ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಂಪತಿಗಳ ದೂರುಗಳಿಗೆ ಪರಿಹಾರ

ದಂಪತಿಗಳ ದೂರುಗಳಿಗೆ ಪರಿಹಾರ

ದಂಪತಿಗಳ ದೂರುಗಳಿಗೆ ಪರಿಹಾರ

ದಾಂಪತ್ಯ ಜೀವನ ಯಾವಾಗಲೂ ಸುಖದ ಸುಪ್ಪತ್ತಿಗೆಯೆಂದು ಬೈಬಲ್‌ ಹೇಳುವುದಿಲ್ಲ. ದಂಪತಿಗಳಿಗೆ “ತೊಂದರೆಗಳನ್ನು” ಎದುರಿಸಲಿಕ್ಕಿದೆಯೆಂದು ಬೈಬಲಿನಲ್ಲಿ ಬರೆಯಲು ಯೇಸುವಿನ ಶಿಷ್ಯ ಪೌಲನನ್ನು ದೇವರು ಪ್ರೇರಿಸಿದನು. (1 ಕೊರಿಂಥ 7:28, ಟುಡೇಸ್‌ ಇಂಗ್ಲಿಷ್‌ ವರ್ಷನ್‌) ಆದರೆ ದಂಪತಿಗಳು ಆ ತೊಂದರೆಗಳನ್ನು ಕಡಿಮೆಮಾಡಲು ಹಾಗೂ ಪರಸ್ಪರರ ಸಂತೋಷ ಹೆಚ್ಚಿಸಲು ಬಹಳಷ್ಟನ್ನು ಮಾಡಬಲ್ಲರು. ದಂಪತಿಗಳಿಂದ ಸಾಮಾನ್ಯವಾಗಿ ಕೇಳಿಬರುವ ಮುಂದಿನ ಆರು ದೂರುಗಳನ್ನು ಪರಿಗಣಿಸಿರಿ. ಬೈಬಲ್‌ ಸೂತ್ರಗಳ ಅನ್ವಯ ಹೇಗೆ ಸಹಾಯ ಮಾಡುತ್ತದೆಂಬದಕ್ಕೂ ಗಮನಕೊಡಿ.

1

ದೂರು:

“ನನ್ನ ಗಂಡ/ಹೆಂಡತಿ ನನ್ನಿಂದ ದೂರವಾಗುತ್ತಾ ಇದ್ದಾರೆ/ಳೆ.”

ಬೈಬಲ್‌ ಸೂತ್ರ:

‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ.’ಫಿಲಿಪ್ಪಿ 1:10.

ನಿಮ್ಮ ಬದುಕಿನ ಅತ್ಯಂತ ಪ್ರಮುಖ ಸಂಗತಿಗಳಲ್ಲಿ ನಿಮ್ಮ ದಾಂಪತ್ಯ ಒಂದು. ಅದಕ್ಕೆ ಆದ್ಯತೆ ನೀಡಬೇಕು. ಆದ್ದರಿಂದ ಈ ದೂರಿಗೆ ಕಾರಣ ನಿಮ್ಮ ಕೆಲಸಕಾರ್ಯಗಳೊ ಎಂದು ಪರೀಕ್ಷಿಸಿ ನೋಡಿ. ಒಂದೇ ಸೂರಿನಡಿಯಿದ್ದರೂ ನಿಮ್ಮ ದಿನಚರಿಯಿಂದಾಗಿ ನೀವೂ ನಿಮ್ಮ ಸಂಗಾತಿಯೂ ಪ್ರತ್ಯೇಕ ಜೀವನ ನಡೆಸುವವರಾಗಬೇಡಿ. ಉದ್ಯೋಗವೊ ಅನಿವಾರ್ಯ ಸನ್ನಿವೇಶಗಳೊ ನೀವು ತತ್ಕಾಲಕ್ಕೆ ಪರಸ್ಪರ ದೂರವಿರುವಂತೆ ಮಾಡೀತು ನಿಜ. ಆದರೆ ನಿಮಗೆ ನಿಯಂತ್ರಣವಿರುವ ವಿಷಯಗಳಿಗೆ ಅಂದರೆ ಹವ್ಯಾಸಗಳು, ಸ್ನೇಹಿತರೊಂದಿಗೆ ಸಮಯ ಕಳೆಯುವುದು ಇತ್ಯಾದಿಗಳಿಗೆ ನೀವು ಮಿತಿ ಇಡಬೇಕು.

ಕೆಲವರಾದರೊ ತಮ್ಮ ವಿವಾಹ ಸಂಗಾತಿಯೊಂದಿಗೆ ಸಮಯ ಕಳೆಯುವುದನ್ನು ತಪ್ಪಿಸಿಕೊಳ್ಳಲಿಕ್ಕೆಂದೇ ಹೆಚ್ಚಿನ ಕೆಲಸವನ್ನೊ ಹವ್ಯಾಸಗಳನ್ನೊ ಕೈಗೆತ್ತಿಕೊಳ್ಳುತ್ತಾರೆ. ಇಂಥವರು ತಮ್ಮ ಸಂಗಾತಿಯಿಂದ ಅರಿವಿಲ್ಲದೆ ದೂರವಾಗುತ್ತಿಲ್ಲ ಬದಲಾಗಿ ಬೇಕುಬೇಕೆಂದೇ ದೂರವಾಗುತ್ತಿದ್ದಾರೆ. ನೀವೂ ನಿಮ್ಮ ಸಂಗಾತಿಯೂ ಹೀಗೆ ಮಾಡುತ್ತಿರುವಲ್ಲಿ ನಿಜವಾದ ಸಮಸ್ಯೆಗಳೇನೆಂದು ಗುರುತಿಸಿ ಅವುಗಳನ್ನು ಪರಿಹರಿಸಲು ಕ್ರಮಗೈಯಿರಿ. ನಿಮ್ಮ ಬಾಳಸಂಗಾತಿಯೊಂದಿಗೆ ಸಮಯ ಕಳೆದರೆ ಮಾತ್ರ ನೀವಿಬ್ಬರೂ ಆಪ್ತರಾಗಬಲ್ಲಿರಿ, ಪೂರ್ಣಾರ್ಥದಲ್ಲಿ “ಒಂದೇ ಶರೀರ” ಆಗುವಿರಿ.—ಆದಿಕಾಂಡ 2:24.

