ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾಟಮಂತ್ರದಲ್ಲಿ ತಪ್ಪೇನಿದೆ?

ಮಾಟಮಂತ್ರದಲ್ಲಿ ತಪ್ಪೇನಿದೆ?

ಮಾಟಮಂತ್ರದಲ್ಲಿ ತಪ್ಪೇನಿದೆ?

ಯುವ ಪ್ರಾಯದಿಂದಲೇ ಬಾರ್ಬರಳಿಗೆ * ಏನೇನೋ ಕಾಣಿಸ್ತಿತ್ತು, ಸ್ವರ ಕೇಳ್ತಿತ್ತು. ಸತ್ತು ಹೋಗಿದ್ದ ಸಂಬಂಧಿಕರು ತನ್ನೊಂದಿಗೆ ಮಾತಾಡ್ತಿದ್ದಾರೆ ಅಂತ ಬಲವಾಗಿ ನಂಬಿದ್ದಳು. ತನ್ನ ಗಂಡ ಯೋಯಾಕಿಮ್‌ ಜತೆ ಮಾಟಮಂತ್ರಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಓದುತ್ತಿದ್ದಳು. ಟ್ಯಾರೊ ಕಾರ್ಡ್‌ * ಓದುವುದರಲ್ಲಿಯೂ ಅವರು ಪ್ರವೀಣರಾದ್ರು. ತಮ್ಮ ಬಗ್ಗೆ ಟ್ಯಾರೊ ಕಾರ್ಡ್‌ನಲ್ಲಿ ಓದಿ ತಾವು ಬಹಳ ಹಣ ಗಳಿಸಲಿದ್ದೇವೆ ಅಂತ ತಿಳ್ಕೊಂಡ್ರು. ಅದೇ ರೀತಿ ಆಯ್ತು ಸಹ. ಅವರು ತಮ್ಮ ಬಿಸ್ನೆಸ್‌ನಲ್ಲಿ ಬಹಳ ಹಣ ಗಳಿಸಿದ್ರು. ಒಂದಿನ ಆ ಕಾರ್ಡ್‌ ಓದುವ ಮೂಲಕ ತಮಗೆ ಏನೋ ಗಂಡಾಂತರ ಕಾದಿದೆ. ಯಾರೋ ವ್ಯಕ್ತಿಗಳು ಹಾನಿಮಾಡಲು ತಮ್ಮ ಮನೆಗೆ ಬರಲಿದ್ದಾರೆ ಎಂದು ತಿಳುಕೊಂಡ್ರು. ಅವರಿಂದ ತಪ್ಪಿಸಿಕೊಳ್ಳಲು ಏನ್‌ ಮಾಡ್ಬೇಕು ಅಂತ ಸಹ ತಿಳುಕೊಂಡ್ರು.

ಮಾಟಮಂತ್ರ ಇಂದು ಸರ್ವಸಾಮಾನ್ಯ. ದೆವ್ವಭೂತಗಳ ಸಮಸ್ಯೆಗೆ ಬಲಿಯಾಗದಂತೆ ಜನರು ತಾಯಿತ ಕಟ್ಟಿಕೊಳ್ತಾರೆ. ತಮ್ಮ ಮಗುವಿಗೂ ಕಟ್ತಾರೆ. ಮನೆಯಲ್ಲಿ ಏನಾದರೂ ತೊಂದರೆ ಬಂದ್ರೆ, ಯಾರಾದರು ಅಸ್ವಸ್ಥರಾದರೆ ಅಥವಾ ತೀರಿಕೊಂಡ್ರೆ ಕಣಿಹೇಳುವವರ ಬಳಿ ಹೋಗಿ ವಿಚಾರಿಸ್ತಾರೆ. ತಮ್ಮ ಭವಿಷ್ಯ ಹೇಗಿದೆ ಅಂತ ತಿಳ್ಕೊಳ್ಳುವ ಕುತೂಹಲ ಜನರಿಗಿದೆ. ಫೋಕಸ್‌ ಎಂಬ ಜರ್ಮನ್‌ ಪುಸ್ತಕದಲ್ಲಿ ಪ್ರಕಟವಾದ “ಲ್ಯಾಪ್‌ಟಾಪ್‌ ಹಾಗೂ ಲೂಸಿಫರ್‌” ಎಂಬ ಲೇಖನದಲ್ಲಿ ಹೀಗೆ ತಿಳಿಸಿದೆ: “ಮಾಟಮಂತ್ರಕ್ಕೆ ಸಂಬಂಧಿಸಿದ ಸಂಗತಿಗಳಿಗೆ ಇಂದು ಇಂಟರ್‌ನೆಟ್‌ ಬಣ್ಣ ಹಚ್ಚಿ ತೋರಿಸುತ್ತಿದೆ.”

