ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೂತ್ರ 3 ಕೃತಜ್ಞತಾಭಾವ ಸದಾ ಇರಲಿ

ಸೂತ್ರ 3 ಕೃತಜ್ಞತಾಭಾವ ಸದಾ ಇರಲಿ

ಸೂತ್ರ 3 ಕೃತಜ್ಞತಾಭಾವ ಸದಾ ಇರಲಿ

ಬೈಬಲ್‌ ಏನನ್ನುತ್ತದೆ? “ಎಲ್ಲ ವಿಷಯಗಳಲ್ಲಿ ಕೃತಜ್ಞತೆಯನ್ನು ಸಲ್ಲಿಸಿರಿ.”—1 ಥೆಸಲೊನೀಕ 5:18.

ಸುಲಭವಲ್ಲ ಏಕೆ? ಅಹಂಕಾರಿಗಳೂ ಕೃತಜ್ಞತೆಯಿಲ್ಲದವರೂ ಆದ ಜನರಿಂದ ತುಂಬಿರುವ ಲೋಕದಲ್ಲಿ ನಾವು ಜೀವಿಸುತ್ತಿರುವುದರಿಂದ ಅದೇ ಮನೋಭಾವಗಳು ನಮಗೂ ಹತ್ತಿಕೊಳ್ಳಬಹುದು. (2 ತಿಮೊಥೆಯ 3:1, 2) ಅಲ್ಲದೆ ಈಗಾಗಲೇ ಪುರುಸೊತ್ತಿಲ್ಲದ ಬದುಕಿನಲ್ಲಿ ನಾವು ಇನ್ನೂ ಹೆಚ್ಚು ಕೆಲಸಕಾರ್ಯಗಳನ್ನು ತುರುಕಿಸಿಕೊಂಡಿರಬಹುದು. ನಾವು ಸಮಸ್ಯೆಗಳ ಹೊರೆಯಡಿ ಇಲ್ಲವೆ ಸ್ವಂತ ಕೆಲಸಗಳಡಿ ಹೂತುಹೋಗಿರಬಹುದು. ಹಾಗಾಗಿ ನಮ್ಮ ಬಳಿ ಈಗಾಗಲೇ ಇರುವಂಥದ್ದನ್ನು ಮಾನ್ಯಮಾಡಲು ಅಥವಾ ಬೇರೆಯವರು ನಮಗೋಸ್ಕರ ಮಾಡುವ ಸಂಗತಿಗಳಿಗಾಗಿ ಕೃತಜ್ಞತೆ ವ್ಯಕ್ತಪಡಿಸಲು ಸಮಯವೇ ಇರಲಿಕ್ಕಿಲ್ಲ.

ನೀವೇನು ಮಾಡಬಹುದು? ನೀವೀಗ ಆನಂದಿಸುತ್ತಿರುವ ವಿಷಯಗಳ ಬಗ್ಗೆ ಯೋಚಿಸಲು ಸಮಯಮಾಡಿಕೊಳ್ಳಿ. ಸಮಸ್ಯೆಗಳಿಂದಾಗಿ ನಿಮಗೆ ಜೀವನ ಸಾಕಾಗಿಹೋದಂತೆ ಅನಿಸುತ್ತಿರಬಹುದು. ಹಾಗಿರುವಲ್ಲಿ ಪ್ರಾಚೀನ ಕಾಲದ ರಾಜ ದಾವೀದನ ಉದಾಹರಣೆ ತೆಗೆದುಕೊಳ್ಳಿ. ಅವನಿಗೆ ಕೆಲವೊಮ್ಮೆ ಸಮಸ್ಯೆಗಳಿಂದಾಗಿ ಜಜ್ಜಿಹೋದ ಅನುಭವವಾಗಿತ್ತು, ಮನಸ್ಸು ಜಡಗಟ್ಟಿಹೋಗಿತ್ತು. ಹಾಗಿದ್ದರೂ ಅವನೇನು ಮಾಡಿದನೆಂಬುದನ್ನು ಪ್ರಾರ್ಥನೆಯಲ್ಲಿ ತಿಳಿಸುತ್ತಾ ಹೀಗಂದನು: “ನಿನ್ನ [ದೇವರ] ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ.” (ಕೀರ್ತನೆ 143:3-5) ಎಷ್ಟೇ ಸಮಸ್ಯೆಗಳಿದ್ದರೂ ದಾವೀದನು ಕೃತಜ್ಞತಾಭಾವವನ್ನು ಕಳೆದುಕೊಳ್ಳಲಿಲ್ಲ. ಹೀಗೆ ಸದಾ ಸಂತೃಪ್ತನಾಗಿದ್ದನು.

