಚು ವರ್ಷ ಬದುಕಿದನಲ್ಲಾ. ಅಷ್ಟು ವರ್ಷ ಅವನು ಏನು ಮಾಡಿದ್ದಿರಬಹುದು ಎಂದು ನೀನು ನೆನಸುತ್ತಿಯಾ?— ನೋಹನು ಯೆಹೋವ ದೇವರನ್ನು ‘ಶೇಮನ ದೇವರು’ ಎಂದು ಕರೆದನು. ಶೇಮನು ದೇವರ ಸೇವೆಮಾಡುತ್ತಾ ತನ್ನ ಕುಟುಂಬದವರೂ ಅದನ್ನೇ ಮಾಡಲು ಸಹಾಯಮಾಡಿದನು ಎಂಬುದು ನಿಸ್ಸಂಶಯ. ಇವನ ವಂಶದಲ್ಲಿ ಮುಂದೆ ಅಬ್ರಹಾಮ, ಸಾರ ಮತ್ತು ಇಸಾಕರಂಥ ಒಳ್ಳೇ ವ್ಯಕ್ತಿಗಳು ಹುಟ್ಟಿದರು.—ಆದಿಕಾಂಡ 9:26; 11:10-31; 21:1-3.

ಈಗ ನಾವಿರುವ ಈ ಲೋಕ ಹೇಗಿದೆ ನೋಡು. ಶೇಮನ ದಿನಗಳಿಗಿಂತ ಇನ್ನೂ ಹೆಚ್ಚು ಕೆಟ್ಟುಹೋಗಿದೆ. ಈ ಲೋಕಕ್ಕೆ ಏನಾಗಲಿದೆ?— ಅದು ‘ಗತಿಸಿಹೋಗುತ್ತದೆ’ ಎಂದು ಬೈಬಲ್‌ ಹೇಳುತ್ತದೆ. ಆದರೆ “ದೇವರ ಚಿತ್ತವನ್ನು ಮಾಡುವವನು ಎಂದೆಂದಿಗೂ ಇರುವನು” ಎಂದೂ ಬೈಬಲ್‌ ಹೇಳುತ್ತದೆ. ನಾವು ದೇವರ ಚಿತ್ತ ಮಾಡಿದರೆ ಮಾತ್ರ ಈ ಲೋಕದ ಅಂತ್ಯವನ್ನು ಪಾರಾಗಿ ದೇವರು ತರುವ ಹೊಸ ಲೋಕಕ್ಕೆ ಹೋಗುವವರಲ್ಲಿ ಒಬ್ಬರಾಗಲು ಸಾಧ್ಯ. ಹೀಗೆ ದೇವರ ಸಹಾಯದಿಂದ ನಾವು ಭೂಮಿಯ ಮೇಲೆ ಸಂತೋಷದಿಂದ ಶಾಶ್ವತವಾಗಿ ಜೀವಿಸಬಹುದು!—1 ಯೋಹಾನ 2:17; ಕೀರ್ತನೆ 37:29; ಯೆಶಾಯ 65:17. (w09-E 10/01)

[ಪಾದಟಿಪ್ಪಣಿ]

^ ಪ್ಯಾರ. 3 ಈ ಲೇಖನವನ್ನು ನೀವು ಮಕ್ಕಳಿಗೆ ಓದಿಹೇಳುತ್ತಿರುವುದಾದರೆ ಅಡ್ಡಗೆರೆ ಇರುವಲ್ಲಿ ಸ್ವಲ್ಪ ನಿಲ್ಲಿಸಿ ಅವರು ಉತ್ತರ ಹೇಳುವಂತೆ ಉತ್ತೇಜಿಸಿರಿ.

ಪ್ರಶ್ನೆಗಳು:

❍ ಶೇಮ್‌ ಜೀವಿಸಿದ ಮೊದಲ ಲೋಕ ಹೇಗಿತ್ತು, ಮತ್ತು ಅದನ್ನು ದೇವರು ಯಾವ ಎರಡು ಕಾರಣಗಳಿಗಾಗಿ ನಾಶಮಾಡಿದನು?

❍ ಶೇಮ್‌ ಎಷ್ಟು ವರ್ಷ ಬದುಕಿದನು, ಮತ್ತು ಅವನು ಎಂಥ ವ್ಯಕ್ತಿಯಾಗಿದ್ದನು?

❍ ಈ ಲೋಕಕ್ಕೆ ಬೇಗನೆ ಏನಾಗಲಿಕ್ಕಿದೆ?

❍ ಈ ಲೋಕದ ಅಂತ್ಯವನ್ನು ಪಾರಾಗಲು ನಾವೇನು ಮಾಡಬೇಕು?