ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತ ಬೋಧನೆಗಳಿಂದ ಸಮಾಜಕ್ಕಾಗುವ ಒಳಿತೇನು?

ಕ್ರೈಸ್ತ ಬೋಧನೆಗಳಿಂದ ಸಮಾಜಕ್ಕಾಗುವ ಒಳಿತೇನು?

ಕ್ರೈಸ್ತ ಬೋಧನೆಗಳಿಂದ ಸಮಾಜಕ್ಕಾಗುವ ಒಳಿತೇನು?

ನಿಜ ಕ್ರೈಸ್ತರು ಸಮಾಜಕ್ಕೆ ಒಳಿತನ್ನು ಮಾಡುತ್ತಾರೆ. ಹೇಗೆ? ಒಂದು ವಿಧ ಯೇಸು ಕೊಟ್ಟ ಆಜ್ಞೆಯನ್ನು ಪಾಲಿಸುವ ಮೂಲಕವೇ. ಆತನಂದದ್ದು: “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ.”—ಮತ್ತಾಯ 28:19, 20.

ಯೇಸು ತನ್ನ ಶಿಷ್ಯರಿಗೆ ‘ನೀವು ಭೂಮಿಗೆ ಉಪ್ಪಾಗಿರಿ, ಲೋಕಕ್ಕೆ ಬೆಳಕಾಗಿರಿ’ ಎಂದೂ ಹೇಳಿದನು. (ಮತ್ತಾಯ 5:13, 14) ಆತನ ಈ ಮಾತಿಗೂ ಮೇಲೆ ತಿಳಿಸಿದ “ಶಿಷ್ಯರನ್ನಾಗಿ ಮಾಡಿ” ಎಂಬ ಆಜ್ಞೆಗೂ ಸಂಬಂಧವಿದೆ. ಯಾವ ಸಂಬಂಧ? ಶಿಷ್ಯರನ್ನಾಗಿ ಮಾಡುವ ಕೆಲಸದಿಂದ ಸಮಾಜಕ್ಕಾಗುವ ಒಳಿತೇನು?

ಸಂರಕ್ಷಕ ಹಾಗೂ ಬಾಳು ಬೆಳಗಿಸುವ ಕ್ರೈಸ್ತ ಸಂದೇಶ

ಉಪ್ಪಿಗೆ ಸಂರಕ್ಷಕ ಶಕ್ತಿಯಿದೆ. ಆಹಾರ ಪದಾರ್ಥ ಕೆಡದಂತೆ ನೋಡಿಕೊಳ್ಳುತ್ತದೆ. ತದ್ರೀತಿ, ಯೇಸುವಿನ ಸಂದೇಶಕ್ಕೂ ಸಂರಕ್ಷಕ ಶಕ್ತಿಯಿದೆ. ನೈತಿಕ ಅಧಃಪತನಕ್ಕಿಳಿದಿರುವ ಈ ಲೋಕದಲ್ಲಿ ಯೇಸುವಿನ ಸಂದೇಶ, ಬೋಧನೆಗಳನ್ನು ಸ್ವೀಕರಿಸಿ ಅನ್ವಯಿಸುವವರು ನೈತಿಕವಾಗಿ ಕೆಡದಂತೆ ಅದು ಸಂರಕ್ಷಿಸುತ್ತದೆ. ಯಾವ ವಿಧದಲ್ಲಿ? ಧೂಮಪಾನದಂಥ ಹಾನಿಕಾರಕ ಚಟಗಳನ್ನು ಬಿಡಲು ಅವರು ಕಲಿಯುತ್ತಾರೆ. ಅಲ್ಲದೆ ಪ್ರೀತಿ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ ಮುಂತಾದ ಗುಣಗಳನ್ನೂ ಬೆಳೆಸಿಕೊಳ್ಳುತ್ತಾರೆ. (ಗಲಾತ್ಯ 5:22, 23) ಇಂಥ ಗುಣಗಳು ಸಮಾಜಕ್ಕೆ ಅತಿ ಅಮೂಲ್ಯ. ಹಾಗಾಗಿ ಇಂಥ ಸಂರಕ್ಷಕ ಸಂದೇಶವನ್ನು ಇತರರಿಗೆ ತಿಳಿಸುವ ಮೂಲಕ ಕ್ರೈಸ್ತರು ಸಮಾಜಕ್ಕೆ ಒಳಿತನ್ನು ಮಾಡುತ್ತಾರೆ.