ಬೈಬಲಿನಲ್ಲಿ ಸಹ ಮಾಟಮಂತ್ರ, ಕಣಿಕೇಳುವುದು ಮುಂತಾದ ವಿಷ್ಯಗಳ ಬಗ್ಗೆ ಬರ್ದಿದೆ ಅಂತ ನಿಮಗೆ ಗೊತ್ತಾ? ಆದರೆ ಏನ್‌ ಬರ್ದಿದೆ ಅಂತ ತಿಳಿದುಕೊಂಡ್ರೆ ಬಹುಶಃ ನಿಮಗೆ ಆಶ್ಚರ್ಯ ಆಗ್ಬಹುದು.

ಬೈಬಲ್‌ ಹೀಗನ್ನುತ್ತದೆ

ಯೆಹೋವ ದೇವರು ತನ್ನ ಜನರಾದ ಪುರಾತನ ಇಸ್ರಾಯೇಲ್ಯರಿಗೆ ಕೊಟ್ಟ ನಿಯಮ ಹೀಗಿತ್ತು: “ಕಣಿಹೇಳುವವರು, ಶಕುನನೋಡುವವರು, ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು. ಇಂಥ ಕೆಲಸಗಳನ್ನು ನಡಿಸುವವರು ಯೆಹೋವನಿಗೆ ಅಸಹ್ಯರಾಗಿದ್ದಾರೆ.” (ಧರ್ಮೋಪದೇಶಕಾಂಡ 18:10-12) ಮಾಟಮಂತ್ರ, ಸತ್ತವರನ್ನು ವಿಚಾರಿಸುವುದು ಮುಂತಾದ ವಿಷ್ಯದ ಬಗ್ಗೆ ಯಾಕೆ ಇಷ್ಟೊಂದು ಬಲವಾದ ಆಜ್ಞೆ?

ಸತ್ತವರು ನಮ್ಮೊಂದಿಗೆ ಮಾತಾಡಬಲ್ಲರು ಎಂದು ಅನೇಕರು ನಂಬುತ್ತಾರೆ. ಭವಿಷ್ಯ ನುಡಿಯುವವರು, ಕಣಿಹೇಳುವವರು ಇವರೆಲ್ಲ ಸತ್ತವರ ಸಹಾಯದಿಂದ ಅದನ್ನು ಮಾಡ್ತಾರೆ ಅಂತ ಸಹ ಜನರು ನಂಬ್ತಾರೆ. ಕಾರಣ, ಒಬ್ಬ ವ್ಯಕ್ತಿ ಸತ್ತ ನಂತರ ಅವನ ಆತ್ಮ ಜೀವಂತವಾಗಿ ಉಳಿಯುತ್ತೆ. ಅದು ಆತ್ಮಲೋಕಕ್ಕೆ ಹೋಗಿ ಬದುಕುತ್ತೆ ಎಂದು ಅನೇಕ ಧರ್ಮಗಳು ಕಲಿಸುತ್ತವೆ. ಆದರೆ ಇದಕ್ಕೆ ತದ್ವಿರುದ್ಧವಾಗಿ, “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲ್‌ ತಿಳಿಸುತ್ತೆ. (ಪ್ರಸಂಗಿ 9:5) ಸತ್ತವರು ಗಾಢ ನಿದ್ರೆಯಲ್ಲೋ ಎಂಬಂತಿದ್ದಾರೆ. ಅಂದರೆ ಅವರಿಗೆ ತಮ್ಮ ಸುತ್ತಮುತ್ತ ನಡೆಯುವ ಯಾವ ವಿಷಯವೂ ತಿಳಿಯುವುದಿಲ್ಲ. * (ಮತ್ತಾಯ 9:18, 24; ಯೋಹಾನ 11:11-14) ಹಾಗಾದರೆ ಎಷ್ಟೋ ಜನರಿಗೆ ಸತ್ತವರ ಬಳಿ ಮಾತಾಡಿದ ಅನುಭವ ಆಗಿದೆಯಲ್ಲ ಅದು ಹೇಗೆ? ಅವರು ಮಾತಾಡಿದ್ದು ಹಾಗಾದ್ರೆ ಯಾರತ್ರ?

