ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವದೂತರು ನಮ್ಮನ್ನು ಪ್ರಭಾವಿಸುವ ವಿಧ

ದೇವದೂತರು ನಮ್ಮನ್ನು ಪ್ರಭಾವಿಸುವ ವಿಧ

ಯೇಸುವಿನಿಂದ ಕಲಿಯುವುದು . . .

ದೇವದೂತರು ನಮ್ಮನ್ನು ಪ್ರಭಾವಿಸುವ ವಿಧ

“ಲೋಕವು ಉಂಟಾಗುವುದಕ್ಕಿಂತ ಮುಂಚೆ” ಯೇಸು ತನ್ನ ತಂದೆಯಾದ ಯೆಹೋವನೊಂದಿಗೆ ಸ್ವರ್ಗದಲ್ಲಿದ್ದನು. (ಯೋಹಾನ 17:5) ಆದ್ದರಿಂದ ಈ ಮುಂದಿನ ಪ್ರಶ್ನೆಗಳಿಗೆ ಉತ್ತರಕೊಡಲು ಆತನೇ ಅತ್ಯಂತ ಸೂಕ್ತ ವ್ಯಕ್ತಿ.

ದೇವದೂತರು ನಮ್ಮಲ್ಲಿ ಆಸಕ್ತರೊ?

▪ ದೇವದೂತರಿಗೆ ಜನರಲ್ಲಿ ಗಾಢ ಆಸಕ್ತಿ ಇದೆಯೆಂಬ ಸಂಗತಿಯನ್ನು ನಾವು ಯೇಸುವಿನಿಂದ ಕಲಿಯುತ್ತೇವೆ. ಆತನಂದದ್ದು: “ಪಶ್ಚಾತ್ತಾಪಪಡುವ ಒಬ್ಬ ಪಾಪಿಯ ವಿಷಯದಲ್ಲಿ ದೇವದೂತರ ನಡುವೆ ಸಂತೋಷ ಉಂಟಾಗುತ್ತದೆ.”—ಲೂಕ 15:10.

ದೇವರ ಸೇವಕರ ಆಧ್ಯಾತ್ಮಿಕ ಹಿತಕ್ಕೆ ನೆರವಾಗುವ ಜವಾಬ್ದಾರಿಯನ್ನು ದೇವದೂತರಿಗೆ ಕೊಡಲಾಗಿದೆ ಎಂಬುದನ್ನು ಯೇಸು ಪ್ರಕಟಪಡಿಸಿದನು. ಹೀಗಿರುವುದರಿಂದ, ತನ್ನ ಶಿಷ್ಯರು ಇತರರನ್ನು ಆಧ್ಯಾತ್ಮಿಕವಾಗಿ ಎಡವಿಸದಂತೆ ಅವರಿಗೆ ಎಚ್ಚರಿಕೆ ಕೊಡುತ್ತಿದ್ದಾಗ ಆತನಂದದ್ದು: “ನೀವು ಈ ಚಿಕ್ಕವರಲ್ಲಿ ಒಬ್ಬನನ್ನೂ ತಾತ್ಸಾರಮಾಡದಂತೆ ನೋಡಿಕೊಳ್ಳಿರಿ; ಏಕೆಂದರೆ ಸ್ವರ್ಗದಲ್ಲಿರುವ ಅವರ ದೂತರು ಸ್ವರ್ಗದಲ್ಲಿರುವ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿರುತ್ತಾರೆ.” (ಮತ್ತಾಯ 18:10) ತನ್ನ ಹಿಂಬಾಲಕರಲ್ಲಿ ಪ್ರತಿಯೊಬ್ಬನಿಗೂ ಒಬ್ಬ ರಕ್ಷಕ ದೂತನನ್ನು ನೇಮಿಸಲಾಗಿದೆ ಎಂಬುದು ಯೇಸುವಿನ ಮಾತುಗಳ ಅರ್ಥವಾಗಿರಲಿಲ್ಲ. ಬದಲಿಗೆ, ದೇವರೊಂದಿಗೆ ಐಕ್ಯದಿಂದ ಕೆಲಸಮಾಡುತ್ತಿರುವ ದೂತರಿಗೆ ಕ್ರೈಸ್ತ ಸಭೆಯಲ್ಲಿರುವ ಸದಸ್ಯರಲ್ಲಿ ಆಸಕ್ತಿಯಿದೆಯೆಂದು ಆತನು ಹೇಳುತ್ತಿದ್ದನು.

ಸೈತಾನನು ನಮಗೆ ಹೇಗೆ ಹಾನಿಮಾಡುತ್ತಾನೆ?