ಇತರರು ನಿಮಗಾಗಿ ಮಾಡಿರುವಂಥ ಕೆಲಸಗಳನ್ನು ನೆನಪಿಸಿಕೊಳ್ಳಿ. ಅವರು ತೆಗೆದುಕೊಂಡ ಶ್ರಮಕ್ಕಾಗಿ ಕೃತಜ್ಞತೆ ವ್ಯಕ್ತಪಡಿಸಿ. ಈ ವಿಷಯದಲ್ಲಿ ಯೇಸು ಅತ್ಯುತ್ತಮ ಮಾದರಿಯಿಟ್ಟನು. ಉದಾಹರಣೆಗೆ ಆತನ ಮಿತ್ರರಲ್ಲಿ ಒಬ್ಬಳಾದ ಮರಿಯಳು ದುಬಾರಿ ಎಣ್ಣೆಯನ್ನು ಆತನ ತಲೆ ಹಾಗೂ ಪಾದಗಳಿಗೆ ಹೊಯಿದಾಗ ಕೆಲವರು, “ಈ ತೈಲವನ್ನು * ನಷ್ಟಮಾಡಿದ್ದೇಕೆ?” ಎಂದು ಪ್ರಶ್ನಿಸಿದ್ದರು. ಆ ತೈಲವನ್ನು ಮಾರಿ ಸಿಕ್ಕಿದ ಹಣವನ್ನು ಬಡವರಿಗೆ ಕೊಡಬಹುದಿತ್ತೆಂಬುದು ಆ ಟೀಕಾಕಾರರ ಅಭಿಪ್ರಾಯವಾಗಿತ್ತು. ಅದಕ್ಕೆ ಯೇಸು, “ಈಕೆಯನ್ನು ಬಿಡಿರಿ. ಈಕೆಗೆ ಯಾಕೆ ತೊಂದರೆಕೊಡುತ್ತೀರಿ?” ಎಂದು ಹೇಳಿದ್ದನು. ಆತನು ಮತ್ತೂ ಹೇಳಿದ್ದು: “ಅವಳು ತನ್ನಿಂದಾದುದನ್ನು ಮಾಡಿದ್ದಾಳೆ.” (ಮಾರ್ಕ 14:3-8; ಯೋಹಾನ 12:3) ಮರಿಯಳು ಏನು ಮಾಡಲಿಲ್ಲ ಎಂಬುದನ್ನು ಎತ್ತಿತೋರಿಸದೆ, ಅವಳೇನು ಮಾಡಿದಳೋ ಅದಕ್ಕಾಗಿ ಯೇಸು ಕೃತಜ್ಞತೆ ವ್ಯಕ್ತಪಡಿಸಿದನು.

ಕೆಲವರು ತಮ್ಮ ಬಂಧುಮಿತ್ರರನ್ನು ಇಲ್ಲವೆ ತಮಗಿದ್ದ ಆಶೀರ್ವಾದಗಳನ್ನು ಕಳೆದುಕೊಂಡ ಬಳಿಕವೇ ಅವೆಲ್ಲದ್ದರ ಮೌಲ್ಯವನ್ನು ಗ್ರಹಿಸುತ್ತಾರೆ. ಎಂಥ ದುಃಖದ ಸಂಗತಿಯಲ್ಲವೇ? ನಿಮಗೆ ಹೀಗಾಗಬಾರದೆಂದರೆ ನೀವು ಈಗ ಆನಂದಿಸುತ್ತಿರುವ ವಿಷಯಗಳ ಬಗ್ಗೆ ಯೋಚಿಸಿ. ಕೃತಜ್ಞತೆ ವ್ಯಕ್ತಪಡಿಸಲಿಕ್ಕಾಗಿ ಅವುಗಳನ್ನು ಮನಸ್ಸಿನಲ್ಲೋ ಕಾಗದದಲ್ಲೋ ಪಟ್ಟಿ ಮಾಡಿಕೊಳ್ಳಬಾರದೇಕೆ?

“ಪ್ರತಿಯೊಂದು ಒಳ್ಳೆಯ ದಾನ” ಮೂಲತಃ ದೇವರಿಂದ ಬರುವುದರಿಂದ ಆತನಿಗೆ ನಾವು ಪ್ರಾರ್ಥನೆಯಲ್ಲಿ ಕೃತಜ್ಞತೆ ವ್ಯಕ್ತಪಡಿಸಬೇಕು. (ಯಾಕೋಬ 1:17) ನಾವಿದನ್ನು ನಿಯಮಿತವಾಗಿ ಮಾಡುವುದಾದರೆ ನಮ್ಮಲ್ಲಿ ಕೃತಜ್ಞತಾಭಾವ ಸದಾ ಇರುವುದು, ಮಾತ್ರವಲ್ಲ ಸಂತೃಪ್ತಭಾವವನ್ನೂ ಬೆಳೆಸಿಕೊಳ್ಳಬಲ್ಲೆವು.—ಫಿಲಿಪ್ಪಿ 4:6, 7. (w10-E 11/01)

[ಪಾದಟಿಪ್ಪಣಿ]

^ ಪ್ಯಾರ. 5 ಒಂದನೇ ಶತಮಾನದಲ್ಲಿ, ಅತಿಥಿಗಳ ತಲೆಗೆ ಎಣ್ಣೆ ಹೊಯ್ಯುವುದು ಅತಿಥಿಸತ್ಕಾರದ ಒಂದು ಪರಿಯಾಗಿತ್ತು. ಹಾಗೆಯೇ ಪಾದಗಳಿಗೆ ಎಣ್ಣೆ ಹೊಯ್ಯುವುದು ದೀನತೆಯನ್ನು ಸೂಚಿಸುವ ಕಾರ್ಯವಾಗಿತ್ತು.

[ಪುಟ 6ರಲ್ಲಿರುವ ಚಿತ್ರ]

ಇತರರು ನಿಮಗೋಸ್ಕರ ಮಾಡುವ ಕೆಲಸಗಳಿಗಾಗಿ ಕೃತಜ್ಞತೆ ವ್ಯಕ್ತಪಡಿಸುತ್ತೀರೋ?