ದೆವ್ವಗಳೊಂದಿಗೆ ಸಂಪರ್ಕ

ಭೂಮಿಯಲ್ಲಿದ್ದಾಗ ಯೇಸು ಕ್ರಿಸ್ತನು ದೆವ್ವಗಳೊಂದಿಗೆ ಮಾತಾಡಿದ ಘಟನೆ ಬೈಬಲಿನಲ್ಲಿದೆ. ಒಮ್ಮೆ ಒಂದು ದೆವ್ವ ಯೇಸುವನ್ನು ಕಂಡು “ನೀನು ಯಾರೆಂಬುದು ನನಗೆ ಚೆನ್ನಾಗಿ ಗೊತ್ತು” ಅಂದಿತು ಎಂಬದಾಗಿ ಮಾರ್ಕ 1:23, 24 ತಿಳಿಸುತ್ತೆ. ಯೇಸು ಯಾರೆಂದು ದೆವ್ವಗಳಿಗೆ ಗೊತ್ತಿದೆ. ಆದರೆ ದೆವ್ವಗಳು ಯಾರೆಂದು ನಿಮ್ಗೆ ಗೊತ್ತಿದೆಯಾ?

ದೇವರು ಮನುಷ್ಯರನ್ನು ಸೃಷ್ಟಿಸುವುದಕ್ಕೆ ಎಷ್ಟೋ ಮುಂಚೆ ಕೋಟ್ಯಾಂತರ ದೇವಪುತ್ರರನ್ನು ಅಂದರೆ ದೇವದೂತರನ್ನು ತನ್ನೊಂದಿಗೆ ಸ್ವರ್ಗದಲ್ಲಿ ಜೀವಿಸಲು ಸೃಷ್ಟಿಸಿದನು. (ಯೋಬ 38:4-7) ಈ ದೇವದೂತರು ಮನುಷ್ಯರಿಗಿಂತ ಉನ್ನತ ರೀತಿಯ ಜೀವವನ್ನು ಹೊಂದಿದ್ದಾರೆ. (ಇಬ್ರಿಯ 2:6, 7) ಅವರು ಶಕ್ತಿಶಾಲಿಗಳು. ನಮಗಿಂತ ಎಷ್ಟೊ ಹೆಚ್ಚು ಬುದ್ಧಿಸಾಮರ್ಥ್ಯ ಇರುವವರು. ಅವರನ್ನು ಸೃಷ್ಟಿಸಿದ ಉದ್ದೇಶ? “ದೇವದೂತರೇ, ಆತನ ಶಬ್ದಕ್ಕೆ ಕಿವಿಗೊಡುವವರೇ, ಆತನ ಆಜ್ಞೆಯನ್ನು ನೆರವೇರಿಸುವ ಪರಾಕ್ರಮಶಾಲಿಗಳೇ, ಯೆಹೋವನನ್ನು ಕೊಂಡಾಡಿರಿ” ಎನ್ನುತ್ತೆ ಬೈಬಲ್‌. ಹಾಗಾದರೆ ದೇವರು ತನ್ನ ಉದ್ದೇಶ, ಕೆಲಸವನ್ನು ಮಾಡಲು ಅವರನ್ನು ಸೃಷ್ಟಿಮಾಡಿದನು ಎಂದು ಇದರಿಂದ ತಿಳಿಯುತ್ತೆ.—ಕೀರ್ತನೆ 103:20.