▪ ಜನರು ದೇವರ ಬಗ್ಗೆ ಸತ್ಯವನ್ನು ಕಲಿಯದಂತೆ ಸೈತಾನನು ಪ್ರಯತ್ನಿಸುತ್ತಾನೆಂದು ಯೇಸು ತನ್ನ ಹಿಂಬಾಲಕರನ್ನು ಎಚ್ಚರಿಸಿದನು. “ಯಾವನಾದರೂ ರಾಜ್ಯದ ವಾಕ್ಯವನ್ನು ಕೇಳಿ ಅದರ ಅರ್ಥವನ್ನು ಗ್ರಹಿಸದೇ ಇರುವಲ್ಲಿ ಕೆಡುಕನು ಬಂದು ಅವನ ಹೃದಯದಲ್ಲಿ ಬಿತ್ತಿರುವುದನ್ನು ಕಿತ್ತುಕೊಳ್ಳುತ್ತಾನೆ” ಎಂದನು ಯೇಸು.—ಮತ್ತಾಯ 13:19.

ಸೈತಾನನು ಜನರನ್ನು ಮೋಸಗೊಳಿಸುವ ವಿಧಾನವೊಂದನ್ನು ಯೇಸು ಒಂದು ದೃಷ್ಟಾಂತದ ಮೂಲಕ ಬಯಲಿಗೆಳೆದನು. ಅದು ಹೊಲದಲ್ಲಿ ಗೋದಿ ಬಿತ್ತಿದ ಒಬ್ಬ ಮನುಷ್ಯನ ಕುರಿತಾಗಿತ್ತು. ಆ ಮನುಷ್ಯನೆಂದರೆ ಯೇಸು, ಗೋದಿ ಅಂದರೆ ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳಲಿರುವ ನಿಜ ಕ್ರೈಸ್ತರು. ಯೇಸುವಂದದ್ದು: “ವೈರಿಯು ಬಂದು ಗೋದಿಯ ಮಧ್ಯೆ ಕಳೆಯನ್ನು ಬಿತ್ತಿ ಹೋದನು.” ಇಲ್ಲಿ ಕಳೆ ಅಂದರೆ ಸುಳ್ಳು ಕ್ರೈಸ್ತರು. “ಅವುಗಳನ್ನು ಬಿತ್ತಿದ ವೈರಿಯು ಪಿಶಾಚನು.” (ಮತ್ತಾಯ 13:25, 39) ಮೊಳಕೆಯೊಡೆದು ಹೊರಬಂದ ಗೋದಿಯ ಚಿಕ್ಕ ಸಸಿಗಳಂತೆ ಕಳೆಗಳು ತೋರಬಹುದು. ಹಾಗೆಯೇ ಕ್ರೈಸ್ತರೆಂದು ಹೇಳಿಕೊಳ್ಳುವವರು ಸತ್ಯಾರಾಧಕರೋ ಎಂಬಂತೆ ಕಂಡುಬಂದಾರು. ಸುಳ್ಳು ಬೋಧನೆಗಳನ್ನು ಕಲಿಸುವ ಧರ್ಮಗಳು ವಾಸ್ತವದಲ್ಲಿ ಜನರನ್ನು ಮೋಸಗೊಳಿಸಿ ದೇವರಿಗೆ ಅವಿಧೇಯರಾಗುವಂತೆ ಮಾಡುತ್ತಿದ್ದಾರೆ. ಸೈತಾನನು ಸುಳ್ಳು ಧರ್ಮಗಳನ್ನು ಬಳಸಿ ಜನರು ಯೆಹೋವನೊಂದಿಗೆ ಸ್ನೇಹ ಬೆಳೆಸದಂತೆ ಮಾಡುತ್ತಾನೆ.

ಸೈತಾನನಿಂದ ನಮಗಾಗಬಲ್ಲ ಹಾನಿಯನ್ನು ತಡೆಯುವುದು ಹೇಗೆ?