ಇದನ್ನು ಕೆಲವರು ಅನ್ವಯಿಸಿದ ವಿಧ: ಆಸ್ಟ್ರೇಲಿಯದ ದಂಪತಿ ಆ್ಯಂಡ್ರು * ಮತ್ತು ಟ್ಯಾನ್ಜಿ ಮದುವೆಯಾಗಿ ಹತ್ತು ವರ್ಷಗಳಾಗಿವೆ. ಆ್ಯಂಡ್ರು ಹೇಳುವುದು: “ಉದ್ಯೋಗದಲ್ಲಿ, ಮನೋರಂಜನೆಯಲ್ಲಿ ಅಥವಾ ಗೆಳೆಯರೊಂದಿಗೆ ತೀರ ಹೆಚ್ಚು ಸಮಯ ಕಳೆಯುವುದು ವೈವಾಹಿಕ ಜೀವನಕ್ಕೆ ಕಂಟಕವೆಂದು ನನಗೆ ಗೊತ್ತಾಗಿದೆ. ಆದ್ದರಿಂದ ನಾನೂ ನನ್ನ ಪತ್ನಿಯೂ ಪರಸ್ಪರ ಮಾತಾಡಲು ಹೇಗಾದರೂ ಸಮಯ ಕೊಟ್ಟು, ನಮ್ಮ ಭಾವನೆ-ಅನಿಸಿಕೆಗಳನ್ನು ಹಂಚಿಕೊಳ್ಳುತ್ತೇವೆ.”

ಯುನೈಟೆಡ್‌ ಸ್ಟೇಟ್ಸ್‌ನಲ್ಲಿರುವ ಡೇವ್‌ ಮತ್ತು ಜೇನ್‌ ಸತಿಪತಿಗಳಾಗಿ 22 ವರ್ಷಗಳಾಗಿವೆ. ಅವರು ಪ್ರತಿ ಸಾಯಂಕಾಲ ಅರ್ಧ ತಾಸನ್ನು ತಮ್ಮ ಅನುಭವಗಳನ್ನೂ ವಿಚಾರಗಳನ್ನೂ ಪರಸ್ಪರ ಹಂಚಿಕೊಳ್ಳಲು ಮೀಸಲಿಡುತ್ತಾರೆ. ಜೇನ್‌ ಹೇಳುವುದು: “ನಮಗೆ ಇದೆಷ್ಟು ಮುಖ್ಯವೆಂದರೆ, ಈ ಸಮಯದಲ್ಲಿ ಬೇರಾವ ವಿಷಯವೂ ಅಡ್ಡಬರುವಂತೆ ಬಿಡುವುದಿಲ್ಲ.”

2

ದೂರು:

“ಗಂಡನಿಂದ/ಹೆಂಡತಿಯಿಂದ ನಾನು ಬಯಸಿದ್ದು ನನಗೆ ಸಿಗುತ್ತಿಲ್ಲ.”

ಬೈಬಲ್‌ ಸೂತ್ರ:

“ಪ್ರತಿಯೊಬ್ಬನು ತನ್ನ ಹಿತವನ್ನು ಚಿಂತಿಸದೆ ಪರಹಿತವನ್ನು ಚಿಂತಿಸಲಿ.”1 ಕೊರಿಂಥ 10:24.

ಗಂಡನಿಂದ/ಹೆಂಡತಿಯಿಂದ ತಾನು ಬಯಸಿದ್ದು ತನಗೆ ಸಿಗಬೇಕು ಎಂಬುದರ ಮೇಲೆಯೇ ಗಮನವಿಟ್ಟಿರುವ ವ್ಯಕ್ತಿ ಅದೆಷ್ಟೇ ಬಾರಿ ಪುನರ್ವಿವಾಹವಾದರೂ ಸಂತೋಷವೆಂಬುದು ಅವರಿಗೆ ಕನ್ನಡಿಯೊಳಗಿನ ಗಂಟು. ವೈವಾಹಿಕ ಸಾಫಲ್ಯಕ್ಕಾಗಿ ಗಂಡಹೆಂಡತಿ ಇಬ್ಬರೂ, ತೆಗೆದುಕೊಳ್ಳುವುದಕ್ಕಿಂತ ಕೊಡುವುದಕ್ಕೆ ಹೆಚ್ಚು ಗಮನ ಕೊಡಬೇಕು. ಏಕೆ? “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ” ಅಂದನು ಯೇಸು.—ಅ. ಕಾರ್ಯಗಳು 20:35.

ಇದನ್ನು ಕೆಲವರು ಅನ್ವಯಿಸಿದ ವಿಧ: ಮೆಕ್ಸಿಕೊದ ಮರೀಯ ಮತ್ತು ಮಾರ್ಟಿನ್‌ ಮದುವೆಯಾಗಿ 39 ವರ್ಷಗಳು ಸಂದಿವೆ. ಆದರೆ ಅವರ ದಾಂಪತ್ಯವು ಯಾವಾಗಲೂ ಹೂವು ಹಾಸಿದ ಹಾದಿಯಾಗಿರದೆ ಮಧ್ಯದಲ್ಲಿ ಮುಳ್ಳಿನಂಥ ಸನ್ನಿವೇಶಗಳು ಎದುರಾಗಿವೆ. ಅಂಥ ಒಂದು ನಿರ್ದಿಷ್ಟ ಸನ್ನಿವೇಶ ಅವರಿಗಿನ್ನೂ ನೆನಪಿದೆ. ಮರೀಯ ಅನ್ನುವುದು: “ಒಮ್ಮೆ ನಮ್ಮ ಮಾತಿನ ಚಕಮಕಿಯಲ್ಲಿ ನನ್ನ ಯಜಮಾನರಿಗೆ ಅವಮರ್ಯಾದೆಯ ಮಾತನ್ನಾಡಿದೆ. ಅವರ ಕೋಪ ನೆತ್ತಿಗೇರಿತು. ನಾನು ಹೇಳಿದ್ದು ಆ ಅರ್ಥದಲ್ಲಲ್ಲ, ನನಗೂ ಸಿಟ್ಟು ಬಂದಿತ್ತು ಅದಕ್ಕೆ ಹಾಗೆ ಹೇಳಿದ್ದೆ ಅಷ್ಟೇ ಎಂದು ಸಮಜಾಯಿಸಿದೆ. ಆದರೆ ಅವರು ಕೇಳಲಿಕ್ಕೇ ಸಿದ್ಧರಿರಲಿಲ್ಲ.” ಮಾರ್ಟಿನ್‌ ಹೇಳುವುದು: “ಆ ಜಗಳದ ಸಮಯದಲ್ಲಿ ನನ್ನ ಮನಸ್ಸಿಗೆ ಬಂದ ವಿಚಾರವೇನೆಂದರೆ, ನಮ್ಮ ವಿವಾಹ ಬಂಧವನ್ನು ಉಳಿಸುವ ಪ್ರಯತ್ನ ಕೈಬಿಡಬೇಕು, ಇನ್ನು ಮುಂದೆ ಒಟ್ಟಿಗೆ ಬಾಳಲು ಸಾಧ್ಯವೇ ಇಲ್ಲ.”