ಸಮಯಾನಂತರ ಈ ದೇವದೂತರಲ್ಲಿ ಕೆಲವರು ದೇವರ ಅನುಮತಿಯಿಲ್ಲದೆ ಮನುಷ್ಯರೊಂದಿಗೆ ಸಂಪರ್ಕ ಬೆಳೆಸಿದ್ರು. ಯಾಕಾಗಿ? ಮೊತ್ತಮೊದಲು ಆ ರೀತಿ ಮಾಡಿದ ದೇವದೂತನ ಉದ್ದೇಶ ಮನುಷ್ಯರನ್ನು ದೇವರಿಗೆ ವಿರುದ್ಧ ನಿಲ್ಲುವಂತೆ ಮಾಡುವುದೇ ಆಗಿತ್ತು. ಪ್ರಥಮ ಮನುಷ್ಯರಾದ ಆದಾಮ ಮತ್ತು ಹವ್ವರು ತಮ್ಮ ಸೃಷ್ಟಿಕರ್ತನಾದ ದೇವರಿಗೆ ಬೆನ್ನುಹಾಕುವಂತೆ ಆ ದೇವದೂತ ಮಾಡಿದ. ಈ ರೀತಿ ಮಾಡುವ ಮೂಲಕ ಆಪಾದಕ ಹಾಗೂ ವಿರೋಧಿ ಎಂಬ ಅರ್ಥ ಬರುವ ಸೈತಾನ, ಪಿಶಾಚ ಎಂಬ ಹೆಸರನ್ನು ಅವನು ಪಡೆದ. ಹೌದು ದೇವರ ಮೇಲೆ ಆಪಾದನೆ ಹೇರಿ, ಆತನ ವಿರೋಧಿಯಾದ.—ಆದಿಕಾಂಡ 3:1-6.

ಈ ಒಬ್ಬ ದೂತನು ಮಾತ್ರವಲ್ಲ ತದನಂತರ ಇನ್ನೂ ಅನೇಕ ದೇವದೂತರು ದೇವರಿಗೆ ವಿರುದ್ಧವಾಗಿ ಕೆಲಸಮಾಡಿದ್ರು. ಸ್ವರ್ಗವನ್ನು ಬಿಟ್ಟು ಭೂಮಿಗೆ ಬಂದು ಇಲ್ಲಿದ್ದ ಸುಂದರ ಸ್ತ್ರೀಯರೊಂದಿಗೆ ವಾಸಿಸ ತೊಡಗಿದರು. (ಯೂದ 6; ಆದಿಕಾಂಡ 6:1, 2) ಈ ದ್ರೋಹಿಗಳಾದ ದೂತರಿಗೆ ಮಕ್ಕಳು ಹುಟ್ಟಿದ್ರು. ಅವರು ದೈತ್ಯರಾಗಿದ್ದರು. ಅವರಿಂದಾಗಿ ಭೂಮಿಯಲ್ಲಿ ಹಿಂಸೆ, ಅನ್ಯಾಯ ತುಂಬಿಕೊಂಡಿತು. ನೋಹನ ದಿನದಲ್ಲಿ ಈ ದುಷ್ಟ, ಹಿಂಸಾತ್ಮಕ ಸಂತತಿಯನ್ನು ದೇವರು ಜಲಪ್ರಳಯದ ಮೂಲಕ ನಾಶಮಾಡಿದ ಘಟನೆಯನ್ನು ನೀವು ಬೈಬಲಿನಲ್ಲಿ ಓದಿ ತಿಳಿದಿರಬಹುದು.—ಆದಿಕಾಂಡ 6:3, 4, 11-13.

ಈ ಜಲಪ್ರಳಯದ ಸಮಯದಲ್ಲಿ ದ್ರೋಹಿಗಳಾದ ದೂತರಿಗೆ ಏನಾಯ್ತು? ಅವರು ತಮ್ಮ ಮಾನವ ಶರೀರವನ್ನು ಕಳಚಿ ಪುನಃ ಸ್ವರ್ಗಕ್ಕೆ ಹಿಂದಿರುಗಿದರು. ದೇವರು ಅವರನ್ನು ಸ್ವೀಕರಿಸಿದನಾ? ಇಲ್ಲವೇ ಇಲ್ಲ. ಬದಲಾಗಿ ದೇವರು ಅವರನ್ನು ಸ್ವರ್ಗದಿಂದ ಪ್ರತ್ಯೇಕಿಸಿ ಒಂದು ಕತ್ತಲೆಯ ಸ್ಥಿತಿಯಲ್ಲಿಟ್ಟನು. ಆ ಸ್ಥಿತಿಯನ್ನು ಬೈಬಲ್‌ “ದಟ್ಟವಾದ ಕತ್ತಲೆ ಗುಂಡಿ”ಗೆ ಹೋಲಿಸುತ್ತದೆ. (2 ಪೇತ್ರ 2:4, 5) ಈ ದಂಗೆಕೋರ ದೂತರನ್ನು ಬೈಬಲ್‌ “ದೆವ್ವಗಳು” ಅಂತ ಕರೆಯುತ್ತೆ. (ಯಾಕೋಬ 2:19) ಮಾಟಮಂತ್ರ, ಕಣಿಹೇಳುವುದು ಇತ್ಯಾದಿ ವಿಷ್ಯಗಳ ಹಿಂದಿರುವುದು ಈ ದೆವ್ವಗಳೇ.