ಯೇಸು ತನ್ನ ಹಿಂಬಾಲಕರನ್ನು ಬೆಳಕಿಗೆ ಹೋಲಿಸಿದ್ದೇಕೆ? ಚಂದ್ರನು ಸೂರ್ಯನ ಬೆಳಕನ್ನು ಪ್ರತಿಫಲಿಸುವಂತೆ ಕ್ರಿಸ್ತನ ಹಿಂಬಾಲಕರು ಯೆಹೋವ ದೇವರಿಂದ ಬರುವ ಬೆಳಕನ್ನು ಪ್ರತಿಫಲಿಸುತ್ತಾರೆ. ಇದನ್ನವರು ತಾವು ಸಾರುವ ಸಂದೇಶದ ಹಾಗೂ ತಮ್ಮ ಒಳ್ಳೇ ಕೆಲಸಗಳ ಮೂಲಕ ಮಾಡುತ್ತಾರೆ.—1 ಪೇತ್ರ 2:12.

ಲೋಕಕ್ಕೆ ಬೆಳಕಾಗಿರುವುದಕ್ಕೂ ಯೇಸುವಿನ ಶಿಷ್ಯರಾಗಿರುವುದಕ್ಕೂ ಇರುವ ಹೋಲಿಕೆಯ ಬಗ್ಗೆ ಯೇಸು ಹೀಗಂದನು: “ಜನರು ದೀಪವನ್ನು ಹಚ್ಚಿ ಕೊಳಗದೊಳಗೆ ಇಡುವುದಿಲ್ಲ; ದೀಪಸ್ತಂಭದ ಮೇಲೆ ಇಡುತ್ತಾರೆ ಮತ್ತು ಅದು ಮನೆಯಲ್ಲಿರುವವರೆಲ್ಲರ ಮೇಲೆ ಪ್ರಕಾಶಿಸುತ್ತದೆ. ಅದರಂತೆಯೇ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ.” ದೀಪಸ್ತಂಭದ ಮೇಲೆ ಉರಿಯುತ್ತಿರುವ ದೀಪ ಸುತ್ತಲಿರುವ ಎಲ್ಲರ ಗಮನಕ್ಕೆ ಬೀಳುತ್ತದೆ. ಹಾಗೆಯೇ, ನಿಜ ಕ್ರೈಸ್ತರ ಸಾರುವ ಕೆಲಸ ಮತ್ತು ಒಳ್ಳೆಯ ಕ್ರಿಯೆಗಳು ಸುತ್ತಲಿರುವ ಜನರ ಗಮನಕ್ಕೆ ಬೀಳಬೇಕು ಎಂದು ಯೇಸು ಹೇಳುತ್ತಿದ್ದನು. ಏಕೆ? ಆಗ ಜನರು ಆ ಒಳ್ಳೇ ಕ್ರಿಯೆಗಳನ್ನು ನೋಡಿ ದೇವರಿಗೆ ಮಹಿಮೆ ಸಲ್ಲಿಸುವರು.—ಮತ್ತಾಯ 5:14-16.