ಮಾರ್ಟಿನ್‌ಗೆ ಬೇಕಿದ್ದದ್ದು ಗೌರವ. ಮರೀಯಳಿಗೆ ಬೇಕಿದ್ದದ್ದು, ತನ್ನ ಗಂಡ ತನ್ನನ್ನು ಅರ್ಥಮಾಡಿಕೊಳ್ಳಬೇಕೆಂದು. ಆದರೆ ಇಬ್ಬರಿಗೂ ತಾವು ಬಯಸಿದ್ದು ಸಿಗುತ್ತಿರಲಿಲ್ಲ.

ಅವರು ಸಮಸ್ಯೆಯನ್ನು ಬಗೆಹರಿಸಿದ್ದು ಹೇಗೆ? ಮಾರ್ಟಿನ್‌ ಅನ್ನುವುದು: “ನನ್ನ ಮನಸ್ಸನ್ನು ಶಾಂತಗೊಳಿಸಲು ಸಮಯ ತಕ್ಕೊಂಡೆ. ಗೌರವ, ದಯೆ ತೋರಿಸಬೇಕೆಂಬ ಬೈಬಲಿನ ವಿವೇಕಯುತ ಸಲಹೆಯನ್ನು ನಾವಿಬ್ಬರೂ ಪಾಲಿಸುವ ನಿರ್ಣಯ ಮಾಡಿದೆವು. ವರ್ಷಗಳು ಸಂದಂತೆ ನಾವು ಕಲಿತಿರುವ ವಿಷಯವೇನೆಂದರೆ, ಸಮಸ್ಯೆಗಳು ಎಷ್ಟೇ ಸಲ ತಲೆದೋರಲಿ, ದೇವರ ಸಹಾಯಕ್ಕಾಗಿ ಪ್ರಾರ್ಥಿಸಿ ಬೈಬಲ್‌ ಸಲಹೆಯನ್ನು ಅನ್ವಯಿಸಿದರೆ ಅವುಗಳನ್ನು ಖಂಡಿತ ಜಯಿಸಬಲ್ಲೆವು.”—ಯೆಶಾಯ 48:17, 18; ಎಫೆಸ 4:31, 32.

3

ದೂರು:

“ನನ್ನ ಗಂಡ/ಹೆಂಡತಿ ತನ್ನ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ.”

ಬೈಬಲ್‌ ಸೂತ್ರ:

“ನಮ್ಮಲ್ಲಿ ಪ್ರತಿಯೊಬ್ಬನು ತನ್ನ ವಿಷಯದಲ್ಲಿ ದೇವರಿಗೆ ಲೆಕ್ಕ ಒಪ್ಪಿಸುವನು.”ರೋಮನ್ನರಿಗೆ 14:12.

ದಂಪತಿಯಲ್ಲಿ ಒಬ್ಬರು ಮಾತ್ರ ವೈವಾಹಿಕ ಸಾಫಲ್ಯಕ್ಕಾಗಿ ಶ್ರಮಪಡುತ್ತಿರುವಲ್ಲಿ ವಿವಾಹ ಜೀವನ ಸುಗಮವಾಗಿ ಸಾಗಲಾರದು ನಿಶ್ಚಯ. ಆದರೆ ಇಬ್ಬರಿಗೂ ನಿರ್ಲಕ್ಷ್ಯ ಭಾವವಿದ್ದು, ಪರಸ್ಪರರ ಮೇಲೆ ಗೂಬೆ ಕೂರಿಸುತ್ತಿರುವಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವುದು.

ನಿಮ್ಮ ಸಂಗಾತಿ ಏನು ಮಾಡಬೇಕು ಎಂಬುದಕ್ಕೇ ನೀವು ಸದಾ ಗಮನ ಕೊಡುತ್ತಿರುವಲ್ಲಿ ನೀವೆಂದೂ ಸುಖೀ ಆಗಿರಲಾರಿರಿ. ಅದರಲ್ಲೂ, ನಿಮ್ಮ ಜವಾಬ್ದಾರಿಗಳನ್ನು ಪೂರೈಸದಿರಲು ನಿಮ್ಮ ಸಂಗಾತಿಯ ಲೋಪದೋಷಗಳನ್ನು ನೆಪವಾಗಿ ಬಳಸುವಲ್ಲಿ ಬಾಳು ದುಸ್ತರ. ಆದರೆ ಒಂದುವೇಳೆ ನೀವು ಒಳ್ಳೇ ಗಂಡನೊ ಒಳ್ಳೇ ಹೆಂಡತಿಯೊ ಆಗಿರಲು ಶ್ರಮಿಸುವಲ್ಲಿ, ನಿಮ್ಮ ವಿವಾಹ ಜೀವನ ಸುಧಾರಿಸೀತು. (1 ಪೇತ್ರ 3:1-3) ಇದಕ್ಕಿಂತಲೂ ಮುಖ್ಯವಾಗಿ, ದೇವರು ಮಾಡಿರುವ ವಿವಾಹದ ಏರ್ಪಾಡನ್ನು ಗೌರವಿಸುತ್ತೀರೆಂದು ತೋರಿಸಿಕೊಡುತ್ತೀರಿ. ನಿಮ್ಮ ಕ್ರಿಯೆಗಳು ಆತನಿಗೆ ಮಹದಾನಂದ ತರುವವು.—1 ಪೇತ್ರ 2:19.

ಇದನ್ನು ಕೆಲವರು ಅನ್ವಯಿಸಿದ ವಿಧ: ಕೊರಿಯದ ಕಿಮ್‌ ಎಂಬಾಕೆ ಮದುವೆಯಾಗಿ 38 ವರ್ಷಗಳಾಗಿವೆ. ಆಕೆ ಅನ್ನುವುದು: “ಕೆಲವೊಮ್ಮೆ ನನ್ನ ಗಂಡನಿಗೆ ನನ್ನ ಮೇಲೆ ಸಿಟ್ಟುಬಂದು, ಮಾತೇ ನಿಲ್ಲಿಸಿಬಿಡುತ್ತಾರೆ. ಏಕೆಂದೂ ನನಗೆ ಗೊತ್ತಿರುವುದಿಲ್ಲ. ಅವರಿಗೆ ನನ್ನ ಮೇಲಿನ ಪ್ರೀತಿ ಕಡಿಮೆಯಾಗಿದೆ ಎಂದು ಆಗ ಅನಿಸುತ್ತದೆ. ‘ಅವರು ನನ್ನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ, ನಾನು ಮಾತ್ರ ಅವರನ್ನು ಅರ್ಥಮಾಡಿಕೊಳ್ಳಬೇಕಂತೆ, ಯಾಕೆ?’ ಎಂದು ಒಮ್ಮೊಮ್ಮೆ ಯೋಚಿಸುತ್ತಿರುತ್ತೇನೆ.”