ಉದ್ದೇಶವೇನು?

ದುಷ್ಟ ಆತ್ಮಜೀವಿಗಳು ಮನುಷ್ಯರೊಂದಿಗೆ ಮಾತಾಡುವ ಉದ್ದೇಶವೇನು? ಮನುಷ್ಯರನ್ನು ಸತ್ಯದೇವರಾದ ಯೆಹೋವನಿಂದ ದೂರ ತೆಗೆದುಕೊಂಡು ಹೋಗುವುದೇ. ಹಾಗಾಗಿಯೇ ದೆವ್ವಗಳು ಮಾಂತ್ರಿಕರಿಗೆ ಭವಿಷ್ಯನುಡಿಯುವ ಶಕ್ತಿ ಕೊಟ್ಟು ಜನರು ದೇವರ ಬಗ್ಗೆ ಆಳವಾದ ಜ್ಞಾನವನ್ನು ಪಡೆಯದಂತೆ, ಆತನೊಂದಿಗೆ ಸಂಬಂಧವನ್ನು ಬೆಸೆದುಕೊಳ್ಳದಂತೆ ಮಾಡುತ್ತಿವೆ.

ದೆವ್ವಗಳಿಗೆ ಇನ್ನೊಂದು ಉದ್ದೇಶವೂ ಇದೆ. ಅವುಗಳ ನಾಯಕನಾದ ಸೈತಾನನು ಯೇಸುವನ್ನು ಸೋಲಿಸಲು ಪ್ರಯತ್ನಿಸಿದಾಗ ಮಾಡಿದ ವಿಷ್ಯದಿಂದ ನಾವದನ್ನು ತಿಳಿಯಬಹುದು. ಸೈತಾನನು ಯೇಸುವಿಗೆ “ಲೋಕದ ಎಲ್ಲ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ನೀಡುವುದಾಗಿ ಮಾತುಕೊಟ್ಟ. ಇದಕ್ಕೆ ಬದಲಿಯಾಗಿ ಸೈತಾನನು ಏನನ್ನು ಅಪೇಕ್ಷಿಸಿದ? ‘ನೀನು ಅಡ್ಡಬಿದ್ದು ನನಗೆ ಒಂದು ಆರಾಧನಾ ಕ್ರಿಯೆಯನ್ನು ಮಾಡು’ ಎಂದ. ಹೌದು ಸೈತಾನನೂ ಅವನ ದೆವ್ವಗಳೂ ದೇವರಿಗೆ ಸಲ್ಲಬೇಕಾದ ಆರಾಧನೆಯನ್ನು ಬಯಸುತ್ತಾರೆ. ಆದರೆ ಯೇಸು ಹಾಗೆ ಮಾಡಲಿಲ್ಲ. ದೇವರನ್ನಾಗಲಿ ಆತನ ಆರಾಧನೆಯನ್ನಾಗಲಿ ಬಿಟ್ಟುಬಿಡಲಿಲ್ಲ.—ಮತ್ತಾಯ 4:8-10.

