ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾಂಪತ್ಯ ವೈಫಲ್ಯಕ್ಕೆ ಕಾರಣ?

ದಾಂಪತ್ಯ ವೈಫಲ್ಯಕ್ಕೆ ಕಾರಣ?

ದಾಂಪತ್ಯ ವೈಫಲ್ಯಕ್ಕೆ ಕಾರಣ?

‘“ಒಬ್ಬನು ಯಾವುದೇ ಕಾರಣಕ್ಕಾಗಿ ತನ್ನ ಹೆಂಡತಿಗೆ ವಿಚ್ಛೇದನ ನೀಡುವುದು ಧರ್ಮಸಮ್ಮತವೊ?” ಎಂದು ಫರಿಸಾಯರು [ಯೇಸುವನ್ನು] ಪರೀಕ್ಷಿಸಲಿಕ್ಕಾಗಿ ಅವನ ಬಳಿಗೆ ಬಂದು ಕೇಳಿದರು.’—ಮತ್ತಾಯ 19:3.

ಹೀಗೆಂದು ಯೇಸುವಿನ ದಿನದಲ್ಲಿದ್ದ ಕೆಲವರು ವಿವಾಹಗಳು ಬಾಳಬಲ್ಲವೊ, ಬಾಳಬೇಕೊ ಎಂಬದರ ಕುರಿತು ಪ್ರಶ್ನಿಸಿದರು. ಅವರಿಗೆ ಯೇಸು ಕೊಟ್ಟ ಉತ್ತರ: “ಮನುಷ್ಯರನ್ನು ಸೃಷ್ಟಿಸಿದಾತನು ಆರಂಭದಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ, ‘ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು’ ಎಂದು ಹೇಳಿದನು ಎಂಬುದನ್ನು ನೀವು ಓದಲಿಲ್ಲವೊ? ಹೀಗೆ ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.” * (ಮತ್ತಾಯ 19:4-6) ಹೌದು, ವಿವಾಹ ಬಂಧವು ಬಾಳಬೇಕೆಂದೇ ದೇವರು ಉದ್ದೇಶಿಸಿದ್ದನು.

ಇಂದು ಅನೇಕ ದೇಶಗಳಲ್ಲಿ ನಡೆಯುತ್ತಿರುವ ಎಲ್ಲ ವಿವಾಹಗಳಲ್ಲಿ ಶೇ. 40ಕ್ಕಿಂತಲೂ ಹೆಚ್ಚು ವಿವಾಹಗಳು ವಿಚ್ಛೇದನದಲ್ಲಿ ಅಂತ್ಯಗೊಳ್ಳುತ್ತಿವೆ. ವಿವಾಹದ ಕುರಿತ ಬೈಬಲಿನ ಸಲಹೆಯು ಸವಕಲು ನಾಣ್ಯದಂತೆ ಆಗಿಬಿಟ್ಟಿದೆಯೆಂದು ಇದರರ್ಥವೊ? ಇಲ್ಲವೆ ವಿವಾಹ ಎಂಬ ಏರ್ಪಾಡಿನಲ್ಲೇ ಏನಾದರೂ ಹುಳುಕಿದೆಯೇ?