ಎಲ್ಲರ ಜವಾಬ್ದಾರಿ

“ನೀವು ಲೋಕದ ಬೆಳಕಾಗಿದ್ದೀರಿ” ಮತ್ತು ‘ನಿಮ್ಮ ಬೆಳಕು ಪ್ರಕಾಶಿಸಲಿ’ ಎಂದು ಯೇಸು ತನ್ನ ಎಲ್ಲ ಶಿಷ್ಯರನ್ನು ಸಂಬೋಧಿಸಿ ಹೇಳಿದನು. ಬೇರೆ ಬೇರೆ ಧರ್ಮಗಳಲ್ಲಿರುವ ಒಬ್ಬೊಬ್ಬ ವ್ಯಕ್ತಿಯಿಂದ ಯೇಸುವಿನ ಈ ಮಾತನ್ನು ನೆರವೇರಿಸಲು ಸಾಧ್ಯವಿಲ್ಲ. ಬದಲಾಗಿ, ನಿಜ ಹಿಂಬಾಲಕರೆಲ್ಲರು ಒಂದು ಗುಂಪಾಗಿ ‘ಬೆಳಕಾಗಿದ್ದಾರೆ.’ ಯೇಸು ತನ್ನ ಹಿಂಬಾಲಕರಿಗೆ ಸಾರಲು ಹೇಳಿದ ಸಂದೇಶವನ್ನು 235 ದೇಶಗಳಲ್ಲಿರುವ ಎಪ್ಪತ್ತು ಲಕ್ಷ ಯೆಹೋವನ ಸಾಕ್ಷಿಗಳು ಜನರಿಗೆ ತಿಳಿಸುತ್ತಿದ್ದಾರೆ. ಈ ಕೆಲಸವು ತಮ್ಮೆಲ್ಲರ ಜವಾಬ್ದಾರಿ ಎಂದು ಅವರು ಒಪ್ಪುತ್ತಾರೆ.

ಯೆಹೋವನ ಸಾಕ್ಷಿಗಳು ಯಾವುದರ ಬಗ್ಗೆ ಸಾರುತ್ತಾರೆ? ಸಾಮಾಜಿಕ ಇಲ್ಲವೆ ರಾಜಕೀಯ ಸುಧಾರಣೆಗಳ ಬಗ್ಗೆಯಾಗಲಿ ಚರ್ಚ್‌ ಹಾಗೂ ಸರಕಾರಗಳು ಒಟ್ಟುಸೇರಿ ಕೆಲಸಮಾಡುವುದರ ಬಗ್ಗೆಯಾಗಲಿ ಬೇರೆ ಯಾವುದೇ ಐಹಿಕ ವಿಚಾರಗಳ ಬಗ್ಗೆಯಾಗಲಿ ಯೇಸು ಸಾರಲು ಹೇಳಲಿಲ್ಲ. ಬದಲಿಗೆ, ದೇವರ “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು” ಎಂದವನು ಹೇಳಿದನು. (ಮತ್ತಾಯ 24:14) ಇಂದು ನಿಜ ಕ್ರೈಸ್ತರು ಯೇಸುವಿನ ಆಜ್ಞೆ ಪಾಲಿಸುತ್ತಾ ದೇವರ ರಾಜ್ಯದ ಬಗ್ಗೆ ಜನರಿಗೆ ತಿಳಿಸುತ್ತಾರೆ. ಆ ರಾಜ್ಯ ಸೈತಾನನ ದುಷ್ಟ ವ್ಯವಸ್ಥೆಯನ್ನು ಕೊನೆಗೊಳಿಸಿ ನೀತಿಯ ನೂತನ ಲೋಕವನ್ನು ತರಶಕ್ತವಾಗುವ ಏಕೈಕ ಸರಕಾರವಾಗಿದೆ.

ಸುವಾರ್ತಾ ಪುಸ್ತಕಗಳನ್ನು ಓದುವಾಗ ಯೇಸುವಿನ ಶುಶ್ರೂಷೆಯ ಎರಡು ಮುಖ್ಯ ಅಂಶ ಎದ್ದುಕಾಣುತ್ತದೆ. ಇವು ನಿಜ ಕ್ರೈಸ್ತರು ಇಂದು ಮಾಡುವ ಕೆಲಸವನ್ನೂ ಪ್ರಭಾವಿಸುತ್ತವೆ. ಅದೇನೆಂದು ಮುಂದಿನ ಲೇಖನದಲ್ಲಿ ನೋಡೋಣ. (w12-E 05/01)

[ಪುಟ 16ರಲ್ಲಿರುವ ಚಿತ್ರ]

ಕ್ರೈಸ್ತ ಸಂದೇಶ ಉಪ್ಪಿನಂತಿದೆ ಹೇಗೆ?

[ಪುಟ 17ರಲ್ಲಿರುವ ಚಿತ್ರ]

ಕ್ರಿಸ್ತನ ಸಂದೇಶ ಕತ್ತಲಲ್ಲಿ ದೀಪದಂತಿದೆ ಹೇಗೆ?