ಇಂದು ಸಹ ಅನೇಕವೇಳೆ ದೆವ್ವಗಳು ಜನರಿಗೆ ಆಮಿಷ ಒಡ್ಡಿ ಮೋಸಮಾಡುತ್ತವೆ. ಹಾನಿಕರವಲ್ಲ ಎಂದು ತೋರುವ ಸ್ಫಟಿಕಗೋಲ, ಗಿಳಿಶಾಸ್ತ್ರ, ಟ್ಯಾರೊ ಕಾರ್ಡ್‌, ಪೆಂಡುಲಂ ಮತ್ತು ಭವಿಷ್ಯನುಡಿ ಮುಂತಾದ ವಿಷ್ಯಗಳಿಂದ ನಮ್ಮನ್ನು ಸಿಕ್ಕಿಸಿ ಹಾಕಲು ಪ್ರಯತ್ನಿಸುತ್ತೆ. ಅಂತ ವಿಚಾರಗಳಿಗೆ ಬಲಿಬೀಳಬೇಡಿ. ಇದು ಹಾನಿಕರವಲ್ಲ ಅಂತ ನೆನಸಬೇಡಿ. ಬರೀ ಅಗೋಚರ ಲೋಕದಲ್ಲಿ ಏನು ನಡೆಯುತ್ತಿದೆ ಎಂದು ನೋಡುವುದಷ್ಟೆ ಅಂದುಕೊಳ್ಬೇಡಿ. ಮಾಂತ್ರಿಕರ ಬಳಿ ಹೋಗಿ ನಾವು ಮರುಳುಗೊಳ್ಳುವಂತೆ ದೆವ್ವಗಳು ಮಾಡುತ್ತವೆ. ಈ ರೀತಿ ನಮ್ಮನ್ನು ಬಲೆಗೆ ಬೀಳಿಸಿ ಯೆಹೋವನ ಆರಾಧನೆಯಿಂದ ದೂರ ತೆಗೆದುಕೊಂಡು ಹೋಗುತ್ತವೆ. ತಾವು ನೆನಸಿದ್ದು ಆಗದಿರುವಾಗ ಈ ದೆವ್ವಗಳು ತಮ್ಮ ಹತೋಟಿಯಲ್ಲಿ ಇರುವವರನ್ನು ಕಾಡಿಸಿ, ಪೀಡಿಸಿ ತೊಂದರೆ ನೀಡುತ್ತವೆ. ನೀವೂ ಇದನ್ನು ಅನುಭವಿಸುತ್ತಿರುವಲ್ಲಿ, ಅವುಗಳ ಹತೋಟಿಯಿಂದ ಹೊರಬರುವುದು ಹೇಗೆ?

ದೆವ್ವಗಳ ಹತೋಟಿಯಿಂದ ಹೊರಬರುವ ವಿಧ

ಜನರೊಂದಿಗೆ ಮಾತಾಡುವ ದೆವ್ವಗಳು ದೇವರ ವಿರೋಧಿಗಳಾಗಿವೆ ಎಂಬದನ್ನು ಎಂದಿಗೂ ಮರೆಯಬೇಡಿ. ಅವುಗಳನ್ನು ದೇವರು ನಾಶನಕ್ಕೆ ಕಾದಿರಿಸಿದ್ದಾನೆ. (ಯೂದ 6) ಅವು ಸತ್ತ ವ್ಯಕ್ತಿಗಳಂತೆ ನಟಿಸಿ ಜನರನ್ನು ವಂಚಿಸುತ್ತಾ ಮೋಸಗೊಳಿಸುತ್ತಾ ಇವೆ. ನೆನಸಿ, ನೀವು ಸ್ನೇಹಿತನೆಂದು ಪರಿಗಣಿಸಿದ ವ್ಯಕ್ತಿ ಒಬ್ಬ ವಂಚಕ ಅಂತ ಗೊತ್ತಾದರೆ ನಿಮ್ಗೆ ಹೇಗನಿಸುತ್ತದೆ? ಇಂಟರ್‌ನೆಟ್‌ ಮೂಲಕ ನಿಮಗರಿವಿಲ್ಲದೆ ಒಬ್ಬ ವಿಕೃತ ಕಾಮಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದೀರಿ ಅಂತ ನಿಮ್ಗೆ ತಿಳಿದುಬಂದರೆ ಆಗೇನು? ದೆವ್ವಗಳೊಂದಿಗಿನ ಸಹವಾಸ ಅದಕ್ಕಿಂತಲೂ ಹೆಚ್ಚು ಅಪಾಯಕಾರಿ. ಹಾಗಾದರೆ ನೀವೇನು ಮಾಡಬೇಕು?