▪ ಸೈತಾನನನ್ನು “ಈ ಲೋಕದ ಅಧಿಪತಿ” ಎಂದು ಯೇಸು ಕರೆದನು. (ಯೋಹಾನ 14:30) ಸೈತಾನನ ವಿರುದ್ಧ ನಮ್ಮನ್ನು ಸಂರಕ್ಷಿಸಿಕೊಳ್ಳುವ ವಿಧವನ್ನು ಯೇಸು ಒಂದು ಪ್ರಾರ್ಥನೆಯಲ್ಲಿ ತಿಳಿಸಿದನು. ತನ್ನ ಶಿಷ್ಯರ ಕುರಿತಾಗಿ ಆತನು ಸ್ವರ್ಗದಲ್ಲಿರುವ ತನ್ನ ತಂದೆ ಯೆಹೋವನಿಗೆ ಹೀಗೆ ಪ್ರಾರ್ಥಿಸಿದನು: “ಇವರನ್ನು . . . ಕೆಡುಕನಿಂದ ಕಾಪಾಡುವಂತೆ ಕೇಳಿಕೊಳ್ಳುತ್ತೇನೆ. ನಾನು ಲೋಕದ ಭಾಗವಾಗಿಲ್ಲದ ಪ್ರಕಾರ ಇವರೂ ಲೋಕದ ಭಾಗವಾಗಿಲ್ಲ. ಇವರನ್ನು ಸತ್ಯದ ಮೂಲಕ ಪವಿತ್ರೀಕರಿಸು; ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:15-17) ದೇವರ ವಾಕ್ಯದ ಜ್ಞಾನವು, ಸೈತಾನನ ಆಳಿಕೆಯ ಕೆಳಗಿನ ಮಾನವ ಲೋಕದ ದುಷ್ಪ್ರಭಾವದಿಂದ ನಮ್ಮನ್ನು ಸಂರಕ್ಷಿಸಬಲ್ಲದು.

ಇಂದು ದೇವದೂತರು ನಮ್ಮನ್ನು ಹೇಗೆ ಪ್ರಭಾವಿಸುತ್ತಾರೆ?

▪ ಈ ದುಷ್ಟ ಲೋಕದ ‘ಸಮಾಪ್ತಿಯಲ್ಲಿ ದೇವದೂತರು ನೀತಿವಂತರೊಳಗಿಂದ ಕೆಟ್ಟವರನ್ನು ಬೇರೆಮಾಡುವರು’ ಎಂದು ಯೇಸು ಹೇಳಿದನು. (ಮತ್ತಾಯ 13:49, ಸತ್ಯವೇದವು) ನಾವಿಂದು ಆ “ಸಮಾಪ್ತಿಯ” ಸಮಯದಲ್ಲಿ ಜೀವಿಸುತ್ತಿದ್ದೇವೆ. ಲಕ್ಷಾಂತರ ಜನರು ದೇವರ ಸರಕಾರದ ಕುರಿತ ಶುಭವಾರ್ತೆಗೆ ಪ್ರತಿಕ್ರಿಯೆ ತೋರಿಸುತ್ತಿದ್ದಾರೆ.—ಮತ್ತಾಯ 24:3, 14.

ಆದರೆ ದೇವರ ವಾಕ್ಯವನ್ನು ಅಧ್ಯಯನಮಾಡಲು ಆರಂಭಿಸಿದರೂ ಕಲಿತದ್ದನ್ನು ಅನ್ವಯಿಸಿಕೊಳ್ಳಲು ಬಯಸದವರು ಆತನ ಅನುಗ್ರಹ ಪಡೆಯುವುದಿಲ್ಲ. ದೇವದೂತರು ಯೆಹೋವನ ಸೇವಕರ ಕೆಲಸವನ್ನು ನಿರ್ದೇಶಿಸುತ್ತಿರುವುದರಿಂದ ದೇವರನ್ನು ನಿಜವಾಗಿ ಪ್ರೀತಿಸುವವರೊಳಗಿಂದ ಅಂಥವರನ್ನು ಪ್ರತ್ಯೇಕಿಸಲಾಗುತ್ತದೆ. ಆದರೆ ದೇವರ ಅನುಗ್ರಹ ಪಡೆಯುವವರನ್ನು ವರ್ಣಿಸುತ್ತಾ ಯೇಸು ಅಂದದ್ದು: “ಕೆಲವರು ಉತ್ತಮವಾದ ಒಳ್ಳೆಯ ಹೃದಯದಿಂದ ವಾಕ್ಯವನ್ನು ಕೇಳಿ, ಅದನ್ನು ಹೃದಯದಲ್ಲಿ ಇಟ್ಟುಕೊಂಡು ತಾಳ್ಮೆಯಿಂದ ಫಲವನ್ನು ಕೊಡುತ್ತಾರೆ.”—ಲೂಕ 8:15. (w10-E 11/01)

ಹೆಚ್ಚಿನ ಮಾಹಿತಿಗಾಗಿ ಈ ಪುಸ್ತಕದ ಅಧ್ಯಾಯ 10ನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 24ರಲ್ಲಿರುವ ಚಿತ್ರ]

ಸತ್ಯಕ್ಕಾಗಿ ಹುಡುಕುತ್ತಿರುವ ಯಥಾರ್ಥ ಜನರಿಗೆ ಸಹಾಯ ಮಾಡುವುದರಲ್ಲಿ ದೇವದೂತರ ಪಾತ್ರವಿದೆ