ಕಿಮ್‌ ತನಗೆಷ್ಟು ಅನ್ಯಾಯವಾಗುತ್ತಿದೆ, ಗಂಡ ತನ್ನ ಕರ್ತವ್ಯ ಪೂರೈಸುವುದಿಲ್ಲ ಎಂಬುದರ ಬಗ್ಗೆಯೇ ಯೋಚಿಸುತ್ತಾ ಇರಬಹುದಿತ್ತು. ಆದರೆ ಹಾಗೆ ಮಾಡದೆ ಆಕೆ ಬೇರೊಂದು ಹೆಜ್ಜೆ ತಕ್ಕೊಳ್ಳುತ್ತಾಳೆ. “ಮುನಿಸಿಕೊಂಡೇ ಇರುವ ಬದಲು, ನಾನೇ ಮುಂದೆಹೋಗಿ ರಾಜಿಮಾಡಿಕೊಳ್ಳುವುದು ಉತ್ತಮವೆಂದು ಕಲಿತಿದ್ದೇನೆ. ಕೊನೆಯಲ್ಲಿ ನಾವಿಬ್ಬರೂ ಶಾಂತರಾಗಿ, ಸಮಸ್ಯೆ ಬಗ್ಗೆ ಸಮಾಧಾನದಿಂದ ಮಾತಾಡಲು ಶಕ್ತರಾಗುತ್ತೇವೆ” ಎನ್ನುತ್ತಾಳಾಕೆ.—ಯಾಕೋಬ 3:18.

4

ದೂರು:

“ನನ್ನ ಹೆಂಡತಿ ಅಧೀನತೆ ತೋರಿಸುವುದಿಲ್ಲ.”

ಬೈಬಲ್‌ ಸೂತ್ರ:

“ಪ್ರತಿ ಪುರುಷನಿಗೆ ಕ್ರಿಸ್ತನು ತಲೆ.”1 ಕೊರಿಂಥ 11:3.

ಹೆಂಡತಿ ತನಗೆ ಅಧೀನತೆ ತೋರಿಸುವುದಿಲ್ಲ ಎಂದು ಗಂಡನಿಗೆ ಅನಿಸುವಲ್ಲಿ, ಮೊದಲು ಅವನು ತನ್ನ ತಲೆಯಾದ ಯೇಸು ಕ್ರಿಸ್ತನಿಗೆ ಅಧೀನತೆ ತೋರಿಸುತ್ತಿದ್ದಾನೋ ಎಂದು ಪರೀಕ್ಷಿಸಿಕೊಳ್ಳಬೇಕು. ಗಂಡನು ಯೇಸುವಿನ ಮಾದರಿಯನ್ನು ಅನುಕರಿಸುವ ಮೂಲಕ ಆತನಿಗೆ ಅಧೀನತೆ ತೋರಿಸಬಲ್ಲನು.

“ಗಂಡಂದಿರೇ, ಕ್ರಿಸ್ತನು ಸಹ ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟಂತೆಯೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ” ಎಂದು ಬರೆದನು ಯೇಸುವಿನ ಶಿಷ್ಯ ಪೌಲನು. (ಎಫೆಸ 5:25) ಯೇಸು ತನ್ನ ಶಿಷ್ಯರ ಮೇಲೆ “ದಬ್ಬಾಳಿಕೆ” ನಡೆಸಲಿಲ್ಲ. (ಮಾರ್ಕ 10:42-44) ಆತನು ತನ್ನ ಹಿಂಬಾಲಕರಿಗೆ ಸ್ಪಷ್ಟ ನಿರ್ದೇಶನಗಳನ್ನು ಕೊಟ್ಟನು. ಅಗತ್ಯವಿದ್ದಾಗ ತಿದ್ದಿದನು. ಆದರೆ ಎಂದೂ ಕಠೋರನಾಗಿರಲಿಲ್ಲ. ಅವರನ್ನು ದಯೆಯಿಂದ ಉಪಚರಿಸಿದನು. ಅವರ ಇತಿಮಿತಿಗಳನ್ನು ಅರ್ಥಮಾಡಿಕೊಂಡನು. (ಮತ್ತಾಯ 11:29, 30; ಮಾರ್ಕ 6:30, 31; 14:37, 38) ಯಾವಾಗಲೂ ತನ್ನ ಅಭಿರುಚಿಗಳಿಗಿಂತ ಅವರ ಅಭಿರುಚಿಗಳನ್ನು ಮೊದಲಿಟ್ಟನು.—ಮತ್ತಾಯ 20:25-28.

ಗಂಡನೊಬ್ಬನು ತನಗೇ ಈ ಪ್ರಶ್ನೆ ಕೇಳಿಕೊಳ್ಳಬೇಕು: ‘ತಲೆತನ ಹಾಗೂ ಸ್ತ್ರೀಯರ ಕುರಿತ ನನ್ನ ನೋಟವು, ಬೈಬಲಿನಲ್ಲಿರುವ ಸಲಹೆ ಹಾಗೂ ಮಾದರಿಗಳಿಗಿಂತಲೂ ಹೆಚ್ಚಾಗಿ ಸ್ಥಳೀಯ ಪದ್ಧತಿಯಿಂದ ಪ್ರಭಾವಿಸಲ್ಪಟ್ಟಿದೆಯೋ?’ ಉದಾಹರಣೆಗೆ, ತನ್ನ ಗಂಡನ ಅಭಿಪ್ರಾಯದೊಂದಿಗೆ ಸಮ್ಮತಿಸದೆ, ತನಗಿರುವ ಭಿನ್ನಾಭಿಪ್ರಾಯವನ್ನು ಅವನಿಗೆ ದೃಢವಾಗಿಯೂ ಗೌರವಪೂರ್ವಕವಾಗಿಯೂ ತಿಳಿಸುವ ಸ್ತ್ರೀಯ ಕುರಿತು ನಿಮ್ಮ ನೋಟವೇನು? ಬೈಬಲಿನಲ್ಲಿ ಅಬ್ರಹಾಮನ ಹೆಂಡತಿ ಸಾರಳನ್ನು ಅಧೀನತೆ ತೋರಿಸಿದ ಆದರ್ಶ ಪತ್ನಿ ಎಂದು ಎತ್ತಿಹೇಳಲಾಗಿದೆ. (1 ಪೇತ್ರ 3:1, 6) ಆಕೆ ಅಧೀನಳಾಗಿದ್ದರೂ ಅಗತ್ಯಬಿದ್ದಾಗಲೆಲ್ಲ ತನ್ನ ಮನಸ್ಸಿನಲ್ಲಿದ್ದ ವಿಚಾರವನ್ನು ನೇರವಾಗಿ ಹೇಳಿದಳು. ಉದಾಹರಣೆಗೆ ಅಬ್ರಹಾಮನು ತನ್ನ ಕುಟುಂಬಕ್ಕೆ ಬರಲಿದ್ದ ಕೆಲವೊಂದು ಅಪಾಯಗಳನ್ನು ಗ್ರಹಿಸಿಕೊಳ್ಳದಿದ್ದಾಗ ಅವುಗಳನ್ನು ಅವನ ಗಮನಕ್ಕೆ ತಂದಳು.—ಆದಿಕಾಂಡ 16:5; 21:9-12.