ಪುರಾತನ ಎಫೆಸದಲ್ಲಿ ಕೆಲವರ ಬಳಿ ಮಾಟಮಂತ್ರಕ್ಕೆ ಸಂಬಂಧಿಸಿದ ಅತೀ ಬೆಲೆಯ ಪುಸ್ತಕಗಳಿದ್ದವು. ಆದರೆ ಮಾಟಮಂತ್ರವನ್ನು ಬೈಬಲ್‌ ಖಂಡಿಸುತ್ತದೆ ಎಂದು ತಿಳಿದಾಗ ಅವರು “ಎಲ್ಲರ ಮುಂದೆ ಅವುಗಳನ್ನು ಸುಟ್ಟುಬಿಟ್ಟರು.” (ಅಪೊಸ್ತಲರ ಕಾರ್ಯಗಳು 19:19, 20) ಇಂದು ಮಾಂಟಮಂತ್ರಕ್ಕೆ ಸಂಬಂಧಿಸಿದ ವಿಷ್ಯಗಳು ಬರೀ ಪುಸ್ತಕ, ತಾಯಿತ, ವೀಜಾ ಹಲಗೆ ಮುಂತಾದ ರೂಪದಲ್ಲಿ ಸಿಗುವುದು ಮಾತ್ರವಲ್ಲ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕವೂ ಸಿಗುತ್ತವೆ. ಇವೆಲ್ಲವುಗಳಿಂದ ದೂರವಿರಬೇಕು. ಇಲ್ಲವಾದರೆ ನಾವು ದೆವ್ವಗಳೊಂದಿಗೆ ಸಂಬಂಧ ಬೆಳೆಸಿಕೊಳ್ಳುವಂತೆ ಇವು ಮಾಡುತ್ತವೆ.

ಈ ಲೇಖನದ ಆರಂಭದಲ್ಲಿ ತಿಳಿಸಿರುವ ದಂಪತಿಯ ಬಗ್ಗೆ ಯೋಚಿಸಿ. ಅವರು ಟ್ಯಾರೋ ಕಾರ್ಡ್‌ ಓದುವ ಮೂಲಕ ತಮ್ಮ ಮನೆಗೆ ಕೆಟ್ಟ ಜನರು ಬರಲಿದ್ದಾರೆ. ನಾವಾದರೋ ಅವರ ಮಾತನ್ನು ಕೇಳಿಸಿಕೊಳ್ಳಬಾರದು ಅವರಿಂದ ಏನನ್ನೂ ತೆಗೆದುಕೊಳ್ಳಬಾರದು ಎಂದು ತೀರ್ಮಾನಿಸಿದ್ರು. ಆದರೆ ಅವರ ಮನೆಗೆ ಕ್ಯಾನೀ ಮತ್ತು ಗುಡ್ರೂನ್‌ ಎಂಬ ಇಬ್ಬರು ಯೆಹೋವನ ಸಾಕ್ಷಿಗಳು ಬಂದ್ರು. ತಾವು ದೇವರ ಬಗ್ಗೆ ಸುವಾರ್ತೆಯನ್ನು ಹೇಳಲು ಬಂದಿದ್ದೇವೆ ಎಂದು ತಿಳಿಸಿದ್ರು. ಯೋಯಾಕಿಮ್‌ ಮತ್ತು ಬಾರ್ಬರ ಅವರ ಮಾತಿಗೆ ಕಿವಿಗೊಡುವುದಾಗಿ ನಿರ್ಣಯಿಸಿದರು. ಮಾತಾಡುತ್ತಾ ಮಾತಾಡುತ್ತಾ ಮಾಟಮಂತ್ರಕ್ಕೆ ಸಂಬಂಧಿಸಿದ ವಿಷ್ಯಗಳಿಗೆ ಸಂವಾದ ಜಾರಿತು. ಕ್ಯಾನೀ ಮತ್ತು ಗುಡ್ರೂನ್‌ ಬೈಬಲಿನಿಂದ ಅದರ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡಿದರು. ನಿಯಮಿತವಾದ ಬೈಬಲ್‌ ಚರ್ಚೆ ನಡೆಯಿತು.

