ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಬಗ್ಗೆ ತಿಳಿಯಲು ಎಲ್ಲರಿಗೂ ಸಮಾನ ಅವಕಾಶವಿದೆಯೋ?

ದೇವರ ಬಗ್ಗೆ ತಿಳಿಯಲು ಎಲ್ಲರಿಗೂ ಸಮಾನ ಅವಕಾಶವಿದೆಯೋ?

ನಮ್ಮ ಓದುಗರ ಪ್ರಶ್ನೆ

ದೇವರ ಬಗ್ಗೆ ತಿಳಿಯಲು ಎಲ್ಲರಿಗೂ ಸಮಾನ ಅವಕಾಶವಿದೆಯೋ?

▪ ಅತಿ ದೊಡ್ಡ ಆಜ್ಞೆ ಯಾವುದು ಎಂದು ಕೇಳಲಾದ ಪ್ರಶ್ನೆಗೆ ಯೇಸು, “‘ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸಬೇಕು’” ಎಂದುತ್ತರಿಸಿದನು. (ಮತ್ತಾಯ 22:37) ದೇವರನ್ನು ಪ್ರೀತಿಸಬೇಕಾದರೆ ಜನರು ಮೊದಲು ಆತನ ಕುರಿತ ನಿಖರವಾದ ಜ್ಞಾನ ಪಡೆಯಬೇಕು. (ಯೋಹಾನ 17:3) ಈ ರೀತಿಯ ಜ್ಞಾನ ಪಡೆಯಲು ಎಲ್ಲರಿಗೂ ಸಮಾನ ಅವಕಾಶ ಸಿಗುವುದೋ?

ದೇವರ ಜ್ಞಾನ ಪ್ರಧಾನವಾಗಿ ಬೈಬಲ್‌ ಮೂಲಕ ಸಿಗುತ್ತದೆ. (2 ತಿಮೊಥೆಯ 3:16) ಅನೇಕರಿಗೆ ತಾವು ಜೀವಿಸುತ್ತಿರುವ ಸ್ಥಳಗಳಲ್ಲಿ ಬೈಬಲ್‌ ಸುಲಭವಾಗಿ ಲಭ್ಯವಿದೆ. ಅವರು ಬೈಬಲ್‌ ಅಧ್ಯಯನದ ಏರ್ಪಾಡಿನ ಮೂಲಕ ದೇವರ ಕುರಿತ ನಿಖರ ಜ್ಞಾನ ಗಳಿಸಲಿಕ್ಕಾಗಿ ಪದೇ ಪದೇ ಆಹ್ವಾನಗಳನ್ನೂ ಪಡೆಯುತ್ತಿರಬಹುದು. (ಮತ್ತಾಯ 28:19) ಇನ್ನೂ ಕೆಲವರು ಕ್ರೈಸ್ತ ಕುಟುಂಬದಲ್ಲಿ ಬೆಳೆಯುತ್ತಾರೆ. ಇಂಥವರಿಗೆ ತಮ್ಮ ಪ್ರೀತಿಭರಿತ ಹೆತ್ತವರಿಂದ ದೇವರ ಬಗ್ಗೆ ಕಲಿಯುವ ಅವಕಾಶಗಳು ಪ್ರತಿದಿನವೂ ಸಿಗುತ್ತಿರುತ್ತವೆ.—ಧರ್ಮೋಪದೇಶಕಾಂಡ 6:6, 7; ಎಫೆಸ 6:4.

ಆದರೆ ಇನ್ನಿತರರ ಪರಿಸ್ಥಿತಿಗಳು ಇಷ್ಟೊಂದು ಪೂರಕವಾಗಿರುವುದಿಲ್ಲ. ಕೆಲವರ ಕುಟುಂಬಗಳಲ್ಲಿ ದೌರ್ಜನ್ಯವೇ ತುಂಬಿರುತ್ತದೆ. ಇಂಥವರಿಗೆ ಚಿಕ್ಕಂದಿನಿಂದಲೇ ತಂದೆತಾಯಂದಿರು ಸ್ವಲ್ಪವೂ ಮಮತೆ ತೋರಿಸಿರುವುದಿಲ್ಲ. (2 ತಿಮೊಥೆಯ 3:1-5) ಇಂಥ ವಾತಾವರಣದಲ್ಲಿ ಬೆಳೆದಿರುವವರಿಗೆ, ದೇವರು ನಮ್ಮನ್ನು ಪ್ರೀತಿಸುವ ತಂದೆಯಂತಿದ್ದಾನೆ ಎಂಬ ಮಾತನ್ನು ಸ್ವೀಕರಿಸಲು ಕಷ್ಟವಾಗಬಹುದು. ಇನ್ನೂ ಅನೇಕರಿಗೆ ಸರಿಯಾಗಿ ಶಿಕ್ಷಣ ಪಡೆಯುವ ಅವಕಾಶ ಸಿಗದ ಕಾರಣ ಬೈಬಲನ್ನು ಓದಲು ಕಷ್ಟವಾಗುತ್ತದೆ. ಮತ್ತಿತರರ ಮನಸ್ಸುಗಳು ಸುಳ್ಳು ಧಾರ್ಮಿಕ ಬೋಧನೆಗಳಿಂದ ಕುರುಡಾಗಿವೆ. ಅಥವಾ ಅವರಿರುವ ಕುಟುಂಬಗಳು, ಸಮುದಾಯಗಳು, ದೇಶಗಳು ಬೈಬಲ್‌ ಸತ್ಯದ ಬೋಧನೆಯನ್ನು ಸಹಿಸುವುದಿಲ್ಲ. (2 ಕೊರಿಂಥ 4:4) ಇಂಥೆಲ್ಲ ಪರಿಸ್ಥಿತಿಗಳಲ್ಲಿರುವ ಜನರು ದೇವರ ಕುರಿತು ಕಲಿತು ಆತನನ್ನು ಪ್ರೀತಿಸುವ ಅವಕಾಶದಿಂದ ವಂಚಿತರಾಗುತ್ತಾರೊ?