ಈ ದೃಷ್ಟಾಂತದ ಬಗ್ಗೆ ಯೋಚಿಸಿ: ಇಬ್ಬರು ದಂಪತಿಗಳು ಒಂದೇ ಮಾಡೆಲ್‌ನ ಕಾರನ್ನು ಖರೀದಿಸುತ್ತಾರೆ. ಒಂದು ದಂಪತಿ ಕಾರನ್ನು ಒಳ್ಳೇ ದುರಸ್ತಿಯಲ್ಲಿಟ್ಟು, ಜಾಗ್ರತೆಯಿಂದ ಓಡಿಸುತ್ತಾರೆ. ಅವರ ಕಾರು ಹಾಳಾಗದೆ ಚೆನ್ನಾಗಿ ಇರುತ್ತದೆ. ಇನ್ನೊಂದು ದಂಪತಿ, ತಮ್ಮ ಕಾರನ್ನು ಸುಸ್ಥಿತಿಯಲ್ಲಿಡಲು ಸಮಯ ಕೊಡುವುದಿಲ್ಲ, ಪ್ರಯತ್ನವನ್ನೂ ಮಾಡುವುದಿಲ್ಲ. ಕಾರನ್ನು ಅಜಾಗ್ರತೆಯಿಂದ ಓಡಿಸುತ್ತಾರೆ. ಅವರ ಕಾರು ಹಾಳಾಗುತ್ತದೆ, ಮೂಲೆಗೆ ಸೇರುತ್ತದೆ. ಕಾರು ಹಾಳಾಗಲು ಯಾರು ಕಾರಣ? ಕಾರೊ ಅಥವಾ ಅದರ ಮಾಲೀಕರೊ? ಖಂಡಿತವಾಗಿ ಮಾಲೀಕರೇ.

ಹಾಗೆಯೇ, ಅನೇಕರ ದಾಂಪತ್ಯ ವಿಫಲವಾಗುತ್ತಿದೆ ಎಂದಮಾತ್ರಕ್ಕೆ ವಿವಾಹ ಎಂಬ ಏರ್ಪಾಡಿನಲ್ಲೇ ಏನೋ ಹುಳುಕಿದೆ ಎಂದರ್ಥವಲ್ಲ. ಅನ್ಯಥಾ ಲಕ್ಷಾಂತರ ವಿವಾಹ ಬಂಧಗಳು ಸಾಫಲ್ಯ ಕಾಣುತ್ತಿರಲಿಲ್ಲ. ಇಂಥ ವಿವಾಹ ಬಂಧಗಳು ವ್ಯಕ್ತಿಗಳಿಗೆ, ಕುಟುಂಬಗಳಿಗೆ, ಸಮುದಾಯಗಳಿಗೆ ಸಂತೋಷ, ಸ್ಥಿರತೆಯನ್ನು ನೀಡುತ್ತವೆ. ಹಾಗಿದ್ದರೂ ಕಾರ್‌ನಂತೆಯೇ ದಾಂಪತ್ಯದ ವಿಷಯದಲ್ಲೂ ನಿಗಾ ಹಾಗೂ ನಿಯಮಿತ ದುರಸ್ತಿ ಅಗತ್ಯ. ಆಗಮಾತ್ರ ಅದು ಬೆಳಗಿ ಬಾಳುವುದು.

ನಿಮ್ಮ ಮದುವೆಯಾಗಿ ಕೆಲವೇ ದಿನಗಳಾಗಿರಲಿ ದಶಕಗಳೇ ಉರುಳಿರಲಿ ಅದನ್ನು ಸುಸ್ಥಿತಿಯಲ್ಲಿಡುವುದರ ಬಗ್ಗೆ, ಬಲಪಡಿಸುವುದರ ಬಗ್ಗೆ ಬೈಬಲಿನ ಸಲಹೆ ನಿಜವಾಗಿಯೂ ಪ್ರಾಯೋಗಿಕ. ಇದರ ಕೆಲವೊಂದು ಉದಾಹರಣೆಗಳನ್ನು ಮುಂದಿನ ಪುಟಗಳಲ್ಲಿ ಗಮನಿಸಿ. (w11-E 02/01)

[ಪಾದಟಿಪ್ಪಣಿ]

^ ಪ್ಯಾರ. 3 ಲೈಂಗಿಕ ಅನೈತಿಕತೆ ನಡೆದಲ್ಲಿ ವಿವಾಹ ವಿಚ್ಛೇದನವನ್ನು ಬೈಬಲ್‌ ಅನುಮತಿಸುತ್ತದೆ.—ಮತ್ತಾಯ 19:9.