ಸ್ವಲ್ಪ ಸಮಯದಲ್ಲೇ ಯೋಯಾಕಿಮ್‌ ಮತ್ತು ಬಾರ್ಬರ ತಮಗೆ ದೆವ್ವಗಳೊಂದಿಗಿದ್ದ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಹಾಕುವುದಾಗಿ ತೀರ್ಮಾನಿಸಿದರು. ಇದರಿಂದಾಗಿ ದೆವ್ವಗಳು ಬಹು ಕೋಪಿಸಿಕೊಳ್ಳುತ್ತವೆ ಎಂದು ಸಾಕ್ಷಿಗಳು ತಿಳಿಸಿದರು. ವಾಸ್ತವದಲ್ಲಿ, ಯೋಯಾಕಿಮ್‌ ಮತ್ತು ಬಾರ್ಬರ ಅತಿ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯ್ತು. ದೆವ್ವಗಳಿಂದ ಭಯಾನಕ ದಾಳಿಗಳನ್ನೂ ಅನುಭವಿಸಿದರು. ಸ್ವಲ್ಪ ಸಮಯದ ವರೆಗೆ ಅವರು ಪ್ರತಿ ರಾತ್ರಿ ಬಹಳ ಹೆದರುತ್ತಿದ್ದರು. ಆಮೇಲೆ ಮನೆ ಬದಲಾಯಿಸಿದ ನಂತರ ಸ್ವಲ್ಪ ಸಮಾಧಾನವಾಯಿತು. ಈ ಎಲ್ಲ ಸಮಯದಲ್ಲಿ ಆ ದಂಪತಿ ಫಿಲಿಪ್ಪಿ 4:13ರ “ನಮಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ” ಎಂಬ ಮಾತಿನಲ್ಲಿ ಪೂರ್ಣ ಭರವಸೆಯಿಟ್ಟಿದ್ದರು. ಇಂದು ಯೋಯಾಕಿಮ್‌ ಮತ್ತು ಬಾರ್ಬರ ಸಂತೋಷದಿಂದ ಸತ್ಯದೇವರಾದ ಯೆಹೋವನನ್ನು ಆರಾಧಿಸುತ್ತಾ ಇದ್ದಾರೆ.

ಯೆಹೋವನ ಆಶೀರ್ವಾದ ಪಡೆಯಬೇಕಾದರೆ ನಾವೇನು ಮಾಡಬೇಕು? ಬೈಬಲ್‌ ಹೇಳುವುದು: “ದೇವರಿಗೆ ನಿಮ್ಮನ್ನು ಅಧೀನಪಡಿಸಿಕೊಳ್ಳಿರಿ; ಆದರೆ ಪಿಶಾಚನನ್ನು ಎದುರಿಸಿರಿ, ಆಗ ಅವನು ನಿಮ್ಮಿಂದ ಓಡಿಹೋಗುವನು. ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:7, 8) ದೆವ್ವಗಳ ಪ್ರಭಾವದಿಂದ ಮುಕ್ತರಾಗಲು ಯೆಹೋವನು ನಮಗೆ ಸಹಾಯಮಾಡುವನು. ಆದರೆ ನಮಗೆ ಮನಸ್ಸಿರಬೇಕು. ದೆವ್ವಗಳ ಪೀಡೆಯಿಂದ ಮುಕ್ತರಾದ ಯೋಯಾಕಿಮ್‌ ಮತ್ತು ಬಾರ್ಬರ “ಯೆಹೋವನಿಂದಲೇ ನನ್ನ ಸಹಾಯವು ಬರುತ್ತದೆ” ಎಂಬ ಕೀರ್ತನೆ 121:2ರ ಮಾತನ್ನು ಮನಸಾರೆ ಒಪ್ಪುತ್ತಾರೆ. (w12-E 03/01)

[ಪಾದಟಿಪ್ಪಣಿಗಳು]

^ ಪ್ಯಾರ. 2 ಹೆಸರುಗಳನ್ನು ಬದಲಾಯಿಸಲಾಗಿದೆ.

^ ಪ್ಯಾರ. 2 ಚಿತ್ರಗಳಿರುವ ಕಾರ್ಡುಗಳು. ಜನರ ಭವಿಷ್ಯ ತಿಳಿದುಕೊಳ್ಳಲು ಇದನ್ನು ಬಳಸಲಾಗುತ್ತದೆ.

^ ಪ್ಯಾರ. 7 ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ “ಮೃತಜನರು ಎಲ್ಲಿದ್ದಾರೆ?” ಎಂಬ ಅಧ್ಯಾಯ 6ನ್ನು ಓದಿ.

[ಪುಟ 27ರಲ್ಲಿರುವ ಚಿತ್ರ]

ಮಾಟಮಂತ್ರ, ಕಣಿಕೇಳುವುದು ಮುಂತಾದ ಹವ್ಯಾಸಗಳು ದೇವರೊಂದಿಗೆ ಒಳ್ಳೇ ಸಂಬಂಧವನ್ನು ಹೊಂದದಂತೆ ಮಾಡುತ್ತವೆ

[ಪುಟ 28ರಲ್ಲಿರುವ ಚಿತ್ರ]

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.”—ಯಾಕೋಬ 4:8.