ಕೆಲವರಿಗೆ ಎದುರಾಗುವ ಸವಾಲುಗಳು ಅವರು ದೇವರನ್ನು ಪ್ರೀತಿಸಿ ಆತನಿಗೆ ವಿಧೇಯರಾಗಲು ತಡೆಯಾಗಿ ನಿಲ್ಲಬಹುದೆಂದು ಯೇಸು ಸೂಚಿಸಿದನು. (ಮತ್ತಾಯ 19:23, 24) ಹಾಗಿದ್ದರೂ ಆತನು ತನ್ನ ಶಿಷ್ಯರಿಗೆ ಜ್ಞಾಪಕಹುಟ್ಟಿಸಿದ್ದೇನೆಂದರೆ ಮನುಷ್ಯರಿಗೆ ಕೆಲವೊಂದು ತಡೆಗಳನ್ನು ದಾಟಲಸಾಧ್ಯವೆಂದು ತೋರಿದರೂ “ದೇವರಿಗೆ ಎಲ್ಲವೂ ಸಾಧ್ಯ.”—ಮತ್ತಾಯ 19:25, 26.

ಈ ನಿಜಾಂಶಗಳನ್ನು ಪರಿಗಣಿಸಿರಿ: ಯೆಹೋವ ದೇವರು ತನ್ನ ವಾಕ್ಯವಾದ ಬೈಬಲ್‌ ವ್ಯಾಪಕವಾಗಿ ವಿತರಣೆಗೊಳ್ಳುವಂತೆ ನೋಡಿಕೊಂಡಿದ್ದಾನೆ. ಆತನ ಕುರಿತಾಗಿಯೂ ಭೂಮಿಗಾಗಿರುವ ಆತನ ಉದ್ದೇಶದ ಕುರಿತಾಗಿಯೂ ಇರುವ ಸುವಾರ್ತೆಯನ್ನು “ನಿವಾಸಿತ ಭೂಮಿಯಾದ್ಯಂತ” ಸಾರಲಾಗುವುದೆಂದು ಬೈಬಲ್‌ ಮುಂತಿಳಿಸಿತು. (ಮತ್ತಾಯ 24:14) ಇಂದು ಆ ಸುವಾರ್ತೆಯನ್ನು ಯೆಹೋವನ ಸಾಕ್ಷಿಗಳು 230ಕ್ಕಿಂತಲೂ ಹೆಚ್ಚು ದೇಶಗಳಲ್ಲಿ ಸಾರುತ್ತಿದ್ದಾರೆ. ಸುಮಾರು 500 ಭಾಷೆಗಳಲ್ಲಿ ಬೈಬಲ್‌ ಆಧರಿತ ಸಾಹಿತ್ಯವನ್ನು ತಯಾರಿಸಿ ಮುದ್ರಿಸುತ್ತಿದ್ದಾರೆ. ಬೈಬಲನ್ನು ಓದುವ ಅವಕಾಶವಿಲ್ಲದವರು ಸಹ ಸೃಷ್ಟಿಕಾರ್ಯಗಳನ್ನು ನೋಡಿ ಸತ್ಯ ದೇವರ ಕುರಿತಾಗಿ ಬಹಳಷ್ಟನ್ನು ಕಲಿಯಬಲ್ಲರು.—ರೋಮನ್ನರಿಗೆ 1:20.

ಅಷ್ಟುಮಾತ್ರವಲ್ಲದೆ ದೇವರ ವಾಕ್ಯ ಹೀಗನ್ನುತ್ತದೆ: “ಯೆಹೋವನು ಎಲ್ಲಾ ಹೃದಯಗಳನ್ನು ವಿಚಾರಿಸುವವನೂ ಎಲ್ಲಾ ಮನಸ್ಸಂಕಲ್ಪಗಳನ್ನು ಬಲ್ಲವನೂ ಆಗಿರುತ್ತಾನಲ್ಲಾ. ನೀನು ಆತನನ್ನು ಹುಡುಕುವದಾದರೆ ಆತನು ನಿನಗೆ ಸಿಕ್ಕುವನು.” (1 ಪೂರ್ವಕಾಲವೃತ್ತಾಂತ 28:9) ಪ್ರತಿಯೊಬ್ಬರಿಗೂ ಒಂದೇ ರೀತಿಯ ಅವಕಾಶ ಸಿಗುವುದೆಂದು ಯೆಹೋವನು ಮಾತುಕೊಟ್ಟಿಲ್ಲವಾದರೂ, ಒಳ್ಳೇ ಮನಸ್ಸುಳ್ಳವರಿಗೆ ಒಂದು ಅವಕಾಶ ಸಿಗುವಂತೆ ಖಂಡಿತ ನೋಡಿಕೊಳ್ಳುತ್ತಾನೆ. ಅಲ್ಲದೆ, ಯಾರಿಗೆ ತನ್ನ ಬಗ್ಗೆ ಕಲಿಯಲು ಬದುಕಿರುವ ವರೆಗೆ ಅವಕಾಶ ಸಿಗಲಿಲ್ಲವೊ ಅವರನ್ನು ನೀತಿತುಂಬಿದ ಹೊಸ ಲೋಕದಲ್ಲಿ ಪುನಃ ಜೀವಕ್ಕೆ ತಂದು ಅಂಥ ಒಂದು ಅವಕಾಶ ಕೊಡುವನು.—ಅ. ಕಾರ್ಯಗಳು 24:15. (w10-E 08/01)