ಅಬ್ರಹಾಮನು ಸಾರಳನ್ನು ಹೆದರಿಸಿ-ಬೆದರಿಸಿ ಆಕೆಯ ಬಾಯಿ ಕಟ್ಟಿಟ್ಟಿರಲಿಲ್ಲ ಎಂಬುದು ಇದರಿಂದ ವ್ಯಕ್ತ. ಅವನು ಪತ್ನಿ-ಪೀಡಕನಾಗಿರಲಿಲ್ಲ. ಅಂತೆಯೇ, ಬೈಬಲಿನ ಸಲಹೆಯನ್ನು ಪಾಲಿಸುವ ಗಂಡನು ತನ್ನ ಹೆಂಡತಿಯನ್ನು ದಬಾಯಿಸುತ್ತಾ, ಆಕೆ ತನ್ನ ಪ್ರತಿಯೊಂದು ಖಯಾಲಿಯನ್ನು ಶಿರಸ್ಸಾವಹಿಸಿ ಪೂರೈಸಬೇಕೆಂದು ಒತ್ತಾಯಿಸುವುದಿಲ್ಲ. ಬದಲಾಗಿ ಅವನು ತನ್ನ ತಲೆತನವನ್ನು ಕರುಣಾಭರಿತ ವಿಧದಲ್ಲಿ ನಿರ್ವಹಿಸಿ ಹೆಂಡತಿಯ ಗೌರವ ಸಂಪಾದಿಸುವನು.

ಇದನ್ನು ಕೆಲವರು ಅನ್ವಯಿಸಿದ ವಿಧ: ಇಂಗ್ಲೆಂಡ್‌ನಲ್ಲಿರುವ ಜೇಮ್ಸ್‌ ವಿವಾಹ ಜೀವನಕ್ಕೆ ಕಾಲಿರಿಸಿ ಎಂಟು ವರ್ಷಗಳಾಗಿವೆ. ಅವನನ್ನುವುದು: “ಮುಖ್ಯ ನಿರ್ಣಯಗಳನ್ನು ಮಾಡುವ ಮುಂಚೆ ನನ್ನ ಹೆಂಡತಿಯ ಅಭಿಪ್ರಾಯ ಕೇಳುವ ರೂಢಿ ಮಾಡಿಕೊಳ್ಳುತ್ತಿದ್ದೇನೆ. ಬರೀ ನನ್ನ ಬಗ್ಗೆಯೇ ಯೋಚಿಸದೆ, ಮೊದಲು ಅವಳ ಅಗತ್ಯಗಳಿಗೆ ಗಮನಕೊಡಲು ಪ್ರಯತ್ನಿಸುತ್ತೇನೆ.”

ಯುನೈಟೆಡ್‌ ಸ್ಟೇಟ್ಸ್‌ನ ನಿವಾಸಿ ಜಾರ್ಜ್‌ ಎಂಬವರ ಮದುವೆಯಾಗಿ 59 ಸಂವತ್ಸರಗಳು ಕಳೆದಿವೆ. ಅವರನ್ನುವುದು: “ನನ್ನ ಹೆಂಡತಿಯನ್ನು ನನಗಿಂತ ಕೀಳಾದವಳಲ್ಲ ಬದಲಾಗಿ ಬುದ್ಧಿಮತ್ತೆಯುಳ್ಳ, ಸಮರ್ಥ ಜೊತೆಗಾರ್ತಿಯಂತೆ ಉಪಚರಿಸಲು ಪ್ರಯತ್ನಿಸಿದ್ದೇನೆ.”—ಜ್ಞಾನೋಕ್ತಿ 31:10.

5

ದೂರು:

“ನನ್ನ ಗಂಡ ಯಾವುದಕ್ಕೂ ಮುಂದೆ ಹೋಗುವುದಿಲ್ಲ.”

ಬೈಬಲ್‌ ಸೂತ್ರ:

“ಜ್ಞಾನವಂತೆಯು ತನ್ನ ಮನೆಯನ್ನು ಕಟ್ಟಿಕೊಳ್ಳುವಳು; ಜ್ಞಾನಹೀನಳು ಅದನ್ನು ಸ್ವಂತ ಕೈಯಿಂದ ಮುರಿದುಬಿಡುವಳು.”ಜ್ಞಾನೋಕ್ತಿ 14:1.

ನಿಮ್ಮ ಗಂಡ ನಿರ್ಣಯಗಳನ್ನು ಮಾಡಲು, ಕುಟುಂಬ ನಿರ್ವಹಣೆಯಲ್ಲಿ ಮುಂದಾಳತ್ವ ವಹಿಸಲು ಹಿಂದೇಟು ಹಾಕುತ್ತಿರುವಲ್ಲಿ ಏನು ಮಾಡುವಿರಿ? (1) ಅವರ ಕುಂದುಕೊರತೆಗಳ ಬಗ್ಗೆ ಅವರಿಗೆ ಯಾವಾಗಲೂ ಹೇಳುತ್ತಾ ಇರುವಿರಾ? (2) ಕುಟುಂಬದ ತಲೆಯಾದ ಅವರ ಪಾತ್ರವನ್ನು ನೀವೇ ವಹಿಸಿಕೊಳ್ಳುವಿರಾ? (3) ಅವರು ಮಾಡುತ್ತಿರುವ ಪ್ರಯತ್ನಗಳು, ಅವೆಷ್ಟೇ ಚಿಕ್ಕದ್ದಾಗಿರಲಿ ಮನಃಪೂರ್ವಕವಾಗಿ ಶ್ಲಾಘಿಸುವಿರಾ? ಮೊದಲ ಎರಡು ಸಂಗತಿಗಳಲ್ಲಿ ಯಾವುದಾದರೊಂದನ್ನು ಮಾಡಿದರೂ ನಿಮ್ಮ ಮನೆಯನ್ನು ಕೈಯಾರೆ ಮುರಿದುಬಿಡುವಿರಿ. ಆದರೆ ಮೂರನೆಯದ್ದನ್ನು ಮಾಡಿದಲ್ಲಿ ನಿಮ್ಮ ವಿವಾಹ ಬಂಧವನ್ನು ಕಟ್ಟಲು ಅಂದರೆ ಬಲಪಡಿಸಲು ಸಹಾಯವಾಗುವುದು.

ಅನೇಕ ಗಂಡಸರು ಪ್ರೀತಿಗಿಂತ ಗೌರವವನ್ನು ಹೆಚ್ಚಾಗಿ ಬಯಸುತ್ತಾರೆ. ಹೀಗಿರಲಾಗಿ ನಿಮ್ಮ ಗಂಡನನ್ನು ನೀವು ಗೌರವಿಸುತ್ತೀರೆಂದು ತೋರಿಸಿ. ಕುಟುಂಬದಲ್ಲಿ ಮುಂದಾಳತ್ವ ವಹಿಸಲು ಅವರು ಮಾಡುವ ಪ್ರಯತ್ನಗಳು ಪರಿಣಾಮಕಾರಿ ಆಗಿವೆ ಮತ್ತು ನೀವದನ್ನು ಮಾನ್ಯಮಾಡುತ್ತೀರಿ ಎಂದು ತೋರಿಸಿ. ಆಗ ಅವರು ತಮ್ಮ ಪಾತ್ರವನ್ನು ನಿರ್ವಹಿಸುವುದರಲ್ಲಿ ಸುಧಾರಣೆ ಮಾಡಾರು. ಒಮ್ಮೊಮ್ಮೆ ಒಂದು ವಿಷಯದ ಬಗ್ಗೆ ಗಂಡನೊಂದಿಗೆ ಸಮ್ಮತಿಸದೇ ಇರುವಿರಿ ನಿಶ್ಚಯ. ಅಂಥ ವಿಷಯಗಳನ್ನು ಇಬ್ಬರೂ ಸೇರಿ ಚರ್ಚಿಸಿರಿ. (ಜ್ಞಾನೋಕ್ತಿ 18:13) ಆದರೆ ಆಗ ನೀವು ಬಳಸುವ ಪದಗಳು ಹಾಗೂ ನಿಮ್ಮ ಧ್ವನಿಯು ನಿಮ್ಮ ವಿವಾಹ ಬಂಧವನ್ನು ಒಂದೊ ಮುರಿದುಹಾಕುವುದು ಇಲ್ಲವೆ ಕಟ್ಟುವುದು. (ಜ್ಞಾನೋಕ್ತಿ 21:9; 27:15) ಹೇಳಬೇಕಾಗಿರುವುದನ್ನು ಗೌರವಪೂರ್ವಕವಾಗಿ ಹೇಳಿ. ಆಗ ನಿಮ್ಮ ಗಂಡ ಮುಂದಾಳತ್ವ ವಹಿಸುವವನಾಗುವ ಸಾಧ್ಯತೆ ಹೆಚ್ಚು. ನೀವು ಬಯಸುವುದು ಇದನ್ನೇ ತಾನೇ?

ಇದನ್ನು ಕೆಲವರು ಅನ್ವಯಿಸಿದ ವಿಧ: ಯುನೈಟೆಡ್‌ ಸ್ಟೇಟ್ಸ್‌ನಲ್ಲಿರುವ ಮಿಶೆಲ್‌ ಎಂಬಾಕೆಯ ವಿವಾಹವಾಗಿ 30 ವರ್ಷಗಳಾಗಿವೆ. ಆಕೆಯನ್ನುವುದು: “ಗಂಡನ ಆಸರೆಯಿಲ್ಲದೆ ನನ್ನ ಅಮ್ಮ ನನ್ನನ್ನೂ ತಂಗಿಯರನ್ನೂ ಬೆಳೆಸಿದ್ದರಿಂದ ಅವರು ಛಲಗಾರ್ತಿ, ಸ್ವಾವಲಂಬಿ ಮಹಿಳೆ ಆಗಿದ್ದರು. ನಾನೂ ಆ ರೀತಿ ವರ್ತಿಸತೊಡಗಿದೆ. ಆದ್ದರಿಂದ ಯೋಗ್ಯ ಅಧೀನತೆ ತೋರಿಸಲು ನಾನು ಸದಾ ಪ್ರಯತ್ನಿಸುತ್ತಾ ಇರಬೇಕು. ಉದಾಹರಣೆಗೆ, ನನ್ನಷ್ಟಕ್ಕೆ ನಾನೇ ನಿರ್ಣಯಗಳನ್ನು ಮಾಡುವ ಬದಲು ನನ್ನ ಗಂಡನೊಟ್ಟಿಗೆ ಅದರ ಬಗ್ಗೆ ಮೊದಲು ಮಾತಾಡಿನೋಡಲು ಕಲಿತಿದ್ದೇನೆ.”

ಆಸ್ಟ್ರೇಲಿಯದ ರೇಚಲ್‌ ಎಂಬಾಕೆ ಮಾರ್ಕ್‌ರನ್ನು ಮದುವೆಯಾಗಿ 21 ವರ್ಷಗಳಾಗಿವೆ. ಈಕೆಯೂ ತನ್ನ ಹಿನ್ನೆಲೆಯಿಂದ ಪ್ರಭಾವಿಸಲ್ಪಟ್ಟಿದ್ದಳು. ಈಕೆ ಜ್ಞಾಪಿಸಿಕೊಳ್ಳುವುದು: “ನನ್ನ ಅಮ್ಮ ಯಾವತ್ತೂ ಅಪ್ಪನಿಗೆ ಅಧೀನರಾಗಿರಲಿಲ್ಲ. ಅಗೌರವದ ನಡೆನುಡಿ, ಜಗಳ ನಿತ್ಯದ ಗೋಳಾಗಿತ್ತು. ನನ್ನ ಮದುವೆಯ ಆರಂಭದ ವರ್ಷಗಳಲ್ಲಿ ನಾನೂ ಅಮ್ಮ ಮಾಡಿದ್ದನ್ನೇ ಮಾಡುತ್ತಿದ್ದೆ. ಆದರೆ ವರ್ಷಗಳು ಸಂದಂತೆ, ಗೌರವ ತೋರಿಸುವ ಬಗ್ಗೆ ಬೈಬಲಿನ ಸಲಹೆಯನ್ನು ಪಾಲಿಸುವುದರ ಮಹತ್ವವನ್ನು ಕಲಿತಿದ್ದೇನೆ. ಈಗ ನಮ್ಮ ದಾಂಪತ್ಯ ಹೆಚ್ಚು ಸಂತೋಷದಿಂದ ಕೂಡಿದೆ.”

6

ದೂರು:

“ನನ್ನ ಗಂಡನ/ಹೆಂಡತಿಯ ಕಿರಿಕಿರಿಗೊಳಿಸುವ ಅಭ್ಯಾಸಗಳನ್ನು ಸಹಿಸಲಾರೆ.”

ಬೈಬಲ್‌ ಸೂತ್ರ:

“ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ.”ಕೊಲೊಸ್ಸೆ 3:13.

ಮದುವೆ ಮುಂಚೆ ಪರಸ್ಪರ ಭೇಟಿಯಾಗುತ್ತಿದ್ದಾಗ ನಿಮ್ಮ ಭಾವೀ ಸಂಗಾತಿಯ ಒಳ್ಳೇ ಗುಣಗಳ ಮೇಲೆಯೇ ಬಹುಶಃ ನಿಮ್ಮ ಗಮನ ಇದ್ದದರಿಂದ ಅವರ ಲೋಪದೋಷಗಳು ನಿಮ್ಮ ಕಣ್ಣಿಗೆ ಬಿದ್ದಿರಲಿಲ್ಲ. ಅದನ್ನೇ ಈಗಲೂ ಮಾಡಬಹುದಲ್ಲವೇ? ನಿಮ್ಮ ಸಂಗಾತಿ ಒಮ್ಮೊಮ್ಮೆ ಮಾಡುವ ವಿಷಯಗಳು ದೂರುಹೊರಿಸಲು ಸಕಾರಣ ಕೊಟ್ಟರೂ ಹೀಗೆ ಕೇಳಿಕೊಳ್ಳಿ: ‘ನಾನು ಯಾವುದಕ್ಕೆ ಹೆಚ್ಚು ಗಮನ ಕೊಡುವೆ—ಸಂಗಾತಿಯ ಒಳ್ಳೇ ಗುಣಗಳಿಗೊ ಕೆಟ್ಟ ಗುಣಗಳಿಗೊ?’

ಇತರರ ಚಿಕ್ಕಪುಟ್ಟ ತಪ್ಪುಗಳನ್ನು ನಿರ್ಲಕ್ಷಿಸಬೇಕೆಂದು ತೋರಿಸಲು ಯೇಸು ಒಂದು ಪ್ರಬಲ ದೃಷ್ಟಾಂತ ಬಳಸಿದನು. “ನೀನು ನಿನ್ನ ಕಣ್ಣಿನಲ್ಲಿರುವ ತೊಲೆಯನ್ನು ಯೋಚಿಸದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯೋಚಿಸುವದೇಕೆ?” ಎಂದಾತ ಕೇಳಿದ. (ಮತ್ತಾಯ 7:3, ಸತ್ಯವೇದವು) ರವೆ ತೀರ ಚಿಕ್ಕದ್ದು. ಆದರೆ ತೊಲೆ, ಮನೆಯ ಛಾವಣಿಗೆ ಆಧಾರವಾಗಿ ಬಳಸಲಾಗುವ ಮರದ ದೊಡ್ಡ ದಿಮ್ಮಿ. ಯೇಸುವಿನ ಮಾತಿನ ಅರ್ಥ? “ಮೊದಲು ನಿನ್ನ ಕಣ್ಣಿನೊಳಗಿಂದ ತೊಲೆಯನ್ನು ತೆಗೆದುಹಾಕಿಕೋ; ಆ ಮೇಲೆ ನಿನ್ನ ಸಹೋದರನ ಕಣ್ಣಿನೊಳಗಿಂದ ರವೆಯನ್ನು ತೆಗೆಯುವದಕ್ಕೆ ಚೆನ್ನಾಗಿ ಕಾಣಿಸುವದು.”—ಮತ್ತಾಯ 7:5, ಸತ್ಯವೇದವು.

ಈ ದೃಷ್ಟಾಂತ ಕೊಡುವ ಮುಂಚೆ ಯೇಸು ಒಂದು ಗಂಭೀರ ಎಚ್ಚರಿಕೆ ಕೊಟ್ಟನು. ಆತನಂದದ್ದು: “ತೀರ್ಪುಮಾಡುವುದನ್ನು ನಿಲ್ಲಿಸಿರಿ, ಆಗ ನಿಮಗೂ ತೀರ್ಪಾಗುವುದಿಲ್ಲ. ನೀವು ಮಾಡುತ್ತಿರುವ ತೀರ್ಪಿನಿಂದಲೇ ನಿಮಗೂ ತೀರ್ಪಾಗುವುದು.” (ಮತ್ತಾಯ 7:1, 2) ನಿಮ್ಮ ಕಣ್ಣಿನಲ್ಲಿರುವ ತೊಲೆಯನ್ನು ಅಂದರೆ ನಿಮ್ಮ ತಪ್ಪುಗಳನ್ನು ದೇವರು ಮನ್ನಿಸಬೇಕೆಂದು ನೀವು ಬಯಸುವಲ್ಲಿ, ಸಂಗಾತಿಯ ಚಿಕ್ಕಪುಟ್ಟ ತಪ್ಪುಗಳನ್ನು ನೀವು ನಿರ್ಲಕ್ಷಿಸಬೇಕು.—ಮತ್ತಾಯ 6:14, 15.

ಇದನ್ನು ಕೆಲವರು ಅನ್ವಯಿಸಿದ ವಿಧ: ಇಂಗ್ಲೆಂಡ್‌ನಲ್ಲಿರುವ ಜೆನಿ ಎಂಬಾಕೆ ಸೈಮನ್‌ರನ್ನು ಮದುವೆಯಾಗಿ ಈಗ ಒಂಬತ್ತು ವರ್ಷಗಳು. ಆಕೆಯನ್ನುವುದು: “ನನ್ನ ಗಂಡನ ಬಗ್ಗೆ ನನಗೆ ಹೆಚ್ಚು ಕಿರಿಕಿರಿಯಾಗುವ ಸಂಗತಿಯೇನೆಂದರೆ ಅವರು ಯಾವುದನ್ನೂ ಪೂರ್ವಯೋಜಿಸುವುದಿಲ್ಲ, ಎಲ್ಲವನ್ನೂ ಕೊನೆ ಕ್ಷಣಕ್ಕಾಗಿ ಇಡುತ್ತಾರೆ. ವಿಪರ್ಯಾಸವೇನೆಂದರೆ, ಮದುವೆ ಮುಂಚೆ ನಾವು ಪರಸ್ಪರ ಭೇಟಿಯಾಗುತ್ತಿದ್ದಾಗೆಲ್ಲ, ಪೂರ್ವಯೋಜನೆ ಇಲ್ಲದೆ ತಕ್ಷಣ ಏನನ್ನಾದರೂ ಮಾಡುವ ಅವರ ಈ ಸ್ವಭಾವವೇ ನನಗಿಷ್ಟವಾಗುತ್ತಿತ್ತು. ಆದರೆ ನನಗೀಗ ಅರ್ಥ ಆಗುತ್ತಿದೆ ನನ್ನಲ್ಲೂ ತಪ್ಪುಗಳಿವೆಯೆಂದು. ಉದಾಹರಣೆಗೆ ಮನೆಯಲ್ಲಿ ನನ್ನದೇ ದರ್ಬಾರು ಇತ್ತು. ಈಗೀಗ ನಾನೂ ನನ್ನ ಯಜಮಾನರೂ ಪರಸ್ಪರರ ಕುಂದುಕೊರತೆಗಳನ್ನು ನಿರ್ಲಕ್ಷಿಸಲು ಕಲಿಯುತ್ತಿದ್ದೇವೆ.”

ಈ ಹಿಂದೆ ತಿಳಿಸಲಾದ ಮಿಶೆಲ್‌ ಎಂಬಾಕೆಯ ಗಂಡ ಕರ್ಟ್‌ ಹೇಳುವುದು: “ಸಂಗಾತಿಯ ಕಿರಿಕಿರಿಗೊಳಿಸುವ ಸ್ವಭಾವದ ಮೇಲೆಯೇ ಗಮನವಿಟ್ಟರೆ ಅವರ ತಪ್ಪುಗಳು ದೊಡ್ಡದಾಗಿ ಕಾಣುತ್ತವೆ. ಆದ್ದರಿಂದಲೇ ನಾನೇನು ಮಾಡುತ್ತೇನೆಂದರೆ ಮಿಶೆಲಲ್ಲಿ ನಾನು ಅನುರಕ್ತನಾಗುವಂತೆ ಮಾಡಿದ ಗುಣಗಳಿಗೇ ಹೆಚ್ಚು ಗಮನ ಕೊಡುತ್ತೇನೆ.”

ಸಫಲ ದಾಂಪತ್ಯದ ಗುಟ್ಟು

ದಾಂಪತ್ಯದಲ್ಲಿ ಸವಾಲುಗಳು ಅನಿವಾರ್ಯ ಆದರೆ ನಿವಾರಿಸಲಾಗದವುಗಳಲ್ಲ ಎಂಬದನ್ನು ಮೇಲಿನ ಉದಾಹರಣೆಗಳು ತೋರಿಸುತ್ತವೆ. ಆದರೆ ಸಫಲ ದಾಂಪತ್ಯದ ಗುಟ್ಟೇನು? ದೇವರ ಮೇಲಣ ಪ್ರೀತಿ ಹಾಗೂ ಆತನ ವಾಕ್ಯವಾದ ಬೈಬಲಿನಲ್ಲಿರುವ ಸಲಹೆಯನ್ನು ಪಾಲಿಸಲು ಸಿದ್ಧಮನಸ್ಸು.

ನೈಜೀರಿಯದ ನಿವಾಸಿಗಳಾದ ಆಲಿಕ್ಸ್‌ ಮತ್ತು ಇಟೊಹ್ಯಾನ್‌ ಎಂಬವರು ಮದುವೆಯಾಗಿ 20ಕ್ಕಿಂತ ಹೆಚ್ಚು ವರ್ಷಗಳಾಗಿವೆ. ಅವರು ಸಫಲ ದಾಂಪತ್ಯದ ಆ ಗುಟ್ಟನ್ನು ಕಲಿತಿದ್ದಾರೆ. ಆಲಿಕ್ಸ್‌ ಹೇಳುವುದು: “ಗಂಡಹೆಂಡತಿ ಬೈಬಲ್‌ ಸೂತ್ರಗಳನ್ನು ಪಾಲಿಸಿದರೆ ಬಹುಮಟ್ಟಿಗೆ ಯಾವುದೇ ಸಮಸ್ಯೆಯನ್ನು ಬಗೆಹರಿಸಬಹುದೆಂದು ನಾನು ತಿಳಿದುಕೊಂಡೆ.” ಅವನ ಹೆಂಡತಿ ಹೇಳುವುದು: “ನಿಯಮಿತವಾಗಿ ಒಟ್ಟಿಗೆ ಪ್ರಾರ್ಥಿಸುವುದು, ಮನಃಪೂರ್ವಕ ಪ್ರೀತಿ ಮತ್ತು ತಾಳ್ಮೆ ತೋರಿಸುವುದರ ಕುರಿತ ಬೈಬಲ್‌ ಸಲಹೆಯನ್ನು ಪಾಲಿಸುವ ಮಹತ್ತ್ವವನ್ನು ನಾವು ಕಲಿತಿದ್ದೇವೆ. ಆದ್ದರಿಂದ ಮದುವೆಯಾದ ಹೊಸದರಲ್ಲಿ ಇದ್ದಷ್ಟು ಸಮಸ್ಯೆಗಳು ಈಗ ನಮಗಿಲ್ಲ.”

ದೇವರ ವಾಕ್ಯದಲ್ಲಿರುವ ಪ್ರಾಯೋಗಿಕ ಸಲಹೆ ನಿಮ್ಮ ಕುಟುಂಬಕ್ಕೆ ಹೇಗೆ ಪ್ರಯೋಜನ ತರುವುದೆಂದು ಹೆಚ್ಚು ತಿಳಿಯಲು ಇಷ್ಟಪಡುತ್ತೀರೊ? ಹೌದಾದರೆ, ಈ ವಿಷಯವನ್ನು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? * ಎಂಬ ಪುಸ್ತಕದಿಂದ ಯೆಹೋವನ ಸಾಕ್ಷಿಗಳು ನಿಮ್ಮೊಂದಿಗೆ ಚರ್ಚಿಸುವಂತೆ ಕೇಳಿ. (w11-E 02/01)

[ಪಾದಟಿಪ್ಪಣಿಗಳು]

^ ಪ್ಯಾರ. 10 ಕೆಲವು ಹೆಸರುಗಳನ್ನು ಬದಲಿಸಲಾಗಿದೆ.

^ ಪ್ಯಾರ. 63 ಕುಟುಂಬ ಜೀವನವನ್ನು ಸಂತೋಷಗೊಳಿಸುವುದರ ಕುರಿತ ಹೆಚ್ಚಿನ ಮಾಹಿತಿಗಾಗಿ ಆ ಪುಸ್ತಕದ 14ನೇ ಅಧ್ಯಾಯ ಓದಿ. ಅದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 4ರಲ್ಲಿರುವ ಚಿತ್ರ]

ಪರಸ್ಪರರಿಗಾಗಿ ಸಮಯ ಕೊಡುತ್ತೇವೊ?

[ಪುಟ 5ರಲ್ಲಿರುವ ಚಿತ್ರ]

ತೆಗೆದುಕೊಳ್ಳುವುದಕ್ಕಿಂತಲೂ ಹೆಚ್ಚನ್ನು ಕೊಡುತ್ತೇನೊ?

[ಪುಟ 6ರಲ್ಲಿರುವ ಚಿತ್ರ]

ಸಮಸ್ಯೆಗಳನ್ನು ಬಗೆಹರಿಸಲು ನಾನೇ ಪ್ರಥಮ ಹೆಜ್ಜೆ ತಕ್ಕೊಳ್ಳುತ್ತೇನೊ?

[ಪುಟ 7ರಲ್ಲಿರುವ ಚಿತ್ರ]

ನಿರ್ಣಯ ಮಾಡುವ ಮುಂಚೆ ಹೆಂಡತಿಯ ಅಭಿಪ್ರಾಯ ಕೇಳುತ್ತೇನೊ?

[ಪುಟ 9ರಲ್ಲಿರುವ ಚಿತ್ರ]

ನನ್ನ ಸಂಗಾತಿಯ ಸದ್ಗುಣಗಳಿಗೆ ಹೆಚ್ಚಿನ ಗಮನ ಕೊಡುತ್ತೇನೊ?